ಇವರ ವೈಯಕ್ತಿಕ ಪರಿಚಯ ಈಗಷ್ಟೇ, ಇತ್ತೀಚೆಗೆ ಆದದ್ದು. ನೀನಾಸಮ್ ನ ಶಿಬಿರವೊಂದರಲ್ಲಿ ಮೊಟ್ಟ ಮೊದಲಬಾರಿಗೆ ಮುಖತಃ ಭೇಟಿಯಾಗಿದ್ದು. ಅಲ್ಲಿ ಅವರು ಬಂದಿದ್ದು ಒಬ್ಬ ಕಿರಿಯ ಲೇಖಕರನ್ನು ಮಾತನಾಡಿಸಿಕೊಂಡು ಹೋಗಲು. ಅಷ್ಟೊಂದು ಸಾಹಿತ್ಯ ಕಲೆ ಕವಿತೆಯ ಮೇಲೆ ಪ್ರೀತಿಯಿರುವ ಮನುಷ್ಯನೊಬ್ಬ ಮಾತ್ರ ತನಗಿಂತ ಕಿರಿಯರನ್ನು ಹೀಗೆ ಹುಡುಕಿಕೊಂಡು ಬರಲು ಸಾಧ್ಯ. ಒಬ್ಬ ಒಳ್ಳೆಯ ಗುರು ತನ್ನ ತಕ್ಕ ಶಿಷ್ಯನಿಗಾಗಿ ನಿರಂತರ ಹುಡುಕಾಟದಲ್ಲಿ ಇರುತ್ತಾನಂತೆ. ಈ ಹುಡುಕಾಟ ಪೂರ್ಣಗೊಂಡದಿನ ಒಬ್ಬ ಪರಮಹಂಸ, ವಿವೇಕಾನಂದರಂತಹ ಗುರು ಶಿಷ್ಯರ ಜೋಡಿಗಳು ಸೃಷ್ಟಿಯಾಗಿ ಅಮರವಾಗುತ್ತವೆ.
ಡಾ. ಲಕ್ಷ್ಮಣ ವಿ.ಎ ಅಂಕಣ

 

1996 ನೇ ಇಸ್ವಿಯದು, ನಾನಾಗ ಧಾರವಾಡದಲ್ಲಿದ್ದೆ. ತರಂಗ ವಾರಪತ್ರಿಕೆಯಲ್ಲಿ ಒಂದು ಕವನ ಪ್ರಕಟವಾಗಿತ್ತು. ಕವಿತೆಯೆಂದರೆ ಏನೆಂದು ಅರ್ಥವಾಗದ ವಯಸ್ಸಿನ ಕಾಲವದು. ಆದರೆ ಆ ಕವಿತೆ ಎಷ್ಟು ಇಷ್ಟವಾಗಿತ್ತೆಂದರೆ ನಾನದನ್ನು ಮತ್ತೆ ಮತ್ತೆ ಓದಿಕೊಂಡೆ. ತರಂಗದ ಆ ಪೇಪರ್ ಕಟ್ಟಿಂಗನ್ನು ಗಣಿತದ ನೋಟ್ಸಿನಲ್ಲಿಟ್ಟು ಲೆಕ್ಕ ಬೋರು ಹೊಡೆದಾಗ ಕವಿತೆ ಓದಿ ಸಮಾಧಾನ ಮಾಡಿಕೊಳ್ಳುತ್ತಿದ್ದೆ.

ಮೊದಲಿನಿಂದಲೂ ಈ ಲೆಕ್ಕದ ಆಟವೆಂದರೆ ನನಗೆ ಮಹಾಬೋರು. ಹೀಗಾಗಿ ಈ ಲೆಕ್ಕಾಚಾರದಲ್ಲಿ ನಾನು ಪಕ್ಕಾವೀಕು. ಈ ಗಣಿತದ ಕಗ್ಗಂಟು ಬಿಡಿಸಲು ಗೊಂದಲ… ಗೋಜಲು… ಕೊನೆಗೆ ಅದನ್ನು ಬಿಡಿಸಲಾಗದೇ ಹತಾಶನಾದಾಗ ನಾನು ಈ ಕವಿತೆಯ ಮೊರೆ ಹೋಗುತ್ತಿದ್ದೆ. ಕೊನೆಗೆ ಆ ಕವಿತೆಯನ್ನು ಬರೆದವರನ್ನು ಎಷ್ಟು ಆರಾಧಿಸಿದೆನೆಂದರೆ ಅವರಿಗೊಂದು ಹದಿನೈದು ಪೈಸೆಯ ಅಂಚೆ ಕಾರ್ಡಿನಲ್ಲಿ ಪತ್ರ ಬರೆಯುವ ಧೈರ್ಯ ಕೂಡ ಮಾಡಿದೆ.

ಧೈರ್ಯ ಯಾಕೆಂದರೆ ನಮ್ಮಂತ “ಸೈನ್ಸ್” ಎಂಬ ಡಾಕ್ಟರು ಇಂಜಿನಿಯರ್ ಆಗಬೇಕೆನ್ನುವ ಸೈನಿಕರು ಈ ಕವಿತೆ, ಗರ್ಲ್ ಫ್ರೆಂಡು, ಸಿಗರೇಟು ಸೇದಲು ಶುರುಮಾಡಿದರೆ ಅವನು ಹಾಳಾಗಿ ಹೋದನೆಂದು ನಮ್ಮ ಸೀಮಿತ ಲೋಕ ನಮ್ಮನ್ನು ಹೀಯಾಳಿಸಿ ನಮ್ಮನ್ನು ಮಂಗಳ ಗ್ರಹದಿಂದಿಳಿದು ಬಂದ ಜೀವಿಯಂತೆ ನೋಡುತ್ತಿದ್ದರು. ಪತ್ರ ಬರೆದು ಮರೆತೂ ಬಿಟ್ಟಿದ್ದೆ, ಅದಾಗಿ ಒಂದು ವಾರದಲ್ಲಿ ಆಕಾಶವಾಣಿ ಕಾರವಾರ ಕೇಂದ್ರ ಎಂಬ ಮೊಹರು ಒತ್ತಿದ ಪತ್ರ ನಾನಿರುವ ವಿಳಾಸಕ್ಕೆ ಬಂದಾಗ ಎಷ್ಟು ಖುಷಿಯಾಗಿತ್ತೆಂದರೆ ಆ ಖುಷಿಯನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಹಾಗೆ ಹೇಳಿದರೆ ಆಗುವ ಅನಾಹುತ ನನಗೆ ಅರಿವಿತ್ತು.

ಹಾಗೆ ಆಕಾಶವಾಣಿ ಕಾರವಾರದಿಂದ ಪತ್ರ ಬರೆದವರು ಜಿ ಕೆ ರವೀಂದ್ರ ಕುಮಾರ್. ಅಲ್ಲಿಂದ ಶುರುವಾದ ಅವರ ಅಭಿಮಾನದ ಯಾತ್ರೆ ಇಂದಿಗೂ ಮುಂದುವರೆದು ಇಂದು ಅವರ ಕವಿತೆಗಳ ಬಗ್ಗೆ ಬರೆಯಬೇಕಾದ ನಾನು ಹೀಗೆ ‘ಓಬಿಚ್ಯುರಿ’ ಬರೆಯುತ್ತೇನೆನ್ನುವುದು ವಿಧಿಯ ವಿಪರ್ಯಾಸವೇ ಸರಿ.

ಆಗೆಲ್ಲ ಗಣಿತದ ಗೊಂದಲಗಳಿಂದ ಕ್ಷಣಕಾಲ ಬಿಡುಗಡೆಗೊಳಿಸುತ್ತಿದ್ದ ಅವರ ಕವಿತೆಗಳು ಮುಂದೆ ಬದುಕಿನ ನನ್ನ ಎಲ್ಲ ಜಂಜಡಗಳಿಗೊಂದು ಬಿಡುಗಡೆಗೊಳಿಸುವ ತಕ್ಷಣದ ಕಿಟಕಿಯ ಮೂಲಕ ಉಸಿರಾಡಿಸಿ ಹೂ ಹಗೂರಗೊಳಿಸುವ ಸಾಧನಗಳಾದವೆಂದರೆ ಅತಿಶಯೋಕ್ತಿಯಾಗಲಾರದು.

ಮೊದಲಿನಿಂದಲೂ ಈ ಲೆಕ್ಕದ ಆಟವೆಂದರೆ ನನಗೆ ಮಹಾಬೋರು. ಹೀಗಾಗಿ ಈ ಲೆಕ್ಕಾಚಾರದಲ್ಲಿ ನಾನು ಪಕ್ಕಾವೀಕು. ಈ ಗಣಿತದ ಕಗ್ಗಂಟು ಬಿಡಿಸಲು ಗೊಂದಲ… ಗೋಜಲು… ಕೊನೆಗೆ ಅದನ್ನು ಬಿಡಿಸಲಾಗದೇ ಹತಾಶನಾದಾಗ ನಾನು ಈ ಕವಿತೆಯ ಮೊರೆ ಹೋಗುತ್ತಿದ್ದೆ. ಕೊನೆಗೆ ಆ ಕವಿತೆಯನ್ನು ಬರೆದವರನ್ನು ಎಷ್ಟು ಆರಾಧಿಸಿದೆನೆಂದರೆ ಅವರಿಗೊಂದು ಹದಿನೈದು ಪೈಸೆಯ ಅಂಚೆ ಕಾರ್ಡಿನಲ್ಲಿ ಪತ್ರ ಬರೆಯುವ ಧೈರ್ಯ ಕೂಡ ಮಾಡಿದೆ.

ಕೆಲವೊಬ್ಬ ವ್ಯಕ್ತಿಗಳಿರುತ್ತಾರೆ… ಕೇವಲ ಕವಿತೆ ಬರೆಯಲೆಂದೇ ಜನಿಸಿದವರಂತೆ ಒಂದು ನೆಲದ ಭಾಗ್ಯವಾಗಿ….

ಇವರ ವೈಯಕ್ತಿಕ ಪರಿಚಯ ಈಗಷ್ಟೇ,ಇತ್ತೀಚಿಗೆ ಆದದ್ದು. ನೀನಾಸಮ್ ನ ಶಿಬಿರವೊಂದರಲ್ಲಿ ಮೊಟ್ಟ ಮೊದಲಬಾರಿಗೆ ಮುಖತಃ ಭೇಟಿಯಾಗಿದ್ದು. ಅಲ್ಲಿ ಅವರು ಬಂದಿದ್ದು ಒಬ್ಬ ಕಿರಿಯ ಲೇಖಕರನ್ನು ಮಾತನಾಡಿಸಿಕೊಂಡು ಹೋಗಲು. ಅಷ್ಟೊಂದು ಸಾಹಿತ್ಯ ಕಲೆ ಕವಿತೆಯ ಮೇಲೆ ಪ್ರೀತಿಯಿರುವ ಮನುಷ್ಯನೊಬ್ಬ ಮಾತ್ರ ತನಗಿಂತ ಕಿರಿಯರನ್ನು ಹೀಗೆ ಹುಡುಕಿಕೊಂಡು ಬರಲು ಸಾಧ್ಯ. ಒಬ್ಬ ಒಳ್ಳೆಯ ಗುರು ತನ್ನ ತಕ್ಕ ಶಿಷ್ಯನಿಗಾಗಿ ನಿರಂತರ ಹುಡುಕಾಟದಲ್ಲಿ ಇರುತ್ತಾನಂತೆ. ಈ ಹುಡುಕಾಟ ಪೂರ್ಣಗೊಂಡದಿನ ಒಬ್ಬ ಪರಮಹಂಸ, ವಿವೇಕಾನಂದರಂತಹ ಗುರು ಶಿಷ್ಯರ ಜೋಡಿಗಳು ಸೃಷ್ಟಿಯಾಗಿ ಅಮರವಾಗುತ್ತವೆ.

(ಚಿತ್ರ: ಅನಿಲ್ ಕುಮಾರ್)

ತಮ್ಮ ಬಿಡುವಿರದ ಕೆಲಸ ಬರವಣಿಗೆ ದಣಿವು ಆಯಾಸಗಳ ಮಧ್ಯೆಯೇ ಅವರು “ಕಾವ್ಯ ಕೇಳಿ” ಸಾಹಿತ್ಯದ ವಾಟ್ಸಾಪ್ಪಿನ ಗುಂಪಿನಲ್ಲಿ ಸದಾ ಸಕ್ರಿಯರಾಗಿದ್ದರು. ಕಿರಿಯರ ಸಣ್ಣ ಬರಹಕ್ಕೂ ಪ್ರತಿಕ್ರಿಯೆ ನೀಡಿ ಹುರಿದುಂಬಿಸುತ್ತಿದ್ದರು. ತಪ್ಪುಗಳನ್ನು ಯಾವುದೇ ಮುಲಾಜುಗಳಿಲ್ಲದೇ ಮತ್ತು ನೋವಾಗದಂತೆ ಎಚ್ಚರಿಸಿ ತಿದ್ದುವ ಪರಿ ಮಾತ್ರ ಅನನ್ಯವಾಗಿತ್ತು.

ಕವಿತೆಗಳಿಗೆ ಗುಂಪಿನ ಎಲ್ಲರ ಪ್ರತಿಕ್ರಿಯೆ ಬಂದ ಮೇಲೆ ಕೊನೆಯದಾಗಿ ನಿರ್ಣಾಯಕ ಎನ್ನುವಂತಹ ಅವರ ಮಾತುಗಳಿಗೆ ನಾವು, ಗುಂಪಿನ ಸ್ನೇಹಿತರು ಇನ್ನಿಲ್ಲದಂತೆ ಕಾಯುತ್ತಿದ್ದೆವು. ಅವರ ಪ್ರತಿಕ್ರಿಯೆಗಳು ಹೇಗಿರುತ್ತಿದ್ದವೆಂದರೆ ಒಂದು ಇನ್ನೊಂದು ಮಾತೂ ಅದರ ಬಗ್ಗೆ ಯಾರೂ ಆಡಬಾರದು, ಇಲ್ಲವೇ ಒಂದು ಅರ್ಥಪೂರ್ಣ ಚರ್ಚೆ ಅವರ ನಿರ್ಣಾಯಕ ಮಾತಿನ ಎಳೆ ಹಿಡಿದು ಮುಂದೆ ಸಾಗಬೇಕು.

ಗಂಭೀರ ವ್ಯಕ್ತಿತ್ವ ಗುಹೆಯೊಳಗೆ ಹೊಕ್ಕು ಬಂದಂತಹ ಅವರ ದನಿ…. ಇಂಗ್ಲೀಷ್ ಚಲನಚಿತ್ರದ ನಾಯಕನಿರುವಂತಹ ಧೀರೋದಾತ್ತತೆ, ಸುಮ್ಮನೆ ಅವರು ನಮ್ಮೊಡನಿದ್ದರೆ ಏನೋ ಒಂದು ಧೈರ್ಯ ಎಂಬ ಅಭಯ. ಅವರ ಮೆಲು ಮಾತು ಕಿರು ನಗೆ ….

ಎಷ್ಟೊಂದು ತಿದ್ದಬೇಕಿತ್ತವರು ನಮ್ಮನ್ನೆಲ್ಲ? ಎಷ್ಟೊಂದು ಕವಿತೆಗಳು ಅವರೇ ಬರೆಯಬೇಕೆಂದು ಕಾಯ್ದು ಕುಳಿತಿದ್ದವು? ಒಂದು ಕವಿತೆಯ ಎಷ್ಟೆಲ್ಲಾ ಸಾಧ್ಯತೆಗಳನ್ನು ಅವರು ತೆರೆದಿಡುತ್ತಿದ್ದರು… ಅವರು ಇರಬೇಕಿತ್ತು ಅವರ ಎತ್ತರದಷ್ಟೇ ಇರುವ ಕಾವ್ಯದ ಎತ್ತರವ ಅಳೆಯಲು… ಹೀಗೇಕೆ ಸರದಿ ಸಾಲು ತಪ್ಪಿಸಿದಿರಿ ಸರ್?

ಕವಿತೆಯ ಸಾಲಿನಿಂದ ಅಕಸ್ಮಾತ್ ಕಳಚಿಬಿದ್ದ ಅಕ್ಷರದಂತೆ?