ಗಡಿಬಿಡಿಯಿಲ್ಲದ ರೆಡ್ ಕಾರ್ಪೆಟ್ ಹಾಸಿದ ಎತ್ತರದ ಪಾವಟಿಗೆಗಳ ಕಾನ್ ಫೆಸ್ಟಿವಲ್ ನಡೆಯುವ ಕಟ್ಟಡದ ಮುಂದೆ ಒಂದೆರಡು ಫೋಟೊ ಕ್ಲಿಕ್ಕಿಸಿ ಮುಂದೆ ಹೋದಾಗ ಅಲ್ಲಿ ಹಾರ್ಮೋನಿಯಂ ವಾದ್ಯ ನುಡಿಸುತ್ತಾ ನಿಂತ ವಯಸ್ಸಾದ ಕೆಂಚು ಮನುಷ್ಯನೊಬ್ಬ ಎಲ್ಲರ ಬಳಿ ಬಂದು ನೀಡಿದ ಹಣ ತೆಗೆದುಕೊಳ್ಳುತ್ತಿದ್ದ. ನೈಜೀರಿಯಾದ ಒಂದು ತಂಡ ನಮ್ಮ ಕಡೆಯಂತೆ ದೊಂಬರಾಟವನ್ನು ನಡೆಸುತ್ತಾ ಅವರ ದುಡಿಯನ್ನು ನುಡಿಸುತ್ತಿದ್ದರು. ದೀಪಾಲಂಕಾರ ಝಗಮಗಿಸದೆ ಕೇವಲ ಸರ್ಕಲ್ ಗಳಲ್ಲಿ ಮಾತ್ರ ಮಿನುಗುತಿತ್ತು. ಅದೊಂದು ಥೇಟ್ ಜಾತ್ರೆಯೇ! ಮೊದಲನೇ ಬಾರಿ ನೋಡುತ್ತಿದ್ದ ನಮಗೆ ಅದು ಹೊಸದಾಗೇನೂ ಅನ್ನಿಸದೆ ಜಗತ್ತಿನ ಭಿನ್ನತೆಯಲ್ಲಿ ಏಕತೆಯನ್ನು ಕಾಣಿಸುತಿತ್ತು.
ಹೆಚ್. ಆರ್. ಸುಜಾತಾ ತಿರುಗಾಟ ಕಥನ

 

ನೀಸ್ ವಿಮಾನ ನಿಲ್ದಾಣದಲ್ಲಿ ಕರೆದೊಯ್ಯಲು ಬಂದಿದ್ದ ಕಪ್ಪು ಐಶಾರಾಮಿ ಕಾರಿನ ದಢೂತಿ ಒಡತಿ ಧಡಧಡನೆ ನಮ್ಮ ದೊಡ್ಡ ದೊಡ್ಡ ಲಗೇಜ್ ಬ್ಯಾಗುಗಳನ್ನು ಅವಳ ಕಾರಿನ ಡಿಕ್ಕಿಯಲ್ಲಿ ಏರಿಸಿ ನಮಗೆ ಚಾಕೊಲೇಟ್ ಹಾಗೂ ನೀರಿನ ಡಬ್ಬಿಗಳನ್ನು ನೀಡಿ ಧಡಧಡನೆ ಕುಂತು ಕಾರನ್ನು ಓಡಿಸತೊಡಗಿದಳು. ಆ ಊರಿನಲ್ಲಿ ಹೆಣ್ಣು-ಗಂಡು ಸಮನಾಗಿ ದುಡಿಮೆಯಲ್ಲಿರುತ್ತಾರೆ.

ಕಾರು ಜನಜಂಗುಳಿಯಿಲ್ಲದ ರಸ್ತೆಯಲ್ಲಿ ಓಡುತ್ತಾ ಅರ್ಧ ಗಂಟೆಯಲ್ಲಿ ಹೋಟೆಲ್ ಮುಂದೆ ನಿಂತಿತು. ಹೋಟೆಲ್ಲಿನಲ್ಲಿ ಅಪರಿಚಿತ ಊಟದ ರುಚಿ ನೋಡಿದ್ದೆ ನಮ್ಮ ನಾಲಿಗೆ ಸಪ್ಪಗಾಯಿತು. ಮಸಾಲೆಯಿಲ್ಲದ ಮೀನು, ಮಾಂಸ, ಕೋಳಿ ಆಹಾರವಾಗಿ ಮುಂದಿದ್ದವು. ತರಕಾರಿಯೆಂಬ ಅವರ ಸೊಪ್ಪುಸದೆಗಳು ಪ್ಲೇಟಿನ ತುಂಬ ತರಕಾರಿ ತೋಟದಂತೆ ಬಂದು ಕುಳಿತಿದ್ದವು. ಇನ್ನು ಆಲೂ ಫಿಂಗರ್ ಚಿಪ್ಸ್ ಎಂದು ಕುಕ್ಕೆ ತುಂಬಿ ಕೊಡುವ ಅಲ್ಲಿನ ಫ್ರೆಂಚ್ ಫ್ರೈಸ್ ಎನ್ನುವ ನೇಟಿವ್ ಖಾದ್ಯ. ಜೊತೆಗೆ ಅವರ ಭಿನ್ನ ರುಚಿಯ ಸಾಸ್ ಗಳು.

ಆಗಲೇ ನಮ್ಮೂರಿನಿಂದ ಹೊರಟು ಹದಿನಾರು ಗಂಟೆಗಳು ಕಳೆದಿದ್ದವು. ಹಸಿವಿನ ಪರಿಹಾರಕ್ಕೆ ನಮ್ಮ ತಡಕಾಟಕ್ಕೆ ಅಲ್ಲಿನ ಹದಿಹರಯದ ಹುಡುಗಿಯರು, ಹುಡುಗರು, ಪರಿಚಾರಿಕೆಗಾಗಿ ಚೂಟಿಯಾಗಿ ನಮ್ಮ ಸುತ್ತ ಏನೇನನ್ನೋ ತೋರುತ್ತ, ಇಡೀ ಮುಖ ಕಣ್ಣುಗಳಲ್ಲಿ ನಮ್ಮನ್ನು ಅರ್ಥೈಸುತ್ತ ಓಡಾಡುತ್ತಿದ್ದರು. ಏನೋ ಒಂದು ತಿಂದು ರೂಮ್ ಸೇರಿದಾಗ ಗಂಟೆ ೪. ಗಡಿಬಿಡಿಯಲ್ಲಿ ಒಂದು ಗಂಟೆಯೊಳಗೆ ಹೊರಟು ಮಾರನೇ ದಿನದಿಂದ ಶುರುವಾಗುವ ಕಾನ್ಸ್ ಜಾತ್ರೆ ತಯ್ಯಾರಿಯನ್ನು ಕಾಣಲು ಹೋದೆವು. ಅಲ್ಲಿ ಝಗಮಗಿಸುವ ದೀಪಾಲಂಕಾರಕ್ಕಿಂತ ಹೆಚ್ಚಾಗಿ ಸ್ವಚ್ಚ ಸುಂದರ ರಸ್ತೆ ರಸ್ತೆಯಲ್ಲೂ ಹೂವು ಗಿಡಗಳು ಕಣ್ಸೆಳೆಯುತ್ತ ಜೇಂಗೊಡಗಳಾಗಿದ್ದವು.

ಕೇನ್ಸ್ ಫೆಸ್ಟಿವಲ್ ನಡೆಯುವ ಅಂಗಳದಲ್ಲಿ ಪೋಲೀಸರ ಕಪ್ಪು ಡ್ರೆಸ್ಸಿನಲ್ಲಿ ಫ್ರೆಂಚರ ಮೈಬಣ್ಣ ಫಳಫಳನೆ ಹೊಳೆಯುತಿತ್ತು. ಅವರ ಐಶಾರಾಮಿ ಕಾರು, ಬೈಕ್ ಗಳು ಕೂಡಾ ಕಪ್ಪು ಬಣ್ಣದವು. ರೆಡ್ ಕಾರ್ಪೆಟ್ ಮೇಲೆ ನಡೆಯಲು ಬರುವ ತಾರೆಯರ ದಂಡು ಬಂದಿಳಿಯುವುದೂ ಇಂಥ ಕೋಟಿ ಕೋಟಿ ಬೆಲೆಯ ಕಪ್ಪು ಕಾರುಗಳಲ್ಲೇ. ಅವರು ಕಪ್ಪು ಬಣ್ಣದ ಸೂಟ್, ಕಪ್ಪು ಬಣ್ಣದ ಗೌನ್, ಫ್ರಾಕುಗಳಲ್ಲಿ, ಕೆಂಪು ಉಡುಪಿನಲ್ಲಿ ಮಿಂಚುವುದೇ ಹೆಚ್ಚು. ಬಹುಶಃ ಅವರ ಮೈ ಬಣ್ಣಕ್ಕೆ ತಕ್ಕ ಬಣ್ಣಗಳನ್ನವರು ಆರಿಸಿಕೊಳ್ಳುತ್ತಾರೇನೋ… ಮತ್ತಲ್ಲಿಯ ತಣ್ಣನೆ ಉಷ್ಣಾಂಶದ ಕಾರಣವೂ ಇರಬಹುದು.

ನಡುನಡುವೆ ಇವರಿಗಿಂತ ಗಟ್ಟಿಮುಟ್ಟಾಗಿದ್ದ ಕಪ್ಪು ಜನರು ಇವರೊಂದಿಗೆ ಕಾವಲು ಪಡೆಯಲ್ಲಿ ೧/೩ ಭಾಗದಷ್ಟಿದ್ದರು. ಎದುರಿನ ರಸ್ತೆಯಲ್ಲಿ ಎಲ್ಲ ದೇಶದ ಜನಜಂಗುಳಿಯಿದ್ದರೂ ಗಡಿಬಿಡಿಯಿರಲಿಲ್ಲ. ರಸ್ತೆಬದಿಯ ರೆಸ್ಟೋರೆಂಟ್ ಗಳು ಒಪ್ಪ ಓರಣದಲ್ಲಿ, ಕಂಟ್ರಿ ಸೈಡಿನ ಚೆಲುವಲ್ಲಿ ದಾರಿಯುದ್ದಕ್ಕೂ ತೆರೆದುಕೊಂಡು ಬರುವ ಜನರನ್ನು ತಣಿಸಲು ಸಜ್ಜಾಗಿದ್ದವು. ರಾಜಬೀದಿಯ ಬ್ರಾಂಡ್ ಅಂಗಡಿಗಳು ಬರುವ ಶ್ರೀಮಂತ ಜನರ ಬೇಡಿಕೆಗೆ ಸಜ್ಜಾಗುತ್ತಿದ್ದವು.

ಗಡಿಬಿಡಿಯಿಲ್ಲದ ರೆಡ್ ಕಾರ್ಪೆಟ್ ಹಾಸಿದ ಎತ್ತರದ ಪಾವಟಿಗೆಗಳ ಕಾನ್ ಫೆಸ್ಟಿವಲ್ ನಡೆಯುವ ಕಟ್ಟಡದ ಮುಂದೆ ಒಂದೆರಡು ಫೋಟೊ ಕ್ಲಿಕ್ಕಿಸಿ ಮುಂದೆ ಹೋದಾಗ ಅಲ್ಲಿ ಹಾರ್ಮೋನಿಯಂ ವಾದ್ಯ ನುಡಿಸುತ್ತಾ ನಿಂತ ವಯಸ್ಸಾದ ಕೆಂಚು ಮನುಷ್ಯನೊಬ್ಬ ಎಲ್ಲರ ಬಳಿ ಬಂದು ನೀಡಿದ ಹಣ ತೆಗೆದುಕೊಳ್ಳುತ್ತಿದ್ದ. ನೈಜೀರಿಯಾದ ಒಂದು ತಂಡ ನಮ್ಮ ಕಡೆಯಂತೆ ದೊಂಬರಾಟವನ್ನು ನಡೆಸುತ್ತಾ ಅವರ ದುಡಿಯನ್ನು ನುಡಿಸುತ್ತಿದ್ದರು. ದೀಪಾಲಂಕಾರ ಝಗಮಗಿಸದೆ ಕೇವಲ ಸರ್ಕಲ್ ಗಳಲ್ಲಿ ಮಾತ್ರ ಮಿನುಗುತಿತ್ತು. ಅದೊಂದು ಥೇಟ್ ಜಾತ್ರೆಯೇ! ಮೊದಲನೇ ಬಾರಿ ನೋಡುತ್ತಿದ್ದ ನಮಗೆ ಅದು ಹೊಸದಾಗೇನೂ ಅನ್ನಿಸದೆ ಜಗತ್ತಿನ ಭಿನ್ನತೆಯಲ್ಲಿ ಏಕತೆಯನ್ನು ಕಾಣಿಸುತಿತ್ತು. ಆದರೂ ಅವರ ಒಂದು ಯೂರೋಗೆ ನಮ್ಮ ಎಪ್ಪತ್ತು ಪಟ್ಟು ಕರೆನ್ಸಿ ತೆಗೆದುಕೊಳ್ಳುವ ದುಡ್ಡಿನ ಲೆಕ್ಕಾಚಾರ ಮಧ್ಯೆ ಮಧ್ಯೆ ತಲೆಗೆ ಬಂದು ನಿಂತು ನಮ್ಮ ಮನಸ್ಸು ಗುಣಾಕಾರ ಶುರು ಮಾಡುತ್ತಿತ್ತು.

ಅಲ್ಲಿನ ಜನಸಂಖ್ಯೆ ಕೇವಲ ೪೦೦೦೦ ಎಂದು ಹೇಳಿದರು. ಕಡಲ ಬದಿಯಲ್ಲೇ ಉದ್ದಕ್ಕೆ ಅಂಗಡಿ ತೆರೆದ ಆ ಚಿಕ್ಕ ಊರಿನ ಅಕ್ಕಪಕ್ಕದ ಆಂಟೀಬ್ಸ್, ಬೀಫ್ಸ್, ನೀಸ್ ಎಲ್ಲವೂ ಪ್ರವಾಸಿಗಳ ಉಪಚಾರಕ್ಕೆ ಮೈಕೊಡವಿ ಎದ್ದು ನಿಂತಿದ್ದವು. ಕೇನ್ಸ್ ನಲ್ಲಿ ಆಗಷ್ಟೇ ಕೊರೆಯುವ ಚಳಿಗಾಲ ಮುಗಿದು ೧೫ ಡಿಗ್ರಿಯ ಹಿತಕರ ವಾತಾವರಣವಿತ್ತು. ಚಳಿಗೆ ಮೈ ಮುಚ್ಚಿಕೊಂಡಿದ್ದಕ್ಕೋ ಏನೋ ಎಂಬಂತೆ ಅಲ್ಲಿನ ಹೆಣ್ಣುಮಕ್ಕಳು ಬಟ್ಟೆಯನ್ನು ಕಿತ್ತೆಸೆದವರಂತೆ ಹದ ಬಿಸಿಲಿಗೆ ಮೈಮರೆತು ತಮ್ಮ ಬಣ್ಣದ ಬಟ್ಟೆಗಳಲ್ಲಿ ಚಿಟ್ಟೆಗಳಂತೆ ಓಡಾಡುತ್ತಿದ್ದರೆ ಅವರ ಊರಿನ ಅಂಗಳ, ರಸ್ತೆ, ಮನೆಗಳಲ್ಲೆಲ್ಲ ನೆಟ್ಟ ಗಿಡಗಳಲ್ಲಿ ಗಾಢ ಬಣ್ಣದ ಹೂವುಗಳರಳಿ ಹಚ್ಚಗೆ ಬಣ್ಣದ ರಂಗೋಲಿಯಾಗಿದ್ದವು.

ಹದ ವಾತಾವರಣ ಬಣ್ಣಗಳಿಗೆ ಗಾಢತೆ ಬಂದಿತ್ತು. ಸಣ್ಣ ಸಣ್ಣ ಹುಲ್ಲಿನ ನಡುವೆಯೂ ಗೆಡ್ಡೆಗಳಿಂದ ಹೂಗಳು ತಮ್ಮ ಮೋರೆಗಳನ್ನು ನೂಕಿ ಕಾಡುಗಿಡಗಳಿಗೂ ಬೆರಗು ಕೊಟ್ಟಿತ್ತು. ಎತ್ತ ನೋಡಿದರತ್ತ ಹಚ್ಚನೆಯ ಹಸಿರು. ನಿಸರ್ಗದತ್ತ ಬೇಲಿಯಲ್ಲಿ ಬಳ್ಳಿಗಳು ಮೈಮರೆತು ಜೋತು ಬಿದ್ದಿದ್ದವು. ಅವರ ಹಸಿರು ಹಾಗೂ ಹೂವಿನ ಪ್ರೀತಿ ಪ್ರತಿ ಮನೆಮನೆಯಲ್ಲೂ… ಬೀದಿಬೀದಿಯಲ್ಲೂ… ಕಾಣುತಿತ್ತು. ನೋಡಿ ನೋಡಿ ದಣಿಯಿರಿ ಅರಿಯದ ಊರಿನ ಚೆಂದವನ್ನು ಅಂದು ನೋಡುತ್ತಲೇ ಇದ್ದ ನಮ್ಮ ಕಣ್ಣುಗಳಿಗೆ ಆ ಸೂರ್ಯದೇವ ಕತ್ತಲು ಕರುಣಿಸಿದ್ದು ರಾತ್ರಿ ೯ ಗಂಟೆಗೆ. ರಾತ್ರಿ ತಡವಾದ ಕಾರಣ ಸಿಕ್ಕಿದ್ದು ತಿನ್ನಬೇಕಾಗಿತ್ತು. ನಮ್ಮ ಹಾಸನ ಸೀಮೆಯ ರೊಟ್ಟಿಯನ್ನೇ ಗಟ್ಟಿಯೆಂದು ಪೇಚಾಡಿಕೊಂಡು ಮೃದು ಇಡ್ಲಿಗೂ ಒಮ್ಮೊಮ್ಮೆ ಬೇಸರಿಸಿ ವಿವಿಧ ಅನ್ನ ಖಾದ್ಯಗಳಲ್ಲೇ ಸಂತೃಪ್ತಿ ಹೊಂದುವ ಮೈಸೂರು ಸೀಮೆಯ ನನ್ನ ಗಂಡನ ಸಪ್ಪೆ ಮುಖವನ್ನು ಹೋಟೆಲ್ಲಿನಲ್ಲಿ ನೋಡಿದರೆ ನಗು ಉಕ್ಕುವಂತಿತ್ತು.

ಅಲ್ಲಿ ನಮ್ಮ ಹೊಟ್ಟೆಗೆ ಸಿಕ್ಕ ಇಟ್ಟಿಗೆಯಷ್ಟು ಗಟ್ಟಿಯಾದ ಬ್ರೆಡ್ ಜೊತೆಗೆ ಎಂಥದ್ದೋ ನಮಗೆ ತಿಳಿಯದ ಖಾದ್ಯವೊಂದನ್ನು ಮೆನುಕಾರ್ಡನಲ್ಲಿ ತೋರಿ ಸೇರದ ರುಚಿಯನ್ನು ನಿಸ್ಸಾರವಾಗಿ ಉಂಡು, ನಾಳೆಯ ಸಿನಿಮಾ ಜಾತ್ರೆಯ ಕನಸ್ಸಿನಲ್ಲಿ ಬಂದು ಮಲಗಿದೆವು. ರಾತ್ರಿ ಹನ್ನೊಂದು ಆದರೂ ಕರಿ ಕತ್ತಲು ಕವಿಯದೆ ಅರೆಬರೆ ಬೆಳಕೇ..

ಆ ಸಂಜೆಯಲ್ಲಿ ಹಿಪ್ಪಿಗಳಂತೆ ಆದಿಕಾಲದ ಹಾಲಿವುಡ್ ಸಿನಿಮಾದ ಹೀರೋಗಳಂತೆ ವೇಷ ಹಾಕಿದ್ದ ನಟರ ಗುಂಪೊಂದು ನಿಂತು ಜನರ ಜೊತೆಯಲ್ಲಿ ಪಟ ತೆಗೆಸಿಕೊಳ್ಳುತ್ತಿದ್ದುದು ನಿದ್ದೆಗಾಗಿ ಮುಚ್ಚಿದ ಕಣ್ಣಲ್ಲಿ ಮಂಪರಿನಂತೆ ತೆರೆದುಕೊಂಡಿತ್ತು. ನಮ್ಮ ಬಯಲಾಟದ ರಾಮ ಹನುಮಂತರ ವೇಷಗಳು ತ್ರೇತಾಯುಗದಿಂದ ಎದ್ದುಬಂದು ಮನೆಬಾಗಿಲಲ್ಲಿ ನಿಂತು ಪದಗಳನ್ನು ಹೇಳಿ ಕಾಸು ಈಸಿದುಕೊಂಡು ಹೋಗುವಂತೆಯೇ ಅನ್ನಿಸಿದರು.

ಎದುರಿನ ರಸ್ತೆಯಲ್ಲಿ ಎಲ್ಲ ದೇಶದ ಜನಜಂಗುಳಿಯಿದ್ದರೂ ಗಡಿಬಿಡಿಯಿರಲಿಲ್ಲ. ರಸ್ತೆಬದಿಯ ರೆಸ್ಟೋರೆಂಟ್ ಗಳು ಒಪ್ಪ ಓರಣದಲ್ಲಿ, ಕಂಟ್ರಿ ಸೈಡಿನ ಚೆಲುವಲ್ಲಿ ದಾರಿಯುದ್ದಕ್ಕೂ ತೆರೆದುಕೊಂಡು ಬರುವ ಜನರನ್ನು ತಣಿಸಲು ಸಜ್ಜಾಗಿದ್ದವು. ರಾಜಬೀದಿಯ ಬ್ರಾಂಡ್ ಅಂಗಡಿಗಳು ಬರುವ ಶ್ರೀಮಂತ ಜನರ ಬೇಡಿಕೆಗೆ ಸಜ್ಜಾಗುತ್ತಿದ್ದವು.

ದಿಢೀರನೆ ಭೂತಕಾಲವೊಂದು ಕಥೆಯಿಂದ ಎದ್ದುಬಂದು ವರ್ತಮಾನದ ಎದುರು ನಿಂತು ಬಾಳಿಹೋದ ನಂಬಿಕೆಗಳನ್ನು ಮರುಕಳಿಸುವುದು ಮನುಜನ ರಕ್ತಕಣದಲ್ಲಿ ಅಂತರ್ಗತವಾಗಿರುತ್ತದೆನೋ ಎಂದನ್ನಿಸಿತು. ಯಾವುದು ದಿಟ? ಯಾವುದು ಸಟೆ? ಕತ್ತಲು ಸಮುದ್ರವನ್ನು ತೂಗುತ್ತಿದ್ದಂತೆ… ನಮ್ಮನ್ನೂ ಹೊಸ ಊರಿನ ಕಡಲು ತೆಕ್ಕೆಗೆ ಹಾಕಿಕೊಂಡು ತೂಗಿತು. ಅದರ ಮರ್ಮರ ಶಬ್ಧದಿಂದಾಚೆಗೆ ಅಲ್ಲೇನೂ ಇರಲಿಲ್ಲ.
ನಿದ್ದೆ ಮುಗಿದು ಎಚ್ಚರಾದಾಗಲೂ ಬೆಳಕೇ… ಸ್ವಚ್ಚಂದ ಸಮುದ್ರ ನೀಲಿ, ಆಗಸದ ನೀಲಿ, ಹೆಚ್ಚು ಜನವಿಲ್ಲದ ಸ್ವಚ್ಚ ರಸ್ತೆ. ಎಲ್ಲಿ ನೋಡಿದರೂ ವೀಕೆಂಡ್ ಆರಾಮಿಗೆ ಬಂದ ಕುಟುಂಬ. ಬಿಸಿಲಿಗೆ… ನೀರಿಗೆ…. ಮೈ ತೆರೆದ ಮಕ್ಕಳು, ತಾಯಿ ತಂದೆಯರು. ಸದ್ದಿಲ್ಲದೆ ಅಡ್ಡಾಡುವ ಕುಟುಂಬಗಳು ಹಾಗೂ ನೂಕುವ ಕೈಗಾಡಿಯಲ್ಲಿ ಮಲಗಿಸಿದ ಎಳೆ ಹಸುಳೆಗಳು.

ಅಲ್ಲಿರುವಷ್ಟು ದಿನವೂ ಸಿಕ್ಕಸಿಕ್ಕಲ್ಲಿ ಮುತ್ತಿಡುವ ಹೆಣೆದುಕೊಂಡ ಜೋಡಿಗಳು ಸಿಕ್ಕೇ ಸಿಗುತ್ತಿದ್ದರು. ಅಲ್ಲಿನ ಜನರು ಯಾರನ್ನೂ ತಿರುಗಿ ಕೂಡ ನೋಡದೆ ಅವರ ಪಾಡಿಗೆ ಅವರಿರುತ್ತಿದ್ದರು. ಅಲ್ಲಿ ನಮ್ಮ ಭಾರತೀಯ ಕಣ್ಣುಗಳಿಗಿರುವ ಕುತೂಹಲದಲ್ಲಿ ಕಂಡ ಒಂದು ಸತ್ಯಾಂಶ ಏನಪ್ಪ ಅಂದ್ರೆ… ಕಪ್ಪು ಹುಡುಗ ಕೆಂಪು ಹುಡುಗಿಯ ಜೋಡಿಗಳೇ ಇಲ್ಲಿ ಹೆಚ್ಚಾಗಿ ಅಂಟಿಕೊಂಡಿರುತ್ತಾರೆ. ಆ ಕಪ್ಪು ಹುಡುಗರು ಆ ಕೆಂಚು ಹುಡುಗಿಯರನ್ನು ಆರಾಧಿಸುವವರಂತೆ ಕಾಣುತ್ತಿರುತ್ತಾರೆ. ಇಂಥ ಜೋಡಿಯ ನಡುವೆ ಪ್ರೇಮದ ಆಕ್ರಮಣಶೀಲತೆ ಕಡಿಮೆ. ಕೆಂಪು ಹುಡುಗಿಯರು ಹತ್ತಿರಕ್ಕೆ ಬಂದಷ್ಟೂ ಕಪ್ಪು ಹುಡುಗರು ಹೆಮ್ಮೆಯಿಂದ ಬೀಗುವ ಮುಗುಳುನಗೆಯ ಒಂದು ಸಾರ್ವಜನಿಕ ಸಂಕೋಚದಲ್ಲಿ ಮುದುರಿಕೊಂಡೇ ಅವರನ್ನು ಮೆಲುವಾಗಿ ಬಳಸಿ ಹಿಡಿದಿರುತ್ತಾರೆ. ಆ ದೇಶದಲ್ಲಿರುವಂತೆ ಪ್ರೇಮದಲ್ಲಿ ಎಲ್ಲೆಂದರಲ್ಲಿ ಮೈಮರೆಯಲು ಇವರು ಹಿಂಜರಿಯುವಂತೆ ಕಾಣಿಸುತ್ತಾರೆ.

ಆದರೆ, ಕಪ್ಪು- ಕಪ್ಪು ಜೋಡಿಗಳು, ಕೆಂಪು -ಕೆಂಪು ಹುಡುಗ ಹುಡುಗಿಯರು, ಮೆಟ್ರೋ ರೈಲ್ವೇ ಪ್ಲಾಟ್ ಫಾರ್ಂ ಮೇಲಿಂದ ಹಿಡಿದು ರಸ್ತೆ ಬದಿವರೆಗೂ ಮೈಮರೆತು ತಮ್ಮ ನಿಶೆಯನ್ನು ಹೆಣೆಯಾಡುವ ಹಾವಿನಂತೆ ನುಲಿಯುತ್ತಿರುತ್ತಾರೆ. ಕೈ ಬೀಸಿ ಬೀಳ್ಕೊಡುತ್ತಿರುತ್ತಾರೆ. ಅಲ್ಲಿಯ ಜನರು ಇದಕ್ಕೆಲ್ಲ ಸೊಪ್ಪು ಹಾಕದೆ ತಲೆ ಕೆಡಿಸಿಕೊಳ್ಳದೆ ಸುಮ್ಮನಿರುತ್ತಾರೆ.

ವರ್ಣಭೇದಗಳು ಮೈ ಬಿಡುವುದು ಅಷ್ಟು ಸುಲಭವಲ್ಲ ಅನ್ನಿಸಿತು. ಆದರೂ ೩೦ ಭಾಗದಷ್ಟು ತುಂಬಿರುವ ಕರಿಯರನ್ನು ಈ ಕೆಂಪು ಬೆಡಗಿಯವರು ಇಷ್ಟಪಟ್ಟೇ ಮದುವೆಯಾಗುತ್ತಾರೆ ಎಂದು ಗೊತ್ತಿರುವವರು ಹೇಳುತ್ತಿದ್ದರು. ಇದಕ್ಕೆ ಕನ್ನಡಿ ಹಿಡಿದಂತೆ ಕಾನ್ಸ್ ನ ಮುಖ್ಯ ಬೀದಿಯಲ್ಲಿ ಒಂದು ಕಪ್ಪು ಕೆಂಪು ಜೋಡಿ ಸಿಕ್ಕಿತು. ಅವರು ಹಿಡಿದಿದ್ದ ಕೈಗಾಡಿಯಲ್ಲಿ ಮುದ್ದಾಗಿರುವ ಎರಡು ಬಣ್ಣದ ಮಕ್ಕಳು. ಒಂದು ಅಪ್ಪನ ಬಣ್ಣ ಇನ್ನೊಂದು ಅಮ್ಮನ ಬಣ್ಣ. ಅವಳಿಜವಳಿ ಮುದ್ದು ಮಕ್ಕಳು. ತಂದೆತಾಯಿಯಷ್ಟೇ ಲಕ್ಷಣವಾಗಿದ್ದವು. ನಾವು ಮುದ್ದಿಸಿದಾಗ ಇಬ್ಬರಲ್ಲೂ ತೆಳುವಾಗಿ ಹೆಮ್ಮೆ ಮೂಡಿತು. ಇಬ್ಬರೂ ನಕ್ಕರು.

ಕಲೋನಿಯಲ್ ಕಾಲದಲ್ಲಿ ಕೆಂಪು ಜನರೊಂದಿಗೆ ಪರಿಚಾರಿಕೆಗೆ ಬಂದು ನೆಲೆಯಾದ ಕರಿಯರಿವರು. ಅವರು ಇಲ್ಲಿ ನೆಲೆಯೂರದೆ ಮತ್ತೆಲ್ಲಿ ನೆಲೆಯಾಗಬೇಕು ಎಂದು ಸಾಮಾಜಿಕ ನ್ಯಾಯದ ಬಗ್ಗೆ ನಮ್ಮ ಹೋಟೆಲ್ಲಿನ ಮ್ಯಾನೇಜರ್ ಶ್ರೀಲಂಕಾದವರು ಹೇಳುತ್ತಿದ್ದರು. ಅವರನ್ನು ಕರೆತಂದ ಕಾರಣಕ್ಕಾಗಿ ಈಗಿವರು ತಮ್ಮ ಹೆಣ್ಣುಗಳನ್ನು ಆ ಸಮುದಾಯಕ್ಕೆ ಬಿಟ್ಟು ಕೊಡಲೇಬೆಕಾಗಿದೆ. ಹಾಗೂ ಕರಿಯರ ವಿದ್ಯೆ ಅವರನ್ನು ನೆಲೆಯಾಗಿಸುತ್ತ ಘನತೆಯೆಡೆಗೆ ಒಯ್ಯುತ್ತಿದೆ. ಅವರ ಗಾತ್ರ ಎತ್ತರಕ್ಕೆ ತಕ್ಕಂತೆ ಆದಷ್ಟೂ ದೇಶ ಕಾಯುವ ಪೋಲೀಸ್ ಪಡೆಯಲ್ಲಿ ಅವರು ಹೆಚ್ಚುಹೆಚ್ಚು ಕಾಣಸಿಗುತ್ತಾರೆ. ಹಾಗೇ ಕೆಳವರ್ಗದ ಕಾಯಕದಲ್ಲೂ… ಇಲ್ಲಿ ಎಲ್ಲ ವರ್ಣದ ಯುವ ಸಮೂಹದಲ್ಲಿ ಡ್ರಗ್ಸ್ ವಾಸನೆ, ಕುಡಿತಗಳು ನಿರ್ಭಿಡೆಯಾಗಿರುವುದು ಕಾಣುತ್ತದೆ. ಕುಡಿತ, ಡ್ರಗ್ಸ್, ಧೂಮಪಾನ ಯೂರೋಪ್ ದೇಶದಲ್ಲಿ ಕಣ್ಣಿಗೆ ಕಟ್ಟುತ್ತದೆ. ಯೋಚನೆಯಲ್ಲಿ ನಿದ್ದೆ ಆವರಿಸಿತ್ತು.

ನಾವು ಬೆಳಿಗ್ಗೆ ಎದ್ದವರೇ ವೇಗದ ತಯ್ಯಾರಿ ನಡೆಸಿ ರೆಸ್ಟೋರೆಂಟ್ ಕೊಟ್ಟ ಪುಕ್ಕಟೆ ಉಪಚಾರದ ಬ್ರೇಕ್ಫಾಸ್ಟ್ ನಲ್ಲಿ ನಮ್ಮ ರೆಸ್ಟೋರಿನಂಥದ್ದೇ ಬ್ರೆಡ್, ಜೇನು, ಜಾಮ್. ಕಾಫೀ ಟೀ ಹಣ್ಣಿನ ರಸಾಯನಗಳಿದ್ದರೂ ಬಿಸಿಬಿಸಿಯಾದ ವಿಧವಿಧವಾದ ನಳಪಾಕವಿಲ್ಲದೆ ತೆಪ್ಪಗೆ ತಣ್ಣಗಿನ ಜೇನು ಚೀಸು ಸವರಿ ಬನ್ನು ಬ್ರೆಡ್ ನಲ್ಲಿ ಹೊಟ್ಟೆ ತುಂಬಿಸಿ ಹೊರಟೆವು.

ಒಂದೆರಡು ದಿನ ಐಶಾರಾಮಿ ಕಾರಿನಲ್ಲಿ ಹೋಗಿ ಜಾತ್ರೆಯಂಗಳದಲ್ಲಿ ಇಳಿದರೂ ಎಂಬತ್ತೈದು ಯೂರೋ ಕೊಟ್ಟಿದ್ದೇ… ಸರಿ! ಕೇವಲ ಇಪ್ಪತ್ತು ಮೈಲಿಗೆ ೫೫೦೦ ರೂಗಳಾದವಲ್ಲ ಎಂದು ಗುಣಾಕಾರ ಹಾಕಿದ್ದೇ ನಾಳೆಯಿಂದ ಮೆಟ್ರೋಲಿ ಓಡಾಡೋಣ ಎಂಬ ಒಮ್ಮತದ ತೀರ್ಮಾನಕ್ಕೆ ಬಂದೆವು.

ಫೆಸ್ಟಿವಲ್ ಅಂಗಳದಲ್ಲಿ ಕ್ಯೂ ಹಾಗೂ ಎಲ್ಲಾ ನಿಯಮಾವಳಿಯನ್ನು ಪಾಲಿಸಿ ನಮ್ಮೂರಿನ ಕೋಡನ್ನು ಅವರ ವಶದಲ್ಲಿಟ್ಟು ಅವರು ಹೇಳಿದಂತೆ ಕೇಳುತ್ತಾ ಮುಂದುವರೆದು ಕೈಕಾಲುಗಳನ್ನೆತ್ತಿ ಜಪ್ತಿ ಮಾಡಿಸಿಕೊಂಡು ಅಲ್ಲಿನ ಜನರ ನಗುಮೊಗದ ಸ್ವಾಗತವನ್ನು ಕಾಣುತ್ತಾ ಪಾಸ್ ತೆಗೆದುಕೊಂಡು ಒಳಹೋದೆವು. ಎಲ್ಲೆಲ್ಲೂ ರೆಡ್ ಕಾರ್ಪೆಟ್ಟಿನ ಮೌನದ ಸ್ವಾಗತ. ಮೇಲ್ಛಾವಣಿಯಲ್ಲಿ ವಿದ್ಯುತ್ ದೀಪಾಲಂಕಾರ ಸಹಜ ಸುಂದರವಾಗಿತ್ತು. ಎಲ್ಲೆಡೆಯೂ ತಣ್ಣಗಿನ ಸ್ವಚ್ಚ ವಾತಾವರಣ. ಜಗತ್ತಿನಾದ್ಯಂತ ಬಂದು ಸಿನಿಮಾರ್ಕೆಟ್ ಗಳು ಅವರವರ ಮಳಿಗೆಗಳಲ್ಲಿ ಗಂಭೀರವಾಗಿ ವ್ಯವಹರಿಸುತ್ತಿದ್ದವು.

ಸಿನಿಮಾಸಕ್ತರು ಕಂಪ್ಯೂಟರ್ ವಾಲ್ ಮೇಲೆ ಬೆರಳಾಡಿಸುತ್ತ ತಮ್ಮ ಸರದಿಗೆ ಕಾದು ನಿಂತಿದ್ದರು. ಅಲ್ಲಿ ಕ್ರಿಯಾಶೀಲರಾದ ವಾಲೆಂಟರ್ಸ್ ಗಳು ಗಡಿಬಿಡಿಯಲ್ಲಿದ್ದರೆ, ನಾವುಕಂಡ ಜಗತ್ತಿನ ಮಹಾನ್ ನಿರ್ದೇಶಕರುಗಳು, ಆಗಾಗ ಎದುರಿಂದ ಹಾದು ಹೋಗುತ್ತಿದ್ದರು. ಇನ್ನು ಕೊನೆಯ ರೆಸ್ಟೋರೆಂಟ್ ನಲ್ಲಿ ಚಿತ್ರವಿಚಿತ್ರ ಚಹರೆಯ, ಗಲಿವರ್, ಲಿಲ್ಲಿಪುಟ್ ನಂಥ ಜೋಡಿಗಳು
ಕಂಡದ್ದು, ಎಲ್ಲವನ್ನೂ ಇನ್ನೂ ವಿವರವಾಗಿ ಹೇಳಬೇಕಿದೆ. ಜಗವೇ ಮಾಯದ ರಂಗ….