ವಾರಾಂತ್ಯಗಳಲ್ಲಿ ದೇಶದ ರಾಜಧಾನಿ ನಗರಗಳಲ್ಲಿ ನಡೆಸುವ ಸಾರ್ವಜನಿಕ ಪ್ರದರ್ಶನಗಳು, ಬಹುಸಂಸ್ಕೃತಿಗಳವರ ಕಾರ್ಯಕ್ರಮಗಳು ಹೆಚ್ಚಾಗಿವೆ. ೨೦೨೩ ರ ಕೊನೆಯಲ್ಲಿ ನಾವು ಮೂರು, ನಾಲ್ಕು ಬಾರಿ ಇಸ್ರೇಲ್, ಪ್ಯಾಲೆಸ್ಟೈನ್-ಗಾಝಾ, ಯೂಕ್ರೇನ್ ಮೂಲಗಳ ಜನರು ನಡೆಸುತ್ತಿದ್ದ ಪ್ರದರ್ಶನಗಳ ಪರಿಣಾಮಕ್ಕೆ ಸಿಲುಕಿದ್ದೆವು. ಅದೇನೂ ದೊಡ್ಡ ವಿಷಯವಲ್ಲ ಬಿಡಿ. ಪ್ರದರ್ಶನದಲ್ಲಿ ಭಾಗವಹಿಸಿದ್ದ ಪ್ರತಿರೋಧಿಗಳು ಘೋಷಣೆಗಳನ್ನು ಕೂಗುತ್ತಾ ರಸ್ತೆಗಿಳಿದಾಗ ಪೊಲೀಸರು ರಸ್ತೆ ಬಂದ್ ಮಾಡಿದರು. ಅದೇ ರಸ್ತೆಯಲ್ಲಿ ಹೋಗಬೇಕಿದ್ದ ನಾವು ಇತರ ಅನೇಕ ಕಾರುಗಳಂತೆ ಮುಂದಕ್ಕೂ ಹಿಂದಕ್ಕೂ ಚಲಿಸಲಾರದಂತೆ ನಗರಮಧ್ಯದಲ್ಲಿ ಅರ್ಧಗಂಟೆಗೂ ಹೆಚ್ಚುಕಾಲ ಸ್ಥಗಿತರಾದೆವು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಹೊಸ ವರ್ಷ ೨೦೨೪ ರ ಶುಭಾಶಯಗಳು ನಿಮಗೆ. ಇದು ಕ್ರಿಸ್ತಶಕ ನೂತನ ವರ್ಷದ ಆದಿಯಾದರೂ ಪ್ರಪಂಚದ ಹಲವಾರು ಜನರಿಗೆ ಅವರ ಧರ್ಮ, ಸಂಸ್ಕೃತಿ, ಹಬ್ಬಗಳನ್ನಾಧರಿಸಿ ಹೊಸವರ್ಷದ ಆಗಮನ ಬೇರೆಬೇರೆ ಕಾಲಗಳಲ್ಲಿ ಬರುತ್ತದೆ. ಇದು ನಿಮಗೂ ಗೊತ್ತಿದೆ. ಆದರೂ ಒಂದು ಸಣ್ಣ ಪೀಠಿಕೆ ಹಾಕೋಣ ಎನಿಸಿತು.
ಭಾರತದಲ್ಲಿ ಡಿಸೆಂಬರ್ ೩೧ ರಂದು ನ್ಯೂ ಇಯರ್ ಈವ್ ಆಚರಿಸಿಕೊಂಡು ಮರುದಿನ ಜನವರಿ ಒಂದರಂದು ಹ್ಯಾಪಿ ನ್ಯೂ ಇಯರ್ ಹೇಳಿದರೆ ಬೈಸಿಕೊಳ್ಳುವ ಕಾಲವಿದೆ. ಇಲ್ಲಿ ನಮ್ಮ ಆಸ್ಟ್ರೇಲಿಯಾದಲ್ಲೊ ಹೊಸ ವರ್ಷದ ಶುಭಾಶಯಗಳನ್ನು ಹೇಳದಿದ್ದರೆ ‘ಅನಾಗರಿಕರು’ ಎಂದು ಕರೆಸಿಕೊಳ್ಳುವುದಿದೆ.
ಬೆರಳುಗಳ ಸಂದಿಯಿಂದ ಜಾರಿಹೋಗುವ ಮರಳಿನಂತೆ ಸರಿದು ಹೋಗುತ್ತಿರುವ ಕಾಲಘಟ್ಟವನ್ನು ಒಮ್ಮೆ ಅವಲೋಕಿಸಿದರೆ ಕಾಲಾಯ ತಸ್ಮೈ ನಮಃ ಎಂದು ಶರಣು ಹೇಳುತ್ತದೆ ಮನಸ್ಸು. ಸಮಬೆಸ, ಬೇವು-ಬೆಲ್ಲ, ಸಿಹಿಕಹಿ ಎಂಬೆಲ್ಲಾ ಸೂತ್ರಗಳನ್ನೂ ಅಳವಡಿಸಿ ಸರಿದುಹೋದ ೨೦೨೩ ರಲ್ಲಿ ಇಣುಕಿದರೆ ಅವೆಲ್ಲಾ ಸೂತ್ರಗಳು ಜೀವಂತವಾಗಿ ಮೈತಳೆದಿದ್ದು ಸ್ಪಷ್ಟವಾಗುತ್ತದೆ. ಈ ಮಾತನ್ನು ಫಿಲಾಸಫಿಕಲ್ ಆಗಿ ಹೇಳುತ್ತಿಲ್ಲ. ಕಣ್ಣಿಗೆ ಕಾಣುತ್ತಿರುವ ಸಂಗತಿಗಳು ಒಂದಷ್ಟು ಪ್ರೇರಣೆ ಕೊಡುತ್ತಿವೆ.
ಆಸ್ಟ್ರೇಲಿಯಾದ ಮೂಲನಿವಾಸಿಗಳಿಗೆ ೨೦೨೩ ರಲ್ಲಾದರೂ ಸಂವಿಧಾನಬದ್ಧ ಗುರುತು ಸಿಗುತ್ತದೆ ಎಂದು ಅದೆಷ್ಟೋ ನಿರೀಕ್ಷೆಯಿಟ್ಟುಕೊಂಡಿದ್ದ ರೆಫರೆಂಡಮ್ ಮತಕ್ಕೆ ಊಹಿಸಲಾರದಷ್ಟು ಸೋಲಾಯಿತು. ನೆರೆಮನೆಯಾದ ನ್ಯೂಝಿಲ್ಯಾಂಡ್ ದೇಶದಲ್ಲಿ ಬಲಪಂಥೀಯ ಪಕ್ಷವು ಅಧಿಕಾರಕ್ಕೆ ಬಂದು ಅಲ್ಲಿನ ಮೂಲನಿವಾಸಿಗಳ ನೆಮ್ಮದಿ, ಆರೋಗ್ಯ, ಕ್ಷೇಮಕ್ಕೆಂದು ಅವರ ಆಯ್ಕೆಯಿಂದಲೇ ಜಾರಿಯಲ್ಲಿದ್ದ ಹಲವಾರು ಸರ್ಕಾರೀ ಕಾರ್ಯನೀತಿಗಳಿಗೆ ಕೊಕ್ ಕೊಟ್ಟಿದ್ದಾರೆ. ಆಗ ಮೂಲನಿವಾಸಿಗಳಾದ ಮಾಓರಿ ಜನರು ಸರಕಾರದ ವಶಕ್ಕೆ ಬರಲೇಬೇಕಾಗುತ್ತದೆ ಒಂದು ಲೆಕ್ಕಾಚಾರವಂತೆ.
ಇನ್ನು ಪ್ರಪಂಚಕ್ಕೆಲ್ಲಾ ದೊಡ್ಡಣ್ಣನಾದ ಅಮೆರಿಕೆಯಲ್ಲಿ ಡೆಮೊಕ್ರಾಟಿಕ್ ಪಕ್ಷದ ಬಲವು ಕುಗ್ಗುತ್ತಲೇ ಇದ್ದು ದಕ್ಷಿಣ ಅಮೆರಿಕೆಯಿಂದ ವಲಸೆ ಬರುವವರನ್ನು ತಡೆಗಟ್ಟಲು ತನ್ನನ್ನು ಮತ್ತೆ ಚುನಾಯಿಸಿ, ಒಂದು ದಿನದ ಮಟ್ಟಿಗಷ್ಟೇ ತಾನು ಸರ್ವಾಧಿಕಾರಿಯಾಗಿ ಎಲ್ಲಾ ಅಧಿಕಾರವನ್ನು ಕೈಗೆ ತೆಗೆದುಕೊಂಡು ಅಮೆರಿಕಕ್ಕೆ ಪುನರ್ಜೀವ ಕೊಡುತ್ತೀನಿ ಎಂದು ಆತ ಹೇಳುತ್ತಿದ್ದಾರೆ. ಮತ್ತೊಂದು ಮೂಲೆಯಲ್ಲಿ ನಡೆಯುತ್ತಿರುವ ರಷ್ಯಾ-ಯೂಕ್ರೇನ್ ಸಮರ ನಿಜವಾದದ್ದಾ ಇಲ್ಲವೇ ಅದೊಂದು ರಾಜಕೀಯ ಚದುರಂಗದಾಟವೊ ಎನ್ನುವ ಸಂಶಯವೂ ಬಂದುಹೋಗಿ ಈಗ ಅದಕ್ಕೂ ತುಕ್ಕು ಹಿಡಿಯುತ್ತಿದೆ. ಇಸ್ರೇಲ್-ಹಮಾಸ್ ನಡುವಿನ ಕಾಳಗದಿಂದ ಅಲ್ಲಿನ ಮಕ್ಕಳಿಗೆ ವಿಪರೀತ ತೊಂದರೆಯಾಗಿದೆ ಎಂದು ಮಿತ್ರ ರಾಷ್ಟ್ರಗಳಿಗೆ ಈಗಷ್ಟೇ ಗೋಚರವಾಗಿದೆ. ಪೆಸಿಫಿಕ್ ಸಮುದ್ರದ ದ್ವೀಪಗಳಿಗೆ ವಿಶೇಷ ಆಹ್ವಾನಿತರಾಗಿ ಹೋಗುವುದು, ಅಲ್ಲಿನ ನೆಲ ಕೊಳ್ಳುವ, ಅಲ್ಲೊಂದು ಮಿಲಿಟರಿ ತುಕಡಿಯೊಂದನ್ನು ಸ್ಥಾಪಿಸುವ ಮಾತು ಚೈನಾದವರಿಗೆ ಸರ್ವೇಸಾಮಾನ್ಯವಾಗಿದೆ. ‘ಸ್ಲೋ ಅಂಡ್ ಸ್ಟೆಡಿ’ ಮಂತ್ರ ಜಪಿಸುತ್ತಾ ಎಲ್ಲರ ಪಕ್ಕದಲ್ಲೂ ಬಂದು ಕೂರುತ್ತಿರುವ ಚೈನಾದ ಬಗ್ಗೆ ಎಲ್ಲರಿಗೂ ಅದೇನೋ ಭಯದ ಭೂತ ಹಿಡಿದಿದೆ.
ಇದೇನು ಬರೀ ರಾಜಕೀಯ ವಿಷಯಗಳಾಯ್ತಲ್ಲ, ಇದರಲ್ಲಿ ಆಸ್ಟ್ರೇಲಿಯಾ ಎಲ್ಲಿದೆ ಎಂದು ನಿಮ್ಮ ಪ್ರಶ್ನೆಯಾಗಿದ್ದರೆ ಈ ಎಲ್ಲಾ ವಿಷಯಗಳಲ್ಲೂ ಆಸ್ಟ್ರೇಲಿಯಾ ಇದ್ದೇಯಿದೆ. ತನಗೆ ಬೇಕಿದೆಯೋ ಬೇಡವೋ ಬಹುದೂರದ ನೆಂಟರನ್ನು ಅಪ್ಪಿಕೊಂಡಂತೆ ಏಷ್ಯಾ-ಪೆಸಿಫಿಕ್ ಭೂಪ್ರದೇಶದಲ್ಲಿರುವ ಆಸ್ಟ್ರೇಲಿಯಾವು ತವರುಮನೆ ಬ್ರಿಟನ್, ಹಿರಿಯಣ್ಣ ಅಮೆರಿಕ, ಖಾಸಾ ದೋಸ್ತ್ ಯೂರೋಪ್ ನಡೆದ ದಾರಿಯಲ್ಲಿ ನಡೆಯುತ್ತಾ ಮೇಲೆ ಹೇಳಿದ ಎಲ್ಲಾ ದೇಶಗಳ current affairs ಗಳಲ್ಲಿ ಪಾಲ್ಗೊಂಡಿದೆ. ಮುಂದುವರೆದ ಪಾಶ್ಚಾತ್ಯ, ಬಲಾಢ್ಯ, ಸಿರಿವಂತ ದೇಶವೆಂದು ಜಾಗತಿಕವಾಗಿ ಗುರುತಿಸುವ ಆಸ್ಟ್ರೇಲಿಯಾಕ್ಕೆ ಅದು ಅನಿವಾರ್ಯವೂ, ಸಹಜವೂ ಮತ್ತು ಇಚ್ಚಾಪೂರ್ವಕ ನಿಲುವೂ ಆಗಿಬಿಟ್ಟಿದೆ. ಈಗೀಗ ಭಾರತದ ಮೈತ್ರಿಗೆ ಕೈಚಾಚಿದೆ. ಆಸ್ಟ್ರೇಲಿಯಾದಲ್ಲಿ ವಲಸಿಗರು ಮುನ್ನೆಲೆಗೆ ಬರುತ್ತಿದ್ದಾರೆ.
ಉದಾಹರಣೆಗೆ ವಾರಾಂತ್ಯಗಳಲ್ಲಿ ದೇಶದ ರಾಜಧಾನಿ ನಗರಗಳಲ್ಲಿ ನಡೆಸುವ ಸಾರ್ವಜನಿಕ ಪ್ರದರ್ಶನಗಳು, ಬಹುಸಂಸ್ಕೃತಿಗಳವರ ಕಾರ್ಯಕ್ರಮಗಳು ಹೆಚ್ಚಾಗಿವೆ. ೨೦೨೩ ರ ಕೊನೆಯಲ್ಲಿ ನಾವು ಮೂರು, ನಾಲ್ಕು ಬಾರಿ ಇಸ್ರೇಲ್, ಪ್ಯಾಲೆಸ್ಟೈನ್-ಗಾಝಾ, ಯೂಕ್ರೇನ್ ಮೂಲಗಳ ಜನರು ನಡೆಸುತ್ತಿದ್ದ ಪ್ರದರ್ಶನಗಳ ಪರಿಣಾಮಕ್ಕೆ ಸಿಲುಕಿದ್ದೆವು. ಅದೇನೂ ದೊಡ್ಡ ವಿಷಯವಲ್ಲ ಬಿಡಿ. ಪ್ರದರ್ಶನದಲ್ಲಿ ಭಾಗವಹಿಸಿದ್ದ ಪ್ರತಿರೋಧಿಗಳು ಘೋಷಣೆಗಳನ್ನು ಕೂಗುತ್ತಾ ರಸ್ತೆಗಿಳಿದಾಗ ಪೊಲೀಸರು ರಸ್ತೆ ಬಂದ್ ಮಾಡಿದರು. ಅದೇ ರಸ್ತೆಯಲ್ಲಿ ಹೋಗಬೇಕಿದ್ದ ನಾವು ಇತರ ಅನೇಕ ಕಾರುಗಳಂತೆ ಮುಂದಕ್ಕೂ ಹಿಂದಕ್ಕೂ ಚಲಿಸಲಾರದಂತೆ ನಗರಮಧ್ಯದಲ್ಲಿ ಅರ್ಧಗಂಟೆಗೂ ಹೆಚ್ಚುಕಾಲ ಸ್ಥಗಿತರಾದೆವು. ಸಿಡ್ನಿ, ಮೆಲ್ಬೋರ್ನ್‌ಗಳಲ್ಲಿ ಸರ್ವೇಸಾಧಾರಣವಾದರೂ ಪುಟ್ಟ ಬ್ರಿಸ್ಬೇನ್ ನಗರದಲ್ಲಿ ಟ್ರಾಫಿಕ್ ಜಾಮ್ ಅಪರೂಪ. ಪ್ರದರ್ಶನಕಾರರ ಘೋಷಣೆಗಳನ್ನು ಕೇಳುತ್ತಾ ಕೂತಿದ್ದಾಗ ಆ ದೇಶಗಳಲ್ಲಿನವರು ನರಳುತ್ತಿರುವ ವಿಷಯಗಳು ಕಣ್ಮುಂದೆ ಕುಣಿದು ಬರಿಯ ಈ ಟ್ರಾಫಿಕ್ ಜಾಮ್ ಬಗ್ಗೆ ಕೋಪಿಸಿಕೊಳ್ಳುವ ನಮ್ಮಂತಹವರ ಬಗ್ಗೆ ‘ಆಹಾ privilege’ ಎಂದು ನಗುಬಂತು.
ಆಸ್ಟ್ರೇಲಿಯಾದ ಮೂಲನಿವಾಸಿಗಳಿಗೆ ೨೦೨೩ ರಲ್ಲಾದರೂ ಸಂವಿಧಾನಬದ್ಧ ಗುರುತು ಸಿಗುತ್ತದೆ ಎಂದು ಅದೆಷ್ಟೋ ನಿರೀಕ್ಷೆಯಿಟ್ಟುಕೊಂಡಿದ್ದ ರೆಫರೆಂಡಮ್ ಮತಕ್ಕೆ ಊಹಿಸಲಾರದಷ್ಟು ಸೋಲಾಯಿತು. ನೆರೆಮನೆಯಾದ ನ್ಯೂಝಿಲ್ಯಾಂಡ್ ದೇಶದಲ್ಲಿ ಬಲಪಂಥೀಯ ಪಕ್ಷವು ಅಧಿಕಾರಕ್ಕೆ ಬಂದು ಅಲ್ಲಿನ ಮೂಲನಿವಾಸಿಗಳ ನೆಮ್ಮದಿ, ಆರೋಗ್ಯ, ಕ್ಷೇಮಕ್ಕೆಂದು ಅವರ ಆಯ್ಕೆಯಿಂದಲೇ ಜಾರಿಯಲ್ಲಿದ್ದ ಹಲವಾರು ಸರ್ಕಾರೀ ಕಾರ್ಯನೀತಿಗಳಿಗೆ ಕೊಕ್ ಕೊಟ್ಟಿದ್ದಾರೆ.
ಬ್ರಿಸ್ಬೇನ್ ಮತ್ತು Sunshine Coast ಗಳ ನಡುವೆ ಓಡಾಡುವ ನಾನು ಅಪರೂಪಕ್ಕೊಮ್ಮೊಮ್ಮೆ ವಾಹನ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡರೂ ಅದರಿಂದ ತಪ್ಪಿಸಿಕೊಳ್ಳಲು ಹೆದ್ದಾರಿಯ ಪಕ್ಕದಲ್ಲಿ ಇರುವ ತಂಗುದಾಣಗಳು, ಪೆಟ್ರೋಲ್ ಸ್ಟೇಷನ್‌ಗಳು ಕಾಪಾಡುತ್ತವೆ. ಗೋಲ್ಡ್ ಕೋಸ್ಟ್ ಹೆದ್ದಾರಿಯಲ್ಲಿ ಓಡಾಡುವವರಿಗೆ ಅಂತಹ ಅದೃಷ್ಟ ಕಡಿಮೆ. ಸೂಜಿ ಬೀಳಲೂ ಜಾಗವಿಲ್ಲದಂತೆ ವಿಪರೀತ ವಾಹನಸಂದಣಿಯಿಂದ ತತ್ತರಿಸುತ್ತಿರುವ ಗೋಲ್ಡ್ ಕೋಸ್ಟ್ ಕಾರಿಡಾರ್ ಒಮ್ಮೊಮ್ಮೆ ಮಹಾಭಾರತದ ಚಕ್ರವ್ಯೂಹದಂತೆ ಬಾಸವಾಗುತ್ತದೆ. ಮಹಾನ್ ರಹಸ್ಯಗಳೇನೂ ಇಲ್ಲದಿದ್ದರೂ ಬ್ರಿಸ್ಬೇನ್ ಜನ ಬೆಳಗ್ಗೆ ಮತ್ತು ಸಂಜೆ peak hours ಸಮಯದಲ್ಲಿ ಗೋಲ್ಡ್ ಕೋಸ್ಟ್ ಹೆದ್ದಾರಿಯನ್ನು ಪ್ರವೇಶಿಸುವ ಮುನ್ನ ಕನಿಷ್ಠ ಎರಡೂವರೆ ಗಂಟೆಗಳ ಕಾಲ ಕಾರಿನಲ್ಲೇ ಕೂತಿರುವ ವ್ಯವಸ್ಥೆ ಮಾಡಿಕೊಂಡಿರಬೇಕು. ತಿನ್ನಲು ಸ್ನಾಕ್ಸ್ ಇರಬೇಕು; ಆದರೆ ನೀರು ಕಡಿಮೆ ಕುಡಿಯಬೇಕು. ಇಷ್ಟವಾದ ರೇಡಿಯೋ ಚಾನೆಲ್ ಇದ್ದರೂ ಗಮನ ಕಾರಿನ ಮುಂದಿರುವ ಬೃಹತ್ ಗಾತ್ರದ ಟ್ರಕ್ಕಿನ ಕಡೆಯಿರಬೇಕು ಇಲ್ಲಾ ಹಿಂದಿರುವ ಕಾರಿನವರು ಮಾಡುತ್ತಿರುವ ರೋಡ್ ರೇಜ್ ಚೇಷ್ಟೆಗಳ ಬಗ್ಗೆ ಎಚ್ಚರಿಕೆಯಿರಬೇಕು. ಎಲ್ಲಾ ತರಹದ ಡ್ರೈವಿಂಗ್ ರಿಸ್ಕ್‌ಗಳನ್ನು ನಿವಾರಿಸಿಕೊಂಡು ಮನೆಗೆ ಬಂದು ಬದುಕಿದೆಯಾ ಬಡಜೀವ ಎಂದು ದೀರ್ಘ ಉಸಿರು ಬಿಡಬೇಕು. ಆದರೆ ಮರುದಿನ ಮರುಪಯಣಕ್ಕೆ ಮನಸ್ಸನ್ನು ಹದಗೊಳಿಸಬೇಕು.
ಜನಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಶಾಪ ಹಾಕುತ್ತಾ ಹೊರದೇಶಗಳಿಂದ ಬಂದವರಿಂದಲೇ ಈ ಪಾಟಿ ವಾಹನಸಂದಣಿ ಆಗುತ್ತಿದೆ ಎಂದು ಬೈಯುವವರಿಗೇನೂ ಕಡಿಮೆಯಿಲ್ಲ. ಸದ್ಯಕ್ಕೆ ಇಪ್ಪತ್ತಾರು ಮಿಲಿಯನ್ ಇರುವ ಆಸ್ಟ್ರೇಲಿಯನ್ ಜನಸಂಖ್ಯೆ ೨೦೩೦ರಲ್ಲಿ ಮೂವತ್ತು ಮಿಲಿಯನ್ ಆಗುತ್ತದೆ, ವಲಸಿಗರ ಸಂಖ್ಯೆಯನ್ನು ನಿಯಂತ್ರಿಸಬೇಕೆಂದು ಸರ್ಕಾರವು ಚಿಂತಿಸುತ್ತಿದೆ.
ಆಸ್ಟ್ರೇಲಿಯಾದಲ್ಲಿ ಹೆಚ್ಚುತ್ತಿರುವ ಅನೇಕ ಸಂಸ್ಕೃತಿಗಳ ಜನರ ಸೇರ್ಪಡೆಯಿಂದ ಪರೋಕ್ಷವಾಗಿ ಸಮಾಜದ ಆರೋಗ್ಯಕ್ಕೆ ಒಳ್ಳೆಯದೇ ಆಗುತ್ತಿದೆ ಎಂದು ಅಭಿಪ್ರಾಯವಿದೆ. ಈ ಬಹು-ಸಂಸ್ಕೃತಿಗಳ ಸಮಾಜದಲ್ಲಿ ಬಹುತ್ವಗಳು ಹೆಚ್ಚಲಿ, ಮುಖ್ಯನೆಲೆಗೆ ಬರಲಿ ಎನ್ನುವ ಆಸೆಯೇನೋ. ಅಂದರೆ ಬೇರೆಬೇರೆ ದೇಶಗಳಿಂದ ವಲಸೆ ಬಂದೋ ಇಲ್ಲಾ ರಾಜಕೀಯ ಕಾರಣಗಳಿಂದ, ಯುದ್ಧಗಳ ಪರಿಣಾಮವಾಗಿ ನಿರಾಶ್ರಿತರಾಗಿ ನೆಲೆಸಿರುವ ಜನರು ಹೆಚ್ಚಾಗಲೆಂದೋ ಇರಬೇಕು. ಸದ್ಯಕ್ಕೆ ಆಸ್ಟ್ರೇಲಿಯಾದ ಜನಸಂಖ್ಯೆಯ ಶೇಕಡಾ ೩೦ ಭಾಗ ಜನರು ಹೊರನಾಡುಗಳಲ್ಲಿ ಹುಟ್ಟಿದವರು. ಇಂಗ್ಲಿಷ್ ತಮ್ಮ ಎರಡನೇ ಭಾಷೆಯೆಂದು ಹೇಳುವವರು ಹೆಚ್ಚುತ್ತಿದ್ದಾರೆ. ಜನರು ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವಾಗ ಕೇಳುವುದಕ್ಕೆ ಖುಷಿಯಾಗುತ್ತದೆ.
ಅಂದ ಹಾಗೆ ಹೊರನಾಡಿನಲ್ಲಿ ಹುಟ್ಟಿ ಆಸ್ಟ್ರೇಲಿಯಾಕ್ಕೆ ಬಂದು ನೆಲೆಸಿದವರ ಪಟ್ಟಿಯಲ್ಲಿ ಭಾರತೀಯರು ಈಗ ಎರಡನೆಯ ಸ್ಥಾನದಲ್ಲಿದ್ದಾರೆ. ಮೊದಲನೆಯದು ಯು.ಕೆ., ಮೂರನೆಯದು ಚೈನಾ. ಈ ಬಾರಿ ಬೇಸಿಗೆ ರಜೆಯ ನಮ್ಮ ಪ್ರವಾಸಗಳಲ್ಲಿ ಹಲವಾರು ಜನಪ್ರಿಯ ತಾಣಗಳಲ್ಲಿ ಭಾರತೀಯ ಕುಟುಂಬಗಳು ಹೆಚ್ಚಾಗಿ ಕಾಣಿಸಿದವು. ಬೀಚುಗಳಲ್ಲೂ ಕೂಡ. ಒಂದು ಹೆಸರುವಾಸಿ ಬೀಚಿನ ಕಾರ್ ಪಾರ್ಕಿನಲ್ಲಿ ಹಾದು ಹೋಗುತ್ತಿದ್ದರೆ ಅಲ್ಲೊಂದು ಚಿಕ್ಕ ಟ್ರಕ್. ಅಕ್ಕಪಕ್ಕದಲ್ಲಿ ಇಬ್ಬರು ಭಾರತೀಯ ಹೆಂಗಸರು, ಒಬ್ಬರು ಗಂಡಸರು. ಮೂವರೂ ಸೇರಿ ಟ್ರಕ್ಕಿನಲ್ಲಿದ್ದ ಕಲ್ಲಂಗಡಿ ಹಣ್ಣುಗಳನ್ನು ಮಾರುತ್ತಿದ್ದರು. ಹಣ್ಣುಕೊಳ್ಳಲು ನಾನೂ ನಿಂತು ಮಾತನಾಡಿಸಿದರೆ ಅವರಲ್ಲಿಬ್ಬರು ಬೆಂಗಳೂರಿನವರು, ಕನ್ನಡಿಗರು. ಇಮ್ಮಡಿ ಖುಷಿಯಾಯ್ತು, ನೋಡಿ. ಕನ್ನಡದಲ್ಲೇ ಮಾತನಾಡುತ್ತಾ ಹಣ್ಣು ಬೆಳೆಯುತ್ತಿರುವುದು ತಮ್ಮ ಈ ಗೆಳತಿ, ಅವಳ ಫಾರ್ಮ್ ಪಕ್ಕದ ಊರಿನಲ್ಲಿದೆ. ಅವಳಿಗೆ ಸಹಾಯ ಮಾಡಲು ತಾವಿಬ್ಬರೂ ಬಂದು ಫಾರ್ಮ್ ಸ್ಟೇ ಮಾಡಿ ಬೇಸಿಗೆಯನ್ನು ಕಳೆಯುತ್ತಿರುವುದಾಗಿಯೂ ಹೇಳಿಕೊಂಡರು. ನಿನಗೂ ಆಸಕ್ತಿಯಿದ್ದರೆ ಅವಳ ತೋಟಕ್ಕೆ ಹೋಗಿ ಸಹಾಯ ಮಾಡುತ್ತಾ ಆತಿಥ್ಯ ಪಡೆಯಬಹುದು, ಚೆನ್ನಾಗಿ ನೋಡಿಕೊಳ್ಳುತ್ತಾಳೆ, ಅಂದರು. ತೆಲುಗಿನವಳಾದ ತೋಟದೊಡತಿ ಕಿರುನಗೆ ಚೆಲ್ಲುತ್ತಾ ನಿಂತಿದ್ದಳು.
ಈ ಬೃಹತ್ ಆಸ್ಟ್ರೇಲಿಯಾದ ಒಂದು ಬೀಚ್, ಯಾವುದೊ ಕಾರ್ ಪಾರ್ಕ್, ಕಲ್ಲಂಗಡಿ ಹಣ್ಣಿನ ಕರೆ, ಕಂಡರಿಯದಿದ್ದ ಆ ಹಣ್ಣುಮಾರುವವರು ಕನ್ನಡಿಗರಾಗಿದ್ದದ್ದು- ಎತ್ತಿಂದೆತ್ತ ಈ ಮಾಯದ ಕ್ಷಣಗಳು, ಹೇಗೆ ಹುಟ್ಟಿದವು, ಹೇಗೆ ಜಾರಿದವು ಎಂದುಕೊಳ್ಳುತ್ತಾ ಸಮುದ್ರದಂಚಿನಲ್ಲಿ ಕೂತೆ. ಎಣೆಯಿಲ್ಲದ ತಾಳ್ಮೆಯಿಂದ ಹರಿದುಬಂದು ದಡಕ್ಕೆ ಮುತ್ತಿಡುತ್ತಿದ್ದ ಅಲೆಗಳನ್ನು ಸುಮ್ಮನೆ ಹಾಗೇ ನೋಡುತ್ತಾ ನೋಡುತ್ತಾ ಕಾಲದಲ್ಲಿ ಕರಗಿಹೋದೆ. ಹೀಗೆಯೇ ನಿಮ್ಮ ೨೦೨೪ ರ ದಿನಗಳೂ ಕೂಡ ಲೆಕ್ಕವಿಡದ, ಕೇವಲ ನಿಮ್ಮದೇ ಆಗುವ ಸುಂದರ ಘಳಿಗೆಗಳಾಗಲಿ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
Wishing you and your family a HAPPY NEW YEAR 2024.
ಧನ್ಯವಾದಗಳು. ನಿಮಗೂ ಕೂಡ.🙏🙏