ಭವ್ಯವಾದ ಉತ್ಸವದಲ್ಲಿ ಪಾಲ್ಗೊಳ್ಳುವುದೇ ಹಲವಾರು ಕ್ರೀಡಾಪಟುಗಳ ಕನಸು. ಅದನ್ನು ಸಾಕಾರಗೊಳಿಸಲು ಹಗಲಿರುಳು ಶ್ರಮಿಸುವ ಎಷ್ಟೋ ಅಥ್ಲೀಟ್‌ಗಳಲ್ಲಿ ಗುರಿಮುಟ್ಟುವುದು ಬೆರಳೆಣಿಕೆಯ ಮಂದಿಯಷ್ಟೇ! ಉಳಿದವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದೆ ತಮ್ಮ ಸೌಭಾಗ್ಯವೆಂದು ಮುಂದಿನ ನಾಲ್ಕು ವರುಷಗಳನ್ನು ಇನ್ನಷ್ಟು ತಯಾರಿಯೊಂದಿಗೆ ಕಳೆಯುತ್ತಾರೆ. ಸೋತವರು ಒಂದೆಡೆಯಾದರೆ, ಕೂದಲೆಳೆಯ ಅಂತರದಲ್ಲಿ ಪದಕ ವಂಚಿತರಾದವರು ಇನ್ನೊಂದೆಡೆ. ಇಲ್ಲಿ ದಾಖಲೆಗಳು ಸೃಷ್ಟಿಯಾಗುತ್ತವೆ, ದಾಖಲೆಗಳು ಧೂಳಿಪಟವಾಗುತ್ತವೆ. ಹಾಕಲು ಪಾದರಕ್ಷೆಗಳೇ ಇಲ್ಲದಿದ್ದ ಓರ್ವ ಶರವೇಗದಿಂದ ಓಡಿ ಚಾಂಪಿಯನ್ ಆಗಿ ಮಿಂಚುತ್ತಾನೆ.
ಕ್ರೀಡಾ ಪ್ರಪಂಚದ ಬೆರಗು, ಒಲಂಪಿಕ್ಸ್‌ ಕ್ರೀಡಾ ಕೂಟದ ಕುರಿತು ಕಾರ್ತಿಕ್‌ ಕೃಷ್ಣ ಹೊಸ ಸರಣಿ “ಒಲಂಪಿಕ್ಸ್‌ ಅಂಗಣ” ಪ್ರತಿ ಶನಿವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ

ಬಿಯಾಂಡ್ ದಿ ಪೋಡಿಯಂ: ಒಲಿಂಪಿಕ್ ಕ್ರೀಡಾಕೂಟದ ಕುತೂಹಲಕಾರಿ ಒಳನೋಟಗಳು

ಭೂಮಿಯ ಮೇಲಿನ ಶ್ರೇಷ್ಠ ಕ್ರೀಡಾ ಇವೆಂಟ್ ಯಾವುದು ಎಂದರೆ ನಮಗೆ ಥಟ್ಟನೆ ನೆನಪಾಗುವುದೇ ಒಲಿಂಪಿಕ್ಸ್ ಕ್ರೀಡಾಕೂಟ. ಸ್ನೇಹ, ಒಗ್ಗಟ್ಟು ಮತ್ತು ನ್ಯಾಯಯುತ ಆಟದ ಮನೋಭಾವದೊಂದಿಗೆ ವಿಶ್ವದಾದ್ಯಂತದ ಕ್ರೀಡಾಪಟುಗಳು ಈ ಭವ್ಯ ಆಚರಣೆಯಲ್ಲಿ ಸ್ಪರ್ಧಿಸುವುದನ್ನು ನೋಡಿಯೇ ಸವಿಯಬೇಕು. ಶ್ರೀಮಂತ ಇತಿಹಾಸ ಮತ್ತು ವೈವಿಧ್ಯಮಯ ಕ್ರೀಡೆಗಳನ್ನು ಹೊಂದಿರುವ ಈ ಕ್ರೀಡಾಕೂಟವು, ಲಕ್ಷಾಂತರ ಜನರ ಕನಸುಗಳನ್ನು ಸೆರೆಹಿಡಿದು, ಭರವಸೆ ಮತ್ತು ಏಕತೆಯ ದೀಪವಾಗಿ ಬೆಳಗುತ್ತಿದೆ. ಗ್ರೀಸ್‌ನಲ್ಲಿ ಶುರುವಾದ ಪ್ರಾಚೀನ ಒಲಿಂಪಿಕ್ಸ್‌ನಿಂದ ಹಿಡಿದು ಇಂದು ನಾವು ನೋಡುವ ಆಧುನಿಕ ಕೂಟದವರೆಗೆ, ಒಲಿಂಪಿಕ್ಸ್ ಗಮನಾರ್ಹವಾಗಿ ವಿಕಸನಗೊಂಡಿದೆ. ಸಮಾಜ, ತಂತ್ರಜ್ಞಾನ ಮತ್ತು ಜಾಗತಿಕ ರಾಜಕೀಯದಲ್ಲಿನ ಬದಲಾವಣೆಗಳನ್ನು ಒಲಿಂಪಿಕ್ಸ್ ಪ್ರತಿಬಿಂಬಿಸುತ್ತದೆ.

ಪ್ರಾಚೀನ ಮೂಲ

ಒಲಿಂಪಿಕ್ ಕ್ರೀಡಾಕೂಟ ಮೊದಲ ಬಾರಿಗೆ ಆಯೋಜನೆಗೊಂಡದ್ದು, ಕ್ರಿ.ಪೂ 776 ರ ಸುಮಾರಿಗೆ ಪ್ರಾಚೀನ ಗ್ರೀಸಿನ ಒಲಂಪಿಯಾ ಎಂಬ ಅಭಯಾರಣ್ಯದಲ್ಲಿ. ಈ ಆರಂಭಿಕ ಆಟಗಳನ್ನು ಗ್ರೀಕ್ ದೇವತೆಗಳ ರಾಜ ಜೀಯಸ್‌ನ ಗೌರವಾರ್ಥವಾಗಿ ನಡೆಸಲಾಗಿತ್ತು. ಆ ಕ್ರೀಡಾಕೂಟದಲ್ಲಿ ಓಟ, ಕುಸ್ತಿ ಮತ್ತು ರಥ ಓಟ ಸೇರಿದಂತೆ ವಿವಿಧ ಅಥ್ಲೆಟಿಕ್ ಸ್ಪರ್ಧೆಗಳು ಒಳಗೊಂಡಿದ್ದವಂತೆ. ಪ್ರಾಚೀನ ಒಲಿಂಪಿಕ್ಸ್ ಕೇವಲ ದೈಹಿಕ ಪರಾಕ್ರಮದ ಪ್ರದರ್ಶನವಾಗಿರಲಿಲ್ಲ. ಅದೊಂದು ಧಾರ್ಮಿಕ ಹಬ್ಬವಾಗಿತ್ತು. ಅವುಗಳು ದೇವರುಗಳಿಗೆ ಸಮರ್ಪಿತವಾಗುತ್ತಿದ್ದ ಆಚರಣೆ ಹಾಗೂ ತ್ಯಾಗಗಳಂತೆ ಬಿಂಬಿಸಲ್ಪಟ್ಟಿದ್ದವು.

ಆಧುನಿಕ ಒಲಿಂಪಿಕ್ಸ್‌ನ ಉಗಮ

ಆಧುನಿಕ ಒಲಿಂಪಿಕ್ ಕ್ರೀಡೆಗಳು 19ನೇ ಶತಮಾನದ ಉತ್ತರಾರ್ಧದಲ್ಲಿ ಪುನರುಜ್ಜೀವನಗೊಂಡವು. ಅದಕ್ಕಾಗಿ ನಾವು ಫ್ರೆಂಚ್ ಶಿಕ್ಷಣತಜ್ಞ ಮತ್ತು ಇತಿಹಾಸಕಾರ ಪಿಯರೆ ಡಿ ಕೂಬರ್ಟಿನ್ ಅವರ ಪ್ರಯತ್ನಗಳಿಗೆ ಆಭಾರಿಗಳಾಗಿರಬೇಕು. ಪ್ರಾಚೀನ ಗ್ರೀಕ್ ಸಂಪ್ರದಾಯದಿಂದ ಪ್ರೇರಿತರಾದ ಕೂಬರ್ಟಿನ್, ರಾಷ್ಟ್ರಗಳ ನಡುವೆ ಶಾಂತಿ ಮತ್ತು ಏಕತೆಯನ್ನು ಉತ್ತೇಜಿಸುವ ಅಂತರರಾಷ್ಟ್ರೀಯ ಕ್ರೀಡಾಕೂಟವನ್ನು ಕಲ್ಪಿಸಿಕೊಂಡಿದ್ದರು. ಅದರ ಫಲಶ್ರುತಿಯಾಗಿ, ಮೊದಲ ಆಧುನಿಕ ಒಲಿಂಪಿಕ್ಸ್ 1896 ರಲ್ಲಿ ಅಥೆನ್ಸ್ ನಲ್ಲಿ ನಡೆಯಿತು. ಇದರಲ್ಲಿ 14 ದೇಶಗಳ 241 ಕ್ರೀಡಾಪಟುಗಳು 43 ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು. ಇದರಿಂದಾಗಿ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಹೊಸ ಯುಗವೊಂದು ಆರಂಭಗೊಂಡಿತು.

ಒಲಿಂಪಿಕ್ಸಿನ ವಿಕಾಸ

ಪುನರುಜ್ಜೀವನಗೊಂಡ ನಂತರ ಒಲಿಂಪಿಕ್ಸ್ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಸಂಖ್ಯೆಯು ಗಣನೀಯವಾಗಿ ಹೆಚ್ಚಾಗುತ್ತಿದೆ. ಒಲಿಂಪಿಕ್ಸ್‌ನ ಬೇಸಿಗೆ ಮತ್ತು ಚಳಿಗಾಲದ ಕ್ರೀಡಾಕೂಟಗಳಲ್ಲಿ ಈಗ 200 ಕ್ಕೂ ಹೆಚ್ಚು ರಾಷ್ಟ್ರಗಳಿಂದ ಸಾವಿರಾರು ಸ್ಪರ್ಧಿಗಳನ್ನು ಭಾಗವಹಿಸುತ್ತಾರೆ. ಬದಲಾಗುತ್ತಿರುವ ಆಸಕ್ತಿಗಳು ಮತ್ತು ಹೊಸ ವಿಭಾಗಗಳ ಸೇರ್ಪಡೆಯಿಂದಾಗಿ, ಕ್ರೀಡೆಗಳ ವ್ಯಾಪ್ತಿಯು ಸಹ ವಿಸ್ತರಿಸಿದೆ. ಅಥ್ಲೆಟಿಕ್ಸ್ ಮತ್ತು ಈಜು ಮುಂತಾದ ಸಾಂಪ್ರದಾಯಿಕ ಸ್ಪರ್ಧೆಗಳಿಂದ ಹಿಡಿದು ಸ್ಕೇಟ್‌ಬೋರ್ಡಿಂಗ್ ಮತ್ತು ಬ್ರೇಕ್ ಡ್ಯಾನ್ಸಿಂಗ್ ನಂತಹ ಹೊಸ ಸೇರ್ಪಡೆಗಳವರೆಗೆ, ಒಲಿಂಪಿಕ್ಸ್ ವಿಕಸನಗೊಳ್ಳುತ್ತಲೇ ಇದೆ. ವೈವಿಧ್ಯತೆ ಮತ್ತು ನಾವೀನ್ಯತೆಯನ್ನು ಅಳವಡಿಸಿಕೊಂಡು ಆಧುನಿಕತೆಗೆ ಒಗ್ಗಿಕೊಳ್ಳುತ್ತಲೇ ಇದೆ.

ಐಕಾನಿಕ್ ಕ್ಷಣಗಳು

ಒಲಿಂಪಿಕ್ಸ್ ಕ್ರೀಡಾ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಲೆಕ್ಕವಿಲ್ಲದಷ್ಟು ಐಕಾನಿಕ್ ಕ್ಷಣಗಳಿವೆ. 1936ರ ಬರ್ಲಿನ್ ಕ್ರೀಡಾಕೂಟದಲ್ಲಿ ಜೆಸ್ಸಿ ಓವೆನ್ಸ್ ಅವರು ಗೆದ್ದ ನಾಲ್ಕು ಚಿನ್ನದ ಪದಕಗಳು, ನಾಜಿ ಪ್ರಚಾರದ ನೆರಳಿನಲ್ಲಿ, ಕ್ರೀಡೆಗಳಿವೆ ಪೂರ್ವಾಗ್ರಹ ಮತ್ತು ತಾರತಮ್ಯಗಳಿಗೆ ಸವಾಲಾಗಿ ನಿಲ್ಲುವ ಶಕ್ತಿಯಿದೆ ಎಂಬುದನ್ನು ಸಾರಿ ಹೇಳಿದ್ದವು. 1968 ರ ಮೆಕ್ಸಿಕೋ ಸಿಟಿ ಗೇಮ್ಸ್‌ನಲ್ಲಿ ಟಾಮಿ ಸ್ಮಿತ್ ಮತ್ತು ಜಾನ್ ಕಾರ್ಲೋಸ್ ಅವರ 200ಮೀ ಓಟದಲ್ಲಿ ಗೆದ್ದು ಪೋಡಿಯಂ ಮೇಲೆ ಮಾಡಿದ ‘ಬ್ಲ್ಯಾಕ್ ಪವರ್ ಸೆಲ್ಯೂಟ್’ ಜನಾಂಗೀಯ ಅಸಮಾನತೆಯ ವಿರುದ್ಧ ಪ್ರಬಲ ಹೇಳಿಕೆಯಾಗಿ ಒಲಿಂಪಿಕ್ ಇತಿಹಾಸದಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ.

ಒಲಿಂಪಿಕ್ಸ್‌ನ ಸವಾಲುಗಳು ಮತ್ತು ವಿವಾದಗಳು

ಅದರ ಉದಾತ್ತ ಆದರ್ಶಗಳ ಹೊರತಾಗಿಯೂ, ಒಲಿಂಪಿಕ್ಸ್‌ನ ಪಯಣದಲ್ಲಿ ಸವಾಲುಗಳು ಮತ್ತು ವಿವಾದಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇದೆ. ಡೋಪಿಂಗ್, ಭ್ರಷ್ಟಾಚಾರ ಮತ್ತು ಕ್ರೀಡಾಕೂಟವನ್ನು ಆಯೋಜಿಸಲು ತಗಲುವ ಅಪಾರ ವೆಚ್ಚದಂತಹ ವಿಷಯಗಳ ಚರ್ಚೆ ಮತ್ತು ಟೀಕೆಗಳು ಒಲಿಂಪಿಕ್ಸನ್ನು ಬೆಂಬಿಡದೆ ಕಾಡುತ್ತಲೇ ಬಂದಿದೆ. ಎಲ್ಲಕ್ಕಿಂತ ಕರಾಳ ಅಧ್ಯಾಯವೇನೆಂದರೆ, 1972 ರ ಮ್ಯೂನಿಚ್ ಕ್ರೀಡಾಕೂಟದಲ್ಲಿ 11 ಇಸ್ರೇಲಿ ಅಥ್ಲೀಟ್‌ಗಳನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿ. ಹಾಗೆಯೇ, ತೀರಾ ಇತ್ತೀಚೆಗೆ, 2020 ರ ಟೋಕಿಯೋ ಗೇಮ್ಸ್ COVID-19 ಸಾಂಕ್ರಾಮಿಕ ರೋಗದಿಂದಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಿತು. ಕಟ್ಟುನಿಟ್ಟಾದ ಆರೋಗ್ಯ ಪ್ರೋಟೋಕಾಲ್‌ಗಳಿಂದ ಕಿಕ್ಕಿರಿದು ತುಂಬಿರುತ್ತಿದ್ದ ಪ್ರೇಕ್ಷಕರ ಗ್ಯಾಲರಿಗಳು ಬಣಗುಟ್ಟಿದ್ದು ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲಿರಬೇಕು!

ಒಲಿಂಪಿಕ್ಸ್ ಬೆಳೆದು ಬಂದು ಹಾದಿಯನ್ನು ತಿಳಿದುಕೊಂಡಾಯ್ತು, ಈಗ ಒಲಿಂಪಿಕ್ಸ್‌ನ ಕೆಲವು ಕೂತೂಹಲಕಾರಿ ಮಾಹಿತಿಗಳತ್ತ ಗಮನ ಹರಿಸೋಣ ಬನ್ನಿ.

ಒಲಿಂಪಿಕ್ ರಿಂಗ್ಸ್: ಒಲಿಂಪಿಕ್ಸ್ ಎಂದರೆ ತಟ್ಟನೆ ನೆನಪಾಗುವುದು, ಒಂದಕ್ಕೊಂದು ಕುಣಿಕೆ ಹಾಕಿಕೊಂಡಿರುವ ಒಲಿಂಪಿಕ್ ರಿಂಗ್ಸ್. ಕ್ರೀಡಾಕೂಟದ ಕೇಂದ್ರ ಬಿಂದು ಅಂತಲೇ ಕರೆಯಲ್ಪಡುವ ಒಲಿಂಪಿಕ್ ರಿಂಗ್ಸ್, ವಿಶ್ವದ ಐದು ಪ್ರಮುಖ ಖಂಡಗಳನ್ನು ಸಂಕೇತಿಸುತ್ತವೆ: ಆಫ್ರಿಕಾ, ಅಮೆರಿಕ, ಏಷ್ಯಾ, ಯುರೋಪ್ ಮತ್ತು ಓಷಿಯಾನಿಯಾ. ಆ ಐದು ರಿಂಗ್‌ಗಳನ್ನು ನೀಲಿ, ಹಳದಿ, ಕಪ್ಪು, ಹಸಿರು ಮತ್ತು ಕೆಂಪು ಬಣ್ಣಗಳಲ್ಲೇ ಯಾಕೆ ಸಂಕೇತಿಸಲಾಗಿದೆ ಗೊತ್ತೇ? ಏಕೆಂದರೆ ಪ್ರಪಂಚದ ಪ್ರತಿಯೊಂದು ರಾಷ್ಟ್ರೀಯ ಧ್ವಜವು ಈ ಬಣ್ಣಗಳಲ್ಲಿ ಯಾವುದಾದರೂ ಒಂದನ್ನು ಒಳಗೊಂಡಿರುತ್ತದೆ!

ಒಲಿಂಪಿಕ್ ಟಾರ್ಚ್: ಇದು ಒಲಿಂಪಿಕ್ಸ್‌ನ ಇನ್ನೊಂದು ಪ್ರಮುಖ ಆಕರ್ಷಣೆ. ಒಲಿಂಪಿಕ್ ಟಾರ್ಚ್ ರಿಲೇ ಸಂಪ್ರದಾಯವು ಪ್ರಾರಂಭವಾದದ್ದು 1936 ರಲ್ಲಿ. ಜ್ವಾಲೆಯನ್ನು ಗ್ರೀಸ್‌ನ ಒಲಂಪಿಯಾದಲ್ಲಿ ಬೆಳಗಿಸಿ, ಆತಿಥೇಯ ನಗರಕ್ಕೆ ಕೊಂಡೊಯ್ಯಲಾಗುತ್ತದೆ. ಇದು ಪ್ರಾಚೀನ ಮತ್ತು ಆಧುನಿಕ ಆಟಗಳ ನಡುವಿನ ಸಂಪರ್ಕವನ್ನು ಸಂಕೇತಿಸುತ್ತದೆ.

ಚಿನ್ನದ ಪದಕಗಳು: ವಿಜೇತರಿಗೆ ನೀಡುವ ಚಿನ್ನದ ಪದಕಗಳು ಸಂಪೂರ್ಣವಾಗಿ ಚಿನ್ನದಿಂದ ಮಾಡಿದ್ದಾ ಎಂಬ ಕುತೂಹಲ ಹಲವರಿಗಿರುತ್ತದೆ. ಶುರುವಿನಲ್ಲಿ ನೀಡುತ್ತಿದ್ದ ಪದಕಗಳನ್ನು ಸಂಪೂರ್ಣವಾಗಿ ಚಿನ್ನದಿಂದಲೇ ಮಾಡಲಾಗುತ್ತಿದ್ದರೂ, 1912ರಲ್ಲಿ ಆ ಸಂಪ್ರದಾಯಕ್ಕೆ ತೆರೆ ಎಳೆಯಲಾಯಿತು. ಈಗ ಪ್ರಥಮ ಸ್ಥಾನಕ್ಕೆ ನೀಡುವ ಚಿನ್ನದ ಪದಕಗಳನ್ನು ಬೆಳ್ಳಿಯಿಂದ ತಯಾರಿಸಿ ಅದರ ಮೇಲೆ 6 ಗ್ರಾಂ ಶುದ್ಧ ಚಿನ್ನವನ್ನು ಲೇಪಿಸಲಾಗುತ್ತದೆ.

ಬಹಿಷ್ಕಾರ ಮತ್ತು ರದ್ದತಿ: ಪ್ರತಿ ನಾಲ್ಕು ವರುಷಗಳಿಗೊಮ್ಮೆ ಜರುಗುವ ಒಲಿಂಪಿಕ್ಸನ್ನು, ವಿಶ್ವ ಸಮರಗಳ (1916, 1940, ಮತ್ತು 1944) ಕಾರಣದಿಂದಾಗಿ ಮೂರು ಬಾರಿ ರದ್ದುಗೊಳಿಸಲಾಗಿತ್ತು. 1980ರ ಮಾಸ್ಕೋ ಒಲಿಂಪಿಕ್ಸ್, ಅಫ್ಘಾನಿಸ್ತಾನದ ಮೇಲಿನ ಸೋವಿಯತ್ ಯೂನಿಯನ್‌ನ ದಾಳಿಯನ್ನು ಖಂಡಿಸಿ, 66 ರಾಷ್ಟ್ರಗಳಿಂದ ಬಹಿಷ್ಕಾರವನ್ನು ಕಂಡಿತ್ತು.

ಕಿರಿಯ ಹಾಗೂ ಹಿರಿಯ ಪದಕ ವಿಜೇತರು: 1896ರ ಅಥೆನ್ಸ್ ಕ್ರೀಡಾಕೂಟದಲ್ಲಿ, ತನ್ನ ಹತ್ತನೇ ವಯಸ್ಸಿನಲ್ಲಿ ಜಿಮ್ನಾಸ್ಟಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದ ಡಿಮಿಟ್ರಿಯೊಸ್ ಲೌಂಡ್ರಾಸ್ ಅವರು ಈಗಲೂ ಅತ್ಯಂತ ಕಿರಿಯ ಒಲಿಂಪಿಕ್ ಪದಕ ವಿಜೇತರಾಗಿದ್ದಾರೆ. ಹಾಗೆಯೇ 1912ರ ಸ್ಟಾಕ್ಹೊಲ್ಮ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಆಸ್ಕರ್ ಸ್ವಾನ್, ಒಲಿಂಪಿಕ್ಸ್‌ನ ಅತೀ ಹಿರಿಯ ಪದಕ ವಿಜೇತ. ಅವರಿಗಾಗ 64 ವರುಷವಾಗಿತ್ತು!

ಇಂತಿಪ್ಪ ಭವ್ಯವಾದ ಉತ್ಸವದಲ್ಲಿ ಪಾಲ್ಗೊಳ್ಳುವುದೇ ಹಲವಾರು ಕ್ರೀಡಾಪಟುಗಳ ಕನಸು. ಅದನ್ನು ಸಾಕಾರಗೊಳಿಸಲು ಹಗಲಿರುಳು ಶ್ರಮಿಸುವ ಎಷ್ಟೋ ಅಥ್ಲೀಟ್‌ಗಳಲ್ಲಿ ಗುರಿಮುಟ್ಟುವುದು ಬೆರಳೆಣಿಕೆಯ ಮಂದಿಯಷ್ಟೇ! ಉಳಿದವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದೆ ತಮ್ಮ ಸೌಭಾಗ್ಯವೆಂದು ಮುಂದಿನ ನಾಲ್ಕು ವರುಷಗಳನ್ನು ಇನ್ನಷ್ಟು ತಯಾರಿಯೊಂದಿಗೆ ಕಳೆಯುತ್ತಾರೆ. ಸೋತವರು ಒಂದೆಡೆಯಾದರೆ, ಕೂದಲೆಳೆಯ ಅಂತರದಲ್ಲಿ ಪದಕ ವಂಚಿತರಾದವರು ಇನ್ನೊಂದೆಡೆ. ಇಲ್ಲಿ ದಾಖಲೆಗಳು ಸೃಷ್ಟಿಯಾಗುತ್ತವೆ, ದಾಖಲೆಗಳು ಧೂಳಿಪಟವಾಗುತ್ತವೆ. ಹಾಕಲು ಪಾದರಕ್ಷೆಗಳೇ ಇಲ್ಲದಿದ್ದ ಓರ್ವ ಶರವೇಗದಿಂದ ಓಡಿ ಚಾಂಪಿಯನ್ ಆಗಿ ಮಿಂಚುತ್ತಾನೆ, ಇನ್ನೊಬ್ಬ ತನ್ನ ಕುಚೋದ್ಯದಿಂದ ಕ್ರೀಡಾ ಜಗತ್ತಿಗೆ ಕಪ್ಪುಚುಕ್ಕಿಯಾಗುತ್ತಾನೆ. ಇಂತಹ ಹಲವು ಘಟನೆಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿ ಈ ಸರಣಿಯಲ್ಲಿ ನಿಮ್ಮ ಮುಂದಿಡಲಿದ್ದೇನೆ. ಓದಿ, ಅಭಿಪ್ರಾಯಗಳನ್ನು ಹಂಚಿಕೊಳ್ಳಿ.