ದೇವೇಂದ್ರ ಕುಮಾರ ಹಕಾರಿ ಹುಟ್ಟಿದ್ದು ರಾಯಚೂರು ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ. ತಂದೆ ಸಿದ್ದಪ್ಪ, ತಾಯಿ ಮಲ್ಲವ್ವ. ಕಲಬುರ್ಗಿಯ ಶರಣ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ. ಮುಂದೆ ಧಾರವಾಡದ ಕರ್ನಾಟಕ ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿ ೧೯೯೧ರಲ್ಲಿ ನಿವೃತ್ತಿ.

ಕಾದಂಬರಿ ಕೂಗುತಿವೆ ಕಲ್ಲು, ಚೆಲ್ವ ಕೋಗಿಲೆ. ಕಾವ್ಯ ಚಿನ್ಮಯ, ಆಚೆ ಈಚೆ, ಬಿಡುಗಡೆ, ನನ್ನ ಸುತ್ತು, ಆಯ್ದ ಕವನಗಳು. ವಿಮರ್ಶೆ-ಸಾಹಿತ್ಯ ಸಮ್ಮುಖ, ಕನ್ನಡ ಕಾವ್ಯಗಳಲ್ಲಿ ಕಿರಾತಾರ್ಜುನ ಪ್ರಸಂಗ, ಶಿವನ ಡಂಗುರ. ಕಥಾಸಂಕಲನ-ಚಾಟಿ, ಒರೆಗಲ್ಲು. ಗೀತನಾಟಕ-ಅಮೃತಮತಿ, ಶಾಕುಂತಲಾ, ಕ್ಷಿತಿಜದಾಚೆ, ಗೀತಶಿವ ಕಥಾ.

ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗಳಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಮೈಸೂರು ಸರ್ಕಾರದ ಬಹುಮಾನ, ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸ್ವಾತಂತ್ರ್ಯಯೋಧ ಸನ್ಮಾನ, ಕಾವ್ಯಾನಂದ ಪ್ರಶಸ್ತಿ, ದ. ಭಾರತ ಹಿಂದಿ ಪ್ರಚಾರ ಸಭಾ ಪ್ರಶಸ್ತಿ ಮುಂತಾದವು ಲಭಿಸಿವೆ. ಕನ್ನಡ ಕಾವ್ಯಮಾಲೆಯ ಕಾಣದ ಕುಸುಮಗಳು ಸರಣಿಯಲ್ಲಿ ಅವರು ಬರೆದ ಗೀತ ಪ್ರಭಾತ ಕವಿತೆ ನಿಮ್ಮ ಓದಿಗೆ.

ಗೀತ- ಪ್ರಭಾತ

ಋತುಚಕ್ರದಂತರದ ಶ್ರುತಿ ಸಂಚು ಹೂಡಿ
ಬೀಸಿರಲು ಇಂದ್ರಜಾಲ,
ಬಾನಗೂಡೊಳು ಕುಳಿತು ಕಣ್ಬಿಟ್ಟು ನೋಡುತಿವೆ
ಚಿಕ್ಕೆ-ಹಕ್ಕಿಗಳೆಲ್ಲ ಜೋಡಿ ಜೋಡಿ.

ಮೆಲ್ಲಮೆಲ್ಲನೆ ಗುಟುರು ಗುಟುರುಗೂಂ ಗುಟುರುಗೂಂ
ಸಿಂಬಿ ಸುಳಿ ಬಿಚ್ಚಿ,
ಉಲಿವ ತುಪ್ಪುಳನವುರು ಮೈಗೆ ಸೋಕಿ,
ಚುಂಚಿನಿಂಚರದಲ್ಲಿ ಹೊಂಚು ಹಾಕಿ
ಮತ್ತೆ .. ..

ಮತ್ತೆ ಬೆಚ್ಚನೆ ಮೌನ ! ಬಿಚ್ಚಿ ಹೊದೆದು
ತಂದ್ರಿ ಬಿಚ್ಚಿಹೊದೆದು
ದಿಟ್ಟಿಸುತ, ಹುಕಿಯ ಟಿಕಿ ಟಿಕ್ಕಿಯನು ಹಚ್ಚಿ;

ಇರುಳ ಬೇಡನು ಬಿಟ್ಟ ಬಾಣ ಕೊರಳಿಗೆ ನಟ್ಟು
ದೊಪ್ಪೆಂದು ಕೆಡೆಕಡೆದು ಕೊರಗಿ ಕೊರಗಿ
ನೆಲದ ತೊಡೆ ಮೇಲೊರಗಿ
ಹೊರಳುತಿರೆ ; ಕರಗಿ
ಕ್ಷಿತಿಜವಾಲ್ಮೀಕಿಯದೆಯಿಂದ ಚಿಮ್ಮಿದ ಗೀತ
ಸುಪ್ರಭಾತ