ಮಮತಾ ಸಾಗರ್ ಭಾಷೆಯಲ್ಲಿ ಹೇಳುವುದಾದರೆ ಆಕೆಯ ಪದಸಂಚಾರದ ಲಯ, ಗತಿ, ಭಾವ, ಅರ್ಥ ವ್ಯಾಪ್ತಿ ಮತ್ತು ಭಾಷೆಯ ನಿಲ್ಲದ ಪಯಣ ಕವಿಯತ್ರಿಯಂತೆಯೆ ಆಕೆಯ ಪದಗಳು ಕೂಡ ನಿರಂತರ ಸಂಚಾರದಲ್ಲಿರುತ್ತವೆ. ಹೀಗಾಗಿ ಆಕೆಯ ಭಾವನೆ ಮತ್ತು ಭಾವತೀವ್ರತೆಗಳಿಗೆ ಜಡ್ಡು ಮತ್ತು ಜಿಡ್ಡು ಹಬ್ಬಿಲ್ಲ. ಕೆಲವೆಡೆ ಪ್ರಖರವಾಗಿ ಇಡೀ ಆಸ್ತಿತ್ವವನೆ ಕಲಕುವ ಸಾಲುಗಳು ಯರ್ರಾ ಬಿರ್ರಿ ಕಲ್ಲು ಮಳೆಗರೆದಂತೆ ಮತ್ತೊಮ್ಮೆ ಪುಷ್ಪ ವೃಷ್ಟಿಯಂತೆ ಮತ್ತೊಮೆ ತಣ್ಣಗೆ ಕರಗುವ ಮಂಜಿನ ಕಠಾರಿ ಆಳವಾಗಿ ಎದೆಗಿಳಿದಂತೆ ಕಾಡುತ್ತಲೇ ಹೋಗುತ್ತವೆ.
ಮಮತಾ ಜಿ. ಸಾಗರ ಇಲ್ಲಿಯವರೆಗಿನ ಕವಿತೆಗಳ ಸಂಕಲನ “ಪದಸಂಚಾರ”ಕ್ಕೆ ಬಾನು ಮುಷ್ತಾಕ್ ಬರೆದ ಮುನ್ನುಡಿ
“ಇಲ್ಲಿವರೆಗಿನ ಕವಿತೆಗಳು” ಮಮತಾ ಸಾಗರ್ ಭಾಷೆಯಲ್ಲಿ ಹೇಳುವುದಾದರೆ ಆಕೆಯ ಪದಸಂಚಾರದ ಲಯ, ಗತಿ, ಭಾವ, ಅರ್ಥ ವ್ಯಾಪ್ತಿ ಮತ್ತು ಭಾಷೆಯ ನಿಲ್ಲದ ಪಯಣ ಕವಿಯತ್ರಿಯಂತೆಯೆ ಆಕೆಯ ಪದಗಳು ಕೂಡ ನಿರಂತರ ಸಂಚಾರದಲ್ಲಿರುತ್ತವೆ. ಹೀಗಾಗಿ ಆಕೆಯ ಭಾವನೆ ಮತ್ತು ಭಾವತೀವ್ರತೆಗಳಿಗೆ ಜಡ್ಡು ಮತ್ತು ಜಿಡ್ಡು ಹಬ್ಬಿಲ್ಲ. ಕೆಲವೆಡೆ ಪ್ರಖರವಾಗಿ ಇಡೀ ಆಸ್ತಿತ್ವವನೆ ಕಲಕುವ ಸಾಲುಗಳು ಯರ್ರಾ ಬಿರ್ರಿ ಕಲ್ಲು ಮಳೆಗರೆದಂತೆ ಮತ್ತೊಮ್ಮೆ ಪುಷ್ಪ ವೃಷ್ಟಿಯಂತೆ ಮತ್ತೊಮೆ ತಣ್ಣಗೆ ಕರಗುವ ಮಂಜಿನ ಕಠಾರಿ ಆಳವಾಗಿ ಎದೆಗಿಳಿದಂತೆ ಕಾಡುತ್ತಲೇ ಹೋಗುತ್ತವೆ. ಹೀಗಾಗಿ ಮಮತ ಸಾಗರ್‌ಳ ಕಾವ್ಯದ ಬಗ್ಗೆ ನಾನು ತಕ್ಕಡಿಯಲ್ಲಿ ತೂಗುವುದಕ್ಕೆ ಬದಲಾಗಿ ನನ್ನ ಮನಸ್ಸನ್ನು ತಟ್ಟಿದ ಎದೆಯಲ್ಲಿ ಮಂಚಿನ ಸಂಚಾರಗೈದ ಕಾಡಿದ ಕಾಡುತ್ತಿರುವ ಆಕೆಯ ಅನುಭವಗಳ ಬಗ್ಗೆ ನನ್ನ ಅನಿಸಿಕೆಯನ್ನು ದಾಖಲಿಸುತ್ತಿದ್ದೇನೆ.
ಕಾವ್ಯದೊಡನೆ ನನಗೆ ಮುಖಾ ಮುಖಿಯಾದದ್ದು ನಾಗರ ಹಾವೇ ಹಾವಳು ವೂವೇ ಮತ್ತು ಬಣ್ಣದ ತಗಡಿನ ತುತ್ತೂರಿಯ ಮೂಲಕ ಪ್ರಾಥಮಿಕ ಶಾಲೆಯ ಪಠ್ಯದ ಮೂಲಕ ನನ್ನ ಮನಸಿನ ಆಳದಲ್ಲಿ ಇಳಿದ ಆ ಕವಿತೆಗಳು ಒಂದೆರೆಡು ಪದಗಳ ವ್ಯತ್ಯಾಸದೊಡನೆ ಇಂದಿಗೂ ನನ್ನ ನೆನಪಿನಲ್ಲಿ ಉಳಿದಿವೆ. ಮುಂದುವರೆದಂತೆ ಕಾವ್ಯವು ನನ್ನನ್ನು ಆಕರ್ಷಿಸಿದ್ದು ಉರ್ದು ಮುಷಾಯರ ಮೂಲಕ ನನ್ನ ಬಾಲ್ಯ ಮತ್ತು ಯವ್ವನದ ದಿನಗಳಲ್ಲಿ ಟಿವಿ ಇರಲಿಲ್ಲ ಮತ್ತು ಸಮಾಜಿಕ ಮಾಧ್ಯಮಗಳು ಕೂಡ ಇರಲಿಲ್ಲ. ಆದರೆ ನನ್ನ ಕುಟುಂಬದ ಅನೇಕ ವ್ಯಕ್ತಿಗಳು ಮತ್ತು ನನಗೆ ಪರಿಚಯವಿದ್ದ ಅನೇಕ ಜನರು ಮಾತು ಮಾತಿಗೆ ಶಾಯರಿಯನ್ನು ಉದ್ಧರಿಸುತ್ತಿದ್ದ ಅನೇಕ ಸಂದರ್ಭಗಳನ್ನು ನಾನು ಗಮನಿಸಿದೆ. ಸ್ವಾತಂತ್ರ್ಯೋತ್ತರ ಭಾರತದ ಮುಸ್ಲಿಂಮರ ಪ್ರಮುಖ ಹೆಗ್ಗುರುತಾದ ಶಿಷ್ಟ ಉರ್ದು ಭಾಷೆಯ ಬಳಕೆ ಮತ್ತು ಖ್ಯಾತ ಕವಿಗಳ ಕವಿತೆಗಳನ್ನು ಸಂದರ್ಭೋಚಿತವಾಗಿ ಉಲ್ಲೇಖಿಸುವುದು ಆ ವ್ಯಕ್ತಿಯ ಸಾಹಿತ್ಯ ಪ್ರೇಮದ ಮತ್ತು ಜೀವನ ದೃಷ್ಟಿಯ ಹಾಗೂ ತತ್ವ ಶಾಸ್ತ್ರದ ಆಳದ ಅರಿವು ಮತ್ತು ಸಹೃದಯತೆಗೆ ಸಾಕ್ಷಿಯಾಗಿದ್ದು ಮತ್ತು ಹೀಗೆ ಕಲಿತವರು ಮತ್ತು ಶಾಯರಿಗಳ ಸಮ್ಮೋಹಕ ಬಲೆಗಳನ್ನು ಸೃಷ್ಟಿ ಮಾಡುತ್ತಿರುವವರು ಬಹುತೇಕ ಪುರುಷರೆ ಆಗಿದ್ದರು.

(ಬಾನು ಮುಷ್ತಾಕ್)
ಅಂದಿನ ಕಾಲಘಟದಲ್ಲಿ ಮುಶಾಯಗಳನ್ನು ಆಯೋಜನೆ ಮಾಡುತ್ತಿದ್ದವರು, ಕವಿವರ್ಯರನ್ನು ಆಹ್ವಾನಿಸುತ್ತಿದ್ದವರು ಮತ್ತು ಪೊಗದಸ್ತಾದ ಬಿರಿಯಾನಿಯ ವ್ಯವಸ್ಥೆ ಮಾಡುತ್ತಿದ್ದವರು ಮತ್ತು ಕೋಟ್‍ಗಳನ್ನು ಧರಿಸಿ ಮೊಫಲತ್‍ಗಳಿಂದ ತಮ್ಮ ಕುತ್ತಿಗೆಯನ್ನು ಬೆಚ್ಚಗಾಗಿಸಿ ತರಹೇವಾರಿ ಟೋಪಿಗಳನ್ನು ಧರಿಸಿ ಎದೆಯ ಎಡಭಾಗದಲ್ಲಿ ಬ್ಯಾಡ್ಜ್‌ನ್ನು ಧರಿಸಿ ಒಡಾಡುತ್ತಿದವರು ಎಲ್ಲರು ಪುರುಷರೆ ಆಗಿದ್ದರು. ರಾತ್ರಿ 10 ಗಂಟೆಯ ನಂತರ ಆರಂಭವಾಗುತ್ತಿದ ಮುಶಾಯರದ ರಂಗೇರುತ್ತಿದದ್ದು ಸಭಿಕರೆಲ್ಲ ಚಾಯ್ ಕುಡಿದು ಕೆನ್ನೆಯಲ್ಲಿ ಪಾನ್ ಒತ್ತರಿಸಿ ಕಾವ್ಯದ ಆಸ್ವಾದನೆ ಮಾಡಲು ಸಿದ್ಧರಾದಾಗ ಹಾಗೇ ಆ ಸಭಾಂಗಣದ ಹಿಂದಿನ ಮೂಲೆಯಲ್ಲಿ ಅಥವಾ ಮಹಡಿ ಇದ್ದರೆ ಅದರ ಮುಂಭಾಗದಲ್ಲಿ ಪರದೆಯನ್ನು ಇಳಿಬಿಟ್ಟು ಮೀಸಲಾದ ಜಾಗದಲ್ಲಿ ಕೆಲವು ಆಸ್ತ ಮಹಿಳೆಯರು ಬಂದು ಕೂತರು. ನನ್ನ ಮಟ್ಟಿಗೆ ಮುಷಾಯರ ಎಂದರೆ ಸಭಿಕರು ಮತ್ತು ಕವಿಗಳ ನಡುವೆ ನಡೆಯುತ್ತಿದ್ದ ರಸ ಸ್ವಾದನೆ ಮತ್ತು ಸಂವಾದ ಎಂದೆನ್ನಬಹುದು. ಏಕೆಂದರೆ ಕಾವ್ಯದ ಕಟ್ಟೋಣದ ತಾಂತ್ರಿಕತೆ ಕೇಳುಗರಿಗೆ ಪರಿಚಿತವಾಗಿರುತ್ತಿತ್ತು. ಕಾವ್ಯದ ವಸ್ತು ವಿನ್ಯಾಸದ ಶೈಲಿಯನ್ನು ಕೂಡ ಕೇಳುಗರು ಕೂಡಲೇ ಹಿಡಿದಿಟ್ಟುಕೊಂಡು ಸನ್ನದ್ಧರಾಗುತ್ತಿದ್ದರು. ಕೇಳುಗರ ಪ್ರತಿಕ್ರಿಯೆ ಇಲ್ಲದೆ ಮುಷಾಯರ ಅಪೂರ್ಣವಾಗಿರುತ್ತಿತ್ತು. ಕಾವ್ಯದ ರಸದಲ್ಲಿ ಮಿಂದೇಳುತ್ತಿದ್ದ ಸಭಿಕರಿಗೆ ಹೊತ್ತುಗೊತ್ತಿನ ಪರಿವೇ ಇರುತ್ತಿರಲಿಲ್ಲ. ಕಾವ್ಯದ ಚಲನೆಯೊಂದಿಗೆ ವ್ಯಂಗ್ಯದೊಂದಿಗೆ ಅನುಭೂತಿದೊಂದಿಗೆ ಕೇಳುಗರು ಕೂಡಾ ಸಾಧ್ಯತೆಯಿಂದ ಹೆಜ್ಜೆ ಹಾಕುತ್ತ ಕವಿ ಹೇಳಬೇಕಾದ ಮುಂಚಿನ ಚರಣವನ್ನೇ ಆಗಲೀ ಅಥವಾ ಶಬ್ದವನ್ನೇ ಆಗಲೀ ಕವಿಯ ಜೊತೆಯಲ್ಲಿ ಹೇಳುವ ಪ್ರೌಢಿಮೆ ಕೇಳುಗರಿಗೆ ಇರುತ್ತದೆ. ಅದೇ ಮುಷಾಯರಾದ ವೈಷಿಷ್ಟ್ಯತೆ. ಈ ಮಾತು ನನಗೆ ಈ ಸಂದರ್ಭದಲ್ಲಿ ನೆನಪಾಗಲು ಕೂಡ ವಿಶೇಷ ಕಾರಣ ಒಂದಿದೆ.
ಮಮತಾ ಸಾಗರ್‌ಳ ಕಾವ್ಯದ ಅನುಭೂತಿಯಲ್ಲಿ ಮುಳುಗಿ ಹೋದ ಸರದಿ ನನ್ನದು ಕೂಡ ಆಗಿದೆ. ಏಕೆಂದರೆ ಮಮತಾ ಸಾಗರ್ ಕಾವ್ಯವನ್ನು ಪಠಿಸುವುದಿಲ್ಲ, ಹೇಳುವುದಿಲ್ಲ. ಪುಂಖಾನು ಪುಂಖ ಪದಗಳ ಚಲ್ಲಾಟವಾಡುವುದಿಲ್ಲ. ಬದಲಿಗೆ ಅತ್ಯಂತ ಜಿಪುಣತನದಿಂದ ಕುಸುರಿ ಕೆಲಸ ಮಾಡಿದ ಪದಗಳನ್ನು ಆಕೆ ಅಭಿನೈಸುವ ಸ್ವರೂಪವೆ ಅನನ್ಯವಾದದ್ದು. ಆಕೆಯ ಕಾವ್ಯವಾಚನ ಮತ್ತು ಪದ ಸಂಚಾರವು ವಿಶಿಷ್ಟ ಮತ್ತು ವಿನೂತನವೆಂದು ನನಗಾದರೂ ಏಕೆ ಅನಿಸುತ್ತದೆ ಅಂದರೆ ಆಕೆಗೆ ಇರುವ ಅವಕಾಶಗಳು ಆಕೆಯ ಬ್ಯಾಗ್ ಸದಾ ಪ್ಯಾಕ್ ಆಗಿರುತ್ತದೆ. ಪ್ರಪಂಚದ ಅನೇಕ ಭಾಗಗಳನ್ನು ಆಕೆ ತನ್ನ ವೃತ್ತಿಯ ಪರಿಧಿಯಲ್ಲಿ ಮತ್ತು ಸಾಹಿತ್ಯದ ಘಮಲನ್ನು ಹರಡುವಲ್ಲಿ ತೊಡಗಿಸಿಕೊಂಡ ಪರಿಕ್ರಮ ಆಕೆಗೆ ಅಪಾರ ಅವಕಾಶಗಳನ್ನು ನೀಡಿದೆ. ಅಷ್ಟೆ ಅಲ್ಲದೇ ಜೀವನದ ಅನುಭವಗಳು ಮತ್ತು ಅವುಗಳನ್ನು ಆಕೆ ನೋಡುವ ಕ್ರಮ ಜೀರ್ಣಿಸಿಕೊಳ್ಳುವ ಬಗೆ ಮತ್ತು ಯಾರೊಂದಿಗೆ ನಿಲ್ಲಬೇಕೆಂಬ ವಿವೇಕದ ಪ್ರಜ್ಞೆ ಆಕೆಗೆ ಅನನ್ಯ ವ್ಯಕ್ತಿತ್ವವನ್ನು ನೀಡಿರುವುದು ಅಲ್ಲದೇ ಕಾವ್ಯದ ಅಭಿವ್ಯಕ್ತಿಯಲ್ಲಿ ಆಕೆಯ ಸಂವೇದನೆಯನ್ನು ತಿಳಿಸುತ್ತದೆ.
ಪದಸಂಚಾರ: ಮಮತಾ ಜಿ. ಸಾಗರ ಮಾತುಗಳು
‘ನಡೆ ನಡೆದು, ಕಾಲು ಸೋತು, ಮನಸು ಸೋತು, ಜೀವ ಸೋತು…’ ಇಲ್ಲಿಯವರೆಗೆ ನಡೆದು ಬಂದಿದ್ದೇನೆ ಕವಿತೆ ಕಟ್ಟುತ್ತಾ. ಏನೆಲ್ಲಾ ಸ್ಥಿತ್ಯಂತರಗಳಾಗಿವೆ ಬದುಕಲ್ಲಿ, ಬರವಣಿಗೆಯಲ್ಲಿ! ತೀರಾ ವೈಯ್ಯಕ್ತಿಕ ನಿಲುವಿನಿಂದ ಸಾರಾ ಸಗಟಾಗಿ ಸಾರ್ವತ್ರಿಕ ನಿಲುವನ್ನು ಆಲಂಗಿಸಿಕೊಳ್ಳೋ ಅನುರಣನದಲ್ಲಿ ಯಾವುದು ವೈಯ್ಯಕ್ತಿಕ, ಯಾವುದು ಸಾರ್ವತ್ರಿಕವೆಂದು ಅರಿಯದಷ್ಟು ಆ ತೆಳುವಾದ ಗೆರೆ ಅಳಿಸಿಹೋಗಿ, ಈ ಎರಡರಿಂದಾಚೆಯ ಆಲೋಚನೆಯ ಹೊಸದೊಂದು ಶೈಲಿ ಹಮ್ಮಿಕೊಂಡಿರುವುದು ಅನುಭವಕ್ಕೆ ಬಂದಿದೆ.
ಈ ಪ್ರಯಾಣದಲ್ಲಿ ಅರಿವನಿತ್ತವರು ಹಲವರು. ಗೋಪಾಲಕೃಷ್ಣ ಅಡಿಗರು ನಾ ಮೆಚ್ಚಿದ ಕವಿ. ‘ಸಿಗರೇಟಿನ ಹೊಗೆ ವರ್ತುಲ ವರ್ತುಲ ಧೂಪ ಧೂಮ ಮಾಲೆ…’ ಪಠಿಸುತ್ತಲೇ ಸಿಗರೇಟು ಸೇದುವುದನ್ನು ಶುರು ಮಾಡಿದ್ದು ನಾನು. ಅವರ ಕವಿತೆಗಳಿಗೆ ಮಾರು ಹೋಗುತ್ತಲೇ ಕವಿತೆ ಕಟ್ಟುವ ಕೌಶಲ್ಯವನ್ನು ದುಡಿಸಿಕೊಂಡೆ. ಕವಿತೆ ಕಟ್ಟುವಾಗ ಬೇಕಾಗುವ ಶಿಸ್ತು, ರೂಢಿಸಿಕೊಂಡ ಶಿಸ್ತನ್ನು ಮುರಿದು, ಕನ್ನಡದ ಶಬ್ದ ಲಯಕ್ಕನುಸಾರವಾಗಿ ಆಲೋಚನೆಯನ್ನು ಪುನರ್ ರಚಿಸುವ ಅವಶ್ಯಕತೆ, ಹೀಗೆ, ಕವಿತೆ ಕಟ್ಟುವ ನಶೆ ದಕ್ಕಿದ್ದು ಅಡಿಗರ ಶೈಲಿಗೆ ಮಾರುಹೋದದ್ದಕ್ಕಾಗಿ ಎಂದರೆ ಸುಳ್ಳಲ್ಲ. ಕವಿತೆಯೂ ರಾಜಕೀಯಗಳನ್ನು ಪ್ರತಿಪಾದಿಸಬಲ್ಲ ಸಲಕರಣೆಯಷ್ಟೇ ಆಗದೆ, ವ್ಯಂಗ್ಯವ ಮೈಗೂಡಿಕೊಂಡೋ ಇಲ್ಲದೆಯೋ, ಬದುಕ ಬದಲಾವಣೆಗಳನ್ನು ಸಾಧ್ಯವಾಗಿಸುವ ಮೊನಚು ಉಪಕರಣವಾಗಬಲ್ಲದು ಎಂಬ ಅಚ್ಚರಿಯ ಬೆಡಗು ನನಗೆ ಗೋಚರವಾಗಿದ್ದು ಅಡಿಗರ ಕವಿತೆಗಳಲ್ಲಿ.
‘ಕವಯತ್ರಿ’ಯರೆಂದು ಕರೆಯಲ್ಪಟ್ಟ ಮಹಿಳಾ ಕವಿಗಳನ್ನು ತಮ್ಮ ಉಡುಗೆ, ಅಡುಗೆ, ಹಾಸಿಗೆ, ಹೊದಿಕೆಗಷ್ಟೇ ನಂಟುಹಾಕಿದ್ದ ಸಂದರ್ಭದಲ್ಲಿ ಹೃದಯದ ಕಿಟಕಿ ಬಾಗಿಲುಗಳನ್ನು ತೆರೆದು, ಆಕಾಶದಷ್ಟು ಅವಕಾಶವ ತೋರಿದ್ದು ಮಹಿಳಾ ಚಳುವಳಿ. ವೈಯಕ್ತಿಕವೂ ಸಾಮಾಜಿಕ ರಾಜಕೀಯವೇ ಎಂಬುದ ಅರಿತು, ಅನುಭವಗಳನ್ನು ವಿಸ್ತೃತ ಹೊತ್ತಿಗೆಯ ಮೇಲೆ ಚೆಲ್ಲಿ, ನಂಬಿದ ನಿಲುವುಗಳನ್ನು ಕವಿತೆಯಾಗಿಸುವ ಕಾಯಕ ಆರಂಭವಾಗಿದ್ದು ಈ ಹಿನ್ನೆಲೆಯಲ್ಲೇ. ದೇಹ, ಲೈಂಗಿಕತೆ, ಆ ಎರಡರ ವೈಶಿಷ್ಟ್ಯ, ಅದರ ರಾಜಕೀಯ, ಲೇಖನಿಯ ಮಹತ್ವ, ಕವಿತೆಕಟ್ಟುವ ಕಾಯಕದ ಮಹತ್ವ, ಏನೆಲ್ಲಾ ಗೋಚರವಾಯಿತು! ತಿರುಮಲಾಂಬನಿಂದ ಹಿಡಿದು, ವೈದೇಹಿ, ಸಾ.ಉಷಾ, ಪ್ರತಿಭಾ, ಹೇಮ, ಮಾಲತಿ, ವಚನಕಾರರು, ಹಾಡುಗಾರರು, ಕಥೆಗಾರರು, ಹೀಗೆ ಕನ್ನಡ ಮಹಿಳಾ ಬರವಣಿಗೆಯ ಜಗತ್ತು ಸಜ್ಜುಗೊಳಿಸಿಕೊಟ್ಟ ಹಾದಿಯಲ್ಲಿ ನಡೆವ ಅವಕಾಶ ದೊರಕಿದ್ದು, ನನಗೆ ಕವಿಯಾಗಿ ಬದುಕನ್ನು ಹೊಸರೀತಿಯಲ್ಲಿ ನೋಡಲು ಅನುವು ಮಾಡಿಕೊಟ್ಟಿತು.
ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕವಿತೆಯೆಂಬ ಪ್ರಕಾರವು ವಿಶೇಷವಾಗಿ ನನಗೆ ಪ್ರಿಯವಾದ್ದು. ಈ ಪ್ರಕಾರವು ಒಡ್ಡುವ ಸವಾಲುಗಳು ಕ್ಲಿಷ್ಟವಾಗಿದ್ದು, ಅದರ ಜೊತೆಗೆ ಹೆಣಗುವ ಸಾಧ್ಯತೆಯ ಪ್ರತೀ ಹಂತವೂ ವಿಶಿಷ್ಟವಾಗಿದ್ದು ನಾನದನ್ನು ಬಹಳವಾಗಿ ಆನಂದಿಸುತ್ತೇನೆ. ಹಾಳೆಯಮೇಲೆ ಮೂಡಿ, ಹಾಳೆಯಿಂದಾಚೆ ಹರಡಿ, ಹಾಡಾಗಿ, ದೃಶ್ಯವಾಗಿ, ಶ್ರವ್ಯವಾಗಿ, ಅಭಿನಯವಾಗಿ, ಹೀಗೇ ಏನೆಲ್ಲಾ ಪಠ್ಯಗಳನ್ನು ಕವಿತೆಯಿಂದ ಸಾಧಿಸಬಹುದು ಅನ್ನುವುದೇ ಒಂದು ದೊಡ್ಡ ಸವಾಲು.
ಕಟ್ಟಿದ ಕವಿತೆಯ ಪಠಿಸುವಾಗ ಅರಿವಾದ್ದು ‘ಶಬ್ದ ಸೌಂದರ್ಯ’. ಈ ಶಬ್ದ ಸೌಂದರ್ಯದ ಜೊತೆಗಾಡುವ ಮೋಜು ಬೇರೆಯೇ ಹಂತದ್ದು. ‘ಶಬ್ದ’ದ ಜೊತೆ ಸರಸವಾಡಿದಾಗ ಹೊಸ ಅರ್ಥ ಧ್ವನಿಸಿ, ಕಟ್ಟಿದ ಕವಿತೆಯ ಒಡೆದು ಬಿಚ್ಚಿಟ್ಟು ಇರುಸು ಮುರುಸು ಮಾಡಿ, ಕವಿತೆಯಾಚೆಗಿನ ಹೊಸ ಅನುಭವವ ಶಬ್ದಿಸುವಾಗ ಕಾಣುವುದೆಲ್ಲ ಬೇರೆ… ಕೇಳುವುದೆಲ್ಲ ಬೇರೆ…!
ಕವಿತೆ ಕಟ್ಟುವುದೆಂದರೆ ಧ್ಯಾನ ಮಾಡಿದ ಹಾಗೆ. ಒಂದು ಪದ ಹೆಚ್ಚಾಗಬಾರದು, ಲಯ ಕಳೆದುಹೋಗಬಾರದು, ಸುಂದರವಾದ ಕನ್ನಡದಲ್ಲಿ ನುಡಿದಾಗ ಕಣ್ಣಿಗೆ ಕಟ್ಟಬೇಕು ಚಿತ್ರ, ಕಂಡದ್ದು ನುಡಿಯ ನೆನಪಲ್ಲೇ ನಿಲ್ಲಬೇಕು ಕೂಡ. ನನಗಂತೂ ಕವಿತೆಯಾಗುವುದು ಬರೆದ ನಂತರದ ತಿದ್ದುಪಡಿಯ ಪರಿಷ್ಕರಣೆಯಲ್ಲೇ. ಬಡಗಿ ಮರದ ತುಂಡುಗಳನ್ನು ಕತ್ತರಿಸಿ, ಸರಿಯಾಗಿ ಜೋಡಿಸಿ ಮೇಜು ಕುರ್ಚಿಗಳನ್ನು ಮಾಡುವಹಾಗೆ. ಹೀಗೆ, ಕವಿತೆ ಕಟ್ಟುವ ಕೌಶಲ್ಯವನ್ನು ಯಾರಾದರೂ ರೂಢಿಸಿಕೊಳ್ಳಬಹುದು. ಕಲಿತಮೇಲೆ ಅದನ್ನು ಸಜ್ಜುಗೊಳಿಸುವ ಕುಸುರಿ ಕೆಲಸ ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟಿದ್ದು. ಒಟ್ಟಲ್ಲಿ, ಕವಿತೆಯೊಂದು ವಿಶೇಷವಾದ ಸಲಕರಣೆ. ಅತ್ಯಂತ ಪ್ರಬಲವಾಗಿ ಕೆಲಸಮಾಡುತ್ತದೆ. ಈ ಸಲಕರಣೆಯನ್ನು ಬಳಸುವುದನ್ನೂ ರೂಢಿಸಿಕೊಂಡೆ. ಓದುವುದರ ಬದಲು ಸಾಲುಗಳ ಜೊತೆ ಆಟವಾಡಿಕೊಂಡು ಪಠಿಸುವುದು, ಪ್ರಸ್ತುತ ಪಡಿಸುವುದು, ಪದಗಳ ನುಡಿಸುವುದು, ಹಾವ ಭಾವದ ಜೊತೆ ಸಭಿಕರಿಗೆ ಮುಟ್ಟಿಸುವುದು, ಕೈ, ಮೈ, ನಡಿಗೆ, ಉಡಿಗೆಯನ್ನೊಳಗೊಂಡು, ನುಡಿ ನಡೆಯಲ್ಲಿ ಬೆರೆತು, ಕಟ್ಟಿದ ಕವಿತೆಯೇ ಆಗಿಬಿಡುವುದು… ಹೀಗೆ ಕವಿತಾಭಿನಯವನ್ನೂ ಕಲೆಹಾಕಿಕೊಂಡೆ. ಕವಿತೆ ಬರವಣಿಗೆಯ ಆಚೆಗೂ ಅನುಸ್ಥಾಪನವಾಗಿಯೂ, ಭಿತ್ತಿಚಿತ್ರದ ರೂಪವನ್ನು ಪಡೆದುಕೊಂಡೂ, ದೃಶ್ಯ ಹಾಗೂ ಶ್ರವ್ಯವನ್ನೊಳಗೊಂಡ ದೃಶ್ಯ ಕಾವ್ಯವಾಗಿಯೂ ಮೂಡಿಬರಲಾರಂಭಿಸಿತು. ನಾಡಿನ ಹೊರಗೆ, ವಿದೇಶಗಳಲ್ಲಿ, ಕಂಡರಿಯದ ಭಾಷೆಗಳ ಜೊತೆಗೆ ನನ್ನ ಕನ್ನಡ ಕವಿತೆಗಳು ಬೆರೆತು ಕೈ ಕೈ ಹಿಡಿದು ನಡೆಯಲಾರಂಭಿಸಿತು. ಅದು ಕೆಲವೊಮ್ಮೆ ಅರ್ಥವ ಕಳಕೊಂಡ ಶಬ್ದ ಲಯಗಳ ಸರಣಿಗಳಾಗಿ ಶುದ್ಧ ನಾದವಾಗಿ ನುಡಿದದ್ದೂಯಿದೆ. ಬೆಚ್ಚಗಿನ ಕೋಣೆಯೊಳಗೆ ಕೂರುವುದ ತೊರೆದು ಬೀದಿಗೆ ನಡೆದು ಬರಲು ನನ್ನ ಕವಿತೆಗೆ ಆದೇಶ ಕೊಟ್ಟಿದ್ದು ನಾವು ಬದುಕುತ್ತಿರುವ ಕಾಲಘಟ್ಟ! ನಾನು ನಡೆದು ಬಂದ ದಾರಿ ನನಗೆ ಹಲವು ಬಗೆಯ ಪಾಠಗಳನ್ನು ಕಲಿಸಿದೆ. ಹಲವು ಸತ್ಯಗಳನ್ನು ಸ್ಪಷ್ಟಪಡಿಸಿದೆ. ಜಾತಿ ಪದ್ಧತಿಯ ಅಸ್ತಿತ್ವ ಮುಖಕ್ಕೆ ರಾಚುವಂತೆ ಜೀವಂತವಾಗಿರುವುದು, ಬ್ರಾಹ್ಮಣ್ಯವನ್ನೂ ಮೀರಿ ಹರಡಿಕೊಂಡಿರುವ ಬ್ರಹ್ಮಣಿಕೆ, ಯಾವುದೇ ಸಂಕೋಚವಿಲ್ಲದೇ ಯಾರಮೇಲಾದರೂ ಎಲ್ಲಾದರೂ ಅತ್ಯಾಚಾರವನ್ನೆಸಗಬಲ್ಲಂಥ ಸಾಮಾಜಿಕ ಸಂದರ್ಭವನ್ನು ಸೃಷ್ಟಿಸಿರುವ ಬಲಪಂಥೀಯ ಕಣ್ಗಾವಲು, ಏನೆಲ್ಲಾ ದಾಟಿಬಂದಮೇಲೂ ಹೆಂಗಸರನ್ನು ರೇಪ್ ಮಾಡುವ ಹುನ್ನಾರ ಹೆಂಗಸರಿಗೂ, ಅವರಿಗೆ ಸಂಬಂಧಪಟ್ಟ ಸಮುದಾಯಕ್ಕೂ ಬುದ್ಧಿ ಕಲಿಸುವ ಸಾಧನವಾಗಿ ಇನ್ನೂ ಬಳಕೆಯಾಗುತ್ತಿದೆಯಲ್ಲ! ಈ ಎಲ್ಲದರ ನಡುವೆ ಕವಿತೆ ಹುಟ್ಟುತ್ತದೆ, ಪ್ರತಿರೋಧವಾಗಿ.
ಸಾರ್ವಜನಿಕವಾಗಿ ನುಡಿಯ ನುಡಿದಾಗ, ಜವಾಬ್ದಾರಿಯೊಂದು ಇರುತ್ತದೆ. ನಾವು ನಾವಾಗಿರುವುದಲ್ಲದೇ ಇನ್ನು ಹಲವಾರು ವಲಯಗಳನ್ನೂ ಪ್ರತಿನಿಧಿಸುತ್ತಿರುತ್ತೇವೆ. ಹೆಣ್ಣಾಗಿ, ಪ್ರಜೆಯಾಗಿ, ಸಮುದಾಯವೊಂದರ ಪ್ರತಿನಿಧಿಯಾಗಿ, ನಮ್ಮ ದೇಶವನ್ನು ಪ್ರತಿನಿಧಿಸುವವರಾಗಿ, ನಮ್ಮ ರಾಜಕೀಯವನ್ನು ಪ್ರಸ್ತುತಪಡಿಸುವವರಾಗಿ, ಹೀಗೆ ಹಲವಾರು ಜವಾಬ್ದಾರಿಗಳನ್ನು ಏಕಕಾಲದಲ್ಲಿ ನಿರ್ವಹಿಸುತ್ತಿರುತ್ತೇವೆ. ಕವಿತೆಯ ಪಬ್ಲಿಕ್ ಪರ್ಫಾರ್ಮೆನ್ಸ್ ಮಾಡುವಾಗ ಇವುಗಳಲ್ಲಿ ಹಲವನ್ನಂತೂ ಸಂದರ್ಭಕನುಸಾರವಾಗಿ ನೆನಪಿನಲ್ಲಿಡಬೇಕಾಗುತ್ತದೆ.
ಕವಿತೆ ಕಟ್ಟಿಕೊಂಡು ಸಂಚಾರಕ್ಕೆ ಹೊರಟಿದ್ದೇನೋ ನಿಜ. ಕ್ರಮೇಣ ಕವಿತೆಯ ಕೈ ಹಿಡಿದು ಪದಸಂಚಾರಕ್ಕೆ ಅದು ಕೊಂಡುಹೋದಲ್ಲೆಲ್ಲಾ ಕನ್ನಡ ಕವಿಯಾಗಿ ಹೋಗಿ, ದೇಶ ವಿದೇಶಗಳ ಪ್ರಯಾಣ ಮಾಡಿದ್ದೇನೆ. ಈ ಪ್ರಯಾಣಗಳಲ್ಲಿ ಉತ್ತಮ ಕವಿಗಳನ್ನು ಭೇಟಿಯಾಗಿದ್ದೇನೆ. ಅವರ ಭಾಷೆಯ ಸೊಗಡನ್ನು ಆನಂದಿಸಿದ್ದೇನೆ. ಆಯಾದೇಶಗಳ ಬದುಕು ಬವಣೆಗಳ ಬಗ್ಗೆ ಅವರು ಬರೆದ ಕವಿತೆಗಳು ನನ್ನನ್ನು ಆಕರ್ಷಿಸಿದಾಗ, ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದೇನೆ. ಕವಿತೆ ಕೊಂಡುಹೋದ ಹಾದಿಯುದ್ದಕ್ಕೂ ನಾನು ಸಂಗ್ರಹಿಸಿರುವುದು ಗೆಳೆತನವನ್ನು, ಕವಿತೆಗಳನ್ನು, ಕಥೆಗಳನ್ನು, ಪ್ರೀತಿ ವಿಶ್ವಾಸಗಳನ್ನು, ನೆನಪ ಸರಮಾಲೆಗಳನ್ನು ಮತ್ತು ಕಿವಿಗೆ ಹಾಕಿಕೊಳ್ಳುವ ಝುಮಕಿ ಓಲೆಗಳನ್ನು.
ಬೆಂಗಳೂರಿಂದ ಹೈದರಾಬಾದಿಗೆ ಹೋಗಿ ಪುನಃ ಬೆಂಗಳೂರಿಗೆ ಹಿಂತಿರುಗಿದಾಗ ಕವಿತೆ ಕಟ್ಟುವ ನಶೆಯಲ್ಲಿ ಕಟ್ಟಿದ್ದು ಕಾವ್ಯ ಸಂಜೆಯನ್ನು. ೨೦೧೩ರಲ್ಲಿ ಆರಂಭವಾದ ಕಾವ್ಯ ಸಂಜೆಯು, ಸಾಮುದಾಯಿಕವಾಗಿ ಕವಿತಾ ವಿನಿಮಯವನ್ನು ಸಾಧ್ಯವಾಗಿಸುವ ಮಾರ್ಗವಾಗಿದೆ. ಸಾರ್ವಜನಿಕವಾಗಿ ಕವಿತೆಯನ್ನು ಪ್ರಸ್ತುತ ಪಡಿಸುವುದು, ಕಾವ್ಯಗಾರಗಳನ್ನು ಹಮ್ಮಿಕೊಳ್ಳುವುದು, ಸಾಮೂಹಿ ತಾಣಗಳಲ್ಲಿ ಕವಿತೆಯನ್ನು ಅನುಸ್ಥಾಪಿಸುವುದು, ನಗರದ ವಿವಿಧ ಸಮುದಾಯಗಳ ಜೊತೆಗೆ ಕವಿತೆಯ ಮೂಲಕ ಸಂಪರ್ಕವನ್ನು ಸಾಧಿಸುವುದು, ಹೀಗೆ ಕವಿತೆಯ ಕಾಯಕವನ್ನು ಮುಂದುವರೆಸಿಕೊಂಡು ಬಂದಿದೆ. ಆಗಿನಿಂದಲೂ ನನ್ನ ಜೊತೆ ಜೊತೆಗೆ ನಡೆಯುತ್ತಾ ಬಂದಿರುವ ಕವಿಗಳು ಹಲವರು. ಇವರ ಪ್ರೀತಿ, ಆದರಗಳು, ಇವರ ಕವಿತೆಗಳು, ಆಲೋಚನೆಗಳು, ಒಡನಾಟ ಸದಾ ನನ್ನನ್ನು ತುದಿಗಾಲಲ್ಲಿ ನಿಲ್ಲಿಸಿರುತ್ತದೆ.
ಕಾವ್ಯ ಸಂಜೆ ಬಳಗ ಈಗ ನನ್ನೆಲ್ಲಾ ಕವಿತೆಗಳನ್ನೂ ಕಲೆಹಾಕಿ ‘ಪದಸಂಚಾರ’ವಾಗಿಸಿ ಪ್ರಕಟಿಸುತ್ತಿದೆ. ಪ್ರೀತ್ಯಾದರಗಳ ಗೆಳೆತನಕ್ಕೆ ಇದಕ್ಕಿಂತ ದೊಡ್ಡ ಸಂಭಾವನೆ ಬೇಕೇ? ಇವರ ಪ್ರೀತಿಗೆ ನಾನು ಋಣಿ.
(ಕೃತಿ: ಪದಸಂಚಾರ (ಮಮತಾ ಸಾಗರ ಈವರೆಗಿನ ಕವಿತೆಗಳು), ಪ್ರಕಾಶಕರು: ಕಾವ್ಯಸಂಜೆ ಪ್ರಕಾಶನ, ಬೆಲೆ: 300/-)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ