ಎಷ್ಟೋ ಜನ ಸರಳತೆ, ಸಹೃದಯತೆ, ಸಹನೆ, ಕರುಣೆಯನ್ನು ನಂಬದೆ ಡಂಭಾಚಾರ, ನಾಟಕ, ಕೃತಕತೆ ಎಂಬ ಹಣೆಪಟ್ಟಿ ಕಟ್ಟಿ ಸಂಶಯದಿಂದಲೇ ಎದುರುಗೊಳ್ಳುತ್ತಾರೆ. ಹಣದೊಂದಿಗೆ ಮದ, ಅಧಿಕಾರದೊಂದಿಗೆ ದರ್ಪ, ಶ್ರೀಮಂತಿಕೆಯೊಂದಿಗೆ ಖಾಯಿಲೆ, ಬಡತನದೊಂದಿಗೆ ನೆಮ್ಮದಿ ಇದ್ದಿರಲೇಬೇಕೆಂದು ಭಾವಿಸಿರುತ್ತಾರೆ. ಅತ್ಯಂತ ರಂಜನೀಯವಾಗಿ ಅದನ್ನು ಬಣ್ಣಿಸಿಯೂ ತೋರುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ಭಿನ್ನ. ಪ್ರತಿಯೊಬ್ಬರ ಪರಿಸ್ಥಿತಿಯೂ ಭಿನ್ನ. ಒಂದೇ ಅಚ್ಚಿನಲ್ಲಿ ಅಳೆದು, ಸುರಿದು ತಯಾರಾದ ಬದುಕಲ್ಲ ಎಲ್ಲರದ್ದು.
ಎಸ್. ನಾಗಶ್ರೀ ಅಜಯ್ ಬರೆಯುವ ‘ಲೋಕ ಏಕಾಂತ’ ಅಂಕಣ
“ಇನ್ನೊಂದು ಸಲ ಕೆಟ್ಟ ಮಾತು ಬಾಯಲ್ಲಿ ಬರಬೇಕಲ್ಲ… ಮೂತಿ ಮೇಲೆ ಬರೆ ಬೀಳತ್ತೆ. ಸಣ್ಣಮಗು ಅಂತ ಮುಲಾಜಿಗೆ ಬಿದ್ದು ಮುದ್ದು ಮಾಡಿದ್ರೆ, ಇದನ್ನೇ ಮುಂದುವರೆಸಿಕೊಂಡು ಹೋಗ್ತೀರ. ಹತ್ತು ಜನರ ಮುಂದೆ ತಾಯಿಯಾದವಳು ನಾನು ತಲೆತಗ್ಗಿಸಿ ನಿಲ್ಲಬೇಕಾಗತ್ತೆ. ಇವತ್ತೇ ಕಡೆ. ಇನ್ನೊಂದು ಸಲ ಕೆಟ್ಟ ಮಾತು ಬಾಯಲ್ಲಿ ಬರಕೂಡದು. ತಪ್ಪಾಯ್ತು ಅಂತ ಕ್ಷಮೆ ಕೇಳಿದ ಮೇಲೆ ಮನೆಯೊಳಗೆ ಕಾಲಿಡು.” ಎಂದು ಆರೇಳು ವರ್ಷದ ಮಗಳ ಮೇಲೆ ನಿರ್ಧಾರಿತ ದನಿಯಲ್ಲಿ ತಾಯಿ ಜೋರು ಮಾಡುತ್ತಿದ್ದಳು. ತಿಳಿಯದೆ ಆಡಿದ ಮಾತಿಗೆ ಇಷ್ಟು ಸಿಡಿದೇಳುವ ಅವಶ್ಯಕತೆಯೇನಿತ್ತು ಎಂದು ಕೆಲವರು ಮುಖಮುಖ ನೋಡಿಕೊಂಡರು. ತಪ್ಪು ಮಾಡಿದಾಗಲೇ ತಿದ್ದಿ ಬುದ್ಧಿ ಹೇಳುವುದು ಸರಿಯೆಂದರು ಹಲವರು. ತಾಯಿಯಾಗಿ ಮಗುವಿನ ವ್ಯಕ್ತಿತ್ವ ನಿರ್ಮಿಸುವ ಹೊಣೆಯಿರುವಾಗ, ಪ್ರತಿ ವಿಷಯಕ್ಕೂ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡುತ್ತಾ ನಡೆಯಲು ಸಾಧ್ಯವಿಲ್ಲ ಎನ್ನುವುದು ಆಕೆಯ ನಿಲುವು. ಇಲ್ಲಿ ಮಾತು ಒಂದು ಸಣ್ಣ ಉದಾಹರಣೆ ಅಷ್ಟೇ.
ಮನೆಗೆ ಬಂದ ತಕ್ಷಣ ಶಾಲೆಯ ಬಟ್ಟೆಯಿಂದ ಮನೆಯುಡುಪಿಗೆ ಬದಲಾಯಿಸಿ, ಮುಖ ತೊಳೆದು, ಆಟವಾಡಲು ಹೊರಹೋಗುವುದು, ಬಂದ ಅತಿಥಿಗಳ ಮುಂದೆ ತಿಂಡಿ, ತಿನಿಸಿಗೆ ಹಾಹಾಕಾರ ಪಡದೆ ಜಾಣಮಕ್ಕಳ ಹಾಗೆ ವಿಧೇಯವಾಗಿ ನಡೆಯುವುದು, ಸಮಯಕ್ಕೆ ಸರಿಯಾಗಿ ಸಿದ್ಧವಾಗುವುದು, ಹೇಳಿಸಿಕೊಳ್ಳದೆ ಮನೆಕೆಲಸದಲ್ಲಿ ನೆರವಾಗುವುದು, ಮನೆಯ ಪರಿಸ್ಥಿತಿಯರಿತು ಆಸೆಗಳಿಗೆ ಕಡಿವಾಣ ಹಾಕಿಕೊಳ್ಳುವುದು, ಸುಳ್ಳು, ಮೋಸ, ಕೆಟ್ಟ ಸಹವಾಸಗಳ ತಂಟೆಗೆ ಹೋಗದಿರುವುದು… ಹೀಗೆ ಸಣ್ಣವೆನಿಸುವ ಆದರೆ ಬದುಕಿನ ಯಾವುದೋ ತಿರುವಿನಲ್ಲಿ ಕೈಹಿಡಿಯುವ ಅಭ್ಯಾಸಗಳನ್ನು ಬಾಲ್ಯದಿಂದಲೇ ಮನೆಯ ವಾತಾವರಣ ಕಲಿಸಿರುತ್ತದೆ. ಎಷ್ಟೇ ಓದಿದರೂ, ಉನ್ನತ ಸ್ಥಾನಮಾನಕ್ಕೇರಿದರೂ, ಹಣ ಗುಡ್ಡೆ ಹಾಕಿಕೊಂಡರೂ ಕೆಲವೊಂದು ಅಭ್ಯಾಸಗಳನ್ನು ನಾವು ಮೀರಲಾಗುವುದಿಲ್ಲ. ಅದು ಒಳ್ಳೆಯ ಅಭ್ಯಾಸದ ಅಂಕುಶವಾದಾಗ ವ್ಯಕ್ತಿತ್ವಕ್ಕೊಂದು ಮೆರುಗು ಪ್ರಾಪ್ತವಾಗುತ್ತದೆ.
ಸಾಧಕರ ಕಥೆಗಳನ್ನು, ಬದುಕನ್ನು ನಿರೂಪಿಸುವಾಗಲೂ ಸರಳತೆ, ಮಾನವೀಯತೆ, ಸಹೃದಯತೆ, ಶಿಸ್ತು, ಸಮಯಪಾಲನೆ, ಸಂಸ್ಕಾರವನ್ನು ಪ್ರತಿಫಲಿಸುವ ಘಟನೆಗಳು ಪ್ರಾಶಸ್ತ್ಯ ಪಡೆಯುತ್ತವೆ. ಸಂಪಾದಿಸಿದ ಜ್ಞಾನ, ಹಣ, ಅಧಿಕಾರ, ಪ್ರಾಬಲ್ಯಗಳಿಗಿಂತ ಮನಸ್ಸನ್ನು ಆವರಿಸುವುದು ವ್ಯಕ್ತಿತ್ವದ ಸೂಕ್ಷ್ಮಗಳು. ಪ್ರೇಮ, ಸ್ನೇಹ, ದಯೆ, ಕರುಣೆಯೆಂಬ ಭಾವಗಳು ಸೆಳೆಯುವಷ್ಟು ಅಂತಸ್ತು, ಆಸ್ತಿಪಾಸ್ತಿಗಳು ಮಹತ್ವದ್ದೆನಿಸುವುದಿಲ್ಲ. “ಇದ್ದರೆ ಅವರಿಗಾಯಿತು. ಕಷ್ಟಪಟ್ಟರು ಸಾಧಿಸಿದರು. ಯೋಗಾನುಯೋಗ ಕೂಡಿಬಂದರೆ ಆಳು ಅರಸಾಗಬಲ್ಲ. ಅದರಲ್ಲೇನಿದೆ? ಎಷ್ಟಿದ್ದರೂ ಹೊಟ್ಟೆ ತುಂಬಿದ ಮೇಲೆ ಒಂದು ತುತ್ತು ಹೆಚ್ಚಿಗೆ ತಿನ್ನಲಾಗುವುದಿಲ್ಲ. ಅರಮನೆಯಲ್ಲೇ ಇದ್ದರೂ ಮಲಗಲು ಆರಡಿ ಮೂರಡಿ ಸಾಕೇ ಸಾಕು. ಬಡವನಾದರೂ, ಶ್ರೀಮಂತನಾದರೂ ಅದೇ ಹಸಿವು, ಅದೇ ನಿದ್ದೆ, ಅದೇ ಸುಖ, ಅದೇ ಕಷ್ಟ. ಆನೆ ಭಾರ ಆನೆಗೆ. ಇರುವೆ ಭಾರ ಇರುವೆಗೆ.” ಎಂದು ಒಂದೇ ಉಸಿರಿನಲ್ಲಿ ಠುಸ್ ಎನಿಸಬಹುದು. ಆದರೆ ವ್ಯಕ್ತಿತ್ವದ ವಿಶೇಷಗಳನ್ನು ಅಷ್ಟು ಸುಲಭಕ್ಕೆ ಅಲ್ಲಗೆಳೆಯಲಾಗುವುದಿಲ್ಲ. ಹೊರಗಿನ ಅಭಿವ್ಯಕ್ತಿ ಏನೇ ಇದ್ದರೂ, ಪ್ರೀತಿ, ವಿಶ್ವಾಸಗಳಿಗೆ ಸೋಲದ ಹೃದಯವಿದೆಯೇ?
ಎಷ್ಟೋ ಜನ ಸರಳತೆ, ಸಹೃದಯತೆ, ಸಹನೆ, ಕರುಣೆಯನ್ನು ನಂಬದೆ ಡಂಭಾಚಾರ, ನಾಟಕ, ಕೃತಕತೆ ಎಂಬ ಹಣೆಪಟ್ಟಿ ಕಟ್ಟಿ ಸಂಶಯದಿಂದಲೇ ಎದುರುಗೊಳ್ಳುತ್ತಾರೆ. ಹಣದೊಂದಿಗೆ ಮದ, ಅಧಿಕಾರದೊಂದಿಗೆ ದರ್ಪ, ಶ್ರೀಮಂತಿಕೆಯೊಂದಿಗೆ ಖಾಯಿಲೆ, ಬಡತನದೊಂದಿಗೆ ನೆಮ್ಮದಿ ಇದ್ದಿರಲೇಬೇಕೆಂದು ಭಾವಿಸಿರುತ್ತಾರೆ. ಅತ್ಯಂತ ರಂಜನೀಯವಾಗಿ ಅದನ್ನು ಬಣ್ಣಿಸಿಯೂ ತೋರುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ಭಿನ್ನ. ಪ್ರತಿಯೊಬ್ಬರ ಪರಿಸ್ಥಿತಿಯೂ ಭಿನ್ನ. ಒಂದೇ ಅಚ್ಚಿನಲ್ಲಿ ಅಳೆದು, ಸುರಿದು ತಯಾರಾದ ಬದುಕಲ್ಲ ಎಲ್ಲರದ್ದು. ಎಷ್ಟು ಜನರೋ, ಅಷ್ಟು ಬಗೆ. ಆದರೆ ಈ ರೂಢಿಗತ ನಂಬಿಕೆಗಳು, ಮೌಢ್ಯಗಳನ್ನು ಮೆಟ್ಟಿ ನಿಲ್ಲುವುದೇ ಸಾಧನೆ. ಹಣದೊಂದಿಗೆ ಸಜ್ಜನಿಕೆ, ಅಧಿಕಾರದೊಂದಿಗೆ ಮಾನವೀಯತೆ, ಶ್ರೀಮಂತಿಕೆಯೊಂದಿಗೆ ನೆಮ್ಮದಿ, ಬಡತನದೊಂದಿಗೆ ಸಾಧನೆಯ ಹಂಬಲ ಇರಬಹುದೆಂದು ನಿರೂಪಿಸಬಹುದು. ಬಾಲ್ಯದ ಸಣ್ಣಸಣ್ಣ ಪಾಠಗಳು ಮೆಟ್ಟಿಲಾದರೆ, ಸಾಧನೆಯ ಶಿಖರ ಮುಟ್ಟಲು ಗಟ್ಟಿಯಾಸರೆ ದೊರೆತಂತೆ.
ಕಲಿತ ಕೆಟ್ಟ ಮಾತು, ರೂಢಿ ಮಾಡಿಕೊಂಡ ಒಂದು ದುರಭ್ಯಾಸ, ಮೊಂಡುಬಿದ್ದು ಉಳಿಸಿಕೊಂಡ ದುರಹಂಕಾರ, ಮರೆತುಹೋದ ಶಿಷ್ಟಾಚಾರ, ರೂಢಿಸಿಕೊಳ್ಳಲಾಗದ ಶಿಸ್ತು, ಸಮಯಪಾಲನೆ ಒಂದು ದುರ್ಬಲ ಘಳಿಗೆಯಲ್ಲಿ ಜಗಜ್ಜಾಹೀರಾಗಿ ಅದುವರೆಗಿನ ಬದುಕಿನ ಘನತೆಯನ್ನೇ ಮಣ್ಣುಪಾಲು ಮಾಡಿರುತ್ತವೆ. ಎಂದೋ ಕಲಿತ ಒಳ್ಳೆಯ ಮಾತು, ನಡೆನುಡಿಗಳು ಆಪತ್ಕಾಲದಲ್ಲಿ ಕೈಹಿಡಿದು ನಡೆಸುವ, ಬದುಕಿನ ದಿಕ್ಕನ್ನೇ ಬದಲಿಸಿ ಬೆಳಕಾಗುವ ಜ್ಯೋತಿಯಾಗುತ್ತವೆ. ನಾವೆಷ್ಟೇ ಮುಖವಾಡ ಧರಿಸಿ ನಾಟಕವಾಡಿದರೂ, ಮೈಮರೆವಿನ ಕ್ಷಣವೊಂದು ಉದಯಿಸಿ, ನಿಜಬಣ್ಣ ಬಯಲುಮಾಡುವುದು ಸತ್ಯ. ನಿಜಬಣ್ಣದಲ್ಲಿ ನಂಜು, ಕಲೆಯಿರದಂತೆ ರೂಪುಗೊಳ್ಳುವುದಲ್ಲವೆ ಸವಾಲು?
ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.
ಜಲಪಾತದಂತೆ ಉಕ್ಕಿ ಹರಿಯುತಿದೆ ನಿಮ್ಮ ತಾಳ್ಮೆಯ ಬುದ್ಧಿ ಮಾತುಗಳು, ನಾಗಶ್ರೀ.
ಮೇಡಮ್, ಎಲ್ಲ ವಯಸ್ಸಿನವರೂ ಕಂಡುಕೊಳ್ಳುಬಹುದಾದ ನಿಜ ಸತ್ಯದ ಮಾತುಗಳು. ಇವತ್ತು ನಾವೇನಾದರೂ ಆಗಿದ್ದರೆ, ಅವು ನಮ್ಮ ಬಾಲ್ಯದ ಪಾಠಗಳೆ. ಓದಿನ ಖುಷಿ ಕೊಟ್ಟ ಬರಹ