ಕನ್ನಡದ ಈ ಕಾಲದ ವಿಮರ್ಶೆ ಮೇಲ್ನೋಟಕ್ಕೆ ತನ್ನನ್ನು ‘ನವ್ಯೋತ್ತರ’ವೆನ್ನಬೇಕೋ ‘ಆಧುನಿಕೋತ್ತರ’ವೆನ್ನಬೇಕೋ, ‘ದಲಿತಬಂಡಾಯೋತ್ತರ’ವೆನ್ನಬೇಕೋ ಎಂಬ ಸ್ವನಿರೂಪಣೆಯ ಗೊಂದಲದಲ್ಲಿಯೇ ಸಿಲುಕಿದಂತೆ ಕಂಡರೂ, ಅದು ಕನ್ನಡ ವಿಮರ್ಶೆಯ ಕಾರ್ಯಸೂಚಿ ಎಷ್ಟು ಅನಿರ್ದಿಷ್ಟವಾಗಿದೆ ಎಂಬುದರ ಸೂಚಕವೂ ಆಗಿ ಕಾಣಿಸುತ್ತದೆ. ಈಚಿನ ದಶಕಗಳಲ್ಲಿ ಸಂಸ್ಕೃತಿ ಅಧ್ಯಯನ ಹಾಗೂ ಸ್ತ್ರೀವಾದಿ ವಿಮರ್ಶೆಯ ಮಾದರಿಗಳು ಪ್ರಭಾವಶಾಲಿಯಾಗಿ ಬೆಳೆದಿರುವುದು ನಿಜವಾಗಿದೆ.  ಇನ್ನು ಪ್ರಾತಿನಿಧಿಕವಾಗಿ ಅಧ್ಯಯನ ಅಥವ ವಿಮರ್ಶಾ ಮಾದರಿಗಳ ಬಗೆಗಿನ ಕೆಲವು ಸಂಗತಿಗಳನ್ನು ಡಾ. ಎಸ್. ಸಿರಾಜ್ ಅಹ್ಮದ್  ತಮ್ಮ ಅಂಕಣದಲ್ಲಿ ಪ್ರಸ್ತಾಪಿಸಿದ್ದಾರೆ. 

 

ಮೊದಲನೆಯದಾಗಿ ಸಮಕಾಲೀನ ಕನ್ನಡ ಸಾಹಿತ್ಯ ವಿಮರ್ಶೆಯನ್ನು ಕುರಿತು ಬರೆಯುವಾಗ ಬಹಳ ಸಮಗ್ರವಾದ-ಸುಸಂಬದ್ಧವಾದ ವಾದವನ್ನು ಮಂಡಿಸಲು ಇಲ್ಲಿ ನಾನು ಪ್ರಯತ್ನಿಸುತ್ತಿಲ್ಲ. ಹಾಗೆ ನೋಡಿದರೆ, ಸಮಕಾಲೀನ ಸಾಹಿತ್ಯ ವಿಮರ್ಶೆಯ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ಕಳೆದ ಹಲವು ವರ್ಷಗಳಿಂದ ಸಾಹಿತ್ಯವಿಮರ್ಶೆಯೇ ಒಂದು ದಿವಂಗತ ಪ್ರಕಾರ-ಡೆಡ್ ಸಬ್ಜೆಕ್ಟ್ ಎಂಬ ಮಾತುಗಳನ್ನು ಸಾಹಿತ್ಯಿಕ ಚರ್ಚೆಗಳಲ್ಲಿ ಮತ್ತೆ ಮತ್ತೆ ಕೇಳುತ್ತಿದ್ದೇವೆ. ಇಂಥ ಮರಣವಾರ್ತೆಗಳ ನಡುವಲ್ಲಿಯೇ “ಇಂದಿನ” ಸಾಹಿತ್ಯವಿಮರ್ಶೆಯ ಸ್ವರೂಪ, ಅದರ ಮಹತ್ವವನ್ನು ಅರಿಯುವ ಪ್ರಯತ್ನವನ್ನು ಮತ್ತೊಮ್ಮೆ ಮಾಡಬೇಕಾಗಿರುವುದು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಅದಕ್ಕಿರುವ ಪ್ರಾಮುಖ್ಯತೆಯನ್ನು ಒತ್ತಿಹೇಳುವಂತಿದೆ. ಸಾಹಿತ್ಯ ವಿಮರ್ಶೆಯ ಮರಣಘೋಷಗಳ ನಡುವೆಯೇ ಹಲವಾರು ಪ್ರಮುಖ ಲೇಖಕರು, ಸಕಾಲ ಕಾರ್ಯಕ್ರಮದಡಿಯಲ್ಲಿ ಕೆಲಸ ಮಾಡುವ ವಿಧೇಯ ಸರ್ಕಾರಿ ನೌಕರರರಂತೆ ವಿಮರ್ಶಕರು ಕಾಲಕಾಲಕ್ಕೆ ತಮ್ಮ ಕೃತಿಗಳ ಕುರಿತು ಗುಣಾವದೋಷಗಳನ್ನು ಕುರಿತು ಬರೆದಿಲ್ಲ ಎಂದು ವಿಮರ್ಶಕರ ಹೆಸರನ್ನು ಕೇಳಿದಾಕ್ಷಣ ಕ್ರೋಧಾಕ್ರಾಂತರಾಗುವುದು ಬಹಳ ವಿಚಿತ್ರವಾಗಿ ಕಾಣುತ್ತಿದೆ. ಶ್ರೇಷ್ಠ ಸಾಹಿತ್ಯ ನಿರ್ಮಿತಿಯ ಹಿಂದೆ ಅತ್ಯುತ್ತಮ ಅಭಿರುಚಿ ನಿರ್ಮಾಣಮಾಡುವ ವಿಮರ್ಶೆ/ಚಿಂತನಾ ಪರಂಪರೆಯ ಒತ್ತಾಸೆಯೂ ಇರುತ್ತದೆ ಎಂಬುದನ್ನು ಮರೆಯಬಾರದು. ವಿಮರ್ಶಕರನ್ನು ಸಾಹಿತ್ಯವೆಂಬ ಸಂಸ್ಥೆಯಲ್ಲಿ ಹಗಲಿರುಳೂ ದುಡಿಯುವ ಸಕಾಲ ಕಾರ್ಯಕರ್ತರೆಂದು ಕೆಲವು ಸಾಹಿತಿಗಳು ತಪ್ಪಾಗಿ ಭಾವಿಸಿರುವುದರಿಂದ ವಿಮರ್ಶೆಯ ಮೂಲಕ ಸಾಧ್ಯವಾಗುವ ಅಭಿರುಚಿ ನಿರ್ಮಾಣ ಮತ್ತು ಪ್ರಬುದ್ಧ ವೈಚಾರಿಕತೆ-ಚಿಂತನೆಗಳು ಹಿನ್ನೆಲೆಗೆ ಸರಿದಿವೆ.

ಹೀಗೆ ವಿಮರ್ಶೆಯ ಪರವಹಿಸಿ ಮಾತನಾಡುತ್ತಿರುವ ನನ್ನ ಮಾತುಗಳನ್ನು ಅಷ್ಟಿಷ್ಟು ವಿಮರ್ಶೆ ಬರೆಯಲೆತ್ನಿಸಿರುವ ವಿಮರ್ಶಕನೊಬ್ಬನ ವೃತ್ತಿ ಅಭದ್ರತೆಯ ಕಾರಣದಿಂದ ಹುಟ್ಟಿರುವ ಅಭಿಪ್ರಾಯಗಳು ಎಂದು ಸಹೃದಯರಾದ ತಾವು ಭಾವಿಸಲಾರಿರಿ ಎಂಬ ಅಭಯದಿಂದಲೇ ಕೆಲವು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಕನ್ನಡದ ಈ ಹೊತ್ತಿನ ಸಾಹಿತ್ಯ ವಿಮರ್ಶೆ ಎಂಬುದನ್ನು ಒಟ್ಟಾಗಿ ಕನ್ನಡದ ವೈಚಾರಿಕ ಬೌದ್ಧಿಕ ಪರಂಪರೆ ಎಂದು ವ್ಯಾಖ್ಯಾನಿಸಿಕೊಂಡು ಈ ಕುರಿತು ಕೆಲವು ಮಾತುಗಳನ್ನು ಹೇಳುವುದು ನನ್ನ ಉದ್ದೇಶವಾಗಿದೆ. ಸಮಕಾಲೀನ ಕನ್ನಡ ಸಾಹಿತ್ಯ ವಿಮರ್ಶೆಯ ಕುರಿತಾದ ಚರ್ಚೆಯಲ್ಲಿ ನಾನು ಶುದ್ಧಾಂಗ ವಿಮರ್ಶೆಗೆ ನನ್ನನ್ನು ಸೀಮಿತಗೊಳಿಸಿಕೊಳ್ಳಲು ಬಯಸುವುದಿಲ್ಲ. ಸಿ.ಎನ್. ಆರ್.ರಾವ್, ಟಿ.ಪಿ. ಅಶೋಕ, ಎಚ್.ಎಸ್. ರಾಘವೇಂದ್ರರಾವ್‍ರಂಥ ಮೊದಲಾದ ವಿಮರ್ಶಕರು ಹಿರಿಯ-ಕಿರಿಯ ಲೇಖಕರೆನ್ನದೆ ಕನ್ನಡದ ಹಲವು ಪ್ರಕಾರಗಳಲ್ಲಿ ಬರೆಯುತ್ತಿರುವ ಲೇಖಕರ ವಿಸ್ತೃತ ಅಧ್ಯಯನಗಳನ್ನು ಮುಂದುವರಿಸಿದ್ದಾರೆ. ಈಚಿನವರೆಗೆ ಕೇವಲ ಸಾಹಿತ್ಯ ಕೃತಿಗಳಿಗೆ ನಿಷ್ಠವಾದ ವಿಮರ್ಶೆ ಈಗ ಹಲವು ಆಯಾಮಗಳಲ್ಲಿ ವಿಸ್ತರಣೆಗೊಳ್ಳುತ್ತ ತನ್ನ ಸ್ವರೂಪವನ್ನು ಹಿಗ್ಗಿಸಿಕೊಂಡು ಸಂಸ್ಕೃತಿ ಚಿಂತನೆ, ನುಡಿಚಿಂತನೆ, ದೇಶೀ ಬದುಕಿನ ಪರ್ಯಾಯಗಳ ಹುಡುಕಾಟ, ಜಾಗತೀಕರಣ, ಪರಿಸರ ಚಿಂತನೆ, ಸಿನಿಮಾ ಸಂಸ್ಕೃತಿ, ಜಾತಿವಾದ-ಸೆಕ್ಯುಲರ್ ಸಿದ್ಧಾಂತಗಳ ಚರ್ಚೆ ಮೊದಲಾದ ಕಡೆ ನಿಧಾನವಾಗಿ ಹರಿಯುತ್ತ ಒಟ್ಟಂದದಲ್ಲಿ ವಿಶಾಲವಾದ ಕನ್ನಡ ಚಿಂತನೆಯೊಂದು ರೂಪುಗೊಳ್ಳುತ್ತಿರುವುದನ್ನು ನಾವು ಕಾಣಬಹುದು. ಅಲ್ಲದೆ, ಸಾಹಿತ್ಯದ ವ್ಯಾಖ್ಯಾನವೇ ಹಿಂದೆಂದೂ ಕಾಣದ ವಿಸ್ತಾರ-ವೈವಿಧ್ಯತೆಯನ್ನು ಪಡೆದುಕೊಳ್ಳುತ್ತಿರುವ ದಿನಗಳಲ್ಲಿ ಸಾಹಿತ್ಯವನ್ನು ಗ್ರಹಿಸುವ ಓದಿನ ಕ್ರಮಗಳು, ಸಮಾಜ-ಸಂಸ್ಕೃತಿಯನ್ನು ರೂಪಿಸುವ/ವಿಶ್ಲೇಷಿಸುವ ಕ್ರಮಗಳಲ್ಲಿಯೂ ಅಪಾರ ವೈವಿಧ್ಯತೆಗಳು ಇರುವುದು ಸಹಜವೇ ಆಗಿದೆ.

ಸಿದ್ಧಾಂತಗಳ ಚರ್ಚೆ ಬಹುಮುಖಿಯಾಗಿ ನಿಧಾನವಾಗಿ
ಹರಿಯುತ್ತ ಒಟ್ಟಂದದಲ್ಲಿ ವಿಶಾಲವಾದ ಕನ್ನಡ ಚಿಂತನೆಯೊಂದು ರೂಪುಗೊಳ್ಳುತ್ತಿರುವುದನ್ನು ನಾವು ಕಾಣಬಹುದು. ಅಲ್ಲದೆ, ಸಾಹಿತ್ಯದ ವ್ಯಾಖ್ಯಾನವೇ ಹಿಂದೆಂದೂ ಕಾಣದ ವಿಸ್ತಾರ-ವೈವಿಧ್ಯತೆಯನ್ನು ಪಡೆದುಕೊಳ್ಳುತ್ತಿರುವ ದಿನಗಳಲ್ಲಿ ಸಾಹಿತ್ಯವನ್ನು ಗ್ರಹಿಸುವ ಓದಿನ ಕ್ರಮಗಳು, ಸಮಾಜ-ಸಂಸ್ಕೃತಿಯನ್ನು ರೂಪಿಸುವ/ವಿಶ್ಲೇಷಿಸುವ ಕ್ರಮಗಳಲ್ಲಿಯೂ ಅಪಾರ ವೈವಿಧ್ಯತೆಗಳು ಇರುವುದು ಸಹಜವೇ ಆಗಿದೆ.

ಷ. ಶೆಟ್ಟರ್ ಅವರು ಈಚಿನ ದಶಕಗಳಲ್ಲಿ ಕನ್ನಡ ಸಂಸ್ಕೃತಿ -ಲಿಪಿಗಳನ್ನು ಕುರಿತು ಕೈಗೊಂಡಿರುವ ವಿಸ್ತೃತ ಅಧ್ಯಯನಗಳು, ಶಂಕರಭಟ್ಟರ ನುಡಿಚಿಂತನೆಯ ವ್ಯಾಪಕ ಬರಹಗಳು, ಪ್ರಸನ್ನ ಮೊದಲಾದವರು ಯಂತ್ರನಾಗರಿಕತೆ-ದೇಶೀ ಬದುಕಿನ ಪರ್ಯಾಯಗಳ ಕುರಿತು ನಡೆಸಿರುವ ಪ್ರಯೋಗಗಳು, ರಹಮತ್ ತರೀಕೆರೆ, ಮೊಗಳ್ಳಿ ಗಣೇಶ್, ಬೂದಾಳು ನಟರಾಜ್, ಕೃಷ್ಣಮೂರ್ತಿ ಹನೂರು ಮೊದಲಾದವರು ನಡೆಸುತ್ತಿರುವ ಸೂಫಿ, ಜಾನಪದ, ತತ್ವಪದಕಾರರು, ಅಲ್ಲಮ, ನಾಗಾರ್ಜುನ ಬುದ್ಧಚಿಂತನೆಗಳ ಹಿನ್ನೆಲೆಗಳಲ್ಲಿ ನಡೆಸುತ್ತಿರುವ ವಿವಿಧ ಮಾದರಿಯ ಸಂಸ್ಕೃತಿ ಅಧ್ಯಯನಗಳು, ದೇಸಿ ಅಧ್ಯಯನ, ಜಾತಿ ಮೀಮಾಂಸೆಯ ಮಾದರಿಗಳು; ಕೆವಿನಾರಾಯಣ   ಅವರು ಪಶ್ಚಿಮದ ಚಿಂತನಾಕ್ರಮಗಳಿಂದ ಬಿಡುಗಡೆ ಪಡೆಯಲು ನಡೆಸುತ್ತಿರುವ ಪ್ರಯತ್ನಗಳು; ಜಿ.ರಾಜಶೇಖರ, ರಾಜೇಂದ್ರ ಚೆನ್ನಿ, ಡಿ.ಎಸ್. ನಾಗಭೂಷಣ, ನಟರಾಜ ಹುಳಿಯಾರ್ ಮೊದಲಾದವರು ಕೋಮುವಾದ-ಸೆಕ್ಯುಲರಿಸಂ, ಅಭಿವೃದ್ಧಿ, ಮಾತೃಭಾಷೆ, ಸಮಾಜವಾದಿ ಸಿದ್ಧಾಂತಗಳ ಕುರಿತು ನಡೆಸುತ್ತಿರುವ ಚಿಂತನೆಗಳು; ಮನುಚಕ್ರವರ್ತಿ, ಕೆ. ಪುಟ್ಟಸ್ವಾಮಿ, ಫಣಿರಾಜ್, ಚ.ಹ.ರಘುನಾಥ ಅವರು ಸಿನಿಮಾಸಂಸ್ಕೃತಿ ಕುರಿತು ನಡೆಸುತ್ತಿರುವ ಚರ್ಚೆಗಳು, ನಾಗೇಶ ಹೆಗಡೆ, ಚಂದ್ರಶೇಖರ ನಂಗಲಿ ಮೊದಲಾದವರು ಜೀವಪರಿಸರವನ್ನು ಹಿನ್ನೆಲೆಯಾಗಿರಿಸಿಕೊಂಡು ನಡೆಸುತ್ತಿರುವ ಸಾಂಸ್ಕೃತಿಕ -ರಾಜಕೀಯ ಚಿಂತನೆಗಳು, ಮಡೆಸ್ನಾನದ ಕುರಿತು ನಡೆದ ವಾಗ್ವಾದಗಳು, ಎಸ್. ಎನ್. ಬಾಲಗಂಗಾಧರ ಅವರ ಪರಿವಾರವು ವಚನ ಸಾಹಿತ್ಯವನ್ನು ಕುರಿತು ನಡೆಸಿದ ಚರ್ಚೆಗೆ(ಪ್ರಜಾವಾಣಿಯಲ್ಲಿ ನಡೆದ ಜಾತಿ ಸಂವಾದ) ಪ್ರತಿಯಾಗಿ ಎಚ್.ಎಸ್.ಶಿವಪ್ರಕಾಶರಿಂದ ಆರಂಭಿಸಿ ಹಲವು ಲೇಖಕರು-ಚಿಂತಕರು ನಡೆದ ತುರುಸಿನ ಸಂವಾದಗಳು, ಗೌರಿ ಲಂಕೇಶ್-ಕಲ್ಬುರ್ಗಿಯವರ ಹತ್ಯೆಯ ನಂತರದ ಚರ್ಚೆಗಳು, ಸಿದ್ದರಾಮಯ್ಯನವರ ಅನ್ನಭಾಗ್ಯಯೋಜನೆ, ಮೋದಿ ಪ್ರಣೀತ ರಾಷ್ಟ್ರವಾದ- ಸದೃಢ ರಾಷ್ಟ್ರೀಯತೆಯ ಸುತ್ತ ನಡೆಯುತ್ತಿರುವ ವಾದವಿವಾದಗಳು- ಹೀಗೆ ಹಲವು ದಿಕ್ಕುಗಳಲ್ಲಿ ಹರಡಿರುವ ಚಿಂತನೆಗಳು ಪರಿಣಾಮದ ದೃಷ್ಟಿಯಿಂದ ಬಹಳ ಪ್ರಭಾವಶಾಲಿಯಾಗಿ ಕಾಣಿಸುವುದಿಲ್ಲ ಎಂಬುದು ಸರಿ. ಆದರೆ ಸತ್ವದ ದೃಷ್ಟಿಯಲ್ಲಿ ಅವು ನಿರಾಶಾದಾಯಕವಾಗಿ ಕಾಣುವುದಿಲ್ಲ ಎಂಬುದನ್ನು ಗಮನಿಸಬೇಕು.

ಮುಖ್ಯವಾಗಿ ಬಹುಮುಖಿಯಾಗಿ ರೂಪುಗೊಳ್ಳುತ್ತಿರುವ ಕನ್ನಡದ ಬೌದ್ಧಿಕ ಚಿಂತನೆಯನ್ನು ಕುರಿತು ಸಾರ್ವಜನಿಕ ವಲಯದಲ್ಲಿ ಉಂಟಾಗುತ್ತಿರುವ ಕಾವೇರಿದ ಚರ್ಚೆಗಳನ್ನು ಗಮನಿಸಿದರೆ ಅವು ಸಮಾಜದಲ್ಲಿ ಕೇವಲ ಉಗುರುಬೆಚ್ಚಗಿನ ಪರಿಣಾಮವನ್ನು ಮಾಡುತ್ತಿಲ್ಲ ಎಂಬುದನ್ನು ಅರಿಯಬೇಕಾಗಿದೆ. ಉದಾಹರಣೆಗೆ ಅನಂತಮೂರ್ತಿಯವರು, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಬಂದ ವಿರೋಧ ಅಥವಾ ಕಲ್ಬುರ್ಗಿಯವರ ಚಿಂತನೆಗಳಿಗೆ ಉಂಟಾದ ವಿರೋಧ ಮತ್ತು ಅವರ ದಾರುಣ ಹತ್ಯೆಯ ಘಟನೆಗಳನ್ನು ನೋಡಿದರೆ, ಕನ್ನಡ ಸಾಹಿತ್ಯ ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಹಲವು ಕವಲಾಗಿ ಹರಡಿರುವ ವೈಚಾರಿಕ-ಬೌದ್ಧಿಕ ವಿಚಾರ ಸರಣಿಗಳು ಸಮಾಜದ ಪಟ್ಟಬದ್ಧ ಹಿತಾಸಕ್ತಿಗಳಿಗೆ ಎಂಥ ಸವಾಲನ್ನು ಒಡ್ಡಬಲ್ಲವು ಎಂಬುದು ಗೊತ್ತಾಗುತ್ತದೆ. ಚಳವಳಿಗಳು ಕಣ್ಮರೆಯಾಗಿರುವ ಈ ದಿನಗಳಲ್ಲಿ, ಒಂದು ಕಾಲದಲ್ಲಿ ಚಳವಳಿಗಳು ರೂಪಿಸುತ್ತಿದ್ದ ಸಾಮಾಜಿಕ ದೃಷ್ಟಿಕೋನವನ್ನು ಹಲವು ಮಾದರಿಯ ಚಿಂತನಾಕ್ರಮಗಳು ಜೊತೆಗೂಡಿ ರೂಪಿಸುತ್ತಿವೆ. ಇಂಥ ವಿದ್ಯಮಾನಗಳ ನಡುವಿನಲ್ಲೇ ಈ ಹೊತ್ತಿನ ‘ಕನ್ನಡ ಚಿಂತನೆ’ ಏಕಕಾಲಕ್ಕೆ ಎಂಥ ಬಗೆಯ ಸವಾಲುಗಳನ್ನು ಎದುರು ಹಾಕಿಕೊಳ್ಳುವ ಸನ್ನದ್ಧತೆಯನ್ನು ತೋರಿಸುತ್ತಿದೆ ಎಂಬುದನ್ನು ಗುರುತಿಸಬೇಕಾಗಿದೆ. ಈ ಕಾರಣಕ್ಕಾಗಿಯೇ ‘ಕನ್ನಡ ಚಿಂತನೆ’ಯೆಂಬ ‘ಹಲವು ಮರಗಳ ಕಾಡು’ ಈ ಹೊತ್ತಿನ ಸೃಜನಶೀಲ ಸಾಹಿತ್ಯದಂತೆಯೇ ವಿಶಾಲವಾದ ವ್ಯಾಪ್ತಿಯನ್ನು ನಿಧಾನಕ್ಕೆ ಪಡೆದುಕೊಳ್ಳುತ್ತಿರುವಂತೆ ಕಾಣುತ್ತದೆ.

ಇನ್ನು ನಿರ್ದಿಷ್ಟವಾಗಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮಾತನಾಡುವುದಾದರೆ, ನವ್ಯಚಳವಳಿಯ ಕಾಲದಲ್ಲಿ ಬಹಳ ಪ್ರಭಾವಶಾಲಿ ಸಾಹಿತ್ಯಕ ‘ಸಂಸ್ಥೆ’ಯಾಗಿದ್ದ ವಿಮರ್ಶೆ ಈಚಿನ ದಿನಗಳಲ್ಲಿ ಒಂದು ‘ತೆರೆದ ಚಿಂತನೆ’ಯಾಗಿ, ‘ಸಂಕಥನ’ವಾಗಿ (ಅದಕ್ಕಿರುವ ಮಿತಿಗಳು ಏನೇ ಇರಲಿ) ರೂಪುಗೊಂಡಿದೆ. ಹಾಗಿದ್ದರೂ ಇಂದಿನ ವಿಮರ್ಶೆಯನ್ನು ‘ಸಂಸ್ಥೆ’ಯೆನ್ನಬೇಕೋ ಅಥವಾ ಒಂದು ‘ಅಧ್ಯಯನ ಶಿಸ್ತು’ ಎನ್ನಬೇಕೋ ಎಂಬ ಕುರಿತು ರಾಜೇಂದ್ರ ಚೆನ್ನಿ-ಡಿ.ಎಸ್.ನಾಗಭೂಷಣ ಅವರ ಬರಹಗಳಲ್ಲಿ ಆಳವಾದ ಚರ್ಚೆ ನಡೆದಿದೆ. ಚೆನ್ನಿಯವರು ಸೂಚಿಸುವಂತೆ ವಿಮರ್ಶೆಯೆಂಬುದು ಈಚಿನ ದಿನಗಳಲ್ಲಿ ಸಾಂಸ್ಥೀಕರಣಗೊಂಡು ಹೆಚ್ಚು ಹೆಚ್ಚು ಮಠೀಯವಾಗುತ್ತ ಸಾಹಿತ್ಯದ ಸ್ವಾಯತ್ತತೆಯನ್ನು ಕಬಳಿಸಿಬಿಡುವ ಸನ್ನಾಹದಲ್ಲಿದೆ. ಉಗ್ರ ಸಾಮಾಜಿಕತೆ, ಸೈದ್ಧಾಂತಿಕತೆಗಳು ಕೃತಿಗಳ ಸೃಜನಶೀಲ ಒರತೆಗಳನ್ನು ಇಂಗಿಸಿಬಿಡುತ್ತದೆ ಎಂಬುದು ನಿಜವಾದರೂ ಪಶ್ಚಿಮದ ದೇಶಗಳು-ವಿಶ್ವವಿದ್ಯಾಲಯಗಳಲ್ಲಿ ಆಗಿರುವಂತೆ ಸಾಹಿತ್ಯವಿಮರ್ಶೆ ‘ಲಿಟರೆರಿ ಥಿಯರಿ’ಯ ಸೈದ್ಧಾಂತಿಕ ಬಿರುಸನ್ನು ಪಡೆದುಕೊಂಡು ಸೃಜನಶೀಲ ಕೃತಿಗಳ ಸ್ವರೂಪ, ನಿರೂಪಣೆ, ಲೋಕದೃಷ್ಟಿಗಳನ್ನೇ ನಿಯಂತ್ರಿಸಿಬಿಡುವ ಹಾದಿಯಲ್ಲಿ ಸಮಕಾಲೀನ ಕನ್ನಡ ವಿಮರ್ಶೆ ಸಾಗುತ್ತಿಲ್ಲ ಎಂಬುದು ಸಮಾಧಾನದ ಸಂಗತಿ.

ಅಲ್ಲದೆ ಕನ್ನಡದ ಈ ಕಾಲದ ವಿಮರ್ಶೆ ಮೇಲ್ನೋಟಕ್ಕೆ ತನ್ನನ್ನು ‘ನವ್ಯೋತ್ತರ’ವೆನ್ನಬೇಕೋ ‘ಆಧುನಿಕೋತ್ತರ’ವೆನ್ನಬೇಕೋ, ‘ದಲಿತಬಂಡಾಯೋತ್ತರ’ವೆನ್ನಬೇಕೋ ಎಂಬ ಸ್ವನಿರೂಪಣೆಯ ಗೊಂದಲದಲ್ಲಿಯೇ ಸಿಲುಕಿದಂತೆ ಕಂಡರೂ, ಅದು ಕನ್ನಡ ವಿಮರ್ಶೆಯ ಕಾರ್ಯಸೂಚಿ ಎಷ್ಟು ಅನಿರ್ದಿಷ್ಟವಾಗಿದೆ ಎಂಬುದರ ಸೂಚಕವೂ ಆಗಿ ಕಾಣಿಸುತ್ತದೆ.

ಇನ್ನು ಪ್ರಾತಿನಿಧಿಕವಾಗಿ ಕೆಲವು ಅಧ್ಯಯನ/ವಿಮರ್ಶಾ ಮಾದರಿಗಳ ಬಗೆಗೆನ ಕೆಲವು ಸಂಗತಿಗಳನ್ನು ಪ್ರಸ್ತಾಪಿಸಬಹುದು. ಈಚಿನ ದಶಕಗಳಲ್ಲಿ ಸಂಸ್ಕೃತಿ ಅಧ್ಯಯನ ಹಾಗೂ ಸ್ತ್ರೀವಾದಿ ವಿಮರ್ಶೆಯ ಮಾದರಿಗಳು ಪ್ರಭಾವಶಾಲಿಯಾಗಿ ಬೆಳೆದಿರುವುದು ನಿಜವಾಗಿದೆ. ಸಂಸ್ಕೃತಿ ಅಧ್ಯಯನದ ಫಲವಾಗಿ ಕರ್ನಾಟಕದ ಬಹುಮಖಿತ್ವದ ಸ್ವರೂಪ ನಮಗೆ ದಕ್ಕುವಂತಾಗಿದೆ. ಆದರೆ ಕನ್ನಡದಲ್ಲಿ ದೊರೆಯುವ ಸಂಸ್ಕೃತಿ ಅಧ್ಯಯನದ ಮಾದರಿಗಳಲ್ಲಿ, ಕೆಲವು ಅತ್ಯುತ್ತಮ ಉದಾಹರಣೆಗಳನ್ನು ಹೊರತುಪಡಿಸಿ, ಕ್ಷೇತ್ರಕಾರ್ಯದ ದಟ್ಟ ವಿವರಗಳು ದೊರಕುತ್ತವೆ. ಆದರೆ ಅವುಗಳ ಮೂಲಕ ನಮ್ಮಲ್ಲಿ ಈಗಾಗಲೇ ನೆಲೆಯೂರಿರುವ ಚರಿತ್ರೆಯ ಪೂರ್ವಗ್ರಹಗಳನ್ನು ಅಳಿಸುವ, ಯಜಮಾನ್ಯದ ನೆಲೆಗಳನ್ನು ಧಿಕ್ಕರಿಸಿ ಮಾನವೀಯ ಸಂಬಂಧಗಳನ್ನು ಪುನರ್ ಸೃಷ್ಟಿಸುವ, ಆಧುನಿಕತೆ ತಂದೊಡ್ಡಿರುವ ವಿಕಾರಗಳಿಗೆ ನಿರ್ಣಾಯಕ ಪರ್ಯಾಯವನ್ನು ಸೂಚಿಸುವಷ್ಟು ಪರಿಣಾಮಕಾರಿಯಾಗಿಲ್ಲ. ಅವುಗಳಲ್ಲಿ ಬಹುಪಾಲು ಕೇವಲ ಅಕೆಡೆಮಿಕ್ ಆಸಕ್ತಿಗಳನ್ನು ಪೂರೈಸುವಂತಿವೆ. ಇನ್ನು ಸ್ತ್ರೀವಾದಿ ಚಿಂತನೆ ಮುಖ್ಯವಾಗಿ- ಆಶಾದೇವಿಯವರು ತಮ್ಮ ಲೇಖನವೊಂದರಲ್ಲಿ ಹೇಳುವಂತೆ-‘ಸ್ತ್ರೀವಾದಿ ಎನ್ನುವಾಗ ಅವರನ್ನು ಸಾಧಾರಣೀಕರಣಗೊಳಿಸುತ್ತಿದ್ದೇವೆಯೋ? ಪ್ರತ್ಯೇಕಿಸುತ್ತಿದ್ದೇವೆಯೋ? ಅಥವಾ ಅವರನ್ನು essentialize ಮಾಡುತ್ತಿದ್ದೇವೆಯೋ?’ ಎಂಬ ಜಿಜ್ಞಾಸೆಯಲ್ಲಿ ತೊಡಗಿದೆ. ಹಾಗೆಯೇ ಮುಂದುವರಿದು ಸ್ತ್ರೀವಾದಿ ಮೀಮಾಂಸೆಯು ಲಿಂಗರಾಜಕಾರಣದ ಅಮೂರ್ತ ಕಾರ್ಯತಂತ್ರಗಳನ್ನು ಬಯಲುಮಾಡುವ ಯತ್ನದಲ್ಲಿ ತೊಡಗಿದೆ ಎನ್ನುತ್ತಾರೆ. ಪಿತೃಪ್ರಧಾನ ವ್ಯವಸ್ಥೆಯ ಎಲ್ಲ ದಿಗ್ಬಂಧನಗಳ ಆಚೆಯೂ ಹೆಣ್ಣಿನ ಅನನ್ಯತೆಯ ಪ್ರತಿಪಾದನೆ, ದಮನಗೊಳಿಸಲಾಗುವ ಅವಳ ಲೈಂಗಿಕತೆಯನ್ನೇ ಶಕ್ತ ಪ್ರತಿರೋಧದ ಮಾದರಿಯನ್ನಾಗಿ ಎತ್ತಿಹಿಡಿಯುವ ಚರ್ಚೆಗಳು ಇಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಲಿಂಗರಾಜಕಾರಣ, ಗಂಡು ಹೆಣ್ಣಿನ ಅಸಮಾನತೆ, ಸ್ತ್ರೀ ಅನನ್ಯತೆ, ಅವಳ ಲೈಂಗಿಕತೆಯ ಅಭಿವ್ಯಕ್ತಿ ಇವೇ ಮೊದಲಾದ ಸ್ಥಾಪಿತ ಮಾದರಿಗಳಾಚೆ ನಡೆದು ಮೇಧಾ ಪಾಟ್ಕರ್, ಅರುಂಧತಿ ರಾಯ್, ವಂದನಾಶಿವ, ತೀಸ್ತಾ ಸೆಟಲ್‍ವಾಡ್ ಮೊದಲಾದ ಹೋರಾಟಗಾರ್ತಿಯರು ಸ್ತ್ರೀಚಿಂತನೆಗೆ ಹೊಸ ವಿಸ್ತಾರವನ್ನು ನೀಡುತ್ತಿದ್ದಾರೆ.

ಇವರು ಬೃಹತ್ ಅಣೆಕಟ್ಟು ಯೋಜನೆಗಳು, ಅಭಿವೃದ್ಧಿ ರಾಜಕಾರಣ, ಬೀಜ ಸಂರಕ್ಷಣೆ, ಮತಾಂಧತೆ, ಪರಿಸರ ಸಂರಕ್ಷಣೆ, ರಾಷ್ಟ್ರೀಯತೆಯಂಥ ಹಲವು ವಿಚಾರಗಳನ್ನು ಬಹಳ ತೀವ್ರವಾಗಿ ಚರ್ಚಿಸುವ ಮೂಲಕ, ಹೆಣ್ಣಿನ ಮನೋವಿಸ್ತಾರಕ್ಕೆ ಪಿತೃಪ್ರಧಾನ ವ್ಯವಸ್ಥೆ ಹೇರಿದ್ದ ನಿರಂತರ ದಿಗ್ಬಂಧನಗಳನ್ನು ಉಲ್ಲಂಘಿಸಿ ಸ್ತ್ರೀವಾದಿ ಚಿಂತನೆಗಳಿಗೆ ಹೊಸ ಆಯಾಮಗಳನ್ನು ಜೋಡಿಸುತ್ತಿದ್ದಾರೆ. ಈಚಿನ ದಿನಗಳಲ್ಲಿ ಕನ್ನಡದಲ್ಲಿ ಲಿಂಗ ಅಸಮಾನತೆ, ತನ್ನ ಲೈಂಗಿಕತೆಯನ್ನೇ ರೋಚಕ ಪ್ರತಿರೋಧದ ಮಾದರಿಯಾಗಿ ಅಭಿವ್ಯಕ್ತಿಸುವ ಬರಹಗಳನ್ನು ಚರ್ಚಿಸಿದಷ್ಟು, ಸ್ತ್ರೀವಾದಿ ಚಿಂತನೆಯ ಪ್ರಚಲಿತ ಮಾದರಿಗಳ ಆಚೆ ಬರೆದ ನೇಮಿಚಂದ್ರರಂಥ ಲೇಖಕಿಯರ ಬಹಳ ವೈವಿಧ್ಯಮಯ ಹಾಗೂ ಸತ್ವಶಾಲಿ ಬರಹಗಳನ್ನು ಸ್ತ್ರೀವಾದಿ ಚಿಂತಕರು ಹೆಚ್ಚಾಗಿ ಗಮನಿಸಿಲ್ಲ. ಹಾಗಾಗಿ ಕನ್ನಡದ ಸ್ತ್ರೀವಾದಿ ಚಿಂತನೆ ಹೆಣ್ಣಿನ ಅಸಮಾನತೆ, ಅನನ್ಯತೆ, ಲೈಂಗಿಕ ಶೋಷಣೆಗಳನ್ನು ಮೀರಿದ ನೆಲೆಯಲ್ಲಿ, ಇತರ ಚಳವಳಿ ಸಿದ್ಧಾಂತಗಳಂತೆ ಸ್ವತಂತ್ರ ಅಸ್ತಿತ್ವಕ್ಕಾಗಿ ಹೋರಾಡುವ ಚಿಂತನೆಯಾಗಿ ಬೆಳೆದಿಲ್ಲ. ಹಾಗೆಯೇ ಕರ್ನಾಟಕದ ಪರಿಸರವಾದಿ ಚಳುವಳಿ ರೈತಚಳುವಳಿಗಳು ಬಹಳ ಪ್ರಭಾವಶಾಲಿಯಾಗಿ ನೆಲೆಯೂರಿದ್ದರೂ ನಾಗೇಶ ಹೆಗಡೆ, ನಂಗಲಿ ಮೊದಲಾದವರನ್ನು ಹೊರತು ಪಡಿಸಿ ಇಕೋಕ್ರಿಟಿಸಿಸಮ್ ಬಹಳ ಮುಖ್ಯವಾದ ಚಿಂತನಾ ಪ್ರಮೇಯವಾಗಿ ಹೊರಹೊಮ್ಮಿಲ್ಲ.

ಕೊನೆಯದಾಗಿ, ಇತ್ತೀಚೆಗೆ ರಾಜೇಂದ್ರ ಚೆನ್ನಿಯವರು ‘ಸಿದ್ಧಾಂತಗಳ ಪಡಿನೆಳಲಲ್ಲಿ’ ಹಾಗೂ ‘ಸಂಶೋಧನೆ ಅಧ್ಯಯನ’ ಮೊದಲಾದ ಲೇಖನಗಳಲ್ಲಿ ಕನ್ನಡ ಚಿಂತನೆ ಹಾಗೂ ಸಂಶೋಧನೆಗಳಿಗೆ ಎದುರಾಗಿರುವ ತೊಡಕುಗಳನ್ನು ಬಹಳ ದೀರ್ಘವಾಗಿ ಚರ್ಚಿಸಿದ್ದಾರೆ. ಈಚಿನ ದಿನಗಳಲ್ಲಿ ಶೈಕ್ಷಣಿಕ ಕಾರಣಗಳಿಗಾಗಿ ಸಾಹಿತ್ಯ ಸಂಶೋಧನೆ ದೊಡ್ಡ ಪ್ರಮಾಣದಲ್ಲಿ ನಡೆದರೂ ಗುಣಮಟ್ಟದ ದೃಷ್ಟಿಯಿಂದ ಬಹಳ ಕಳಪೆಯಾಗಿದೆ. ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಭಾಷೆ ಹಾಗೂ ಮಾನವಿಕ ಶಿಸ್ತುಗಳ ನಡುವೆ ಸಂಬಂಧವೇ ಇಲ್ಲದಂಥ ಸ್ಥಿತಿ ಉಂಟಾಗಿರುವುದು ಇದಕ್ಕೆ ಮುಖ್ಯ ಕಾರಣ ಎಂಬುದು ಅವರ ಅಭಿಪ್ರಾಯ. ಪ್ರಪಂಚದ ಎಲ್ಲ ಕಡೆ ಜ್ಞಾನ ಕ್ಷೇತ್ರಗಳ ನಡುವಿನ ಗಡಿರೇಖೆಗಳನ್ನು ಉಲ್ಲಂಘಿಸಿ ಅತ್ಯಂತ ಅರ್ಥಪೂರ್ಣ ಅಧ್ಯಯನಗಳು ನಡೆಯುತ್ತಿರುವಾಗ ಜ್ಞಾನದ ಕೇಂದ್ರಗಳಾದ ವಿಶ್ವವಿದ್ಯಾಲಯಗಳು ಅತ್ಯಂತ parochial(ಪೆರೋಕಿಯಲ್) ಆಗುತ್ತಿವೆ ಎಂದು ಅವರು ವಿಷಾದಿಸಿದ್ದಾರೆ. ಇದು ಕನ್ನಡ ಸಾಹಿತ್ಯ ವಿಮರ್ಶೆಗೂ ಅನ್ವಯವಾಗುವ ಮಾತು ಎಂದು ಬಿಡಿಸಿಹೇಳಬೇಕಾಗಿಲ್ಲ. ಮುಂದುವರೆದು ಚೆನ್ನಿಯವರು ಸಾಮಾಜಿಕ ಸಿದ್ಧಾಂತಗಳ ಮಣಭಾರದಿಂದ ಸಾಹಿತ್ಯ ವಿಮರ್ಶೆ ಕೃತಿಗಳನ್ನು ಗ್ರಹಿಸುವ/ಅರ್ಥೈಸುವ ಸ್ವಾಯತ್ತತೆಯನ್ನೇ ಕಳೆದುಕೊಂಡಿದೆಯೇನೋ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಚೆನ್ನಿಯವರು ವ್ಯಕ್ತಪಡಿಸುತ್ತಿರುವ ಆತಂಕಗಳಿಗೆ ಬಲವಾದ ಕಾರಣಗಳಿವೆ ಎಂಬುದೇನೋ ನಿಜ. ಅದರೆ ಕನ್ನಡವಿಮರ್ಶೆಯ ಸುದೈವವೋ ಏನೋ, ಪಶ್ಚಿಮದಲ್ಲಿ ಬಹಳ ಪ್ರಭಾವಶಾಲಿಯಾಗಿ ಒಂದರ ಮೇಲೊಂದು ಅಪ್ಪಳಿಸುವಂತೆ ಬಂದ ವಿಮರ್ಶಾಮಾದರಿಗಳು ಕನ್ನಡದಲ್ಲಿ ಒಂದಾದ ಮೇಲೊಂದರಂತೆ ಬಂದು ನೆಲೆಯೂರರಲಿಲ್ಲ. ಹಾಗೆ ನೋಡಿದರೆ, ನವ್ಯವಿಮರ್ಶೆ ಹಾಗೂ ಎಡ ಪಂಥೀಯ ವಿಮರ್ಶಾ ಮಾರ್ಗಗಗಳನ್ನು ಹೊರತುಪಡಿಸಿ, ಪೋಸ್ಟ್ ಸ್ಟ್ರಕ್ಚರಲಿಸಂ, ಡಿಕನ್ಸ್‍ಸ್ಟ್ರಕ್ಷನ್, ರೀಡರ್ಸ್ ರೆಸ್ಪಾನ್ಸ್ ಥಿಯರಿ, ಲಿಟರರಿ ಥಿಯರಿ ಮೊದಲಾವುಗಳು ಕನ್ನಡದಲ್ಲಿ ಪ್ರಭಾವಶಾಲಿಯಾಗಿ ಬೆಳೆಯಲಿಲ್ಲ. ಯಾವುದೋ ಒಂದು ಪಂಥಕ್ಕೆ ಕಟ್ಟುಬಿದ್ದು ಕನ್ನಡ ವಿಮರ್ಶೆ ತನ್ನ ಬಹುಮುಖೀಯವಾದ ಮೂಲಭೂತ ಗುಣವನ್ನು ಬಿಟ್ಟುಕೊಟ್ಟಿಲ್ಲ ಎಂಬ ಕನ್ನಡ ವಿಮರ್ಶೆಯ ವಿವೇಕವೇ ಎಲ್ಲ ಆತಂಕಗಳ ನಡುವೆ ಸಮಾಧಾನ ತರುವ ಸಂಗತಿಯಾಗಿದೆ.