ಬೆಂಗಳೂರಿನ ಸಂತಜೋಸೆಫರ ಕಾಲೇಜಿನಲ್ಲಿ ಸತತ 27 ವರ್ಷ ಒಂದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಮಾಯವಾಗಿದ್ದ ಕನ್ನಡವನ್ನು ಕನ್ನಡ ಸಂಘ ಮಾಡುವ ಮೂಲಕ ಕನ್ನಡಮಯವಾಗಿಸಿದ್ದರು. ತಮ್ಮ ಪುಸ್ತಕಗಳಲ್ಲದೆ ತಮ್ಮ ವಿದ್ಯಾರ್ಥಿಗಳಿಂದಲೂ ಪುಸ್ತಕವನ್ನು ಹೊರತಂದವರು. ಇವರ ತರಗತಿಗಳಿಗೆ ಮೋಹನ್ ದಾಸ್ ಪೈ ರಂಥವರು ಅನುಮತಿ ಪಡೆದು ಪ್ರವೇಶಿಸುತ್ತಿದ್ದರು ಎಂದರೆ ಇವರ ಕನ್ನಡ ವಿದ್ವತ್ತು, ವಾಕ್‌ಚಾತುರ್ಯ ಎಷ್ಟಿತ್ತೆಂದು ಊಹಿಸಬಹುದು. ಅದೇ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿದ್ದ ಗೋವಿಂದರಾಜ್ ಅವರೊಡಗೂಡಿ ನಾಟಕರಂಗವನ್ನು ಸಮೃದ್ಧಗೊಳಿಸಿದವರು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹತ್ತೊಂಭತ್ತನೆಯ ಬರಹ ನಿಮ್ಮ ಓದಿಗೆ
ನೆನ್ನೆ ಮಡಿಕೇರಿಯಿಂದ ಬರುವಾಗ ‘ಎ.ಕೆ’ ರೆಸ್ಟೋರೆಂಟ್ ಎನ್ನುವ ಬೋರ್ಡನ್ನು ನೋಡಿದೆ. ‘ಏ.ಕೆ’ ರೆಸ್ಟೋರೆಂಟ್! ರೆಸ್ಟೋರೆಂಟ್ ಏಕೆ ಬೇಕು ಎನ್ನುವ ಸಮಜಾಯಿಷಿ ಅವರಲ್ಲಿ ಇರಬಹುದೇ? ಅನ್ನಿಸಿತು. ಕ್ಷಣಉರುಳಿದಂತೆ ರೆಸ್ಟ್ ಎಲ್ಲರಿಗೂ ಬೇಕು . ಅದಕ್ಕೆ ಅಲ್ವೆ ಎಚ್ ಎಸ್ವಿಯವರು ಶಾಶ್ವತ ಆರಾಮವನ್ನು ಅರಸಿ ಹೊರಟಿದ್ದು ಅನ್ನಿಸಿತು. ಪುರಂದರ ದಾಸರ ಕೀರ್ತನೆಯ ಇದೆಯಲ್ಲವೆ; ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ ಎಂದು. ‘ರೆಸ್ಟ್ ಹೌಸ್ ಫಾರ್ ರೆಂಟ್ʼ ಎಂದು ಓದಿಕೊಂಡರೆ ಅದೇ ಅಲ್ವೆ ಬಾಡಿಗೆ ಮನೆ ಅನ್ನಿಸಿತು. ಕನ್ನಡ ಕುಲಕೋಟಿಗಳ ಹೃದಯ ಕೋಟೆಗೆ ತಮ್ಮ ಹಾಡುಗಳಿಂದ ಲಗ್ಗೆಯಿಟ್ಟಿದ್ದ ಎಚ್.ಎಸ್. ವೆಂಕಟೇಶ್ ಮೂರ್ತಿಯವರು. ಮಳೆ ಸುರಿದು ಹಗುರಾದ ಮುಗಿಲಿನಂತೆ ನಿರುಮ್ಮಳವಾದರೆ? ಇಷ್ಟು ಕಾಲ ನಮ್ಮೊಟ್ಟಿಗಿದ್ದು ಕಡೆಗೆ ಮುಕ್ತವಾಗಿಬಿಟ್ಟರೇ? ಎಂಬ ಭಾವನೆ ಅವರ ಭಾವಗೀತೆಗಳನ್ನು ಆಲಿಸಿದ ಕನ್ನಡ ಮನಸ್ಸುಗಳಿಗೆ ಖಂಡಿತಾ ಬರುತ್ತದೆ. ನಾವಳಿದರೂ ಅಳಿಯದಂಥ ಭಾವಸ್ಫುರಿಸುವ ಭಾವಗೀತೆಗಳಲ್ಲಿ ಅವರು ಅಮರರಾಗಿದ್ದಾರೆ.
RCB ಫೈನಲ್ ಪ್ರವೇಶೀಸಿದೆ, ಮಗಳು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರಬಂಧ ಮಂಡಿಸಿ ಗೆದ್ದಿದ್ದಾಳೆ, ಗೆಳತಿಯ ಮಗನ ಶಾರ್ಟ್ ಫಿಲ್ಮ್ ಟೀಸರ್ ನಾಳೆ ಬಿಡುಗಡೆ ಎನ್ನುವ ಖುಷಿಯೇನೋ ಇದೆ. ಆದರೆ ಆತ್ಮೀಯ ಧ್ವನಿಯೊಂದನ್ನು ನಾಳೆಯಿಂದ ಆಕಾಶವಾಣಿಯಿಂದ ಕೇಳಲು ಸಾಧ್ಯವಾಗುವುದಿಲ್ಲವಲ್ಲ… ಅವರು ವಯೋನಿವೃತ್ತಿ ಹೊಂದುತ್ತಿದ್ದಾರೆ! ಎಂಥ ಬೇಸರದ ಸಂಗತಿ ಎನ್ನುತ್ತಿರಬೇಕಾದರೆ ಅತೀವ ನೋವನ್ನು ತಂದಿದ್ದು ‘ಎಚ್ಎಸ್ವಿ ಇನ್ನಿಲ್ಲ’ ಎನ್ನುವ ಸುದ್ದಿ. ಆ ಕ್ಷಣಕ್ಕೆ ವೆಂಕಟೇಶಮೂರ್ತಿಗಳು ಮುಕ್ತರಾದರೆ? ಅನ್ನಿಸಿತು. ವಯೋಸಹಜ ಕಾಯಿಲೆ! ಎಂಭತ್ತಾಯಿತು! ಇತ್ಯಾದಿ ಮಾತುಗಳು ಒಪ್ಪತಕ್ಕವೇ. ಆದರೆ ಮನೋಸಹಜವಾಗಿ ಭಾವನಾತ್ಮಕವಾಗಿ ಅವರ ಗೀತೆಗಳೊಂದಿಗೆ ಇದ್ದ ನಮಗೆ ಇದು ತುಂಬಲಾರದ ನಷ್ಟವೆ!
ಹಿಂದಿನ ದಿನ ಮಗನ ಕನ್ನಡ ಪಠ್ಯದಲ್ಲಿ ಎಚ್ಎಸ್ವಿ ಅವರ ‘ಬಿಲ್ಲಹಬ್ಬ’ ಎಂಬ ನಾಟಕದ ತುಣುಕನ್ನು ಓದಿ ಪೌರಾಣಿಕ ಪಾತ್ರಗಳನ್ನು ಹೇಗೆ ಬಿಂಬಿಸಿದ್ದಾರೆ ಎಂಥಾ ಪಾಂಡಿತ್ಯ ಅವರದು ಎಂದನ್ನಿಸಿತ್ತು. ಅವರೆ ಹಾಗೆ ಪೌರಾಣಿಕ ಪಾತ್ರಗಳನ್ನು ಇಂದಿನ ದಿನಮಾನಕ್ಕೆ ಅನ್ವಯಿಸಿ ಹೇಳುತ್ತಿದ್ದರು. ನವೋದಯ ಕಾಲದಲ್ಲಿ ಸಾಹಿತ್ಯ ಲೋಕವನ್ನು ಪ್ರವೇಶಿಸಿದರೂ ನವ್ಯಕವಿ ಅಡಿಗರ ಸೆಳೆತದ ಕಾರಣದಿಂದ ನವ್ಯದ ಕಾಲಘಟ್ಟದಲ್ಲೂ ಪ್ರಮುಖವಾಗಿ ಕಾಣಿಸಿಕೊಂಡವರು ಆದರೂ ವೆಂಕಟೇಶಮೂರ್ತಿಗಳು ಹೆಚ್ಚು ಗುರುತಿಸಿಕೊಂಡಿದ್ದು ತಮ್ಮ ಭಾವಸ್ಫುರಣೆಯ ಭಾವಗೀತೆಗಳ ಮೂಲಕವೆ.
ಅಮ್ಮಾ ನಾನು ದೇವರಾಣೇ……
ಹುಚ್ಚುಕೋಡಿ ಮನಸ್ಸು ಅದು ಹದಿನಾರರ ವಯಸ್ಸು……
ತೂಗು ಮಂಚದಲ್ಲಿ ಕೂತು…..
ಲೋಕದ ಕಣ್ಣಿಗೆ ರಾಧೆಯೂ ಕೂಡ…….
ಮಧುರೆಗೆ ಹೋದನು ಮಾಧವ……….
ಮೊದಲಾಗಿ ಎಲ್ಲ ವಯೋಮಾನಕ್ಕೂ ಗೀತೆಗಳನ್ನು ಬರೆದವರು ಎಚ್ಎಸ್ವಿ. ರಾಧೆಯ ತೊಳಲಾಟವನ್ನು ಸೀತೆಯ ಅಳಲನ್ನು ಆಪ್ತವಾಗಿ ತಮ್ಮ ರಚನೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಕೃಷ್ಣ ಅವರ ದೃಷ್ಟಿಯಲ್ಲಿ ದೈವವಾಗಿ ಕಾಣಿಸಿಕೊಂಡಿಲ್ಲ. ಬದಲಾಗಿ ಸಖನಾಗಿ, ವಿರಹಿಯಾಗಿ ಆಪತ್ಭಾಂದವನಾಗಿ ಕಾಣಿಸಿಕೊಂಡಿದ್ದಾನೆ. ‘ನನ್ನೆಲ್ಲ ಸಂತಸಗಳಿಗೆ ಅಡ್ಡಿ ಸಾವು’ ಎನ್ನುತ್ತ ಇವರ ಗೀತೆಗಳನ್ನು ಸಂಗೀತಕ್ಕೆ ಅಳವಡಿಸಿದ್ದ ಮೈಸೂರು ಅನಂತಸ್ವಾಮಿಗಳನ್ನು ಅತ್ಯಂತ ನಮ್ರತೆಯಿಂದ ನೆನೆಯುತ್ತಿದ್ದರು.
ಕೆಎಸ್ ನಿಸಾರ್ ಅಹ್ಮದ್ ಅವರನ್ನು ಮಾದರಿ ಮೇಷ್ಟ್ರು ಎನ್ನುವ ಇವರಿಗೆ ಸಾಹಿತ್ಯ ದಿಗ್ಗಜರೆ ಮನೆ ಹಿರಿಯರಾಗಿ, ಹಿತೈಷಿಗಳಾಗಿ ನಿಂತಿದ್ದರು. ಪು.ತಿ.ನ, ಕೆ.ಎಸ್.ನ., ಸು. ರಂ. ಎಕ್ಕುಂಡಿ, ಜಿ ಎಸ್. ಎಸ್, ಎಂ. ಎಸ್. ಲಕ್ಷ್ಮೀನಾರಾಯಣ ಭಟ್ಟರು, ಅಡಿಗರು, ಅನಂತಮೂರ್ತಿಯವರ ಮುನ್ನುಡಿಗಳೊಂದಿಗೆ ಅವರ ಆಶೀರ್ವಾದವನ್ನು ಪಡೆದವರು. ಬೆಂಗಳೂರಿನ ಸಂತಜೋಸೆಫರ ಕಾಲೇಜಿನಲ್ಲಿ ಸತತ 27 ವರ್ಷ ಒಂದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಮಾಯವಾಗಿದ್ದ ಕನ್ನಡವನ್ನು ಕನ್ನಡ ಸಂಘ ಮಾಡುವ ಮೂಲಕ ಕನ್ನಡಮಯವಾಗಿಸಿದ್ದರು. ತಮ್ಮ ಪುಸ್ತಕಗಳಲ್ಲದೆ ತಮ್ಮ ವಿದ್ಯಾರ್ಥಿಗಳಿಂದಲೂ ಪುಸ್ತಕವನ್ನು ಹೊರತಂದವರು. ಇವರ ತರಗತಿಗಳಿಗೆ ಮೋಹನ್ ದಾಸ್ ಪೈ ರಂಥವರು ಅನುಮತಿ ಪಡೆದು ಪ್ರವೇಶಿಸುತ್ತಿದ್ದರು ಎಂದರೆ ಇವರ ಕನ್ನಡ ವಿದ್ವತ್ತು, ವಾಕ್‌ಚಾತುರ್ಯ ಎಷ್ಟಿತ್ತೆಂದು ಊಹಿಸಬಹುದು. ಅದೇ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿದ್ದ ಗೋವಿಂದರಾಜ್ ಅವರೊಡಗೂಡಿ ನಾಟಕರಂಗವನ್ನು ಸಮೃದ್ಧಗೊಳಿಸಿದವರು. ನಾಟಕರಂಗ, ಸಿನಿಮಾ, ಧಾರಾವಾಹಿ ಸುಗಮಸಂಗೀತ, ಮಕ್ಕಳ ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲೂ ಇವರು ಅಪಾರ ಸಾಧನೆ ಮಾಡಿದ್ದಾರೆ. ‘ಅಮ್ಮ ಗುಬ್ಬಿಯ ಲೋಕ ಜ್ಞಾನ’ ನನಗೆ ತುಂಬಾ ಇಷ್ಟವಾದ ಕವಿತೆಗಳಲ್ಲಿ ಒಂದು. ‘ಹಾವ್ ಇರುತ್ತೆ ಹಾವಿನ ಹಾಗೆ ಕಾಗೆ ಕಪ್ಪಗೆ’ ಎಂಬಂಥ ಸಾಲು ಪ್ರಾಣಿಪಕ್ಷಿಗಳ ಹುಟ್ಟು ಗುಣವನ್ನು ಸಲೀಸಾಗಿ ಹೇಳಿ ಮುಗಿಸಿದ್ದಾರೆ ಎನ್ನುವಂತೆ ಇಲ್ಲ. ಇದು ಮನುಷ್ಯನ ಗುಣದ ಬಗ್ಗೆಯೂ ಅವಲೋಕನ ಮಾಡುವ ಸಾಲಾಗಿದೆ. ಚಿನ್ನಾರಿ ಮುತ್ತ ಎಂದಕೂಡಲೆ ವಿಜಯ ರಾಘವೇಂದ್ರ ಅವರು ‘ಹಕ್ಕಿಗೆ ರೆಕ್ಕೆಯೊಂದಿದ್ದರೆ ಸಾಕೆ…..’, ‘ಎಷ್ಟೊಂದ್ ಜನ ಇಲ್ಲಿ ಯಾರು ನಮ್ಮೋರು….’ ಎಂಬ ಗೀತೆಯ ಮೂಲಕವೇ ನೆನಪಿಗೆ ಬರುತ್ತಾರೆ. ಮುಂದುವರೆದಂತೆ ಚಲನಚಿತ್ರದಲ್ಲಿ ಶೂ ಕದಿಯುವ ಹುಡುಗ ಅಥ್ಲೀಟ್ ಆಗಿ ಮಾರ್ಪಡುವ ರೀತಿಯೇ ಅಚ್ಚರಿ. ಇದನ್ನೆಲ್ಲ ಬರೆದವರು ವೆಂಕಟೇಶಮೂರ್ತಿಗಳು. ಅವರ ಕಲ್ಪನೆ ಎಂದಿಗೂ ಶ್ಲಾಘನೀಯ.
ನಂತರ ‘ಮತದಾನ’ ಚಿತ್ರಕ್ಕಾಗಿ ಇವರು ಬರೆದ ‘ನಾಯಿ ತಲೆಮ್ಯಾಲಿನ ಬುತ್ತಿ’ ಗೀತೆಯು ಅನಿಶ್ಚಿತತೆಯನ್ನು ಹೇಳುವ ಗೀತೆಯಾಗಿದೆ. ಕಿರಿಕ್ ಪಾರ್ಟಿಯ ‘ತೂಗು ಮಂಚದಲ್ಲಿ ಕೂತು’ ಎಂಬ ಅದ್ಭುತ ಗೀತೆಯನ್ನು ರಚಿಸಿದವರು ಎಚ್ಎಸ್ವಿ ಅವರೆ. ಇನ್ನು ಧಾರವಾಹಿಗೆ ಬಂದರೆ ‘ಮುಕ್ತ’, ‘ಮುಕ್ತಮುಕ್ತ’, ‘ಮಗಳು ಜಾನಕಿ’ ಮುಂತಾದವಕ್ಕೆ ಶೀರ್ಷಿಕೆ ಗೀತೆಗಳನ್ನು ಬರೆದವರು ಇವರು. ತಮ್ಮ ಜೀವನದ ಘಟನೆಗಳನ್ನು ಸೂಕ್ಷ್ಮವಾಗಿ ತಮ್ಮ ಕವಿತೆಗಳಲ್ಲಿ ಹೊರಹೊಮ್ಮಿಸಿದ ಕವಿ ವೆಂಕಟೇಶಮೂರ್ತಿಗಳು ಮೈಸೂರು ಅನಂತಸ್ವಾಮಿ ಮತ್ತು ಸಿ.ಅಶ್ವಥ್ ಎಂಬ ಮಹಾನ್ ಸಂಗೀತಸಂಯೋಜಕರು ಮತ್ತು ಸಂಗೀತಾಕಟ್ಟಿ, ಗರ್ತಿಕೆರೆ ರಾಘಣ್ಣ, ಉಪಾಸನ ಮೋಹನ್, ರಾಘವೇಂದ್ರ ಬಿಜಾಡಿ, ಮೃತ್ಯುಂಜಯ ದೊಡ್ಡವಾಡ ಮೊದಲಾದ ಮಹಾನ್ ಗಾಯಕರಿಗೆ ಆತ್ಮೀಯರಾಗಿದ್ದವರು. ‘ಮಣ್ಣು ತಿಂದು ಸಿಹಿ ಹಣ್ದ ಕೊಡುವ ಮರ’ ಇವರ ಗೀತೆಯ ಸಾಲಲ್ಲ ಬದಲಾಗಿ ಅವರೆ ಆಗಿದ್ದರು ಎಂದರೆ ತಪ್ಪಿಲ್ಲ. ‘ತೂಗುಮಂಚ’ ಮತ್ತು ‘ಅನಂತನಮನ’ ಇವರ ಪ್ರಖ್ಯಾತ ಆಲ್ಬಮ್‌ಗಳು. 77 ರ ಹರೆಯದಲ್ಲೂ ನಾಯಕನಟರಾಗಿ ಅಭಿನಯಿಸಿದ್ದಲ್ಲದೆ ‘ಹಸಿರು ರಿಬ್ಬನ್’ ಎಂಬ ಚಲನಚಿತ್ರವನ್ನು ಇವರು ನಿರ್ದೇಶಿಸಿದ್ದಾರೆ.
ತಮ್ಮ ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ‘ಅಭ್ಯಾಸ ಬಳಗ’ ವನ್ನು ಪ್ರಾರಂಭ ಮಾಡಿ ಐದು ವರ್ಷ ನಡೆಸಿದವರು. ಆ ಬಳಗದ ಸದಸ್ಯರೆ ನಮ್ಮ ‘ರೇಷ್ಮೆ ಬಟ್ಟೆಯ’ ವಸುಧೇಂದ್ರರು ಮತ್ತು ‘ನಿಯುಕ್ತಿಪುರಾಣ’ದ ನಾಗರಾಜ ವಸ್ತಾರೆಯವರು. ಇದರಿಂದ ಪ್ರೇರೇಪಣೆ ಪಡೆದು ಮೈಸೂರು ಅಭ್ಯಾಸ ಬಳಗ ಎಂಬ ಗುಂಪು ಪ್ರೊ. ತಾರಾನಾಥರ ಸಾರಥ್ದಲ್ಲಿ ಅಭ್ಯಾಸ ಮಾಡಿದ್ದಿದೆ. ಕೊವಿಡ್ ನಂತರದಲ್ಲಿ ಈ ಗುಂಪು ಮಸುಕಾಗಿದೆ.
ಬರೆ ಸಾಹಿತ್ಯ ರಚನೆ ಮಾತ್ರವಲ್ಲದೆ ಪುಸ್ತಕಗಳ ಕವರ್ ಪೆಜ್ ರಚಿಸುವಲ್ಲಿ ಇವರು ಸಿದ್ಧಹಸ್ತರಾಗಿದ್ದರು. ಇವರ ಪುಸ್ತಕಗಳಲ್ಲದೆ ರಾಷ್ಟ್ರಕವಿಯಾಗಿದ್ದ ಜಿಎಸ್‌ಎಸ್, ನರಹಳ್ಳಿ ಬಾಲಸುಬ್ರಹ್ಮಣ್ಯ, ಬರಗೂರು ರಾಮಚಂದ್ರಪ್ಪ ಮೊದಲಾದವರ ಪುಸ್ತಕಗಳಿಗೆ ಕವರ್ ಪೇಜ್ ಮಾಡಿದವರು ಇವರು. ಮೈಸೂರಿನ ತಳುಕಿನ ವೆಂಕಣ್ಣ ಸ್ಮಾರಕ, ಅಭಿನವ ಪ್ರಕಾಶನ, ಅಂಕಿತ ಪುಸ್ತಕ ಪ್ರಕಾಶನಗಳನ್ನು ಒಲುಮೆಯಿಂದ ಯಾವಾಗಲೂ ಸ್ಮರಿಸುತ್ತಿದ್ದರು. ಮುಖ್ಯವಾಗಿ ಇವರು ಬುದ್ಧ ಚರಣದಂಥ ಮಹಾಕಾವ್ಯವನ್ನು ರಚಿಸಿದ್ದಾರೆ. ‘ಬುದ್ಧಚರಣ’ದ ಕ್ಲೈಮಾಕ್ಸ್ ಹಾಗು ನನ್ನ ಜೀವನದ ಕ್ಲೈಮಾಕ್ಸ್ ಒಂದೇ ಆಗಬೇಕೆನ್ನುವುದು ಅವರ ತುಡಿತವಾಗಿತ್ತು. ಬುದ್ಧನ ಬಗ್ಗೆ ಇವರು ಅದಮ್ಯ ಪ್ರೀತಿ ಹಾಗು ಭಕ್ತಿ ಇರಿಸಿಕೊಂಡಿದ್ದವರು. ಬದುಕಿನ ವ್ಯಾಪಾರದ ಎಲ್ಲಾ ಸಿಗ್ಗುಗಳು ಈತನಿಂದಲೆ ಬಿಡುಗಡೆ ಹೊಂದುತ್ತವೆ ಎನ್ನುವ ಕಾರಣಕ್ಕೆ ‘ಬುದ್ಧಚರಣದಂಥ ಮಹಾಕಾವ್ಯವನ್ನು ಬರೆದರು’. ಆಸೆಯೇ ದುಃಖಕ್ಕೆ ಮೂಲ ಎಂದ ಕವಿಯು ದುಃಖ ಜಗತ್ತಿನಿಂದ ಆಚೆಬಂದು ಮುಕ್ತವಾಗುವ ಪರಿ ಈ ಬುದ್ಧಚರಣವಾಗಿತ್ತು ಅನ್ನಿಸುತ್ತದೆ.
ಈಗ್ಗೆ ಎರಡು ವರ್ಷಗಳ ಹಿಂದೆ ಹಾಸನದ ಹಿಮ್ಸ್‌ನಲ್ಲಿ ಕಿಕ್ಕಿರಿದು ಸೇರಿದ ಸಭಾಂಗಣವನ್ನು ಉದ್ದೇಶಿಸಿ ಕುಳಿತೇ ಮಾತನಾಡಿದ್ದರು. ದೇಹ ದಣಿಯುತ್ತಿದೆ ಎಂಬ ಸೂಕ್ಷ್ಮವಿದ್ದರೂ ಉತ್ಸಾಹದ ಚಿಲುಮೆಯಾಗಿ ತಮ್ಮ ಅಧ್ಯಯನ ಮತ್ತು ಸೂಕ್ಷ್ಮ ಸಂವೇದನೆಯಿಂದ ಮಾತನಾಡಿದ್ದರು.
ಶಿಶುಸಾಹಿತಿಯಾಗಿ, ಭಾವಗೀತೆಗಳ ಹರಿಕಾರನಾಗಿ, ಚಲನಚಿತ್ರ, ರಂಗಭೂಮಿ, ಚಲನಚಿತ್ರ ನಿರ್ದೇಶಕ ಗೀತೆ ರಚನಕಾರರಾಗಿದ್ದ ಇವರು ಜೀವನವೆಂದರೆ ವಿವಿಧವೇಷ ಸ್ಪರ್ಧೆ ಎನ್ನುತ್ತಿದ್ದರು. ಶಿಶು ಸಾಹಿತ್ಯದಿಂದ ಅಧ್ಯಾತ್ಮಿಕದವರೆಗೆ ಇವರ ಲೇಖನಿಯ ಹರವು ಹರಡಿತ್ತು. ಈಗ ಮಳೆಸುರಿದು ಹಗುರಾದ ಮೋಡಗಳಂತೆ ತಮ್ಮ ಮನೆ ಸಖಿಯನ್ನು ತೊರೆದು ಮನದನ್ನೆಯನರಸುವ ಸಖನಾಗಿ ಲೌಕಿಕ ಬಂಧನಗಳಿಂದ ಮುಕ್ತರಾಗಿದ್ದಾರೆ. ಅಂತಿಮ ನಮನಗಳು ಸರ್.……..!

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.