ಬೆಳಿಗ್ಗೆ ಐದುಗಂಟೆ. ಚಂದ್ರ ಹೋಗಲು ಸೂರ್ಯ ಬರಲು ಹೆದರುವ ಸಮಯ. ಒಂದು ಟ್ಯಾಕ್ಸಿ ಆಸ್ಪತ್ರೆಯ ಮುಂದೆ ನಿಲ್ಲುತ್ತದೆ. ಆಕೆ ಇಳಿಯುತ್ತಾಳೆ. ನಿಧಾನವಾಗಿ ನಡೆದು ಬಂದು ಟ್ರಯಾಜ್‌ನ ಏರಿಯಾದಲ್ಲಿ ಕೂತು ‘ಏನು ಸಮಸ್ಯೆ?’ ಎಂದು ನರ್ಸು ಸೂಜಿ ಕೇಳುವ ಪ್ರಶ್ನೆಗೆ ‘ಹೊಟ್ಟೆಯಲ್ಲಿ ಗ್ಯಾಸ್ ಆಗಿದೆ’ ಎನ್ನುತ್ತಾಳೆ. ಸುಮಾರು ಎಂಬತ್ತೆಂಟು ವರ್ಷ ವಯಸ್ಸು, ಬೆಳ್ಳಗೆ ಕೂದಲು ಮಿಂಚುತ್ತಿದೆ. ಬೆನ್ನು ಬಾಗಿದೆ. ಕಟ್ಟಿದ ಹಲ್ಲಿನ ಸಂದಿ ಕೂಡ ನೀಟಾಗಿದೆ. ಒಂದು ಸಣ್ಣ ಸ್ವೆಟರ್ ಮತ್ತು ನೀಲಿ ಪ್ಯಾಂಟನ್ನು ತೊಟ್ಟಿದ್ದಾಳೆ. ಶೂ ಮಿರಿಮಿರಿ ಹೊಳೆಯುತ್ತಿದೆ. ಆಕೆ ಎದ್ದು ಡ್ರೆಸ್ ಮಾಡಿಕೊಂಡು ಆಸ್ಪತ್ರೆಗೆ ಟ್ಯಾಕ್ಸಿಯನ್ನು ಹಿಡಿದು ಬರಲು ಕನಿಷ್ಠ ಎರಡು ಗಂಟೆಯಾದರೂ ಬೇಕಾಗಿರಬಹುದು, ‘ಎಷ್ಟು ದಿನದಿಂದ?’ ಸೂಜಿಯ ಪ್ರಶ್ನೆಗೆ ಆಕೆ ಮೆದುದನಿಯಲ್ಲಿ ಹೇಳುತ್ತಾಳೆ. ‘ಹೆಚ್ಚೇನಿಲ್ಲ. ರಾತ್ರಿ ಎರಡುಗಂಟೆಗೆ ಎಚ್ಚರವಾಯಿತು. ನಿದ್ದೆ ಬರಲಿಲ್ಲ. ಮಾತಾಡಿದಾಗ ಗಲ್ಲದ ಚರ್ಮ ಗಲಗಲ ಅಲ್ಲಾಡುತ್ತದೆ.’ ‘ಸರಿ, ಎದೆನೋವಿದೆಯಾ?’ ಎಂದು ಕೇಳಿದಾಗ ‘ಇಲ್ಲ’ ಎಂದು ಒಂದೇ ಪದದ ಉತ್ತರ ಕೊಡುತ್ತಾಳೆ. ಆಸ್ಪತ್ರೆಯ ಪ್ರಾಶ್ನಿಕದಲ್ಲಿನ ಎಲ್ಲ ಪ್ರಶ್ನೆಗಳಿಗೂ ಆಕೆಯ ಉತ್ತರ ಒಂದೇ ‘ಇಲ್ಲ’. ಎಂಭತ್ತೆಂಟು ವರ್ಷ ವಯಸ್ಸು. ಬೀಪಿ, ಡಯಾಬಿಟೀಸ್, ಆರ್ಥ್‌ರೈಟಿಸ್ ಎಂತವೂ ಇಲ್ಲ. ‘ಬರೇ ಗ್ಯಾಸ್’ ಎಂದು ಹೇಳುತ್ತಾಳೆ. ಯಾವ ಧಾವಂತವೂ ಇಲ್ಲದೇ ನಿಧಾನವಾಗಿ ತನ್ನ ಪರ್ಸಿನಿಂದ ಒಂದು ಸಣ್ಣ ಡೈರಿಯನ್ನು ತೆಗೆಯುತ್ತಾಳೆ. ತಾನು ಹಿಂದಿನ ದಿನ ತಿಂದ ಊಟ, ಮಲ್ಟಿವಿಟಮಿನ್ ಮಾತ್ರೆಗಳು ಮತ್ತು ಪ್ರತಿಯೊಂದನ್ನೂ ತೆಗೆದುಕೊಂಡ ಸಮಯವನ್ನು ಕೂಡ ನಿಖರವಾಗಿ ಬರೆದಿದ್ದಾಳೆ. ಸೂಜಿ ನನ್ನ ಹತ್ತಿರ ಬಂದು ‘ಈಕೆ ನಿಜವಾಗಿಯೂ ಸ್ವೀಟ್‌ಹಾರ್ಟ್’ ಎನ್ನುತ್ತಾಳೆ. ಮತ್ತು ‘ಆಕೆಗೆ ಬರೇ ಗ್ಯಾಸ್ ಅಂತೆ’ ಎಂದು ಕಣ್ಣು ಹೊಡೆಯುತ್ತಾಳೆ.
ಎಮರ್ಜೆನ್ಸಿ ರೂಮಿನ ತುಂಬ ಎದೆನೋವು, ಸ್ಟ್ರೋಕು, ಕೈಕಾಲು ಮುರಿದಿರುವವರು, ಕುಡುಕರು, ಬಸುರಿಯರು ಎಲ್ಲರೂ ತುಂಬಿದ್ದಾರೆ. ರಚ್ಚೆಹಿಡಿದು ಅಳುವ ಮಗುವನ್ನು ಸಮಾಧಾನಮಾಡಲು ಆಗದೇ ಹದಿವಯಸ್ಸಿನ ತಾಯಿಯೊಬ್ಬಳು ತಾನೂ ಅಳಲು ಶುರುಮಾಡಿದ್ದಾಳೆ. ಹಿಂದಿನ ವಾರ ಚುಚ್ಚಿಸಿಕೊಂಡ ಕಿವಿಯ ರಿಂಗು ನಂಜಾಗಿದೆಯೆಂದು ಹದಿನಾರರ ಹುಡುಗನೊಬ್ಬ ಗಲಾಟೆಮಾಡುತ್ತಿದ್ದಾನೆ. ಎಲ್ಲರನ್ನೂ ಸುಧಾರಿಸಿಕೊಂಡು ಬರುತ್ತಿರುವ ನಿದ್ರೆಯನ್ನು ತಡೆದು, ಇನ್ನೊಂದೆರಡು ಕಪ್ಪು ಕಾಫಿ ಕುಡಿದು ಇನ್ನು ಮೂರು ಗಂಟೆ ಕಳೆದರೆ ಸಾಕೆಂದು ಅಂದುಕೊಂಡು ಕೆಲಸ ಮುಂದುವರೆಸುತ್ತೇನೆ.
ಬಾಗಿಲಿನ ಮುಂದೆ ಒಂದು ಹಾರ್ಲಿ ಡೇವಿಡ್‌ಸನ್ ನಿಲ್ಲುತ್ತದೆ. ತಲೆಗೆ ಒಂದು ಕಪ್ಪುಬಿಳಿಯ ಬ್ಯಾಂಡಿನ, ಲೆದರ್ ಜ್ಯಾಕೆಟ್, ಬಿಳೀ ಗಡ್ಡ, ಕಾಣುತ್ತಿರುವ ಕುತ್ತಿಗೆಯ ತುಂಬಾ ಹಚ್ಚೆಯಿದೆ. ಸುಮಾರು ಆರೂವರೆ ಅಡಿ, ಮುನ್ನೂರು ಪೌಂಡಿದ್ದಾನೆ. ಬಂದು ಟ್ರಯಾಜ್‌ನಲ್ಲಿ ಕೂರುತ್ತಾನೆ. ನರ್ಸು ‘ಏನಾಗಿದೆ?’ ಎಂದು ಕೇಳಿದಾಗ ತನ್ನ ಜಾಕೆಟ್ಟನ್ನು ಬಿಚ್ಚಿ ತೋರಿಸುತ್ತಾನೆ. ಮೊಳಕೈಮೇಲೆ ಒಂದು ಆರಿಂಚಿನ ಆಳವಾದ ಗಾಯವಿದೆ. ಸೂಜಿ ಪ್ರಶ್ನಾರ್ಥಕವಾಗಿ ನೋಡುತ್ತಾಳೆ. ‘ಚೈನ್ ಸಾ. ಮನೆಯ ಗರಾಜಿನಲ್ಲಿ ಮರಗೆಲಸ ಮಾಡುತ್ತಿದ್ದೆ. ಎಫ್ಫಿಂಗ್ ಮರದ ಪೀಸು ನೋಡೋಕೆ ಮುಂಚೆಯೇ ಕರಕ್ಕಂತ ಕತ್ತರಿಸಿಹೋಯಿತು. ಸಾ ವಾಪಸ್ ಬಂದು ನನ್ನ ಎಫ್ಫಿಂಗ್ ಮೊಳಕೈಗೆ ಬಡೀತು. ಎಫ್ಫಿಟ್. ಪಾರ್ಡನ್ ಮೈ ಫ್ರೆಂಚ್’ ಎಂದ. ಸೂಜಿ ‘ಓಕೆ, ಒಂದು ನಿಮಿಷ.. ಈಗ ನೀನು ಬಂದ ಟೈಮನ್ನು ಸರಿಯಾಗಿ ಬರಕೋತೇನೆ. ಈಗ ಬೆಳಿಗ್ಗೆ ಐದೂಮೂವತ್ತಾಐದು’ ಎನ್ನುತ್ತಾಳೆ. ‘ಈ ಸಮಯದಲ್ಲಿ ಯಾಕೆ ಮರಗೆಲಸ ಮಾಡ್ತಾ ಇದ್ದೆ ಅಂತ ನೇರವಾಗಿ ಕೇಳೋಕಾಗಲ್ವ ನಿಂಗೆ?’ ಅಂದ, ಆಕೆಯನ್ನು ದುರುಗುಟ್ಟಿ ನೋಡುತ್ತಾ. ‘ಇಲ್ಲ. ಅದು ನನ್ನ ಉದ್ದೇಶ ಅಲ್ಲ. ನೀನು ಆಸ್ಪತ್ರೆಗೆ ಬಂದಿರೋ ಸಮಯವನ್ನು ನಾನು ಸರಿಯಾಗಿ ಬರಕೋಬೇಕು. ಫಾರ್ ದ ರೆಕಾರ್ಡ್’ ಎಂದು ಹೇಳುತ್ತಾಳೆ. ಮತ್ತೆ ಕೊಂಚ ಆತ ಸೆಟಲ್ ಆಗೋಕೆ ಬಿಟ್ಟು ‘ನಿನ್ನ ಇನ್ಸುರೆನ್ಸ್ ಇತ್ಯಾದಿ ವಿವರಗಳು ಬೇಕಿತ್ತಲ್ಲ?’ ಎಂದು ಬಹಳ ಮೆದುವಾಗಿ ಕೇಳುತ್ತಾಳೆ. ‘ಐ ಡೋಂಟ್ ಹ್ಯಾವ್ ಎನಿ ಎಫ್ಫಿಂಗ್ ಇನ್ಸ್ಯುರೆನ್ಸ್. ನನ್ನ ಕೆಲಸ ಹೋಯಿತು’ ಅನ್ನುತ್ತಾನೆ. ‘ಹೋಗಲಿ ಸರಕಾರೀ ಪ್ರೋಗ್ರಾಮುಗಳಿವೆ. ಅದಕ್ಕೆ ಅಪ್ಪೈ ಮಾಡಬಹುದಲ್ಲವಾ?’ ಎಂದು ಒಂದು ಫಾರ್ಮ್ ತೆಗೆದುಕೊಡುತ್ತಾಳೆ. ಅವನ ಗುರುತಿನ ಚೀಟಿ ಕೇಳಿದಾಗ ಅವನ ಜೇಬಿನಿಂದ ಒಂದು ಬಟನ್ ಚಾಕು, ಎರಡು ಮಾರ್ಲ್‌ಬರೋ ಪ್ಯಾಕು, ಒಂದು ಲೈಟರ್ ಮತ್ತು ಸೆಲ್‌ಫೋನ್ ನಂತರ ಒಂದು ಮಾಸಿದ ಚಿತ್ರವಿರುವ ಐಡಿ ಹೊರಗೆ ಬರುತ್ತದೆ. ಸೂಜಿ ಕೊಟ್ಟ ಫಾರ್ಮ್ ಅನ್ನು ಬಹಳ ಅಲಕ್ಷ್ಯದಿಂದ ತೆಗೆದುಕೊಳ್ಳುತ್ತಾನೆ. ಅವನಿಗೆ ಅವನ ರೂಮಿನೊಳಗೆ ಕರಕೊಂಡು ಹೋಗಬೇಕಾದರೆ ‘ಟೆಲ್ ಯುವರ್ ಡಾಕ್ ಟು ಹರಿ ಅಪ್. ನನಗೆ ಜೀವಮಾನ ಪರ್ಯಂತ ಈ ಎಮರ್ಜೆನ್ಸಿ ರೂಮಿನಲ್ಲಿರೋಕೆ ಟೈಮಿಲ್ಲ’ ಅಂತಾನೆ.
ಜಗಳವಾಡಲೂ ಸಮಯವಿಲ್ಲ ಈತನ ಜತೆ. ಬೇರೆ ಸಮಯದಲ್ಲಿ ಈ ಹೊಲಿಗೆ ಹಾಕುವ ಕೆಲಸ ನನಗೆ ನನ್ನ ಕೆಲಸದಲ್ಲಿ ಒಂದು ರೀತಿಯ ವಿರಾಮದ ಸಮಯವಿದ್ದಂತೆ. ಅರ್ಧಗಂಟೆ ಒಂದೇ ರೂಮಿನೊಳಗೆ ಒಂದೇ ಪೇಷೆಂಟನ್ನು ನೋಡುತ್ತಾ ಒಂದು ಕುರ್ಚಿಯನ್ನು ಎಳಕೊಂಡು ಕೂತು ಬೇಕಿದ್ದರೆ ಹರಟೆ ಹೊಡಕೊಂಡು ಪ್ರತಿ ಹದಿನೈದು ಸೆಕಂಡಿಗೊಮ್ಮೆ ಬೇರೆ ಬೇರೆ ರೋಗಿಗಳನ್ನು ನೋಡಲೇಬೇಕಾದ ಯಾವ ಆತಂಕವೂ ಇಲ್ಲದೇ ಒಂದು ರೂಮಲ್ಲಿ ನಿಶ್ಚಿಂತೆಯಾಗಿ ಕೂರಬಹುದು. ಕೆಲವೊಮ್ಮೆ ನಾನು ಹೀಗೆ ಯಾರಿಗಾದರೂ ಹೊಲಿಗೆ ಹಾಕಬೇಕಾದರೆ ಆ ರೂಮಿನ ಬಾಗಿಲು ಹಾಕಿಕೊಂಡುಬಿಡುತ್ತೇನೆ, ಒಳಗೆ ರೂಮಿನಲ್ಲಿ ಟೀವಿಯೇನಾದರೂ ಇದ್ದಲ್ಲಿ ನಾನೇ ರೋಗಿಗೆ ಟೀವಿ ಹಾಕಿಕೋ ಎಂದು ಪ್ರೋತ್ಸಾಹಿಸುತ್ತೇನೆ ಕೂಡ. ಇದೊಂದು ತರ ನನಗೆ ಸಿಕ್ಕೂ ಸಿಕ್ಕದ ಬ್ರೇಕ್. ದೇಹ ದಣಿದಿರುತ್ತದೆ. ಆದರೆ ಯೋಚನೆ ಮಾಡುವ ಗೋಜಿಲ್ಲ. ಸುಮ್ಮನೆ ಕೈಕೆಲಸ.
ಸರಿ ನಮ್ಮ ಹಾರ್ಲಿ ಡೇವಿಡ್‌ಸನ್ ಅನ್ನೂ ಒಂದು ರೂಮಿನಲ್ಲಿ ಹಾಕಿಕೊಳ್ಳುತ್ತೇನೆ. ಇಂಥವರ ಜತೆ ನೇರವಾಗಿ ಬಾಂಡಿಂಗ್ ಮಾಡಿಕೊಳ್ಳಲು ಇರೋ ಒಂದೇ ಉಪಾಯವನ್ನು ನನಗೆ ಈ ಕೆಲಸ ಕಲಿಸಿದೆ. ಬಾಗಿಲು ಹಾಕಿ ಅವನ ಗಾಯವನ್ನು ಪರೀಕ್ಷಿಸುತ್ತಾ ‘ಓಯ್ ಬಡ್ಡಿ. ದಿಸ್ ಈಸ್ ಎಫ್ಫಿಂಗ್ ಡೀಪ್’ ಅನ್ನುತ್ತೇನೆ. ಅವನನ್ನು ನನ್ನ ಅಂಕದೊಳಗೆ ಬಿಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ. ನೇರವಾಗಿ ನಾನೇ ಅವನ ಅಂಕಕ್ಕೆ ಹೋಗುವುದು. ಹನಿ, ಎಫ್ ಇಟ್, ಸನ್‌ಶೈನ್, ಹೆಲ್, ಬಡಿ, ಫ್ರೆಂಡ್, ಯೋ ಈ ಪದಗಳು ಅವರವರ ಅಂಕದೊಳಗೆ ಅಂಚುದಾಟಲು ಯಾವಾಗಲೂ ನನ್ನ ಬೆಂಗಾವಲಾಗಿ ನಿಂತಿವೆ. ಈ ಎಫ್ ಅನ್ನುವ ಅವಾಚ್ಯದ ಅಪಭ್ರಂಶ ನನಗೆ ಹೌ ಅರ್ ಯು ಅನ್ನುವಷ್ಟೇ ಪರಿಚಿತವಾದದ್ದು ಅನ್ನುವಂತೆ ನಟಿಸುತ್ತೇನೆ. ನಿಧಾನವಾಗಿ ಅವನ ಗಾಯವನ್ನು ನೋಡುತ್ತೇನೆ. ಯಾವುದೋ ಹೆಣ್ಣಿನ ಹಚ್ಚೆಯ ಗುರುತಿರುವ ಅವನ ಮುಂಗೈ ಹರಿದಿದೆ. ‘ಈ ಹಚ್ಚೆಗೆ ಮೂವತ್ತೈದು ಡಾಲರ್ ಕೊಟ್ಟಿದ್ದೇನೆ. ಮತ್ತೆ ಮೂರುಗಂಟೆ ಕೂತು ನೋವು ಅನುಭವಿಸಿದ್ದೇನೆ. ನನ್ನ ಗರ್ಲ್‌ಫ್ರೆಂಡಿಗೆ ಬಹಳ ಇಷ್ಟವಾದದ್ದಿದು. ಯು ಬೆಟರ್ ಮೇಕ್ ಶ್ಯೂರ್ ದಟ್ ದೇರ್ ಈಸ್ ನೋ ಸ್ಕಾರ್ ಆನ್ ಹರ್’ ಎನ್ನುತ್ತಾನೆ. ಅವನ ತೋಳಿನ ಮೇಲಿನ ಸುಂದರಿಯ ಮೈಮೇಲೆ ಒಂದೂ ಗುರುತಿರದ ಹಾಗೆ ರಿಪೇರಿ ಮಾಡುವುದು ಹೇಗೆ.
ನಾನು ಕೈಗವುಸನ್ನು ಬಿಚ್ಚುತ್ತಾ ಹೇಳುತ್ತೇನೆ ‘ನಿನಗೆ ಬೇಕಾಗಿರೋದು ಎಮರ್ಜೆನ್ಸಿ ಡಾಕ್ಟರಲ್ಲ. ಪ್ಲಾಸ್ಟಿಕ್ ಸರ್ಜನ್ ಅಥವಾ ಇನ್ನೊಬ್ಬ ಹಚ್ಚೆ ಹಾಕುವವನು. ಬೇಕಾದರೆ ನಾನು ರೆಫರೆನ್ಸ್ ಕೊಡುತ್ತೇನೆ.’ ನಾನು ನನ್ನ ಕೆಲಸದಿಂದ ಇಷ್ಟು ಸುಲಭವಾಗಿ ತಪ್ಪಿಸಿಕೊಳ್ಳುತ್ತಿರುವುದು ಹಾರ್ಲಿ ಡೇವಿಡ್‌ಸನ್‌ಗೆ ಇಷ್ಟವಾಗುವುದಿಲ್ಲ. ‘ಜಸ್ಟ್ ಎಫ್ಫಿಂಗ್ ಡೂ ಇಟ್’ ಎಂದು ಕೂಗುತ್ತಾನೆ.
ಪಕ್ಕದ ರೂಮಿನಲ್ಲಿದ್ದ ಮಗು ಜೋರಾಗಿ ಅಳಲು ಶುರುಮಾಡುತ್ತದೆ. ‘ಮೈಂಡ್ ಯುವರ್ ಲಾಂಗ್ವೇಜ್ ಬಡಿ, ಇಲ್ಲಿ ಹೆಂಗಸರು, ಮಕ್ಕಳಿದ್ದಾರೆ.’ ಅನ್ನುತ್ತೇನೆ. ‘ಡು ಯು ಥಿಂಕ್ ಐ ಕೇರ್’ ಎನ್ನುತ್ತಾನೆ. ಓಕೆ ಅಂದು ಕೈಯನ್ನು ಮರಗಟ್ಟಿಸುವ ಔಷಧಿಯನ್ನು ಅವನ ಸುಂದರಿಯ ವಿವಿಧ ಭಾಗಕ್ಕೆ ಚುಚ್ಚುತ್ತಾ ಹೋಗುತ್ತೇನೆ. ‘ವೋವ್, ವೋವ್ ಡಾಕ್’ ಅನ್ನುತ್ತಾ ಕೂಗುತ್ತಾನೆ. ಹುಲಿಗೆ ಸೂಜಿಯೆಂದರೆ ಭಯವಂತೆ. ಕೊಂಚ ನಿಧಾನಿಸುತ್ತೇನೆ.
ಟೀವಿ ಹಾಕುತ್ತಾನೆ. ಯಾವುದೋ ಡಬ್ಲ್ಯುಡಬ್ಲ್ಯುಎಫ್‌ನ ಹಳೆಯ ರೆಸ್ಲಿಂಗ್ ಶೋ ನೋಡಹತ್ತಿದ್ದಾನೆ. ನಾನು ಅವನ ಸುಂದರಿಯನ್ನು ಸರಿಮಾಡಲು ಕೂರುತ್ತೇನೆ. ಅರ್ಧಗಂಟೆಯ ಕೆಲಸದ ನಂತರ ಸುಂದರಿ ಮತ್ತೆ ಸುಂದರವಾಗಿದ್ದಾಳೆ. ಜರಾಸಂಧನಂತೆ ಮಧ್ಯೆ ಸೀಳಿದ್ದ ಅವಳ ಮೈ ಒಂದು ದೃಷ್ಟಿಬೆಟ್ಟಿನಂಥಾ ಗುರುತಿನ ಜತೆಗೂ ಸರಿಹೋಗುತ್ತಾಳೆ ಎಂದು ನಾನು ಅವನಿಗೆ ಹೇಳುತ್ತೇನೆ. ಅಷ್ಟುಹೊತ್ತಿಗೆ ಆತ ಗೊರಕೆ ಹೊಡೆಯುತ್ತಿದ್ದಾನೆ.
ಪಕ್ಕದ ರೂಮಿಗೆ ಹೋಗುತ್ತೇನೆ. ಸೂಜಿಯ ಸ್ವೀಟ್‌ಹಾರ್ಟನ್ನು ಕಾಯಿಸಿದಕ್ಕಾಗಿ ಕ್ಷಮೆಕೋರಿ ಅವಳ ಗ್ಯಾಸ್ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಮಾಡೋಣ ಅಂದುಕೊಳ್ಳುತ್ತೇನೆ. ಒಳಗೆ ಹೋದರೆ ಆಕೆ ಕೂತು ತನ್ನ ಬೆಳಗಿನ ಉಪಾಹಾರವನ್ನು ಮುಗಿಸಿದ್ದಾಳೆ. ಅನ್ನಪೂರ್ಣೇಶ್ವರಿ ಸೂಜಿ ಅವಳಿಗೆ ತಾಜಾ ಬ್ರೆಡ್ ಟೋಸ್ಟು, ಪೀನಟ್ ಬಟರ್, ಕಿತ್ತಳೆ ರಸ ಮತ್ತು ಕಾಫಿಯನ್ನು ಕೊಟ್ಟಿದ್ದಾಳೆ. ಆಕೆ ಕುಡಿದು ಸಂತೋಷದಿಂದ ಮನೆಗೆ ಹೋಗಲು ಸಿದ್ಧಳಾಗಿದಾಳೆ. ನಾನು ಮಾತಾಡಿಸಿದಾಗ ‘ನೀನು ತುಂಬಾ ಬಿಜಿ ಇದ್ದೀಯ. ನನಗೆ ಎಲ್ಲ ಸರಿಹೋಯ್ತು’ ಎನ್ನುತ್ತಾಳೆ. ನಾನು ಆಕೆಯನ್ನು ಕೇಳುತ್ತೇನೆ. ‘ನೀನು ತಪ್ಪು ತಿಳಿಯದಿದ್ದರೆ ನಿನಗೆ ಒಂದು ಪ್ರಶ್ನೆ ಕೇಳಲಾ. ನೀನು ಎಮೆರ್ಜಿನ್ಸಿ ರೂಮಿಗೆ ಬಂದದ್ದೇಕೆ?’
‘ಗ್ಯಾಸ್ ಆದರೆ ಬಹಳ ಕಷ್ಟ ಡಾಕ್ಟರ್. ನಾನು ಒಬ್ಬಳೇ ಮನೇಲಿ ಇರ್ತೇನೆ. ಆಮೇಲೆ ಹೆಚ್ಚು ಕಮ್ಮಿಯಾಗಿಬಿಟ್ಟರೆ?’ ಅವಳ ಮುಖದಲ್ಲಿ ನಿಜವಾದ ಆತಂಕವಿದೆ. ಮತ್ತೆ ಹೇಳುವುದನ್ನು ಮುಂದುವರೆಸುತ್ತಾಳೆ. ‘ನನ್ನ ಗೆಳತಿಯೊಬ್ಬಳಿದ್ದಳು. ಆಕೆಗೆ ಹಿಂಗೆ ಹೊಟ್ಟೆನೋವು ಬಂದು ಹಾಗೇ ಅದನ್ನು ಅವಳು ಸುಮ್ಮನೆ ಅಲಕ್ಷ್ಯಿಸಿದ್ದಳು. ಆರೇ ತಿಂಗಳಲ್ಲಿ ಸತ್ತೇ ಹೋದಳು.’ ಎನ್ನುತ್ತಾಳೆ.
ನಾನು ಮತ್ತೆ ನಗುತ್ತೇನೆ. ಆ ಮುದುಕಿಯ ಕೈಹಿಡಿದು ‘ನಮ್ಮ ಉಪಾಹಾರ ಇಷ್ಟವಾಯಿತಾ?’ ಎಂದು ಕೇಳುತ್ತೇನೆ. ‘ನಾನು ಹೊಟ್ಟೆ ತುಂಬಾ ತಿನ್ನುತ್ತೇನೆ, ಕಣ್ಣುತುಂಬಾ ನಿದ್ದೆ ಮಾಡುತ್ತೇನೆ’. ಅನ್ನುತ್ತಾಳೆ. ನನ್ನ ಧ್ವನಿಯಲ್ಲಿ ಕುಹಕವೇನಾದರೂ ಇತ್ತಾ ಎಂದು ನನಗೇ ಅನುಮಾನ ಬರುತ್ತದೆ. ಮತ್ತೆ ಹತ್ತಿರ ಬಂದು ‘ಈಗ ಮೂರುವರ್ಷಗಳಿಂದ ಕಣ್ಣು ಕಾಣುತ್ತಿಲ್ಲ. ಆದ್ದರಿಂದ ಡ್ರೈವ್ ಮಾಡೋಹಾಗಿಲ್ಲ. ಅಡಿಗೇನೂ ಚೆನ್ನಾಗಿ ಮಾಡೋಕೆ ಬರೋದಿಲ್ಲ.’ ಎನ್ನುತ್ತಾಳೆ. ಹಾಗೇ ಸೂಜಿಯನ್ನು ನೋಡಿ ‘ನಿಮ್ಮಾಸ್ಪತ್ರೇಲಿ ಮನೇಗೆ ಊಟ ಕಳೀಸೋ ವ್ಯವಸ್ಥೆ ಇದೆಯಂತೆ ಹೌದಾ’ ಎಂದು ಕೇಳಿದಾಗ ಸೂಜಿ ‘ಹೌದು’ ಎಂದು ಹೇಳಿ ಆಸ್ಪತ್ರೆಯ ಫುಡ್‌ಸ್ಟ್ಯಾಂಪುಗಳನ್ನು ಕೊಡುತ್ತಾಳೆ. ‘ಗಾಡ್ ಬ್ಲೆಸ್ ಯು’ ಎಂದು ಹೋಗಿ ನಿರೀಕ್ಷಣಾ ಕೊಠಡಿಯಲ್ಲಿ ಟ್ಯಾಕ್ಸಿಗಾಗಿ ಕಾಯುತ್ತಾ ಕೂರುತ್ತಾಳೆ.
ಹೆಲಿಕಾಪ್ಟರ್ ಬಂದಿದೆ. ಹಾರ್ಟ್ ಅಟ್ಯಾಕ್ ಆದವನು ಈಗ ಪರವಾಗಿಲ್ಲ. ಆತನಿಗೆ ಎಲ್ಲ ಸರಿಹೋಗುತ್ತದೆ ಎಂದು ಅವನಿಗೆ ಅವನ ಹೆಂಡತಿಗೆ ಹೇಳಿ ಇನ್ನೊಂದು ಆಸ್ಪತ್ರೆಗೆ ಕಳಿಸುತ್ತೇವೆ. ಹೆಲಿಕಾಪ್ಟರಿನ ಪೈಲಟ್ಟಿಗೆ ‘ತಾಜಾ ಕೆಪಿಚಿನೊ ರೆಡಿ ಇದೆ’ ಎಂದು ಸೂ ಹೇಳುತ್ತಾಳೆ. ರಚ್ಚೆ ಹಿಡಿದ ಮಗು ಮತ್ತು ಅವಳ ಅಮ್ಮ ಇಬ್ಬರೂ ಮಲಗಿದ್ದಾರೆ. ಕಾಲು ಮುರಕೊಂಡವನಿಗೆ ಮಾರ್ಫೀನ್ ಕೆಲಸ ಮಾಡುತ್ತಿದೆ.
ಹೊರಗೆ ಬೆಳಗಾಗಿದೆ. ಅವತ್ತಿನ ಪೇಪರು ಬಂದಿದೆ. ಮೈಮುರಿದು, ಹಲ್ಲುಜ್ಜಿ ಪೇಪರ್ಚರ್ಕು ಮುಗಿಸಲೆಂದು ಕೂರುತ್ತೇನೆ. ಗ್ರಾಹಕ ತೃಪ್ತಿಯ ಸಮೀಕ್ಷಾ ಕಾರ್ಡುಗಳನ್ನು ಪ್ರತಿ ರೂಮಿನಿಂದ ಹಿಡಿದು ಎಲ್ಲರಿಗೂ ಡೀಬ್ರೀಫ್ ಮಾಡುತ್ತಾಳೆ ಸೂಜಿ. ನಮ್ಮ ಕೆಲಸವನ್ನು ನಾವು ಸರಿಯಾಗಿ ಮಾಡುತ್ತಿದ್ದೇವೆಯೇ ಇಲ್ಲವೇ ಎಂದು ಆಸ್ಪತ್ರೆ ನಮ್ಮನ್ನು ಮಾನೀಟರ್ ಮಾಡುವ ರಿಯಲ್ ಟೈಮ್ ಪರಿಯಿದು. ರೆಸ್ಟೊರೆಂಟಿಗೆ ಹೋದಾಗ ‘ನಮ್ಮ ಸೇವೆ ಹೇಗಿತ್ತು?’ ಎಂದು ಕೇಳಿ ನಮ್ಮ ಅನಿಸಿಕೆಗಳನ್ನು ಬರೆದಿಡುವ ಮಾದರಿಯಲ್ಲಿ ಈ ಕಾರ್ಡುಗಳನ್ನೂ ಎಮರ್ಜೆನ್ಸಿ ರೂಮಿನ ಎಲ್ಲ ರೂಮುಗಳಲ್ಲಿ ಇಡುವ ನಿರ್ಧಾರವನ್ನು ಆಸ್ಪತ್ರೆಯ ಮ್ಯಾನೇಜ್‌ಮೆಂಟ್ ತೆಗೆದುಕೊಂಡು ಬಹಳ ದಿನಗಳಾಗಿವೆ.
ನನಗೆ ಸರಿಯಾದ ಸಮಯದಲ್ಲಿ ಮಾರ್ಫೀನು ಸಿಕ್ಕದಿದ್ದು ಬಿಟ್ಟರೆ ಉಳಿದದ್ದೆಲ್ಲಾ ಸರಿಯಾಗೇ ಇತ್ತು. ಒಳ್ಳೇ ಡಾಕ್ಟರು, ಒಳ್ಳೇ ನರ್ಸು.
‘ಈ ಅಸ್ಪತ್ರೆಯಿಲ್ಲದೇ ಇದ್ದರೆ ನಾನಿನ್ನು ಬದುಕಿರುತ್ತಿರಲಿಲ್ಲ. ಇದೇರೀತಿ ಒಳ್ಳೇ ಕೆಲಸ ಮುಂದುವರೆಸಿ’
‘ಯು ಗೈಸ್ ಆರ್ ಎಫ್ಫಿಂಗ್ ಸ್ಲೋ. ಐ ವಿಲ್ ನೆವರ್ ಎಫ್ಫಿನ್ ಸ್ಟೆಪ್ ಇನ್ ಅಗೈನ್’
ಇನ್ನೂ ಅನೇಕ ಕಾರ್ಡುಗಳು. ಒಂದರಲ್ಲಿಯೂ ಬರೆದವನ ಹೆಸರಿಲ್ಲ. ಆಸ್ಪತ್ರೆಯ ವೈಟಿಂಗ್ ರೂಮಿನ ಟೀವಿಯ ಪರದೆ ಫ್ಲಾಟ್ ಆಗಿಲ್ಲವೆಂದು ಒಬ್ಬನ ಫಿರ್ಯಾದು. ವೈಟಿಂಗ್ ರೂಮಿನಲ್ಲಿ ನಾಲ್ಕು ಕಂಪ್ಯೂಟರ್ ಇದ್ದು ಎಲ್ಲಕ್ಕೂ ಇಂಟರ್ನೆಟ್ ಕನೆಕ್ಷನ್ ಇದ್ದರೆ ಚೆನ್ನ, ನಿಮ್ಮ ನರ್ಸಿನ ಫಫ್ರ್ಯೂಮ್ ಜಾಸ್ತಿ ಆಯ್ತು, ಡಾಕ್ಟರು ಆಕಳಿಸುತ್ತಾ ಇದ್ದ, ಎಲ್ಲ ನರ್ಸುಗಳಿಗೂ ಒಂದೇ ಯುನಿಫಾರ್ಮ್ ಇದ್ದರೆ ಚೆನ್ನ, ಡಾಕ್ಟರ್ ಲಾಸ್ಟ್ ನೇಮೂ ಫಸ್ಟ್ ನೇಮೂ ಉಚ್ಚಾರ ಮಾಡಲಿಕ್ಕಾಗದು, ಟಾಯ್ಲೆಟ್ಟಲ್ಲಿ ನನಗಿಂತ ಹಿಂದೆ ಹೋಗಿ ಬಂದವನು ಫ್ಲಶ್ ಮಾಡಿರಲಿಲ್ಲ, ಮಕ್ಕಳು ನಿಮ್ಮ ಎಮರ್ಜೆನ್ಸಿ ರೂಮಿನಲ್ಲಿ ಬಹಳ ಅಳುತ್ತವೆ, ಆಂಬುಲೆನ್ಸು ಆಸ್ಪತ್ರೆಗೆ ಬಂದಮೇಲೂ ಅವರ ಸೈರನ್ನು ಹೊಡಕೊಳ್ಳುವುದರಲ್ಲಿ ಏನರ್ಥ, ನಿಮ್ಮ ಡಾಕ್ಟರಿಗೆ ನಗೋಕೆ ಬರೊಲ್ವಾ? ಹೀಗೇ ಪ್ರತಿಕ್ರಿಯೆಗಳು, ಕಮೆಂಟುಗಳು. ಒಂದೊಂದು ರೂಮಿನಲ್ಲಿಯೂ ಮೂರೋ ನಾಲ್ಕೋ ಇದೆ.
ಸೂಜಿ ನಗುತ್ತಾಳೆ. ‘ರೂಮಿನಲ್ಲಿ ಯಾರಿದ್ದರು ಅನ್ನೋದು ನಮಗೆ ಗೊತ್ತಾಗೋದಿಲ್ವಾ. ಈ ಅನಾನಿಮಿಟಿಗೆ ಏನರ್ಥ?’ ಎಂದು ಕೊನೆಯ ಕಾರ್ಡು ತೆಗೆಯುತ್ತಾಳೆ.
‘ಎಲ್ಲರಿಗೂ ದೇವರು ಒಳ್ಳೇದು ಮಾಡಲಿ. ಮಿಸೆಸ್ ರಾಬಿನ್ಸನ್, ಮೇ ೧೬, ೨೦೦೯.’
ಒಂದೇ ಸಮೀಕ್ಷೆಗೆ ಹೆಸರಿರುವುದು. ಕೊಂಚ ಎಡಕ್ಕೆ ವಾಲಿದ ಅಕ್ಷರಗಳು, ಎಮ್‌ನ ಹಳ್ಳದಲ್ಲಿ ಒಂದು ಸ್ಮೈಲಿ ಫೇಸಿದೆ. ಆರ್‌ನ ಹೊಕ್ಕುಳು ಆಳವಾಗಿ ಸೀಳಿದೆ. ಐಗೆ ಮತ್ತು ಕೊನೆಯಲ್ಲಿ ಚಿಕ್ಕಿಗೆ ಬದಲು ಒಂದು ಸಣ್ಣ ಸೊನ್ನೆಯಿದೆ. ಯು ಆರ್ ಅ ಬಂಚ್ ಆಫ್ ಸ್ವೀಟ್‌ಹಾರ್ಟ್ಸ್ ಎಂದಿದೆ.
ಗುರುಪ್ರಸಾದ್ ಕಾಗಿನೆಲೆ ಹುಟ್ಟಿದ್ದು ಶಿವಮೊಗ್ಗದಲ್ಲಿ. ಮಿನೆಸೊಟಾ ರಾಜ್ಯದ ರಾಚೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ. ಸದ್ಯಕ್ಕೆ ಅಮೇರಿಕಾದ ರಾಚೆಸ್ಟರ್ನಲ್ಲಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ನಿರ್ಗುಣ, ಶಕುಂತಳಾ (ಕಥಾ ಸಂಗ್ರಹಗಳು), ಆಚೀಚೆಯ ಕಥೆಗಳು (ಸಂಪಾದಿತ ಕಥಾ ಸಂಕಲನ), ವೈದ್ಯ ಮತ್ತೊಬ್ಬ (ಲೇಖನ ಸಂಗ್ರಹ) “ಬಿಳಿಯ ಚಾದರ”, ‘ಹಿಜಾಬ್” (ಕಾದಂಬರಿಗಳು) ಅವರ ಪ್ರಕಟಿತ ಕೃತಿಗಳು.