ಮನೆಯಲ್ಲಿ ಹಿಡಿ ಕೂದಲಿಲ್ಲ! ಸೌಕಾತಿ ಚವರಿ ಮಾಡಿ ಕೊಡಲು ಹೇಳಿದ್ದಾಳೆ ಬೇರೆ, ಅಂಥವಳಿಗೆ ಮಾಡಿಕೊಟ್ಟರೆ ನಾಲ್ಕು ಕಾಸು ಹೆಚ್ಚಿಗೆ ಸಿಕ್ಕಿತು ಎನ್ನುವ ಆಸೆ ಇವಳಿಗೆ. ಇಂತಹ ಸಂದಿಗ್ಧದಲ್ಲಿ ಅವಳಿಗೆ ಕಾಣಿಸುವ ಒಂದೇ ದಾರಿ ಎಂದರೆ ತನ್ನದೇ ಸೊಂಪು ಕೂದಲನ್ನು ಕತ್ತರಿಸಿ ಚವರಿ ಮಾಡಿಕೊಡುವುದು. ಹಸುವಿಗೆ ಹೆಸರುವಾಸಿ ದುಗ್ಗಿ ಕೊನೆಗೆ ಅದನ್ನೇ ಮಾಡುತ್ತಾಳೆ. ಇದು ತಿಳಿಯದ ಆ ಸೌಕಾತಿ ಚವರಿಯನ್ನು ಮೆಚ್ಚಿ ತಲೆಗೆ ಹಚ್ಚಿಕೊಂಡು ಕ್ಷಣಕಾಲ ಸಂಭ್ರಮಿಸಿಬಿಡುತ್ತಾಳಾದರೂ ಇದು ದುಗ್ಗಿಯ ಕೂದಲಿಂದ ಮಾಡಿದ ಚವರಿ ಎಂದು ತಿಳಿದಾಕ್ಷಣ ಹಾವು ತುಳಿದವಳಂತೆ ಚವರಿಯನ್ನು ಅವಳು ಇನ್ನೇನು ಬಾಯಿಗಿಡಬೇಕೆಂದಿದ್ದ ತುಪ್ಪ ಸವರಿದ ತೊಟ್ಟಿಯ ಮೇಲೆ ಎಸೆಯುತ್ತಾಳೆ.
ಆಶಾ ಜಗದೀಶ್ ಅಂಕಣ
ಕೆಲವೊಮ್ಮೆ ಎಂತಹ ಪರಿಸ್ಥಿತಿಗಳು ಬಂದುಬಿಡುತ್ತವೆ ಎಂದರೆ ನಮ್ಮ ಬೌದ್ಧಿಕ ಡೋಂಗಿತನಗಳು ನಮಗೇ ಹೇಸಿಗೆ ಹುಟ್ಟಿಸಿಬಿಡುತ್ತವೆ. ಸಭ್ಯತೆಯ ಶಾಲು ಹೊದಿಸಿ ಹೊರತರುವ ಶಿಷ್ಟ ಮಾತುಕತೆಯೊಳಗಿನ ಪೊಳ್ಳು ಮುಖಕ್ಕೆ ರಾಚಿ ನಾವು ಎನ್ನುವ ನಾವು ಎಷ್ಟು ಸುಳ್ಳು ಎಂಬುದನ್ನು ಸಾರಿ ಸಾರಿ ಹೇಳಿಬಿಡುತ್ತವೆ. ಬಹಳಷ್ಟು ಸರ್ತಿ ನಮಗೆ ಸತ್ಯಕ್ಕೆ ಎದುರಾಗಿ ನಿಲ್ಲುವುದು ಬೇಕಿರುವುದೇ ಇಲ್ಲ. ಸತ್ಯವೇ ಬೇಕಿಲ್ಲ ಯಾರಿಗೂ. ಅಪ್ರಿಯವಾದ ಸತ್ಯಕ್ಕಿಂತ ಪ್ರಿಯವಾದ ಸುಳ್ಳು ಸಾಕು ನಮಗೆ. ಸತ್ಯ ಆ ಕ್ಷಣಕ್ಕೆ ಅಪಾಯವುಂಟುಮಾಡಬಹುದು… ಅದೂ ನಮಗೆ ಸತ್ಯವನ್ನು ಅರಗಿಸಿಕೊಳ್ಳುವ ನಿಶ್ಯಕ್ತಿ ಇರುವ ಕಾರಣ. ಆದರೆ ಅದರ ಅಗ್ನಿ ಕುಲುಮೆಯಲ್ಲಿ ಬೆಂದಲ್ಲದೆ ಮುಕ್ತಿಯಾದರೂ ಎಲ್ಲಿಂದ?!
ಇವುಗಳ ಅರಿವು ನಮ್ಮ ಜ್ಞಾನ ಪಾತ್ರೆಯ ತಳದಲ್ಲಿ ಪಾಚಿಗಟ್ಟಿ ನಾರುತ್ತಿರುತ್ತದೆ. ಅದನ್ನು ಶುದ್ಧವಾಗಿಟ್ಟುಕೊಳ್ಳುವ ದಾರಿ ಗೊತ್ತಿದ್ದರೂ ನಾವದನ್ನು ಪ್ರಜ್ಞಾಪೂರ್ವಕ ಮರೆಯತೊಡಗುತ್ತೇವೆ. ಯಾವುದು ನಮ್ಮನ್ನು ಆ ಕ್ಷಣಕ್ಕೆ ಸಂತೋಷವಾಗಿಡಬಲ್ಲದೋ ಅದು ಕ್ಷಣಿಕವಾಗಿದ್ದರೂ ಅದು ನಮಗೆ ಸಾಕು. ಇಂತಹ ಅಲ್ಪತೃಪ್ತರಿಂದ ಎಷ್ಟರ ಮಟ್ಟಿಗಿನದ್ದನ್ನು ಮಾತ್ರ ನಿರೀಕ್ಷಿಸಲು ಸಾಧ್ಯ… ಸತ್ಯ ಬೇಕಿಲ್ಲ ನಮಗೆ! ಇನ್ನು ಅಪ್ರಿಯವಾದ ಸತ್ಯ! ಶಾಂತಂ ಪಾಪಂ!
ಯಾರು ಯಾರಿಗೆ ಸಮಾನರು? ಏಕೆ ಸಮಾನರಾಗಬೇಕು? ಕೆಲವೊಮ್ಮೆ ಈ ಸಮಾನತೆ ಎನ್ನುವ ಪದವೇ ಸಂಶಯಾಸ್ಪದ! ನಮಗೆ ಇಂತಹ ಪದಗಳನ್ನು ಶೋಷಿಸುವುದು ಬಹಳ ಚನ್ನಾಗಿ ಗೊತ್ತು. ಪಳಗಿಬಿಟ್ಟಿದ್ದೇವೆ. ಯಾವ ಪದಗಳ ಬೆನ್ನಲ್ಲಿ ನಮ್ಮ ಬೇಳೆ ಬೇಯುವುದು ಎನ್ನುವ ವಿಚಾರಗಳು ಮನದಟ್ಟು ನಮಗೆ. ಆದರೆ ಆ ಕ್ರಿಯೆಯ ಹಿಂದಿನ ಧೂರ್ತತನದ ಮಸಿ ಮೆತ್ತಿದ ಅಗೋಚರ ಮುಖವನ್ನು ಕಾಣದಂತೆ ಬಚ್ಚಿಟ್ಟುಬಿಡುತ್ತೇವೆ. ಅದು ಯಾರಿಗೂ ಗೊತ್ತಾಗಬಾರದು! ಅದು ಅಜ್ಞಾತವಾಗಿರುವಷ್ಟೂ ದಿನ ಅದು ತಪ್ಪೇ ಅಲ್ಲ! ತಪ್ಪು ನಾಲ್ಕು ಜನರಿಗೆ ತಿಳಿಯದ ಹೊರತು ತಪ್ಪೇ ಅನಿಸಿಕೊಳ್ಳುವುದಿಲ್ಲ. ಅಲ್ಲಿಯವರೆಗೂ ನಮ್ಮನ್ನದು ಕಾಡುವುದಿಲ್ಲ. ಅದು ಬಹಿರಂಗವಾದಾಗ ಮಾತ್ರವೇ ತಪ್ಪಿತಸ್ಥ ಭಾವ ಎದ್ದು ಕೂರುವುದು. ನಾವಿಲ್ಲಿ ಎಷ್ಟು ಸಮಯಸಾಧಕರಿದ್ದೇವೆ ನೋಡಿ… ಫಕ ಫಕ ನಗುಬರುತ್ತದೆ. ನಮ್ಮದೇ ಹಿಪೋಕ್ರಸಿಯ ಬಗ್ಗೆ ನಾಚಿಕೆ ಮೂಡುತ್ತದೆ.
ಅಧಿಕಾರವಿದೆ ಎಂದು ಬೊಂಬಡ ಬಾರಿಸುವ ಅದೇ ಹೊತ್ತು ನಮ್ಮದೇ ಮನೆಯ ಎತ್ತಿಗೆ ಮೂಗುದಾರ ಹಾಕಿ ಬೇಕಾದರೆ ಉಪವಾಸ ಕೆಡವುತ್ತೇವೆ. ಕಾರಣ ಅದು ಪಳಗಬೇಕು, ಅದೂ ನಮ್ಮ ಆಣತಿಯ ಮೇರೆಗೆ ನರ್ತಿಸುವಷ್ಟು… ನನಗಿಲ್ಲಿ ಒಂದು ಅನುಮಾನ ಕಾಡುತ್ತದೆ ಯಾರು ನಿಜವಾಗಿಯೂ ಪಶು ಹಾಗಾದರೆ?! ಪಶುತನವನ್ನು ಮೀರಿದ್ದೇವೆ ಎಂದು ಮಾನವತ್ವ, ಮಾನವತೆ ಎಂದೆಲ್ಲಾ ದೊಡ್ಡ ದೊಡ್ಡ ಪದಗಳನ್ನು ಬಳಸು(ಶೋಶಿಸು)ತ್ತೇವೆಯೋ ಅದು ಯಾವ ಅರ್ಥದಲ್ಲಿ ಅರ್ಥ ಗಳಿಸಿದೆ ಹಾಗಾದರೆ…. ಇಷ್ಟೆಲ್ಲ ಸತ್ಯಕ್ಕೆ ಎದುರಾಗುವ ಸಾಮರ್ಥ್ಯ ಮನುಷ್ಯನಿಗೆ ಬರುವುದು ಕಷ್ಟ. ಆದರೆ ಪಶುಗಳಿಗಿದೆ. ಅವುಗಳಿಗೆ ಈ ಒಡೆಯನನ್ನು ಖುಷಿಯಾಗಿಡುವುದು ಗೊತ್ತು. ತನ್ನ ತುತ್ತಿನ ಚೀಲದ ಅಗತ್ಯ ಅವುಗಳಿಗೆ ಗೊತ್ತು. ಇವನ ಸ್ವಾರ್ಥದ ನಡುವೆಯೇ ತಮ್ಮ ಪುಟ್ಟ ಜೀವನದ ಹೋರಾಟವನ್ನು ತಣ್ಣಗೆ ನಡೆಸಿಕೊಂಡು ಹೋಗುವುದು ಅವುಗಳಿಗೆ ಗೊತ್ತು. ಅದಕ್ಕೇ ಬೇಕಾಗಿಯೇ ಪಳಗುತ್ತವೆ…
ಆದರೆ ಸೋ ಕಾಲ್ಡ್ ಮನುಷ್ಯನಿಗೆ ಎಲ್ಲವನ್ನೂ ಎಲ್ಲರನ್ನೂ(ತನ್ನಂತೆ ಇರುವ ಸಹಜೀವಿಗಳನ್ನೂ ಸಹವರ್ತಿಗಳನ್ನೂ…) ಪಳಗಿಸಿಕೊಳ್ಳುವ ಹಂಬಲ(ದುರಾಸೆ) ಬಿಟ್ಟರೆ ಅನ್ಯರ ಮನೋ ಕಲಿಲಗಳ ವ್ಯಾಕುಲ ಚಲನೆಯ ಬಗ್ಗೆ ಯಾವ ಕಾಳಜಿ ಇದೆ?! ಇದು ಕಾಡುತ್ತದೆ.
ಈ ಎಲ್ಲ ಪೂರ್ವ ಪೀಠಿಕೆಯೂ ಈ ಕ್ಷಣ ನನ್ನ ಮನೋ ಪಟಲದಲ್ಲಿ ಚಲಿಸಿ ಸಳುಕು ಹುಟ್ಟಿಸಿ ಮಾಯವಾದ ಮಿಂಚೇ ಹೊರತು ಇಂದಿನ ನನ್ನ ಬರಹಕ್ಕೆ ನೇರವಾಗಿ ಸಂಬಂಧಿಸಿದ್ದಲ್ಲ. (ಮತ್ತೆ ಈ ಎಲ್ಲ ಮಂಥನವೂ ಯಾವ ಬರಹಕ್ಕಾದರೂ ಸರಿ ಹೊರತು ಅಂತಲೂ ನನಗನ್ನಿಸುವುದಿಲ್ಲ. ಎಲ್ಲಿಯವರೆಗೆ ನಾವು ಎದುರಿಸಲಾರೆವೋ ಅಲ್ಲಿಯವರೆಗೂ ನಾವು ಸತ್ಯವನ್ನು ಹೇಳಲಾರೆವು…)
ಇತ್ತೀಚಿನ ಕಥಾ ಪ್ರಪಂಚ ಬಹಳ ಆಶಾದಾಯಕವಾಗಿದೆ ಎನ್ನುವುದು ಚೇತೋಹಾರಿಯಾದ ವಿಷಯ. ಅದು ಇತ್ತೀಚೆಗೆ ಬರುತ್ತಿರುವ ಹೊಸ ಕಥೆಗಾರರ ಹೊಸದೇ ಪರಿಭಾಷೆಯ ಕಥೆಗಳಿಂದಲೂ ವೇದ್ಯ. ಇಲ್ಲಿ ಒಂದಷ್ಟು ಹೊಸ ಪೀಳಿಗೆಯ ಕಥೆಗಾರರ ಹೊಸ ಸಂವೇದನೆಯುಳ್ಳ ವಿಶಿಷ್ಟ ಕಥೆಗಳನ್ನಿಟ್ಟುಕೊಂಡು ಮಾತಾಡಲು ಹೊರಟಿದ್ದೇನೆ.
ಅಜಿತ್ ಹೆಗಡೆ ಹರೀಶಿರವರು ಮೂಲತಃ ಶಿವಮೊಗ್ಗ ಜಿಲ್ಲೆ ಸೋರಬ ಹತ್ತಿರದ ಹರೀಶಿಯವರು. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡುತ್ತಿರುವ ಕೃಷಿಕರು. ಮುಖ್ಯವಾಗಿ ಹಲವಾರು ಕಥಾ ಪ್ರಶಸ್ತಿಗಳಿಗೆ ಪಾತ್ರರಾಗಿ ಕಥೆಗಾರರೆಂದು ಹೆಸರಾದವರು. “ಪರಿಧಾವಿ” ಅವರ ಮೊದಲ ಕಥಾಸಂಕಲನ. ಇತ್ತೀಚೆಗಷ್ಟೇ “ಕಾಮೋಲ” ಎನ್ನುವ ಎರಡನೇ ಕಥಾ ಪುಸ್ತಕವನ್ನೂ ಹೊರತಂದಿದ್ದಾರೆ. ಅವರು ತಮ್ಮ ಪುಸ್ತಕಗಳಿಗಾಗಿ ಆರಿಸುವ ಶೀರ್ಷಿಕೆಗಳೂ ವಿಶೇಷವೇ. ಅವರ ಕಥೆಗಾರಿಕೆಯ ಅಪ್ಪಟ ಕಸುಬುದಾರಿಕೆಯನ್ನು ಅವರ ಮೊದಲ ಕಥಾಸಂಕಲನದಲ್ಲಿಯೇ ಗುರುತಿಸಬಹುದು. ಪಳಗಿದ ಕಥೆಗಾರನಂತೆ (ಪಳಗಿದ್ದಾರೆಯೂ ಸಹ) ಬರೆಯುವ ಅಜಿತ್ ತಮ್ಮ ಕಥಾವಸ್ತುವನ್ನು ಸಮರ್ಥವಾಗಿ ದುಡಿಸಿಕೊಳ್ಳಬಲ್ಲವರು.
ಇವರ ಪರಿಧಾವಿ ಸಂಕಲನದ “ಆಯ” ಎನ್ನುವ ಕಥೆ ಹೆಣ್ಣು ಭೂಮಿಕೆಯ ಸಶಕ್ತ ಕಥೆ. ಗಂಡ ಹೆಂಡತಿಯರ ನಡುವೆ ಇರಬೇಕಾದ ಸಾಮರಸ್ಯದ ಹಳಿ ದುಶ್ಚಟಗಳ ಕಾರಣ ತಪ್ಪಿರುತ್ತದೆ. ಆದರೆ ಅದಕ್ಕೆ ಮೌಢ್ಯತೆಯ ಕಾರಣ ಹಚ್ಚಿ ತಪ್ಪು ಮಾಡಿದ ಗಂಡನಿಗೆ ಮಾಫಿಯೊಂದನ್ನು ಕೊಡುವುದು, ಗಂಡಿಗೆ ಸಿಕ್ಕಷ್ಟೇ ಸುಲಭವಾಗಿ ಇಂತಹ ಅವಕಾಶ ಹೆಣ್ಣಿಗೆ ಸಿಗಬಲ್ಲದಾ ಎಂದು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ಕೊನೆಗವಳು ತನ್ನ ಅವಶ್ಯಕತೆಯನ್ನು ಅವನಿಗೆ ಮನದಟ್ಟು ಮಾಡಿಸಲಿಕ್ಕಾಗಿ ಮನೆ ತೊರೆಯುತ್ತಾಳೆ. ಆಗಲಾದರೂ ಅವನು ಅರ್ಥ ಮಾಡಿಕೊಳ್ಳದೆ ತಾಯಿಯ ಬಲವಂತಕ್ಕೆಂಬಂತೆ ವರ್ತಿಸುವುದು ಜಿಗುಪ್ಸೆ ಹುಟ್ಟಿಸುತ್ತದೆ. ಇಲ್ಲಿ ಬರುವ ಅತ್ತೆ ಮತ್ತು ಸೊಸೆಯರು ಸಮಾನ ದುಃಖಿಗಳೆಂಬ ಕಾರಣಕ್ಕೆ ಮತ್ತು “ಈಗ ನಾನು ಅತ್ತೆ, ಮುಂದಿನ ಪಾಳಿ ನಿನ್ನದು” ಎಂದು ಎಚ್ಚರಿಸುವ ಅತ್ತೆಯ ಮಾತುಗಳು ಅವರಿಬ್ಬರನ್ನು ಒಂದು ಮಾಡುತ್ತವೆ.
ಅಧಿಕಾರವಿದೆ ಎಂದು ಬೊಂಬಡ ಬಾರಿಸುವ ಅದೇ ಹೊತ್ತು ನಮ್ಮದೇ ಮನೆಯ ಎತ್ತಿಗೆ ಮೂಗುದಾರ ಹಾಕಿ ಬೇಕಾದರೆ ಉಪವಾಸ ಕೆಡವುತ್ತೇವೆ. ಕಾರಣ ಅದು ಪಳಗಬೇಕು, ಅದೂ ನಮ್ಮ ಆಣತಿಯ ಮೇರೆಗೆ ನರ್ತಿಸುವಷ್ಟು… ನನಗಿಲ್ಲಿ ಒಂದು ಅನುಮಾನ ಕಾಡುತ್ತದೆ ಯಾರು ನಿಜವಾಗಿಯೂ ಪಶು ಹಾಗಾದರೆ?
ಮುರಿದೇನಾದರೂ ಸರಿ ಬಾಗಲಾರೆ ಎನ್ನುವ ಮನಸ್ಥಿತಿ ಯಾವ ಸಂಸಾರಗಳನ್ನು ಪೊರೆಯಬಲ್ಲವು?! ತಾಳ್ಮೆ ಒಬ್ಬರಿಗಿದ್ದರೆ ಸಾಕೇ? ಮತ್ತೊಬ್ಬರಿಗೆ ಬೇಡವೇ? ಒಲಿಸಿಕೊಳ್ಳುವಾಗ, ಪ್ರೀತಿಸಿ ಓಡಿಸಿಕೊಂಡು ಬರುವಾಗ ಇದ್ದ ಕಾಳಜಿ ನಂತರ ಎಲ್ಲಿ ಹೋಗುತ್ತದೆ?! ತಾಯಿಯಾದವಳೇ ಮೌಢ್ಯವನ್ನು ತುಂಬುವ ಕೆಲಸ ಮಾಡುತ್ತಾ ಅಳಿಯನ ವಿರುದ್ಧ ಬಾಯಿ ಮಾಡುವ ಸಾಹಸಕ್ಕೆ ಇಳಿಯದೆ ಹೋಗುವುದು ಶೋಚನೀಯ. ಕೊನೆ ಪಕ್ಷ ಅತ್ತೆ ಸೊಸೆಯರಾದರೂ (ವಿರುದ್ಧ ದಿಕ್ಕುಗಳಂತೆ, ವಿರುದ್ಧ ಪದಗಳಂತೆ ಬಳಸಲಾಗುವ ಪಾತ್ರಗಳು…) ತಮ್ಮ ಸಮಸ್ಯೆ ಒಂದೇ ಬಗೆಯದು ಎನ್ನುವ ತೀರ್ಮಾನಕ್ಕೆ ಬರುವುದು, ಅತ್ತೆಯ ಸಹನೆ ಸೊಸೆಗೆ ಪಾಠವಾಗುವುದು ಒಂದು ರೀತಿಯದಾದರೆ ಇತಿಹಾಸ ಮರುಕಳಿಸುತ್ತಲೇ ಹೋಗಬೇಕು ಏಕೆ?! ಎನ್ನುವ ಪ್ರಶ್ನೆ ಕಾಡುತ್ತಾ ಉಳಿಯುತ್ತದೆ.
ಆಳ್ವಾಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಹರೀಶ್ ಟಿ.ಜಿ. ರವರು ನಾನಿಲ್ಲಿ ಪ್ರಸ್ತಾಪಿಸಲು ಹೊರಟ ಮತ್ತೊಬ್ಬ ಕಥೆಗಾರ. ಪ್ರಾದೇಶಿಕ ಆಡುಭಾಷೆಯಿಂದ ಹೊಮ್ಮುವ ವಿಶಿಷ್ಟ ಲಯವನ್ನು ತಮ್ಮ ಕಥೆಗಳಲ್ಲಿ ಅಷ್ಟೇ ತದಾತ್ಮ್ಯದಿಂದ ತರುವ ಹರೀಶರನ್ನು ಕಾಡುವ ಕಥಾ ವಸ್ತುಗಳೇ ಅವರ ಯೋಚನೆಯ ಹಾದಿಯನ್ನು ಪ್ರಮಾಣೀಕರಿಸುತ್ತವೆ. ಅವರ “ಹುಲಿಕಡ್ಜಿಳ” ಎನ್ನುವ! ಕಥಾ ಸಂಕಲನದ ಅಷ್ಟೂ ಕಥೆಗಳ ಟೆಂಟಕಲ್ಸ್ ಗಳಿಂದ ಈಗಲೂ ನಾ ಕಳಚಿಕೊಂಡಿಲ್ಲ ಎಂಬುದು ಅವರ ಕಥೆಗಳ ಶಕ್ತಿಯೇ ಹೊರತು ನನ್ನ ಬಲಹೀನತೆಯಲ್ಲ.
ಇವರ ಗೊಂಬೆಯ ಕಥೆ ನನಗೆ ಬಹಳ ಇಷ್ಟವಾದ ಕಥೆ. ತನ್ನ ಚಂದದ ಕಾರಣಕ್ಕೆ ಗೊಂಬೆ ಎಂದು ಹೆಸರು ಪಡೆದುಕೊಳ್ಳುವ ಹೆಣ್ಣುಮಗುವೊಂದು ಬೆಳೆಯುತ್ತಾ ಬೆಳೆಯುತ್ತಾ ತನ್ನ ಸೌಂದರ್ಯದ ಕಾರಣದಿಂದಾಗಿಯೇ ಬೆಳೆಸಿಕೊಳ್ಳುವ ಅಹಂ ಮತ್ತು ಸ್ವೇಚ್ಛೆಯಿಂದಾಗಿ ಕೊನೆಗೆ ಎಂತಹ ಅಂತ್ಯಕ್ಕೆ ತಲುಪುತ್ತಾಳೆ ಎನ್ನುವುದನ್ನು ಬಹಳ ಚಂದದ ಚಿತ್ರಣದಲ್ಲಿ ಕಟ್ಟಿಕೊಡುತ್ತಾರೆ ಹರೀಶರು. ಅಪ್ಪ ಅಮ್ಮ ಮನೆ ಎನ್ನುವ ತನ್ನದೆಲ್ಲವನ್ನೂ ಧಿಕ್ಕರಿಸಿ ಕ್ಷಣಿಕೆ ಸುಖ ಮತ್ತು ಅದಕ್ಕೆ ಹಾತೊರೆಯುವಂತಹ ದುಂಬಿಗಳ ಹಿಂದೆ ಸುತ್ತಿ ತನ್ನದೆನ್ನುವುದೆಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಭಿಕಾರಿಯಾಗುತ್ತಾಳೆ. ಮತ್ತವಳಿಗೆ ತನ್ನ ತಪ್ಪಿನ ಅರಿವಾಗಿ ಬದಲಾಗುವ ಹೊತ್ತಿಗೆ ಕಾಲವೂ ಮಿಂಚೇ ಹೋಗಿರುತ್ತದೆ. ಇಲ್ಲಿ ಗೊಂಬೆಯಂತಹ ಅಪ್ರತಿಮ ಸುಂದರಿ, ಯಾರಾದರೂ ಸರಿ ಅವಳನ್ನು ಕಂಡು ಕರುಬಲೇಬೇಕು ಎನ್ನುವಂತಹ ಸುಂದರಿ ಜನರಿಗೆ ಸಮಾಧಾನವಾಗುವಷ್ಟರ ಮಟ್ಟಿಗೆ (ಸ್ವಾರ್ಥದ ಮೂಟೆಗಳಂತೆ ಬದುಕುವ ಜನಕ್ಕೆ ಇನ್ನೊಬ್ಬರ ಯಾವ ಹೆಚ್ಚುಗಾರಿಕೆ ತಾನೇ ಸೈರಣೆಯಾದೀತು..?!) ಅಧಃಪತನಕ್ಕಿಳಿದುಬಿಡುತ್ತಾಳೆ ಎನ್ನುವಲ್ಲಿಗೆ ಗಾಢ ವಿಷಾದವೊಂದನ್ನು ಉಳಿಸಿ ಕಥೆ ಅಂತ್ಯವಾಗುತ್ತದೆ.
ತಮ್ಮ ಮೊದಲ ಕಥಾ ಸಂಕಲನದ ಹಸ್ತಪ್ರತಿಗೆ ಎರಡೆರೆಡು ಪ್ರಶಸ್ತಿಗಳನ್ನು ಮುಡಿಸಿಕೊಂಡ ಮತ್ತೊಬ್ಬ ಕಥೆಗಾರ ಸ್ವಾಮಿ ಪೊನ್ನಾಚಿ. ಇವರ “ಧೂಪದ ಮಕ್ಕಳು” ಬಹು ಚರ್ಚಿತ ಕಥಾಸಂಕಲನ. ಅದರಲ್ಲೂ ಶೀರ್ಷಿಕೆಯ ಕಥೆಯೇ ಒಂದು ಅದ್ಭುತವಾದ ಕಥೆ. ಹೊಸಪೀಳಿಗೆಯ ಕಥಾಪ್ರಪಂಚದಲ್ಲಿ ತಮ್ಮ ಗುರುತರ ಗುರುತನ್ನ ಅಳಿಯದಂತೆ ಹಚ್ಚಿರುವ ಇವರ ಕಥೆಗಳು ತೀವ್ರ ಅನುಭೂತಿಯನ್ನು ಉಂಟು ಮಾಡುವುದರಲ್ಲಿ ಸೋಲುವುದಿಲ್ಲ.
ಈ ಕಥಾಸಂಕಲದ ಮೊದಲ ಕಥೆ ಹಾಗೂ ಶೀರ್ಷಿಕೆಯ ಕಥೆಯಾದ “ಧೂಪದ ಮಕ್ಕಳು” ಬಹಳಷ್ಟು ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತದೆ. ಸಮಾಜದ ಅಗತ್ಯತೆಗಳೇ ಆಚರಣೆಗಳ ಹುಟ್ಟಿಗೆ ಮೂಲ ಪ್ರೇರಣೆಯಾಗುವ ಸಾವಯವ ಪ್ರಕ್ರಿಯೆಯನ್ನು ಅಷ್ಟೇ ಸಹಜವಾಗಿ ನಿರೂಪಿಸುವ ಕತೆ, ಹೊರನೋಟಕ್ಕೆ ರಕ್ತ ಹೀರುವ ಜಿಗಣೆಗಳಂತೆ ಮುತ್ತುವ ಆದರೆ ಒಳಾಂತರ್ಯದಲ್ಲಿ ಪ್ರಾಣಿಯೊಂದರ ಮೂಲಭೂತ ಅವಶ್ಯಕತೆಯಾದ ಹಸಿವನ್ನು ತಣಿಸುವ ಉದ್ದೇವೊಂದನ್ನು ಮಾತ್ರ ಹೊತ್ತಂತ ಹಪಾಹಪಿ ಹಡೆದ ಮಕ್ಕಳಂತೆ ಕಾಣುವ ಧೂಪದ ಮಕ್ಕಳು, ತಮ್ಮ ಬಾಲ್ಯ, ತನ್ನ ಸಹಜ ಇರುವಿಕೆಗೆ ಇಂತಹ ಮಾರ್ಪಾಡನ್ನೆಲ್ಲ ಬಯಸುವುದಿಲ್ಲ ಎನ್ನುವ ಕಿಂಚಿತ್ ಅರಿವಿರದ ಮಕ್ಕಳ ಮುಗ್ಧತೆಯ ಮೇಲೆ ಹೇಗೆ ಹಿರಿಯರೆನಿಸಿಕೊಂಡವರಿಂದ ಬಲಾತ್ಕಾರವಾಗುತ್ತದೆ ಎಂದು ಕನಿಕರಿಸುವಂತಾಗುತ್ತದೆ.
ಮತ್ತೆ ಈ ಕತೆ ತನ್ನ ಪ್ರಾದೇಶಿಕ ಭಾಷೆ ಮತ್ತು ಅಲ್ಲಿನ ಸಂಸ್ಕೃತಿಯ ದ್ಯೋತಕವಾಗಿ ಮುಖ್ಯವೆನಿಸುತ್ತದೆ. ಇಲ್ಲಿ ರಂಗನ ಕುತೂಹಲ ಮಾತ್ರ ನಮ್ಮೆಲ್ಲರ ಬಾಲ್ಯವನ್ನೂ ಮರುಕಳಿಸುವಂತೆ ಮಾಡಿಬಿಡುತ್ತದೆ. ಒಂದು ಗಂಭೀರವಾದ ವಿಚಾರವನ್ನು ಸರಳವಾಗಿ ಲಘುಹಾಸ್ಯದೊಂದಿಗೆ ತನ್ನ ಉದ್ದೇಶವನ್ನು ಎಲ್ಲೂ ಪಲ್ಲಟವಾಗದಿರುವ ಹಾಗೆ ನಿರೂಪಿಸಿರುವ ರೀತಿ ಹೆಚ್ಚು ಇಷ್ಟವಾಗುತ್ತದೆ ಮತ್ತು ಪರಣಾಮಕಾರಿ ಆಗಿದೆ ಅಂತಲೂ ಅನಿಸುತ್ತದೆ.
ಟಿ.ಎಸ್.ಗೊರವರ ಮೂಲತಃ ಕಥೆಗಾರರು. ರೊಟ್ಟಿ ಮುಟಗಿ ಎನ್ನುವ ಅನುಭವ ಕಥನವನ್ನೂ ಬರೆದು ಸೈ ಎನಿಸಿಕೊಂಡವರು. ಗದಗ ಭಾಗದ ಪ್ರಾದೇಶಿಕ ಭಾಷೆಯ ಸೊಗಡು ಹೊತ್ತು ಬರೆಯುವ ಇವರ ಕಥೆಗಳು ನೈಜತೆಗೆ ಹತ್ತಿರವೆನಿಸುವ, ಇಲ್ಲೆ ಎಲ್ಲೋ ನಡೆದಿದ್ದೆನಿಸಿಬಿಡುವ ಕಾರಣಕ್ಕೆ ಬಹು ಆಪ್ತವಾಗಿಬಿಡುತ್ತವೆ. ಪತ್ರಕರ್ತರಾಗಿ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಗೊರವರರವರು ಪ್ರಸ್ತುತ “ಸಂಗಾತ” ಸಾಹಿತ್ಯ ಪತ್ರಿಕೆಯ ಜೊತೆಗೆ “ಸಂಗಾತ” ಪ್ರಕಾಶನವನ್ನೂ ನಡೆಸಿಕೊಂಡು ಹೋಗುತ್ತಿದ್ದಾರೆ. ಅವರ ಪ್ರತಿಯೊಂದು ಕಥೆಗಳೂ ಸಹ ವಸ್ತುವಿನ ಆಯ್ಕೆ ಮತ್ತು ಸಾಂದ್ರ ಭಾಷೆಯ ಬಳಕೆಯಿಂದಾಗಿ ಗಮನ ಸೆಳೆಯುತ್ತವೆ. ಕಥೆಯೊಂದು ಮಾಗಲು ಬೇಕಾದ ಸಹಜ ಸಮಯವನ್ನು ಕೊಟ್ಟೆ ಕಟ್ಟುವ ಅವರ ಕಥೆಗಳು ಬಹುಕಾಲ ಮನಸಿನಲ್ಲುಳಿಯುತ್ತವೆ.
ಇಲ್ಲಿ ಅವರ “ಕುದರಿ ಮಾಸ್ತರ” ಕಥಾಸಂಕಲನದಲ್ಲಿನ “ಚವರಿ ಮಾರೋ ದುಗ್ಗಿ ಕತೆ”ಯ ಬಗ್ಗೆ ಬರೆಯ ಹೊರಟೆ. ಕಥಾನಾಯಕಿ ದುಗ್ಗಿ ಚವರಿ ಮಾರಿ ಹೊಟ್ಟೆ ಹೊರೆಯುವ ಹೆಣ್ಣುಮಗಳು. ಅವಳಿಗೊಂದು ಕೈಗೂಸು ಬೇರೆ. ಅವಳ ಆ ಕೈಗೂಸಿನ ಅಪ್ಪ ಯಾರೆಂದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಜನಕ್ಕೆ ಅವಳ ಚರಿತ್ರೆ ಸಂಶಯಾಸ್ಪದ. ಅವಳಿಂದ ತಮಗೆ ಯಾವ ತೊಂದರೆ ಇಲ್ಲದೆ ಹೋದರೂ ಜನ ತಮ್ಮ ಹರಿತ ಮಾತುಗಳಿಂದ ಅವಳನ್ನು ಚುಚ್ಚಲು ಸ್ವಲ್ಪವೂ ಅಂಜುವುದಿಲ್ಲ. ಹೊಟ್ಟೆ ಪಾಡಿಗೆ ಕಂಡವರ ಕೂಡಿಟ್ಟ ಕೂದಲ ಕೊಂಡು ತಂದು, ಅದರಿಂದ ಚವರಿ ಮಾಡಿ ಮಾರದಿದ್ದರೆ ಅವಳ ಒಪ್ಪತ್ತಿನೂಟದ ಬದುಕು ಸಾಗುವುದಿಲ್ಲ. ಇಂತಹ ದುಗ್ಗಿಯ ಜೀವನದಲ್ಲೊಂದು ಕರಾಳ ದಿನ ವಕ್ಕರಿಸಿಬಿಡುತ್ತದೆ.
ಮನೆಯಲ್ಲಿ ಹಿಡಿ ಕೂದಲಿಲ್ಲ! ಸೌಕಾತಿ ಚವರಿ ಮಾಡಿ ಕೊಡಲು ಹೇಳಿದ್ದಾಳೆ ಬೇರೆ, ಅಂಥವಳಿಗೆ ಮಾಡಿಕೊಟ್ಟರೆ ನಾಲ್ಕು ಕಾಸು ಹೆಚ್ಚಿಗೆ ಸಿಕ್ಕಿತು ಎನ್ನುವ ಆಸೆ ಇವಳಿಗೆ. ಇಂತಹ ಸಂದಿಗ್ಧದಲ್ಲಿ ಅವಳಿಗೆ ಕಾಣಿಸುವ ಒಂದೇ ದಾರಿ ಎಂದರೆ ತನ್ನದೇ ಸೊಂಪು ಕೂದಲನ್ನು ಕತ್ತರಿಸಿ ಚವರಿ ಮಾಡಿಕೊಡುವುದು. ಹಸುವಿಗೆ ಹೆಸರುವಾಸಿ ದುಗ್ಗಿ ಕೊನೆಗೆ ಅದನ್ನೇ ಮಾಡುತ್ತಾಳೆ. ಇದು ತಿಳಿಯದ ಆ ಸೌಕಾತಿ ಚವರಿಯನ್ನು ಮೆಚ್ಚಿ ತಲೆಗೆ ಹಚ್ಚಿಕೊಂಡು ಕ್ಷಣಕಾಲ ಸಂಭ್ರಮಿಸಿಬಿಡುತ್ತಾಳಾದರೂ ಇದು ದುಗ್ಗಿಯ ಕೂದಲಿಂದ ಮಾಡಿದ ಚವರಿ ಎಂದು ತಿಳಿದಾಕ್ಷಣ ಹಾವು ತುಳಿದವಳಂತೆ ಚವರಿಯನ್ನು ಅವಳು ಇನ್ನೇನು ಬಾಯಿಗಿಡಬೇಕೆಂದಿದ್ದ ತುಪ್ಪ ಸವರಿದ ತೊಟ್ಟಿಯ ಮೇಲೆ ಎಸೆಯುತ್ತಾಳೆ. ರೊಟ್ಟಿ ಮಣ್ಣು ಪಾಲಾಗುತ್ತದೆ. ಚವರಿಯೂ ಈ ಹೊತ್ತಿನಲ್ಲಿ ನಿಷ್ಪ್ರಯೋಜಕವಾಗುತ್ತದೆ. ಅವಳ ಕರುಣಾಜನಕ ಸ್ಥಿತಿಯನ್ನು ಮತ್ತಷ್ಟು ತೀವ್ರತೆಗೆ ಸುಡುತ್ತದೆ.
ಬೇರೆ ಯಾರ ಯಾರದ್ದೋ ಕಂಡರಿಯದವರ ಕೂದಲ ಬಗ್ಗೆ ಏನೂ ಅನಿಸದ ಸೌಕಾತಿಗೆ ದುಗ್ಗಿಯ ಕೂದಲ ಬಗ್ಗೆ ಅಸಹ್ಯ ಹುಟ್ಟುವುದೊಂದು ಸೋಜಿಗ. ಕೊನೆಗೆ ತಾನೇ ಖುಷಿಯಿಂದ ಕೊಟ್ಟ ರೊಟ್ಟಿಯನ್ನು ತಾನೇ ಮಣ್ಣುಪಾಲು ಮಾಡುತ್ತಾ ತನ್ನ ಸೇಡಿನ ಆಕ್ರೋಶವನ್ನು ವ್ಯಕ್ತ ಪಡಿಸುತ್ತಾಳೆ. ಹೆಣ್ಣು ಹೆಣ್ಣಿಗೆ ಆಗದೆ ಹೋದದ್ದು, ವರ್ಗಗಳ ನಡುವಿನ ತಾರತಮ್ಯ, ಬಡತನ ಸಿರಿತನದ ನಡುವಿನ ಘರ್ಷಣೆ ಹೀಗೆ ಹಲವಾರು ಆಯಾಮಗಳಲ್ಲಿ ನಿಂತು ನೋಡಿಸಿಕೊಳ್ಳುವ ಈ ಕಥೆ ಓದುಗನಲ್ಲಿ ಒಂದು ಬಗೆಯ ವ್ಯಥೆಯನ್ನು ಉಳಿಸುತ್ತದೆ.
(ಮುಂದುವರಿಯುತ್ತದೆ…..)
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”