ಒಂದೈದು ನಿಮಿಷ ತಡೆದು ಹೊರಡೋಣ ಗೆಳತಿ,
ಮುಂಗಾರು ಈಗಷ್ಟೇ ಧರೆಗಿಳಿಯುತಿದೆ.
ದಿನಮಣಿಯ ತೆರೆಗೆ ನೂಕಿ,
ಕಡು ಮೋಡವು ಹರುಷದಿ ಹಿಗ್ಗಿದಂತೆ,
ಮುಂಗಾರು ಹನಿ ಹನಿಯಾಗಿ ಧರೆಗಿಳಿಯುತಿದೆ!

ಇನ್ನೂ ಕೊಂಚ ಸುರಿಯಲಿ ಬಿಡು,
ಮಣ್ಣಿನ ಕೆಂಪು ಹರಡಲಿ ಬಿಡು,
ಇನ್ನೇನು ಬಾಡುವ ದಾಸವಾಳಕೆ
ಸಿಹಿಮುತ್ತಿನ ವಿದಾಯವ ಹೇಳಲು ಬಿಡು!

ಪ್ರಕೃತಿಯ ಶೃಂಗಾರ ಕಾವ್ಯವಿದು,
ಇಳೆಯೊಡನೆ ಒಡನಾಡುವ ದಾಟಿಯಿದು.
ಕಣ್ತೆರೆದು ನೋಡು ಗೆಳತಿ,
ಮುತ್ತಿನ ಹಾರದಂತೆ ಹೊಳೆಯುವ
ಜೇಡರ ಬಲೆಯನ್ನು..
ಗಮನವಿಟ್ಟು ಕೇಳು ಗೆಳತಿ,
ತನ್ನ ಸಂಗಾತಿಯ ಕರೆಯುವ
ಗೊರವಂಕದ ಕೂಗನ್ನು!

ಜೀವನದ ಅಸಾಧ್ಯ ಓಟದಲ್ಲಿ
ಕುಂಟಿಕೊಂಡು ಸಾಗುವ ನಾವು,
ಅರೆಕ್ಷಣ ನಿಂತು ಇವೆಲ್ಲನ್ನೂ ನೋಡಬೇಕು ಗೆಳತಿ!
ದಪ್ಪನೆಯ ರೈನುಕೋಟಿನೊಳಗೆ
ಬೆಚ್ಚನೆ ಸಾಗುವ ನಾವು,
ಅಪ್ಪಳಿಸುವ ಮಳೆಹನಿಗೆ ಮೈಯೊಡ್ಡಬೇಕು,
ಕೃತಕ ಹವೆಯ ಎಸಿ ಕಾರಿನ ಕಿಟಕಿಯನು ಇಳಿಸಿ,
ಮಳೆಯನು ಬೊಗಸೆಯಲಿ ಹಿಡಿಯಬೇಕು!