Advertisement
ಕನ್ನಡ ಅಧ್ಯಾಪಕರ ದಾರಿದೀಪಗಳು-`ಅನಾಜಿ` ಒಂದು ಸ್ಮರಣೆ: ಎಲ್.ಜಿ.ಮೀರಾ ಅಂಕಣ

ಕನ್ನಡ ಅಧ್ಯಾಪಕರ ದಾರಿದೀಪಗಳು-`ಅನಾಜಿ` ಒಂದು ಸ್ಮರಣೆ: ಎಲ್.ಜಿ.ಮೀರಾ ಅಂಕಣ

ಅನಾಜಿಯವರು “ಅಲ್ಲಮ್ಮ, ಆಧುನಿಕ ಕನ್ನಡ ಕಥನ ಸಾಹಿತ್ಯ ಅಂದ್ರೆ ನವೋದಯದಿಂದ ಈ ಕಾಲದವರೆಗೆ ಸುದೀರ್ಘವಾಗಿದೆ. ನೀವು ಇಷ್ಟು ದೊಡ್ಡ ವ್ಯಾಪ್ತಿ ಇಟ್ಕೊಂಡ್ರೆ ಎಲ್ಲಿಂದ ಎಲ್ಲೀವರೆಗೆ ಅಂತ ಮಾಡ್ತೀರಿ!? ಆಧುನಿಕ ಕನ್ನಡ ಸಾಹಿತ್ಯದ ಪ್ರತಿ ಘಟ್ಟದಿಂದಲೂ ಕೆಲವು ಪ್ರಾತಿನಿಧಿಕ ಲೇಖಕ-ಲೇಖಕಿಯರನ್ನ ಇಟ್ಕೊಂಡ್ರೆ ಮಾತ್ರ ನೋಡಿ ನೀವು ಈ ಅಧ್ಯಯನಕ್ಕೆ ಸ್ವಲ್ಪಾನಾದ್ರೂ ನ್ಯಾಯ ಒದಗಿಸಕ್ಕೆ ಆಗೋದು” ಅಂದರು. ನನಗೆ `ಅರೆ, ಹೌದಲ್ಲ’ ಅನ್ನಿಸಿತು. ಮುಂದೆ ನಾನು ನನ್ನ ಮಾರ್ಗದರ್ಶಕರ ಹತ್ತಿರ ಈ ಬಗ್ಗೆ ಹೇಳಿದಾಗ ಅವರಿಗೂ ಈ ಮಾತು ಒಪ್ಪಿಗೆಯಾಗಿ, ನಂತರ ಹೀಗೆಯೇ ಘಟ್ಟಗಳ ಅನುಸಾರವಾಗಿ, ಪ್ರಾತಿನಿಧಿಕ ಆಧುನಿಕ ಕನ್ನಡ ಲೇಖಕ ಲೇಖಕಿಯರನ್ನು ಇಟ್ಟುಕೊಂಡು ನಾನು ಪಿ.ಎಚ್.ಡಿ. ಅಧ್ಯಯನವನ್ನು ಮುಂದುವರಿಸಿದೆ.
ಡಾ.
ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೆಂಟನೆಯ ಬರಹ

ಕತ್ತಲ ದಾರಿಯಲ್ಲಿ ನಡೆಯುವಾಗ ದಾರಿದೀಪವೊಂದು ಇದ್ದಿದ್ದರೆ ಎಂದು ಯಾರಿಗಾದರೂ ಅನ್ನಿಸುತ್ತದಲ್ಲವೆ? ನಡೆಯುವಾಗ ಬೀಳದಂತೆ ಎಡವದಂತೆ ಕಾಯಲು, ಮುಂದಿನ ಹೆಜ್ಜೆಯನ್ನು ಸರಿಯಾಗಿ ಇಡಲು ಇಂತಹ ದೀಪಗಳ ಅವಶ್ಯಕತೆ ಇರುತ್ತದೆ. ಹೊಸದಾಗಿ ಅಧ್ಯಾಪಕ ವೃತ್ತಿಗೆ ಬಂದವರಿಗೂ ತಮ್ಮ ವೃತ್ತಿ ಬದುಕಿನ ಸವಾಲುಗಳನ್ನು ಎದುರಿಸುವಾಗ `ತಮ್ಮನ್ನು ಕಾಯಲು, ತಮಗೆ ದಾರಿ ತೋರಲು ಮಾರ್ಗದರ್ಶಕ ದಾರಿದೀಪಗಳಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲ’ ಎಂಬ ಹಂಬಲ ಉಂಟಾಗುತ್ತದೆ. ಈ ವಿಷಯದಲ್ಲಿ ನಾವು ಕನ್ನಡ ಅಧ್ಯಾಪಕರು ಬಹಳ ಅದೃಷ್ಟವಂತರು.

ನಾವು ಯಾಕೆ ಅದೃಷ್ಟವಂತರು ಅಂದರೆ, ಡಿ.ಎಲ್.ನರಸಿಂಹಾಚಾರ್, ತೀ.ನಂ.ಶ್ರೀಕಂಠಯ್ಯ. ಜಿ.ಪಿ.ರಾಜರತ್ನಂ, ಕುವೆಂಪು, ನಂತರದ ಪೀಳಿಗೆಗಳಲ್ಲಿ ಎಂ.ಎಚ್.ಕೃಷ್ಣಯ್ಯನವರಂತಹ ದಿಗ್ಗಜರು ಕನ್ನಡ ಪಾಠಗಳನ್ನು ಎಷ್ಟು ಹುರುಪು, ವಿದ್ವತ್ತು, ಶ್ರದ್ಧೆಗಳಿಂದ ಮಾಡುತ್ತಿದ್ದರು ಎಂಬುದನ್ನು ಓದುವ, ಅರಿಯುವ ಅವಕಾಶ ಇದೆ ನಮಗೆ. ಈಗಿನ ಅಂತರ್ಜಾಲ, ನೆರಳಚ್ಚು ವ್ಯವಸ್ಥೆ, ಗಣಕಯಂತ್ರ, ಜಾಣ ಸಂವಹನ, ಅನುಕೂಲಕರ ಸಾರಿಗೆ ವ್ಯವಸ್ಥೆ ಯಾವುದೂ ಇರದ ಕಾಲದಲ್ಲಿ ಅನೇಕ ಕಷ್ಟ ಕಾರ್ಪಣ್ಯ, ಸವಾಲುಗಳ ನಡುವೆ ಇಂತಹ ಹಿರಿಯರು ತಮ್ಮ ಅಧ್ಯಾಪನ ಕರ್ತವ್ಯವನ್ನು ಮಾಡಿದ ರೀತಿಯು ನಮ್ಮಂತಹ ಮುಂದಿನ ಪೀಳಿಗೆಗಳ ಅಧ್ಯಾಪಕರಿಗೆ ದಾರಿದೀಪವಾಗಿದೆ.

1990ರ ದಶಕದ ಮೊದಲ ವರ್ಷಗಳಲ್ಲಿ ಬೆಂಗಳೂರಿನ ಜ್ಞಾನಭಾರತಿಯಲ್ಲಿ ನಾನು ಕನ್ನಡ ಎಂಎ ಓದಲು ಸೇರಿದಾಗ ಅಲ್ಲಿ ಪಾಠ ಮಾಡುತ್ತಿದ್ದ ದಿಗ್ಗಜರಾದ ಕೀರಂ ನಾಗರಾಜ್, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಕೆ.ವಿ.ನಾರಾಯಣ, ಡಿ.ಆರ್.ನಾಗರಾಜ್, ಬರಗೂರು ರಾಮಚಂದ್ರಪ್ಪ ಮುಂತಾದವರ ಪಾಠದ ಶೈಲಿಯ ನೆನಪು ಕೂಡ ನನ್ನ ಮನದಲ್ಲಿ ಹಸಿರಾಗಿದೆ. ಒಬ್ಬೊಬ್ಬರದೂ ಒಂದೊಂದು ರೀತಿ, ಒಂದೊಂದು ದೃಷ್ಟಿಕೋನ, ಒಂದೊಂದು ಸೈದ್ಧಾಂತಿಕ ನೆಲೆ. ಆದರೆ ಕಲಿಯುವ ಮನಸ್ಸುಗಳಿಗೆ ಇವರಿಂದ ಆದ ಪ್ರಯೋಜನ ಬಹು ಹೆಚ್ಚು.

ಒಂದು ದೃಷ್ಟಿಯಿಂದ ನೋಡಿದರೆ ಕನ್ನಡ ಅಧ್ಯಾಪಕರು ಕೇವಲ ಕನ್ನಡ ಅಧ್ಯಾಪಕರಾಗಿರುವುದಿಲ್ಲ, ಅವರು ಸಮಾಜೋಸಾಂಸ್ಕೃತಿಕ ಕ್ಷೇತ್ರದ ನಾಯಕರೂ ಆಗಿರುತ್ತಾರೆ. ಕನ್ನಡ ನಾಡಿನ ಏಕೀಕರಣಕ್ಕಾಗಿ ನಡೆದ ಹೋರಾಟ, ಕನ್ನಡದ ಅಭಿವೃದ್ಧಿಗಾಗಿ ನಡೆದ ಅನೇಕ ಚಳುವಳಿಗಳು, ಹೋರಾಟಗಳು ಇವೆಲ್ಲವುಗಳ ಭಾಗವಾಗಿದ್ದ ಕನ್ನಡ ಅಧ್ಯಾಪಕರು ತರಗತಿಯಾಚೆಗೂ ತಮ್ಮ ಪ್ರಭಾವ ಬೀರುತ್ತಿದ್ದರು. `ಸಮುದಾಯ’ ಚಳುವಳಿ ಇದಕ್ಕೊಂದು ಉದಾಹರಣೆ. ನಾಗತಿಹಳ್ಳಿ ಚಂದ್ರಶೇಖರ್, ಎಚ್.ಎಸ್.ವೆಂಕಟೇಶಮೂರ್ತಿ, ಕೃಷ್ಣೇಗೌಡ ಮುಂತಾದ ಕನ್ನಡ ಅಧ್ಯಾಪಕರು ಸಾಹಿತ್ಯ ಒಂದೇ ಅಲ್ಲದ ಬಹುಮುಖೀ ನೆಲೆಗಳಲ್ಲಿ ವಿದ್ಯಾರ್ಥಿಗಳನ್ನು ಪ್ರಭಾವಿಸಿದ್ದರಲ್ಲವೆ? ಹಿರಿಯ ನಟ ಪ್ರಕಾಶ್ ರೈ ಅವರು ಸಂತ ಜೋಸೆಫರ ವಾಣಿಜ್ಯ ಕಾಲೇಜಿನಲ್ಲಿ ಓದುತ್ತಿದ್ದಾಗ ಡಾ.ಎಚ್.ಎಸ್.ವಿ. ಅವರ ವಿದ್ಯಾರ್ಥಿಯಾಗಿದ್ದು, ಆ ಗುರುಗಳ ಮಾರ್ಗದರ್ಶನದಲ್ಲಿ ಚಟುವಟಿಕೆಯಿಂದಿದ್ದ ಕಾಲೇಜಿನ ರಂಗಭೂಮಿಯಲ್ಲಿ ಬೆಳೆದ ರೀತಿಯು ಇಡೀ ಕನ್ನಡ ನಾಡಿಗೆ ಸಂತಸ ತಂದಿತು.

ಇನ್ನು ಶ್ರೀ ಚಿ.ಶ್ರೀನಿವಾಸ ರಾಜು. ಕನ್ನಡದ ವಾತಾವರಣವೇ ಇಲ್ಲದಿದ್ದ ಕ್ರೈಸ್ಟ್ ಕಾಲೇಜಿನಲ್ಲಿ ಶಕ್ತವಾದ ಕನ್ನಡ ಸಂಘವನ್ನು ಕಟ್ಟಿ ಅದರ ಮೂಲಕ ನೂರಾರು ಉತ್ತಮ ಕನ್ನಡ ಪುಸ್ತಕಗಳನ್ನು ಅವರು ಪ್ರಕಟಿಸಿದ್ದು, ಪ್ರತಿ ವರ್ಷವೂ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಸ್ಪರ್ಧೆಗಳನ್ನು ಮಾಡಿ ಯುವಪ್ರತಿಭೆಗಳನ್ನು ಬೆಳೆಸಿದ್ದು – ಇವು ಕನ್ನಡ ನಾಡು ಎಂದೂ ಮರೆಯಲಾಗದ, ಮರೆಯಬಾರದ ವಿಷಯಗಳು.

1996ರ ಇಸವಿ. ಮೂವತ್ತು ವರ್ಷಗಳ ಹಿಂದೆ ನಾನು ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಮೂಲಕ ಕನ್ನಡ ಉಪನ್ಯಾಸಕಳಾಗಿ ಆಯ್ಕೆಯಾಗಿದ್ದ ಸಮಯ. ಅಲ್ಲಿನ ಕನ್ನಡ ವಿಭಾಗದಲ್ಲಿ ಹಿರಿಯ ಸಹೋದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದ ಪ್ರೊ.ಪಿ.ಜಿ.ರುಕ್ಮಿಣಿ, ಯು.ಆರ್.ಲಲಿತ. ಪ್ರೇಮಲತಾ ಮುಂತಾದವರ ನೆನಪು ಸದಾ ನನ್ನ ಮನದಲ್ಲಿ ಇರುತ್ತದೆ. ಪಾಠಭಾಗದ ಒಂದು ಪುಟ್ಟ ಕವಿತೆಯನ್ನು ತರಗತಿಯಲ್ಲಿ ಪಾಠ ಮಾಡಲು ಅವರು ಮಾಡಿಕೊಳ್ಳುತ್ತಿದ್ದ ಅಗಾಧ ತಯಾರಿ, ಅವರ ವಿಶಾಲ ಓದಿನ ಹಿನ್ನೆಲೆ, ನಮ್ಮಂತಹ ಕಿರಿಯರು ಅವರ ಬಳಿ ಪಾಠಸಂಬಂಧೀ ಅನುಮಾನಗಳನ್ನು ಕೇಳಿದರೆ ಅವರು ಪರಿಹರಿಸುತ್ತಿದ್ದ ರೀತಿ ಅನುಸರಣೀಯ ಹಾಗೂ ಅನುಕರಣೀಯ. ಇದೇ ಸಂದರ್ಭದಲ್ಲಿ ಒಂದು ಪ್ರದೀಪದಂತೆ ನೆನಪಾಗುವವರು ಅನಾಜಿ.

ನಾನು ಅನಾಜಿ (ಪ್ರೊ. ಎ.ಎನ್.ಅಶ್ವತ್ಥ ನಾರಾಯಣ) ಅವರನ್ನು ಮೊದಲು ನೋಡಿದ್ದು ಸುಮಾರು ಇಪ್ಪತ್ತೆಂಟು ವರ್ಷಗಳ ಹಿಂದೆ. ಅರ್ಧ ತೋಳಿನ ಶರಟು, ಪ್ಯಾಂಟು, ಎಡಭುಜಕ್ಕೆ ಸದಾ ಇಳಿಬಿದ್ದಿರುತ್ತಿದ್ದ ಪುಸ್ತಕದ ಚೀಲ, ಗಾಳಿಗಷ್ಟು ಹಾರಾಡುವ ಮುಂದಲೆಯ ಅಲೆಗೂದಲು, ಹಾಗೆಯೇ ಎಂದೂ ಮಾಸದ ಮುಗುಳ್ನಗೆಮೊಗದ ಹಿರಿಯರು. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ (ಈಗ ಅದು ನೃಪತುಂಗ ವಿಶ್ವವಿದ್ಯಾಲಯ) ನಾನು ಆಗಷ್ಟೇ ಹೊಸದಾಗಿ ಕೆಲಸಕ್ಕೆ ಸೇರಿದ್ದ ಸಮಯ ಅದು. ಈ ಹಿರಿಯರು ಕೆಲವೊಮ್ಮೆ ನಮ್ಮ ಕಾಲೇಜಿನ ಕನ್ನಡ ವಿಭಾಗಕ್ಕೆ ಬರುತ್ತಿದ್ದರು. ಆಗ ನಾನು ಮೇಲೆ ಪ್ರಸ್ತಾಪಿಸಿದ್ದ ನನ್ನ ಹಿರಿಯ ಸಹೋದ್ಯೋಗಿಗಳಾಗಿದ್ದ ಪ್ರೊ.ಪಿ.ಜಿ.ರುಕ್ಮಿಣಿ, ಪ್ರೊ.ಸಿ.ಜಿ.ವೆಂಕಟಯ್ಯ, ಪ್ರೊ.ಯು.ಆರ್.ಲಲಿತಾ, ಪ್ರೊ.ಪ್ರೇಮಲತಾ, ಶ್ರೀ ಕೃಷ್ಣಪ್ಪ ಇವರೆಲ್ಲರೂ ಹಿಂದೆ ತಮ್ಮ ಸಹೋದ್ಯೋಗಿಯಾಗಿದ್ದ ಇವರು (ಅನಾಜಿಯವರು) ಬಂದರೆಂದರೆ ಹಿರಿಯಣ್ಣನೊಬ್ಬ ತಮ್ಮ ಮನೆಗೆ ಬಂದಷ್ಟು ಸಂಭ್ರಮಿಸುತ್ತಿದ್ದರು. ಪುಂಖಾನುಪುಂಖವಾಗಿ ಪುಸ್ತಕಗಳ ಹೆಸರು ಹೇಳುತ್ತಾ, ಸಾಹಿತ್ಯ ಕ್ಷೇತ್ರದ ನೆನಪುಗಳನ್ನು ಸುರುಳಿ ಸುರುಳಿಯಾಗಿ ಬಿಚ್ಚುತ್ತಾ ಇವರೆಲ್ಲರೊಂದಿಗೆ ಅನಾಜಿಯವರು ಮಾತಾಡುತ್ತಿದ್ದರೆಂದರೆ ನಾನು ಬೆರಗುಗಣ್ಣಿನಿಂದ ನೋಡುತ್ತಾ ಇರುತ್ತಿದ್ದೆ.

ಇನ್ನೂ ಇಪ್ಪತ್ನಾಲ್ಕು, ಇಪ್ಪತ್ತೈದು ವರ್ಷದ ಇನ್ನೂ ಆಗಷ್ಟೇ ಪ್ರಬುದ್ಧ ಜೀವನಕ್ಕೆ, ಅಧ್ಯಾಪನಕ್ಕೆ ಹಾಗೂ ಗಂಭೀರ ಬರವಣಿಗೆಗೆ ತೆರೆದುಕೊಳ್ಳುತ್ತಿದ್ದ ನನ್ನನ್ನು, `ಅಯ್ಯೋ, ಎಳಸು. ಇದರ ಹತ್ತಿರ ಏನು ಮಾತಾಡುವುದು?’ ಎಂಬ ನಿರ್ಲಕ್ಷ್ಯ ತೋರದೆ ಅನಾಜಿಯವರು ತುಂಬ ವಿಶ್ವಾಸದಿಂದ ಮಾತಾಡಿಸುತ್ತಿದ್ದರು. ಯಾವುದೇ ವಿಷಯವಾಗಲಿ ಕ್ಷಣಮಾತ್ರದಲ್ಲಿ ಅದನ್ನು ಕುರಿತಾಗಿ ಪ್ರಕಟವಾದ ಹತ್ತು ಹಲವು ಪುಸ್ತಕಗಳ ಹೆಸರನ್ನು ಅವರು ಪಟಪಟನೆ ಹೇಳುತ್ತಿದ್ದಾಗ ಅವರ ಅಗಾಧ ಓದು ಮತ್ತು ನೆನಪಿನ ಶಕ್ತಿಗೆ ನಾನು ಮನದಲ್ಲೇ ನೂರು ಸಲ ಕೈಮುಗಿಯುತ್ತಿದ್ದೆ. ಆಗ ನಾನು ದಿವಂಗತ ಡಾ.ಡಿ.ಆರ್.ನಾಗರಾಜ್ ಅವರ ಬಳಿ `ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ವಾಸ್ತವದ ಪ್ರತಿನಿಧೀಕರಣ – ಒಂದು ಸ್ತ್ರೀವಾದಿ ಅಧ್ಯಯನ’ ಎಂಬ ವಿಷಯದ ಬಗ್ಗೆ ಪಿ.ಎಚ್.ಡಿ. ಪದವಿಗಾಗಿ ಸಂಶೋಧನೆ ಮಾಡುತ್ತಿದ್ದೆ. ಅನಾಜಿಯವರು ಈ ಸಂಶೋಧನೆಯ ಬಗ್ಗೆ ಆಗಾಗ ನನ್ನ ಬಳಿ ಗಂಭೀರವಾಗಿ ಮಾತಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರು ಹೇಳಿದ ಒಂದು ಎಚ್ಚರಿಕೆಯ ಕಿವಿಮಾತು ನನ್ನ ಅಧ್ಯಯನಕ್ಕೆ ಒಂದು ದಿಕ್ಸೂಚಿಯಾಯಿತು ಎಂದರೆ ಅದು ಉತ್ಪ್ರೇಕ್ಷೆ ಅಲ್ಲ. ಸುಮಾರು 1997ನೇ ಇಸವಿ ಅದು ಎಂದು ನನ್ನ ನೆನಪು. ನನ್ನ ಸಂಶೋಧನಾ ಪ್ರಬಂಧದ ಅಧ್ಯಾಯ ವಿಂಗಡಣೆ ಇನ್ನೂ ಸರಿಯಾಗಿ ಆಗಿರಲಿಲ್ಲ. ಇದನ್ನು ಗಮನಿಸಿದ ಅನಾಜಿಯವರು “ಅಲ್ಲಮ್ಮ, ಆಧುನಿಕ ಕನ್ನಡ ಕಥನ ಸಾಹಿತ್ಯ ಅಂದ್ರೆ ನವೋದಯದಿಂದ ಈ ಕಾಲದವರೆಗೆ ಸುದೀರ್ಘವಾಗಿದೆ. ನೀವು ಇಷ್ಟು ದೊಡ್ಡ ವ್ಯಾಪ್ತಿ ಇಟ್ಕೊಂಡ್ರೆ ಎಲ್ಲಿಂದ ಎಲ್ಲೀವರೆಗೆ ಅಂತ ಮಾಡ್ತೀರಿ!? ಆಧುನಿಕ ಕನ್ನಡ ಸಾಹಿತ್ಯದ ಪ್ರತಿ ಘಟ್ಟದಿಂದಲೂ ಕೆಲವು ಪ್ರಾತಿನಿಧಿಕ ಲೇಖಕ-ಲೇಖಕಿಯರನ್ನ ಇಟ್ಕೊಂಡ್ರೆ ಮಾತ್ರ ನೋಡಿ ನೀವು ಈ ಅಧ್ಯಯನಕ್ಕೆ ಸ್ವಲ್ಪಾನಾದ್ರೂ ನ್ಯಾಯ ಒದಗಿಸಕ್ಕೆ ಆಗೋದು” ಅಂದರು. ನನಗೆ `ಅರೆ, ಹೌದಲ್ಲ’ ಅನ್ನಿಸಿತು. ಮುಂದೆ ನಾನು ನನ್ನ ಮಾರ್ಗದರ್ಶಕರ ಹತ್ತಿರ ಈ ಬಗ್ಗೆ ಹೇಳಿದಾಗ ಅವರಿಗೂ ಈ ಮಾತು ಒಪ್ಪಿಗೆಯಾಗಿ, ನಂತರ ಹೀಗೆಯೇ ಘಟ್ಟಗಳ ಅನುಸಾರವಾಗಿ, ಪ್ರಾತಿನಿಧಿಕ ಆಧುನಿಕ ಕನ್ನಡ ಲೇಖಕ ಲೇಖಕಿಯರನ್ನು ಇಟ್ಟುಕೊಂಡು ನಾನು ಪಿ.ಎಚ್.ಡಿ. ಅಧ್ಯಯನವನ್ನು ಮುಂದುವರಿಸಿದೆ. ದುರಾದೃಷ್ಟವಶಾತ್ ಡಿಆರ್‌ಎನ್ ಅವರು ಅಕಾಲಿಕವಾಗಿ ಮರಣ ಹೊಂದಿದಾಗ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ಪೂರೈಸಿ ಡಾಕ್ಟರೇಟ್ ಪದವಿ ಗಳಿಸಿದೆ. ನನಗೆ ಸಕಾಲಿಕವಾಗಿ ಸರಿಯಾದ ಎಚ್ಚರಿಕೆ ಕೊಟ್ಟು ನನ್ನ ಅಧ್ಯಯನವು ಯುಕ್ತ ದಿಕ್ಕಿನಲ್ಲಿ ಸಾಗುವಂತೆ ಮಾಡಿದ್ದಕ್ಕಾಗಿ ನಾನು ಅನಾಜಿಯವರಿಗೆ ಸದಾ ಆಭಾರಿಯಾಗಿರುತ್ತೇನೆ.

ಇಷ್ಟಕ್ಕೇ ನಿಲ್ಲುವುದಿಲ್ಲ ಈ ಹಿರಿಯರು ನನಗೆ ಮಾಡಿದ ದಾರಿದೀಪಗಳಂತಹ ಸಹಾಯಗಳ ಯಾದಿ. ಎಸ್.ಎಲ್.ಭೈರಪ್ಪನವರ ಅಭಿನಂದನ ಗ್ರಂಥವೊಂದಕ್ಕಾಗಿ ಲೇಖನ ಬರೆಯಲು ಪುಸ್ತಕಗಳನ್ನು ಹುಡುಕುತ್ತಿದ್ದಾಗ, ನಂತರ, ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2009ರಲ್ಲಿ ಹೊಸದಾಗಿ ಎಂಎ ಆರಂಭವಾದ ಸಂದರ್ಭದಲ್ಲಿ, ಡಿ.ಎಲ್.ನರಸಿಂಹಾಚಾರ್ ಅವರು ವಡ್ಡಾರಾಧನೆಗೆ ಬರೆದ ಸಂಪಾದನಾ ಮುನ್ನುಡಿ ಹುಡುಕುತ್ತಿದ್ದಾಗ ಅನಾಜಿಯವರು ನನಗೆ ಗ್ರಂಥಗಳನ್ನು ಕೊಟ್ಟು ಸಹಾಯ ಮಾಡಿದ್ದಾರೆ. ಒಮ್ಮೆಯಂತೂ ಹದಿನೈದು ಸಾವಿರದಷ್ಟು ಗ್ರಂಥಗಳು ಇದ್ದ ತಮ್ಮ ಸರಸ್ವತಿಯ ಖಜಾನೆಯಂತಹ ಗ್ರಂಥ ಭಂಡಾರದಿಂದ, ಅಚ್ಚುಕಟ್ಟಾಗಿ ರಟ್ಟು ಹಾಕಿದ್ದ ಪುಸ್ತಕವೊಂದನ್ನು ತೆಗೆದು ತಾವೇ ಅದನ್ನು ಪ್ರತಿ ಮಾಡಿಸಿ ನನಗಾಗಿ ಎತ್ತಿಟ್ಟಿದ್ದರು ಈ ವಾತ್ಯಲ್ಯಮಯಿ. ಮೊದಲ ಸಲ ಅವರ ಮನೆಯ ನೆಲಮಾಳಿಗೆಯಲ್ಲಿನ ಈ ಗ್ರಂಥಾಲಯ ನೋಡಿದಾಗ ನಾನು ಅಚ್ಚರಿಯಿಂದ ಅವಾಕ್ಕಾಗಿ ಹೋಗಿದ್ದೆ. ಪುಸ್ತಕಗಳನ್ನು ಕುರಿತ ಅವರ ನೆನಪಂತೂ ಅಗಾಧ! ಅವರೊಂದು ನಡೆದಾಡುವ ಗ್ರಂಥಾಲಯ ಎಂದೇ ನನಗೆ ಯಾವಾಗಲೂ ಅನ್ನಿಸುತ್ತೆ.

ಅನಾಜಿಯವರನ್ನು ಕುರಿತ ಇನ್ನೊಂದು ನೆನಪು ಸಹ ನನ್ನಲ್ಲಿ ಹಸಿರಾಗಿದೆ. 2003ರ ಜನವರಿ 24ನೇ ತಾರೀಖು ಅದು. ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅಂದು ನಾನು ನನ್ನ ಪಿ.ಎಚ್.ಡಿ ಪದವಿ ಸ್ವೀಕರಿಸುವುದಿತ್ತು. ಅದೇ ದಿನ ಬೆಳಿಗ್ಗೆ ಯಾವುದೋ ಒಂದು ಸಾಹಿತ್ಯ ಕಾರ್ಯಕ್ರಮದಲ್ಲೂ ನಾನು ಭಾಷಣ ಮಾಡಲು ಒಪ್ಪಿಬಿಟ್ಟಿದ್ದೆ. ಸಮಯದ ದೃಷ್ಟಿಯಿಂದ ಬಹಳ ಒತ್ತಡದ ದಿನವಾಗಿತ್ತು ನನಗದು. ನಾನು ಸದರಿ ಸಾಹಿತ್ಯ ಕಾರ್ಯಕ್ರಮಕ್ಕೆ ಹೋಗುವಷ್ಟರಲ್ಲಿ ಕಾರ್ಯಕ್ರಮ ಪ್ರಾರಂಭವಾಗಿ ಅತಿಥಿಗಳು ವೇದಿಕೆಯ ಮೇಲೆ ಕುಳಿತಿದ್ದರು. ಅಂದು ಅನಾಜಿಯವರು ಕೂಡ ಒಬ್ಬ ಅತಿಥಿಯಾಗಿದ್ದರು. ಅಂದಿನ ನನ್ನ ಗಡಿಬಿಡಿ, ಧಾವಂತಗಳು ಈ ಸೂಕ್ಷ್ಮಗಣ್ಣಿನ ಹಿರಿಯರ ಗಮನದಿಂದ ತಪ್ಪಿಸಿಕೊಳ್ಳಲಿಲ್ಲ. ಅವರು ಆ ದಿನ ಸಮಯ ನಿರ್ವಹಣೆಯನ್ನು ಕುರಿತು ಸೂಚ್ಯವಾಗಿ ಹೇಳಿದ ಮಾತು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿದೆ. “ಮೀರಾ ಅವರೇ, ನಾನು ಯಾವತ್ತೂ ಯಾವ ಸಮಾರಂಭಕ್ಕೂ ತಡವಾಗಿ ಹೋಗಿಲ್ಲ ಗೊತ್ತಾ?” ಅಂದರು. ನಾನು “ಹೇಗೆ ಸರ್? ಸಮಯವನ್ನು ನೀವು ಹೇಗೆ ನಿರ್ವಹಿಸ್ತೀರಿ?” ಅಂತ ಕೇಳಿದೆ. ಅವರೆಂದರು “ನೋಡೀ .. ನಾನು ಎಲ್ಲಿ, ಎಷ್ಟು ಹೊತ್ತಿಗೆ ಇರಬೇಕು, ಹೋಗಲು ಎಷ್ಟು ಹೊತ್ತಾಗುತ್ತೆ, ಹೋಗುವ ದಾರಿಂಯಲ್ಲಿ ಏನಾದರೂ ಸಮಸ್ಯೆಗಳು ಎದುರಾದರೆ ಅದಕ್ಕೆ ಎಷ್ಟು ಸಮಯ ಬೇಕಾಗಬಹುದು? ವಾಹನ ದಟ್ಟಣೆಯಾದರೆ ನಾನು ತಲುಪಲು ಎಷ್ಟು ಹೊತ್ತು ಬೇಕಾಗಬಹುದು? … ಈ ಅಂಶಗಳನ್ನೆಲ್ಲ ಗಮನದಲ್ಲಿರಿಸಿಕೊಂಡೇ ನಾನು ಸಾಕಷ್ಟು ಬೇಗನೆಯೇ ಮನೆ ಬಿಡ್ತೀನಿ. ಹೀಗಾಗಿ ನಾನು ಎಲ್ಲೂ, ಯಾವಾಗಲೂ ತಡವಾಗಿ ಹೋಗುವ ಪ್ರಮೇಯವೇ ಉದ್ಭವಿಸಿಲ್ಲ”. ಎಲ್ಲರೂ ಹೀಗೆ ಯೋಚಿಸಿದರೆ ಎಲ್ಲಿಗೂ ಯಾರೂ ತಡವಾಗಿ ತಲುಪುವ ಪ್ರಶ್ನೆಯೇ ಇರುವುದಿಲ್ಲವಲ್ಲ ಅನ್ನಿಸಿತು ನನಗೆ.

ಮುಂದೆ ಮಕ್ಕಳ ಕೂಟವು ಮಕ್ಕಳ ಸಾಹಿತ್ಯ-ಸಂಸ್ಕೃತಿಯ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗಾಗಿ ಕೊಡುವ ಆರ್.ಕಲ್ಯಾಣಮ್ಮ ಪ್ರಶಸ್ತಿಗೆ ನನ್ನ ಹೆಸರು ಸೂಚಿಸಿದ್ದು ನನ್ನ ಮನಸ್ಸಿಗೆ ಆನಂದವನ್ನುಂಟುಮಾಡಿತ್ತು. ಮಕ್ಕಳಿಗಾಗಿ ನಾಟಕ ಬರೆಯುವುದು, ಅವರಿಗೆ ಭರತನಾಟ್ಯ-ಭಾವನೃತ್ಯ ಹೇಳಿಕೊಡುವುದು, ಕನ್ನಡ ಕವಿಗಳ ಹಾಡುಗಳಿಗೆ ಅವರಿಂದ ನೃತ್ಯ ಮಾಡಿಸುವುದು, ಇಂಥವನ್ನೆಲ್ಲ ಮಾಡುತ್ತಿದ್ದ ನನ್ನ ಅಳಿಲುಸೇವೆಯನ್ನು ಅನಾಜಿ ಗಮನಿಸಿದ್ದರು. ಮಕ್ಕಳ ಕೂಟದಲ್ಲಿ ಆ ಪ್ರಶಸ್ತಿ ನೀಡುವ ದಿನ ಅವರು ಅಲ್ಲಿ ನೆರೆದು ಗಲಾಟೆ ಮಾಡುತ್ತಿದ್ದ ಚಿಕ್ಕಮಕ್ಕಳನ್ನು ಸುಮ್ಮನಿರಿಸಲು ಮುದ್ದಣನ ರಾಮಾಶ್ವಮೇಧದ ಮನಸೆಳೆಯುವ “ಓಹೋಹೋ, ಆಹಾಹಾ .. ಹಾಗಂತೆ, ಹೀಗಂತೆ…” ಎಂಬ ದೊಡ್ಡ ದನಿಯ ಪ್ರಾರಂಭದಂತೆ, ತಮ್ಮ ಭಾಷಣವನ್ನು ಪ್ರಾರಂಭಿಸಿ ಅಲ್ಲಿದ್ದ ಮಕ್ಕಳ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡು ಆಮೇಲೆ ಸಭೆಗೆ ಉಚಿತವಾದ ಅರ್ಥಪೂರ್ಣ ಮಾತುಗಳನ್ನಾಡಿದ್ದು ನೆನಪಾಗುತ್ತದೆ.

ನಮ್ಮ ಭರತನಾಟ್ಯ ಸಂಸ್ಥೆಯಾದ ಚಿತ್ರನಾಟ್ಯ ಫೌಂಡೇಷನ್‌ಗೆ ಅವರು ಬಂದಿದ್ದು ನೆನಪಾಗುತ್ತದೆ. ದಿನಾಂಕ 25-11-2018ರಂದು ರಾಜಾಜಿನಗರದ ಪೇರೆಂಟ್ಸ್ ಅಸೋಸಿಯೇಷನ್ ಸಂಸ್ಥೆಯಲ್ಲಿ ನಡೆದ `ನಾಟ್ಯಕೆ ಆಟದ ಸೋಪಾನ – ಬಾಲನಾಟ್ಯ – 2018’ ಎಂಬ ನಾಟ್ಯ ಕಾರ್ಯಕ್ರಮಕ್ಕೆ ಅನಾಜಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸೊಗಸಾದ ನುಡಿಗಳನ್ನಾಡಿ ನಮಗೆ ಸಂತೋಷ ತಂದಿದ್ದರು.

ನನ್ನಂತಹ ಅನೇಕ ಕಿರಿಯರನ್ನು ಹೀಗೆ ನಿರ್ವ್ಯಾಜ ವಾತ್ಸಲ್ಯ, ಮಮತೆ, ಆಭಿಮಾನಗಳಿಂದ ಬೆಳೆಸಿದ ಅನಾಜಿಯವರು ಕನ್ನಡಿಗರು ತಂಪುಹೊತ್ತಿನಲ್ಲಿ ನೆನೆಯಬೇಕಾದ ಸಜ್ಜನರು, ಬಹುಶ್ರುತರು, ಪುಸ್ತಕ ಪ್ರೇಮಿ. ಅಶ್ವತ್ಥನಾರಾಯಣ ಜಿ. ಎಂಬ ಕನ್ನಡಮ್ಮನ ನಲ್ಮೆಯ ಕುವರನ ಸಾಹಿತ್ಯಸೇವೆಯ ನೆನಪು ಕನ್ನಡದ ಮನಸ್ಸುಗಳಲ್ಲಿ ಸದಾ ಹಸಿರಾಗಿರುತ್ತದೆ. ಒಬ್ಬ ಕನ್ನಡ ಅಧ್ಯಾಪಕಿಯಾಗಿ ನಾನು ಸದಾ ನೆನಪಿಸಿಕೊಳ್ಳುವ ಹಿರಿಯರಲ್ಲಿ ಈ ಕನ್ನಡ ಪರಿಚಾರಕರ ಹೆಸರು ಅಗ್ರಪಂಕ್ತಿಯಲ್ಲಿರುತ್ತದೆ.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ