Advertisement
ಕಳ್ಳಿ ಪೀರ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕಳ್ಳಿ ಪೀರ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಹಲವು ಕಳ್ಳಿಪೀರಗಳು ಸೇರಿ ಹರ್ಷದಿಂದ ಟ್ರೀ…ಟ್ರೀ.. ಎಂದು ಕೂಗುತ್ತವೆ. ಮಣ್ಣಿನ ಧೂಳಿನಲ್ಲಿ ಸ್ನಾನ ಮಾಡುವುದೆಂದರೆ ಇವುಗಳಿಗೆ ಬಹಳ ಆಸಕ್ತಿ. ಇದು ಅವುಗಳ ದೇಹದ ಹೆಚ್ಚುವರಿ ತೈಲಾಂಶವನ್ನು ತೆಗೆಯುವುದಲ್ಲದೆ, ರೋಗಕಾರಕ ಕೀಟಗಳನ್ನೂ ದೂರ ಮಾಡುವುದು. ಸಂಜೆಯಾದೊಡನೆ, ಗುಂಪಿನಲ್ಲಿ ಮರದ ಎಲೆಗಳ ನಡುವೆ ತಂಗುತ್ತವೆ. ಆದರೆ ಬೆಳಿಗ್ಗೆ ಏಳಲು ಸೋಮಾರಿ. ಮುಂಜಾನೆ ಸೂರ್ಯೋದಯವಾದರೆ ಸಾಲದು. ಬಿಸಿಲೇರಬೇಕು! ಏಕೆಂದರೆ, ಜೇನ್ನೊಣಗಳೂ ತಮ್ಮ ಕಾರ್ಯವನ್ನು ಶುರು ಮಾಡಬೇಕಲ್ಲ?
ಡಾ.
ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕಳ್ಳಿ ಪೀರ ಹಕ್ಕಿಯ ಕುರಿತ ಬರಹ ಇಲ್ಲಿದೆ

ಈ ಸರಣಿಯ ಮೊದಲ ಹಕ್ಕಿ ಪರಿಚಯ, ಆಕರ್ಷಕ ಹಕ್ಕಿಗಳಲ್ಲಿ ಒಂದಾದ ಕಳ್ಳಿ ಪೀರʼದ್ದು. ಕಳ್ಳಿ ಪೀರವನ್ನು ಸಂಸ್ಕೃತದಲ್ಲಿ ಸಾರಂಗ, ತುಳು ಭಾಷೆಯಲ್ಲಿ ತುಂಬೆ ಪಕ್ಕಿ, ಕೊಡವ ಭಾ಼ಷೆಯಲ್ಲಿ ಚೆಂಬುಕ ಮುಂತಾಗಿ ಕರೆಯುತ್ತಾರೆ.

ಆಫ್ರಿಕದ ಉತ್ತರ ಭಾಗ, ಪಶ್ಚಿಮ ಅರೇಬಿಯಾ, ಭಾರತದಿಂದ ವಿಯೆಟ್ನಾಮ್‌ವರೆಗಿನ ಏಷಿಯಾದ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದು ಮೀರಾಪಿಡೇ ಕುಟುಂಬಕ್ಕೆ ಸೇರಿದೆ. ಇಂಗ್ಲೀಷಿನಲ್ಲಿ ಏಶಿಯನ್ ಗ್ರೀನ್ ಬೀಈಟರ್ ಎಂದೂ ಮತ್ತು ವೈಜಾನ್ಞಿಕವಾಗಿ ಮೀರಾಪ್ಸ್ ಓರಿಯಂಟಾಲಿಸ್ ಎಂದು ಕರೆಯುತ್ತಾರೆ.

ಕಳ್ಳಿ ಪೀರ, ಸಣ್ಣ ಗುಂಪಿನಲ್ಲಿ ಉದ್ಯಾನ, ಗದ್ದೆಯಂಚು, ಒಣಕಾಡುಗಳಲ್ಲಿ ಮತ್ತು ಜನವಸತಿ ಇರುವೆಡೆ ವಾಸ ಮಾಡುತ್ತದೆ. ಗುಬ್ಬಚ್ಚಿಗಿಂತ ತುಸು ದೊಡ್ಡದಾದ, ಮೈನಾ ಹಕ್ಕಿಗಿಂತ ಚಿಕ್ಕದಾದ, ನೀಳವಾದ, ಹಸಿರು ಬಣ್ಣದ ದೇಹ. ಕಂದು ಬಣ್ಣದ ನೆತ್ತಿ, ಕಣ್ಣಿಗೆ ಕಳ್ಳನ ಕಪ್ಪು ಪಟ್ಟಿ; ಉದ್ದವಾದ, ಸಪೂರವಾದ, ತುಸು ಕೆಳಗೆ ಬಾಗಿದ ಕೊಕ್ಕು; ಉದ್ದನಾದ, ಚೂಪಾದ ರೆಕ್ಕೆಗಳು; ಬಾಲದ ಮಧ್ಯದಿಂದ ಎರಡು ಗರಿಗಳು ಸೂಜಿಯಂತೆ, ನೀಳವಾದ ಕಡ್ಡಿಗಳಂತೆ ಇರುತ್ತವೆ. ಗಂಡು ಮತ್ತು ಹೆಣ್ಣು ಹಕ್ಕಿಗಳು ಹೊರ ನೋಟಕ್ಕೆ ಒಂದೇ ರೀತಿ ಕಾಣುತ್ತವೆ.

ಜೇನುನೊಣ, ಕಣಜ, ಸಣ್ಣ ಹುಳ ಹುಪ್ಪಟೆಗಳು, ಇರುವೆಗಳು ಮುಂತಾದ ಕೀಟಗಳೇ ಕಳ್ಳಿಪೀರಗಳ ಆಹಾರ. ಇವು ಬೇಟೆಯಾಡುವುದನ್ನು ನೋಡುವುದೇ ಒಂದು ಚಂದ! ಬೇಲಿ, ಒಣರೆಂಬೆ, ತಂತಿಗಳ ಮೇಲೆ, ಚಡಪಡಿಸುತ್ತ, ಅತ್ತಿತ್ತ ನೋಡುತ್ತ, ಬೇಟೆಗೆ ಹೊಂಚುಹಾಕುತ್ತದೆ. ಅಕ್ಕ ಪಕ್ಕದಲ್ಲಿ ಯಾವುದಾದರೂ ಕೀಟ ಕಾಣಿಸಿದರೆ ಪುರ‍್ರನೆ ಹಾರಿ, ಕೀಟವನ್ನು ಹಿಡಿದು, ತನ್ನ ಜಾಗಕ್ಕೇ ಹಿಂದಿರುಗುತ್ತದೆ. ಬೇಟೆ ಹಿಡಿದ ಜೇನ್ನೊಣ ಅಥವಾ ದುಂಬಿಯ ಮುಳ್ಳುಗಳನ್ನು, ಹೊರಮೈ ಕವಚವನ್ನು ಕಿತ್ತು, ಬಡಿದು ಕೊಂದು ತಿನ್ನುತ್ತದೆ. ಆಕಾಶದಲ್ಲಿ ಹಾರುತ್ತಿರುವ ಜೇನು ಹುಳಗಳನ್ನು ಗುರಿಯಿಟ್ಟು ಹಾರಿ ಹಿಡಿದು ತಿನ್ನುವುದನ್ನು ನೋಡಿದರೆ, ಮಹಾಭಾರತದಲ್ಲಿ ಅರ್ಜುನನು ಮತ್ಸ್ಯ ಯಂತ್ರವನ್ನು ಭೇದಿಸುವ ಪ್ರಸಂಗ ನೆನಪಿಗೆ ಬರುತ್ತದೆ!

ಹಲವು ಕಳ್ಳಿಪೀರಗಳು ಸೇರಿ ಹರ್ಷದಿಂದ ಟ್ರೀ…ಟ್ರೀ.. ಎಂದು ಕೂಗುತ್ತವೆ. ಮಣ್ಣಿನ ಧೂಳಿನಲ್ಲಿ ಸ್ನಾನ ಮಾಡುವುದೆಂದರೆ ಇವುಗಳಿಗೆ ಬಹಳ ಆಸಕ್ತಿ. ಇದು ಅವುಗಳ ದೇಹದ ಹೆಚ್ಚುವರಿ ತೈಲಾಂಶವನ್ನು ತೆಗೆಯುವುದಲ್ಲದೆ, ರೋಗಕಾರಕ ಕೀಟಗಳನ್ನೂ ದೂರ ಮಾಡುವುದು. ಸಂಜೆಯಾದೊಡನೆ, ಗುಂಪಿನಲ್ಲಿ ಮರದ ಎಲೆಗಳ ನಡುವೆ ತಂಗುತ್ತವೆ. ಆದರೆ ಬೆಳಿಗ್ಗೆ ಏಳಲು ಸೋಮಾರಿ. ಮುಂಜಾನೆ ಸೂರ್ಯೋದಯವಾದರೆ ಸಾಲದು. ಬಿಸಿಲೇರಬೇಕು! ಏಕೆಂದರೆ, ಜೇನ್ನೊಣಗಳೂ ತಮ್ಮ ಕಾರ್ಯವನ್ನು ಶುರು ಮಾಡಬೇಕಲ್ಲ?

ಇನ್ನು ಕಳ್ಳಿಪೀರ ಹಕ್ಕಿಗಳು ಗೂಡುಕಟ್ಟಿ, ಸಂಸಾರ ಮಾಡುವುದೂ ಒಂದು ವಿಶೇಷ. ಗದ್ದೆಯ ಬದುಗಳಲ್ಲಿ ಸುಮಾರು 4-5 ಅಡಿ ಉದ್ದದ ಸುರಂಗವನ್ನು ಕೊರೆಯುತ್ತವೆ. ಅದರ ಒಳಗೆ ಕೊನೆಯಲ್ಲಿ ದೊಡ್ಡ ಕೋಣೆಯ ಗೂಡು. ಹೆಣ್ಣು ಹಕ್ಕಿ, ಎರಡರಿಂದ ಎಂಟು ಬಿಳಿ, ಅಂಡಾಕಾರದ ಮೊಟ್ಟೆಯಿಡುತ್ತದೆ. ಗಂಡು-ಹೆಣ್ಣು ಹಕ್ಕಿಗಳೆರಡೂ ಮರಿಹಕ್ಕಿಗಳ ಪೋಷಣೆಯ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತವೆ. ಗೂಡುಕಟ್ಟುವ ಕಾರ್ಯದಲ್ಲಿ ಕುಟುಂಬದ ಇತರ ಹಕ್ಕಿಗಳೂ ಸೇರಿ ಸಹಾಯ ಮಾಡುವುದು ಮತ್ತೊಂದು ವಿಶೇಷ.

ಒಂದೇ ದಿನದಲ್ಲಿ ಸುಮಾರು ಇನ್ನೂರು ಕೀಟಗಳನ್ನು ಭಕ್ಷಿಸುವುದರ ಮೂಲಕ ಕಳ್ಳಿ ಪೀರ ಕೀಟನಿಯಂತ್ರಣ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ರೈತರು ಹೊಲ-ಗದ್ದೆಗಳಲ್ಲಿ ಸಿಂಪಡಿಸುವ ಕೀಟನಾಶಕಗಳಿಂದಾಗಿ ಜೇನ್ನೊಣ, ದುಂಬಿ, ಇನ್ನಿತರ ಕೀಟಗಳೇ ಕಡಿಮೆಯಾಗುತ್ತಿದೆ. ಅಲ್ಲದೆ ಗದ್ದೆ, ನದಿ, ತೊರೆ, ನಾಲೆ ಮುಂತಾದ ಸ್ಥಳಗಳಲ್ಲಿ ಕಾಂಕ್ರೀಟಿನ ಗೋಡೆಗಳನ್ನು ಕಟ್ಟುವುದರಿಂದ ಕಳ್ಳಿ ಪೀರಗಳು ಗೂಡು ಕಟ್ಟಲು ಬದುಗಳೂ ಕಾಣೆಯಾಗುತ್ತಿವೆ.

ನಿಸರ್ಗದಲ್ಲಿ ನಡೆಯುತ್ತಿರುವ ಈ ಅಪೂರ್ವ ಹಾಗೂ ನಿಷ್ಕಳಂಕ ಕಾರ್ಯಗತಿಗೆ ಅಡ್ಡಗಾಲು ಹಾಕುವ, ಇಲ್ಲಿ ನಡೆಯುತ್ತಿರುವ ಬಾಳಾಟಗಳನ್ನು ಏರುಪೇರು ಮಾಡುವ, ವಿಕೃತ ಮನಸ್ಥಿತಿ ಇರುವುದು ಮಾನವನಿಗೆ ಮಾತ್ರ. ಈ ಪ್ರವೃತ್ತಿ ಮುಂದೆ ತನ್ನ ಅಸ್ತಿತ್ವಕ್ಕೇ ಮಾರಕ ಎಂದು ತಿಳಿದೂ, ಪ್ರಕೃತಿಯು ಆಗಾಗ್ಯೆ ನೀಡುತ್ತಿರುವ ಎಚ್ಚರಿಕೆಯ ಗಂಟೆಗಳನ್ನು ಕೇಳಿಯೂ, ತನ್ನನ್ನು ತಾನು ತಿದ್ದಿಕೊಳ್ಳದಿದ್ದಲ್ಲಿ ಮಾನವನಿಗೆ ಭವಿಷ್ಯವಿಲ್ಲ. ಪರಿಪೂರ್ಣತೆ, ನಿರಂತರತೆ, ಪ್ರಾಮಾಣಿಕತೆ, ಸ್ಥಿರತೆ, ನಿಖರತೆ ಮತ್ತು ಅಖಂಡತೆ – ಈ ಆರು ತತ್ತ್ವಗಳ ಆಧಾರದ ಮೇಲೆ ಇಡೀ ವಿಶ್ವವು ನಡೆಯುತ್ತಿದೆ. ಈ ತತ್ತ್ವಗಳಿಗೆ ಮನಸೋತು, ತಲೆಬಾಗಿ, ಸೃಷ್ಟಿಯ ಆಶಯಗಳಿಗೆ ಪೂರಕವಾಗಿ ನಡೆಯುವುದೇ ನಮ್ಮ ಭವಿಷ್ಯಕ್ಕೆ ದಾರಿ.

(ಕಲೆ: ಡಾ. ಎಸ್.ವಿ. ನರಸಿಂಹನ್‌‌)

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ