ಮನುಷ್ಯ ಎಂಬ ಜೀವಿ ಈ ಭೂಮಿಯ ಮೇಲೆ ವಿಕಾಸಗೊಂಡಾಗಿನಿಂದ ಒಂದಲ್ಲ ಒಂದು ರೀತಿಯ ಸಮುದಾಯಗಳನ್ನು ಕಟ್ಟಿಕೊಂಡು ಬದುಕುತ್ತಿದ್ದಾನೆ. ಎಷ್ಟೇ ಜಗಳ, ಭಿನ್ನಾಭಿಪ್ರಾಯ, ಇರಿಸುಮುರಿಸು, ವೈಯಕ್ತಿಕ ಇಚ್ಛೆಗಳ ಬಲ್ಮೆ ಇದ್ದರೂ ನೆರೆಹೊರೆಯೋ, ವೃತ್ತಿ ಸಮುದಾಯವೋ, ಸ್ನೇಹಿತರ ಬಳಗವೋ, ನೆಂಟರಿಷ್ಟರ ಜೊತೆಗಾರಿಕೆಯೋ, ವಠಾರವೋ, ಅನೇಕ ಮನೆಘಟಕಗಳಿರುವ ಸಮುಚ್ಚಯಗಳೋ(ಅಪಾರ್ಟ್ಮೆಂಟ್)… ಒಟ್ಟಿನಲ್ಲಿ ಮನುಷ್ಯರಿಗೆ ಮನುಷ್ಯರ ಸಂಗ-ಸಹವಾಸ ಬೇಕು ಅಷ್ಟೆ. ಇದನ್ನು ಹೆಚ್ಚು ವಿವರಿಸುವ ಅಗತ್ಯ ಇಲ್ಲ ಅನ್ನಿಸುತ್ತೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ನಾಲ್ಕನೆಯ ಬರಹ
ಇವತ್ತು ನಿಮಗೆ ಒಂದು ಸ್ವಾರಸ್ಯಕರ ಕಥೆ ಹೇಳ್ತೇನೆ. ಕೇರಳದ ಒಂದು ಸಣ್ಣ ಊರಿನಲ್ಲಿ ಒಂದು ಪುಸ್ತಕಪ್ರೇಮಿಗಳ ಮನೆ ಇತ್ತು. ಮನೆಯ ಹಿರಿಯರಾದ ತಂದೆಯವರು, ವನ್ಯಜೀವಿ ತಜ್ಞ ಮತ್ತು ನರಭಕ್ಷಕಗಳ ಬೇಟೆಗಾರ ಕೆನೆತ್ ಆಂಡರ್‌ಸನ್‌ರು, ತಮ್ಮ ಕಾಡಿನ ಅನುಭವಗಳನ್ನು ಕುರಿತು ಬರೆದಂತಹ ಎಂಟು ಪುಸ್ತಕಗಳ ಸರಣಿಯನ್ನು ಮನೆಗೆ ತಂದಿಟ್ಟಿದ್ದರು. ಬೇಸಗೆ ರಜೆಯಲ್ಲಿ ಬೇಸರ ಅನ್ನಿಸುತ್ತಿದ್ದಾಗ ಅವರ ಹನ್ನೆರಡು-ಹದಿಮೂರು ವರ್ಷದ ಮಗ ಜೋಷುವಾ ಮ್ಯಾಥ್ಯೂ ಸುಮ್ಮನೆ ಆ ಪುಸ್ತಕಗಳ ಮೇಲೆ ಕೈಯಾಡಿಸಿದ. ಮೊದಲು ಮುಖಪುಟದಲ್ಲಿನ ಪ್ರಾಣಿಚಿತ್ರಗಳು ಆ ಮುಗ್ಧ ಬಾಲಕನನ್ನು ಆಕರ್ಷಿಸಿದವು, ನಂತರ ಕಾಡಿನ ಅದ್ಭುತ ನಿಗೂಢ ವಿಶ್ವವನ್ನು ಕೆನೆತ್‌ರು ತೆರೆದಿಟ್ಟ ಅತ್ಯಾಸಕ್ತಿದಾಯಕ ರೀತಿಯು ಆ ಹುಡುಗನ ಮನೆ ಸೆಳೆಯಿತು. ಸಾಧಾರಣ ಹುಲಿಯೊಂದು ನರಭಕ್ಷಕವಾಗಿ ಬದಲಾಗುವ ಸನ್ನಿವೇಶ, ಅದು ಹೊಂಚು ಹಾಕಿ ಮೌನದಲ್ಲಿ ಬೇಟೆಯಾಡಿ ಮನುಷ್ಯರನ್ನು ಕೊಲ್ಲುವ ರೀತಿ, ಆ ದಿಗ್ಭ್ರಮೆ, ಆ ಆಘಾತ, ಭಯ, ಆ ಹುಲಿಯನ್ನು ಕೊಲ್ಲಲು ಬೇಟೆಗಾರನು ಮಾಡುವ ಯೋಜನೆ, ಪಡುವ ಕಷ್ಟ, ನಿದ್ದೆಗೆಟ್ಟು ಹುಲಿಗಾಗಿ ರಾತ್ರಿ ಕಾಯಬೇಕಾದ ಹಿಂಸೆ, ತನ್ನ ಪ್ರಾಣವನ್ನೇ ಅವನು ಪಣಕ್ಕಿಡುವ ರೀತಿ — ಇದೆಲ್ಲದರ ಕೌತುಕ ಆ ಹುಡುಗನನ್ನು ಇನ್ನಿಲ್ಲದಂತೆ ಆಕರ್ಷಿಸಿದವು. ಪುಸ್ತಕವನ್ನು ಕೆಳಗಿಡಲು ಸಾಧ್ಯವೇ ಆಗಲಿಲ್ಲ! ಇನ್ನೊಂದು ದೊಡ್ಡ ಖುಷಿ ಅಂದರೆ ಆ ಪುಸ್ತಕಗಳಲ್ಲಿ ವರ್ಣಿಸಲಾಗಿದ್ದ ಕಾಡುಗಳು ಆ ಹುಡುಗನಿಗೆ ಪರಿಚಿತವಾದ ಕೇರಳ, ಕರ್ನಾಟಕ, ತಮಿಳುನಾಡಿನ ಕಾಡುಗಳೇ ಆಗಿದ್ದವು!

(ಜೋಶುವಾ ಮ್ಯಾಥ್ಯೂ)
ಮುಂದಿನ ಕಥೆ ಇನ್ನೂ ರೋಚಕ. ಈ ಪುಸ್ತಕಗಳ ಮೋಹಕ್ಕೆ ಬಿದ್ದ ಹುಡುಗ ಕೆನೆತ್ ಆಂಡರ್ಸನ್‌ರ ದೊಡ್ಡ ಅಭಿಮಾನಿಯಾಗಿಬಿಟ್ಟ. ಮುಂದೆ ತಾನು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುವ ಸಂದರ್ಭದಲ್ಲಿ ಹಾಗೂ ಕೆಲಸಕ್ಕೆ ಸೇರಿದಾಗಲೂ ಕೆನೆತ್ ಮತ್ತು ಕಾಡು ಇವನನ್ನು ಯಾವಾಗಲೂ ಕಾಡುತ್ತಿದ್ದವು. ಬಿಡುವಾಗಿದ್ದಾಗ ಅಂತರ್ಜಾಲದಲ್ಲಿ ಕೆನೆತ್ ಬಗ್ಗೆ ಇನ್ನಷ್ಟು, ಮತ್ತಷ್ಟು ಹುಡುಕುತ್ತಾ ಹುಡುಕುತ್ತಾ ಇದ್ದ ಇವನಿಗೆ ತನ್ನಿಷ್ಟದ ಬರಹಗಾರನ ಅಭಿಮಾನಿಗಳು ಸಿಕ್ಕಿದರು. ಅವರೊಂದಿಗೆ ಸಂಪರ್ಕ ಬೆಳೆಸುತ್ತಾ ಈ ಹುಡುಗ (ಈಗ ಯುವಕ) ತನ್ನಂತಹ ಸಮಾನ ಮನಸ್ಕರ ಇ-ಕಮ್ಯೂನಿಟಿ (ವಿದ್ಯುನ್ಮಾನ ಸಮುದಾಯ)ಯೊಂದನ್ನು ರೂಪಿಸಿದ. ನಿಯಮಿತವಾಗಿ ಪರಸ್ಪರ ಸಂಪರ್ಕದಲ್ಲಿದ್ದ ಈ ಯುವಮಿತ್ರರು ಕೆನೆತ್ ಅವರ ಓಡಾಡಿದ ಕಾಡುಗಳಲ್ಲಿ, ತಮ್ಮ ವಾರಾಂತ್ಯಗಳಲ್ಲಿ ಮತ್ತೆ ಓಡಾಡಿ ಆ ಅನುಭವಗಳನ್ನು ಮರುಜೀವಿಸಲಾರಂಭಿಸಿದರು. ತುಂಬ ಸಂತೋಷ ಕೊಡುತ್ತಿದ್ದ ಈ ಅನುಭವಗಳ ಮಧ್ಯೆ ಅವರಿಗೆ ಸಿಕ್ಕಂತಹ ಒಂದು ಅನಿರೀಕ್ಷಿತ ಸಂತಸದ ಸುದ್ದಿ ಎಂದರೆ ಕೆನೆತ್ ಆಂಡರ್ಸನ್ ಅವರ ಮಗ ಡೊನಾಲ್ಡ್ ಆಂಡರ್ಸನ್ ಬದುಕಿದ್ದಾರೆ ಮತ್ತು ಬೆಂಗಳೂರಿನಲ್ಲೇ ಇದ್ದಾರೆ ಎಂಬ ಸುದ್ದಿ! ಈ ನಡುವೆ ಗುಂಪಿನಲ್ಲಿ ಯಾರೋ ಒಬ್ಬರಿಗೆ ಕೆನೆತ್ ಆಂಡರ್ಸನ್ ಅವರ ಮಗಳು ಹಾಗೂ ಡೊನಾಲ್ಡ್ ಆಂಡರ್ಸನ್ ಅವರ ಅಕ್ಕ ಜೂನ್ ಆಂಡರ್ಸನ್ ಅವರ ಸಂಪರ್ಕ ಸಿಕ್ಕಿತು. ಆಕೆ ಆಸ್ಟ್ರೇಲಿಯಾದಲ್ಲಿದ್ದರು.
ಸರಿ, ಇಷ್ಟಾದ ಮೇಲೆ ಡೊನಾಲ್ಡ್ ಆಂಡರ್ಸನ್ ಅವರನ್ನು ಮುಖತಃ ಭೇಟಿ ಮಾಡುವ ಆಸೆಯು ಈ ಗೆಳೆಯರಲ್ಲಿ ಮೂಡಿತು. ಅದು 1998ರ ಸಮಯ. `ಯೆಲ್ಲೋ ಪೇಜಸ್’ ಎಂಬ ದೂರವಾಣಿ ವಹಿಯು ಚಾಲ್ತಿಯಲ್ಲಿದ್ದ ಕಾಲ. ಅದರಲ್ಲಿ ಡೊನಾಲ್ಡ್ ಆಂಡರ್ಸನ್ ಅವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ಸಿಕ್ಕಿತು! ಮುಂದೆ ನಡೆದದ್ದು ಡೊನಾಲ್ಡ್ ಆಂಡರ್ಸನ್ ಅವರನ್ನು ಭೇಟಿ ಮಾಡುವ ಪ್ರಯತ್ನ. `ಆತ ಯಾರ ಹತ್ತಿರವೂ ಮಾತಾಡುವುದಿಲ್ಲ, ಯಾರನ್ನೂ ಭೇಟಿ ಮಾಡುವುದಿಲ್ಲ’ ಎಂಬ ಸಮಾಚಾರ ವನ್ಯಪ್ರಿಯರ ಬಳಗಗಳಲ್ಲಿ ಹರಡಿತ್ತು. ಅದರೂ ಈ ಹುಡುಗರಿಗೆ ಅವರನ್ನು ಭೇಟಿ ಮಾಡುವ ಆಸೆ ಕಡಿಮೆ ಆಗಲಿಲ್ಲ, ಬದಲಾಗಿ ಇನ್ನೂ ಹೆಚ್ಚಾಯಿತು.
ಹರಡಿದ್ದ ಗಾಳಿಮಾತುಗಳು ಸಂಪೂರ್ಣ ಸುಳ್ಳಾಗಿರಲಿಲ್ಲ. ತನ್ನ ಬಾಲ್ಯಕಾಲದಲ್ಲಿ(ಜನನ 1934) ಕಬ್ಬನ್‌ಪಾರ್ಕ್‌ನ ಪಕ್ಕದಲ್ಲಿ, ಬೆಂಗಳೂರಿನ ಸಿಡ್ನಿ ರಸ್ತೆಯ(ಈಗಿನ ಕಸ್ತೂರ್‌ಬಾ ರಸ್ತೆ) 15 ಎಕರೆ ವಿಶಾಲಜಾಗದಲ್ಲಿದ್ದ ದೊಡ್ಡ ಬಂಗಲೆಯಲ್ಲಿ ಓಡಾಡಿಕೊಂಡು ರಾಜಕುಮಾರನಂತೆ ಬೆಳೆದಿದ್ದ ಹುಡುಗ ಡೊನಾಲ್ಡ್ ಆಂಡರ್ಸನ್. ತಂದೆ ಕೆನೆತ್ ಆಂಡರ್ಸನ್‌ರು ಗಿಡಮರ ಪ್ರಾಣಿಪಕ್ಷಿಗಳ ಮಹಾನ್‌ಪ್ರೇಮಿಯಾದದ್ದರಿಂದ `ಪ್ರಾಸ್ಪೆಕ್ಟ್ ಹೌಸ್’ ಎಂಬ ಆ ಬಂಗಲೆಯ ಸುತ್ತ ಇಲ್ಲದೆ ಇರುವಂತಹ ಹೂಹಣ್ಣಿನ ಮರವಿರಲಿಲ್ಲ, ಮತ್ತು ಇಲ್ಲದೆ ಇರುವಂತಹ ಪ್ರಾಣಿಪಕ್ಷಿಗಳಿರಲಿಲ್ಲ. ಇಂತಹ ಹಸಿರು ಸಾಮ್ರಾಜ್ಯದಲ್ಲಿ ವಿಹಾರ, ತಂದೆಯ ಸರ್ಕಾರಿ ಕೆಲಸದಿಂದಾಗಿ ಅಡಿಗೆಮನೆಯಲ್ಲಿ ಯಾವುದಕ್ಕೂ ಕೊರತೆ ಇಲ್ಲದೆ ಬೇಕಾದಾಗ ಸಿಗುತ್ತಿದ್ದ ಆಹಾರ, ಅಷ್ಟು ದೊಡ್ಡ ಬಂಗಲೆಯನ್ನು ನೋಡಿಕೊಳ್ಳಲು ಮನೆಯಲ್ಲಿ ಕೈಗೊಬ್ಬರು, ಕಾಲಿಗೊಬ್ಬರು ಆಳುಗಳಿದ್ದ ಅನುಕೂಲಕರ ಆಧಾರ – ಇವುಗಳಿಂದಾಗಿ ಬಾಲಕ ಡಾನ್‌ನ (ಡೊನಾಲ್ಡ್ ಆಂಡರ್ಸನ್‌ನನ್ನು ಜನರು ಮುದ್ದಿನಿಂದ ಹೀಗೆ ಕರೆಯುತ್ತಿದ್ದರು) ಜೀವನ ಸುಖದ ಸುಪ್ಪತ್ತಿಗೆಯಲ್ಲಿ ಕಳೆಯಿತು.

(ಡೊನಾಲ್ಡ್ ಆಂಡರ್ಸನ್)
ಇದರ ಜೊತೆಗೆ ಅವನ ತಂದೆಯವರು ಕಾಡಿನ ಪ್ರವಾಸಗಳಿಗೆ ಹೋದಾಗಲೆಲ್ಲ ಇವನನ್ನು ಸಹ ಜೊತೆಗೆ ಕರೆದುಕೊಂಡು ಹೋಗಿ, ಕಾಡಿನ ಮತ್ತು ವನ್ಯಜೀವಿಗಳ ಆಪ್ತ ಪರಿಚಯ ಮಾಡಿಸಿದ್ದರು. ಆಗಿನ್ನೂ ವನ್ಯಜೀವಿ ರಕ್ಷಣಾ ಕಾಯಿದೆಯು ಭಾರತದಲ್ಲಿ ಜಾರಿಗೆ ಬಂದಿರದೆ ಇದ್ದ ಕಾರಣ ಬೇಟೆಯು ಅಪರಾಧವಾಗಿರಲಿಲ್ಲ. ಹಾಗೆ ನೋಡಿದರೆ ನರಭಕ್ಷಕ ಹುಲಿ-ಚಿರತೆಗಳನ್ನು ಕೊಲ್ಲಲು ಸರ್ಕಾರವೇ ಬೇಟೆಗಾರರನ್ನು ನಿಯಮಿಸಿ ಅವರಿಗೆ ಸಂಭಾವನೆ ಕೊಡುತ್ತಿತ್ತು. ತನ್ನ ತಂದೆಗಿದ್ದ ವನ್ಯಾಸಕ್ತಿಯ ಜೊತೆಯಲ್ಲಿ ಬಂದೂಕನ್ನು ಬಳಸುವಲ್ಲಿ ಅತ್ಯದ್ಭುತ ಗುರಿಕಾರನೂ ಆಗಿ ಬೆಳೆದ ಡೊನಾಲ್ಡ್‌ಗೆ ನಾಡಿನಲ್ಲಿ ಎಲ್ಲರಂತೆ `ಕಛೇರಿ ಕೆಲಸ – ಮನೆ – ಹೆಂಡತಿ ಮಕ್ಕಳು-ಹಬ್ಬ ಮದುವೆ’ಗಳ ಸರ್ವೇಸಾಮಾನ್ಯ ಜೀವನಕ್ಕಿಂತ ವಾರಾಂತ್ಯಗಳಲ್ಲಿ ಗೆಳೆಯರೊಂದಿಗೆ ಕಾಡಿಗೆ ಹೋಗುವುದು, ವನ್ಯಜೀವಿಗಳನ್ನು ನೋಡುವುದು, ಸಾಧ್ಯ ಆದಾಗ ಬೇಟೆಯಾಡುವುದು, ದೊಡ್ಡ ದೊಡ್ಡ ಮೀನುಗಳನ್ನು ಹಿಡಿಯುವುದು….. ಇಂತಹ ಚಟುವಟಿಕೆಗಳೇ ತುಂಬ ಇಷ್ಟವಾಗಿ, ಅವನು ತನ್ನ ಯೌವನದುದ್ದಕ್ಕೂ ಹೀಗೆಯೇ ಬದುಕಿದ. ಅವನ ರಾಜಕುಮಾರತನ ಹೇಗಿತ್ತೆಂದರೆ ಆಗ ಸೌತ್‌ಪೆರೇಡ್ ಎಂದು ಕರೆಯಲಾಗುತ್ತಿದ್ದ ಇಂದಿನ ನಮ್ಮ ಮಹಾತ್ಮಾಗಾಂಧಿ ರಸ್ತೆಯಲ್ಲಿ (ಎಂಜಿ ರೋಡ್) ತನ್ನ ಬೈಕಿನ ಮುಂದುಗಡೆ ಜಾಗದಲ್ಲಿ ತಾನು ಕೊಂದಂತಹ ಚಿರತೆಯ ಹೆಣ ಮತ್ತು ಹಿಂದೆ ತನ್ನೊಬ್ಬಳು ಪ್ರೇಯಸಿಯನ್ನು ಮೆರೆಸುತ್ತಾ ನೋಡಿದವರೆಲ್ಲ ಬಿಟ್ಟ ಕಣ್ಣು ಬಿಟ್ಟುಕೊಂಡು ನೋಡುವಂತೆ ಗಾಡಿ ಓಡಿಸುತ್ತಿದ್ದನಂತೆ! ಹೇಗಿದ್ದಿರಬಹುದಲ್ಲ ಆ ದೃಶ್ಯ!
ಆದರೆ ಬದುಕು ಡಾನ್‌ನ ಮೇಲೆ ಯಾವಾಗಲೂ ಹೀಗೆ ದಯಾಳುವಾಗಿರಲಿಲ್ಲ, ಮುನಿಸಿಕೊಂಡಿತು. ಬದುಕಿನ ಅನಿರೀಕ್ಷಿತ ತಿರುವುಗಳ ಜೊತೆಗೆ, ಅವನು ತೆಗೆದುಕೊಂಡಂತಹ ಕೆಲವು ಮೂರ್ಖ ನಿರ್ಧಾರಗಳು ಸಹ ಅವನ ವಿನಾಶಕ್ಕೆ ಕಾರಣೀಭೂತವಾಗಿರಬೇಕು.
ಆಗಿದ್ದಿಷ್ಟು. ಸ್ವಾತಂತ್ರ್ಯ ಬಂದ ಮೇಲೆ ಭಾರತದಲ್ಲಿದ್ದ ಡಾನ್‌ನಂತಹ ವಿದೇಶೀಯರಿಗೆ ಬದುಕು ಕಷ್ಟಕರವಾಗತೊಡಗಿತು. ಆಸ್ತಿಯ ಒಡೆತನ, ವಾಸ್ತವ್ಯಕ್ಕೆ ರಹದಾರಿ ಪರವಾನಗಿ(ಪಾಸ್‌ಪೋರ್ಟ್) ಇತ್ಯಾದಿ ವಿಷಯಗಳಲ್ಲಿನ ನಿಯಮಗಳು ವಿದೇಶೀಯರ ಮಟ್ಟಿಗೆ ಕಠಿಣವಾಗತೊಡಗಿದವು. ಡಾನ್ ಓದಿದ್ದು ಕೇವಲ ಒಂಬತ್ತನೆಯ ತರಗತಿ ಹಾಗೂ ಮಾಡಿದ್ದು ಅಷ್ಟೇನೂ ವಿವೇಕಿಗಳಲ್ಲದ ಜನರ ಸಹವಾಸ. ಕುಡಿತ ಮತ್ತು ಸಿಗರೇಟು ಅವನ ಬಹು ಇಷ್ಟದ ಅಭ್ಯಾಸಗಳಾಗಿಬಿಟ್ಟವು! ಮದುವೆ ಮಾಡಿಕೊಳ್ಳದೆ ಹೋದದ್ದರಿಂದ ತನ್ನ ಬದುಕಿಗೆ ಒಂದು ಆಧಾರವಾಗಬಹುದಾಗಿದ್ದ ಜೀವನ ಸಂಗಾತಿಯನ್ನು ಆತ ಹೊಂದಲಾಗಲಿಲ್ಲ. ಹೀಗಾಗಿ ತನ್ನ ಮನೆ, ತಂದೆ ಮಾಡಿದ್ದ ಅನೇಕಾನೇಕ ಸ್ಥಿರಾಸ್ತಿಗಳನ್ನು ನಿರ್ವಹಿಸುವ ಸಾಮರ್ಥ್ಯ, ಚಾಕಚಕ್ಯತೆ ಈತನಲ್ಲಿರಲಿಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಕೇವಲ ಕೆಲವು ಸಾವಿರಗಳಿಗೆ ಮಾರಿಬಿಟ್ಟು ನೋಡನೋಡುತ್ತಾ ಕೈಖಾಲಿ ಮಾಡಿಕೊಂಡು ಕುಳಿತ!
ದೊಡ್ಡ ಬಂಗಲೆಯಲ್ಲಿ ಬದುಕಿ ಬಾಳಿದ್ದವನು ಜೀವನದ ಕೊನೆಯಲ್ಲಿ ಎರಡೇ ಎರಡು ಕೋಣೆಗಳಿದ್ದಂತಹ, ಶೀಟು ಹೊದಿಸಿದ್ದ ಬಡಬಾಡಿಗೆಮನೆಯಲ್ಲಿ ಇರುವಂತಾಗಿಬಿಟ್ಟಿತು. ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಅವನ ಅಕ್ಕ ಜೂನ್ ಅವನನ್ನು ಅಲ್ಲಿಗೆ ಬರುವಂತೆ ಕರೆದರೂ, ವಿಮಾನ ಹತ್ತುವ ಭೀತಿಯಿಂದ ನರಳುತ್ತಿದ್ದ ಡಾನ್ ಅದಕ್ಕೂ ಒಪ್ಪಲಿಲ್ಲ. ಅವನ ಮೈತುಂಬ ಕಾಯಿಲೆಗಳು ಸೇರಿಕೊಂಡಿದ್ದವು. ಅಳಿದುಳಿದಿದ್ದ ಒಂದೆರಡು ಪುಡಿಗಾಸು ಹಾಗೂ ತಂದೆಯ ಮೇಲಿನ ಅಭಿಮಾನದಿಂದಾಗಿ ತನ್ನನ್ನು ನೋಡಲು ಬರುತ್ತಿದ್ದ ಜನರು ದಯೆಯಿಟ್ಟು ಕೊಡುತ್ತಿದ್ದ ಹಣ, ಊಟಗಳ ಮೇಲೆ ಅವಲಂಬಿತನಾಗಿ ಬದುಕುವ ದೈನೇಸಿ ಸ್ಥಿತಿಗೆ ಬಂದುಬಿಟ್ಟಿದ್ದ. ಇಂಗ್ಲಿಷ್‌ನಲ್ಲಿ `ರ‍್ಯಾಗ್ಸ್ ಟು ರಿಚಸ್’ (ಚಿಂದಿಬಟ್ಟೆಯಿಂದ ಸಿರಿವಂತಿಕೆಯ ಸ್ಥಿತಿ ತಲುಪಿದ್ದು) ಎಂಬ ಒಂದು ಪ್ರಸಿದ್ಧ ನುಡಿಗಟ್ಟಿದೆ. ಆದರೆ ಡಾನ್‌ನ ಪರಿಸ್ಥಿತಿ ಇದರ ವಿರುದ್ಧವಾಗಿ `ರಿಚಸ್ ಟು ರ‍್ಯಾಗ್ಸ್’ (ಸಿರಿವಂತಿಕೆಯಿಂದ ಚಿಂದಿಬಟ್ಟೆ ಸ್ಥಿತಿಗೆ ತಲುಪಿದ್ದು) ಆಯಿತು! ಬಾಲ್ಯ ಯೌವನಗಳಲ್ಲಿ `ಕೇಳುವವರಾರಿಹರು ನನ್ನ! ನಾನೇ ಈ ಲೋಕಕ್ಕೆ ಒಡೆಯ’ ಎಂಬಂತೆ ಬದುಕಿದ ಡಾನ್ ತನ್ನ ಮಧ್ಯವಯಸ್ಸು ಮತ್ತು ವೃದ್ಧಾಪ್ಯಗಳಲ್ಲಿ ಎರಡು ಹೊತ್ತಿನ ಊಟಕ್ಕೂ `ಏನು ಗತಿಯಪ್ಪಾ ದೇವರೇ’ ಎಂದು ಚಿಂತೆ ಮಾಡುವ ಪರಿಸ್ಥಿತಿಗೆ ಬಂದ! ಜೊತೆಗೆ ತನ್ನ ಪಾಡಿಗೆ ತಾನು ಏಕಾಂಗಿಯಾಗಿರುವ, ಯಾರೊಂದಿಗೂ ಹೆಚ್ಚು ಮಾತಾಡದ ಸ್ನೇಹದೂರ ಸ್ಥಿತಿಗೆ ಬಂದುಬಿಟ್ಟ.
ಜೋಷುವಾ ಮ್ಯಾಥ್ಯೂ ಮತ್ತು ಅವನ ವನ್ಯಪ್ರಿಯ ಗೆಳೆಯರು ಡಾನ್‌ನನ್ನು ಭೇಟಿ ಮಾಡಲು ಪ್ರಯತ್ನ ಮಾಡಿದ್ದು ಅವನು ಮೇಲೆ ವಿವರಿಸಿದಂತೆ, ಬದುಕಿಗೆ ವಿಮುಖನಾಗಿದ್ದ ಕೊನೆಕೊನೆಯ ವರ್ಷಗಳಲ್ಲಿ. ಹೀಗಾಗಿ ಅವರು ಅವನನ್ನು ಭೇಟಿ ಮಾಡಲು, ಮಾತಾಡಲು ತುಂಬ ಕಷ್ಟ ಪಡಬೇಕಾಯಿತು. ಆದರೆ ಇವರ ಗುಂಪಿನಲ್ಲಿನ ಒಬ್ಬರು ಡಾನ್ ಒಮ್ಮೆ ಆಸ್ಪತ್ರೆ ಸೇರಿದ್ದಾಗ ಆಸ್ಪತ್ರೆ ಖರ್ಚನ್ನು ತಾವೇ ಭರಿಸಿದ್ದರಿಂದ, ಆ ಋಣಕ್ಕೆ ಬಿದ್ದ ಡಾನ್ ಈ ಗೆಳೆಯರ ಗುಂಪಿನೊಂದಿಗೆ ನಿಧಾನಕ್ಕೆ ಮಾತಾಡಲು ಅವರೊಂದಿಗೆ ಒಡನಾಡಲು ಪ್ರಾರಂಭಿಸಿದ. ಇವರುಗಳು ತಾನು ಬೇಟೆಯಾಡಿದ್ದ ಸ್ಥಳಗಳಿಗೆ ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಆ ಅರಣ್ಯಾನುಭವವನ್ನು ಮತ್ತೆ ಆಸ್ವಾದಿಸಿ ಹಿರಿಹಿರಿ ಹಿಗ್ಗಿದ. ಅವನು 2014ರಲ್ಲಿ ಕೊನೆಯುಸಿರೆಳೆಯುವ ತನಕ ಈ ಗುಂಪು ಅವನ ಜೊತೆಗಿತ್ತು. ಮುಂದೆ ಜೋಶುವಾ ಮ್ಯಾಥ್ಯೂ ಡಾನ್ ಆಂಡರ್ಸನ್‌ರ ಜೀವನಕಥೆಯನ್ನು `ದ ಲಾಸ್ಟ್ ವ್ಹೈಟ್ ಹಂಟರ್’ ಎಂಬ ಹೆಸರಿನಲ್ಲಿ ಪುಸ್ತಕವಾಗಿ ಹೊರತಂದರು. ಅದನ್ನು `ಕೊನೆಯ ಬಿಳಿ ಬೇಟೆಗಾರ’ ಎಂಬ ಹೆಸರಿನಿಂದ ಕನ್ನಡಕ್ಕೆ ಅನುವಾದಿಸಿದ್ದು ನಿಮಗೆ ಈಗ ಈ ಕಥೆ ಹೇಳುತ್ತಿರುವ ಲೇಖಕಿ.
ಈ ಕಥೆಯನ್ನು ನಾನು ಹೇಳಿದ ಉದ್ದೇಶವೆಂದರೆ ಈಗಿನ ದಿನಮಾನಗಳಲ್ಲಿ ಒಂದು ವಿದ್ಯುನ್ಮಾನ ಸಮುದಾಯ(ಇ-ಕಮ್ಯೂನಿಟಿ)ಏನೆಲ್ಲ ಮಾಡಬಹುದು, ಎಂತೆಂತಹ ಹೊಸ ಅನುಭವಗಳನ್ನು ತನ್ನದಾಗಿಸಿಕೊಳ್ಳಬಹುದು ಹಾಗೂ ಒಂದು ಒಳ್ಳೆಯ ಸಾಹಿತ್ಯ ಕೃತಿಯೊಂದು ಹೊರಬರಲು ಕಾರಣ ಆಗಬಹುದು ಎಂಬುದನ್ನು ಪ್ರತ್ಯಕ್ಷೀಕರಿಸಲಿಕ್ಕಾಗಿ.
******
ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಮನುಷ್ಯರು ಹೀಗೆ ಆಸ್ಥೆಯಿಂದ ಸಂಪರ್ಕ ಇಟ್ಟುಕೊಳ್ಳುವುದನ್ನು ಗಮನಿಸಿದಾಗ ನನಗೆ ಕೆಲವು ವಿಷಯಗಳು ಹೊಳೆದವು. ಕೊನೆಗೂ ಮನುಷ್ಯರಿಗೆ ಮನುಷ್ಯರು ಬೇಕು. `ಮನುಷ್ಯ ಸಂಘಜೀವಿ’ ಎಂಬುದು ನಾವು ಶಾಲೆಯಲ್ಲಿ ಕಲಿತ ಮೊಟ್ಟಮೊದಲ ಸಮಾಜಶಾಸ್ತ್ರ ಪಾಠವಲ್ಲವೆ! ಮನುಷ್ಯನು ಒಂದು ಸಾಮಾಜಿಕ ಪ್ರಾಣಿ ಎಂದು ಜೀವಶಾಸ್ತ್ರ ಸಹ ನಮಗೆ ಕಲಿಸಿಕೊಟ್ಟಿದೆ. ಆದಿಮಾನವನು ಗುಹೆಗಳಲ್ಲಿ ಬದುಕು ಪ್ರಾರಂಭಿಸಿದಾಗ ಸಮುದಾಯಗಳಲ್ಲಿ ಬದುಕುತ್ತಿದ್ದ. ಮುಂದೆ ಹಳ್ಳಿಗಳ ಜೀವನ ಪ್ರಾರಂಭ ಆದಾಗ ಒಟ್ಟುಕುಟುಂಬಗಳ ಬದುಕು, ಮುಂದೆ ಕೈಗಾರಿಕಾ ಯುಗದಲ್ಲಿ ಮಧ್ಯಮವರ್ಗದ ಒಂಟಿ ಕುಟುಂಬಗಳ ಬದುಕು ಪ್ರಾರಂಭವಾದರೂ ಆ ಕುಟುಂಬಗಳೆಲ್ಲ ಒಂದು ವಸಾಹತು( ವಕ್ಕಲು – ಕಾಲನಿ)ಯಲ್ಲಿ ಬದುಕುತ್ತಿದ್ದರು ತಾನೆ. ಒಟ್ಟಿನಲ್ಲಿ ಮನುಷ್ಯ ಎಂಬ ಜೀವಿ ಈ ಭೂಮಿಯ ಮೇಲೆ ವಿಕಾಸಗೊಂಡಾಗಿನಿಂದ ಒಂದಲ್ಲ ಒಂದು ರೀತಿಯ ಸಮುದಾಯಗಳನ್ನು ಕಟ್ಟಿಕೊಂಡು ಬದುಕುತ್ತಿದ್ದಾನೆ. ಎಷ್ಟೇ ಜಗಳ, ಭಿನ್ನಾಭಿಪ್ರಾಯ, ಇರಿಸುಮುರಿಸು, ವೈಯಕ್ತಿಕ ಇಚ್ಛೆಗಳ ಬಲ್ಮೆ ಇದ್ದರೂ ನೆರೆಹೊರೆಯೋ, ವೃತ್ತಿ ಸಮುದಾಯವೋ, ಸ್ನೇಹಿತರ ಬಳಗವೋ, ನೆಂಟರಿಷ್ಟರ ಜೊತೆಗಾರಿಕೆಯೋ, ವಠಾರವೋ, ಅನೇಕ ಮನೆಘಟಕಗಳಿರುವ ಸಮುಚ್ಚಯಗಳೋ(ಅಪಾರ್ಟ್ಮೆಂಟ್)… ಒಟ್ಟಿನಲ್ಲಿ ಮನುಷ್ಯರಿಗೆ ಮನುಷ್ಯರ ಸಂಗ-ಸಹವಾಸ ಬೇಕು ಅಷ್ಟೆ. ಇದನ್ನು ಹೆಚ್ಚು ವಿವರಿಸುವ ಅಗತ್ಯ ಇಲ್ಲ ಅನ್ನಿಸುತ್ತೆ.
ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಒಂದು ವಿಶೇಷ ರೀತಿಯ ಅಂತರ್ಜಾಲ ಸಮುದಾಯಗಳು ಏರ್ಪಡುತ್ತಿವೆ. ಮಿಂಚಂಚೆ, ವಾಟ್ಸ್ಯಾಪ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಸಮಾನಮನಸ್ಕ ವ್ಯಕ್ತಿಗಳು ಸಾಹಿತ್ಯ, ಕ್ರೀಡೆ, ಪರ್ವತಾರೋಹಣ, ಮುದ್ದುಪ್ರಾಣಿ ಸಾಕಣೆ, ಅಡಿಗೆ, ಮುಂತಾದ ಅನೇಕ ವಿಷಯಗಳ ಬಗ್ಗೆ ಪರಸ್ಪರ ವಿಷಯಗಳನ್ನು ಹಂಚಿಕೊಂಡು ತಮ್ಮದೇ ಆದ ಆಪ್ತ ಸಮುದಾಯಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ವ್ಯಾಪಾರೀಲಾಂಛನ ಸಮುದಾಯಗಳು, ಬೆಂಬಲ ಸಮುದಾಯಗಳು, ಕಲಿಕಾ ಸಮುದಾಯಗಳು, ಜಾಲನಿರ್ಮಾಣ(ನೆಟ್‌ವರ್ಕಿಂಗ್) ಸಮುದಾಯಗಳು, ಸಾಮಾಜಿಕ ಸಮುದಾಯಗಳು, ಸ್ಥಳೀಯ ಸಮುದಾಯಗಳು, ಕಾರ್ಯೋನ್ಮುಖ ಸಮುದಾಯಗಳು (ಆಕ್ಷನ್ ಕಮ್ಯೂನಿಟೀಸ್) ಓದು ಸಮುದಾಯಗಳು, ಹೋರಾಟದ ಸಮುದಾಯಗಳು ಹೀಗೆ ಅನೇಕ ಇವೆ.
ತೀರ್ಮಾನರೂಪವಾಗಿ ಹೀಗೆ ಹೇಳಬಹುದು. ಜನರು ಎಂಥದ್ದೇ ಒತ್ತಡ, ವಾಹನ ದಟ್ಟಣೆ, ಸಮಯಾಭಾವಗಳಿದ್ದರೂ ಜನಸಂಪರ್ಕವನ್ನು ಹೊಂದಬೇಕು ಎಂದು ಮನಸ್ಸು ಮಾಡಿದರೆ ಅದಕ್ಕೆ ಅವಕಾಶ ಮಾಡಿಕೊಂಡೇ ಮಾಡಿಕೊಳ್ಳುತ್ತಾರೆ.
ವಿದ್ಯುನ್ಮಾನ ಸಮುದಾಯಗಳು `ಇಷ್ಟವಾದ ಒಂದು ಬಳಗದ ಜೊತೆ ಇರಬೇಕು’ ಎಂಬ ಮನುಷ್ಯನ ಪ್ರಾಚೀನ ಮತ್ತು ಸರ್ವಕಾಲಿಕ ಆಸೆಗೆ ಒಂದು ನೂತನ ಸಾಕ್ಷಿ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.