Advertisement
ಕನ್ನಡ ಪ್ರಜ್ಞೆ: ಸುಕನ್ಯಾ ಕನಾರಳ್ಳಿ ಅಂಕಣ

ಕನ್ನಡ ಪ್ರಜ್ಞೆ: ಸುಕನ್ಯಾ ಕನಾರಳ್ಳಿ ಅಂಕಣ

ನನ್ನ ಮನೆಗೆ ಯಾವ ಮಕ್ಕಳು ಬಂದರೂ ಕನ್ನಡದಲ್ಲಿ ಮಾತಾಡೋದಾದ್ರೆ ಮಾತ್ರ ಒಳಗೆ ಬನ್ನಿ ಅಂತ ಯಾವ ಮುಲಾಜಿಲ್ಲದೆ ಹೇಳಿಬಿಡ್ತೀನಿ. ಮೊನ್ನೆ ಮಹಾ ತರಾತುರಿಯಲ್ಲಿ ನಾಲ್ಕು ಮಕ್ಕಳು ಬಾಗಿಲು ಬಡಿದ್ರು. ಎಲ್ರೂ ಇಂಗ್ಲೀಶಲ್ಲಿ ಒಟ್ಟಿಗೆ ಮಾತಾಡ್ತಾ ಇದ್ರು. ಅವರನ್ನ ತಡೆದು ನಿಲ್ಲಿಸಿ ‘ಕನ್ನಡದಲ್ಲಿ ಹೇಳಿ’ ಅಂದೆ. ತಟ್ಟನೆ ಮೌನ. ಅರೆ ಗಳಿಗೆಯ ನಂತರ ಒಂದು ಮಗು ಧೈರ್ಯ ಮಾಡಿ ‘ನಾವು ಪ್ಲೇ ಮಾಡ್ತಾ ಇದೀವಿ. ಅಲ್ಲಿ ಅಭಿ ಕೌಂಟ್ ಮಾಡ್ತಾ ಇದಾನೆ. ಅದಕ್ಕೆ ನಾವೆಲ್ಲ ರನ್ ಮಾಡಿಕೊಂಡು ಬಂದ್ವಿ. ನಿಮ್ಮನೇಲಿ ಹೈಡ್ ಮಾಡಿಕೊಬಹುದಾ?ʼನಾನು ಕೇಳಿದ್ದು ಕನ್ನಡದಲ್ಲಿ ಹೇಳಿ ಅಂತ, ಕಿಚಡಿಯಲ್ಲಿ ಅಲ್ಲ ಎಂದಿದ್ದು ಪಾಪ ಮಕ್ಕಳಿಗೆ ಅರ್ಥ ಆಗಲಿಲ್ಲ. ಸರಿ, ಪ್ರಯತ್ನ ಆದ್ರೂ ಪಟ್ಟಿರಲ್ಲ ಅಂತ ಒಳಗೆ ಬಿಟ್ಟೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಎರಡನೆಯ ಬರಹ

ನಮಸ್ಕಾರ.

ಇಲ್ಲಿ ನೆರೆದಿರೋ ಸಿಂಫೊನಿ ಸಮುದಾಯದ ಎಲ್ಲರಿಗೆ, ಮತ್ತು ನಮ್ಮನ್ನ ನೋಡಿಕೊಳ್ಳುವ ಸೆಕ್ಯೂರಿಟಿ, ಹೌಸ್ ಕೀಪಿಂಗ್, ಗಾರ್ಡನಿಂಗ್, stp ಮಂದಿ ಎಲ್ಲರಿಗೂ ಕನ್ನಡ ರಾಜ್ಯೊತ್ಸವದ ಶುಭಾಶಯಗಳು.

ನನಗೆ ಪಾಠ ಮಾಡೋದಕ್ಕೆ ಮಾತ್ರ ಸ್ಟೇಜಿಗೆ ಹೋಗಿ ಅಭ್ಯಾಸ. ಮತ್ತೆ ಪ್ರಶಸ್ತಿ ಬಹುಮಾನ ಅಂತ ಯಾರಾದರೂ ಹೇಳಿದ ತಕ್ಷಣ ಪರಾರಿಯಾಗೋ ಅಭ್ಯಾಸ. ಮೊನ್ನೆ ಮಾರ್ಚಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಹ ತಪ್ಪಿಸಿಕೊಂಡಿದ್ದೆ. ಮೂಲ ಲೇಖಕರು ಅಗ್ರಹಾರ ಕೃಷ್ಣಮೂರ್ತಿ. ನಿಜವಾಗಿ ಪ್ರಶಸ್ತಿಯನ್ನ ತಗೋಬೇಕಾದವರು ನೀವು ಅಂತ ಹೇಳಿ ಅವರ ತಲೆ ಮೇಲೆ ಹೊರೆಸಿ ನ್ಯೂಜಿಲ್ಯಾಂಡಿಗೆ ಹಾರಿದ್ದೆ.

But Symphony is my home. ಇವತ್ತು ಕನ್ನಡ ರಾಜ್ಯೊತ್ಸವ. ಅಂದರೆ ನನ್ನ ಮನೆಮಾತಿನ ಹಬ್ಬ. ಮನೆಯವರು ಕೊಡ್ತಾ ಇರೋ ಈ ಕಾಣಿಕೆಯನ್ನ ಪ್ರೀತಿಯಿಂದ ಒಪ್ಪಿಕೊಳ್ತಾ ಮನೆಮಾತಿನ ಬಗ್ಗೆ ಒಂದೆರಡು ಮಾತುಗಳನ್ನ ಆಡೋದಿಕ್ಕೆ ಇಷ್ಟಪಡ್ತೀನಿ.

ಕನ್ನಡ ನನ್ನ ಮನಸ್ಸಿನ ಭಾಷೆ ಮತ್ತು ಹೃದಯದ ಭಾಷೆ. ನಾನು ಕನಸಲ್ಲಿ ಯಾವತ್ತೂ ಇಂಗ್ಲೀಷಲ್ಲಿ ಮಾತಾಡಿಲ್ಲ. ಕೋಪ ಬಂದಾಗಲಂತೂ ಸೀದಾ ಕನ್ನಡವೇ.

ಹಾಗೇನೆ ದೇವರು ಎಂಬ ಶುದ್ಧ ಚೈತನ್ಯದ ಜೊತೆ ಸಹ ನಾನು ಕನ್ನಡದಲ್ಲೇ ಮಾತಾಡೋದು. ನಮ್ಮ ನಡುವಿನ ಚಿಂತಕರಲ್ಲಿ ಒಬ್ಬರಾದ ಪುರುಷೋತ್ತಮ ಬಿಳಿಮಲೆ ಅವರು ಹನ್ನೆರಡನೆಯ ಶತಮಾನದ ವಚನಕಾರರು ದೇವರಿಗೇ ಕನ್ನಡ ಕಲಿಸಿದವರು ಅಂತ ಹೇಳಿರೋದು ನೆನಪಿಗೆ ಬರುತ್ತೆ. ಅಂದರೆ ನಮ್ಮ ಆಪ್ತ ಪ್ರಪಂಚದ ಒಳಗೆ ನಡೆಯುವುದೆಲ್ಲವೂ ನಮ್ಮ ಮನೆಮಾತಿನಲ್ಲಿ.

ಒಮ್ಮೆ ಅಕ್ಬರನ ಆಸ್ಥಾನಕ್ಕೆ ಒಬ್ಬ ಬಹುಭಾಷಾ ಪಂಡಿತ ಎಲ್ಲಿಂದಲೋ ಬಂದನಂತೆ. ನನ್ನ ತಾಯ್ನುಡಿ ಯಾವುದು ಅಂತ ಕಂಡು ಹಿಡೀರಿ ನೋಡೋಣ ಅಂತ ಸವಾಲು ಹಾಕಿದನಂತೆ. ಯಾರಿಗೂ ಸಾಧ್ಯವಾಗದೆ ಯಥಾ ಪ್ರಕಾರ ಅಕ್ಬರ್ ಅದನ್ನ ಬೀರಬಲ್ಲನಿಗೆ ವಹಿಸಿದ್ದ.

ಮಾರನೆಯ ದಿನ ಆ ಬಹುಭಾಷಾ ಪಂಡಿತ ಅರಮನೆಯ ಬಾಗಿಲಿಗೆ ಬಂದಾಗ ಬೀರಬಲ್ಲ ಮೇಲಿಂದ ಒಂದು ಮಡಕೆ ಕೆಮ್ಮಣ್ಣಿನ ನೀರನ್ನ ಸುರಿಯೋ ಹಾಗೆ ಏರ್ಪಾಡು ಮಾಡಿದ್ದನಂತೆ. ಸಿಕ್ಕಾಪಟ್ಟೆ ಕೋಪ ಬಂದ ಪಂಡಿತ ಕಿರುಚಾಡಕ್ಕೆ ಶುರು ಮಾಡಿದಾಗ ಬೀರ್ಬಲ್ಖಾವಂದರೆ ಸತ್ಯವನ್ನು ಒಪ್ಪಿಸಿಕೊಳ್ಳಿ’ ಅಂತ ನಗ್ತಾ ಹೇಳಿ ಇನ್ನೊಂದು ಬಹುಮಾನವನ್ನ ಗಿಟ್ಟಿಸಿಕೊಂಡ ಅಂತ ಕಥೆ.

ಇರಲಿ, ಮನೆಮಾತು ಅಂತ ಹೇಳಿದೆ. ಅನಂತಮೂರ್ತಿಯವರಭಾಷಾ-ತಬ್ಬಲಿ’ ಅನ್ನೊ ಒಂದು ಪರಿಕಲ್ಪನೆ ಇದೆ. ಅದು ನಾನು ಗಮನಿಸೋ ಹಾಗೆ ನನ್ನ ನಂತರದ ಪೀಳಿಗೆಗಳಲ್ಲಿ ಎಷ್ಟರ ಮಟ್ಟಿಗೆ ಬೆಳೀತಾ ಇದೆ ಅಂದರೆ ಚಿಕ್ಕವರ ಹತ್ತಿರ ಮಾತಾಡೋದೆ ಕಷ್ಟ ಆಗ್ತಾ ಇದೆ.

ನನ್ನ ಮನೆಗೆ ಯಾವ ಮಕ್ಕಳು ಬಂದರೂ ಕನ್ನಡದಲ್ಲಿ ಮಾತಾಡೋದಾದ್ರೆ ಮಾತ್ರ ಒಳಗೆ ಬನ್ನಿ ಅಂತ ಯಾವ ಮುಲಾಜಿಲ್ಲದೆ ಹೇಳಿಬಿಡ್ತೀನಿ. ಮೊನ್ನೆ ಮಹಾ ತರಾತುರಿಯಲ್ಲಿ ನಾಲ್ಕು ಮಕ್ಕಳು ಬಾಗಿಲು ಬಡಿದ್ರು. ಎಲ್ರೂ ಇಂಗ್ಲೀಶಲ್ಲಿ ಒಟ್ಟಿಗೆ ಮಾತಾಡ್ತಾ ಇದ್ರು. ಅವರನ್ನ ತಡೆದು ನಿಲ್ಲಿಸಿ ‘ಕನ್ನಡದಲ್ಲಿ ಹೇಳಿ’ ಅಂದೆ. ತಟ್ಟನೆ ಮೌನ.

ಅರೆ ಗಳಿಗೆಯ ನಂತರ ಒಂದು ಮಗು ಧೈರ್ಯ ಮಾಡಿ ‘ನಾವು ಪ್ಲೇ ಮಾಡ್ತಾ ಇದೀವಿ. ಅಲ್ಲಿ ಅಭಿ ಕೌಂಟ್ ಮಾಡ್ತಾ ಇದಾನೆ. ಅದಕ್ಕೆ ನಾವೆಲ್ಲ ರನ್ ಮಾಡಿಕೊಂಡು ಬಂದ್ವಿ. ನಿಮ್ಮನೇಲಿ ಹೈಡ್ ಮಾಡಿಕೊಬಹುದಾ?ʼ

ನಾನು ಕೇಳಿದ್ದು ಕನ್ನಡದಲ್ಲಿ ಹೇಳಿ ಅಂತ, ಕಿಚಡಿಯಲ್ಲಿ ಅಲ್ಲ ಎಂದಿದ್ದು ಪಾಪ ಮಕ್ಕಳಿಗೆ ಅರ್ಥ ಆಗಲಿಲ್ಲ. ಸರಿ, ಪ್ರಯತ್ನ ಆದ್ರೂ ಪಟ್ಟಿರಲ್ಲ ಅಂತ ಒಳಗೆ ಬಿಟ್ಟೆ.

ಅಂದರೆ ಮನೆಮಾತನ್ನೆ ಆಡದ ಅಥವಾ ತಪ್ಪುತಪ್ಪಾಗಿ ಮಾತಾಡುವ ಮಕ್ಕಳಿಗೆ ಕ್ಷಮೆ ಇದೆ. ಆದರೆ ಮನೆಮಾತಿನ ಅಭ್ಯಾಸವನ್ನ ಬೆಳೆಸದ ತಂದೆತಾಯಿಗಳಿಗೆ ಕ್ಷಮೆ ಇಲ್ಲ. ಯಾಕೆ ಅಂದರೆ ತನ್ನ ಭಾಷೆ ಅನ್ನೊ ಅಭಿಮಾನ ಇಲ್ಲದ ಮನಸ್ಸಿಗೆ ತನ್ನ ತಂದೆತಾಯಿ, ತನ್ನ ಕುಟುಂಬ ಅನ್ನೊ ಅಭಿಮಾನ ಇರಕ್ಕೆ ಸಾಧ್ಯ ಆಗಲಾರದು ಅಂತನ್ನಿಸುತ್ತೆ.

ನನ್ನ ಒಬ್ಬಳು ಸ್ನೇಹಿತೆ ಹೇಳ್ತಾ ಇದ್ದಳು; ಮಕ್ಕಳನ್ನ ಸ್ಕೂಲಿಗೆ ಕಳಿಸೋದಕ್ಕೆ ಶುರು ಮಾಡಿದಾಗಿಂದ ಅವರಿಗೆ ಬರೀ ನಿನ್ನ ಪುಸ್ತಕ, ನಿನ್ನ ಪೆನ್ಸಿಲ್ಲು, ನಿನ್ನ ಪ್ರೊಗ್ರೆಸ್ ರಿಪೋರ್ಟು ಅಂತ ಹೇಳಿ ಹೇಳಿ ಅವರನ್ನ ಕೇವಲ I-MeMyself ಮಾಡಿಹಾಕಿರ್ತೀವಿ. ಆಮೇಲೆ ಅಪ್ಪಾಮ್ಮಂಗೂ ಕೇರ್ ಮಾಡಲ್ಲ ಈಗಿನ ಕಾಲದ ಮಕ್ಕಳು ಅಂತ ಗೊಣಗೋದಕ್ಕೆ ಶುರು ಮಾಡ್ತೀವಿ.

ಇರಲಿ, ಹೀಗೆ ಹೇಳಿದ್ರೆ ನಮ್ಮನೇನಲ್ಲೆ ಚಿಕ್ಕವರು ‘ನಿಮಗೆ ವಯಸ್ಸಾಗ್ತಾ ಇದೆ, ಅದಕ್ಕೆ ಗೊಣಗೋದು ಜಾಸ್ತಿ ಮಾಡಿದೀರಾ’ ಅಂತ ಹೇಳಿ ಬಾಯಿ ಮುಚ್ಚಿಸೋದಕ್ಕೆ ನೋಡ್ತಾರೆ. ಅಥವಾ ‘ಏನೀಗ? ನಮಗೆ ಇಂಗ್ಲಿಷ್ ಸಾಕು,’ ಅಂತಾರೆ. ಹಾಗಿದ್ರೆ ಪಿಜ್ಜಾ ಪಾಸ್ತಾ ಸಾಕು ಅಂತ ಸುಮ್ಮನಿರತೀರ? ಮೊನ್ನೆ ಬಂದಿಳಿದ ನನ್ನ ತಂಗಿಯ ಮಗ ನನಗೆ ದಿನಾ ರಸಂ ಬೇಕು ಅಂತ ಅವರಮ್ಮನಿಗೆ ಹೇಳಿದ್ದ. ಅಂದ್ರೆ ಮನೆಮಾತು ಸಹ ಮನೆ ಊಟದ ತರವೇ ಆಪ್ತವಾಗಿರಬೇಕು.

ಒಂದು ಸಲ ಅಮೆರಿಕಾದಲ್ಲಿ ಕೆನಡಿ ಸೆಂಟರಿಗೆ ಯಾವುದೋ ಕಾರ್ಯಕ್ರಮಕ್ಕೆ ಹೋಗ್ತಾ ಇದ್ವಿ. ಅದೇ ವ್ಯಾನಿನಲ್ಲಿ ಇದ್ದ ಒಬ್ಬ ಅಮೆರಿಕನ್ ಜೊತೆ ಮಾತಾಡ್ತಾ ಇದ್ದೆ. ಅವಳು, ‘your English is good!’ ಅಂತ ಏನೋ ಧರ್ಮ ಮಾಡೋ ದನಿಯಲ್ಲಿ ಹೇಳಿದ್ಲು. ನಾನೂ ಸಹ ನಾಟಕೀಯವಾಗಿ, ‘Yours too. Though not as good as mine, not bad either.’ ಅಂತ ಹೇಳಿದಾಗ ಅವಳ ಕಣ್ಣು ಅಗಲವಾಗಿ ತೆರೆದುಕೊಂಡಿತ್ತು.

ಹಾಗೆಯೇ ಮುಂದುವರೆಸಿ, ‘But my home tongue Kannada is also very good. What is yours, by the way? I know America is a land of immigrants. Do you have a language of your own?’ ಅಂತ ಕೇಳಿದಾಗ ಪಾಪ ಪೆಚ್ಚಾಗಿ ಹೋಗಿ ಬಿಟ್ಟಿದ್ಲು.

ಮನೆ ಮಾತು ತರಹವೇ ಬೀದಿ ಮಾತು ಅಂತ ಇದೆ. ಅದು ಬೀದಿಯಲ್ಲಿ ಜನ ಮಾತಾಡೋ ಭಾಷೆ. ಇಲ್ಲಿ ನಮ್ಮ ಸೆಕ್ಯುರಿಟಿ, ಹೌಸ್ ಕೀಪಿಂಗ್, ನಮ್ಮ ಮನೆಕೆಲಸದಲ್ಲಿ ಸಹಾಯ ಮಾಡಕ್ಕೆ ಬರೋ ಮಂದಿ, ಎಲ್ಲರೂ ಮಾತಾಡೋ ಭಾಷೆ. ಅವರ ಜೊತೆ ಬೆರೆಯಬೇಕು ಅಂದ್ರೆ ಆ ಭಾಷೆಯನ್ನ ಕ್ರಮೇಣ ಆದ್ರೂ ಕಲ್ತುಕೋಬೇಕು.

ನಾನು ಹೈದರಾಬಾದಿನಲ್ಲಿ ನನ್ನ ಎಂ ಫಿಲ್ ಅಧ್ಯಯನಕ್ಕೆ ಅಂತ ಇದ್ದಾಗ ಬೈಯ್ಯೋ ಮಟ್ಟಿಗೆ ತೆಲುಗು ಬರ್ತಾ ಇತ್ತು. ದೆಹಲಿಯ ಜೆಯೆನ್ಯೂನಲ್ಲಿ ಪಿ ಎಚ್ ಡಿ ಅಧ್ಯಯನಕ್ಕೆ ಇದ್ದಾಗ ನಾನು ಹೊರಗೆ ಹೋಗಿದ್ದೇ ಕಮ್ಮಿ. ಆದರೆ ಒಳಗಡೆ ಇದ್ದ ಅಷ್ಟೊಂದು ಲೈಬ್ರರಿಗಳು, ಹಾಸ್ಟೆಲ್ಲುಗಳು, ಡಾಬಾಗಳಲ್ಲಿ ಕೆಲಸ ಮಾಡ್ತಾ ಇದ್ದವರ ಜೊತೆ ಮಾತಾಡೋ ಅಷ್ಟು ಹಿಂದಿಯನ್ನ ಕಲ್ತುಕೊಂಡಿದ್ದೆ.

ಅಂದ್ರೆ ನನ್ನ ಮಾತಿನ ಒಟ್ಟು ಸಾರಾಂಶ ಇಷ್ಟೇ; language is power. ಅದನ್ನ ಕೇವಲ ಬಳಸ್ತೀವಿ ಅಂತ ಅಂದುಕೊಳ್ಳಬಾರದು. ಕನ್ನಡ ಅಂದರೆ ಒಂದು ಬದುಕಿನ ಕ್ರಮ, ಒಂದು ಜೀವನ ದೃಷ್ಟಿ, ಒಂದು ಸಂಸ್ಕೃತಿ, ಒಂದು ಇತಿಹಾಸ, ಮತ್ತೆ ಒಂದು ಪ್ರಜ್ಞೆ. ಆ ಅರ್ಥದಲ್ಲಿ ನನ್ನ ಅಸ್ಮಿತೆ ನಾನೊಬ್ಬ ಕನ್ನಡತಿ ಅಂತಲೇ. ನನ್ನದು ಕನ್ನಡ ಪ್ರಜ್ಞೆ.

ಮತ್ತೊಮ್ಮೆ ಪ್ರೀತಿಯಿಂದ ಅಭಿನಂದಿಸಿರುವ ಎಲ್ಲರಿಗೆ ನನ್ನ ವಂದನೆಗಳು.

ನಮಸ್ಕಾರ.

(ಲೇಖಕಿ ವಾಸಿಟ್ಟಿರುವ ಬ್ರಿಗೇಡ್ ಸಿಂಫೋನಿ ಅಪಾರ್ಟಮೆಂಟ್ ಲೇಖಕಿಯ Love and Water Flow Together ಭಾಷಾಂತರ ಕೃತಿಗೆ ಬಂದ ಕುವೆಂಪು ಭಾಷಾಭಾರತಿ ಪುಸ್ತಕ ಪ್ರಶಸ್ತಿ (೨೦೨೩) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ಅಮೆರಿಕನ್ನಡ ದತ್ತಿ ಬಹುಮಾನ (೨೦೨೩) ಗಳಿಗೆ ಸನ್ಮಾನಿಸಿದ ಸಂದರ್ಭದಲ್ಲಿ)

About The Author

ಸುಕನ್ಯಾ ಕನಾರಳ್ಳಿ

ಲೇಖಕಿ, ಅನುವಾದಕಿ ಮತ್ತು ಇಂಗ್ಲೀಷ್ ಪ್ರಾಧ್ಯಾಪಕಿ. ‘ಹೇಳುತೇನೆ ಕೇಳು: ಹೆಣ್ಣಿನ ಆತ್ಮಕಥನಗಳು’ ಇವರ ಮುಖ್ಯ ಕೃತಿ. ‘An Afternoon with Shakuntala’ ವೈದೇಹಿ ಅವರ ಕಥೆಗಳ ಇಂಗ್ಲೀಷ್ ಅನುವಾದ. ಕೊಡಗು ಜಿಲ್ಲೆಯ ಕನಾರಳ್ಳಿಯವರು.  ನ್ಯೂಜಿಲ್ಯಾಂಡಿನಲ್ಲಿ ವಾಸವಾಗಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ