Advertisement
ಕಲಾತ್ಮಕ ಕಟ್ಟಣೆಯ ‘ಅಸೀಮರೂಪಿ’ ಕತೆಗಳು: ರೇವಣಸಿದ್ಧಪ್ಪ ಜಿ.ಆರ್. ಬರಹ

ಕಲಾತ್ಮಕ ಕಟ್ಟಣೆಯ ‘ಅಸೀಮರೂಪಿ’ ಕತೆಗಳು: ರೇವಣಸಿದ್ಧಪ್ಪ ಜಿ.ಆರ್. ಬರಹ

ಯುವತಿಯೊಬ್ಬಳ ಮೆದುಳು ಅಪಘಾತದಿಂದಾಗಿ ಜರ್ಝರಿತವಾಗಿ ಬ್ರೈನ್ ಡೆಡ್ ಆಗಿ ಅವಳ ಉಸಿರು ನಿಲ್ಲುವುದು ಖಾತ್ರಿಯಾದಾಗ, ಮುದಿಯಾಗಿದ್ದ ತನ್ನ ದೇಹದಿಂದ ಆಕೆಯ ದೇಹಕ್ಕೆ ಬ್ರೈನ್ ಟ್ರಾನ್ಸ್ ಪ್ಲಾಂಟೇಷನ್ ಮಾಡುವ ಪ್ರಯೋಗಕ್ಕೆ ಒಳಗಾಗುತ್ತಾನೆ. ಮಾನಸಿಕವಾಗಿ ಗಂಡಾಗಿ, ದೈಹಿಕವಾಗಿ ಹೆಣ್ಣಾಗಿರುವ ಈತ ಒಂದು ವಿಷಮ ಗಳಿಗೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯೂ ಆಗಿಬಿಡುತ್ತಾನೆ. ಕೊನೆಗೆ ತನ್ನ ಮನೆಯವರಿಂದಲೇ ಅವಜ್ಞೆಗೆ ಈಡಾಗುತ್ತಾನೆ. ವೈದ್ಯಕೀಯ ಲೋಕದ ಪ್ರಯೋಗ ಸಾಧ್ಯತೆಗಳ ಜೊತೆಜೊತೆಗೆ ಸಾಮಾಜಿಕವಾಗಿ ಹೆಣ್ಣು ಅನುಭವಿಸುವ ನೋವು, ಯಾತನೆ, ಅವಮಾನ ಇತ್ಯಾದಿ ಆಯಾಮಗಳಲ್ಲೂ ಭಿನ್ನವಾಗಿ ಗ್ರಹಿಸಬಹುದಾದ ಈ ಕಥೆ ಕುತೂಹಲದಿಂದ ಓದಿಸಿಕೊಳ್ಳುತ್ತದೆ.
ಕಂನಾಡಿಗಾ ನಾರಾಯಣ ಬರೆದ “ಅಸೀಮರೂಪಿ” ಕಥಾ ಸಂಕಲನದ ಕುರಿತು ರೇವಣಸಿದ್ಧಪ್ಪ ಜಿ.ಆರ್. ಬರಹ

‘ಅಸೀಮರೂಪಿ’ ಕಂನಾಡಿಗಾ ನಾರಾಯಣರ ಹತ್ತು ಕಥೆಗಳ ಸಂಕಲನ. ಸಂಕಲನದ ಟ್ಯಾಗ್ ಲೈನ್ ಹೇಳುವಂತೆ ಇವು ಸಾವಿನ ನೆರಳಲಿ ಅರಳಿದ ಜೀವಮಿಡಿತದ ಕಥೆಗಳು. ಸರ್ವವ್ಯಾಪಿಯಾದ ಸಾವು ಹತ್ತೂ ಕಥೆಗಳಲ್ಲಿ ಬಹುರೂಪಿಯಂತೆ ಇಣುಕಿ ಹಾಕುತ್ತದೆ. ಪದೇಪದೇ ಮುಖಾಮುಖಿಯಾಗುವ ಸಾವನ್ನು ಎದುರಿಸಿ ಜೀವಚೈತನ್ಯ ಪುಟಿದೇಳುತ್ತದೆ. ಒಂದು ಥೀಮನ್ನು ಇಟ್ಟುಕೊಂಡು ಅದರ ಮೇಲೆ ಕಥೆ ಬರೆಯುವ ಅಥವಾ ಅಂತಹ ಕಥೆಗಳನ್ನೇ ಒಂದೆಡೆ ಸೇರಿಸಿ ಸಂಕಲನ ತರುವ ಪ್ರಯತ್ನವನ್ನು ಕಂನಾಡಿಗಾ ನಾರಾಯಣ ಅವರು ಮಾಡುತ್ತಾರೆ. ಇದು ಬಹಳ ಸವಾಲಿನ ಕೆಲಸ ಎಂದು ಯಾರಿಗಾದರೂ ಅನ್ನಿಸದೇ ಇರದು. ಅವರ ಈ ಹಿಂದಿನ ತಲ್ಲಣದ ಆ ಕ್ಷಣ, ಇಹದ ಪರಿಮಳ ಮುಂತಾದ ಸಂಕಲನಗಳಲ್ಲದೇ ಇತ್ತೀಚಿನ ಬರೀ ಪ್ರಾಣಿಪ್ರಜ್ಞೆಯ ಕಥೆಗಳುಳ್ಳ ‘ಬಣ್ಣದ ಜಿಂಕೆ’ಯನ್ನೂ, ಪ್ರತಿಮಾತ್ಮಕ ಕಥೆಗಳನ್ನೇ ಉಳ್ಳ ‘ಪ್ರತಿಮಾವಿಲಾಸ’ವನ್ನೂ ಉದಾಹರಿಸಬಹುದು. ಒಂದು ಪ್ರತಿಮೆ, ಒಂದು ರೂಪಕವನ್ನಿಟ್ಟುಕೊಂಡು ಸಂಕೇತಗಳ ಮೂಲಕವೇ ಕಥೆ ಹೇಳುವ ಇವರ ಚಾತುರ್ಯವನ್ನು ಬಹುಶಃ ಕನ್ನಡದ ವಿಮರ್ಶಕರು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ.

‘ಅಸೀಮರೂಪಿ’ ಸಂಕಲನದ ಆರಂಭದ ಕಥೆ ‘ಗಾಂಧಿಕಾರಣ’ ತಾಂತ್ರಿಕ ಕಾರಣಗಳಿಂದ ಇತರ ಕಥೆಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಶಿವಮೊಗ್ಗದ ಪರಿಸರದಲ್ಲಿದ್ದ ಗಾಂಧಿವಾದಿಯೊಬ್ಬರ ಛಾಯೆ ಇರಬಹುದಾದ ಈ ಕಥೆಯಲ್ಲಿ ಕಥಾನಾಯಕಿ ಅಮೂಲ್ಯ, ಗಾಂಧಿಯು ನಡೆದಾಡಿದ ನಾಡಿನಲ್ಲಿ ಗಾಂಧಿಯ ಯಾವ ತತ್ವಾದರ್ಶಗಳೂ ತನಗಾದ ಅನ್ಯಾಯ, ಶೋಷಣೆಗಳನ್ನು ತಡೆಯಲು ಸಾಧ್ಯವಾಗದಾದಾಗ ತನ್ನದೇ ಕಾರಣಗಳನ್ನು ಪಟ್ಟಿಮಾಡುತ್ತ ಗಾಂಧಿಯನ್ನೇ ವಿರೋಧಿಸಲು ಆರಂಭಿಸುತ್ತಾಳೆ. ಕಥಾನಾಯಕಿಯು ಎತ್ತುವ ಯಾವ ಪ್ರಶ್ನೆಗೂ ಕಥೆಯಲ್ಲಿ ನೇರವಾಗಿ ಉತ್ತರ ಸಿಗುವುದಿಲ್ಲ. ಒಂದು ಕಾಲಕ್ಕೆ ಮಹಾತ್ಮನಾಗಿದ್ದ ಗಾಂಧಿಯ ಪ್ರತಿರೂಪದಂತೆ ಗಾಂಧಿವಾದಿ ಕಂಡುಬಂದರೆ, ಅಮೂಲ್ಯ ಇವತ್ತಿನ ಕಾಲದ ಬಹುತೇಕ ಯುವಜನರ ಪ್ರತಿನಿಧಿಯಂತೆ ಕಾಣುತ್ತಾಳೆ. ಗಾಂಧಿಯ ಮಿನಿಯೇಚರಂತೆ ತೋರುವ ಗಾಂಧಿವಾದಿ ನಾರಾಯಣರಾಯರ ಪ್ರಭಾವದಿಂದ ಗಾಂಧಿ ಬಗ್ಗೆ ಕುತೂಹಲ ತಾಳುವ ಅಮೂಲ್ಯ ಗಾಂಧಿಯ ಬಗ್ಗೆ ಇನ್ನಷ್ಟು ಮತ್ತಷ್ಟು ತಿಳಿಯಲು ತಹತಹಿಸಿ ಓಡೋಡಿ ಬರುವಾಗ್ಗೆ ಗಾಂಧಿಯಂತೆಯೇ ಗಾಂಧಿವಾದಿಯ ಕೊಲೆಯಾಗಿ ಹೋಗಿರುತ್ತದೆ.

(ಕಂನಾಡಿಗಾ ನಾರಾಯಣ)

ಇನ್ನು ‘ಮನೋವಿಲಾಸ’ ಕಥೆಯು ವೈದ್ಯಕೀಯ ಲೋಕದ ಅಸೀಮ ಸಾಧ್ಯತೆ, ಸಂಭವನೀಯತೆಗಳ ಕುರಿತಂಥ ಕಥೆ. ಸೈಕಾಲಜಿಸ್ಟ್ ಆಗಿರುವ ಪ್ರೊಟಗಾನಿಸ್ಟ್ ಡಾ.ಎಂ.ಎಸ್. ಚಿರಂಜೀವಿ ಜನಾನುರಾಗಿಯಾಗಿ ಸಾಕಷ್ಟು ಹೆಸರು ಮಾಡಿರುತ್ತಾನೆ. ವೈದ್ಯಕೀಯ ಜಗತ್ತಿನ ಒಳಸುಳಿಗಳ ಅರಿವಿದ್ದ ಕಥಾನಾಯಕನಿಗೆ ಸ್ವತಃ ಪ್ರಯೋಗಕ್ಕೆ ಒಡ್ಡಿಕೊಳ್ಳುವ ತುಡಿತ. ಈಗಾಗಲೇ ವಯೋವೃದ್ಧನಾಗಿರುವ ಈ ವೈದ್ಯನಿಗೆ ಇನ್ನೂ ಸಾಧಿಸುವ ಹಪಾಹಪಿ. ಅದಕ್ಕೆ ಅವನು ಆಯ್ದುಕೊಂಡ ಮಾರ್ಗವೆಂದರೆ ಬ್ರೈನ್ ಟ್ರಾನ್ಸ್ ಪ್ಲಾಂಟೇಷನ್. ಯುವತಿಯೊಬ್ಬಳ ಮೆದುಳು ಅಪಘಾತದಿಂದಾಗಿ ಜರ್ಝರಿತವಾಗಿ ಬ್ರೈನ್ ಡೆಡ್ ಆಗಿ ಅವಳ ಉಸಿರು ನಿಲ್ಲುವುದು ಖಾತ್ರಿಯಾದಾಗ, ಮುದಿಯಾಗಿದ್ದ ತನ್ನ ದೇಹದಿಂದ ಆಕೆಯ ದೇಹಕ್ಕೆ ಬ್ರೈನ್ ಟ್ರಾನ್ಸ್ ಪ್ಲಾಂಟೇಷನ್ ಮಾಡುವ ಪ್ರಯೋಗಕ್ಕೆ ಒಳಗಾಗುತ್ತಾನೆ. ಮಾನಸಿಕವಾಗಿ ಗಂಡಾಗಿ, ದೈಹಿಕವಾಗಿ ಹೆಣ್ಣಾಗಿರುವ ಈತ ಒಂದು ವಿಷಮ ಗಳಿಗೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯೂ ಆಗಿಬಿಡುತ್ತಾನೆ. ಕೊನೆಗೆ ತನ್ನ ಮನೆಯವರಿಂದಲೇ ಅವಜ್ಞೆಗೆ ಈಡಾಗುತ್ತಾನೆ. ವೈದ್ಯಕೀಯ ಲೋಕದ ಪ್ರಯೋಗ ಸಾಧ್ಯತೆಗಳ ಜೊತೆಜೊತೆಗೆ ಸಾಮಾಜಿಕವಾಗಿ ಹೆಣ್ಣು ಅನುಭವಿಸುವ ನೋವು, ಯಾತನೆ, ಅವಮಾನ ಇತ್ಯಾದಿ ಆಯಾಮಗಳಲ್ಲೂ ಭಿನ್ನವಾಗಿ ಗ್ರಹಿಸಬಹುದಾದ ಈ ಕಥೆ ಕುತೂಹಲದಿಂದ ಓದಿಸಿಕೊಳ್ಳುತ್ತದೆ.

ಕರುಳನ್ನು ಕಿವುಚುವಂತಹ ನಿರೂಪಣೆಯುಳ್ಳ ‘ಅಂತಿಮ ದರ್ಶನ’, ಇನ್ನೊಂದು ಸಾವಿನ ದರ್ಶನ ಮಾಡಿಸುವ ಕಥೆ. ಕಥಾನಾಯಕ ನಿರಂಜನನನ್ನು ಆತನ ತಾಯಿ ಕಡುಕಷ್ಟದಲ್ಲೂ ಪೋಷಿಸಿ ಹೆಚ್ಚಿನ ವ್ಯಾಸಂಗಕ್ಕೆ ಅಮೇರಿಕಾಕ್ಕೆ ಕಳಿಸಿರುತ್ತಾಳೆ. ಹಿರಿಯ ಮಗ ಮತ್ತು ಸೊಸೆಯ ಕಾರಣದಿಂದ ವಿಷಪ್ರಾಷನ ಮಾಡಿ ಸಾಯುವ ನಿರ್ಧಾರಕ್ಕೆ ಬರುತ್ತಾಳೆ‌. ಆಕಸ್ಮಿಕವಾಗಿ ವಿಷಯ ತಿಳಿದು, ಅಷ್ಟು ದೂರದಿಂದ ಕಷ್ಟಪಟ್ಟು ತಾಯಿಯ ಅಂತಿಮ ದರ್ಶನಕ್ಕೆ ಧಾವಿಸಿ ಬರುವ ನಿರಂಜನ, ಊರಿಗೆ ಕಾಲಿಡುತ್ತಿದ್ದಂತೆಯೇ, ಮೂರು ದಿನಗಳಿಂದ ಕೊಳೆತು ನಾರುತ್ತಿರುವ ವಾಸನೆಯನ್ನು ಗ್ರಹಿಸಿ ತನ್ನ ತಾಯಿಯ ಹೆಣವನ್ನು ನೋಡಲು ನಿರಾಕರಿಸಿ, ತನ್ನ ಮನಸ್ಸಿನಲ್ಲಿ ಇರುವ ಆಕೆಯ ಚಿತ್ರ ಹಾಗೆಯೇ ಇರಲೆಂದು ನಿರ್ಧರಿಸಿ ಅಂತಿಮ ಸಂಸ್ಕಾರ ಮಾಡಲು ಹೇಳಿಬಿಡುವಲ್ಲಿ ಕಥೆ ಕೊನೆಗಾಣುತ್ತದೆ.

‘ಇರುವುದೊಂದೇ ಜೀವ’ ಕಥೆಯಲ್ಲಿ ಗಂಡನಿಂದ ಪರಿತ್ಯಕ್ತಳಾದ ಹೆಣ್ಣೊಬ್ಬಳು ಆತನನ್ನು ಮತ್ತೆ ಸೇರಲು ಪ್ರಯತ್ನಿಸಿ ವಿಫಲಳಾಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಮನೋವೈದ್ಯೆಯೊಬ್ಬರ ಮಾತು ಸಕಾಲಿಕವಾಗಿ ನೆನಪಾಗುವುದರಿಂದಾಗಿ ಸಾವಿನಿಂದ ಪಾರಾಗುತ್ತಾಳೆ. ಇರುವುದೊಂದೇ ಜೀವ, ಅದನ್ನು ಬದುಕಿ ತೋರಿಸಬೇಕೆಂದು ಅಂದುಕೊಳ್ಳುವಲ್ಲಿ ಕಥೆ ಮುಕ್ತಾಯವಾಗುತ್ತದೆ. ಕೇವಲ ಸ್ತ್ರೀಯರಿಗೆ ಮಾತ್ರ ಅನ್ವಯಿಸಿ ನೋಡಲಾಗದಂಥ, ಸಾರ್ವತ್ರಿಕವಾಗಿ ಅನ್ವಯಿಸುವಂಥ ಜೀವಪರ ನಿಲುವನ್ನು ಹೊಂದಿರುವಂಥ ಕಥೆಯಿದು.

ಮಲೆನಾಡಿನ ಡ್ಯಾಂವೊಂದರ ಹಿನ್ನೀರಿನಿಂದ ಮುಳುಗಡೆಯಾಗಿ ದ್ವೀಪದಂತಾಗಿದ್ದ ಊರಿನ ಜನರು ಹೊರಜಗತ್ತನ್ನು ಸಂಪರ್ಕಿಸಲು ಸೇತುವೆಯೊಂದಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಕೇವಲ ಸ್ಪರ್ಧೆ, ಪ್ರತಿಷ್ಠೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ರಾಜಕೀಯ ಮುಂತಾದವುಗಳಲ್ಲೇ ಮುಳುಗಿ ಹೋಗಿರುವ ಸ್ಥಳೀಯ ರಾಜಕಾರಣಿಗಳ ಮುಂದೆ ಇವರ ಅಹವಾಲು ಅರಣ್ಯರೋದನವಾಗಿರುತ್ತದೆ. ದಪ್ಪ ಚರ್ಮದ ರಾಜಕಾರಣಿಗಳು ಮಾಡದೇ ಇರುವುದನ್ನು ಒಬ್ಬ ಪ್ರಾಮಾಣಿಕ ಅಧಿಕಾರಿ ಮನಸ್ಸು ಮಾಡಿದರೆ ಕಾರ್ಯರೂಪಕ್ಕೆ ತರಬಹುದೆಂಬ ತಥ್ಯವನ್ನು ‘ಸೇತುಬಂಧನ’ ಕಥೆ ಹೇಳುತ್ತದೆ. ಕಥೆಯ ಅಂತ್ಯದಲ್ಲಿ ಹಳ್ಳಿಗರ ಪ್ರೀತಿ, ಮುಗ್ಧತೆ ಮತ್ತು ಅವರ ಕೃತಜ್ಞತೆ ಕಂಡು ಮನಸ್ಸು ತುಂಬಿ ಬರುತ್ತದೆ.

ತಾಂತ್ರಿಕ ಅನ್ವೇಷಣೆಯು ನಾಗರಿಕತೆಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಆಧುನಿಕ ತಂತ್ರಜ್ಞಾನದ ಅತಿಯಾದ ಬಳಕೆ ಮಾನವನ ಸುಖ, ನೆಮ್ಮದಿಗೆ ವಿಲೋಮಾನುಪಾತದಲ್ಲಿ ಕೆಲಸ ಮಾಡುತ್ತದೆ. ಮೊಬೈಲ್ ತರಂಗಗಳು ವ್ಯಕ್ತಿಯ ಮೇಲೆ ಉಂಟುಮಾಡುವ ಪ್ರತಿಕೂಲ ಪರಿಣಾಮಗಳನ್ನು ‘ಆಕಂಪನ’ ಕಥೆ ಕಟ್ಟಿಕೊಡುತ್ತದೆ.

ಪ್ರೇಮ ಮತ್ತು ಕಾಮ ವಿರುದ್ಧ ಲಿಂಗಿಗಳಲ್ಲಿ ಸಹಜವೆಂಬ ಸಾಂಪ್ರದಾಯಿಕ ನಂಬಿಕೆ ಮತ್ತು ಜನಮನ್ನಣೆಯ ನಡುವೆ ಸಲಿಂಗಿಗಳ (ತೃತೀಯ ಲಿಂಗಿಗಳ) ನಡುವಣ ಪ್ರೇಮ, ಕಾಮ ಮತ್ತು ಮದುವೆಯನ್ನು ಮಾನ್ಯಮಾಡಬೇಕೆಂಬ ಕೂಗು ಕೇಳಿಬರುತ್ತದೆ. ತೃತೀಯ ಲಿಂಗಿಗಳಿಬ್ಬರು ಪ್ರೇಮಿಸಿ, ಕಾಮಿಸಿ ಮದುವೆಯಾಗಿ ಮಗುವನ್ನು ಹೆರುವ ಮಟ್ಟಕ್ಕೂ ಹೋಗುತ್ತದೆ. ಆದರೆ ಆ ಮಗುವಿನ ಲಾಲನೆ, ಪಾಲನೆಯ ಜವಾಬ್ದಾರಿಯಿಂದ ವಿಮುಖವಾಗುವುದನ್ನು ‘ಮಿಲನೋತ್ಸವ’ ಕಥೆ ಹೇಳುತ್ತದೆ.

ಕೊಲೆಗಾರರ ಚಿತ್ರ ಬರೆದುಕೊಡುವುದರ ಮೂಲಕ ಅವರನ್ನು ಪತ್ತೆ ಹಚ್ಚಲು ಪೋಲೀಸರಿಗೆ ಸಹಾಯ ಮಾಡುತ್ತಾನೆ ಕಲಾವಿದ ಶ್ರೀನಾಥ. ಜಾಲಿ ಮೈದಾನದಲ್ಲಿ ಕೊಲೆಯಾಗಿ ಹೋದ ಹುಡುಗಿಯ ಕೊಲೆಗಾರನ ಭಾವಚಿತ್ರವನ್ನು ಬರೆದುಕೊಡುವಲ್ಲಿ ಹಿಂದೆಂದೂ ಕಾಣದಷ್ಟು ಪರಿತಪಿಸುತ್ತಾನೆ. ಆದರೆ ಕನಸಲ್ಲಿ ಕಂಡ ಮುಖವನ್ನೇ ಬರೆದು ಪೊಲೀಸರಿಗೆ ಬರೆದುಕೊಡುತ್ತಾನೆ. ಆದರೆ ಅದು ತನ್ನನ್ನೇ ಹೋಲುತ್ತಿರುವುದನ್ನು ಆತ ಅರಗಿಸಿಕೊಳ್ಳದಾಗುತ್ತಾನೆ. ಆದಾಗ್ಯೂ ತಾನು ಬರೆದುಕೊಟ್ಟ ಚಿತ್ರದಲ್ಲಿದ್ದಂತಹದೇ ಮುಖಭಾವದ ಕೊಲೆಗಾರ ಪತ್ತೆಯಾಗುತ್ತಾನೆ. ಆ ಪಾತಕಿಯೂ ಶ್ರೀನಾಥನನ್ನೇ ಹೋಲುತ್ತಿರುತ್ತಾನೆ! ‘ಕನಸಲ್ಲಿ ಕಂಡ ಮುಖ’ ಕಥೆಯಲ್ಲಿನ ಕಲಾವಿದನ ಅತೀಂದ್ರಿಯ ಸೃಜನಶೀಲತೆ ಸೋಜಿಗ ಉಂಟುಮಾಡುತ್ತದೆ.

ಪ್ರಸಿದ್ಧ ಟಿ.ವಿ.ಆ್ಯಂಕರ್ ಒಬ್ಬಳು ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡು ಅಪಾರ ಅಭಿಮಾನಿ ಬಳಗವನ್ನು ಹೊಂದಿರುತ್ತಾಳೆ. ಆದರೆ ಅನುಮಾನಾಸ್ಪದವಾಗಿ ಅಸುನೀಗುತ್ತಾಳೆ. ತನ್ನ ಸಾವಿನ ನಂತರದ ಬೆಳವಣಿಗೆಗೆ ತಾನೇ ಸ್ವತಃ ಸಾಕ್ಷಿಯಾಗುತ್ತಾಳೆ. ಕಥಾನಾಯಕಿ ತನಗೆ ಆತ್ಮದ ಬಗ್ಗೆ ನಂಬಿಕೆ ಇಲ್ಲವೆಂದು ಹೇಳುತ್ತಲೇ ಆತ್ಮವನ್ನು ಒಪ್ಪುವ ಕಥೆ ‘ಅಸೀಮರೂಪಿ’.

ಇನ್ನೂ ಪ್ರೌಢಾವಸ್ಥೆಯನ್ನು ತಲುಪದ ಹೆಣ್ಣುಮಗಳೊಬ್ಬಳು, ಲಿವರ್ ಕ್ಯಾನ್ಸರಿನಿಂದ ಬಳಲುತ್ತಿದ್ದ ತನ್ನ ತಂದೆಗೆ ಎಷ್ಟೆಲ್ಲ ಪ್ರಯತ್ನದ ನಂತರವೂ ಅಂಗದಾನ ಸಿಗದಾದಾಗ ತಾನೇ ಅನಿವಾರ್ಯವಾಗಿ ಲಿವರ್ ದಾನ ಮಾಡಲು ಮುಂದಾಗುತ್ತಾಳೆ. ತಾನಿನ್ನೂ ಅಪ್ರಾಪ್ತೆಯಾಗಿರುವುರಿಂದ ಕಾನೂನು ಪ್ರಕಾರ ಅಂಗಾಂಗ ದಾನ ಮಾಡಲು ಅವಕಾಶವಿಲ್ಲವೆಂದು ತಿಳಿದು ತನ್ನ ಲಿವರನ್ನು ತಂದೆಗೆ ದಾನಮಾಡಬೇಕೆಂಬ ಉತ್ಕಟತೆಯಲ್ಲಿ ಡೆತ್‌ನೋಟ್ ಬರೆದು ಆತ್ಮಹತ್ಯೆಗೆ ಪ್ರಯತ್ನಿಸುವ ‘ಅಪೂರ್ವಮತಿ’ಯ ಕಥೆಯನ್ನು ಮುಕ್ತಾಯಗೊಳಿಸುವ ಕಥೆಗಾರರು, ಕೊನೆಗೊಂದು ಟಿಪ್ಪಣಿ ಬರೆಯುವ ಮೂಲಕ ವಿಭಿನ್ನವಾಗಿ ಅಂತ್ಯಗೊಳಿಸುತ್ತಾರೆ. ಆ ಮೂಲಕ ಅವಳು ಅಸುನೀಗಿದಳೋ ಮತ್ತೆ ಉಸಿರಾಡಿದಳೋ ಎಂಬ ಸಸ್ಪೆನ್ಸ್‌ನ್ನು ಉಳಿಸಿ ಓದುಗರ ಕಲ್ಪನೆಗೇ ಬಿಡುತ್ತಾರೆ.

ಈವರೆಗೂ ಗಡಿ ಕೊರೆಯಲಾಗದಂತಹ, ವ್ಯಾಖ್ಯಾನ ಮಾಡಲಾಗದಂತಹ ಸಾವು ಸಾಂಕೇತಿಕವಾಗಿ ಎಲ್ಲಾ ಕಥೆಗಳಲ್ಲೂ ಅನುರಣಿಸಿರುವುದರಿಂದಲೇ ಕಥಾಸಂಕಲನಕ್ಕೆ ಈ ಶೀರ್ಷಿಕೆ ಅನ್ವರ್ಥವಾಗಿದೆ. ಈ ಸಂಕಲನದಲ್ಲಿ ಕಲ್ಪನೆ ಮತ್ತು ವಾಸ್ತವವನ್ನು ಹದವಾಗಿ ಬೆರೆಸಲಾಗಿದೆ. ಕಾಲ್ಪನಿಕ ವಿಷಯಗಳನ್ನು ಅರುಹುವಾಗಲೂ ಅವುಗಳನ್ನು ವಾಸ್ತವದ ಎಳೆಗಳಲ್ಲಿ ಬಂಧಿಸಲಾಗಿದೆ. ವಾಸ್ತವವನ್ನು ಹೇಳುವಾಗಲೂ ಕಲ್ಪನೆಯ ಪೋಷಾಕನ್ನು ತೊಡಿಸಲಾಗಿದೆ. ಪಾತ್ರ ಮತ್ತು ಸನ್ನಿವೇಶಗಳ ಪೋಷಣೆಗೆ ಎಲ್ಲೂ ಧಕ್ಕೆಯಾಗದಂತಹ ನುರಿತ ಬರೆವಣಿಗೆ ಗಮನ ಸೆಳೆಯುತ್ತದೆ. ಪ್ರತೀ ಕಥೆಯ ಆರಂಭದಿಂದ ಅಂತ್ಯದವರೆಗೂ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ. ಪ್ರಾಜ್ಞರಿಬ್ಬರು ಕುಳಿತು ಮಾತಾಡಬಹುದಾದ ಲೋಕದ ವಿಚಾರ, ಕಿವಿಗೊಡಬಹುದಾದ ರೋಚಕತೆ, ನವಿರಾದ ನಿರೂಪಣೆಗಳಿಂದಾಗಿ ಪ್ರತಿಯೊಂದು ಕತೆಯೂ ಕಲಾತ್ಮಕವಾಗಿ ಕಟ್ಟಲ್ಪಡುವಲ್ಲಿ ಕಂನಾಡಿಗಾ ನಾರಾಯಣರ ಅಸೀಮಶಕ್ತಿಯ ಅನಾವರಣವಾಗುತ್ತದೆ.

( ಕೃತಿ: ಅಸೀಮರೂಪಿ (ಕಥಾಸಂಕಲನ), ಲೇಖಕರು: ಕಂನಾಡಿಗಾ ನಾರಾಯಣ, ಪ್ರಕಾಶಕರು: ಸಪ್ನ ಬುಕ್ ಹೌಸ್, ಗಾಂಧಿನಗರ, ಪುಟ:೧೨೮, ಬೆಲೆ: ೧೧೦/-)

About The Author

ರೇವಣಸಿದ್ದಪ್ಪ ಜಿ.ಆರ್.

ರೇವಣಸಿದ್ದಪ್ಪ ಜಿ.ಆರ್. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿ ಕೇಂದ್ರದಲ್ಲಿರುವ  ಸರ್ಕಾರಿ ಎಸ್ ಜೆ ವಿ ಪಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಭಾಷಣ, ಚರ್ಚೆ ಇತ್ಯಾದಿಗಳಲ್ಲಿ ಒಲವು. "ಬಾಳನೌಕೆಗೆ ಬೆಳಕಿನ ದೀಪ" ಪ್ರಕಟಿತ ಕವನ ಸಂಕಲನ. "ಭವದ ಕಣ್ಣು" ಅಚ್ಚಿನಲ್ಲಿರುವ ಕವನ ಸಂಕಲನ. ನಾಡಿನ ಹಲವಾರು ಪತ್ರಿಕೆಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ