ಅವರೇನೇ ಅಂದರು ನಾನು ಮಾತ್ರ ಹುಟ್ಟು ಮೂಕನ ತರ, ಪ್ರಾಣಿಯ ತರ. ಅವರ ಸನ್ನೆಗಳಿಗೆ ಅನುಸಾರವಾಗಿ ಕೆಲಸ ಮಾಡುವುದು. ಅವರೇನಾದರೂ ಅಸೂಯೆಯಿಂದ ನಿಂದಿಸಿದರೆ ನಾನು ಸಿಟ್ಟುಗೊಳ್ಳುವುದಿಲ್ಲ ಮತ್ತೆ ಗುಡ್ಡದ ತರ ಸ್ತಬ್ಧನಾಗುತ್ತೇನೆ. ಮತ್ತೆ ಅವರಿಗೆ ನಿಲುಕದ ಪರ್ವತವಾಗುತ್ತೇನೆ. ಇದು ಇಷ್ಟು ದಿನ ಅವರು ನನ್ನನ್ನು ತಯಾರು ಮಾಡಿದ ರೀತಿಗೆ ನನ್ನ ಪ್ರತಿಭಟನೆ. ಇದರಲ್ಲಿ ಅವರ ರೀತಿಯಲ್ಲಿ ಬದುಕುವುದು ನಾನೆಯಾದರು ಸೋಲುವುದು ಮಾತ್ರ ಅವರು, ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ, ನಾನು ನಿಸರ್ಗದ ತತ್ವಕ್ಕೆ ತಕ್ಕನಾಗಿ ನಾನು ನಿಸರ್ಗವಾಗಿದ್ದೇನೆ.
ಕರುಣ ಪ್ರಸಾದ್ ಕೆ ಎಸ್ ಬರೆದ ಈ ಭಾನುವಾರದ ಕಿರುಕತೆ “ಓಡುವವನ ಅಂತರಾಳ”
ನನಗು ಒಂದು ಹಿನ್ನಲೆ ಇದೆ, ನಾನ್ ಯಾಕೆ ಇಲ್ಲಿ ಹೇಳ್ತಿದಿನಿ ಅಂದ್ರೆ ನಾನ್ ಅಲ್ಲಿ ಮಾತಾಡಲ್ಲಾ. ನಂದೇನಿದ್ರೂ ಇಲ್ಲಿ ಈ ಜಗತ್ತಲ್ಲಿ, ಅಲ್ಲಿ ನಾನು ಒಂಥರಾ ಮೂಕ! ಮಾತಾಡಲು ಬರುವ ಮೂಕ! ಈ ಸಮಾಜ ನನ್ನಂತವನ ಬಾಯನ್ನು ಹೊಲೆದಿದೆ, ನನ್ನ ನಾಲಿಗೆಯನ್ನು ಕತ್ತರಿಸಿದೆ, ಕೈಯನ್ನು ಕಟ್ಟಿದೆ, ಕಣ್ಣಿಗೆ ಅಡ್ಡಲಾಗಿ ಗೋಡೆ ಇಟ್ಟಿದೆ. ನಾನೇನು ನೋಡಬೇಕಾದರು ಆ ಸಮಾಜ ಹೇಳಿದ್ದನ್ನು ಕೇಳಿಸಿಕೊಂಡು ನನ್ನ ಮೆದುಳಿಗೆ ತುರುಕಿ ಅಲ್ಲಿ ಶಬ್ದಗಳನ್ನು ಒಟ್ಟುಗೂಡಿಸಿ ನನ್ನ ಕಲ್ಪನೆಯಲ್ಲಿ ನಿಶ್ಚಯಿಸಿಕೊಂಡು ನೋಡಲು ಪ್ರಯತ್ನಿಸುತಿದ್ದೆ, ಇದು ಎಂತ ಪ್ರಯಾಸದ ಕೆಲಸ, ಗಿಡಕ್ಕೆ ಕಲ್ಲು ಹೊಡೆಯುವ ನರ ಮನುಷ್ಯನಿಗೆ ನಕ್ಷತ್ರಕ್ಕೆ ಕಲ್ಲೊಡೆದು ಉದರಿಸಿ ಎಂದ ಹಾಗೆ! ನನ್ನ ಕಣದಲ್ಲಿರುವ ಶಕ್ತಿ ಮತ್ತು ಯುಕ್ತಿಯನ್ನೆಲ್ಲಾ ಪ್ರಯತ್ನಿಸಿದರೂ ನಿಲುಕದ ಕೆಲಸ. ಆದರೂ ಈ ಕೆಲಸವನ್ನು ಮಾಡಲು ನನ್ನೇಕೆ ಮೀಸಲಿಟ್ಟಿದ್ದಾರೆ? ಫಲಿತಾಂಶ ಬಾರದ ಕೆಲಸಕ್ಕೆ ನಾನೇಕೆ ನಿಯೋಜನೆಗೊಳಗಾಗಬೇಕು? ಅದಕ್ಕೆ ನಾನು ಅಲ್ಲಿರದೆ ಓಡುತ್ತಿದ್ದೇನೆಯೇ?
ನಾನು ಎಲ್ಲು ನಿಲ್ಲುತ್ತಿರಲಿಲ್ಲಾ ..!
ಓಡುತ್ತಿದ್ದೇನೆ. ಓಡುತ್ತಿದ್ದೇನೆ…..
ನನ್ನ ಹಿತಿಹಾಸದಿಂದ ಓಡುತ್ತಿದ್ದೇನೆ.
ಆದರೆ! ಎಲ್ಲಿಯವರೆಗೂ? ಯಾವುದರಿಂದ ತಪ್ಪಿಸಿಕೊಳ್ಳಲು ಓಡುತ್ತಿದೆನೋ ಈಗ ಆ ಓಟವೇ ತಪ್ಪಿಸಿಕೊಂಡ ಕೆಲಸದಂತಾಗಿದೆ.
ಈಗ ನಿರ್ಧಾರ ಮಾಡಿದ್ದೇನೆ ನಾನು. ಇನ್ನ ಮೇಲೆ ಓಡುವುದಿಲ್ಲ? ಬಂಡೆಯಂತೆ ಗಟ್ಟಿಯಾಗಿ ನಿಲ್ಲುತ್ತೇನೆ, ಗುಡ್ಡದಂತೆ, ಬೆಟ್ಟದಂತೆ.. ನನಗೆ ಬಡಿದರೂ ಚೂರು ಮಿಸುಕಾಡದಂತೆ, ಯುಗ ಯುಗ ಕಳೆದರು ಅಲುಗಾಡದದಂತೆ, ಮಳೆ ಬಂದರು, ಭೂಕಂಪ ಆದರೂ, ನನ್ನ ಕೆಲಸ ಮಾತ್ರ ಚೂರು ಮಿಸುಕಾಡದೆ ಇರುವುದು.
ಅವರು ಯಾವುದರಿಂದ ದೂರ ಮಾಡಲು ಅಡ್ಡಗೋಡೆ ಕಟ್ಟಿದ್ದರೋ ನಾನೀಗ ಅದನ್ನು ಮೀರಿ ಅವರಿಗೂ ನಿಲುಕದ ಅವರ ನೋಟವ ಮೀರಿದ ಬಂಡೆಯ ಪರ್ವತವಾಗಿದ್ದೇನೆ.
ಅವರೇನೇ ಅಂದರು ನಾನು ಮಾತ್ರ ಹುಟ್ಟು ಮೂಕನ ತರ, ಪ್ರಾಣಿಯ ತರ. ಅವರ ಸನ್ನೆಗಳಿಗೆ ಅನುಸಾರವಾಗಿ ಕೆಲಸ ಮಾಡುವುದು. ಅವರೇನಾದರೂ ಅಸೂಯೆಯಿಂದ ನಿಂದಿಸಿದರೆ ನಾನು ಸಿಟ್ಟುಗೊಳ್ಳುವುದಿಲ್ಲ ಮತ್ತೆ ಗುಡ್ಡದ ತರ ಸ್ತಬ್ಧನಾಗುತ್ತೇನೆ. ಮತ್ತೆ ಅವರಿಗೆ ನಿಲುಕದ ಪರ್ವತವಾಗುತ್ತೇನೆ. ಇದು ಇಷ್ಟು ದಿನ ಅವರು ನನ್ನನ್ನು ತಯಾರು ಮಾಡಿದ ರೀತಿಗೆ ನನ್ನ ಪ್ರತಿಭಟನೆ. ಇದರಲ್ಲಿ ಅವರ ರೀತಿಯಲ್ಲಿ ಬದುಕುವುದು ನಾನೆಯಾದರು ಸೋಲುವುದು ಮಾತ್ರ ಅವರು, ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ, ನಾನು ನಿಸರ್ಗದ ತತ್ವಕ್ಕೆ ತಕ್ಕನಾಗಿ ನಾನು ನಿಸರ್ಗವಾಗಿದ್ದೇನೆ.
ಈಗ ಅವರು ತಮ್ಮ ಹಿತಿಹಾಸವನ್ನು ನನ್ನ ಎದೆಯ ಮೇಲೆ ಕೆತ್ತುತ್ತಾರೆ? ನನ್ನ ಅಸ್ತಿತ್ವವೇ ಇತಿಹಾಸವೆಂಬುವುದು ಅವರಿಗೇಕೆ ತಿಳಿಯುತ್ತಿಲ್ಲಾ? ನನ್ನ ಕೆತ್ತಿ, ಕೆತ್ತಿ.. ನನ್ನನು ಅವರ ಕಲ್ಪನೆಗೆ ತಕ್ಕಂತೆ ರೂಪ ನೀಡುತ್ತಿದ್ದಾರೆ, ನನ್ನ ಜನರೇ ಅವರ ಅಡಿಯಾಳಾಗಿ ನನ್ನನ್ನು ಕೆತ್ತುತ್ತಿದ್ದಾರೆ, ಆದರೆ ಆದೇಶ ಮಾತ್ರ ಅವರದು. ಒಂದು ಸಮಾಧಾನ ನನಗೆ, ಅವರ ಕಲ್ಪನೆಗೆ ಮೀರಿ ಕೆತ್ತುವ ನಮ್ಮವರು ತಮ್ಮ ಕಲ್ಪನೆಯನ್ನು ನನಗೆ ತಾಗಿಸುತ್ತಾ ನಮ್ಮ ರಹಸ್ಯ ವಿಷಯವನ್ನು, ನಿಜ ಹಿತಿಹಾಸದ ಕುರುಹುಗಳನ್ನು ಬಿಡುತ್ತಿದ್ದಾರೆ, ಇದು ಮತ್ತೆ ಆ ಕಡೆಯವರಿಗೆ ಮೀರಿದ ಗೋಡೆಯಾಗಿದೆ. ಆ ರಹಸ್ಯವನ್ನು ಭೇದಿಸಲು ಯಾರೇ ಆದರೂ ನಿಸರ್ಗದ ಕೂಗನ್ನು ಆಲಿಸಬೇಕು, ನಿಸರ್ಗದ ವಿರುದ್ಧವಿದ್ದವರ ನೋಟಕ್ಕೆ ಅದು ನಿಲುಕದಾಗಿದೆ. ಆದರೆ ಆದೇಶ ಕೊಟ್ಟವರು ಹೇಳುವುದು ಆ ಕೆತ್ತಿದ ಹಿತಿಹಾಸ ತಮ್ಮದೆಂದು.
ಇದನ್ನೆಲ್ಲಾ ನಾನು ಗಮನಿಸುತ್ತಿದ್ದೇನೆ. ಕಾಯುತ್ತೇನೆ….. ಯಾಕೆಂದರೆ ನಾನು ಕಾಲಾತೀತ ಅವರು ಕ್ಷಣಿಕ, ಆದರೆ ಅವರ ಮರುಹುಟ್ಟು ಸಾವಿರ.
ಕರುಣ ಪ್ರಸಾದ್ ಕೆ ಎಸ್ ಮೂಲ ಧಾರವಾಡದವರು, ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆ, ಫಿಲ್ಮ್‌ಮೇಕರ್ ಹಾಗೂ ಫಿಲ್ಮ್ ಟೀಚರ್ ಆಗಿ ಕೆಲಸ ಮಾಡುತ್ತಾರೆ.