Advertisement
ಕಪ್ಪು ಬಿಳುಪಿನಾಚೆಯ…. ಇರಟ್ಟ

ಕಪ್ಪು ಬಿಳುಪಿನಾಚೆಯ…. ಇರಟ್ಟ

ಕೊನೆಗೂ ವಿನೋದ್ ಸತ್ತಿದ್ದು ಹೇಗೆ?! ಊರ ತುಂಬ ಶತ್ರುಗಳನ್ನು ಸಂಪಾದಿಸಿದ ಅವನನ್ನು ಅವನು ಕೆಲಸ ಮಾಡುವ ಸ್ಟೇಷನ್ನಿನಲ್ಲಿಯೇ ಸಾಯಿಸಿದವರು ಯಾರು?! ಎನ್ನುವುದು ಚಿತ್ರದ ಕಥಾ ಹಂದರ. ಚಿತ್ರವನ್ನು ಮತ್ತೆ ಮತ್ತೆ ನೋಡುತ್ತಾ, ಅದು ಹೇಳುತ್ತಿರುವ ವಿಷಯವನ್ನು ಬಗೆಯುತ್ತಾ ಹೋದರೆ ಪ್ರತಿ ಸಲವೂ ಹೊಸ ಹೊಸ ಆಯಾಮಗಳು ಹೊಳೆಯುತ್ತವೆ, ಮನುಷ್ಯನ ಎರಡು ವೈರುಧ್ಯಗಳನ್ನ ಯಾವ ಅವಸರವಿಲ್ಲದೆ ಬೆನ್ನಲ್ಲೊಂದು ಛಳುಕು ಹುಟ್ಟಿಸುತ್ತ ಸಾಗುತ್ತದೆ. ಮನುಷ್ಯನಿಗೆ ಒಂದೊಳ್ಳೆ ಬಾಲ್ಯದ ಅವಶ್ಯಕತೆ ಬಗ್ಗೆ ಇಡೀ ಚಿತ್ರ ಮಾತಾಡುತ್ತದೆ. ಕಡೆಯ ೧೨ ನಿಮಿಷವಂತೂ ನಮ್ಮನ್ನು ಬೆಚ್ಚಿಬೀಳಿಸಿ ಬಹಳ ದಿನಗಳವರೆಗೂ ಕಾಡುತ್ತದೆ.
ಮಲಯಾಳಂನ “ಇರಟ್ಟ” ಸಿನೆಮಾದ ಕುರಿತು ಜಯರಾಮಚಾರಿ ಬರಹ ನಿಮ್ಮ ಓದಿಗೆ

ಇತ್ತೀಚೆಗೆ ಫೇಸ್ಬುಕ್ಕಿನಲ್ಲಿ ಒಂದು ಪೋಸ್ಟ್ ನೋಡಿದೆ, ಮಲಯಾಳಂ ಸಿನಿಮಾಗಳನ್ನು ಹೊತ್ತು ಮೆರೆಸಲಾಗುತ್ತಿದೆ, ಅವಶ್ಯವಿಲ್ಲ ಅಂತ. ಕೆಲವು ಸಿನಿಮಾಗಳನ್ನು ಹೊತ್ತು ಮೆರೆಸಿದ್ದುಂಟು, ಆದರೆ ಮಲಯಾಳಂನ ಕೆಲವು ಸಿನಿಮಾಗಳು ಹೊತ್ತು ಮೆರೆಸಲು ಅರ್ಹವಾಗಿವೆ, ಅಂತಹ ಒಂದು ಚಿತ್ರವೇ ‘ಇರಟ್ಟ’, ಯಾವ ಅವಸರವಿಲ್ಲದೆ ಯಾವ ಡೋಪಮೈನ್ ಹ್ಯಾಕಿಲ್ಲದೆ ಸಾವಧಾನವಾಗಿ ಕಟ್ಟಿಕೊಟ್ಟಿರುವ ಸಿನಿಮಾ.

ಹೊಸದಾಗಿ ಉದ್ಘಾಟನೆಗೆ ಸಿದ್ಧತೆಯಲ್ಲಿರುವ ಪೋಲಿಸ್ ಸ್ಟೇಷನ್. ಅಲ್ಲಿನ ಗಾರ್ಡು ಅಲ್ಲಿನ ಆಫೀಸರುಗಳು ಅದರ ಸಂಭ್ರಮದ ತಯಾರಿಯಲ್ಲಿ ಬ್ಯುಸಿ. ಇಬ್ಬರು ಲೇಡಿಗಾರ್ಡುಗಳು ಪ್ರಾರ್ಥನೆಯನ್ನ ಪ್ರಾಕ್ಟೀಸು ಮಾಡುತ್ತಿದ್ದರೆ, ಪೋಲಿಸ್ ವ್ಯಾನಿನ ಡ್ರೈವರು ಮೈಕ್ ಚೆಕ್ ಮಾಡ್ತಾ ಇದ್ದಾನೆ, ಹೊಸ ಹೆಂಡತಿಯಿಂದ ಬದುಕು ಬದಲಾಗುತ್ತಿರುವ ಖುಷಿಯಲ್ಲಿರುವ ಎ.ಎಸ್.ಐ. ವಿನೋದ್ ಖುಷಿಯಿಂದ ತನ್ನ ಗೆಳೆಯರಿಗೆ ಕಾಲ್ ಮಾಡಿ ಬ್ರೇಕ್ ತೆಗೆಕೊಳ್ತೀನಿ ಅಂದಾಗ ಅವರ ಗೆಳೆಯರು ಅವನನ್ನು ಕಿಚಾಯಿಸುತ್ತಿದ್ದಾರೆ, ಪೋಲಿಸ್ ಒಬ್ಬನಿಗೆ ಹೆಂಡತಿಯ ಕಿರಿಕಿರಿಯ ಕರೆಗೆ ಕಿರುಚಾಡಿ ಗುಂಡು ಹಾಕುತ್ತಿದ್ದರೆ, ಇನ್ನೊಬ್ಬ ಗಾರ್ಡ್‌ಗೆ ನಿಸರ್ಗದ ಕರೆ , ಅರ್ಜೆಂಟಲ್ಲಿ ಬಂದೂಕನ್ನ ನೋಡಿಕೊಳ್ಳಿ ಎಂದೇಳಿ ಹೋಗುವನು, ಇದೆಲ್ಲದರ ಮಧ್ಯೆ ಕಳೆದು ಹೋದ ನಾಯಿ ಬಗ್ಗೆ ಕಂಪ್ಲೇಂಟು ಕೊಡುತ್ತಿರುವ ದಂಪತಿ, ಪೋಲಿಸರ ಖಾಯಂ ಅತಿಥಿ ಕಳ್ಳನೊಬ್ಬ ಸೆಲ್ ಒಳಗೆ ಇಂದ ಬೇಡಿಕೊಳ್ಳುತ್ತಿದ್ದಾನೆ, ಸ್ಟೇಷನ್ ಆಚೆಗೊಂದು ಮೈದಾನವಲ್ಲದ ಮೈದಾನದಲ್ಲಿ ಇಬ್ಬರು ಚಿಕ್ಕಮಕ್ಕಳು ಕ್ರಿಕೆಟ್ ಆಡುತ್ತಿದ್ದಾರೆ. ಬಾಲ್ ಬಾಯ್ ಆಗಿ ನಾಯೊಂದು ಇದೆ, ಆ ಹುಡುಗ ಬಾಲ್ ಹೊಡೆದರೆ ಅದು ಪೋಲಿಸ್ ಕಾಂಪೌಂಡ್ ಒಳಗೆ ಬೀಳುತ್ತಲೇ, ಹುಡುಗ ಬಾಲನ್ನು ಅರಸಿ ಕಾಂಪೌಂಡ್ ಹಾರುತ್ತಾನೆ.

ಇದ್ದಕ್ಕಿದ್ದಂತೆ ಬಂದೂಕು ಗುಂಡಿನ ಸದ್ದು.
ಢಮ್! ಢಮ್! ಢಮ್!

ಪೋಲಿಸ್ ಸ್ಟೇಷನ್ ಒಳಗೆ ಎಎಸ್ ಐ ವಿನೋದ್ ಸತ್ತು ಬಿದ್ದಿದಾನೆ… ಆ ರೂಮಿನಲ್ಲಿನ ಟಿವಿಯಲ್ಲಿ ಯಾವುದೋ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ.

“ಇರಟ್ಟ” ಎಂಬ ಸ್ಲೊ ಬರ್ನರ್ ಸಿನಿಮಾ ಶುರುವಾಗೋದು ಹೀಗೆ. ಒಂದೊಳ್ಳೆ ಸಿನಿಮಾಕ್ಕೆ ಒಂದೊಳ್ಳೆ ಆರಂಭ ಇರುತ್ತೆ, ಇದೊಂದು ಸಾವಿನ ಸುತ್ತ ಇನ್ವೆಷ್ಟಿಗೇಷನ್ ಕತೆಯುಳ್ಳ ಸಿನಿಮಾ.

ವಿನೋದನನ್ನ ಸಾಯಿಸಿದವರ್ಯಾರು ಎಂಬ ಪ್ರಶ್ನೆ? ಅವನು ಸತ್ತಾಗ ಒಳಗೆ ಇದ್ದುದು ಬ್ರಿಜೇಶ್, ಜಾನ್ಸನ್, ಸಂದೀಪ್ ಮತ್ತು ಸೆಲ್ ಒಳಗಿರುವ ಕಳ್ಳ.

ಇವರನ್ನ ಒಬ್ಬೊಬ್ಬರನ್ನಾಗಿ ವಿಚಾರಿಸುತ್ತಾ ಹೋದಂತೆ ವಿನೋದ್ ಎಂಬ ವ್ಯಕ್ತಿ ಕೂಡ ಬಿಚ್ಚಿಕೊಳ್ಳುತ್ತ ಹೋಗುತ್ತಾನೆ. ಮೂವರಿಗೂ ವಿನೋದ್ ಜೊತೆ ಒಂದಲ್ಲ ಒಂದು ಕಿತ್ತಾಟ ರಾದ್ಧಾಂತವಾಗಿರುವ ವಿಷಯ ತಿಳಿಯುತ್ತದೆ. ಅವರುಗಳ ಹೇಳಿಕೆಯಿಂದ ವಿನೋದ್ ಒಬ್ಬ ಕುಡುಕನೂ ಹೆಂಗಸಿನ ಹುಚ್ಚಿನವನೂ ಮತ್ತು ಅತ್ಯಂತ ಸಿಡುಕಿನ ಮನುಷ್ಯನೂ ಹೌದು ಎಂಬುದು ಗೊತ್ತಾಗುತ್ತದೆ.

ಈ ವಿಚಾರಣೆಯಲ್ಲೇ ಒಂದು ಸಲ ಕುಡಿದು ಜಗಳವಾಡಿ ಲಾಡ್ಜಿಗೆ ಬಂದ ಪ್ರೇಮಿಗಳ ಮಧ್ಯ ಗಲಾಟೆಯಾದಾಗ, ವಿನೋದ್ ಅಲ್ಲಿದ್ದ ಹುಡುಗಿಯನ್ನ ರೇಪ್ ಮಾಡಿರುವ ವಿಷಯ ಹೊರಬಿದ್ದು, ಅದು ಮುಚ್ಚಿಹೋಗಿರುವುದು ಗೊತ್ತಾಗುತ್ತದೆ.

ಪೋಲಿಸ್‌ ಸಾವಿನ ಘಟನೆ ನಡೆದ ಸ್ಥಳದಲ್ಲಿ ಮೂವರು ಸಹೋದ್ಯೋಗಿಗಳು ಕೂಡ ಇದ್ದು ಆ ಮೂವರಿಗೂ ವಿನೋದ್ ಜೊತೆ ಕಹಿ ಸಂಬಂಧ ಇರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.

ಆ ಘಟನೆ ನಡೆಯುವಾಗ ವಿನೋದ್‌ನ ಅವಳಿ ಅಣ್ಣ ಪ್ರಮೋದ್ ಪ್ಯಾನಿಕ್ ಅಟ್ಯಾಕ್ ಆಗಿ ಆಸ್ಪತ್ರೆಯಲ್ಲಿರುತ್ತಾನೆ, ಅವನ ಹೆಂಡತಿ, ಯಾವಾಗಲೋ ತನ್ನ ಪುಟ್ಟ ಮಗಳ ಸಮೇತ ಇವನನ್ನು ಬಿಟ್ಟು ಹೋಗಿದ್ದಾಳೆ. ಹದಿನೇಳು ವರ್ಷಗಳ ಹಿಂದೆ ಕುಡಿತಕ್ಕೆ ಬಿದ್ದು ಕೆಟ್ಟ ಗಂಡನಾಗಿದ್ದ ಪ್ರಮೋದ್ ಕಾಲದ ಹೊಡೆತದಲ್ಲಿ ಪ್ರಬುದ್ಧನಾಗಿರುತ್ತಾನೆ. ಅವನೀಗ ಡಿವೈಎಸ್ಪಿ. ಅವನ ಗುಣಗಳಿಗೆ ವಿರುದ್ಧವಾದ ನಡವಳಿಕೆಯುಳ್ಳ ವಿನೋದ್ ಅವನ ಅವಳಿ ತಮ್ಮ ಮತ್ತು ಅದೇ ಸ್ಟೇಷನ್ನಿನ ಎಎಸ್ಐ. ಆತನೇ ಸತ್ತಿರೋದು. ಸತ್ತವನ ಹೊಸ ಹೆಂಡತಿ ವಿಚಾರಣೆಗೆ ಕರೆದಾಗ ಆಕೆ ಹೇಳೋದು ಒಂದೇ “ಅವರು ಯಾರನ್ನಾದರೂ ದ್ವೇಷಿಸುವುದಾಗಿದ್ದರೆ ಅದು ಇವರನ್ನ ಮಾತ್ರ” ಎಂದು.

ಚಿತ್ರಕಥೆ ಸಾಗುತ್ತಿರುವಾಗ ತಮ್ಮ ಅಣ್ಣನನ್ನು ದ್ವೇಷಿಸಲು ಅವನ ಕೆಟ್ಟ ಬಾಲ್ಯ ಕಾರಣವೆಂದು ತಿಳಿದುಬರುತ್ತದೆ. ಅನಿವಾರ್ಯ ಕಾರ್ಣಗಳಿಂದ ಅಮ್ಮ ಹಾಗೂ ಅಣ್ಣನ ಸಂಪರ್ಕದಿಂದ ದೂರವಾಗಿ ದುರ್ವರ್ತನೆಯುಳ್ಳ ತಂದೆಯೊಂದಿಗೆ ಬೆಳೆಯುವ ವಿನೋದ್‌, ತಂದೆಯ ಗುಣವನ್ನೇ ಅಳವಡಿಸಿಕೊಂಡು ಬೆಳೆದುಬಂದಿರುತ್ತಾನೆ.

ಆದರೆ ನಿಜಕ್ಕೂ ಅವನು ಅಷ್ಟು ಕೆಟ್ಟವನ?! ಅವನ ಬದುಕಿಗೆ ಹೊಸ ಬೆಳಕಾಗಿ ಬರುವ ಸೈಕೋ ಪಾದ್ರಿಯ ಹೆಂಡತಿ ಅವನ ಜೀವನಕ್ಕೆ ನೆಮ್ಮದಿ ಕೂಡ ತರುತ್ತಾಳೆ. ಅವನಲ್ಲಿ ಅಡಗಿರುವ ಇನ್ನೊಂದು ಮುಖದ ಅನಾವರಣಕ್ಕೆ ಕಾರಣಳಾಗುತ್ತಾಳೆ.

 

ಇವರನ್ನ ಒಬ್ಬೊಬ್ಬರನ್ನಾಗಿ ವಿಚಾರಿಸುತ್ತಾ ಹೋದಂತೆ ವಿನೋದ್ ಎಂಬ ವ್ಯಕ್ತಿ ಕೂಡ ಬಿಚ್ಚಿಕೊಳ್ಳುತ್ತ ಹೋಗುತ್ತಾನೆ. ಮೂವರಿಗೂ ವಿನೋದ್ ಜೊತೆ ಒಂದಲ್ಲ ಒಂದು ಕಿತ್ತಾಟ ರಾದ್ಧಾಂತವಾಗಿರುವ ವಿಷಯ ತಿಳಿಯುತ್ತದೆ. ಅವರುಗಳ ಹೇಳಿಕೆಯಿಂದ ವಿನೋದ್ ಒಬ್ಬ ಕುಡುಕನೂ ಹೆಂಗಸಿನ ಹುಚ್ಚಿನವನೂ ಮತ್ತು ಅತ್ಯಂತ ಸಿಡುಕಿನ ಮನುಷ್ಯನೂ ಹೌದು ಎಂಬುದು ಗೊತ್ತಾಗುತ್ತದೆ.

ಚಿತ್ರದ ಹಾಡಿನ ಒಂದು ಸಾಲಿನಂತೆ

“ಅಂದದೂರ ಅರಸಿಯೇ / ಅವನ ಅಂತಃಪುರವೇ ಕಾದಿದೆ / ಯಾವಾಗ ಬರುವೆಯೇ?!”

ಅವನ ಅಂತಃಪುರಕ್ಕೆ ಅವಳು ಬಂದಮೇಲೆ ಎಲ್ಲವೂ ಸರಿಯಾಗಿರುತ್ತದೆ. ವಿಧಿಯೊಂದನ್ನು ಬಿಟ್ಟು.

ಕೊನೆಗೂ ವಿನೋದ್ ಸತ್ತಿದ್ದು ಹೇಗೆ?! ಊರ ತುಂಬ ಶತ್ರುಗಳನ್ನು ಸಂಪಾದಿಸಿದ ಅವನನ್ನು ಅವನು ಕೆಲಸ ಮಾಡುವ ಸ್ಟೇಷನ್ನಿನಲ್ಲಿಯೇ ಸಾಯಿಸಿದವರು ಯಾರು?! ಎನ್ನುವುದು ಚಿತ್ರದ ಕಥಾ ಹಂದರ.

ಚಿತ್ರವನ್ನು ಮತ್ತೆ ಮತ್ತೆ ನೋಡುತ್ತಾ, ಅದು ಹೇಳುತ್ತಿರುವ ವಿಷಯವನ್ನು ಬಗೆಯುತ್ತಾ ಹೋದರೆ ಪ್ರತಿ ಸಲವೂ ಹೊಸ ಹೊಸ ಆಯಾಮಗಳು ಹೊಳೆಯುತ್ತವೆ, ಮನುಷ್ಯನ ಎರಡು ವೈರುಧ್ಯಗಳನ್ನ ಯಾವ ಅವಸರವಿಲ್ಲದೆ ಬೆನ್ನಲ್ಲೊಂದು ಛಳುಕು ಹುಟ್ಟಿಸುತ್ತ ಸಾಗುತ್ತದೆ. ಮನುಷ್ಯನಿಗೆ ಒಂದೊಳ್ಳೆ ಬಾಲ್ಯದ ಅವಶ್ಯಕತೆ ಬಗ್ಗೆ ಇಡೀ ಚಿತ್ರ ಮಾತಾಡುತ್ತದೆ.

ಕಡೆಯ ೧೨ ನಿಮಿಷವಂತೂ ನಮ್ಮನ್ನು ಬೆಚ್ಚಿಬೀಳಿಸಿ ಬಹಳ ದಿನಗಳವರೆಗೂ ಕಾಡುತ್ತದೆ.

(ರೋಹಿತ್ ಎಂ.ಜಿ. ಕೃಷ್ಣನ್‌)

ಪ್ರತಿ ನಟರೂ ಈ ಚಿತ್ರದಲ್ಲಿ ಜೀವಿಸಿದ್ದಾರೆ. ಅವಳಿ ಪಾತ್ರದಲ್ಲಿ ಎರಡು ವಿರುದ್ಧ ಗುಣಗಳ ಪಾತ್ರದಲ್ಲಿ ಜೋಜು ಜಾರ್ಜ್ ಎಷ್ಟು ಅದ್ಭುತ ನಟನೆ ನೀಡಿದ್ದಾರೆಂದರೆ ಚಿತ್ರವನ್ನ ಮತ್ತೊಮ್ಮೆ ನೋಡುವಷ್ಟರ ಮಟ್ಟಿಗೆ ಅವರ ನಟನೆ ನಮ್ಮನ್ನು ಕಾಡುತ್ತದೆ.

ಈ ವರ್ಷ ಓಟಿಟಿಗೆ ಬಂದ ಸದ್ದು ಮಾಡಿದ ‘ನೆನ್ಪಾಕಲ್ ನೆರತು ಮಾಯಕ್ಕಮ್’ ಮತ್ತು ‘ಥಂಕಂ’ ಸಿನಿಮಾಗಳಿಗಿಂತ ನನಗೆ ಈ ಸಿನಿಮಾ ತುಂಬಾ ಇಷ್ಟವಾಯ್ತು. ಅದಕ್ಕೆ ಮುಖ್ಯ ಕಾರಣವೆಂದರೆ ಚಿತ್ರ ಹೆಣೆಯುವಾಗ ಯಾವ ಬುದ್ಧಿ ಪ್ರದರ್ಶನವಾಗಲಿ, ರೋಚಕತೆಯಾಗಲಿ, ಅವಸರವಾಗಲಿ ನಿರ್ದೇಶಕ ರೋಹಿತ್ ಎಂ.ಜಿ. ಕೃಷ್ಣನ್‌ ತೋರಿಸಿಲ್ಲ. ತಾವು ಹೇಳಬೇಕಾದ ಕತೆಯನ್ನ ಸಹಜವಾಗಿ, ಸಾವಧಾನವಾಗಿ, ಯಾವುದೇ ಕೃತಕತೆಯನ್ನು ಸೃಜಿಸದೇ ಹೇಳಿದ್ದಾರೆ. ಅದು ಈ ಚಿತ್ರದ ಪ್ಲಸ್ ಪಾಯಿಂಟ್. ಹೊಸ ನಿರ್ದೇಶಕನೊಬ್ಬನ ಚೊಚ್ಚಲ ಸಿನಿಮಾ ಇದು ಎಂದು ಎಲ್ಲಿಯೂ ಅನಿಸೋಲ್ಲ….

ಕ್ಯಾಮೆರಾ ಸಂಗೀತ ಎಡಿಟಿಂಗ್ ಕೂಡ ಎಲ್ಲಿಯೂ ಹಾದಿ ತಪ್ಪದೇ, ಚಿತ್ರಕ್ಕೆ ತುಂಬ ಪ್ರಾಮಾಣಿಕವಾಗಿ ಬೆನ್ನೆಲುಬಾಗಿ ನಿಂತಿದೆ ಮತ್ತು ಚಿತ್ರದ ಚೌಕಟ್ಟಿನಲ್ಲೇ ಇದೆ. ಸಿನಿಮಾ ಚಿತ್ರಕತೆ ಅನ್ನೋದು ‘ಕನೆಕ್ಟಿಂಗ್ ಡಾಟ್ಸ್’ ತರ ಇರಬೇಕು, ಅದೊಂದು ರಂಗೋಲಿ ತರ, ನಿರ್ದೇಶಕ ಚುಕ್ಕಿಗಳನ್ನಷ್ಟೇ ತೋರಬೇಕು ಎನ್ನೋದು ಒಂದು ಮಾತಿದೆ, ಈ ಚಿತ್ರ ಅದಕ್ಕೊಂದು ಸ್ಪಷ್ಟ ಉದಾಹರಣೆ.

ಚಿತ್ರ ಶುರುವಾದಾಗ ಬರುವ ಲಾಲಿ ಹಾಡು ಚಿತ್ರದ ಕೊನೆಯಲ್ಲೂ ಕಾಣುತ್ತದೆ, ಒಂದು ಹಾಡನ್ನು ಚಿತ್ರಕತೆಯಲ್ಲಿ ಅದ್ಭುತವಾಗಿ ಅಳವಡಿಸಿಕೊಂಡಿದ್ದಾರೆ, ಆ ಹಾಡಿನಲ್ಲಿ ಇಡೀ ಚಿತ್ರವೇ ಅಡಗಿ ಕೂತಿದೆಯೇನೋ ಅನಿಸುತ್ತೆ, ಅದರ ಸಾಹಿತ್ಯವೂ ಅಷ್ಟೇ ಆಳವಾಗಿದೆ. ಕತೆಯ ಶುರು ಮತ್ತು ಕೊನೆ ಒಂದು ಬಿಂದುವಿನಲ್ಲಿ ನಿಂತರೆ ಅದೊಂದು ಒಳ್ಳೆ ಕತೆ ಅನ್ನುವಂತೆ ಇದೊಂದು ಒಳ್ಳೆಯ ಸಿನಿಮಾ.

ಈ ಒಂದು ಸಿನಿಮಾವನ್ನು ನೀವು ನೋಡುತ್ತಿದ್ದರೆ, ಅದು ನಿಮ್ಮನ್ನು ಒಳಕ್ಕೆಳೆದುಕೊಂಡು ಹೋಗಿ, ನಿಮ್ಮ ಉಸಿರನ್ನು ಬಿಗಿಗೊಳಿಸಿ ಕೊನೆ ಹನ್ನೆರಡು ನಿಮಿಷದಲ್ಲಿ ನಿಮ್ಮನ್ನು ನೋವಿನಾಳಕ್ಕೆ ನೂಕಿಬಿಡುತ್ತದೆ… ಅಷ್ಟು ಮಾತ್ರ ನಾನು ಹೇಳಬಲ್ಲೆ. ಹಾಗಾಗಿ ಈ ಚಿತ್ರವನ್ನ ಸಾಕಷ್ಟು ಕಾರಣಗಳಿಗಾಗಿ ನೋಡಲೇಬೇಕು.

About The Author

ಜಯರಾಮಚಾರಿ

ಜಯರಾಮಚಾರಿ ಮೂಲತಃ ಮೈಸೂರಿನವರು. ಬೆಳೆದದ್ದು ಬೆಂಗಳೂರು. ಸಧ್ಯ ನಮ್ಮ ಮೆಟ್ರೊದಲ್ಲಿ ಸ್ಟೇಷನ್ ಸೂಪರಿಡೆಂಟ್ ಆಗಿದ್ದಾರೆ. “ಕರಿಮುಗಿಲ ಕಾಡಿನಲಿ" (ಕಥಾ ಸಂಕಲನ), ನನ್ನವ್ವನ ಬಯೋಗ್ರಫಿ ಇವರ ಪ್ರಕಟಿತ ಕೃತಿಗಳು. ಓದು ಮತ್ತು ಸಿನಿಮಾ ಇವರ ಹವ್ಯಾಸವಾಗಿದ್ದು ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ