Advertisement
ಕದರಪ್ಪನ ಗುಡೀ‌ ಮುಂದ್ಲ ಕಲ್ಲು: ಸುಮಾ ಸತೀಶ್ ಸರಣಿ

ಕದರಪ್ಪನ ಗುಡೀ‌ ಮುಂದ್ಲ ಕಲ್ಲು: ಸುಮಾ ಸತೀಶ್ ಸರಣಿ

ಅವ್ನೂ ಬಂದ. ಚೆಂದಾಗಿ ಕಲ್ಲು ತೊಳುಸ್ದ‌. ಅತ್ಲಾಗೆ ತಿರುಗ್ದ, ಇತ್ಲಾಗೆ ಬಗ್ಗಿದ, ತಲೆ ಕೆರ್ಕಂಡ. ಯೋನೂ ತಿಳೀವಲ್ದು. ಅಂಗಂತ ಯೋಳೀರೆ ಜನ ಏನ್ ಅನ್ಕಂಬಾಕಿಲ್ಲಾ. ನನ್ ಮರ್ವಾದಿ ಮಣ್ಣಾಗಾಕಿಲ್ವೇ ಅಂದಿದ್ದೇ, ಬ್ಯಾರೇನೇ ಯೋಳ್ದ. ಇದು ನರಮನುಸ್ಯರ ಕೈಲಿ ಓದಾಕಾಗಾಕಿಲ್ಲ. ದೇವನಾಗರೀ ಲಿಪಿ ಅಂಬ್ತಾರೆ. ಯಾರು ಓದ್ತಾರೋ ಅವ್ರಿಗೇ ನಿಧಿ ಸಿಕ್ತೈತೆ ಅಂಬ್ತ ತಿಪ್ಪೆ ಸಾರ್ಸಿ ಹೊಂಟೋದ. ಅಲ್ಗೇ ಆ ಇಸ್ಯಾ ನೆಗುದ್ ಬಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ನಿಮ್ಮ ಓದಿಗೆ

ಈ ಇಸ್ಯಾ ಎಂಗೈತಪ್ಪ ಅಂದ್ರೆ ಇತ್ಲಾಗೆ ಕಟ್ಟುಕತೇಗೂ ಸೇರ್ತೈತೆ. ಅತ್ಲಾಗೆ ವಸೀನೇ ವಸಿ ದಿಟ್ವೂ ಐತೆ. ಹುಟ್ಸಿರೋ ಇಸ್ಯಾ ಸ್ಯಾನೆ, ಸತ್ಯವಾಗಿರಾದು ರವಷ್ಟು ಎಲ್ಡೂ ಸೇರ್ಕಂಡು ಒಂದು ದೋಡ್ಡ ಕತೆಯಾಗೈತೆ.

ನಮ್ಮ ತ್ವಾಟದಾಗೆ ಕದರಪ್ಪನ (ಕದರಿ ನರಸಿಂಹ) ಗುಡೀ ಐತಲ್ಲ, ಅದ್ಕೆ ನಡ್ಕಳಾರು ಬಲು ಜನ ಅವ್ರೆ. ಸುತ್ತಾ ಹಳ್ಳೀ ಜನ ಬತ್ತಾರೆ. ಸನ್ ಸನ್ವಾರ ವಿಸೇಸ ಪೂಜೆ. ಮನ್ಯಾಗೇನಾರ ಇಸೇಸ ಆದಾಗ ಎಲೆ ಕಟ್ಸೋರು(ವಿಳೆದೆಲೆ ಅಲಂಕಾರ), ಹುವ್ವಿನ್ ತೇರು ಕಟ್ಸೋರು ಇಂಗೇ ಸ್ಯಾನೆ ಜನ ಅವ್ರೆ. ಅದ್ಕೇಯಾ ಗುಡೀ ಸುತ್ತೂರ, ಅಂದ್ರೆ ಅದ್ರ ಮುಂದ್ಲ ಜಾಗ, ಹಿಂದ್ಲ ಜಾಗ, ಮಗ್ಗುಲ ಜಾಗವಾ ಒಟ್ಟು ಹದಿನೈದು ಕುಂಟೆ ಜಾಗ್ವಾ ಸರ್ಕಾರ ಗುಡೀಗೆ ಸೇರ್ಬೇಕು ಅಂತಾವ ಫರ್ಮಾನು ಹೊಂಡುಸೈತೆ. ಅದ್ನ ಪುಟ್ಕರಾಬು ಅಂತಾರೆ.

ಯಾಕೇಂದ್ರೆ ಜಮೀನಿನ್ ಯಜಮಾನ್ರು ಅದ್ರ ಮ್ಯಾಗೆ ಹಕ್ಕು ಚಲಾಯಿಸ್ಕಂಡು ಜನುರ್ಗೆ ದ್ಯಾವ್ರ ಸೇವೆ ಮಾಡಾಕೆ ಬುಡುದೇ ಓದ್ರೆ ಅಂತಾವ. ಅಮ್ಯಾಕೆ ದ್ಯಾವ್ರ ಒಕ್ಕಲು ಬಾಳಾ ಮಂದಿ ಇರೋರ್ಗೆ ಈಗ ಯಾ ದೇವ್ರುಗೆ ನಡಕಂಬೋದು ಅಂಬ್ತ ಪೀಕಲಾಟ ಆಗ್ತದೆ.

ಪೂಜೆ ಕಲ್ಲು – ದ್ಯಾವ್ರ ಬಂಡೆ

ಈಗ ಬರೀತಿರಾ ಇಸ್ಯಾ ಇದೇಯಾ. ಗುಡೀ ಮುಂದ್ಲು ಗಲ್ಡಗಂಬ(ಗರುಡಗಂಬ) ಅದೆ. ಅದ್ರ ಎದುರಾಗೆ ಬೊಮ್ಮಪ್ಪ ಅವ್ನೆ. ಅದ್ರ ಮುಂದುಕ್ಕೆ ನರಸಿಂಹಪ್ಪುನ್ ಪಾದ್ಗೋಳು ಅವ್ವೆ. ಹಿಂದುಕ್ಕೆ ಅಳ್ಳೀಮರ ಅದೆ. ಸೊಲ್ಪ ಎಡಗಡೀಕ್ಕೆ ಗುಡೀಗೆ ಸೇರಿದ್ ಜಾಗ ಮುಗ್ದು ಹೊಲ ಸುರು ಆಗ್ತದೆ. ಸುರೂನಾಗೇಯಾ ಒಂದು ಎಲ್ಡೂವರೆ ಅಡೀದು ಕಲ್ಲಿನ್ ಕಂಬ ಐತೆ. ಅದು ನಡುಮಧ್ಯದಾಗೆಲ್ಲಾ ಚೌಕವಾಗೈತೆ. ಮ್ಯಾಗೆ ಕೆಳ್ಗೆ ಗುಂಡೂರಾಗೈತೆ. ಅದ್ರ ಪಕ್ದಾಗೆ ಒಂದು ಸಣ್ಣ ಬಂಡೆಗಲ್ಲು ಮೂರಡಿ ಅಗ್ಲದ್ದು ನಿಲ್ಸೌರೆ. ಅದ್ರಾಗೆ ಅಕ್ಸರಗಳು ಅವ್ವೆ. ಗುಡೀಗ್ ಬರಾ ಜನ ಆ ಬಂಡೇಯಾ ತೊಳ್ದೂ ಬಳ್ದೂ, ಅರ್ಸಿನ, ಕುಂಕ್ಮ ಹಚ್ಚಿ ಹುವ್ವ ಏರಿಸಿ ಪೂಜೆ ಮಾಡ್ಕಂಡು ಓಯ್ತಾರೆ. ಇವ್ರ ಪೂಜೇಗೆ, ಮಳೆ ಗಾಳಿ ಬಿಸ್ಲು ಎಲ್ಲಾದ್ಕೂ ಸಾಕ್ಸಿಯಾಗಿರಾ ಆ ಕಲ್ಲಿನ್ ಮ್ಯಾಗಿನ್ ಅಕ್ಸರಗ್ಳು ಕಾಣವಲ್ದು.

ಬಂಡೆ ಕತೆಗ್ಳು

ಅದ್ರಾಗೆ ನಿಧಿ ಇಸ್ಯಾ ಬರ್ದೈತೆ. ಜಮೀನಿನಾಗೆ ದೋಡ್ಡ ಭಂಡಾರ (ಏಳು ಕೊಪ್ಪರಿಗೆ ಸಂಪತ್ತು) ಅದೆ. ಅದು ಎಲ್ಲೈತೆ, ಅದ್ನ ತೆಗ್ಯಾದು ಎಂಗೇಂತ ಅದ್ರಾಗೆ ಬರ್ದದೆ ಅಂಬೋದು ನಮ್ ಜನ್ರ ನಂಬ್ಕೆ ಆಗಿತ್ತೊ. ಅಲ್ಲಾ ನಿಧೀ ಇಸ್ಯಾ ಯಾರಾನಾ ಅಂಗೆ ಢಾಣಾ ಡಂಗೂರ ಹೊಡ್ದಂಗೆ ಎಲ್ಲಾರ್ಗೂ ಕಾಣಂಗೆ ಯಾವ್ ಪೆಕರ್ ನನ್ಮಗಾನಾರಾ ಬರ್ದಾನಾ?

ಆ ಅಕ್ಸರಗ್ಳು ಓದುಕ್ಕೆ ಬರಾಂಗಿಲ್ವಲ್ಲ. ಅದ್ಕೇಯಾ ಕ್ಯಾಮೇ ಇಲ್ದೆ ಕುಂತಾಗ ಏಟೋಂದು ಕತೆ ಕಟ್ಟಿ ನಾಲಗೆ ಚಪಲ ತೀರುಸ್ಕಣಾದು. ಆ ಕಲ್ಲು ಕದರಪ್ಪನ ಕಲ್ಲು‌. ಅದ್ನ ವಸೀನೂ ಜರುಗ್ಸಂಗಿಲ್ಲ. ಜರುಗ್ಸಿದ್ರೆ ಕೊಪ್ಪರಿಗೇನೂ ಜರುಗೋಗ್ತೈತೆ. ಯಾರ್ಗೂ ದಕ್ಕಾಕಿಲ್ಲ ಅಂಬ್ತ ಯೋಳೋರು. ನಾನೂ ಹುಟ್ದಾಗ್ನಿಂದ ಆ ಕಲ್ಲು ಅಲ್ಲೇ ಅದೆ. ನಿಧಿ ಎಲ್ಲದೋ ಕಾಣವಲ್ದು.

ನಿಧಿ ಕಾಯಾಕೆ ಸರ್ಪ

ನಿಧಿ ಇದ್ ಮ್ಯಾಗೆ ಅಲ್ಲಿ ಸರ್ಪ ಇರ್ಲಿಕ್ಕೇ ಬೇಕಲ್ಲ, ಕಾವ್ಲು ಕಾಯಾಕೆ. ನರಮನುಸ್ಯರ ದುರಾಸೆಗೆ ಕೊಳ್ಳಿ ಇಕ್ಕಾಕೆ. ನಮ್ ತಾತುನ್ ಕಾಲುದ್ ಹಳೆ ಜನ ಇದ್ರಲ್ಲ, ಅವುರ್ ಪೈಕಿ ಹಳೆ ತಲೆಗ್ಳು ಯೋಳ್ತಿದ್ವು, ಗುಡೀನಾಗೆ ಮೂರೆಡೆ ಸರ್ಪ ಅದೆ. ಬುಸ್ ಬುಸ್ ಅಂಬೋ ಸದ್ದು ಒನ್ನೊಂದು ಕಿತ ಕ್ಯೋಳುಸ್ತದೆ. ಮೂರೆಡೆ ಅಲ್ವಾ ಅದ್ಕೇ ಆನಾಡಿ ಸದ್ದು. ನಮಪ್ಪ ಒಂದು ದಪ ಬುಸ್ ಅಂಬೋದ್ನ ಕೇಳಿದ್ನಂತೆ. ದಿಗಿಲ್ ಬಿದ್ದು ಜರಾ ಬಂದು ಮೂರು ದಿನ ಮ್ಯಾಕೇ ಏಳ್ಲಿಲ್ಲವಂತೆ. ಇನ್ನೊಬ್ಬ ಯೋಳೋನು, ಏ ಸುಮ್ಕಿರ್ಲಾ, ಅದು ಐದೆಡೆ ಅಂಬ್ತ ನಮ್ ತಾತ ಯೋಳೋನು. ಅದ್ರ ಪರೆ ದೆಕ್ಲೂ ನೋಡೌರಂತೆ. ಈಟು ಗಾತ್ರ ಇರ್ತಿತ್ತಂತೆ. ಆಸು ಅಗ್ಲ, ಈಸು ಉದ್ದುದ್ ಪರೇಯಾ (ಹಾವಿನ ಪೊರೆ) ಯಾರೂ ಕಂಡಿಲ್ವಂತೆ. ಆಟು ದೊಡ್ದು ಕದರಪ್ಪನ ಸಂಪತ್ತು ಕಾಯ್ತಾ ಇರಾ ಸಾಮಿ(ಹಾವು). ವಾರಸುದಾರರಿಗೆ ಅದು ಸಿಗಾಗಂಟಾ ಸಾಮೀನೂ ಅಲ್ಲೇ ಇರ್ತಾನೆ ಅಂಬ್ತಿದ್ದ.

ಇಂಗೇ ಕತೆಗ್ಳಾ ಕ್ಯೋಳ್ಕಂತಾ ನಮ್ ತಾತುಂಗೂ ವಸಿ ಇದ್ನ ತಿಳ್ಕಳಾ ಆಸಿ ಬಂತು. ತಡಿ ಅತ್ಲಾಗೆ ಯಾರ್ನಾನಾ ಕೇಳಾಣಿ ಅನ್ ಕಂತಾ ಈರನಾಗೇನಳ್ಳಿ (ವೀರನಾಗೇನಹಳ್ಳಿ)ನಿಂದ ಒಬ್ಬ ಅಳ್ಳೇಕಾಯಿ(ಅರಳೇಕಾಯಿ) ಪಂಡಿತನ್ನ ಕರ್ಸೌರೆ. ಸುತ್ತಾ ಜನ ಬುದ್ವಂತ ಅಂತಿದ್ರು. ಕಾಯಿಲೆ ಕಸಾಲೆ ಆದ್ರೆ ಸೊಪ್ಪು ಸದೆ ನೂರಿ ಔಸ್ದಿ ಕೊಡ್ತಿದ್ದ. ಅವ್ನೂ ಬಂದ. ಚೆಂದಾಗಿ ಕಲ್ಲು ತೊಳುಸ್ದ‌. ಅತ್ಲಾಗೆ ತಿರುಗ್ದ, ಇತ್ಲಾಗೆ ಬಗ್ಗಿದ, ತಲೆ ಕೆರ್ಕಂಡ. ಯೋನೂ ತಿಳೀವಲ್ದು. ಅಂಗಂತ ಯೋಳೀರೆ ಜನ ಏನ್ ಅನ್ಕಂಬಾಕಿಲ್ಲಾ. ನನ್ ಮರ್ವಾದಿ ಮಣ್ಣಾಗಾಕಿಲ್ವೇ ಅಂದಿದ್ದೇ, ಬ್ಯಾರೇನೇ ಯೋಳ್ದ. ಇದು ನರಮನುಸ್ಯರ ಕೈಲಿ ಓದಾಕಾಗಾಕಿಲ್ಲ. ದೇವನಾಗರೀ ಲಿಪಿ ಅಂಬ್ತಾರೆ. ಯಾರು ಓದ್ತಾರೋ ಅವ್ರಿಗೇ ನಿಧಿ ಸಿಕ್ತೈತೆ ಅಂಬ್ತ ತಿಪ್ಪೆ ಸಾರ್ಸಿ ಹೊಂಟೋದ. ಅಲ್ಗೇ ಆ ಇಸ್ಯಾ ನೆಗುದ್ ಬಿತ್ತು.

ನಮ್ಮಪ್ಪನ ಕಾಲ್ದಾಗೆ ಅನಂತಪುರದಿಂದ ಒಬ್ರು ಐನೋರು ಬತ್ತಿದ್ರು. ಜ್ಯೋತಿಸ್ಯ ಕಲ್ತಿದ್ರು. ಅವ್ರೂ ತ್ವಾಟುದ್ ಕಡೆ ಬಂದಾಗ, ಈ ಕತೆ ಕೇಳಿ ಆಸೆ ಆಗಿ, ಹಳ್ಳೆಣ್ಣೆ ತರ್ಸಿ, ಕಲ್ನ ತಿಕ್ಕಿ ತೊಳ್ಸಿ, ಓದೋಕೆ ನೋಡೀರು. ಒಂದಕ್ಸರವೂ ತಲೆಗೆ ಏರ್ಲಿಲ್ಲ. ಅವ್ರೂ ಸುಮ್ಕಾದ್ರು‌. ಪಾಪ ಆ ಮೂರಡೀನೋ ಐದಡೀನೋ ಸರ್ಪಕ್ಕೂ ಸ್ಯಾನೆ ಬೇಸ್ರ ಬಂದು ಅದೂ ಎಲ್ಲೋ ಹೊಂಟೋಯ್ತು. ಅದ್ರ ಬದ್ಲೀ ದೋಡ್ಡದೊಂದು, ಈಟಗಲ ಹೆಡೆ ಇರಾ ನಾಗರ ಹಾವೊಂದು ಬಂದು ಸೇರ್ಕಂತು‌. ತ್ವಾಟುದ್ ಬಾಗ್ಲು ದಸೀಲೆ ಕತ್ತಾಳೆ ಕಳ್ಳಿ ಬೇಲಿ ಇತ್ತು. ಅಲ್ಲಿ ಹಾವು ಸೇರ್ಕಣಾದು ಮಾಮೂಲೀನೇಯಾ. ಅಂಗೇ ನಾಕೈದು ಜನ್ರ ಕಣ್ಣಿಗೂ ಬಿದ್ದೈತೆ. ಅವುರ್ ಕಣ್ಣಿಗೆ ಬಿದ್ದು ಅದು ಬಾಯಾಗೆ ಬರೋಷ್ಟರಲ್ಲಿ ಮೂರರಷ್ಟು ದೊಡ್ಡದಾಗೈತೆ. ಅದು ಪರೆ ಬಿಟ್ಟಾಗ ಸುತ್ತೂರ ಹತ್ ಜನ ನಿಂತು ಹಳೆ ಕತೆ ಸುರು ಹಚ್ಕಳಾರು.

ಬೂದಿ ದಿಬ್ಬದ ಕತೆ

ನಮ್ ತ್ವಾಟದಾಗೆ ಗುಡೀ ಎಡಗಡೆ ಮಗ್ಗುಲಾಗೆ ಒಂದು ಎಕರೆ ಜಮೀನು ಸೊಲ್ಪ ಎತ್ರ ಇತ್ತು. ಅದ್ನ ಬೂದಿ ದಿಬ್ಬ ಅಂತಿದ್ರು. ಮದ ಮದಲು ಅಲ್ಲಿ ಗೇಯ್ಮೆ ಸುಲುಕಾಗಿರಲಿಲ್ಲ. ಉಕ್ಕೆ ಮಾಡಾವಾಗ, ಗದ್ದೆ ಮಡಕೆ ಮಾಡಾವಾಗ ಅಂದ್ರೆ ನೀರಾವರಿ ಮಾಡಾವಾಗ ನೀರು ಬಿಟ್ರೆ, ಬಿಟ್ ಬಿಟ್ಟಂಗೇಯಾ ನೀರ್ನ ಕುಡುಕಂಡ್ ಬಿಡೋದು. ಒಳಿಗೆ ಗುಂಡೀ ಇತ್ತು. ನೀರು ಒಳಿಕ್ಕೋಗಿ ಮಣ್ಣು ಕುಸಿಯೋದು. ಅಗೆದ್ರೆ ಅಲ್ಲಿ ದೋಡ್ಡ ಗುಡಾಣಗಳು ಇದ್ವು. ನಲವತ್ತು ಮೂಟೆ ದವಸ ತುಂಬೋಂತವು. ನೇಗಿಲು ಬಿಟ್ಟಾಗ ಏಸೋ ಕಿತ ಹಳೆ ಮಡಕೆ, ಬೋಕಿ ಪಿಂಚು ಎಲ್ಲಾ ಸಿಗ್ತಿತ್ತು. ಆ ಜಾಗದಾಗೆ ಹಳೆ ಕಾಲ್ದಾಗೆ ಊರಿತ್ತೂ ಅಂತ ಹಿರೇ ತಲೆಗ್ಳು ಯೋಳ್ತಿದ್ರು. ಅದ್ರ ಗುರುತುಗ್ಳು ಅವ್ವು ಅಂತ ಯೋಳೋರು. ಆಮ್ಯಾಕೆ ಅಲ್ಲಿ ಮಣ್ಣು ತುಂಬ್ಸಿ ಎಲ್ಲಾ ಸರೀ ಮಾಡಿದ್ ಮ್ಯಾಗೆ ಉಳುಮೆ ಸಲೀಸಾಗಿತ್ತು.

ಒಂದು ಕಿತ ನಾನು ಮೂರು ನಾಕನೇ ಕ್ಲಾಸ್ನಾಗಿದ್ದಾಗ, ಹೊಲುದ್ ತಾವ ಹೋಗಿದ್ದೆ. ಪುಟ್ಟನಿಂಗಪ್ಪ ಉಳ್ತಾ ಇದ್ದ. ನಾನೂ ಮಗ್ಗುಲಾಗೇ ಇದ್ದೆ. ಸಣ್ಣ ಗುರಿಗೆಗ್ಳು ಸಿಕ್ವು. ನಾವು ಕದರಪ್ಪನ ಜಾತ್ರೇನಾಗೆ ಕರೇ ಗುರಿಗೆಗ್ಳು (ಆಟಾ ಆಡೋಕೆ ಮಾಡ್ತಿದ್ದ ಪುಟ್ಟ ಮಡಕೆಗಳು) ತಕಮ್ತಿದ್ವಿ. ಇವು ಕೆಂಪು ಗುರಿಗೆಗಳು. ನಾಕೈದು ಸಿಕ್ವು. ನಂಗೆ ಕೊಡೂಂತ ನಾನು ಗಲಾಟಿ ಮಾಡ್ದೆ. ಸುಮ್ಕಿರಮ್ಮೋ ನಿಂಗೇನ್ ಹೊಸಾದ್ ತಗಮ್ತೀಯಾ. ನನ್ ತಂಗೀಗೆ ಕೊಡ್ತೀನಿ ಅಂದ. ಕೊನೇಗೆ ನನ್ ಕಾಟುಕ್ಕೆ ಎಲ್ಡು ಕೊಟ್ಟ. ಅದು ನನ್ ನೆಪ್ಪಿಂದ ಹೊರಟೂ ಹೋಗಿತ್ತು. ಮನ್ ಮನ್ನೆ ಅಪ್ಪನ ತಾವ ಈ ಇಸ್ಯಾ ಮಾತಾಡಾವಾಗ ದಡಕ್ಕಂತ ನೆಪ್ಪು ಬಂತು.

ಬೂದಿ ದಿಬ್ಬದ ತಾವಿದ್ದ ಊರು ಯಾವ್ ಕಾರಣಕ್ಕೋ ಒಂದು ಅರ್ಧ ಪರ್ಲಾಂಗು ಹಿಂದೋಯ್ತು ಅಮ್ತ ಕಾಣ್ತದೆ. ಆ ಜಾಗ್ವೆಲ್ಲಾ ಹೊಲಗಳಾದ್ವು ಅನ್ನುಸ್ತೈತೆ.

ದ್ಯಾವ್ರ ಗುಡೀ ಇತ್ತಂತೆ

ಒಂದು ಮಗ್ಗುಲಾಗೆ ಬೂದಿ ದಿಬ್ಬ ನಮ್ ತ್ವಾಟುದ್ ಕೊನೇಗೈತೆ. ಮುಳ್ಳಿನ್ ತಂತಿ ಬೇಲಿ ಐತೆ. ಅದ್ರ ಮಗ್ಗುಲಾಗಿನ್ ಜಾಗ ಪಂಚಾಯ್ತೀಗೆ ಸೇರಿದ್ದು. ನಮ್ ಹೊಲದಾಗೆ ದೊಡ್ಡ ಹುಣಿಸೇಮರ ಐತೆ. ಅದ್ರ ಮಗ್ಗುಲಾಗೆ ಕಲ್ಲು ಚಪ್ಪಡಿಗ್ಳು ಅವ್ವೆ. ನಮ್ ಹೊಲದಾಗೆ ನಾಕೈದು ಅಡಿ ಇದ್ರೆ, ಬೇಲಿ ಆಚ್ಗೆ ಪಂಚಾಯ್ತೀ ಜಾಗ್ದಾಗೆ ಮೂರ್ನಾಕು ಅಡಿ ಸೇರ್ಕಂಡವ್ವೆ. ಆ ಕಲ್ಲು ಚಪ್ಪಡಿ ಅಡ್ಯಾಗೆ ದ್ಯಾವ್ರ ಗುಡೀ ಅದೆ ಅಂಬ್ತ ನಮ್‌ ತಾತ ಯೋಳ್ತಿದ್ದ ಅಂಬೋದು ಅಪ್ಪುನ್ ಕಾಲ್ದಾಗಿನ್ ಮಾತು. ಕಂಡೋರಿಲ್ಲ. ಇಂಗೇ ಒಂದು ಕಿತ ಊರಿನ್ ತುಡುಗು ಹುಡುಗ್ರು ಗಡಾರಿ ಇಕ್ಕಂಡು ಕುಂತಿದ್ದೋರು, ಅಂಗೇ ಗಡಾರಿ ಹಾಕಿ ಬಂಡೆ ಎತ್ತೋಕೆ ಹೋದ್ರಂತೆ. ಬಂಡೆ ದಸೀಲಿ ಸೇರ್ಕಂಡಿದ್ದ ನಾಗರ ಹಾವೋಂದು ಈಚಿಕ್ ಬಂದೈತೆ. ಅಯ್ಯೋ, ದಿಟ್ವಾಗ್ಲೂ ಇದು ಗುಡೀನೇಯಾ. ನಾಗಪ್ಪ ಕಾವ್ಲು ಕುಂತೌನೆ. ಅಪಚಾರ ಆಯ್ತು ಅಂಬ್ತ, ಸೂಚ್ನೆ ಕೊಡಾಕೆ ಈಚೆ ಬಂದೌನೆ ಅಂಬ್ತ ಅಲ್ಲಿಗೇ ನಿಲ್ಲುಸಿದ್ರಂತೆ.

ಹಳೇ ಊರಿತ್ತು ಅಂದ್ ಮ್ಯಾಗೆ ಗುಡೀನೂ ಇತ್ತೂಂತ ಕಾಣ್ತದೆ. ಹೊಲಗದ್ದೇಗ್ಳಾಗೆ ಕಲ್ಲುಚಪ್ಪಡೀ ಸಂದೀನಾಗೆ ಹಾವು ಸೇರ್ಕಣಾದು ಮಾಮೂಲೀನೇಯಾ. ಅದ್ಕೂ ಇಂಗೇ ಕತೆ ಕಟ್ಟಿ ಬುಟ್ಟವ್ರೆ. ಪೂರ್ತಿ ಅಗ್ದು ತೆಗಿದಿದ್ರೆ ಸತ್ಯ ತಿಳೀತಿತ್ತು.

ನಮ್ ಕೈದಾಟಿದ ಹೊಲ

ನಾವ್ ಚಿಕ್ಕೋರಿದ್ದಾಗ ಇದೆಲ್ಲಾ ತಿಳೀತಿರಲಿಲ್ಲ‌. ಅಕ್ಸರ ಇದ್ದ ಕಲ್ಲು ಶಾಸನ ಅಂಬೋದು ಗೊತ್ತಿರಲಿಲ್ಲ. ನಾವೂ ತ್ವಾಟ ಮಾರಿ ಪ್ಯಾಟೇಗ್ ಬಂದ್ವು. ಎಲ್ಡು ಮೂರು ಕೈದಾಟಿ, ನೀರು ಇಂಗೋಗಿ, ಈಗ ತ್ವಾಟವೂ ನುಣ್ಣಗೆ ಬೋಳುಸ್ಕಂಡೈತೆ. ನೀರಿನ್ ಪಸೆ ಇಲ್ದೇಟ್ಗೆ ಒಂದು ಸಣ್ಣ ಪೈರೂ ಇಲ್ಲ. ಕದರಪ್ಪನ ಗುಡೀ ಮಾತ್ರ ಇದ್ನೆಲ್ಲ ನೋಡ್ಕಂಡು ಅಂಗೇ ನಿಂತೈತೆ. ಗುಡೀ ಮುಂದು ನಿಂತು ಕಣ್ಣು ತಿರುಗ್ಸೀರೆ, ಬಂಜರು ನೆಲ. ಕಣ್ಣು ಅಂಗೇ ತುಮ್ಕಂತವೆ. ಮನ್ನೆ ಇಂಗೇ ಹೋಗಿದ್ದಾಗ, ಈ ಕತೆ ಎಲ್ಲಾ ಅಪ್ಪ ಯೋಳ್ತು.

ಶಾಸನದ ಕತೆ

ಅಂಗೇ ಆ ಶಾಸನದ ತಾವ ಹೋಗಿದ್ದೆ. ಬಯಲು ಭೂಮೀನಾಗೆ ಅಂಗೇ ಉಳ್ಕಂಡದೆ. ಹಳಗನ್ನಡ ಅಂತ ತಿಳೀತು. ಅರಿಸ್ನ ಕುಂಕ್ಮ ಮುಚ್ಕಂಡು, ಕಾಲದ ಹೊಡೆತಕ್ಕೆ ಸಿಕ್ಕಿ ಅಕ್ಷರಗಳು ಮಸುಕಾಗಿದ್ವು. ಅಯ್ಯೋ ಎಂತಾ ಕೆಲ್ಸ ಆಯ್ತು. ಮದ್ಲೇ ಪ್ರಯತ್ನ ಮಾಡಿದ್ರೆ ಓದಬಹುದಾಗಿತ್ತಲ್ಲ ಅನ್ನಿಸ್ತು. ಅದ್ನ ಕಿಲೀನ್ ಮಾಡ್ಸಿದ್ರೂ ಅಷ್ಟೇ ಅನ್ನುಸ್ತು.

ಸಾಮಾನ್ಯವಾಗಿ ದಾನ ಶಾಸನಗಳು ಇಂಗೇ ಗುಡೀ ಹತ್ರ ಸಿಕ್ತವೆ ಅಂತ ಬಿ.ಎಂ. ಶ್ರೀ ಪ್ರತಿಷ್ಠಾನದ ಹಳಗನ್ನಡ ತರಗತಿಯಲ್ಲಿ ದೇವರ ಕೊಂಡಾರೆಡ್ಡಿ ಸರ್, ಗಣೇಶ್ ಸರ್ ಹೇಳುತ್ತಿದ್ದುದು ನೆನಪಾಯ್ತು. ಅಂಗೇ ಒಂದು ಪಟ ತೆಕ್ಕಂಡು ಬಂದಿದ್ದೆ. ಅದನ್ನು ಕೊಂಡಾರೆಡ್ಡಿ ಸರ್ ಸಿಕ್ಕಾಗ ಹೇಳಿದೆ. ಅಯ್ಯೋ ಬೇಸರ ಮಾಡ್ಕೋಬೇಡಿ. ನನಗೆ ತಿಳಿದಂತೆ ಆ ಪ್ರದೇಶದ ಎಲ್ಲಾ ಶಾಸನಗಳನ್ನು ಆಗಲೇ ದಾಖಲಿಸಲಾಗಿದೆ ಅಂದ್ರು. ವಿವರ ಕೇಳಿದ್ರು. ನಂತರ ಎಂ ಕ. ೧೨ ರಲ್ಲಿ ಈಗಾಗಲೇ ಇದನ್ನು ಪ್ರಕಟಿಸಲಾಗಿದೆ. ಇದೊಂದು ದಾನ ಶಾಸನ ಅಂತ ಹೇಳಿ, ಫೋಟೋ ಹೊಡೆದು ವಾಟ್ಸಪ್ ಮಾಡಿದ್ರು‌.

೧೪೫೭ ರ ಕಾಲದ್ದು.‌ ಪ್ರತಾಪ ಅಚ್ಯುತರಾಯರ ಕಾಲದ ದಾನ ಶಾಸನ. ಕೊನೆಯಲ್ಲಿ ಶಾಪಾಶಯವೂ ಇದೆ. ಆದರೆ ಅದು ಅಕ್ಷರಗಳು ಮಸುಕಾಗಿ ಪೂರ್ಣ ಓದಲಾಗದ ಸ್ಥಿತಿಯಲ್ಲಿದೆ.

ಅಬ್ಬಾ, ಇನ್ನೂ ಸ್ವಲ್ಪ ಮಟ್ಟಿಗೆ ಸುಸ್ಥಿತಿಯಲ್ಲಿರುವಾಗಲೇ ಈ ಶಾಸನಗಳನ್ನೆಲ್ಲ ಓದಿ ದಾಖಲು ಮಾಡಿದ್ದಾರಲ್ಲ ಅಂತ ಖುಷಿ ಆಯಿತು. ನನ್ನೂರಿನ, ನನ್ನ ಹೊಲದ ಶಾಸನವೊಂದು ಇತಿಹಾಸದ ಪುಟದಲ್ಲಿ ದಾಖಾಲಾಗಿರುವ ಹೆಮ್ಮೆ.

ಒಂದು ದಾನ ಶಾಸನದ ಹಿಂದೆ ನಮ್ ಜನಗಳ ಕಲ್ಪನೆ ಎಂಗೆ ಕೆಲ್ಸ ಮಾಡೈತಲ್ಲ ಅಂತ ಆಶ್ಚರ್ಯ ಬಿದ್ದೆ. ಅದ್ರಾಗೂ ನಿಧೀಗೂ ಸರ್ಪಕ್ಕೂ ಇರೋ ಸಮ್ಮಂದ ಸರ್ಪಸುತ್ತಿನಂಗೇಯಾ. ಬುಡುಸ್ಲಿಕ್ಕೆ ಆಗವಲ್ದು. ಅದ್ರ ಹಿಂದೋದ್ರೆ ನೋವೂ ಸ್ಯಾನೆ ಉಣ್ಣಬೇಕು. ಆದ್ರೂ ಸೈತ ಜನ್ರು ಕತೆ ಕಟ್ಟೊದ್ರಾಗೆ ಎಂತಾ ಐನಾತಿಗ್ಳು ಅನ್ನುಸ್ತು. ನಾಕಕ್ಸರ ಕಲೀದಿದ್ರೂ ಈಸು ಚೆಂದಾಗಿ ಕತೆ ಕಟ್ಟೊರು, ಅಕ್ಸರ ಕಲುತ್ರೆ ಎಂತಾ ಕತೆಗಾರರಾಗಿರ್ತಿದ್ರೋ ಅನ್ಸಲ್ವಾ??

ಅದ್ಕೇಯಾ ಕವಿರಾಜಮಾರ್ಗದಲ್ಲಿ ಹೇಳಿರೋದು,
ಕುರಿತೋದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್
ಅಂತ ಸುಮ್ಕೆ ಯೋಳಿಲ್ಲ ಅವ್ನು. ನಮ್ ಮಾದಿಗರ ಹಟ್ಟೀ, ನಾಯಕರ ಹಟ್ಟೀ ಹೆಣ್ಣುಮಕ್ಕಳು ಕಟ್ಟಿರಾ ಚಂದ್ರಮ್ಮನ ಪದಗಳೂ ಅಷ್ಟೇಯಾ. ಊರಿನ್ ದ್ಯಾವ್ರ ಬಗ್ಗೆ, ಜಾತಿ ಬಗ್ಗೆ, ವೃತ್ತೀ ಬಗ್ಗೆ, ಸಮಾಜುದ್ ರಚನೆ, ಮನುಷ್ಯನ ಬುದ್ದೀ, ಯವಾರಾ ಇದ್ರ ಮ್ಯಾಗೆಲ್ಲಾ ಎಷ್ಟು ಚೆಂದಾಗಿ ಪದ ನೇಯ್ದವ್ರೆ. ಒನ್ನೊಂದೂ ಪದ ಕೇಳ್ತಿದ್ರೆ ನಮ್ ತಿಳುವಳಿಕೇನೂ ಹೆಚ್ಚಾಯ್ತದೆ. ಬದುಕಿನ ಬ್ಯಾರೆ ಮಗ್ಗುಲೂ ಕಾಣ್ತೈತೆ. ಹೊಸಾ ಅರ್ಥಗಳೂ ಬಿಟ್ಕೊಣ್ತಾ ಹೋಗ್ತವೆ. ಇಂತಾ ಜನಪದ ಪದಗಳು ನಮ್ಮ ಜನರ ಬದುಕ್ನ್ಯಾಗೆ ಹೊಂದಾಣಿಕೆ ತಂದಿದ್ವೋ.

About The Author

ಸುಮಾ ಸತೀಶ್

ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.

1 Comment

  1. Niharika

    ಗ್ರಾಮ್ಯ ಭಾಷೆ ಕೇಳಕ್ಕೆ ಚೆನ್ನಾಗಿರುತ್ತೆ ಆದ್ರೆ ಓದುವಾಗ ಕಷ್ಟ 🙂

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ