ಕಾಫಿ – ಕಪ್ – ಲೈಫ್

ಬಿಸಿಲುಕ್ಕಿಸದ ನೆಲದಲ್ಲಿ
ಜಾರು – ಜೌಗುಗಳಲ್ಲಿ
ವರ್ಷವಿಡೀ,
ಹೆಣಗಿ
ಹದವರಿತು ಬಿದ್ದ
ಮಳೆಗಷ್ಟೇ,
ಜಡೆಗಟ್ಟಿ
ಹೂ, ಅರಳುವುದು,
ಪ್ರಕೃತಿಯ ಅಂಟಿನ
ನಂಟಿನ ಹಸಿರು ಕಾಯಾಗಿ
ಕೆಂಪು ಹಣ್ಣು,
ಬಿಡಿಸುವ ಕಲೆ, ಕಾಫಿಗರಿಗಷ್ಟೇ
ಬಿಡಿಸಿ ನೆನಸಿ,
ಬೀಜವಾಗಿಸಿ,
ಒಣಗಿಸಿ ಹುರಿದು,
ಲಿಂಗ ತತ್ವದಲ್ಲಿ ಮುಳುಗಿ
ಶರಣನಾದಂತೆ,
ಕಪ್ಪಾಗಿ ಕಡೆಗೆ
ಪುಡಿಯಾದ,
ಕಾಫಿಯ ತತ್ವ, ಅದೂ,
ಇದೂ, ಅನುಭೂತಿ,
ಇದರೊಂದಿಗೆ ಬೆರೆವ
ಹಾಲು, ಸಕ್ಕರೆ
ಬಣ್ಣವರಿತು ಹದಗೊಂಡ
ಮೇಲೆ,
ನಿಜ ಕಾಫಿ, ಶರಣನಂತೆ,
ಬೇಕು ಸರಿಯಾದ
ಕಪ್ಪು-
ಕಪ್ಪು – ಕಾಫಿಯ ನೆಂಟು
ಕೆಲವರೆಂದರು ಕಾಫಿ,
ಚನ್ನಾಗಿದ್ದರೆ ಆಯ್ತು ಕಪ್
ಯಾವುದಾದರೇನು?
ಇಲ್ಲ ಇಲ್ಲ
ಕಾಫಿ – ಕಪ್
ಬಹಳ ಮುಖ್ಯ,
ಕಪ್ಪನ್ನು ಹಿಡಿಯುವ ಹಿಡಿ,
ಯಾವ ರೀತಿಯ ಕಪ್ಪು,
ಬಿಸಿ, ಬಹಳ ಹೊತ್ತು ಇರುತ್ತದಾ?
ಕಾಫಿ ಬೇಗ ಆರಿದರೆ,
ಸ್ವಾದ ಕಳೆದುಕೊಳ್ಳುತ್ತದೆ?
ಕಪ್ ನ ಅಂದ
ಚಂದ
ಯಾವ ದೇಶವಾಗಲಿ,
ವೇಶವಾಗಲಿ, ಕೂತು
ಕಪ್ನ ಕೈಲಿ ಹಿಡಿಯುವ ಶೈಲಿ,
ಕೋಲ್ಡ್ ಕಾಫಿಗೆ ಬೇರೆಯೇ,
ಇಲ್ಲಿ ಬಿಸಿ ಕಾಫಿಯ ಕಥೆ,
ಕವಿತೆ,
ಕಪ್ ನ ಮೇಲ್ಮೈ ಹೇಗಿದೆ?
ಕಾಫಿ – ಕುಡಿಯುವಾಗ,
ಕಾಫಿಯ ಹಬೆ ಮುಖಪೂರ್ತಿ
ಆವರಿಸಿ,
ಘಮಲು
ಮೂಗಿನಿಂದಾಘ್ರಾಣಿಸಿ, ನೆತ್ತಿ ತಲುಪಿ,
ನರನಾಡಿಗಳೆಲ್ಲಾ ಚೈತನ್ಯ
ಗೊಳ್ಳಬೇಕು,
‘ಭ್ರಾಮರಿ’ ಮಾಡಿದಂತೆ,
‘ಕವಿತೆ’ ಯನ್ನು ಚಂದದ
ಪರಿಸರದಲ್ಲಿ
ನಿಧಾನವಾಗಿ
ಅರ್ಥವನ್ನು ಆಸ್ಪಾದಿಸಿ ಓದಿದಂತೆ.

ಶಾಂತಾ ಜಯಾನಂದ್ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರು.
ಸಮಾಜಶಾಸ್ತ್ರ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ. ಎ ಪದವೀಧರರು. ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಎಂ. ಫಿಲ್ ಪದವಿ ಪೂರೈಸಿದ್ದಾರೆ.
ದೂರದರ್ಶನದ ಚಂದನವಾಹಿನಿಯಲ್ಲಿ ನಿರೂಪಕಿಯಾಗಿ ಹಾಗೂ ಡಾಕ್ಯುಮೆಂಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಎಂ.ಎಸ್ ರಾಮಯ್ಯ ಕಾನೂನು ಮತ್ತು ಮ್ಯಾನೇಜ್ ಮೆಂಟ್ ಕಾಲೇಜು ಹಾಗೂ ಇಂಡಿಯನ್ ಅಕಾಡೆಮಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ