Advertisement
ಕವಿ ಒಬ್ಬ ಎಂಜಿನಿಯರ್;‌ ಕವಿತೆ ಒಂದು ಯಂತ್ರ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಕವಿ ಒಬ್ಬ ಎಂಜಿನಿಯರ್;‌ ಕವಿತೆ ಒಂದು ಯಂತ್ರ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಡಿ ಮೆಲೊ ನೆಟೊ ಅವರು ತಮ್ಮ ಕಾವ್ಯದಲ್ಲಿ ‘ವಸ್ತು’-ಗಳಿಗೆ ನೀಡುವ ವಿಶೇಷ ಸ್ಥಾನಮಾನವನ್ನು ಅವರ ಕಾವ್ಯದ ವಿಮರ್ಶಕರು ಗಮನಿಸಿದ್ದಾರೆ. ಡಿ ಮೆಲೊ ನೆಟೊ ಅವರ ಕಾವ್ಯದಲ್ಲಿ ಕಾಣುವ ಕಲ್ಲು, ಚಾಕು, ಗಾಳಿ, ನೀರು – ಇಂತಹ ‘ವಸ್ತು’-ಗಳು ಮತ್ತೆ ಮತ್ತೆ ಎಡೆಬಿಡದೆ ಬರುವ ಪ್ರತಿಮೆಗಳಾಗುತ್ತವೆ; ಜೊತೆಗೆ ಪ್ರಪಂಚದಾದ್ಯಂತದ ವಿಷಯಗಳು ಸಹ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಬ್ರೆಜಿಲ್ (Brazil) ದೇಶದ ಪೋರ್ಚುಗೀಸ್ (Portuguese) ಭಾಷಾ ಕವಿ ಜುವಾವ್ ಕೆಬ್ರಾಲ್ ಡಿ ಮೆಲೊ ನೇಟೊ-ರವರ (Joao Cabral De Melo Neto, 1920-1999)
ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಜುವಾವ್ ಕೆಬ್ರಾಲ್ ಡಿ ಮೆಲೊ ನೆಟೊ ಬ್ರೆಜಿಲಿಯನ್ ಕಾವ್ಯದ ಸುವರ್ಣ ಯುಗದ ಕೊನೆಯ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿದ್ದರು. ಡಿ ಮೆಲೊ ನೆಟೊ-ರವರು 1920-ರಲ್ಲಿ ಬ್ರೆಜಿಲ್ ದೇಶದ ಪೆಹನಾಂಬೂಕೋ (Pernambuco) ರಾಜ್ಯದ ರೆಸೀಫಿ (Recife) ನಗರದಲ್ಲಿ ಭೂಮಾಲೀಕರ ಗೌರವಾನ್ವಿತ ಕುಟುಂಬವೊಂದರಲ್ಲಿ ಜನಿಸಿದರು. ಅವರು ತಮ್ಮ ಯೌವನದ ಬಹುಪಾಲನ್ನು ರಾಜ್ಯದ ಒಳಭಾಗದಲ್ಲಿರುವ ಅವರ ಕುಟುಂಬದ ಕಬ್ಬಿನ ತೋಟಗಳಲ್ಲಿ, ಗಿರಣಿಗಳಲ್ಲಿ ಕಳೆದರು, ಹಾಗೂ ಕೆಲ ವರ್ಷಗಳ ಕಾಲ ಸರಕಾರಿ ಹುದ್ದೆಯಲ್ಲಿ ಕೆಲಸ ಮಾಡಿದರು. 1940-ರಲ್ಲಿ ಅವರ ಕುಟುಂಬವು ರಿಯೊ ಡಿ ಜನೈರೊ ನಗರಕ್ಕೆ ಸ್ಥಳಾಂತರಗೊಂಡಿತು. 1942-ರಲ್ಲಿ ಅವರು Pedra do sono (Stone of Sleep) ಎಂಬ ಹೆಸರಿನ ತಮ್ಮ ಮೊದಲ ಕವನ ಸಂಕಲನವನ್ನು ಸ್ವಂತ ಖರ್ಚಿನಲ್ಲಿ ಅಚ್ಚುಮಾಡಿಸಿ 340 ಪ್ರತಿಗಳ ಚಲಾವಣೆಯೊಂದಿಗೆ ಪ್ರಕಟಿಸಿದರು. ಅವರ ಆರಂಭಿಕ ಕಾಲದ ಕಾವ್ಯವು ‘ಸರಿಯಲಿಸ್ಟ್’ ಹಾಗೂ ‘ಕ್ಯೂಬಿಸ್ಟ್’ ಸಾಹಿತ್ಯದ ಪ್ರಭಾವಗಳಿಂದ ಗುರುತಿಸಲ್ಪಟ್ಟಿದ್ದರೂ, 1945-ರಲ್ಲಿ ಪ್ರಕಟವಾದ O engenheiro (The Engineer) ಸಂಗ್ರಹ ಅವರನ್ನು ‘Generation of ’45’ ಎಂಬ ಹೆಸರಿನ ಎರಡನೆಯ ಮಹಾಯುದ್ಧದ ನಂತರದ ಕವಿಗಳ ಒಕ್ಕೂಟದ ಪ್ರಮುಖ ಧ್ವನಿ ಎಂದು ಬಹಿರಂಗಪಡಿಸಿತು. ಈ ಕವಿಗಳ ಒಕ್ಕೂಟ ತಮ್ಮ ಕಟ್ಟುನಿಟ್ಟಾದ ನಿರಾಡಂಬರ ಕಾವ್ಯಶೈಲಿಗಾಗಿ ಹೆಸರು ಪಡೆದಿತ್ತು. 1945-ರಲ್ಲಿ ಡಿ ಮೆಲೊ ನೆಟೊ ಬ್ರೆಜಿಲ್ ದೇಶದ ವಿದೇಶಾಂಗ ಸೇವೆಗೆ ಸೇರಿದರು ಮತ್ತು 1990-ರಲ್ಲಿ ನಿವೃತ್ತರಾಗುವವರೆಗೆ ವಿಶ್ವದ ನಾಲ್ಕು ಖಂಡದ ದೇಶಗಳಲ್ಲಿ ತಮ್ಮ ದೇಶದ ರಾಯಭಾರಿಯಾಗಿ ಸೇವೆ ಸಲ್ಲಿಸಿದರು. ಹೀಗಾಗಿ, ಅವರ ಕವಿತೆಯು ಅವರ ಸ್ಪೆಯಿನ್‌ ದೇಶದಲ್ಲಿದ್ದಾಗಿನ, ವಿಶೇಷವಾಗಿ ಸವಿಲ್ (Seville) ಹಾಗೂ ಬಾರ್ಸೆಲೋನಾ (Barcelona) ನಗರಗಳ, ಅನುಭವಗಳಿಂದ ಪ್ರಭಾವಿತವಾಗಿದೆ.

1955-ರಲ್ಲಿ ಪ್ರಕಟವಾದ Morte e vida Severina (Death and Life of a Severino) ಎಂಬ ನಾಟಕೀಯ ಕಾವ್ಯ ಡಿ ಮೆಲೊ ನೆಟೊ-ರವರಿಗೆ ವ್ಯಾಪಕ ಜನಪ್ರಿಯತೆಯನ್ನು ತಂದುಕೊಟ್ಟುತ್ತು. ಇದು ಪದ್ಯರೂಪದಲ್ಲಿರುವ ಜನಪ್ರಿಯ literatura de cordel-ನ ನಿರೂಪಣಾ ಶೈಲಿಯನ್ನು ಅಳವಡಿಸಿಕೊಂಡ ನಾಟಕೀಯ ಕವಿತೆ. Duas águas ಎಂಬ ಅವರ ಕವನ ಸಂಗ್ರಹದಲ್ಲಿ ಈ ಕಾವ್ಯ ಪ್ರಕಟವಾಯಿತು. 1968-ರಲ್ಲಿ ಅವರ Poesias completas ಕವನ ಸಂಗ್ರಹ ಪ್ರಕಟವಾಯಿತು ಮತ್ತು ಅದೇ ವರ್ಷದಲ್ಲಿ ಅವರನ್ನು Brazilian Academy of Letters-ಗೆ (ಬ್ರೆಜಿಲ್ ದೇಶದ ಸಾಹಿತ್ಯ ಅಕಾಡೆಮಿ) ಆಯ್ಕೆ ಮಾಡಲಾಯಿತು.

ಪೋರ್ಚುಗಲ್‌ ದೇಶದ ಪ್ರತಿಷ್ಠಿತ Camões Prize (1990) ಮತ್ತು Neustadt International Prize for Literature (1992) ಸೇರಿದಂತೆ ಡಿ ಮೆಲೊ ನೆಟೊ-ರವರು ಹಲವಾರು ಗೌರವಗಳು ಮತ್ತು ಪ್ರಶಸ್ತಿಗಳನ್ನು ಪಡೆದರು. 1994-ರಲ್ಲಿ ಅವರಿಗೆ ಪೂರ್ಣವಾಗಿ ಕಣ್ಣುಕಾಣಿಸದೇಹೋದಾಗ, ಅವರು ಕವನ ಬರೆಯುವುದನ್ನು ನಿಲ್ಲಿಸಿದರು; ಅವರಿಂದ ತಮ್ಮ ಕಲೆಯನ್ನು ದೃಶ್ಯ ಗ್ರಹಿಕೆಯಿಂದ ಪ್ರತ್ಯೇಕಿಸಲು ಸಾಧ್ಯವಾಗಲಿಲ್ಲ. ಡಿ ಮೆಲೊ ನೆಟೊ-ರವರು 1999-ರಲ್ಲಿ ರಿಯೊ ಡಿ ಜನೈರೊದಲ್ಲಿ ನಿಧನರಾದರು. ಐವತ್ತು ವರ್ಷಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ, ಡಿ ಮೆಲೊ ನೆಟೊ 18 ಕವನ ಸಂಕಲನಗಳು ಮತ್ತು ಎರಡು ನಾಟಕಗಳನ್ನು ಪ್ರಕಟಿಸಿದರು.

ಡಿ ಮೆಲೊ ನೆಟೊ ಅವರ ಕೃತಿಗಳು ಕಾವ್ಯದ ಔಪಚಾರಿಕ ಅಂಶಗಳಿಗೆ ಕಟ್ಟುನಿಟ್ಟಾದ, ಆದರೆ ಸೃಜನಶೀಲಾತ್ಮಕ ಲಕ್ಷ್ಯ ನೀಡಿದ್ದಕ್ಕಾಗಿ ಹೆಸರುವಾಸಿಯಾಗಿವೆ. ಐದು ಅಥವಾ ಏಳು ಉಚ್ಚಾರಾಂಶಗಳ ಸಾಂಪ್ರದಾಯಿಕ ಪದ್ಯದಿಂದ (‘redondilha’ ಎಂದು ಕರೆಯುವ ಪದ್ಯ) ಮತ್ತು ಅರ್ಧ-ಪ್ರಾಸಗಳ (oblique rhymes) ನಿರಂತರ ಬಳಕೆಯಿಂದ ಅವರು ತಮ್ಮ ವಿಶಿಷ್ಟ ಕಾವ್ಯ ಧ್ವನಿಯನ್ನು ಪಡೆದರು. ಅವರ ಶೈಲಿಯಲ್ಲಿ ಅವರ ಆರಂಭಿಕ ಕಾವ್ಯದಲ್ಲಿ ಗುರುತಿಸಲ್ಪಟ್ಟ ‘ಸರಿಯಲಿಸ್ಟ್’ ಪ್ರವೃತ್ತಿಯಿಂದ ಹಿಡಿದು ಅವರ ಸ್ಥಳೀಯ ಈಶಾನ್ಯ ಬ್ರೆಜಿಲ್‌ನ ಪ್ರಾದೇಶಿಕ ಅಂಶಗಳ ಬಳಕೆಯವರೆಗೆ ವಿಸ್ತಾರವನ್ನು ಕಾಣಬಹುದು.

ಡಿ ಮೆಲೊ ನೆಟೊ ಅವರೇ ಅಳವಡಿಸಿಕೊಂಡ ‘ಕಟ್ಟಡ ವಿನ್ಯಾಸಮಾಡುವ ಎಂಜಿನಿಯರ್‌’-ನ ಪ್ರತಿಮೆಯನ್ನೇ ಅವರ ಕಾವ್ಯವನ್ನು ವಿವರಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಮೊದಲಿನಿಂದಲೂ, ಅವರ ಕಾವ್ಯವು ಪ್ರತಿಮೆಗಳಿಂದ ಅಸಾಧಾರಣವಾಗಿ ಶ್ರೀಮಂತವಾಗಿತ್ತು. ಡಿ ಮೆಲೊ ನೆಟೊ ಅವರ ಮೊದಲ ಸಂಕಲನ Pedra do Sono-ದ ಬಗ್ಗೆ ಮಾತನಾಡುತ್ತಾ, ವಿಮರ್ಶಕ ಆ್ಯಂಟೋನಿಯೊ ಕ್ಯಾಂಡಿಡೊ-ರವರು, ಡಿ ಮೆಲೊ ನೆಟೊ ಅವರ ಕಾವ್ಯದ ಮೇಲೆ ‘ಕ್ಯೂಬಿಸಂ’ ಮತ್ತು ‘ಸರಿಯಲಿಸಂ’-ನ ಪ್ರಭಾವವನ್ನು ಗುರುತಿಸುತ್ತಾ, ಹಾಗೂ ಹೇಗೆ ಅವರ ಕವನಗಳು ಬಹಳಷ್ಟು ಚಿತ್ರಾತ್ಮಕ ರೀತಿಯಲ್ಲಿ ಪದಗಳನ್ನು ಬಳಸುತ್ತಾ ಮೂರ್ತ ಹಾಗೂ ಇಂದ್ರೀಯ ಪ್ರತಿಮೆಗಳ ಸಂಚಯನದಿಂದ ರಚಿಸಲ್ಪಟ್ಟಿವೆ ಎಂಬುದನ್ನು ಗಮನಿಸುತ್ತಾರೆ.

ಆದಾಗ್ಯೂ, ಶೀಘ್ರದಲ್ಲೇ ಅವರು ತಮ್ಮ ರಾಜ್ಯದ ಸಾಮಾಜಿಕ ವಾಸ್ತವತೆಯ ಕಡೆಗೆ ಹೆಚ್ಚು ಗಮನ ಹರಿಸತೊಡಗಿದರು. ಅವರ ಪ್ರಸಿದ್ಧ ಕಾವ್ಯನಾಟಕ Morte e Vida Severina ಸೇರಿದಂತೆ ಅನೇಕ ಕೃತಿಗಳಲ್ಲಿ, ಡಿ ಮೆಲೊ ನೆಟೊ-ರವರು ಪೆಹನಾಂಬೂಕೋ ರಾಜ್ಯದಲ್ಲಿ ಬಡತನ ಮತ್ತು ಅಸಮಾನತೆಯಿಂದ ಪೀಡಿತರ ಜೀವನದ ಬಗ್ಗೆ ಮಾತನಾಡುತ್ತಾರೆ. ಸುಮಾರು 1950-ರಲ್ಲಿ ರಚಿತವಾದ O cão sem plumas (A Dog without Feathers, ಗರಿಗಳಿಲ್ಲದ ಒಂದು ನಾಯಿ) ಹೆಸರಿನ ಅವರ ಮೊದಲ ನೀಳ್ಗವಿತೆಯಲ್ಲಿ ಅವರು ಕ್ಯಾಪಿಬರೀಬಿ (Capibaribe) ನದಿಯನ್ನು ಅವಲಂಬಿಸಿರುವ ನಿರ್ಗತಿಕ ವರ್ಗಗಳ ಜೀವನವನ್ನು ಚಿತ್ರಿಸಿದರು ಮತ್ತು ಕಬ್ಬಿನ ಗಿರಣಿಯಲ್ಲಿನ ಅವರ ಪರಿಶ್ರಮವನ್ನು ವಿವರಿಸಿದರು. ಮೂರು ವರ್ಷಗಳ ನಂತರ, O Rio (The River) ಕವನದಲ್ಲಿ ಅವರು ನದಿಯ ಧ್ವನಿಯನ್ನು ವಹಿಸಿಕೊಂಡು, ನದಿಯ ಹರಿವನ್ನು, ಮಾರ್ಗನ್ನು ಮತ್ತು ತನ್ನ ಹಾದಿಯಲ್ಲಿ ಕಾಣುವ ಹಳ್ಳಿಗಳು ಮತ್ತು ಭೂದೃಶ್ಯಗಳನ್ನು ಉತ್ತಮ ಪುರುಷದಲ್ಲಿ ನಿರೂಪಿಸಿದರು.

ಡಿ ಮೆಲೊ ನೆಟೊ ಅವರು ತಮ್ಮ ಕಾವ್ಯದಲ್ಲಿ ‘ವಸ್ತು’-ಗಳಿಗೆ ನೀಡುವ ವಿಶೇಷ ಸ್ಥಾನಮಾನವನ್ನು ಅವರ ಕಾವ್ಯದ ವಿಮರ್ಶಕರು ಗಮನಿಸಿದ್ದಾರೆ. ಡಿ ಮೆಲೊ ನೆಟೊ ಅವರ ಕಾವ್ಯದಲ್ಲಿ ಕಾಣುವ ಕಲ್ಲು, ಚಾಕು, ಗಾಳಿ, ನೀರು – ಇಂತಹ ‘ವಸ್ತು’-ಗಳು ಮತ್ತೆ ಮತ್ತೆ ಎಡೆಬಿಡದೆ ಬರುವ ಪ್ರತಿಮೆಗಳಾಗುತ್ತವೆ; ಜೊತೆಗೆ ಪ್ರಪಂಚದಾದ್ಯಂತದ ವಿಷಯಗಳು ಸಹ. ತಾವು ಜನಿಸಿದ ಈಶಾನ್ಯ ಬ್ರೆಜಿಲ್‌ನಿಂದ ಮತ್ತು ದಕ್ಷಿಣ ಸ್ಪೇಯಿನ್-ನಿಂದ ಸಹ ಅವರು ತಮ್ಮ ಕಾವ್ಯಕ್ಕಾಗಿ ವಿಷಯಗಳನ್ನು ಪಡಕೊಂಡರು. ದಕ್ಷಿಣ ಸ್ಪೇಯಿನ್-ನ ಶುಷ್ಕತೆ ಮತ್ತು ಕಠಿಣತೆಯಿಂದ ಬರುವ ಮಿತವ್ಯಯತೆಯನ್ನು ಅವರು ತಮ್ಮ ತಾಯ್ನಾಡಿನೊಂದಿಗೆ ಗುರುತಿಸಿಕೊಂಡರು. ಅವರು ಕಾವ್ಯದಲ್ಲಿ ಬರುವ ಕಬ್ಬು, ಬರ, ರೆಸೀಫಿ ನಗರ, ಕ್ಯಾಪಿಬರೀಬಿ ನದಿ ಮತ್ತು ಸಮುದ್ರದ ಕುರಿತಾದ ಕವಿತೆಗಳಿಗೆ ಅವರು ಹುಟ್ಟಿದ, ಯೌವನವನ್ನು ಕಳೆದ ಪೆಹನಾಂಬೂಕೋ (Pernambuco) ರಾಜ್ಯವೇ ಆವರಣವಾಗಿದೆ, ಹಾಗೂ ಅವರ ಕವನಗಳಲ್ಲಿ ಬರುವ ಆ್ಯಂಡಲೂಸಿಯನ್ ಭೂದೃಶ್ಯವು (Andalusian landscape) ಗೂಳಿಕಾಳಗ (bullfight), ಫ್ಲಮೆಂಕೊ ನೃತ್ಯ, ಸವಿಲ್ (Seville) ಮತ್ತು ಸವಿಲ್-ನ ಹೆಂಗಸರನ್ನು ಒಳಗೊಂಡಿದೆ.

ಡಿ ಮೆಲೆ ನೆಟೊ-ರವರ ಬಹಳಷ್ಟು ಕವನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದ ರಿಚರ್ಡ್ ಝೆನಿತ್-ರವರು (Richard Zenith) ತಮ್ಮ ‘The State of Things in the Poetry of João Cabral de Melo Neto’ (Latin American Literature Today, Issue 18, May 2021) ಎಂಬ ಲೇಖನದಲ್ಲಿ ಡಿ ಮೆಲೊ ನೆಟೊ-ರವರ ಕಾವ್ಯವನ್ನು ವಿಸ್ತಾರವಾಗಿ ವಿಮರ್ಶಿಸಿದ್ದಾರೆ. ಡಿ ಮೆಲೆ ನೆಟೊ-ರವರ ಕಾವ್ಯದ ವಿಷಯಗಳ ಬಗ್ಗೆ ಮಾತನಾಡುತ್ತಾ, ಝೆನಿತ್-ರವರು ಹೀಗನ್ನುತ್ತಾರೆ: “ಇವು ನಮಗೆ ಕ್ಲೀಷೆ-ಭರಿತ ದರ್ಶನಗಳೆಂದು ಅನಿಸಬಹುದು, ಆದರೆ ಡಿ ಮೆಲೊ ನೆಟೊ-ರವರು ಅತಿ ರೂಢಿಗತ, ಅತಿ ಸಾಮಾನ್ಯ, ಹಾಗೂ ಅತಿ ಸುಲಭವಾದುದನ್ನು ಹುಡುಕಿ ತೆಗೆದು, ಅದನ್ನು ಪರಿವರ್ತಿಸುತ್ತಾರೆ, ಕೆಲವು ಸಲ ಅದನ್ನು ಮೀರುತ್ತಾರೆ ಕೂಡ. ಅವರದ್ದು ವಸ್ತುಗಳ ಕವನ, ಹೌದು, ಆದರೆ ಆ ವಸ್ತುಗಳು ಭಾವನೆಗಳಾಗಿರಬಹುದು, ಕಲ್ಪನೆಗಳಾಗಿರಬಹುದು, ಮಾನವೀಯತೆಯೂ ಆಗಿರಬಹುದು. ಇವನ್ನು ಅವರ ಕಾವ್ಯವು ವಸ್ತುವಿನ ರೂಪಕ್ಕೆ ಮಾರ್ಪಡುವಂತೆ ಒತ್ತಾಯಿಸುತ್ತದೆ, ಆದರೆ ವಸ್ತುಗಳು ಭೌತಿಕ ಘಟಕಗಳಾಗಿ ಪ್ರಾರಂಭವಾದರೆ, ಅವುಗಳ ಮೇಲೆ ತತ್ವಶಾಸ್ತ್ರ, ಮನೋವಿಜ್ಞಾನ, ಮತ್ತು ಜೀವನದ ದುರಂತ ಪ್ರಜ್ಞೆಯನ್ನು ಹೆರುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಪ್ರಪಂಚವನ್ನು ಮರುಸೃಷ್ಟಿಸುವುದು, ಎಲ್ಲಾ ಮನುಜರಿಗೆ ಸಮಾನವಾಗಿರುವ ಅಮೂರ್ತ ಮತ್ತು ಮೂರ್ತವಾದುದನ್ನು ತೆಗೆದುಕೊಂಡು ಅವನ್ನು ತಿರುಗಿಸುವುದು, ಅವನ್ನು ಅಸಾಮಾನ್ಯವಾಗಿಸುವುದು, ಮತ್ತು ಅವುಗಳಲ್ಲಿ ಇರದಿರುವ ಆಯಾಮವನ್ನು ನೀಡುವುದು – ಇವು ಮೇಲೊ ನೆಟೊ-ರವರ ಕಾವ್ಯದ ಯೋಜನೆಯಾಗಿದ್ದವು.”

ಡಿ ಮೆಲೆ ನೆಟೊ-ರವರ ಖ್ಯಾತ ‘ಕವಿಯೊಬ್ಬ ಎಂಜಿನಿಯರ್’ ಪ್ರತಿಮೆಯನ್ನು ಝೆನಿತ್-ರವರು ವಿಶ್ಲೇಷಿಸುತ್ತಾರೆ: “ಮೊದಲಿನಿಂದಲೂ ಡಿ ಮೆಲೊ ನೆಟೊ-ರವರು ಕವಿಯನ್ನು ಒಬ್ಬ ಎಂಜಿನಿಯರ್ ಎಂದು ಮತ್ತು ಕವಿತೆಯನ್ನು ಒಂದು ಯಂತ್ರ ಎಂದು ಕರೆದರು (The Lesson of Poetry ಕವನನಲ್ಲಿ; ಇಲ್ಲಿ ‘ಕಾವ್ಯ ಕಲಿಸಿದ್ದು’ ಎಂದು ಅನುವಾದ ಮಾಡಿರುವೆ). ಕವಿತೆಯು ಕವಿ ಆಶ್ರಯ ಪಡೆಯುವ ಮನೆಯನ್ನು ನಿರ್ಮಿಸಲು ಇಟ್ಟಿಗೆಗಳನ್ನು ತಯಾರಿಸುವ ಯಂತ್ರವಾಗಿದೆ, ಆದರೆ ಈ ಇಟ್ಟಿಗೆಗಳು ಕೇವಲ ಮಣ್ಣಲ್ಲ. ಕವಿತೆಯೆಂಬ ಯಂತ್ರವು ಅಲೌಕಿಕ ಮತ್ತು ಅನಿರ್ದಿಷ್ಟವಾದುದಕ್ಕೆ ರೂಪವನ್ನು ನೀಡುತ್ತದೆ, ಆದರೆ ಅದು ನೀರಸವಾಗಿರುವ ಮತ್ತು ನಿರ್ಜೀವವಾಗಿರುವುದಕ್ಕೆ ಆತ್ಮವನ್ನು ನೀಡುತ್ತದೆ. ಎಲ್ಲಾ ರೀತಿಯ “ವಸ್ತುಗಳು” ಈ ಕವಿಯ ಯಂತ್ರದೊಳಗೆ ಹೋಗುತ್ತವೆ, ಮತ್ತು ಎಲ್ಲವೂ ಮೂರು ಆಯಾಮಗಳಿಗಿಂತಲೂ ಅಧಿಕವಿರುವ ಇಟ್ಟಿಗೆಗಳಾಗಿ ಹೊರಹೊಮ್ಮುತ್ತವೆ – ಕ್ರಿಯಾತ್ಮಕವಾದ, ಅಸಲಾದ, ಬಾಗಿಲುಗಳು ಮತ್ತು ಕಿಟಕಿಗಳಿಂದ ಮಾಡಲ್ಪಟ್ಟ ಮತ್ತು ಗೋಡೆಗಳಿಲ್ಲದ್ದ ಮನೆಯನ್ನು ಕಟ್ಟುವುದಕ್ಕಾಗಿ.”

ನಾನು ಇಲ್ಲಿ ಕನ್ನಡ ಭಾಷೆಗೆ ಅನುವಾದಿಸಿರುವ ಜುವಾವ್ ಕೆಬ್ರಾಲ್ ಡಿ ಮೆಲೊ ನೆಟೊ-ರವರ ಒಂಬತ್ತು ಕವನಗಳಲ್ಲಿ ಮೊದಲ ಕವನವನ್ನು ಗ್ಯಾಲ್ವೇ ಕಿನೆಲ್ (Galway Kinnell), ನಂತರದ ಐದು ಕವನಗಳನ್ನು ರಿಚರ್ಡ್ ಝೆನಿತ್ (Richard Zenith), ಏಳನೆಯ ಕವನವನ್ನು ರಿಕಾರ್ಡೊ ಡಾ ಸಿಲ್ವೇರಾ ಲೋಬೋ ಸ್ಟರ್ನ್‌ಬರ್ಗ್ (Ricardo da Silveira Lobo Sternberg), ಎಂಟನೆಯ ಕವನವನ್ನು ಡಬ್ಲ್ಯು. ಎಸ್. ಮರ್ವಿನ್ (W. S. Merwin), ಹಾಗೂ ಒಂಬತ್ತನೆಯ ಕವನವನ್ನು ಜೆಲಾಲ್ ಕಾದಿರ್-ರವರು (Djelal Kadir) ಮೂಲ ಪೋರ್ಚುಗೀಸ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿರುವರು.


ಮುಂಜಾನೆಯ ನೇಯುವುದು
ಮೂಲ: Weaving the Morning

ಒಬ್ಬನೇ ಹುಂಜ ಮುಂಜಾನೆಯೊಂದನ್ನು ನೇಯುವುದಿಲ್ಲ,
ಅವನಿಗೆ ಇತರ ಹುಂಜಗಳ ಅಗತ್ಯ ಇದ್ದೇ ಇರುತ್ತೆ.
ಇಂವ ಬೇರೊಬ್ಬನಿಗೆ ಚಿಮ್ಮಿಸಿದ ಕೂಗನ್ನು ಅವನಿಂದ ಎತ್ತಿಕೊಳ್ಳಲು;
ಇನ್ನೊಂದು ಹುಂಜ ಅವನ ಮೊದಲು ಆ ಹುಂಜ
ಚಿಮ್ಮಿಸಿದ ಕೂಗನ್ನು ಎತ್ತಿಕೊಳ್ಳಲು;
ಮತ್ತು ಇತರ ಹುಂಜಗಳು ಇನ್ನೂ ಹಲವು ಹುಂಜಗಳ ಜತೆ ಸೇರಿ
ತಮ್ಮ ಹುಂಜ-ಕೂಗುಗಳ ಸೂರ್ಯನೂಲುಗಳನು
ಆಚಿಂದೀಚಿಂದಾಚೆ ನೇಯಲಿಕ್ಕೆ,
ಹೇಗೆಂದರೆ, ನಾಜೂಕಾದ ಬಲೆಯಾಗಿ ಹುಟ್ಟಿದ ಈ ಮುಂಜಾನೆ,
ಹೀಗೇ ನೇಯ್ದುಕೊಳ್ಳುತ್ತಾ ಹೋಗಬಹುದು, ಎಲ್ಲ ಹುಂಜಗಳ ಕೂಡಿ.

ಹೀಗೆ, ದೊಡ್ಡದಾಗಿ ಬೆಳೆಯುತ್ತಾ, ಬಟ್ಟೆಯಾಗುತ್ತಾ,
ಡೇರೆಯಂತೆ ನೆಲಕ್ಕೆ ಹೂಡಿಕೊಂಡು, ಅವರೆಲ್ಲರನ್ನೂ ಒಳಕ್ಕೆ
ಕರೆಸಿಕೊಂಡು, ಅವರಿಗೆಲ್ಲರಿಗಾಗಿ ತನ್ನನ್ನೇ ತಾನು
ತೆರೆದುಕೊಂಡು, ಆ ಡೇರೆಯೊಳಗೆ (ಆ ಮುಂಜಾನೆ),
ನಂಟು ಗಂಟುಗಳಿಂದ ಮುಕ್ತವಾಗಿ ಮೇಲಕ್ಕೆ
ಸ್ವಛ್ಚಂದವಾಗಿ ಏರುತ್ತೆ.
ಆ ಮುಂಜಾನೆ, ಎಷ್ಟು ನಾಜೂಕಾದ ನೇಯ್ಗೆಯ
ಡೇರೆಯೆಂದರೆ, ಹೆಣೆದಾಗ, ತನ್ನಿಂದ ತನ್ನನ್ನು ತಾನೆ
ಏರಿಸಿಕೊಳ್ಳುತ್ತೆ: ಬಲೂನಿನಷ್ಟು ಹಗುರ.


ನೀರು ಮತ್ತು ಕವಿತೆ
ಮೂಲ: Water and the Poem

ಕವಿತೆಯ ಜಲಮಯ ದನಿಗಳು
ನನ್ನನ್ನು ಅಪರಾಧದೆಡೆಗೆ ಸೆಳೆಯುತ್ತವೆ
ಒಂದು ಪಿಸ್ತೂಲಿನೆಡೆಗೆ ಸೆಳೆಯುತ್ತವೆ.

ಅವು ಹೇಳುತ್ತವೆ ನನಗೆ
ಕನಸುಗಳ ಕೈಯ್ಯಿಗೂ ಎಟುಕದಂತಹ
ದ್ವೀಪಗಳ ಬಗ್ಗೆ.

ನನ್ನ ಮಂಡಿಯ ಮೇಲೆ ತೆರೆದ ಪುಸ್ತಕವಿದೆ
ನನ್ನ ತಲೆಗೂದಲೊಳು ಗಾಳಿಯಾಡುತಿದೆ
ನಾನು ಸಮುದ್ರವ ದಿಟ್ಟಿಸುವೆ.

ಅದೇನು ನೀರಿನಲ್ಲಿ ಜರಗುತ್ತಿರುವುದೊ
ಮರುಕಳಿಸುವುದು ಅದು
ನನ್ನ ನೆನಪಿನಲಿ.


ಮೇಜು
ಮೂಲ: The Table

ಆ ಸಾದಾ ಮೇಜಿನ ಮೇಲೆ
ಮಡಚಿದ ದಿನಪತ್ರಿಕೆ;
ಮೇಜಿನ ಮೇಲೆ ಹಾಸಿದ ಬಟ್ಟೆ ಶುಭ್ರವಾಗಿದೆ,
ಪಿಂಗಾಣಿಯ ಭೋಜನ ಪಾತ್ರೆಗಳು ಬೆಳ್ಳಗಿವೆ,

ಬ್ರೆಡ್ಡಿನ ಹಾಗೆ ತಾಜಾ.

ಹಸಿರು-ಸಿಪ್ಪೆಯ ಕಿತ್ತಳೆ ಹಣ್ಣು:
ನಿನ್ನ ನಿರಂತರವಾಗಿರುವ ನಿಸರ್ಗದೃಶ್ಯ,
ನಿನ್ನ ಸ್ವಚ್ಛಂದ ಬೀಸುವ ಗಾಳಿ,
ನಿನ್ನ ಕಡಲುತೀರಗಳ ಮೇಲೆ ಬಿಸಿಲು: ಹೊಳೆಯುತಿದೆ,

ಬ್ರೆಡ್ಡಿನ ಹಾಗೆ ತಾಜಾ.

ನಿನ್ನ ಕ್ಷಯಿಸುತ್ತಿರುವ ಪೆನ್ಸಿಲನ್ನು
ಮೊನಚಾಗಿಸಿದ ಕತ್ತಿ;
ನಿನ್ನ ಮೊದಲ ಪುಸ್ತಕ
ಅದರ ಮುಖಪುಟದ ಬಣ್ಣ ಬಿಳಿ,

ಬ್ರೆಡ್ಡಿನ ಹಾಗೆ ತಾಜಾ.

ನಿನ್ನ ಜೀವಂತ ಮುಂಜಾನೆಯಿಂದ,
ನಿನ್ನ ಕೊನೆಗೊಂಡ ಕನಸಿನಿಂದ
ಹುಟ್ಟಿದ ಕವಿತೆ:
ಈಗಲೂ ಬೆಚ್ಚಗೆ, ಹಗುರ,

ಬ್ರೆಡ್ಡಿನ ಹಾಗೆ ತಾಜಾ.


ಕಾವ್ಯ ಕಲಿಸಿದ್ದು
ಮೂಲ: The Lesson of Poetry


ಬೆಳಗ್ಗೆಯೆಲ್ಲಾ ಖಾಲಿ ಕಾಗದದ
ಹಾಳೆಯ ಎದುರು ಕಳೆದೆ
ನಿಶ್ಚಲ ಸೂರ್ಯನಂತೆ:
ಲೋಕದ ಆರಂಭ, ಹೊಸ ಚಂದಿರ.

ಒಂದು ತೆಳುವಾದ ಗೆರೆಯನ್ನು
ಸಹ ಎಳೆಯಲಾಗಲ್ಲ ನಿನ್ನಿಂದ;
ಒಂದೇ ಒಂದು ಹೆಸರು, ಒಂದೇ ಒಂದು ಹೂವು
ಸಹ ಅರಳಲಿಲ್ಲ ಈ ಬಯಲುಪ್ರದೇಶದ ಬೇಸಿಗೆಯಲ್ಲಿ,

ಯಾವುದೇ ಪರಿಸ್ಥಿತಿಯನ್ನು ಸ್ವೀಕರಿಸಲು
ಆಳವಿರುವ ದಿನಪತ್ರಿಕೆಯ ರೂಪದಲ್ಲಿ
ಕೊಂಡ ಪ್ರಜ್ವಲವಾದ ಮಧ್ಯಾಹ್ನದಲ್ಲೂ ಸಹ.


ರಾತ್ರಿಯುದ್ದಕ್ಕೂ ಕವಿ ತನ್ನ ಮೇಜಿನ ಮುಂದೆ ಕುಳಿತು,
ತನ್ನ ಮಸಿಕುಡಿಕೆಯಲ್ಲಿ ಮೊಳೆತ ರಾಕ್ಷಸರನ್ನು
ಸಾವಿನಿಂದ ಬಚಾಯಿಸಲು ಪ್ರಯತ್ನಿಸುತ್ತಿದ್ದ.

ರಾಕ್ಷಸರು, ಮೃಗಗಳು, ಪದಗಳ ಪ್ರೇತಗಳು – ಅಲೆದಾಡುತ್ತಿವೆ,
ಕಾಗದದ ಮೇಲೆ ಉಚ್ಚೆಹೊಯ್ಯುತ್ತಿವೆ,
ತಮ್ಮ ಸೀಸದಿಂದ ಅದನ್ನು ಬಳಿಯುತ್ತಿವೆ.

ಪೆನ್ಸಿಲಿನ ಸೀಸ, ಭ್ರಾಂತಿಗಳ ಸೀಸ,
ಸತ್ತ ಭಾವನೆಗಳ ಸೀಸ,
ಕನಸುಗಳಲ್ಲಿ ನುಂಗಿಹೋದ ಸೀಸ.


ಕಾಗದದ ಮೇಲಿನ ಬಿಳಿಯ ಹೋರಾಟ
ಕವಿ ದೂರವಿರುವನು ಅದರಿಂದ,
ತನ್ನ ಉಪ್ಪುನೀರಿನ ನರಗಳಲ್ಲಿ ಹರಿವ
ನೆತ್ತರಿನ ಬಿಳಿಯ ಹೋರಾಟ.

ಅನುದಿನದ ಅಂಗಸನ್ನೆಗಳಲ್ಲಿ ಭಯದ
ಇರುವರಿಮೆಯನ್ನು ಗುರುತಿಸುವುದು;
ಎಂದೂ ವಿರಮಿಸದ, ಆದರೂ ನಿಶ್ಚಲವಾಗಿರುವ
ವಸ್ತುಗಳ ಭಯ – ಅಸ್ತಬ್ಧವಾಗಿರುವ ಸ್ತಬ್ಧ ಚಿತ್ರಗಳು.

ಮತ್ತೆ ಕವಿಯ ಉಪ್ಪುನೀರಿನಲ್ಲಿ ಕಲೆತ
ಆ ಇಪ್ಪತ್ತು ಪದಗಳು,
ಕವಿ ತನ್ನ ಸಶಕ್ತ ಯಂತ್ರದಲ್ಲಿ ಬಳಸುವನು
ಈ ಇಪ್ಪತ್ತು ಪದಗಳನ್ನು.

ಅದೇ ಇಪ್ಪತ್ತು ಪದಗಳು ಯಾವಾಗಲೂ
ಅವನಿಗೆ ಚಿರಪರಿಚಿತ ಅವು:
ಅವುಗಳ ವರ್ತನೆ,
ಅವುಗಳ ಆವಿಯಾಗುವಿಕೆ,
ಹಾಗೂ ಗಾಳಿಗಿಂತಲೂ ಹಗುರವಾದ
ಅವುಗಳ ಸಾಂದ್ರತೆ.


ಮಾತಿಲ್ಲದ ನದಿಗಳು
ಮೂಲ: Speechless Rivers

ಒಂದು ನದಿ ಕಡಿದು ಹೋದಾಗ,
ಅದು ತನ್ನ ನೀರು ನಡೆಸುತ್ತಿದ್ದ ಸಂವಾದವನ್ನು
ಸಂಪೂರ್ಣವಾಗಿ ಕಡಿದು ಹಾಕುತ್ತದೆ.
ಕಡಿದಾಗ, ನೀರು ಚೂರುಚೂರಾಗಿ ಒಡೆಯುತ್ತದೆ,
ನೀರಿನ ಮಡುಗಳಾಗಿ, ಲಕ್ವಹೊಡೆದ ನೀರಾಗಿ.
ಕೊಳದಲ್ಲಿ ನೆಲೆಸಿರುವ ನೀರು,
ಪದವೊಂದರ ನಿಘಂಟು-ಅವಸ್ಥೆಯನ್ನು ಹೋಲುತ್ತದೆ:
ಏಕಾಂತದಲ್ಲಿರಿಸಿದ, ಆ ಕೊಳದಲ್ಲಿ ತಂತಾನೆ ನಿಂತಿರುವ,
ಅದು ನಿಂತಿರುವುದರಿಂದ, ನಿಂತ ನೀರಾಗಿದೆ.
ಅದು ನಿಂತಿರುವುದರಿಂದ, ಅದು ಮೂಕವಾಗಿದೆ,
ಏಕೆ ಮೂಕವೆಂದರೆ, ಅದು ಮಾತನಾಡುವುದಿಲ್ಲ,
ಏಕೆಂದರೆ ಈ ನದಿಯ ವಾಕ್ಯರಚನೆಯನ್ನು,
ಆ ಪದ ಚಲಿಸುತ್ತಿದ್ದ ಈ ನೀರಿನ ಹರಿವನ್ನು ಕಡಿಯಲಾಯಿತು.

*

ನದಿಯ ಪಥವನ್ನು, ಅದರ ನದಿ-ಸಂವಾದವನ್ನು,
ಅಷ್ಟು ಬೇಗ ಮತ್ತೆ ದಾರಿಗೆ ತರುವುದು ಕಷ್ಟದ ಕೆಲಸ;
ಒಂದು ನದಿಗೆ ಸಾಕಷ್ಟು ನೀರಿನ ಪ್ರವಾಹ ಬೇಕಾಗುತ್ತದೆ
ಅದನ್ನು ಸೃಷ್ಟಿಸಿದ ಪ್ರವಾಹವನ್ನು ಪುನಃಸೃಷ್ಟಿಸಲು.
ನೆರೆಯೊಂದರ ಅದ್ಧೂರಿತನ ಬೇರೊಂದು ತಾತ್ಕಾಲಿಕ
ನುಡಿಯನ್ನು ಹೊರಿಸಿದ ಹೊರತು,
ಒಂದು ನದಿಗೆ ಹಲವು ನೀರಿನ ಪ್ರವಾಹಗಳು ಬೇಕಾಗುತ್ತದೆ
ತನ್ನ ಎಲ್ಲಾ ಕೊಳಗಳನ್ನು ವಾಕ್ಯಾಂಶವಾಗಿಸಲಿಕ್ಕೆ –
ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ
ಸಣ್ಣ ವಾಕ್ಯಾಂಶಗಳಾಗಿ ಪುನಃಸ್ಥಾಪಿಸುವುದಕ್ಕೆ,
ನಂತರ ಒಂದು ವಾಕ್ಯಾಂಶದಿಂದ ಇನ್ನೊಂದು ವಾಕ್ಯಾಂಶಕ್ಕೆ,
ಎಲ್ಲಿಯವರೆಗೆಂದರೆ ಅದು ಮಾತನಾಡಬಲ್ಲ
ಏಕೈಕ ಸಂವಾದದ ನದಿ-ವಾಕ್ಯ ಕ್ಷಾಮಕ್ಕೆ
ಸವಾಲೆಸೆಯುವಂತಾಗುವವರೆಗೆ.


ಕಡಲು ಮತ್ತು ಕಬ್ಬಿನ-ತೋಟ
ಮೂಲ: The Sea and the Canefield

ಕಡಲು ಕಬ್ಬಿನ-ತೋಟದಿಂದ
ಅದರ ಪದ್ಯದ ಸಮತಲ ಶೈಲಿಯನ್ನು ಕಲಿಯುತ್ತದೆ;
ಸಮಾಂತರ ಮೌನದಲ್ಲಿ, ತಡೆಯಿಲ್ಲದೆ,
ಜೋರಾಗಿ ಪಠಿಸಿದ,
ಬೀದಿ-ಕವಿಗಳ ಕೃಷಿ-ಕವನಗಳನ್ನು ಕಲಿಯುತ್ತದೆ.

ಕಡಲು ಕಬ್ಬಿನ-ತೋಟದಿಂದ
ಅಲೆಯುಬ್ಬರದ ಭಾವೋದ್ವೇಗವನ್ನು ಕಲಿಯುವುದಿಲ್ಲ;
ಮರು-ಕುಟ್ಟಿ, ಮರು-ಬಡಿದು.
ಮತ್ತಷ್ಟು ನಯವಾಗಿ ಪುಡಿಯಾಗಿಸುವ,
ಹೊಯಿಗೆಯ ಮೇಲೆ ಅಲೆಗಳ
ಕುಟ್ಟಣಿ-ಬಡಿತವನ್ನು ಕಲಿಯುವುದಿಲ್ಲ.
*
ಕಬ್ಬಿನ-ತೋಟ ಕಡಲಿನಿಂದ
ಮುಂಚಲಿಸುತ್ತಿರುವ ಅಲೆಗಳ ಶಾಂತ ಲಯವನ್ನು ಕಲಿಯುತ್ತದೆ;
ತಾನು ಹಾದುಹೋದಲ್ಲೆಲ್ಲ ಇರುವ ಪ್ರತಿ ಕುಳಿಯನ್ನು
ತುಂಬುವ ಅದರ ಅತಿಸೂಕ್ಷ್ಮ ದ್ರವ-ಹರಡುವಿಕೆಯನ್ನು ಕಲಿಯುತ್ತದೆ.

ಕಬ್ಬಿನ-ತೋಟ ಕಡಲಿನಿಂದ
ಕಬ್ಬಿನ ಅನಿಯಂತ್ರಿತ ಹರಿವನ್ನು ಕಲಿಯುವುದಿಲ್ಲ;
ಲಘು ಉಗ್ರತೆಯಿಂದ ಹರಿಯುವ
ಪ್ಲಾಂಟೇಷನ್-ಕಡಲಿನ ಸಂಯಮವನ್ನು ಕಲಿಯುವುದಿಲ್ಲ.


ಕಾವ್ಯ
ಮೂಲ: Poetry

ಎಲ್ಲಾ ಗೋಚರ ವಸ್ತುಗಳನ್ನು ಮಾತನಾಡಲು ಬಿಡಿ
ಕಾಲದಲ್ಲಿ ಜೀವಿಸುತ್ತಿರುವ ಎಲ್ಲದರ
ಹೊರತಲವನ್ನು ಮಾತನಾಡಲು ಬಿಡಿ
ಇದನ್ನು ಸಂಭವಿಸಲು ಬಿಡಿ:
ಅವರ ಧ್ವನಿಗಳನ್ನು ಅಡಗಿಸಲಾಗುವುದು.
ನಿಗೂಢತೆಯಲ್ಲಿ ನಿದ್ರಿಸುತ್ತಿರುವ ಆ ಮಹಾ ಧ್ವನಿಯು
ಇತರ ಎಲ್ಲಾ ಧ್ವನಿಗಳ ಉಸಿರು ಕಟ್ಟಿಸುವುದು.
ಇದನ್ನು ಸಂಭವಿಸಲು ಬಿಡಿ,
ಏಕೆಂದರೆ ಕಾವ್ಯದ ಅಲೌಕಿಕ ಸುತ್ತಾವಿಯಲ್ಲಿ
ಮಾತ್ರ ಎಲ್ಲವೂ ಫಲ ಬೀರುವುದು.


ಅನುದಿನದ ಆಯ
ಮೂಲ: Daily Space

ಅನುದಿನದ ಆಯದಲ್ಲಿ
ನೆರಳು ಕಿತ್ತಳೆಹಣ್ಣನ್ನು ತಿನ್ನುತ್ತೆ
ಕಿತ್ತಳೆಹಣ್ಣು ತನ್ನನ್ನು ನದಿಯೊಳಗೆ ಎಸೆದುಕೊಳ್ಳುತ್ತೆ,
ನದಿಯಲ್ಲ ಅದು,
ನನ್ನ ಕಣ್ಣಿನಿಂದ ಉಕ್ಕಿಹರಿವ ಸಮುದ್ರ ಅದು.

ಗಡಿಯಾರದಿಂದ ಜನ್ಮತಾಳಿದ
ಅನುದಿನದ ಆಯದಲ್ಲಿ
ನಾನು ಕೈಗಳ ಕಾಣುವೆ, ಪದಗಳನ್ನಲ್ಲ,
ತಡರಾತ್ರಿಯಲ್ಲಿ ನಾನು ನಾರಿಯೊಬ್ಬಳನ್ನು ಕನಸಿಕೊಳ್ಳುವೆ,
ನನ್ನ ಹತ್ತಿರ ನಾರಿಯಿದ್ದಾಳೆ, ಮೀನು ಇದೆ.

ಅನುದಿನದ ಆಯದಲ್ಲಿ
ನಾನು ನನ್ನ ಮನೆಯನ್ನು, ಸಮುದ್ರವನ್ನು ಮರೆಯುವೆ,
ನಾನು ಹಸಿವನ್ನು, ಸ್ಮೃತಿಯನ್ನು ಕಳಕೊಳ್ಳುವೆ,
ನಾನು ವ್ಯರ್ಥವಾಗಿ ನನ್ನನ್ನೇ ಕೊಂದುಕೊಳ್ಳುವೆ,
ಅನುದಿನದ ಆಯದಲ್ಲಿ.


ಚಿತ್ರಕಲೆ ಕಲಿಸಿದ್ದು
ಮೂಲ: The Lesson of Painting

ಯಾವ ಚಿತ್ರವೂ ಎಂದೂ ಪೂರ್ಣವಾಗಿರದು,
ಒಬ್ಬ ಚಿತ್ರಕಾರ ಹೇಳಿದ್ದ;
ಅದನ್ನು ಮುಂದುವರೆಸಿಕೊಂಡು
ಹೋಗಬಹುದು ಅಂತ್ಯವಿಲ್ಲದೆ,

ಮೊದಲು, ಸರಿಯಾಗಿ ಚಿತ್ರಿಸಿದ,
ಇನ್ನೊಂದು ಚಿತ್ರವನ್ನು ಮೀರಿ ನೋಡಿದಾಗ,
ಅದರ ಕ್ಯಾನ್ವಾಸಿನಲ್ಲಿ ಅಡಗಿದೆ ಒಂದು ದ್ವಾರ,
ತೆರೆದಾಗ ಅದು ಒಂದು
ಮೊಗಸಾಲೆಗೆ ದಾರಿ ತೋರುವುದು,
ಅದು ಇನ್ನೊಂದು ಮತ್ತು ಹಲವಾರು
ಮೊಗಸಾಲೆಗಳಿಗೆ ದಾರಿ ತೋರುವುದು.

About The Author

ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ