ಆಗೆಲ್ಲಾ ಯರಗುಂಟೇಗೆ ಊರಿನ ತಂಕ ಬಸ್ಸಿರಲಿಲ್ಲ. ಒಂದೋ ಎರಡೊ ಕಿಲೋಮೀಟರ್ ನಡೆದು ಹೋಗಬೇಕಿತ್ತು. ಇನ್ನೂ ಕತೆ ಮುಗಿದಿಲ್ಲ, ಯಾಸೆಟ್ಗೆ ಅತ್ಲಾಗೆ ನಡಿಯಮ್ಮಿ, ಮನೆತಂಕ ಬರ್ತೀನಿ ಅಂತ ಅದೇ ಅವತಾರದಲ್ಲಿ ಮಗಳಮನೆ ತಂಕಾನೂ ಹೋಗಿದೆ. ಬೀಗರು ಇವ್ರ ಅವತಾರ ನೋಡಿ, ನಕ್ಕಂಡು ಇವತ್ತಿದ್ದು ನಾಳೆ ಹೋಗಿ ಅಂದ್ರಂತೆ. ಈ ಅಜ್ಜಿ, ಹೂ ನನ್ ಕತೆ ಇನ್ನೂ ಮುಗಿದಿಲ್ಲ ಅಂತ ಕತೆ ಪೂರ್ತಿ ಹೇಳಿದ್ದಾದ ಮೇಲೆ ಬೇರೆ ಸೀರೆ ಉಟ್ಕಂಡು ವಾಪಸ್ ಬಂತಂತೆ. ಇದ್ನ ಹೇಳ್ಕಂಡು ನಮ್ಮತ್ತೆದೀರೆಲ್ಲಾ ನಗಾಡ್ತಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ಮನೆಯ ಕತೆ ಕಟ್ಟುವ ಕತೆಗಾರರ ಕುರಿತ ಬರಹ ನಿಮ್ಮ ಓದಿಗೆ
ಅಬ್ಬಬ್ಬಾ!! ನಮ್ಮ ವಂಶದ ಹಿರೀಕರಿಗೆಲ್ಲ ಅದೇನು ಕಲ್ಪನಾ ಶಕ್ತಿ. ಕತೆ ಕಾದಂಬರಿಗಳ ಬೆನ್ನೇರಿ ಬಂತು ಕಲ್ಪನಾ ವಿಲಾಸ ಎನ್ನಬಹುದು. ಕಂಡದ್ದೆಲ್ಲಕ್ಕೂ ಕತೆ ಕಟ್ಟುವ ಚಾತುರ್ಯ ಸಿದ್ಧಿಸಿತ್ತು.
ಕತೆ ಹೇಳುವುದರಲ್ಲಿಯೂ, ಕೇಳುವುದರಲ್ಲಿಯೂ ಪಂಟರು ಬೇಜಾನ್ ಇದ್ರು. ಕತೆ ಕೇಳೋ ಕಿವಿ ಸಿಕ್ಕರೆ ತೂತು ಮಾಡೋ ನಿಸ್ಸೀಮರೂ ಇದ್ರು. ಅಂಗೇ ಕತೆ ಕೇಳೋಕೆ ಕತ್ತೆ ಕಾಲು ಹಿಡಿಯಲೂ ನಿಗುರಿ ನಿಲ್ಲುವ ಮಂದಿಗೂ ನಮ್ಮಲ್ಲಿ ಕಮ್ಮಿಯಿರಲಿಲ್ಲ.
ಕೋಡಗದಾಲ ಅಜ್ಜಿಯ ಕತೆ
ನಮ್ಮಜ್ಜಿಯ ಅಕ್ಕ ಹನುಮಕ್ಕ. ಅವರನ್ನು ನಮ್ಮೂರಿನ ಹತ್ತಿರದ ಕೋಡಗದಾಲಕ್ಕೆ ಕೊಟ್ಟಿದ್ದರು.(ಮದುವೆ ಮಾಡಿ) ಅವ್ರೂ ಕೋಡಗದಾಲ ಅಜ್ಜಿ ಅಂತ್ಲೇ ಫೇಮಸ್ಸು. ಚೆಂದಕ್ಕೆ ಕತೆ ಹೇಳುತ್ತಿದ್ರು ಸೈ. ಆದ್ರೆ ಕತೆ ಹೇಳೋ ಹುಚ್ಚು-ಚಟ ಎಷ್ಟಿತ್ತೂ ಅಂದ್ರೆ, ಕೇಳೋ ಕಿವಿ ಇದ್ರೆ ಸಾಕು. ತೂತು ಬೀಳೋವರೆಗೂ ಬಿಡುತ್ತಿರಲಿಲ್ಲ. ಅವರ ಬಗ್ಗೇನೇ ಮಜವಾದ ಕತೆಗ್ಳು ಎಲ್ರ ಬಾಯಲ್ಲಿ ಹರಿದಾಡ್ತಿತ್ತು.
ಒಂದು ಸತಿ ಈ ಅಜ್ಜಿ ತೌರು ಮನೇಗೆ ಅಂತ ಬಂದ ತಮ್ಮ ಮಗಳಿಗೆ ಕತೆ ಹೇಳೋಕೆ ಶುರು ಮಾಡಿದೆ. ನಡುರಾತ್ರಿವರೆಗೂ ಹೇಳ್ತಾ ಹೇಳ್ತಾ ಅಂಗೇ ನಿದ್ದೆ ಮಾಡಿದೆ. ಬೆಳಗಾನ ಎದ್ದು ಮತ್ತೆ ಕತೆ ಶುರು. ಸ್ನಾನ ಮಾಡ್ತಾ ಮಾಡ್ತಾ ಕತೆ ಹೇಳೋ ಆಟ.(ಆಗೆಲ್ಲಾ ಹೆಣ್ಣುಮಕ್ಕಳು ಅಂಗೇ, ಮನೆತುಂಬಾ ಜನ ಇದ್ರೆ, ಬಚ್ಚಲುಮನೆ ಸ್ವಲ್ಪ ದೊಡ್ದಿದ್ರೂ ಇಬ್ಬಿಬ್ರು ಒಟ್ಟಿಗೇ ಭರಭರ ಸ್ನಾನ ಮಾಡ್ತಿದ್ರು. ಇನ್ನೂ ದೊಡ್ಡದಿದ್ರೆ ಮೂವರೂ ಸೈ. ಅಂಗೇ ಮಾತುಕತೆಗ್ಳೂ ನಡೀತಿದ್ವು. ಆಚೆ ಕಾಯ್ತಿರೋರು ಬೈದು ಗಲಾಟೆ ಮಾಡಿದ್ ಮೇಲೆ ಬಿರಬಿರನೆ ನೀರ್ ಹುಯ್ಕಂಡು, ಆಚಿಕ್ ಬರ್ತಿದ್ರು. ಕೆರೆಗೆ ಹೋದ್ರಂತೂ ಗುಂಪು ಗುಂಪೆ ಒಟ್ಟಿಗೆ ಸ್ನಾನ) ಸ್ನಾನ ಮುಗಿದ ಮೇಲೆ ಆಗೆಲ್ಲಾ ಮಡಿಸೀರೆ ಉಡುತ್ತಿದ್ದರು. ಹದಿನಾರು ಮೊಳದ ಸೀರೇನ ಸುಮ್ನೆ ಗೂಡು ಸೆರಗು ಸುತ್ತಿಕೊಂಡು(ಜಾಕೀಟು ಇಲ್ಲದೆ)ಆಚೆ ಬರ್ತಿದ್ರು. ಪೂಜೆ ಮಾಡಿದ್ದಾದ ಮೇಲೆ ಮಾಮೂಲಿ ಸೀರೆ ಉಡುತ್ತಿದ್ದರು. ಈ ಅಜ್ಜಿ ಅಂಗೇ ಸೀರೆ ಸುತ್ತಿಕೊಂಡು ಬಂದಿದೆ. ಮಗಳು ಬೆಳಗಿನ ಬಸ್ಸಿಗೇ ಊರಿಗೆ ಹೋಗಬೇಕು. ಯರಗುಂಟೇಗೆ ಕೊಟ್ಟಿದ್ರು. ವಾಪಸ್ ಹೊರಟಳು. ಕತೆ ಮುಗಿದಿಲ್ಲ. ಸರಿ ಬಸ್ ಸ್ಟ್ಯಾಂಡಿನ ತಂಕ ಸಾಗಾಕಿ ಬರ್ತೀನಿ ನಡಿ ಅಂತ ಅಂಗೇ ಹೊರಟೇ ಬಿಟ್ಟೈತೆ ನಮ್ಮಜ್ಜೀ. ಬಸ್ ಸ್ಟ್ಯಾಂಡೂ ಬಂತು. ಬಸ್ಸೂ ಬಂತು. ಕತೆ ಮುಗಿದಿಲ್ಲ. ಸರಿ ಅತ್ಲಾಗೆ ಅಂಗೇ ಬಸ್ ಹತ್ಕಂತೀನಿ, ಮಗ್ಗುಲು ಊರ್ನಾಗೆ ಬಸ್ಸಿಳಿದು, ಇನ್ನೊಂದು ಬಸ್ ಹತ್ಕಂಡು ವಾಪಸ್ ಕೋಡಗದಾಲಕ್ಕೆ ಬರ್ತೀನಿ ಅಂತ ಬಸ್ ಹತ್ತೇ ಬಿಟ್ಳು. ಸರಿ, ಮಗ್ಗುಲು ಊರಾಯ್ತು, ಅದ್ರ ಮಗ್ಗುಲು ಊರೂ ಬಂತು. ಅಂಗೇ ಯರಗುಂಟೆ ಹತ್ರ ಬಂದೇ ಬಿಟ್ರು. ಆಗೆಲ್ಲಾ ಯರಗುಂಟೇಗೆ ಊರಿನ ತಂಕ ಬಸ್ಸಿರಲಿಲ್ಲ. ಒಂದೋ ಎರಡೊ ಕಿಲೋಮೀಟರ್ ನಡೆದು ಹೋಗಬೇಕಿತ್ತು. ಇನ್ನೂ ಕತೆ ಮುಗಿದಿಲ್ಲ, ಯಾಸೆಟ್ಗೆ ಅತ್ಲಾಗೆ ನಡಿಯಮ್ಮಿ, ಮನೆತಂಕ ಬರ್ತೀನಿ ಅಂತ ಅದೇ ಅವತಾರದಲ್ಲಿ ಮಗಳಮನೆ ತಂಕಾನೂ ಹೋಗಿದೆ. ಬೀಗರು ಇವ್ರ ಅವತಾರ ನೋಡಿ, ನಕ್ಕಂಡು ಇವತ್ತಿದ್ದು ನಾಳೆ ಹೋಗಿ ಅಂದ್ರಂತೆ. ಈ ಅಜ್ಜಿ, ಹೂ ನನ್ ಕತೆ ಇನ್ನೂ ಮುಗಿದಿಲ್ಲ ಅಂತ ಕತೆ ಪೂರ್ತಿ ಹೇಳಿದ್ದಾದ ಮೇಲೆ ಬೇರೆ ಸೀರೆ ಉಟ್ಕಂಡು ವಾಪಸ್ ಬಂತಂತೆ. ಇದ್ನ ಹೇಳ್ಕಂಡು ನಮ್ಮತ್ತೆದೀರೆಲ್ಲಾ ನಗಾಡ್ತಿದ್ರು. ಆಗೆಲ್ಲಾ ಯಾವ್ದಾನಾ ಊರ್ಗೇ ಹೋದ್ರೂ ಬಟ್ಟೆ ಬರೆ ಇಲ್ದಿದ್ರೂ ನಡೀತಿತ್ತು. ಆ ಮನೆಯಾಗ್ಳೋರ್ ತಾವೆ ಸೀರೆ ಜಾಕೀಟು ಇಸ್ಕಂಡು ತೊಟ್ಕಂಡು ಕತೆ ಹಾಕ್ತಿದ್ರು.
ಮನೆ ಎಲ್ಲೈತೆ ಗೊತ್ತಿಲ್ದೆ ಮೈಸೂರಿಗೆ ಹೋದ ಗಟ್ಟಿಗಿತ್ತಿ ಅಜ್ಜಿ
ಇಂತಾ ಘಾಟಿ ಅಜ್ಜಿ ಕೋಡಗದಾಲದ ಅಜ್ಜಿ. ಒಂದು ಸಲ ಇದ್ದಕಿದ್ದಂಗೆ ಮೈಸೂರಿಗೆ ಹೋಗೋ ಹುಮ್ಮಸ್ಸು ಬಂತು. ಅಲ್ಲಿ ನಮ್ ಸೋದರತ್ತೆ ಇದ್ಲು. ಇವಜ್ಜೀಗೆ ತಂಗಿ ಮಗಳು. ಯಾವಾಗ್ಲೂ ಕರೀತಾಳೆ. ನಡಿ ಅತ್ಲಾಗೆ ಹೋಗಿ ಬಂದೇ ಬಿಡೋಣ ಅಂತ ತನ್ನ ಅಕ್ಕನ ಮಗಳ್ನ ಜೊತೆನಾಗ್ ಏಗಿಸ್ಕಂಡು ಹೊಂಟ್ಳು. ಆಗಿನ್ ಕಾಲ್ದಾಗೆ ಹೆಣ್ಣುಮಕ್ಕಳು ಒಬ್ಬೊಬ್ರೆ ದೂರಾಬಾರ ಹೋಗ್ತಿದ್ದಿದ್ ಬಾಬತ್ತೇ ಇರಲಿಲ್ಲ. ಅಂತಾದ್ರಾಗೆ ಈವಜ್ಜಿ ಹತ್ರ ಅಡ್ರೆಸ್ಸೂ ದೆಕ್ಲೂ ಇರಲಿಲ್ಲ. ಅಡ್ರೆಸ್ ಕಳ್ಸು ಅಂತ ನಾನು ಒಂದು ಕಾರ್ಡು ಬರ್ದಾಕಿ ಕೇಳೋದು, ಶಾಂತಮ್ಮ(ಮೈಸೂರತ್ತೆ) ಅದ್ಕೆ ಇನ್ನೊಂದು ಕಾರ್ಡಿನಾಗೆ ಅಡ್ರೆಸ್ನ ಬರ್ದಾಕೋದೂ, ಅದ್ ನಂಗೆ ತಲ್ಪಿ ನಾನು ಹೋಗೋದೂ ಯಾವ ಕಾಲಕ್ಕೆ. ಆಟೋತ್ತಿಗೆ ಹೋಗೋ ಮನ್ಸೇ ಹೊಂಟೋಗುತ್ತೆ ಅಂತ ದಡದಡಾಂತ ಬಟ್ಟೆ ಗಂಟು ಕಟ್ಟಿಕೊಂಡು, ‘ಅಯ್ಯ ಕಣ್ಣೂ ಬಾಯಿ ಕಿವಿ ನೆಟ್ಟಗಿರಾವಾಗ ಭಯ ಯಾತ್ಕೆ ನಾನಿದ್ದಿವ್ನಿ ಬಾರಮ್ಮಿ’ ಅಂತ ಅಕ್ಕನ ಮಗಳ ಕೈ ಹಿಡ್ಕಂಡು ಎಳ್ಕಂಡು ಮೈಸೂರು ಬಸ್ಸು ಹತ್ತೇ ಬಿಟ್ಳು. ಮೈಸೂರಂತ ದೊಡ್ಡ ಪಟ್ಟಣದಾಗೆ ಸರಸ್ವತಿಪುರಂನಾಗೆ ಶಾಂತಮ್ಮ ಅವ್ಳೆ ಅಂಬೋದಷ್ಟೇ ಗೊತ್ತಿತ್ತು. ಸರಿ, ಸರಸ್ವತಿಪುರಂಗೆ ತಲುಪಿದ್ಲು. ಬೀದಿ ಬೀದಿ ಸುತ್ಕಂಡು ನಮ್ಮ ಶಾಂತಮ್ಮನ ಮನೆ ಎಲ್ಲೈತೆ ಅಂತ ಕೇಳ್ಕಂಡು ಅಲೆದ್ಲು. ಪುಣ್ಯಕ್ಕೆ ನಮ್ಮ ಶಾಂತಮ್ಮತ್ತೆ ಬೋ ಫೇಮಸ್ಸಾಗಿದ್ಲು. ಅವ್ಳೂ ಮಾತಿನ ಮಲ್ಲಿ. ಊರೋರೆಲ್ಲಾ ಸಿನೇಹಿತ್ರೇಯಾ. ಈವಜ್ಜೀನೂ ಬಾಯಿಬಡುಕಿ. ಎಲ್ಡೂ ಕೂಡ್ಕಂಡು ಶಾಂತಮ್ಮನ ಮನೆಯಾ ಸಿಕ್ಕಾಕಿಸಿಕೊಂಡೇ ಬಿಟ್ಲು ನಮ್ಮ ಕಿಲಾಡಿ ಅಜ್ಜಿ.
ನಾಯಿ ಬಾಲ ಅಲ್ಲಾಡಿಸಿದ್ರೂ ಕತೆ, ಬೆಕ್ಕು ಮಿಯಾಂವ್ ಅಂದ್ರೂ ಕತೆ
ನಮ್ಮ ಕೊನೇ ಸೋದರತ್ತೇದೀರು ನಾಗು ಮತ್ತೆ ವಿಜಿ. ಹೆಚ್ಚೂ ಕಮ್ಮಿ ಅವ್ರದ್ದೇ ವಯಸ್ಸಿನವ್ರು ಎರಡನೇ ಸೋದರತ್ತೆ ಮಗ್ಳು ರತ್ನ. ಇವ್ರೂ ಮೂರೂ ಜನ ಕೂಡಿದ್ರಂತೂ ಕಲ್ಪನೆಗೆ ಲಂಗು ಲಗಾಮೇ ಇರ್ತಿರಲಿಲ್ಲ. ಬೆಳಗಿಂದ ಬೈಗಿನ ತಂಕ ಅತ್ತೇದೀರು ಇಬ್ರೂ ಕೆಲ್ಸ ಬೊಗ್ಸೆ ಮಾಡೋದ್ರಲ್ಲಿ ಮುಳುಗಿರ್ತಿದ್ರು. ಈ ರತ್ನಕ್ಕ ರಜಕ್ಕೆ ಅಂತ ಪ್ಯಾಟೇನಾಗಿಂದ(ತುಮಕೂರು) ಬಂದಿರ್ತಿದ್ಲ. ಪುಸ್ತಕ ಓದ್ಕಂಡು ಕಾಲ ಹಾಕ್ದಿದ್ಲು. ರಾತ್ರಿ ಎಲ್ರೂ ಕೂಡ್ಕಂಡು ಹರಟೆ ಸುರು ಹಚ್ಕಂತಿದ್ರು. ಯಾವ್ದಾನಾ ನಾಯಿ ಬಾಲ ಅಲ್ಲಾಡಿಸಿದ್ರೂ ಸುತ ನಗ. ಅದ್ಕೊಂದು ಕತೆ ಕಟ್ಟಿ ಹೇಳ್ತಿದ್ರು. ಬೆಕ್ಕು ಬಂದ್ರೂ ಅದ್ಕೊಂದು ಕತೆ. ಬಾಗಿಲು ಮುಚ್ಚಿದ ಮೇಲೆ ಸಂದೀಲಿ ವಸಿ ಬೆಳಕು ತೂರಿ ಬಂದ್ರೂ ಕಿಲಕಿಲಾಂತ ನಗು. ಅದ್ಕೂ ಕಲ್ಪನೆ ಬೆರ್ಸಿ ಕತೆ ಹೆಣಿಯೋರು. ಇವ್ರ ಗಲಾಟೇಗೆ ನಮ್ಮಜ್ಜಿ ಬೈಯೋರು. ಅವೆಲ್ಡೂ ಬೆಳಗ್ನಿಂದ ಕೆಲ್ಸ ಮಾಡಿ ಸುಸ್ತಾಗವ್ವೆ. ತಿರ್ಗಾ ಬೆಳಗೆದ್ರೆ ಕೆಲ್ಸ ಬೊಗ್ಸೆ ಮಾಡ್ಬೇಕು. ನೀನು ಸುಮ್ಕೆ ಇರಮ್ಮಿ ಅಂತ ಮೊಮ್ಮಗಳಿಗೆ(ರತ್ನಕ್ಕ) ರೇಗೋದು. ಹೂ ಅಂತ ನಾಕು ಕ್ಷಣ ಸುಮ್ಕಿದ್ದು ಮೆಲ್ಲುಕೆ ಪಿಸಪಿಸ ಮಾತು ಸುರು ಹಚ್ಕಂಡು ಜೋರಾಗೋದು. ನಿಮ್ಮ ಹಣೆಬರ ಹಾಳಾಗೋಗ್ರಿ ಅಂತ ನಮ್ಮಜ್ಜಿ ನಿದ್ದೆ ಮಾಡೋರು.
ದೇವಲೋಕದ ಬಾಗಿಲು
ನಮ್ಮ ಹೊಲದಲ್ಲಿ ಒಂದು ಕಡೆ ಗುಡ್ಡ (ದಿನ್ನೆ) ತರ ಇತ್ತು. ಇನ್ನೊಂದು ಕಡೆ ಸಮತಟ್ಟು. ಇನ್ನೊಂದು ಕಡೆ ತಗ್ಗು. ಗುಡ್ಡ ದಿನ್ನೆ ಇರೋ ಕಡೆ ಸಮ ಮಾಡಿಸಿದ್ರು. ಆಗ ಅಲ್ಲೊಂದು ಡೊಗರು(ದೊಗರು) ಆಗಿತ್ತು. ಒಂದು ಸಲ ರತ್ನಕ್ಕ ಮತ್ತೆ ನಾಗೂ ಅತ್ತೆ ಹೊಲದತ್ತಿರ ಹೋಗಿದ್ದಾರೆ. ರತ್ನಕ್ಕ ಪ್ಯಾಟೆ ಹುಡುಗಿ. ನಾಗೂ ಅತ್ತೆ ಹಳ್ಳಿ ಹುಡುಗಿ. ಅತ್ತೆಗೆ, ಎಂಗಾನಾ ಮಾಡಿ ಈ ರತ್ನನ್ನ ಯಾಮಾರಿಸಿ ಮಂಕುದಿಣ್ಣೆ ಮಾಡ್ಬೇಕು ಅನ್ನೋ ಆಸೆ. ನೋಡಮ್ಮಿ ಈ ಡೊಗರು ಏನು ಗೊತ್ತಾ ಅಂತ ಕೇಳಿದ್ಲು. ರತ್ನಕ್ಕ ವಸಿ ಕಲ್ಪಿಸಿಕೊಂಡು, ಚಿಕ್ಕಮ್ಮ(ವಯಸ್ಸು ಹೆಚ್ಚೂ ಕಮ್ಮಿ ಅಷ್ಟೇ ಇದ್ರೂ ವರಸೇನಲ್ಲಿ ಚಿಕ್ಕಮ್ಮ ಆಗ್ಬೇಕಲ್ಲ. ಅದುಕ್ಕೆ ನಾಗೂ ಚಿಕ್ಕಮ್ಮ ಅಂತ್ಲೇ ಕರೀತಿದ್ಲು) ಒಳ್ಳೆ ನೆಲಮಾಳಿಗೆ ತರ ಕಾಣುತ್ತೆ ಅಂತ ಹೇಳಿದ್ದಾಳೆ. ನಾಗೂ ಅತ್ತೆ, ಹುಷ್! ಸುಮ್ಕಿರಮ್ಮಿ. ಮೆತ್ತಗೆ ಮಾತಾಡು. ಅದೇನು ಗೊತ್ತಾ? ದೇವಲೋಕದ ಒಳಿಕ್ಕೆ ಹೋಗೋಕಿರೋ ಬಾಗ್ಲು. ಪ್ರತಿ ಹುಣ್ಣಿಮೆ ರಾತ್ರಿ ಬಾಗ್ಲು ತೆಗೆಯುತ್ತೆ. ಅದು ಯಾರ ಕಣ್ಗೂ ಕಾಣಾಕಿಲ್ಲ. ಪುಣ್ಯವಂತರಿಗೆ ಮಾತ್ರ ಕಾಣ್ತದೆ. ಮೊನ್ನೆ ಹುಣ್ಣಿಮೆ ದಿನ ಇಲ್ಲಿಗೆ ಬಂದಿದ್ನಾ. ನೋಡ್ತಿವ್ನಿ ಏನೋ ಬೆಳಕು ಕಂಡಂಗಾಯ್ತು. ಅಂಗೇ ಹತ್ರ ಹೋದೆ. ಹೋದೇಟ್ಗೆ ಬಾಗ್ಲು ತೆಕ್ಕೊಂತು. ಅಂಗೇ ಇಳಿದು ಒಳುಕ್ಕೆ ಹೋಗೇ ಬಿಟ್ಟೆ. ಜುಳುಜುಳೂಂತ ನೀರು ಹರೀತಾ ಇದೆ. ಸುಂಯ್ ಅಂತ ಮಂದಮಾರುತ ಬೀಸ್ತಾ ಇದೆ. ಇಷ್ಟು ಸೆಕೆಗಾಲದಾಗೂ (ಏಪ್ರಿಲ್ ಮೇ) ತಣ್ಣಗೆ ಇದೆ. ಎಲ್ಲಿ ನೋಡಿದ್ರೂ ತರತರಾ ಹುವ್ವಗಳು. ದೇವಲೋಕದ ಹುವ್ವಗಳು. ನಾನು ಇದುವರ್ಗೂ ಅಂತಾ ಹುವ್ವ ಕಂಡೇ ಇಲ್ಲ. ಅದೇನು ಬಣ್ಣ. ಅಂತಾ ಬಣ್ಣಾನೂ ಕಂಡಿಲ್ಲ. ದೇವಲೋಕದ ಜನ ಸುತ್ತೂರ ಓಡಾಡ್ತಾ ಅವ್ರೆ. ನಂಗೆ ಎಷ್ಟು ಚೆನ್ನಾಗಿ ಸತ್ಕಾರ ಮಾಡುದ್ರು. ಹೆಸರೇ ಹೇಳೋಕೆ ಬರಲ್ಲ, ಅಂತಾ ಸೀ ತಿಂಡಿ, ಊಟ ಉಪಚಾರ. ಹೇಳೋಕೆ ಪದಗಳೆ ಇಲ್ಲ ಕಣಮ್ಮಿ. ಆದ್ರೆ ಹುಷಾರಾಗಿರಬೇಕು. ಬೆಳಕರಿಯೋ ಮುಂಚೆ ಆಚಿಕ್ ಹೋಗ್ಬೇಕು. ಇಲ್ಲಾಂದ್ರೆ ಬಾಗ್ಲು ಮುಚ್ಕೊಳ್ಳುತ್ತೆ ಅಂತ ಯೋಳಿದ್ರು. ಅಷ್ಟರಾಗೆ ಹೊರಕ್ಕೆ ಸೇರ್ಕಂಡ್ರೆ ಸರಿ. ಇಲ್ಲಾಂದ್ರೆ ವಾಪಸ್ ಬರಾಕಾಗಲ್ಲವಂತೆ. ನಾನು ಬಿರಬಿರನೆ ವಾಪಸ್ ಹೊರಟಾಗ, ಅವ್ರು ನಂಗೆ ಒಂದು ಗಿಫ್ಟ್ ಕೊಟ್ರು. ಅದೇನು ಗೊತ್ತಾ ಅಂಗೈ ಅಗ್ಲದ್ದು ಕೆಂಪು ಕಲ್ಲಿನ ಬಿಲ್ಲೆ. ಅದ್ನ ಬಹುಮಾನವಾಗಿ ಪಡ್ದು ನನ್ ಜೀವನ ಪಾವನ ಆಗೋಯ್ತು. ನಂಗೆ ಒಂದೇ ಬೇಜಾರು ಅಂದ್ರೆ, ನಿಂಗೆ ಇಂತಾ ಅವಕಾಶ ತಪ್ಪೋಯ್ತಲ್ಲ ಅಂತ. ಇನ್ನೊಂದೆರಡು ದಿನ ಮುಂಚೆ ಬಂದಿದ್ದಿದ್ರೆ ನಿಂಗೂ ದೇವಲೋಕ ಕಾಣಾ ಭಾಗ್ಯ ಸಿಗ್ತಿತ್ತು ಅಂತ ಕಣ್ಣಿಗೆ ಕಟ್ಟುವಂತೆ ವರ್ಣಿಸಿ ಹೇಳುತ್ತಿದ್ರೆ ರತ್ನಕ್ಕ ಕಣ್ಣೂ ಬಾಯಿ ಬಿಟ್ಕಂಡು ಕೇಳಿ, ಅಯ್ಯೋ ನಂಗೆ ತಪ್ಪೋಯ್ತಲ್ಲಾ, ದೇವಲೋಕ ಕಾಣಾ ಭಾಗ್ಯ ಅಂತ ಎರಡು ದಿನ ಸರ್ಯಾಗಿ ಊಟ ತಿಂಡೀನೂ ತಿನ್ನದೆ ಕೊರಗ್ತಾ ಕೂತಿದ್ಲಂತೆ. ಅವ್ಳೇನೂ ಪೆದ್ದಿಯಲ್ಲ. ಸಕತ್ ಮಾತುಗಾತಿ. ಆದ್ರೂ ಅಂತಾ ಅವಳ್ನೂ ಯಾಮಾರಿಸಿ ಏಳು ಕೆರೆ ನೀರು ಕುಡಿಸೋ ತಾಕತ್ತು ನಮ್ಮ ನಾಗೂ ಅತ್ತೇದು.
ಬಾಣಂತೀಲೂ ಬಕ್ರಾ ಮಾಡ್ತಿದ್ಲು
ನಮ್ಮನೇನಲ್ಲಿ ಹಳೆರೂಮು ಅಂತ ಒಂದಿತ್ತು. ಅಲ್ಲಿ ಗಾಳಿ ಬೆಳಕು ಸ್ವಲ್ಪ ಕಮ್ಮೀನೆ. ಅದುನ್ನ ಬಾಣಂತಿ ಕೋಣೇಂತ ಮಾಡಿದ್ರು. ಬಾಣಂತೀರು ಅಲ್ಲೆ ಮಲಗ್ತಿದ್ದಿದ್ದು. ನಮ್ ನಾಗೂ ಅತ್ತೆ ಬಾಣಂತೀಲಿ ಆ ಕೋಣೇನಾಗೇ ಮಲಗ್ತಿದ್ಲು. ಆ ವಿಷಯಾನ ಮಗಳು ಅನಿತಾ ಚಿಕ್ಕವಳಿದ್ದಾಗ ಹೇಳ್ತಿದ್ಲಂತೆ. ಅಲ್ಲಿ ಜಂತೆ ಒಳಗೆ ಒಂದು ದೊಡ್ಡ ಹಾವಿತ್ತು. ಒಂದ್ಸಲ ಅದು ರೊಯ್ ಅಂತ ಕೆಳಕ್ಕೆ ಇಳೀತು. ನನ್ನ ಪಕ್ಕದಲ್ಲೇ ಬಂತು. ನಾನೂ ಮಗೂನ ಎದೆಗವುಚಿಕೊಂಡು ಧೈರ್ಯವಾಗಿ ಓಡ್ಕಂಡು ಬಂದೆ. ಆಮೇಲೆ ಎಲ್ರೂ ಸೇರಿ ಹುಡುಕಿದ್ರೂ ಅದು ಕಾಣಲೇ ಇಲ್ಲ. ನನ್ನ ಕಣ್ಣಿಗೆ ಮಾತ್ರ ಎರಡು ಮೂರು ಸತಿ ಕಾಣಿಸ್ಕೊಂಡಿದೆ. ಆದ್ರೆ ಏನೂ ಮಾಡ್ತಿರಲಿಲ್ಲ. ನಾನೂ ಸುಬ್ಬರಾಯನ ಧ್ಯಾನ ಮಾಡ್ಕಂಡು ಇರ್ತಿದ್ದೆ ಅಂತ ಹೇಳ್ತಿದ್ಲಂತೆ. ಹೀಗೇ ನಮ್ಮತ್ತೆ ಕತೆ ಕಟ್ಟೋದ್ರಲ್ಲಿ ಎಕ್ಸ್ಪರ್ಟು. ನಿಜದ ತಲೆ ಮೇಲೆ ಹೊಡ್ದಂಗೇ ಇರ್ತಿತ್ತು.
ಅಕ್ಕ ತಂಗೀರೆಲ್ರೂ ಸೇರಿಗೆ ಸವ್ವಾಸೇರು
ಎಲ್ಲಾ ಅತ್ತೆದೀರೂ ಅಂಗೇ ಇದ್ರು. ದಿನನಿತ್ಯ ಕಣ್ಮುಂದೆ ನಡೆಯೋ ಘಟನೆಗಳು, ಯಾರದೋ ಮನೆಯ ಸುದ್ದಿಗಳನ್ನು ತಮಾಷೆಯಾಗಿ ಹೇಳುವ, ಅದನ್ನು ಸುಮ್ಮನೆ ಹೇಳದೆ ವಿಶೇಷತೆ ಕಲ್ಪಿಸುವ, ಕಡ್ಡಿಯನ್ನೂ ಗುಡ್ಡೆಯಾಗಿ ವೈಭವೀಕರಿಸಿ ವರ್ಣಿಸುವ ಜಾಣ್ಮೆ, ಕಲೆಗಾರಿಕೆ ಎಲ್ಲರಲ್ಲೂ ಇತ್ತು. ವ್ಯಂಗ್ಯಭರಿತ ಹಾಸ್ಯದಿಂದ ಎದುರಿನವರ ಕಾಲೆಳೆಯುವುದರಲ್ಲಿ ಅವರಿಗವರೇ ಸಾಟಿ. ಗಾದೆಗಳು, ಒಗಟುಗಳು ನಾಲಗೆಯ ತುದಿಯಲ್ಲೇ ನಲಿಯುತ್ತಿದ್ದವು. ಹಾಡು ಕಟ್ಟುವಲ್ಲಿ, ಸಂದರ್ಭಕ್ಕೆ ತಕ್ಕಂತೆ ಹಾಡಿನ ಬಾಣ ಬಿಡುವಲ್ಲಿ ಸದಾ ಒಂದೆಜ್ಜೆ ಮುಂದೆ.
ನಮ್ಮ ದೊಡ್ಡತ್ತೆ ಒಂದು ಸಲ ಮೈಸೂರು ದಸರಾಗೆ ಹೋಗಿ ಬಂದಿದ್ರು. ಅದನ್ನು ತಂಗೀರಿಗೆ, ತಂಗೀರ ಮಕ್ಕಳಿಗೆ ವರ್ಣಿಸುತ್ತಿದ್ದರೆ, ಅವರೆಲ್ಲ ಅದನ್ನು ತಾವೇ ಹೋಗಿ ನೋಡಿ ಬಂದಂತೆ ಸಂಭ್ರಮಿಸುವಂತೆ ಹೇಳುತ್ತಿದ್ದರು. ಅರಮನೆಯ ವೈಭೋಗವನ್ನು, ದೌಲತ್ತನ್ನು, ಮೆರವಣಿಗೆಯ ಖದರನ್ನು ಕಣ್ಣ ಮುಂದೆಯೇ ಕಡೆದು ನಿಲ್ಲಿಸುತ್ತಿದ್ದರು.
ಹಿರಿಯಕ್ಕನ ಚಾಳಿ ಮನೆಮಂದಿಗೆ ಅನ್ನುವಂತೆ ಅವರ ಹಾದಿಯಲ್ಲಿ ತಂಗಿಯರೂ ಹೆಸರುವಾಸಿ. ಇಡೀ ನಂಟರ ಬಳಗದಲ್ಲಿ ಚಿಕ್ಕಮಾಲೂರು ಹೆಣ್ಣುಮಕ್ಕಳು ಬಲು ಜಾಣರು. ಕಥಾ ಪ್ರವೀಣರು.
ರತ್ನಕ್ಕನ ಲಲಿತ ಪ್ರಬಂಧ
ನಮ್ಮ ರತ್ನಕ್ಕನೂ(ಎರಡನೆ ಅತ್ತೆ ಮಗಳು) ಕಮ್ಮಿಯಿರಲಿಲ್ಲ. ನಾಗೂ ಅತ್ತೆ ಮದುವೆಯಾಗಿ ಹೋದ ಮೇಲೆ ಅವರ ಮಾವನ ಮರೆಗುಳಿತನ, ಆತುರದ ಅನಂತಯ್ಯನಂಥ ಅವಾಂತರಗಳನ್ನು ವರ್ಣನೆ ಮಾಡಿ ಹೇಳ್ತಿದ್ರಾ? ಅದಕ್ಕೆ ಮನಸೋತು ತಾನೇನು ಕಮ್ಮಿ ಅಂತ ಆ ಕಾಲುಕ್ಕೇ ಒಂದು ಪುಟ್ಟ ಪ್ರಬಂಧವನ್ನೇ ‘ಮಾವಯ್ಯನ ಅರ್ಜೆಂಟು’ ಅಂತ ತಲೆಕಟ್ಟಿನ ಅಡಿಯಲ್ಲಿ ಬರೆದಿದ್ಲು. ನಾಗೂ ಅತ್ತೆ ಮಾವನಿಗೆ ಬಲು ಆತುರ. ಜೊತೆಗೆ ಅರಳು ಮರಳು. ಮರೆತು ಪಂಚೆ ಉಟ್ಕಂಡೇ ಸ್ನಾನ ಮಾಡಿಬಿಡುತ್ತಿದ್ದರು. ಗಡಿಬಿಡಿಯಲ್ಲಿ ಅದ್ರ ಮೇಲೇನೇ ಮಡಿ ಪಂಚೇನೂ ಉಟ್ಕಂಡು ಬಿಡ್ತಿದ್ರು. ಎಲ್ಲಾ ನೆಂದು ತೊಪ್ಪೆ ಆಗಿ ಯಾವ್ದು ಮಡೀದೋ ಯಾವ್ದು ಮೈಲಿಗೇದೋ ಗೊತ್ತಾಗ್ದೆ ಪರದಾಡ್ತಿದ್ದರಂತೆ. ಊಟ ತಿಂಡಿ ಬಲು ಕಮ್ಮಿ ತಿಂತಿದ್ರಂತೆ. ಆದ್ರೆ ಎರಡು ಗಂಟೆಗೊಂದ್ಸರಿ ಹಸಿವು ಅಂತ ಬರ್ತಿದ್ರು. ತಿನ್ನೋಕೆ ಕೊಟ್ಟಿಲ್ಲ ಅಂತ ಗಲಾಟೆ ಮಾಡ್ತಿದ್ರು. ಆತುರಗೆಟ್ಟ ಆಂಜನೇಯ ಅಂತ ನಮ್ಮ ದೊಡ್ಡತ್ತೆ ನಗಾಡ್ತಿದ್ರು. ಇದ್ನೆಲ್ಲಾ ಅಲ್ದೆ ಮಾವಯ್ಯನ ಇನ್ನೂ ಹತ್ತಾರು ಅವತಾರಗಳ್ನ ಬರ್ದು ಅದಿಕ್ಕೆ ರೆಕ್ಕೆಪುಕ್ಕದ ಎಣ್ಣೆ ಹಾಕಿ ನಗೆದೀಪ ಹಚ್ಚಿದ್ರು ತಮ್ಮ ಪ್ರಬಂಧದಲ್ಲಿ.
ವಿಜಿ ಅತ್ತೆಯ ಕತಾಲೋಕ
ನಂಗೆ ಜಾಸ್ತಿ ವಾಡಿಕೆ ನಮ್ಮ ಚಿಕ್ಕತ್ತೆ ಅಂದ್ರೆ ಕೊನೆ ಅತ್ತೆ ವಿಜಿ. ನಂಗೆ ಬುದ್ಧಿ ಬಂದ ಮೇಲೇ ಅವ್ರು ಅಂಗೇ ಅವ್ರ ಮಕ್ಕಳು ಗಿರೀಶ, ರಾಜೇಶ, ಪುಟ್ಟಲಕ್ಷ್ಮಿ (ಲಕ್ಷ್ಮಿ, ಕುಳ್ಳಕ್ಕೆ ಪುಟ್ಟಕ್ಕೆ ಇದ್ಲು. ಅದುಕ್ಕೇ ನಾನೇ ಅಂಗೆ ಹೆಸರಿಟ್ಟಿದ್ದೆ.) ವರ್ಷಕ್ಕೆ ಎರಡು ಸತಿ, ದಸರಾ ರಜಾ ಮತ್ತೀಗ ಬೇಸಿಗೆ ರಜಾಕ್ಕೆ ಬರ್ತಿದ್ರು. ವರ್ಷದಲ್ಲಿ ಭರ್ತಿ ಮೂರೂವರೆ ತಿಂಗ್ಳು ಜೊತೇಲೇ ಇರ್ತಿದ್ರು. ಪರೀಕ್ಷೆ ಆದ ತಕ್ಷಣ ಬಂದ್ರೆ ಸ್ಕೂಲ್ ಶುರುವಾದ ಮೇಲೇನೇ ಹೋಗ್ತಿದ್ದಿದ್ದು. ಮಕ್ಕಳಿಗೂ ಪರೀಕ್ಷೆಗಿಂತ್ಲೂ ಮಾವನ ಮನೇನೆ ಪ್ರಿಯವಾಗಿತ್ತು. ನಾವೆಲ್ರೂ ಎಷ್ಟು ಆಡಿದ್ದೀವಿ, ಜಗಳಾಡಿದ್ದೀವಿ, ಬಿದ್ದೂ ಎದ್ದೂ ಮಾಡಿದ್ದೀವಿ ಲೆಕ್ಕವೇ ಇಲ್ಲ. ಸ್ವಂತ ಅಣ್ಣ ತಮ್ಮ ಅಕ್ಕ ತಂಗೀರ ತರವೇ ಇದ್ವಪ್ಪ.
ಯಪ್ಪಾ ನಮ್ಮ ವಿಜಿ ಅತ್ತೆ ಎದ್ಯಾಗೆ ಕತಾ ಸರಿತ್ಸಾಗರವೇ ಇತ್ತು. ಹೇಳಿದಷ್ಟೂ ಊರುತ್ತಿದ್ದ ಕತೆಗಳು. ಖಾಲೀನೇ ಆಗ್ತಿರಲಿಲ್ಲ. ಅವ್ರು ಬಸ್ಸು ಇಳಿದು ಮನೆಗೆ ಬಂದ ತಕ್ಷಣ ನನ್ನ ಮೊದಲ ಪ್ರಶ್ನೆ ಯಾವಾಗ ವಾಪಸ್ ಹೋಗೋದು. ಬಂದ ತಕ್ಷಣ ಇಂಗೆ ಕೇಳ್ತಾಳೆ ಅಂತ ಯೋಚಿಸ್ತಿರ್ಲಿಲ್ಲ. ನನ್ನ ಬುದ್ಧಿ ಗೊತ್ತಲ್ಲ. ನಕ್ಕೊಂಡೇ ಇನ್ನೂ ಎರಡೂವರೆ ತಿಂಗಳು ಅಂತಿದ್ಲು. ಆಗ್ಲೇ ನಂಗೆ ಎಷ್ಟು ಕತೆ ಹೇಳ್ಬೇಕು ಅಂತಾ ಲೆಕ್ಕಾಚಾರ ಮಾಡಿ ಹೇಳ್ತಿದ್ದೆ.
ದಿನಾ ಬೆಳಗ್ಗೆ ಒಂದು ಪುಟ್ಟ ಕತೆ. ಆಮೇಲೆ ಊರಿನ ಸುದ್ದಿ. ಅವ್ರೂರಲ್ಲಿ ಏನೇನಾಯ್ತು. ನಮ್ಮೂರಲ್ಲಿ ಏನೇನಾಯ್ತು. ಇವುನ್ನೂ ರಸವತ್ತಾಗಿ ಕತೇ ತರಾನೇ ಹೇಳ್ತಿದ್ರು. ಗಿರೀಶ ರಾಜೇಶಾನೂ ಅವ್ರ ಸ್ಕೂಲಿನ ವಿಷ್ಯ, ಸ್ನೇಹಿತರ ವಿಷ್ಯಾನೂ ಅವರಮ್ಮನಂಗೇ ರಸವತ್ತಾಗಿ ಹೇಳ್ತಿದ್ರು. ಎಲ್ರೂ ಸೇರಿ ಬಲೆ ನಗಾಡ್ತಿದ್ವಿ. ಮೂರೊತ್ತೂ ತಮಾಷಿ ತಮಾಷಿ. ಈ ಚಿಕ್ಕದು ಪುಟ್ಟಲಕ್ಷ್ಮಿ ಇತ್ತಲ್ಲ. ಅದು ನಮ್ಮ ಬಾಲಂಗೋಚಿ. ನನ್ನ ಹಿಂದೆ ಮುಂದೆ ಸುತ್ತಾಡೋದು. ನಾನೂ ಎಲ್ಲಾ ಕಡೆ ಎಳೆದಾಡ್ಕೊಂಡು ಹೋಗ್ತಿದ್ದೆ. ನನ್ನ ಕಂಡ್ರೆ ಭಾರೀ ಪ್ರೀತಿ. ಎಳನೀರು ಕೊಡ್ಸು, ಕಾಶಿ ಹಣ್ಣು ಕೊಡ್ಸು ಅಂತಾ ಬರೋಳು. ನಾನೂ ದೊಡ್ಡ ಮನಿಷಿ ತರ ಆಳುಗಳ ಹತ್ರ ಹೇಳಿ ಅವುಳ್ಗೆ ಕೊಡುಸ್ತಿದ್ದೆ.
ಸಂಜೆ ಆದ್ ಮೇಲೆ ಇನ್ನೊಂದು ಪುಟ್ಟ ಕತೆ ಹೇಳ್ತಿದ್ರು. ರಾತ್ರಿ ಮಲಗುವಾಗ ಮಾತ್ರ ಒಂದು ಗಂಟೆ ದೊಡ್ಡ ಕತೆ ಶುರು ಆಗ್ತಿತ್ತು. ಪ್ರತಿ ಸಲಾನೂ ಒಂದೆರಡು ಮೂರು ಕಾದಂಬರಿಗಳ್ನ ನನ್ನ ಮನಸಲ್ಲಿ ಕತೆಯಾಗಿಸ್ತಿದ್ರು.
ಬಸ್ ಹತ್ತೋವರ್ಗೂ ಮುಗೀತಿರ್ಲಿಲ್ಲ
ಮುನ್ನೂರು ಪುಟಗಳ ಕಾದಂಬರಿ ಅಂದ್ರೆ ಮುನ್ನೂರು ಗಂಟೆ ಹೇಳುವ ಚಾತುರ್ಯ ಅವರದು. ಅಬ್ಬ ಒಂದೂ ಸಾಲು ಬಿಡುತ್ತಿರಲಿಲ್ಲ. ಅಷ್ಟು ಅಮೋಘವಾದ ಸ್ಮರಣ ಶಕ್ತಿ. ಅದ್ರ ಜೊತೇಗೆ ತಮ್ಮ ಕಲ್ಪನೆಯನ್ನೂ ಸೇರ್ಸಿ ನಾನೂರು ಪುಟಗಳಷ್ಟೇ ಕಾದಂಬರಿ ಮಾಡ್ತಿದ್ರು. ನಮ್ಮ ಈಗಿನ ಧಾರಾವಾಹಿ ತರಕ್ಕೆ, ಅವರ ಕತೇ ಹೇಳೋ ರೀತಿ ಇರ್ತಿತ್ತು. ಒಂದು ನಿಮಿಷದ ಕತೇನ ಅರ್ಧ ಗಂಟೆ ಹೇಳ್ತಿದ್ರು. ಸ್ವಾರಸ್ಯಭರಿತವಾಗಿರ್ತಿತ್ತು. ಧಾರಾವಾಹಿ ತರಾನೇ ಕುತೂಹಲಕರ ಘಟ್ಟದಲ್ಲಿ ನಿಲ್ಲಿಸಿ, ನಾಳೆ ರಾತ್ರಿ ಮುಂದುವರಿಸುತ್ತೀನಿ ಅನ್ನೋರು. ನಂಗೋ ಥೋ ಈ ರಾತ್ರಿ ಯಾಕೆ ಇಷ್ಟು ತಡವಾಗಿ ಬರುತ್ತೆ ಅಂತ ಚಡಪಡಿಕೆ. ರಾತ್ರಿ ಮಲಗುವ ಮುಂಚಿನಿಂದಾನೆ ನಾಳೆ ರಾತ್ರಿ ಯಾವಾಗಾಗುತ್ತೆ ಅಂತ ಕಾಯ್ತಿದ್ದೆ. ಅಂತಾ ಕತೆ ಹೇಳೋ ಕಲೆಗಾರಿಕೆ ನಮ್ಮತ್ತೇದು. ನನ್ನ ಕಂಡ್ರಂತೂ ಬಲು ಪ್ರೀತಿ. ನಂಗೋಸ್ಕರಾನೇ ಕತೆ ಓದಿ ರೆಡಿ ಇಟ್ಕಂತಿದ್ರು. ನಾನೂ ಸಾಕಷ್ಟು ಕತೆ ಓದುತ್ತಿದ್ದೆ. ಆದ್ರೂ ಅತ್ತೆ ಕೇಳೋದು ಅಂದ್ರೆ ಪ್ರಾಣ. ಕಥಾನಾಯಕಿ ನನ್ನ ಕಾಡುವಂತೆ, ಆ ಕತೆ ಇಡೀ ದಿನ ನನ್ನ ಮನಸಲ್ಲಿ ಓಡುವಂತೆ, ರೌಡಿಗಳಿಗೆ ಹಿಡಿಶಾಪ ಹಾಕುವಂತೆ ಮಾಡ್ತಿದ್ರು.
ಇಂಗೇ ರಾತ್ರಿ ಮಾತ್ರ ಒಂದು ಗಂಟೆ ದೊಡ್ಡ ಕತೆ ಹೇಳ್ತಿದ್ರಾ?? ಯಾವಾಗ ಮುಗಿಸ್ತಿದ್ರು ಗೊತ್ತಾ?? ಅವ್ರು ಊರಿಗೆ ಹೋಗೋ ಕೊನೇ ದಿನವೂ ಬಂದೇ ಬಿಡ್ತಿತ್ತು. ನಂಗೆ ಆತಂಕ. ಅಯ್ಯೋ ಕತೆ ಮುಗೀಲೇ ಇಲ್ಲ. ಆ ನಾಯಕಿಗೆ ಏನಾಗುತ್ತೋ ಏನೋ ಅಂತ ಚಿಂತೆ. ಅತ್ತೆ ಪೂರ್ತಿ ಕತೆ ಹೇಳ್ದಿದ್ರೆ ಅಂತ ದಿಗಿಲು ಹತ್ಕಂತಿತ್ತು. ಕೊನೇಗೆ ನಮ್ಮತ್ತೆ ಬಟ್ಟೆ ಬುಟ್ಟಿ ತಕಂಡು ಹೊರಡೋ ಹೊತ್ಗೆ ಕತೆಯ ಮುಕ್ತಾಯದ ಹತ್ರಕ್ಕೆ ತರುತ್ತಿದ್ಲು. ಅದುಕ್ಕೋಸ್ಕರಾನಾದ್ರೂ ನಾನೂ ಅವರ ಹಿಂದ್ಲೇ ಬಸ್ ಸ್ಟ್ಯಾಂಡಿನ ತಂಕ ಸಾಗಾಕಿ ಬರಾಕೆ ಹೋಗ್ಲೇಬೇಕಿತ್ತು. ಆ ತುದೀಲಿ ಬಸ್ಸು ಕಂಡ ಮೇಲೇನೇ ಅವ್ಳು ಕತೆ ಮುಗಿಸ್ತಿದ್ದಿದ್ದು. ಅಲ್ಲೀವರ್ಗೂ ಅವಳ ಕಲ್ಪನೇಲೆ ಕತೆ ಬೆಳೀತಾನೇ ಇರ್ತಿತ್ತು. ಇಂತಾ ಕತೆಗಾರಿಕೆ ನಮ್ಮ ವಿಜಿ ಅತ್ತೇದು. ಇವತ್ತಿಗೂ ನನ್ನ ಎದೇಲಿ ಕತೆಗ್ಳು ಗೂಡು ಕಟ್ಟಿವೆ ಅಂದ್ರೆ ಅದಕ್ಕೆ ಕಾರಣ ನನ್ನ ಪ್ರೀತಿಯ ವಿಜಿ ಅತ್ತೆ.
ಇಂಗೇ ಒಬ್ರಾ ಇಬ್ರಾ ಕತೆಗೆ ಬಾಯಾದೋರು, ಕತೆಗೆ ಕಿವಿಯಾದೋರು. ನಮ್ಮ ವಂಶದ ತುಂಬೆಲ್ಲಾ ಇಂತವೇ ಕತೆಗ್ಳು. ಕತೆ ಹೇಳೋರ ಬದುಕಿನ ಕತೆಗ್ಳೂ ಮರೆಯಲಾಗದ ಕತೆಗಳಾಗಿ ನಮ್ಮ ನೆನಪಿನ ಚೀಲದಲ್ಲಿ ಸೇರಿಹೋಗಿವೆ.

ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.