ಒಂದು ಕಳೆದು ಹೋದ ಪ್ರೇಮವೋ ಅದೇ ತರಹದ ಇನ್ನಾವುದೋ ಕೋಮಲ ಭಾವ ಎಲ್ಲಾ ಹೃದಯದಲ್ಲಿ ಇರುವ ಕಾರಣದಿಂದಲೇ ಹಾಡುಗಳು ನಮ್ಮೆಲ್ಲರ ಹಾಡು ಕೂಡ. ಮೊದಲೇ ಹೇಳಿದಂತೆ ಕವನಗಳಲ್ಲಿನ ಸ್ಥಾಯಿ ಭಾವಪ್ರೇಮ‘. ಪ್ರೇಮದ ಹಂಬಲ, ವಿರಹ, ಸಾಂಗತ್ಯದ ಬಯಕೆ, ಅದರ ನಂತರ ಲಭಿಸುವ ಸಂತೃಪ್ತಿ ಇಲ್ಲವೇ ಶೂನ್ಯ. ನಮ್ಮ ಬಿಕ್ಕುಗಳನ್ನು, ಅಂತರಂಗದ ಮೂಕ ತಳಮಳಗಳನ್ನು, ದಿಕ್ಕೆಟ್ಟ ಮಗುವಿನಂತಹ ತಬ್ಬಲಿತನಗಳನ್ನು ಕವಿತೆಗಳು ಬಹಳ ಪರಿಣಾಮಕಾರಿಯಾಗಿ ನಿರೂಪಿಸುತ್ತವೆ.
ಸಂಧ್ಯಾರಾಣಿ
ಮತ್ತು ಭಾರತಿ ಬಿ.ವಿ ಅವರ ಸಂಯುಕ್ತ ಕವನ ಸಂಕಲನ ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ ಕೃತಿಯ ಕುರಿತು ಜಯಶ್ರೀ ಬಿ ಕದ್ರಿ ಬರೆದ ಬರಹ

 

ನಾನು ಐದಾರು ವರ್ಷಗಳ ಹಿಂದೆ ಸಾಹಿತ್ಯ ಕ್ಷೇತ್ರದಲ್ಲಿ ಸಣ್ಣ ಪುಟ್ಟ ಬರವಣಿಗೆಯಲ್ಲಿ ಪ್ರಯತ್ನಿಸುತ್ತಿದ್ದಾಗ ಅಚಾನಕ್ಕಾಗಿ ಮಿಂಚಿನಂತೆ ಸಿಕ್ಕಿದವರು ಸಂಧ್ಯಾ ರಾಣಿ ಅವರು. ವೀಣೆಯ ತಂತಿಯೊಂದು ಕಂಪಿಸಿ ತನ್ನಿಂದ ತಾನ್ ಅವರ ಬದುಕು ಬರಹಗಳಲ್ಲಿನ ನಿಡಿದಾದ ಮೌನ, ಉತ್ಕಟವಾದ, ಅಷ್ಟೇ ಆಪ್ತವಾದ ನಿಚ್ಚಳ ಮನಸ್ಸು ನನಗೆ ತುಂಬ ಇಷ್ಟ. ತಾನೇ ಮೌನವಾದಂತೆ, ಗಿಳಿಯೊಂದು ಉಲಿದು ಸದ್ದಿಲ್ಲದೆ ಎಲೆಮರೆಯಲ್ಲಿ ಕುಳಿತಂತೆ, ಮೌನವಾದಂತೆ, ಗಿಳಿಯೊಂದು ಉಲಿದು ಸದ್ದಿಲ್ಲದೆ ಎಲೆಮರೆಯಲ್ಲಿ ಕುಳಿತಂತೆ, ಹೇಳಲಾಗದ ಉತ್ಕಟ ಭಾವಗಳನ್ನು ಅವರು ಪದಗಳಲ್ಲಿ ಒಡಮೂಡಿಸುವ ರೀತಿ ಅನುಪಮವಾದುದು.

ನನ್ನ ಮೆಚ್ಚಿನ ಲೇಖಕಿಯಾದ ಸಂಧ್ಯಾರಾಣಿ ಅವರ ‘ಆನು ನಿನ್ನ ಹಾಡಿದಲ್ಲದೆ ಸೈರಿಸೆನೈಯ್ಯಾ’ ಪುಸ್ತಕವನ್ನು ಈ ನಿರ್ಭರ ಭಾವದೊಂದಿಗೆಯೇ ಓದಿದೆ. ಬಿ ವಿ ಭಾರತಿಯವರು ನಾನು ಗೌರವಿಸುವ ಇನ್ನೊಬ್ಬ ಲೇಖಕಿ. ಅವರ ಸಾಹಸದ ಕೆಚ್ಚು, ಬದುಕಿನೆದುರು ಮಂಡಿಯೂರಿ ಸೋಲದ ಛಲ ನನಗಿಷ್ಟ. ಅವರ ‘ಸಾಸಿವೆ ತಂದವಳು’ ಕೃತಿ ಓದಿದಾಗಿನಿಂದಲೇ ನಾನು ಅವರ ಅಭಿಮಾನಿ. ಅವರ ಕವನಗಳ ನಿರ್ಭಿಡೆ, ಕೆಚ್ಚಿನೊಳಗೆ ಮಿಡಿಯುವ ಮಿದು ವಿಷಣ್ಣತೆ ಅವರ ಬರಹಗಳ ನ್ನು ವಿಶಿಷ್ಟವಾಗಿಸುತ್ತದೆ.

ಒಂದು ಕಳೆದು ಹೋದ ಪ್ರೇಮವೋ ಅದೇ ತರಹದ ಇನ್ನಾವುದೋ ಕೋಮಲ ಭಾವ ಎಲ್ಲಾ ಹೃದಯದಲ್ಲಿ ಇರುವ ಕಾರಣದಿಂದಲೇ ಈ ಹಾಡುಗಳು ನಮ್ಮೆಲ್ಲರ ಹಾಡು ಕೂಡ. ಕಾವ್ಯ ವಿಮರ್ಶೆ, ಮೀಮಾಂಸೆ ಅದು, ಇದು ಎಲ್ಲವನ್ನು ಒತ್ತಟ್ಟಿಗಿಟ್ಟು ನನಗನಿಸಿದ ಒಂದಷ್ಟು ವಿಷಯಗಳನ್ನು ಹೇಳಬಯಸುತ್ತೇನೆ. ಮೊದಲೇ ಹೇಳಿದಂತೆ ಈ ಕವನಗಳಲ್ಲಿನ ಸ್ಥಾಯಿ ಭಾವ ‘ಪ್ರೇಮ’. ಪ್ರೇಮದ ಹಂಬಲ, ವಿರಹ, ಸಾಂಗತ್ಯದ ಬಯಕೆ, ಅದರ ನಂತರ ಲಭಿಸುವ ಸಂತೃಪ್ತಿ ಇಲ್ಲವೇ ಶೂನ್ಯ. ನಮ್ಮ ಬಿಕ್ಕುಗಳನ್ನು, ಅಂತರಂಗದ ಮೂಕ ತಳಮಳಗಳನ್ನು, ದಿಕ್ಕೆಟ್ಟ ಮಗುವಿನಂತಹ ತಬ್ಬಲಿತನಗಳನ್ನು ಈ ಕವಿತೆಗಳು ಬಹಳ ಪರಿಣಾಮಕಾರಿಯಾಗಿ ನಿರೂಪಿಸುತ್ತವೆ.

(ಭಾರತಿ ಬಿ.ವಿ ಮತ್ತು ಸಂಧ್ಯಾರಾಣಿ)

ಸಂಧ್ಯಾರಾಣಿಯವರ ಶೈಲಿಯ ವಿಶಿಷ್ಟತೆ ಎಂದರೆ ಅವರ ಗದ್ಯವೊಂದು ಕಾವ್ಯದಂತೆಯೂ, ಕಾವ್ಯದಲ್ಲಿ ಗದ್ಯದ ಛಾಯೆಯೂ ಕಾಣಿಸುತ್ತಿರುವುದು. ಉದಾಹರಣೆಗೆ ‘ಸಂಗಾತವೆಂದರೆ ಸರಳಲ್ಲ- ಸಲೀಸು ಮೊದಲೇ ಅಲ್ಲ’ . ‘ಒಮ್ಮೆ ಸಿಕ್ಕ ಹನಿ ಅಮೃತ ಕಾಯುತ್ತದೆ ಬದುಕ’- ಈ ರೀತಿಯ ಸಾಲುಗಳು. ‘ತಾವರೆ ದಳದ ಕಂಗಳು’, ‘ಒಂದು ಹನಿ ಚಂದಿರ’… ಹೀಗೆ ಪ್ರಕೃತಿಯನ್ನು ಅವಲೋಕಿಸಿದ ಕಂಗಳ ಪ್ರತಿಮೆಗಳು.

ನೆಲದಲ್ಲಿ ಬೇರು ಬಿಟ್ಟ ಮರಗಳನ್ನು ಕಂಡಾಗೆಲ್ಲ
ಕುಂಡದಲ್ಲೇ ನಿಟ್ಟುಸಿರಾದ ಬೋನ್ಸಾಯ್
ನನ್ನ ಕಂಗಳಲ್ಲಿ ಕಂಬನಿಯಿಡುತ್ತವೆ

ಈ ರೀತಿ ಗಕ್ಕನೆ ನಮ್ಮನ್ನು ಅಲುಗಾಡಿಸಿ ಬಿಡುವ ಸಾಲುಗಳನ್ನು ಅವರು ಬರೆಯಬಲ್ಲರು.

ಅದೇ ರೀತಿ ‘ಹಾಡಿ ಬಿಟ್ಟ ಚರಣದ ಒಂದು ಪಲ್ಲವಿ’ ಈ ರೀತಿಯ ದಟ್ಟ ಭಾವದ ಸೊಲ್ಲುಗಳನ್ನು ಕೂಡ.

ಸಂಧ್ಯಾ ರಾಣಿಯವರ ಒಂದೊಂದು ಸಾಲುಗಳೂ ಹೀಗೆ. ನಮ್ಮ ಸ್ಮೃತಿ ಪಟಲದಲ್ಲಿ ಬಚ್ಚಿಟ್ಟ ನಿಟ್ಟುಸಿರುಗಳನ್ನು, ಬಿಕ್ಕುಗಳನ್ನು ಒಂದೊಂದಾಗಿ ಎಳೆತಂದು ಕೆನ್ನೆ ತೋಯಿಸುವ ಸಾಲುಗಳು.

ನೆನಪುಗಳೆಂದರೆ
ಆಷಾಢದಲ್ಲಿ ತೆರೆದಿಟ್ಟ ಕಿಟಕಿ
ಚಿಲಕ ಹಾಕಲು ಮರೆತ ಬಾಗಿಲು
ಕಡಲ ತೆರೆ, ಶ್ರಾವಣದ ಮಳೆ ( ಕವಿತೆ: ಪಯಣ)

ಹಾರಿ ಹೋದ ಚಿಟ್ಟೆ ಅಂಗೈಯಲಿ ಉಳಿಸಿದ
ಕ್ಷಣಗಳನ್ನು ನೆನೆಯುತ್ತಿದ್ದೇನೆ
ನಿನ್ನೆಗಳ ಊರಿನಲ್ಲಿ ಕಳೆದುಕೊಂಡ
ನಾಳೆಗಳ ಹುಡುಕುತ್ತಿದ್ದೇನೆ (ಕವಿತೆ: ಅಂಗೈ ಬಿಟ್ಟ ಚಿಟ್ಟೆ)

ಇನ್ನು ಭಾರತಿಯವರ ಶೈಲಿ ತುಂಬ ವಿಭಿನ್ನ. ಅವರ ಕವಿತೆಗಳೂ ಪ್ರೀತಿಯ ಜಟಿಲತೆಯನ್ನು ತಮ್ಮದೇ ವಿಧದಲ್ಲಿ ಹೇಳುತ್ತವೆ.

ಹೊಂಗೆಯ ಮರದಡಿ ಬೆಳೆದವಳು ನಾನು
ಈ ಆಲದ ಗೋಜಲು ಜಟಿಲ
ಆದರೂ ಮತ್ತೆ ಮತ್ತೆ ತೂಗಿ ಬೀಳುತ್ತೇನೆ (ಕವಿತೆ: ಪ್ರೀತಿ, ಅನಿವಾರ್ಯತೆ ಇತ್ಯಾದಿ)

ಮಗುವಿನ ಮುಗ್ಧತೆಯೊಂದಿಗೆ ಕೆಚ್ಚು, ಒಂದು ರೀತಿಯ ನಿರ್ಲಿಪ್ತತೆ ಅವರ ಕವನಗಳ ಸ್ಥಾಯಿ ಭಾವ ಎಂದು ನನಗನಿಸುತ್ತದೆ.

ಪ್ರಶ್ನೆಗಳಿಗೆಲ್ಲ ಉತ್ತರ ಬರೆಯಬೇಕಾದ ದರ್ದು,
ಪರೀಕ್ಷೆಯಲ್ಲಿ ಮಾತ್ರ, ಬದುಕಿನಲ್ಲಲ್ಲ.. (ಕವಿತೆ: ವಿದಾಯ)

(ಜಯಶ್ರೀ ಬಿ ಕದ್ರಿ )

ಹೀಗೆ ತಮ್ಮದೇ ಫಿಲಾಸಫಿಯನ್ನೂ ಅವರು ಹೇಳಬಲ್ಲರು. ‘ಸಾವು’, ‘ಅವನೆಂಬ ಅಸಾಂಪ್ರದಾಯಿಕ ಪದ್ಯ’, ‘ಅಸ್ಪಷ್ಟ ಚುಕ್ಕೆಗಳು’, ‘ನಿರ್ಮೋಹಿಯೇ’ ಹೀಗೆ ಒಳನೋಟಗಳುಳ್ಳ ಅನೇಕ ಕವಿತೆಗಳು. ‘ಎಸ್ಕಲೇಟರ್’, ‘ಸೆಲ್ಫಿ’ ಈ ರೀತಿಯ ಆಧುನಿಕ ಪ್ರತಿಮೆಗಳನ್ನೂ ಅವರು ಬಳಸಿಕೊಂಡಿದ್ದಾರೆ. ಬಿ ವಿ ಭಾರತಿಯವರ ಗದ್ಯದಲ್ಲಿನ ಹಾಸ್ಯ ಪ್ರಜ್ಞೆಯನ್ನು ಮೆಚ್ಚಿಕೊಂಡವಳು ನಾನು. ಅದೇ ಈ ಕವಿತೆಯಲ್ಲಿ ತಣ್ಣಗೆ ಹರಿಯುತ್ತಿರುವ ಹಾಸ್ಯ ಲೇಪಿತ ವಿಷಾದವನ್ನು ಗಮನಿಸಿ:

ಹಾಗೆ ಹೊರಟು ಅದೆಷ್ಟೋ ಕಾಲ ನಡೆದರೂ
ಅಂತರ ಹೆಚ್ಚುತ್ತಲೇ ಹೋದ
ಕಾರಣ ತಿಳಿವ ಉಮೇದಿಗೆ ಬಿದ್ದಾಗಲೇ
ನನಗೆ ಅರಿವಾಗಿದ್ದು
ನಾವು ಸಾಗುತ್ತಿದ್ದುದು ಮೆಟ್ಟಿಲ ಮೇಲಲ್ಲ
ವಿರುದ್ಧ ದಿಕ್ಕಿನ ಎಸ್ಕಲೇಟರ್ ಮೇಲೆ ಎಂದು (ಕವಿತೆ: ಎಸ್ಕಲೇಟರ್)

ಈ ಎರಡೂ ಕವಯಿತ್ರಿಯರ ಜೀವನ ಪ್ರೀತಿ, ಕಾವ್ಯದ ಬಗೆಗಿರುವ ಅಗಾಧತೆ ಈ ಎರಡೂ ಕವಯಿತ್ರಿಯರ ಜೀವನ ಪ್ರೀತಿ, ಕಾವ್ಯದ ಬಗೆಗಿರುವ ಅಗಾಧ ಹಂಬಲ, ಅಕ್ಷರಗಳನ್ನು ಅವರು ಆಪ್ತವಾಗಿಸುವ ಪರಿ ನನಗೊಂದು ಬೆರಗು. ‘ಆನು ನಿನ್ನ ಹಾಡಿದಲ್ಲದೆ ಸೈರಿಸೆನಯ್ಯಾ’ ಒಂದು ಅಪೂರ್ವವಾದ ಓದಿನ ಅನುಭವ ಕೊಡುತ್ತದೆ ಎಂದು ಖಚಿತವಾಗಿ ಹೇಳಬಲ್ಲೆ.