ಎ ಕೆ ರಾಮಾನುಜನ್ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರು. ಅವರ ದಿನಚರಿಯನ್ನು ಆಧರಿಸಿದ ಪುಸ್ತಕ ‘ಜರ್ನೀಸ್, ಅ ಪೋಯಟ್ಸ್ ಡೈರಿ’ ಎರಡು ವರ್ಷಗಳ ಹಿಂದೆ ಪ್ರಕಟವಾಯಿತು. ಈ ಜೀನಿಯಸ್ ಬರಹಗಾರ
ಐದು ದಶಕಗಳ ಕಾಲ ಬರೆದ ದಿನಚರಿ ಪುಟಗಳನ್ನು ತಮ್ಮ ಓದಿನಲ್ಲಿ ಕಾಣಿಸಿದ್ದಾರೆ, ಕಾವ್ಯಾ ಕಡಮೆ ಈ ಬಾರಿಯ ಅಂಕಣದಲ್ಲಿ.

 

Teach me, Lord: to dissolve and not to drown
in the terrible clarity of this pond
ಅಂತ ಶುರುವಾಗುತ್ತದೆ ರಾಮಾನುಜನ್ ಅವರ ಒಂದು ಕವಿತೆ. ಈ ಸುನೀತವನ್ನು ಅವರು ಬರೆದದ್ದು ಇಪ್ಪತ್ತೆರಡರ ಹರೆಯದಲ್ಲಿ. ಅವರಾಗ ತಮಿಳುನಾಡಿನ ಮಧುರೈ ಪಟ್ಟಣದ ಕಾಲೇಜೊಂದರಲ್ಲಿ ಇಂಗ್ಲೀಷ್ ಪಾಠ ಹೇಳುತ್ತಿದ್ದರು. ಮುಂದಿನ ವರ್ಷ ಬೆಳಗಾವಿಗೆ ವರ್ಗವಾಗುವವರಿದ್ದರು. ನಂತರದ ವರ್ಷಗಳಲ್ಲಿ ಫುಲ್‌ಬ್ರೈಟ್ ವಿದ್ಯಾರ್ಥಿವೇತನ ಮತ್ತು ಸ್ಮಿಥ್- ಮುಂಡ್ ದತ್ತಿನಿಧಿಯ ಸಹಾಯದೊಂದಿಗೆ ಆಗಿನ ಬಾಂಬೆಯಿಂದ ನ್ಯೂಯಾರ್ಕ್ ನಗರಕ್ಕೆ ಹಡಗಿನ ಮೂಲಕ ಪ್ರಯಾಣ ಬೆಳೆಸುವವರಿದ್ದರು. ಮನೆ ಭಾಷೆ ತಮಿಳಾದರೂ ಆಗಲೇ ಇಂಗ್ಲೀಷು ಮತ್ತು ಕನ್ನಡದಲ್ಲಿ ತಮ್ಮ ವಿಶಿಷ್ಟ ಧಾಟಿಯ ಕವಿತೆಗಳನ್ನೂ, ಸಂಕ್ಷಿಪ್ತ ಬರಹಗಳನ್ನೂ, ನಾಟಕಗಳನ್ನೂ ಬರೆಯಲು ಶುರು ಮಾಡಿದ್ದ ರಾಮಾನುಜನ್ ಈ ಪದ್ಯದ ಮೂಲಕ ಎದೆಯ ಕೊಳದ ಕಂಪನಗಳಿಗೆ ಒಂದು ಕ್ಷಣ ಕಿವಿಯಾಗಿರುವುದನ್ನು ಕಾಣಬಹುದು.

ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್ ಹುಟ್ಟಿದ್ದು 1929ರ ಮಾರ್ಚ್ ತಿಂಗಳಿನಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ 1950ರಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮುಂದಿನ ಎಂಟು ವರ್ಷ ಕ್ರಮವಾಗಿ ಕೇರಳದ ಕ್ವಿಲಾನ್, ತಮಿಳುನಾಡಿನ ಮಧುರೈ, ಕರ್ನಾಟಕದ ಬೆಳಗಾವಿ ಮತ್ತು ಗುಜರಾತಿನ ಬರೋಡದಲ್ಲಿ ಉಪನ್ಯಾಸಕ ವೃತ್ತಿಯನ್ನು ನಿರ್ವಹಿಸಿದ್ದರು. ಮುಂದೆ ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮುಗಿಸಿ ಯೂನಿವರ್ಸಿಟಿ ಆಫ್ ಶಿಕಾಗೋನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಶಿಕಾಗೋ ವಿಶ್ವವಿದ್ಯಾಲಯದ ಸೌಥ್ ಏಶಿಯನ್ ಸ್ಟಡೀಸ್ ವಿಭಾಗಕ್ಕೆ ರಾಮಾನುಜನ್‌ರ ಕೊಡುಗೆ ಅಪಾರವಾದುದು.

ತಮ್ಮ ವಿದ್ಯಾರ್ಥಿ ಜೀವನದಿಂದ ಶುರುವಾಗಿ 1993ರಲ್ಲಿ ತೀರಿಕೊಳ್ಳುವ ತನಕ ಆಗಾಗ ಬರೆದ ಡೈರಿಯ ಪುಟಗಳು ರಾಮಾನುಜನ್‌ರ ಸೃಜನಶೀಲ ಮನಸ್ಸಿನೊಳಗೆ ಇಣುಕಲು ಒಳಕಿಂಡಿಗಳನ್ನು ಒದಗಿಸುತ್ತವೆ. ಜರ್ನೀಸ್- ಅ ಪೋಯಟ್ಸ್ ಡೈರಿ ಕೃತಿಯನ್ನು ಅವರ ಮಗ ಕೃಷ್ಣ ರಾಮಾನುಜನ್ ಮತ್ತು ಎ.ಕೆ.ಆರ್ ಬರಹಗಳ ಕುರಿತು ಅಪರೂಪದ ಅಧ್ಯಯನ ನಡೆಸಿದ ಸ್ಪೇನ್ ದೇಶದ ಗಿಯರ್ಮೊ ರಾಡ್ರಿಗಸ್ ಸಂಪಾದಿಸಿದ್ದಾರೆ. ಈ ಪುಸ್ತಕಕ್ಕೆ ಗಿರೀಶ್ ಕಾರ್ನಾಡರ ಮೌಲಿಕ ಮುನ್ನುಡಿಯಿದೆ.

“I resemble everyone but myself” ಎಂದ ರಾಮಾನುಜನ್ ತಮ್ಮ ಆಲೋಚನೆಗಳನ್ನು ಒಂದೆಡೆ ಕ್ರೋಢೀಕರಿಸಿಕೊಳ್ಳಲು, ಬರೆಯುತ್ತಲೇ ಯೋಚಿಸಲು, ಕಣ್ಗಳ ಹೊರತಾಗಿಯೂ ಎದುರಿಗಿದ್ದುದನ್ನು ಕಾಣಲು ಬೇಕಾದ ಅದೃಷ್ಟ ಅರಸಲು ಈ ಡೈರಿ ಬರವಣಿಗೆಯ ಮೊರೆ ಹೋಗಿರುವುದು ಕಾಣಸಿಗುತ್ತದೆ. ಆಗಾಗ ನಿಂತು ತಮ್ಮ ಹಳೆಯ ಡೈರಿಗಳನ್ನು ಮರು ಓದಿಗೆ ಒಳಪಡಿಸಿ, ಹೊಸ ಪ್ರತಿಗಳನ್ನು ಮಾಡುತ್ತ ಭೂತಕಾಲದ ತನ್ನೊಂದಿಗೆ ನಿರಂತರವಾಗಿ ಸಂವಹನಿಸುತ್ತ ವರ್ತಮಾನದ ತಾಕಲಾಟಗಳಿಗೆ ಉತ್ತರ ಹುಡುಕುವುದು ಅವರಿಗೆ ಪ್ರಿಯವಾದ ಶೈಲಿ.

1977ರ ಒಂದು ಉಲ್ಲೇಖ ಹೀಗಿದೆ. “ಹಳೆಯ ಡೈರಿಗಳನ್ನು ಮತ್ತೆ ಓದುತ್ತಿದ್ದೇನೆ. ಸನ್ನಿವೇಶಗಳು ಬದಲಾದರೂ ಭಾವನೆಗಳು ಪುನರಾವರ್ತನೆಯಾಗುವುದ ಕಂಡು ಬೇಸತ್ತಿದ್ದೇನೆ. ಅನುಭವ ಅನ್ನೋದು ಅನಿಸಿಕೆಗಳನ್ನು ಒಂಚೂರೂ ಬದಲಿಸಲಿಲ್ಲವಲ್ಲ…” ಎನ್ನುತ್ತಾರೆ. 1985ರಲ್ಲಿ ಮತ್ತೆ ಇದೇ ವಿಷಯಕ್ಕೆ ಮರಳುತ್ತಾರೆ. “ಹಳೆಯ ಡೈರಿಗಳನ್ನು ಓದಿದಾಗ ತಿಳಿದಿದ್ದೆಂದರೆ, ಕಳೆದ ಇಪ್ಪತ್ತು ವರ್ಷಗಳಲ್ಲಿ ಕೆಲವು ಅಥವಾ ಎಲ್ಲ ಸಂದರ್ಭಗಳು ಬದಲಾಗಿದ್ದರೂ ಸಂವೇದನೆಗಳ ವಿಷಯಕ್ಕೆ ಬಂದಾಗ ಮಾತ್ರ ಅವೇ ಅವೇ ತೊಳಲಾಟಗಳನ್ನು ಕಂಡಿದ್ದೇನೆ. ಒಂದು ಸರಳ ನಿಯಮ ಪಾಲಿಸಬಹುದು: ಒಂದು ಭಾವನೆ ಮರುಕಳಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಬಾರದು, ಆ ಬಗ್ಗೆ ಲಕ್ಷ್ಯ ಕೊಟ್ಟು ಅದನ್ನಲ್ಲೇ ಸಾಯಿಸಿಬಿಡಬೇಕು.”

ಅವರ ಕವಿತೆಗಳಲ್ಲಿ ಕಾಣಸಿಗುವ ಶಬ್ದದ ತೂಕಬದ್ಧ ಪ್ರಯೋಗ, ಭಾಷೆಯ ಕುರಿತಾದ ನಿಷ್ಠುರ ನಿಷ್ಠೆ ಈ ಜರ್ನಲ್ ಬರವಣಿಗೆಯಲ್ಲೂ ಮುಂದುವರೆದಿದೆ. ಅಥವಾ ಇಲ್ಲಿಂದಲೇ ಆರಿಸಿಕೊಂಡಂತೆ ಎಷ್ಟೊಂದು ಕವನಗಳ ಮೊದಲ ಡ್ರಾಫ್ಟುಗಳು, ಕತೆಗಳಾಗಿ ಮುಂದುವರೆದ ಇತರ ಬರಹಗಳು ಕಾಣಸಿಗುತ್ತವೆ. ಅವರ ಮತ್ತೊಬ್ಬನ ಆತ್ಮಚರಿತ್ರೆ, ಅಣ್ಣಯ್ಯನ ಮಾನವಶಾಸ್ತ್ರ, ಮಧುರೆಯಲ್ಲಿ ಒಂದು ತಲೆ ಕಥನಗಳು ಬೀಜರೂಪದಲ್ಲಿ ಓದಿಗೆ ಸಿಗುತ್ತವೆ. ಈ ಸಂಕಲನದಲ್ಲಿ ಒಂದಿಷ್ಟು ಆತ್ಮ-ಸಂವಾದಿ ಅಪ್ರಕಟಿತ ಕವನಗಳೂ ಇವೆ.

“Life is the very antithesis of life” ಎಂದ ಎ.ಕೆ.ಆರ್, ತಮಗೆ ಬಿದ್ದ ಕನಸುಗಳನ್ನು ದಾಖಲಿಸಲು ‘ಡ್ರೀಮ್ ಬುಕ್’ ಮತ್ತು ದಿನನಿತ್ಯದ ಕೆಲಸಗಳಲ್ಲಿ ತೊಡಗಿರುವಾಗ ಹೊಳೆಯುವ ಸಾಲುಗಳನ್ನು ನಮೂದಿಸಲು ‘ಕಾಮನ್ ಪ್ಲೇಸ್ ಬುಕ್’ಗಳನ್ನು ತಮ್ಮ ಸಾಥಿಗಳಾಗಿ ಇರಿಸಿಕೊಂಡವರು. ಕೆಲ ಕಾಲದ ನಂತರ ಇಡೀ ಪುಸ್ತಕವನ್ನು ಎಲ್ಲೆಂದರಲ್ಲಿ ಹೊತ್ತೊಯ್ಯಲಾಗದೇ ಪುಟ್ಟ ಪುಟ್ಟ ಚೀಟಿಗಳನ್ನು ಕಿಸೆಯಲ್ಲಿಟ್ಟುಕೊಂಡು, ಹೊಳೆದಾಗ ನೋಟ್ಸ್ ಮಾಡಿಟ್ಟುಕೊಂಡು ಆ ನಂತರ ಚೀಟಿಗಳನ್ನು ಫೈಲ್ ಮಾಡುವವರು. “ಇರಲಿ ಅಂತ ಬಿಟ್ಟರೆ, ಆಮೇಲೆ ಮರೆತೇ ಹೋಗುತ್ತದೆ” ಎನ್ನುವುದು ಅವರದೇ ವಿವರಣೆ.

ರಾಮಾನುಜನ್‌ರ ಬರವಣಿಗೆಯ ಶೈಲಿಯೇ ವಿಶಿಷ್ಟವಾದುದು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರ ಬರಹಗಳನ್ನು ಅರ್ಥೈಸಿಕೊಳ್ಳಲು ಅವರ ಅನುವಾದಗಳನ್ನೂ ಜೊತೆಗಿಟ್ಟು ನೋಡಬೇಕಾಗುತ್ತದೆ. ಕನ್ನಡದ ಶ್ರೇಷ್ಠ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು ಒಂದೆಡೆ ಹೇಳಿದ ಹಾಗೆ “ಅವರ ಕನ್ನಡ ಕಾವ್ಯ ಪೂರ್ಣವಾಗಿ ಅರ್ಥವಾಗಬೇಕಾದರೆ ಅವರ ಇಂಗ್ಲೀಷ್ ಕಾವ್ಯವನ್ನೂ ಓದಬೇಕಾಗುತ್ತದೆ. ಅದರಂತೆ ಅವರ ಇಂಗ್ಲೀಷ್ ಕಾವ್ಯದ ಅರ್ಥವಂತಿಕೆಯ ತಳಹದಿ ಅವರ ಕನ್ನಡ ಕಾವ್ಯದಲ್ಲಿದೆ. Six Prayers for Murugan ಎಂಬ ಇಂಗ್ಲೀಷ್ ಕವಿತೆ ಸ್ವತಂತ್ರವಾಗಿದ್ದೂ ಒಂದು ಹಳೆಯ ತಮಿಳು ಪದ್ಯದ ಭಾಷಾಂತರವಾಗಿದೆ. ರಾಮಾನುಜನ್‌ರಲ್ಲಿ ಭಾಷಾಂತರ ಕ್ರಿಯೆ ಎಷ್ಟು ಸೂಕ್ಷ್ಮವಾದದ್ದೆಂದರೆ ಅದು ಸ್ವಂತದ ಅನುಭೂತಿಯಾಗಿ ಕೂಡ ಬರಬಹುದು.”

“ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವೇ ಪಡದ ವಿಷಯಗಳಲ್ಲೂ ಜೋಡಣೆಗಳನ್ನು, ಪ್ಯಾಟರ್ನ್‌ಗಳನ್ನು ಕಾಣುವ ವಿಶೇಷ ಶಕ್ತಿ ರಾಮಾನುಜನ್‌ರಲ್ಲಿತ್ತು” ಎನ್ನುತ್ತಾರೆ ಕಾರ್ನಾಡರು ತಮ್ಮ ಮುನ್ನುಡಿಯಲ್ಲಿ. ತಮಿಳಿನ ಸಂಗಂ ಸಾಹಿತ್ಯದಲ್ಲಿ ಬರುವ ‘ಅಕಂ’ ಮತ್ತು ‘ಪುರಂ’ ಪರಿಕಲ್ಪನೆಯನ್ನು ತಮ್ಮ ವಿವಿಧ ಬರಹಗಳಲ್ಲಿ ವಿಸ್ತರಿಸಿದ ರಾಮಾನುಜನ್ ಕವಿಯ ಕಣ್ಗಳಿಂದ ಲೋಕವನ್ನು ಮರುಸೃಷ್ಟಿಸಿದವರು.

ಅಪ್ರತಿಮ ಜ್ಞಾಪಕಶಕ್ತಿಯ ಜೊತೆಗೆ ದಿನಕ್ಕೆ ಕನಿಷ್ಟ ನೂರು ಪುಟಗಳನ್ನು ಬದುಕಿನುದ್ದಕ್ಕೂ ಓದಿದ ಅವರು ಅಲ್ಲಲ್ಲಿ ಶೇಕ್ಸ್‌ಪಿಯರ್, ಟ್ಯಾಗೋರ್, ಪಿಕಾಸೋ, ಜಾನ್ ಕೀಟ್ಸ್, ಲೆವಿಸ್, ಪ್ಲಾಟೋ ಮುಂತಾದವರ ಉಕ್ತಿಗಳನ್ನು ಉದ್ಧರಿಸುತ್ತ ಹೋಗುತ್ತಾರೆ.

ಇಂಡೋ-ಅಮೆರಿಕನ್ ಅಭ್ಯಾಸದಲ್ಲಿ ನಾನು ಆ ಎರಡೂ ಶಬ್ದಗಳ ನಡುವೆ ಇರುವ ಹೈಫನ್ (ಅಡ್ಡಗೆರೆ) ಇದ್ದಂತೆ ಎಂದು ನಮ್ರವಾಗಿ ಹೇಳಿಕೊಳ್ಳುತ್ತಾರೆ. ತಾವು ಪೂರ್ಣ ಪ್ರಮಾಣದ ಕಾದಂಬರಿಯೊಂದನ್ನು ಬರೆಯಬೇಕು ಎನ್ನುವ ಬಹು ಕಾಲದ ಆಸೆ ಅವರೊಳಗೇ ಉಳಿದುಹೋಗಿದೆ. 1993ಯಲ್ಲಿ ಅವರ ಡೈರಿಯ ಒಂದು ಪುಟ ಹೀಗಿದೆ. . “Strange fantasy of a novel. But I don’t know what to write: the form, empty, without a wisp of any content, all possibility without any probability” ಎನ್ನುತ್ತಾರೆ.

ಈ ಪುಸ್ತಕದಲ್ಲಿ ಲಭ್ಯವಿರುವ ಅವರ ಅತ್ಯಂತ ಹಳೆಯ ಬರಹವೆಂದರೆ ಇಪ್ಪತ್ತರ ಹರಯದಲ್ಲಿ ಅವರು ಬರೆದ “ಅ ಪೋಯಮ್ ಈಸ್ ಬಾರ್ನ್” ಎಂಬ ಸಣ್ಣ ಕತೆ. ಕವಿತೆಯ ಸಾಲೊಂದು ಕಾಗದದ ಮೇಲೆ ಮೂಡಬೇಕಾದ ಜರೂರಿರುವಾಗ ಅದು ಸಾಧ್ಯವಾಗದ ಹಾಗೆ ಕವಿಗೆ ಎದುರಾಗುವ ದೈನಿಕದ ಜಂಜಡಗಳನ್ನು ಈ ಕತೆ ಮನೋಜ್ಞವಾಗಿ ಕಾಣಿಸುತ್ತದೆ. “ಶಬ್ದವೊಂದು ಹಕ್ಕಿಯ ಹಾಗೆ…” ಎನ್ನತ್ತ ಈ ಚಿಕ್ಕ ವಯಸ್ಸಿನಲ್ಲೇ ಅವರು ತೋರುವ ವಿನ್ಯಾಸಗಳು ಅಪರೂಪದವು.

ರಾಮಾನುಜನ್ ತಮ್ಮ ಆಲೋಚನೆಗಳನ್ನು ಒಂದೆಡೆ ಕ್ರೋಢೀಕರಿಸಿಕೊಳ್ಳಲು, ಬರೆಯುತ್ತಲೇ ಯೋಚಿಸಲು, ಕಣ್ಗಳ ಹೊರತಾಗಿಯೂ ಎದುರಿಗಿದ್ದುದನ್ನು ಕಾಣಲು ಬೇಕಾದ ಅದೃಷ್ಟ ಅರಸಲು ಈ ಡೈರಿ ಬರವಣಿಗೆಯ ಮೊರೆ ಹೋಗಿರುವುದು ಕಾಣಸಿಗುತ್ತದೆ.

1957ರಲ್ಲಿ ನೈನಿತಾಲ್‌ನಲ್ಲಿ ಪರಿಚಯವಾದ ಕೃಷ್ಣಾ ಎಂಬ ಹುಡುಗಿಯನ್ನು ಇಷ್ಟಪಟ್ಟು ಅವರು ಬರೆದ ಸಾಲುಗಳು ಹೀಗಿವೆ. “In my intimate thoughts I know I wish very much to deserve her or someone very like her, and will never get such.” ಗ್ರೀಕ್ ತತ್ವಜ್ಞಾನಿ ಎಪಿಕ್ಯುರಸ್‍ನ ‘ಕಾರ್ಪೇ ಡಿಯಂ’ (ಅಂದರೆ ಲ್ಯಾಟಿನ್ ಭಾಷೆಯಲ್ಲಿ ಭವಿಷ್ಯದ ಚಿಂತೆಯಿಲ್ಲದೇ ಈ ಕ್ಷಣವನ್ನು ಮಾತ್ರ ಪೂರ್ತಿಯಾಗಿ ಜೀವಿಸಬೇಕು ಅಂತ ಅರ್ಥ) ಸಿದ್ಧಾಂತವನ್ನು ನೆಚ್ಚಿ “ಪ್ರತಿ ಕ್ಷಣವನ್ನೂ ಜೀವಿಸಲು ಸಾಧ್ಯವಾದರೆ ಅಲ್ಪ ಸಮಯದಲ್ಲಿ ಎಷ್ಟೆಲ್ಲ ಕೆಲಸವನ್ನು ಮಾಡಲು ಸಾಧ್ಯ ಎಂಬುದನ್ನು ಬೆಳಗಾವಿಯಲ್ಲಿ ಕಳೆದ ಐದು ಫಲಪ್ರದ ವರ್ಷಗಳು ತಿಳಿಸಿಕೊಟ್ಟವು” ಎಂದು ತೃಪ್ತಿ ವ್ಯಕ್ತಪಡಿಸುತ್ತಾರೆ.

1959ರ ಜುಲೈ ತಿಂಗಳಿನಲ್ಲಿ ರಾಮಾನುಜನ್ ಮೊದಲ ಬಾರಿ ಹಡಗಿನಲ್ಲಿ ನ್ಯೂಯಾರ್ಕಿಗೆ ಪ್ರಯಾಣ ಬೆಳೆಸುತ್ತಾರೆ. ಈ ಇಪ್ಪತ್ತೆಂಟು ದಿನಗಳ ಪ್ರಯಾಣವನ್ನು, ಅಲ್ಲಿ ಸಿಗುವ ವ್ಯಕ್ತಿಗಳನ್ನು ತಮ್ಮದೇ ಕುತೂಹಲಭರಿತ ಶೈಲಿಯಲ್ಲಿ ಚಿತ್ರಿಸುತ್ತಾರೆ. ತಾಂತ್ರಿಕ ಕಾರಣಗಳಿಂದ ಅವರಿದ್ದ ಹಡಗು ಪ್ಯಾರಿಸ್ಸಿನ ಬಂದರಿನಲ್ಲಿ ನಾಲ್ಕು ದಿನ ತಂಗುತ್ತದೆ. ಹೀಗಾಗಿ ದಾರಿಮಧ್ಯ ಪ್ಯಾರಿಸ್ ನೆಲದ ದರ್ಶನವೂ ಅವರಿಗಾಗಿದೆ. ತಾವಿದ್ದ ಹಡಗನ್ನು ತೇಲುವ ದ್ವೀಪಕ್ಕೆ ಹೋಲಿಸುವ ಅವರು “I seem to invite snubs even from waiters- it must be my scared look” ಎನ್ನುತ್ತಾರೆ.

ಕ್ಯಾರೆಕ್ಟರ್ಸ್. ಪಾತ್ರಗಳು. ಹಡಗಿನ ಡಕ್ಕೆಯಲ್ಲಿ ಕುಳಿತು ಅಲ್ಲಿ ಓಡಾಡುವ ವಿವಿಧ ದೇಶ ಭಾಷೆಯ ಜನರನ್ನು ಗಮನಿಸುವುದು ಅವರ ಇಷ್ಟದ ಹವ್ಯಾಸ. ಈ ಚಿತ್ರಗಳನ್ನು ಹೆಚ್ಚು ಹೊತ್ತು ಕಂಡಷ್ಟೂ ಗದ್ಯ ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕು ಎಂಬ ಹಂಬಲ, ಹಾತೊರೆಯುವಿಕೆ ರಾಮಾನುಜನ್‌ರಲ್ಲಿ ತೀವ್ರವಾಗುತ್ತದೆ. ಆ ಜನರ ಮಾತು, ನಡೆ, ನಗು, ಕೂದಲ ಹಾರಾಟ, ದಿರಿಸು, ಕಣ್ಣ ಗುಡ್ಡೆಗಳ ಬಣ್ಣ, ಅವರ ಬಯಕೆಗಳು, ಉದ್ದೇಶಗಳು, ಆಲಸ್ಯ ಇವೆಲ್ಲ ವ್ಯಕ್ತಿಗಳ ಒಳಗನ್ನು ಕಂಡುಕೊಳ್ಳಲು ಸಹಾಯ ಮಾಡುತ್ತವೆ ಎಂಬ ನಂಬಿಕೆ ಅವರದು.

ಅರವತ್ತರ ದಶಕದಲ್ಲಿ ಅಮೆರಿಕೆಯ ಇಂಡಿಯಾನಾ ವಿಶ್ವವಿದ್ಯಾಲಯದ ಭಾಷಾಶಾಸ್ತ್ರ ವಿಭಾಗದಲ್ಲಿ ಅವರ ಪಿಎಚ್‌ಡಿ ವ್ಯಾಸಂಗದ ದಿನಗಳು, 1962ರಲ್ಲಿ ಕೇರಳದಿಂದ ಆಗಮಿಸಿದ ಫುಲ್‌ಬ್ರೈಟ್ ಸ್ಕಾಲರ್ ಮಾಲಿ ಡೇನಿಯಲ್ಸ್‌ರನ್ನು ವಿವಾಹವಾಗಿದ್ದು, 1966ರಲ್ಲಿ ಹೊರಬಂದ ಅವರ ಪ್ರಾತಿನಿಧಿಕ ಕವನ ಸಂಕಲನ ‘ದಿ ಸ್ಟ್ರೈಡರ್ಸ್’ ಪ್ರಕಟಗೊಂಡಾಗ ಸಿಕ್ಕ ಪ್ರಶಂಸೆ, 1967ರಲ್ಲಿ ಅವರಿಗೆ ವಿಶ್ವಮನ್ನಣೆ ತಂದುಕೊಟ್ಟ ಸಂಗಂ ಕವಿತೆಗಳ ಸಂಕಲನ ‘ದಿ ಇಂಟೀರಿಯರ್ ಲ್ಯಾಂಡ್‌ಸ್ಕೇಪ್’ ಪ್ರಕಟವಾದಾಗಿನ ದಿನಗಳೆಲ್ಲ ವಿವರವಾಗಲ್ಲದಿದ್ದರೂ ಬಿಡಿಬಿಡಿಯಾಗಿ, ದಿನಚರಿಗಿರಬೇಕಾದ ಆಪ್ತಧಾಟಿಯಲ್ಲಿ ಚಿತ್ರಿತವಾಗಿವೆ.

ಮುಖವಾಡವೇ ಮುಖವಾಗಿ ಬೆಳೆಯುವ ಪ್ರತಿಮೆ ಅವರನ್ನು ಚಿಕ್ಕ ವಯಸ್ಸಿನಿಂದಲೂ ಕಾಡಿರುವುದು ಸ್ಪಷ್ಟವಿದೆ. ಯಾವುದೋ ವಿಷಯವನ್ನು ಉಪಮೆ ಬಳಸಿ ಹೇಳಬೇಕಾದರೂ, ಆ ಉಪಮೆಯೇ ನಿಜವಾದ ಪ್ರತಿಮೆಯಾಗುವ ಬಗೆಗೂ ಅವರಲ್ಲಿ ವಿಸ್ಮಯವಿದೆ. 1974ರಲ್ಲಿ ಮಾಲಿಯವರೊಂದಿಗಿನ ವಿಚ್ಛೇದನ, 1976ರಲ್ಲಿ ಅವರೊಂದಿಗೇ ಮರುವಿವಾಹ, 1988ರಲ್ಲಿ ಮರುವಿಚ್ಛೇದನದ ಬಗೆಗಿನ ಸುಪ್ತ ನೋಟಗಳೆಲ್ಲ ಈ ಬರಹಗಳಲ್ಲಿ, ಆಯಾ ಕಾಲದ ಕವಿತೆಗಳಲ್ಲಿ ಮೂಡಿಬಂದಿವೆ.

1971ರಲ್ಲಿ ಆಗಿನ ಬೌದ್ಧಿಕ ವಲಯಗಳಲ್ಲಿ ಬ್ರಿಟಿಷ್ ಲೇಖಕ ಹಕ್ಸ್ಲಿಯವರು ಪ್ರಸಿದ್ಧಗೊಳಿಸಿದ ‘ಮೆಸ್ಕಲಿನ್’ ಮಾತ್ರೆಯನ್ನು ಅಪಾರ್ಟ್‌ಮೆಂಟಿನ ಏಕಾಂತದಲ್ಲಿ ತಮ್ಮ ಮೇಲೆ ಪ್ರಯೋಗಿಸಿಕೊಳ್ಳುತ್ತಾರೆ ರಾಮಾನುಜನ್. ಈ ಮಾತ್ರೆ ಒದಗಿಸುವ ಭ್ರಾಮಕ ಜಗತ್ತಿನಲ್ಲಿ ವಿಹರಿಸುವಾಗ ಬರೆದ ‘ಮೆಸ್ಕಲಿನ್ ನೋಟ್ಸ್’ ಬೆರಗುಗೊಳಿಸುವಷ್ಟು ತೀಕ್ಷ್ಣವಾಗಿವೆ. ಈ ಅನುಭವವನ್ನು ಆಕರವಾಗಿಟ್ಟುಕೊಂಡು ಬರೆದ ‘ಸೋಮ ಕವಿತೆಗಳು’ ತಮ್ಮ ಚಿತ್ರಗಳಿಂದ ಮತ್ತು ಅಪೂರ್ವ ಪದಪ್ರಯೋಗಗಳಿಂದ ಆಕರ್ಷಕವಾಗಿವೆ. ಭಾಷೆಯ ಕುರಿತಾಗಿ ಅವರಿಗಿದ್ದ ಶ್ರದ್ಧೆ ಮನಸೋಲುವಂತಿದೆ. ಈ ಮೆಸ್ಕಲಿನ್ ಅನುಭವ ಅವರ ಮುಂದಿನ ಕವಿತೆಗಳ ಮೇಲೆಯೂ ಗಾಢವಾದ ಪ್ರಭಾವ ಬೀರಿರುವುದನ್ನು ಕಾಣಬಹುದು.

1976ರಲ್ಲಿ ಪ್ರಕಟವಾದ ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯ ಇಂಗ್ಲೀಷ್ ಅನುವಾದ, ವಚನ ಸಾಹಿತ್ಯದ ಕೃತಿ ‘ಸ್ಪೀಕಿಂಗ್ ಆಫ್ ಶಿವ,’ ಜನಪದ ಸಾಹಿತ್ಯದ ‘ಫೋಕ್‍ಟೇಲ್ಸ್ ಆಫ್ ಇಂಡಿಯಾ’ ಮುಂತಾದ ಕೃತಿಗಳ ಕುರಿತು ಅಭಿಮಾನವಿದ್ದರೂ ಒಂದು ಕಡೆ “ಅನುವಾದ ಮಾಡಿದ್ದು ಹೆಚ್ಚಾಯಿತು, ಈಗ ಸ್ವಂತ ಸೃಜನಶೀಲ ಬರವಣಿಗೆಯ ಕುರಿತೂ ಎಚ್ಚರ ವಹಿಸಬೇಕು” ಎಂದುಕೊಳ್ಳುತ್ತಾರೆ. ಭಾರತೀಯ ಇಂಗ್ಲೀಷಿನ ಕುರಿತು, ಅನುವಾದ ಕಲೆಯ ಕುರಿತು ದೀರ್ಘ ಮಂಥನಗಳು ಈ ದಿನಚರಿ ಪುಟಗಳಲ್ಲೇ ಇವೆ.

ಕನ್ನಡ ಮತ್ತು ಇಂಗ್ಲೀಷಿನಲ್ಲಿ ಬರೆಯುವಾಗ ಅಥವಾ ತಮಿಳಿನಲ್ಲಿ ಯೋಚಿಸುವಾಗ ಆ ಕ್ಷಣ ಸಂವಹನದ ಭಾಷೆಯೊಂದೇ ಮುನ್ನಲೆಗೆ ಬಂದು ಇನ್ನೆರಡು ಭಾಷೆಗಳು ಹಿನ್ನಲೆಗೆ ಸರಿಯುವುದರ ಕುರಿತು ವಿಚಾರಪೂರ್ಣವಾಗಿ ವ್ಯಾಖ್ಯಾನಿಸುತ್ತಾರೆ. “ನನ್ನನ್ನು multilingual ಅನ್ನುವ ಬದಲು multiple monolingual ಎನ್ನುವುದೇ ಸರಿಯೇನೋ” ಎಂದ ರಾಮಾನುಜನ್‌ರನ್ನು 1976ರಲ್ಲಿ ಪದ್ಮಶ್ರೀ ಪುರಸ್ಕಾರ ಮತ್ತು 1983ಯಲ್ಲಿ ವಿಶ್ವ ಪ್ರಸಿದ್ಧ ಮೆಕ್‌ಆರ್ಥರ್ ಜೀನಿಯಸ್ ಪ್ರಶಸ್ತಿ ಅರಿಸಿಕೊಂಡು ಬಂದಿದ್ದವು. ಆ ಕುರಿತು ಹಿಂಜರಿಕೆ, ಮುಜುಗರಗಳೂ ಅವರಲ್ಲಿ ಇದ್ದೇ ಇದೆ.

ಬರವಣಿಗೆಯೊಂದೇ ಬದುಕಿನ ಸತ್ಯ ಎಂಬ ದರ್ಶನವನ್ನು ವೈರುಧ್ಯಗಳು ತುಂಬಿದ ಬದುಕಿನಲ್ಲಿ ಕಾಣಲು ವಿದ್ವತ್ತಿನ ಜೊತೆ ಸಹನೆಯೂ ಬೇಕೇನೋ. ನಾಲ್ಕೂವರೆ ದಶಕಗಳ ಕಾಲ ಬದುಕನ್ನೂ, ಬರವಣಿಗೆಯನ್ನೂ ಕಂಡುಕೊಳ್ಳಲು, ಅರ್ಥೈಸಲು ಬರೆಯುತ್ತಲೇ ಪ್ರಯತ್ನಿಸಿದ ಸಹನಶೀಲ ಕವಿ ಹೃದಯದ ಆಪ್ತ ದನಿ ಇಲ್ಲಿ ಕೇಳಲು ಸಿಗುತ್ತದೆ. ಸಾವಿರಾರು ಪುಟಗಳನ್ನು ಸೋಸಿ, ಆರಿಸಿ ಮುನ್ನೂರೈವತ್ತು ಪುಟಗಳಲ್ಲಿ ಬದುಕೊಂದನ್ನು ಕಾಣಿಸಿದ ಸಂಪಾದಕರಿಬ್ಬರ ತಾಳ್ಮೆ ಶ್ಲಾಘನೀಯ. ಅಲ್ಲಲ್ಲಿ ಅತೀ ಖಾಸಗೀ ಸಂಗತಿಗಳ ಅನಾವರಣವಾಗಿ ಇನ್ನೊಬ್ಬರ ಬದುಕಿನಲ್ಲಿ ಇಣುಕಿದಂತೆನಿಸಿ ಓದುಗರಲ್ಲೇ ಪಾಪಪ್ರಜ್ಞೆ ಕಾಡುವುದು ಸುಳ್ಳಲ್ಲ. ಅವರಿಲ್ಲವಾಗಿ ಇಪ್ಪತ್ತೆಂಟು ವರ್ಷಗಳ ನಂತರ ರಾಮಾನುಜನ್‌ರ ಅಂದಿನ ವರ್ತಮಾನದ ದಾಖಲೆಗಳನ್ನು ಓದಲು ಮನಸ್ಸು ಆದ್ರವಾಗುತ್ತದೆ.

ಕನ್ನಡದ ಅತ್ಯಂತ loved ಕವಿ ರಾಮಾನುಜನ್‌ರ ಮೆಸ್ಕಲಿನ್ ಅನುಭವದಲ್ಲಿ ರೂಪ ಪಡೆದಿದ್ದ, ನಂತರ ಅವರು ತಿದ್ದಿ ಬರೆದ ‘ಸೆಕೆಂಡ್ ಸೈಟ್’ ಸಂಕಲನದ ಒಂದು ಪದ್ಯದ ಜೊತೆ ಈ ಬರಹ ಮುಗಿಸುವೆ.

Extended Family

Yet like grandfather
I bathe before the village crow

the dry chlorine water
my only Ganges

the naked Chicago bulb
a cousin of the Vedic sun

slap soap on my back
like father

and think
in proverbs

like me
I wipe myself dry

with an unwashed
Sears Turkish towel

like mother
I hear faint morning song

(though here it sounds
Japanese)

and three clear strings
next door

through kitchen
clatter

like my little daughter
I play shy

hand over crotch
my body not yet full

of thoughts novels
and children

I hold my peepee
like my little son

play garden hose
in and out
the bathtub

like my grandson
I look up

unborn
at myself

like my great
great-grandson

I am not yet
may never be

my future
dependent

on several
people

yet
to come