ಕಿವಿಮಾತು…

ಉತ್ತುಂಗ ಶಿಖರವನು
ಮೆಟ್ಟಿ ನಿಲ್ಲುವ ಛಲದಿ
ಮುನ್ನುಗ್ಗಿ ನಡೆಯುತಿಹ
ಓ ಮುದ್ದು ಬಾಲೆ…
ಒಂದರೆಗಳಿಗೆ ನಿಲ್ಲು!
ಕೇಳು ನನ್ನೆದೆಯ ಸೊಲ್ಲು…

ನಿನ್ನಾಯ್ಕೆಯ ಹಾದಿಯಲ್ಲಿ
ಅಸ್ಥಿ ಪಂಜರಗಳಿವೆ,
ಬಿಕ್ಕಳಿಸುವ ಶವಗಳಿವೆ,
ಸುಟ್ಟು ಕರಕಲಾದ…
ಕನಸಿನ ಗೋಪುರಗಳಿವೆ,

ನಿನ್ನ ಸುಕೋಮಲ ಪಾದಕ್ಕೆ
ಮೆತ್ತಿಕೊಂಡಿದೆ ನೋಡು
ಕಪ್ಪು ನೆತ್ತರು!
ಜಿಗುಟುವ ಕಣ್ಣೀರು!

ಹೀಗೆ ನಿನ್ನ ಹಾಗೆಯೇ
ಅವಸರದಿ ಹೊರಟವರು
ಮಣ್ಣಿನಾಳಕ್ಕುರುಳಿದರು
ಉರುಳು ಕೆಡವಿತೆ ಅವರ?
ಗಟ್ಟಿ ಧ್ವನಿಯ ಕೂಗೂ
ಹೂತು ಹೋಯಿತು
ಒರಟು ದನಿಗಳ ಅಬ್ಬರಕ್ಕೆ
ಮಾತುಗಳ ಮರೆತರೆ?

ಆದರೆ…
ದಾರಿಗುಂಟ ಅವರು ನೆಟ್ಟ
ದೀವಟಿಗೆಗಳು
ಇನ್ನೂ ಉರಿಯುತ್ತಿವೆ
ದಾವಾಗ್ನಿಯ ಹಾಗೆ
ಮಗಳೇ…
ನಿನ್ನ ಪುಟ್ಟ ಕಂಗಳಲ್ಲಿರುವ
ಆವೇಶದ ಸೊಡರನ್ನು ತಂಪಾಗಿಸು
ಪ್ರೀತಿ ಪ್ರಣತಿಯನು ಬೆಳಗು
ನೆತ್ತರಿಳಿಯುವ ದಾರಿಯಿಂದತ್ತ ಸರಿ
ಯಾರನ್ನೋ ಹಿಂದಿಕ್ಕುವ
ಭುಜಕೆ ಭುಜ ಕೊಟ್ಟು
ಸಮಾನವೆನ್ನುವ ಛಲವೇಕೆ?
ಮಾತಿಗಿರದ ಮೌಲ್ಯ
ಮೌನ ನಡೆಗಿದೆ!
ಇಲ್ಲಿ ನೋಡು, ಅಳಿಯದುಳಿದ
ಅಕ್ಕನಿಟ್ಟ ಆಳ ಹೆಜ್ಜೆ
ನಿನಗದುವೆ ಮೆಟ್ಟಿಲು.
ಬೋರ್ಗರೆಯುವ ಅಲೆಯ ಮೇಲೆ
ಸಾಗುವಂತೆ ನಾವೆಯು
ಸಾವಧಾನದಿಂದ ನಡೆ
ನಿನಗೆ ನೀನೆ ಎಂದಿಗೂ.

ಕವಿತಾ ಅಡೂರು ಪುತ್ತೂರಿನವರು
ಸುದಾನ ವಸತಿ ಶಾಲೆಯಲ್ಲಿ ಶಿಕ್ಷಕಿ
ನೇತ್ರದಂದದೆ ನೋಟ(ಕಗ್ಗದ ಬೆಳಕಿನಲ್ಲಿ ಕಂಡ ಕಾಣ್ಕೆ), ಪದಕುಸಿಯೆ ನೆಲವಿಹುದು(ವಿಜಯವಾಣಿ ಅಂಕಣ ಬರಹಗಳ ಸಂಗ್ರಹ) ಪ್ರಕಟಿತ ಕೃತಿಗಳು