ಮುಪ್ಪೇ ಮುಟ್ಟದ ಹೂವಿನಂತೆ ಕಾಶಮ್ಮ ಯಾವಾಗಲೂ ನಳನಳಿಸುತ್ತಿದ್ದಳು. ಈ ಕಾಶಮ್ಮಜ್ಜಿಯಿಂದ ನಮಗೆ ಯಾವುದೇ ಹಾನಿ ಇಲ್ಲ ಎಂಬುದನ್ನು ಮನಗಂಡ ಮಠದ ಕೇರಿಯ ಗಂಡಸರು, ತಂತಮ್ಮ ಹೆಂಗಸರನ್ನು ಧಾರಾಳವಾಗಿ ಅವಳ ಕೋಣೆಯ ಬಾಗಿಲಿಗೆ ಕಳಿಸಿಕೊಡುತ್ತಿದ್ದರು. “ಲೇ, ಇವಳೇ.. ಕಾಶಮ್ಮನ ಹತ್ತಿರ ಸುಣ್ಣ ಇದ್ಯಾ ಕೇಳ್ಕೊಂಡು ಬಾ..” ಎಂತ ಇನ್ನೂ ಅವಳ ಒಡನಾಟವನ್ನು ಹಚ್ಚಿ ಹರಡುತ್ತಿದ್ದರು.
ಮಧುರಾಣಿ ಬರೆಯುವ ಮಠದ ಕೇರಿ ಕಥಾನಕದಲ್ಲಿ ಕಾಶಮ್ಮಜ್ಜಿಯ ಸ್ಫೂರ್ತಿಯ ಕತೆ ಓದಿ.
ಮಠದ ಕೇರಿಯ ಹಿರಿಯರಲ್ಲಿ ಒಬ್ಬರಾದ ರಾಘವೇಂದ್ರರಾಯರ ಮನೆ, ಕೇರಿಯ ಹೃದಯಭಾಗದಲ್ಲಿ ಇತ್ತು. ಸುರಂಗದಂಥಾ ದೊಡ್ಡ ಮನೆಯಲ್ಲಿ ಮುನ್ನಡೆದರೆ ಹಿಂಬದಿಯಲ್ಲಿ ಒಂದು ಪ್ರತ್ಯೇಕವಾದ ಪುಟ್ಟ ಕೋಣೆ ಇತ್ತು. ಅದು ಮಡಿ-ಮೈಲಿಗೆಯ ದಿನಗಳಿಗಾಗಿ ಹಿಂಬಚ್ಚಲ ಉಪಯೋಗಕ್ಕೆಂದು ಬಿಟ್ಟಿದ್ದ ಕೋಣೆಯಾಗಿತ್ತು. ಆ ಕೋಣೆಯ ಬಾಗಿಲನ್ನು ಅದೊಂದು ದಿನ ಒಳಗಿಂದ ಮುಚ್ಚಿ ಹೊರಗಿಂದ ಹೊಸ ಬಾಗಿಲು ಇಟ್ಟು ಮನೆಯಿಂದ ಪ್ರತ್ಯೇಕಿಸಲಾಯಿತು. ಕೆಲವೇ ದಿನಗಳಲ್ಲಿ ಕೇರಿಯ ಇನ್ನೊಂದು ಬದಿಗೆ ತೆರೆದುಕೊಂಡ ಕೋಣೆಯ ಬಾಗಿಲು ಕೇರಿಯೊಳಗೆ ಅದಾಗಲೇ ನಡೆಯುತ್ತಿದ್ದ ನೂರು ಕಥೆಗಳ ಜೊತೆಗೆ ನೂರಾ ಒಂದನೇ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು.
ರಾಯರ ದೂರದ ಸಂಬಂಧಿ ಕಾಶಮ್ಮಜ್ಜಿಯು ಈ ಕೋಣೆಗೆ ವಾಸಕ್ಕೆ ಬಂದಳು. ಕೇವಲ ರಾಯರಿಗೆ ಅಲ್ಲದೆ ಕೇರಿಯ ಹಲವರಿಗೆ ಬಾದರಾಯಣ ಸಂಬಂಧಿಯಾಗಿದ್ದ ಕಾಶಮ್ಮಜಿಯು ಸುಮಾರು ಎಂಭತ್ತು ದಾಟಿದ ಹೆಂಗಸು. ತೀರಾ ದಪ್ಪವೆನಿಸುವ ಸೋಡಾಬುಡ್ಡಿ ಎಂದು ಕರೆಯಲ್ಪಡುವ ಕನ್ನಡಕ ಒಂದನ್ನು ಕಣ್ಣಿಗೆ ಇರಿಸಿಕೊಂಡಿದ್ದರೂ ದೈಹಿಕವಾಗಿ ಗಟ್ಟಿಮುಟ್ಟಾದ ಹೆಂಗಸು. ಮಾಸಿದ ಬಣ್ಣದ ಕಾಟನ್ ಸೀರೆ, ಎರಡೂ ಕೈಗಳಿಗೂ ಹಿತ್ತಾಳೆಯ ಕೈಬಳೆಗಳು, ಕಿವಿಗೆ ಬಿಳಿ ಹರಳಿನ ಬೆಂಡೆಕಾಯಿ ಬೆಂಡೋಲೆ, ಮೇಲ್ದುಟಿಯ ಮೇಲೆ ಮೂಗಿನ ಎಡ ಹೊಳ್ಳೆಯ ಪಕ್ಕ ಅವಳ ಚಂದಕ್ಕೆ ಮೆರುಗು ನೀಡುವಂತಿದ್ದ ಒಂದು ಪುಟ್ಟ ಕರಿ ಮಚ್ಚೆ, ಉದ್ದನೆಯ ಸಂಪಿಗೆ ಮೂಗು ದಪ್ಪನೆಯ ಕೆಳದುಟಿ..
ಕಾಶಮ್ಮ ಎಂಭತ್ತು ದಾಟಿದರೂ ಸುಂದರಿ ಹೆಂಗಸು. ವಯಸಿನ ದಿನಗಳಲ್ಲಿ ಅವಳು ಎಂತಹ ಸುಂದರಿಯಾಗಿರಬಹುದೆಂಬ ಕುರುಹಿನ ಹಾಗಿರುವ ಸುಕ್ಕುಗಟ್ಟಲು ಇನ್ನೇನು ಸಿದ್ಧವಾಗಿದ್ದ ಚರ್ಮ ಅದರಡಿಯಲ್ಲಿಯೂ ಅವಳ ಗೋಧಿ ಮೈಬಣ್ಣವನ್ನೇ ಆಧರಿಸಿ ಮಿರಿಮಿರಿ ಮಿಂಚುತ್ತಿದ್ದ ಕೆನ್ನೆಗಳು ಆಗ ತಿಳಿಯದಿದ್ದರೂ ಈಗ ಅದ್ಭುತವೆನಿಸುತ್ತದೆ. ಆ ಒಂಟಿ ಕೋಣೆಗೆ ಬಂದಳೆಂದು ಕಾಶಮ್ಮನೇನೂ ಪರದೇಶಿ ಹೆಂಗಸಾಗಿರಲಿಲ್ಲ. ಹಲವಾರು ವರುಷ ಸುದೀರ್ಘ ಸಂತೃಪ್ತಿಯ ಸಂಸಾರ ಜೀವನ ನಡೆಸಿ ಹಿರಿ ಮುತ್ತೈದೆಯಾಗಿ ಬಾಳಿಬದುಕಿದ ದೊಡ್ಡ ಮನೆತನಕ್ಕೆ ಸೇರಿದ ಹೆಂಗಸು ಕಾಶಮ್ಮ. ಆದರೆ ಇದ್ದಕ್ಕಿದ್ದಂತೆ ಈ ಒಂಟಿ ಕೋಣೆಯ ಪಾಲಾಗಿ ಇಂತಹ ಅತಂತ್ರದ ಬದುಕನ್ನು ಬದುಕುವ ನಿರ್ಧಾರ ಯಾಕೆ ಮಾಡಿದರೋ ಎಲ್ಲರಿಗೂ ನಿಗೂಢವೆನಿಸಿತ್ತು.
*****
ಹೀಗಿದ್ದರೂ ಯಾರೊಬ್ಬರಿಗೂ ಕಾಶಮ್ಮನ ಮೇಲಿನ ಗೌರವ, ಅಭಿಮಾನ ಕಡಿಮೆಯಾಗಿರಲಿಲ್ಲ. ಬದಲಾಗಿ ಕೇರಿಯ ಕೆಲವು ಎಳೆಯ ಹುಡುಗಿಯರಿಗೆ ಖುಷಿಯಾಗಿತ್ತು. ತಮ್ಮ ಅತ್ತೆಂದಿರ ಬಳಿ ಕೇಳಲಾಗದನ್ನು ಕಾಶಮ್ಮಳನ್ನು ಕೇಳಬಹುದೆಂದು, ತಮ್ಮ ಪುಟಾಣಿ ಮಕ್ಕಳಿಗೆ ಒಂದು ಪುಗಸಟ್ಟೆ ಬೇಬಿ ಸಿಟ್ಟಿಂಗ್ ದೊರಕಿತೆಂದೂ, ಹತ್ತಿ-ಬತ್ತಿಗಳನ್ನು ಹೊಸೆದು ಕೊಡಲು ಅನುಕೂಲವಾಯಿತೆಂದು, ತಾವು ಮನೆಯಲ್ಲಿಲ್ಲದಾಗ ಮನೆ ಬಾಗಿಲು ನೋಡಿಕೊಳ್ಳಲು ಒಂದು ಆಳು ದೊರಕಿತೆಂದೂ ಹಲವರು ಒಳಗೊಳಗೇ ಖುಷಿಪಟ್ಟರು. ಆದರೆ ಕಾಶಮ್ಮನ ಧೈರ್ಯವನ್ನೂ ಅವಳ ಜೀವನಪ್ರೀತಿಯನ್ನೂ ಹಲವರು ನಿಸ್ವಾರ್ಥವಾಗಿ ಮುಕ್ತಮನಸ್ಸಿನಿಂದ ಕೊಂಡಾಡಿದರು. ಅವಳು ಎಂತಹ ದಿಟ್ಟ ಹೆಣ್ಣೆಂದು ಅಪ್ಪನ ಮನೆಯಲ್ಲಿ ಹಲವು ಬಾರಿ ಹೊಗಳಿದರು.
ಕಾಶಮ್ಮನಿಗೆ ಇಬ್ಬರು ಮಕ್ಕಳು, ಒಂದು ಗಂಡು ಒಂದು ಹೆಣ್ಣು. ವರ್ಷಗಳ ಕೆಳಗೆ ತೀರಿಹೋದ ವಿಧವೆ ಕಾಶಮ್ಮನ ಒಬ್ಬನೇ ಗಂಡು ಮಗ ಇನ್ನೂ ಜನರ ನೆನಪಿನಲ್ಲಿದ್ದ. ವಿಶ್ವಪರ್ಯಟನೆ ಮಾಡುವ ಒಬ್ಬಳೇ ಮಗಳು ಹಾಗೂ ಅಳಿಯ ಅವಳನ್ನು ಮನೆಯಲ್ಲಿ ಇರಿಸಿಕೊಳ್ಳದಾದರು. ಕಾಶಮ್ಮನಿಗೆ ಮೂವರು ಮೊಮ್ಮಕ್ಕಳು, ಅಂದರೆ ಮಗಳ ಮಕ್ಕಳು. ಒಂದು ಗಂಡು ಎರಡು ಹೆಣ್ಣು. ಇದ್ದೊಂದು ಗಂಡು ಓದಿ ದೇಶಬಿಟ್ಟು ಎಂದೋ ಹೋಗಿಯಾಗಿತ್ತು. ಇದ್ದ ಎರಡು ಹೆಣ್ಣುಗಳಲ್ಲಿ ಒಂದು ಮೂಕಿ ಮತ್ತು ಕಿವುಡಿ. ಎಲ್ಲ ಸರಿ ಇದ್ದ ಮತ್ತೊಬ್ಬ ಮೊಮ್ಮಗಳು ತೀರಾ ಸ್ವಾರ್ಥಿ. ತಾನು ತನ್ನ ಗಂಡನನ್ನು ಬಿಟ್ಟು ಬೇರೆ ಪ್ರಪಂಚ ಅವಳಿಗೆ ಗೊತ್ತಿತ್ತೋ ಅಥವಾ ಬೇಕಿರಲಿಲ್ಲವೋ, ಕಾಶಮ್ಮನಂತೂ ಅವರಿಗೆ ಬೇಡವಾಗಿದ್ದಳು. 30 ದಿನದ ತಿಂಗಳಲ್ಲಿ 35 ಬಾರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅರ್ಚನೆಗಳನ್ನು ಮಾಡಿಸುತ್ತಿದ್ದ ಮೊಮ್ಮಗಳು ಹಾಗೂ ಅಳಿಯನಿಗೆ ಕಾಶಮ್ಮನ ಒಂದು ತುತ್ತು ಅನ್ನ ದುಬಾರಿಯಾಗಿತ್ತು ಅಥವಾ ಋಣದ ಕೂಳು ಕಾಶಮ್ಮನಿಗೂ ಬೇಡವಾಗಿತ್ತು. ಹಾಗೆ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಮನೆಯಿಂದ ಹೊರಬಿದ್ದ ಕಾಶಮ್ಮ ತನ್ನ ವೃದ್ಧಾಪ್ಯ ವೇತನವನ್ನು ನಂಬಿ ರಾಯರ ಮನೆಯ ಬಚ್ಚಲು ಕೊಠಡಿಯಲ್ಲಿ ಹೊಸ ಸಂಸಾರ ಹೂಡಿದ್ದಳು.
ರಾತ್ರಿ ಮಲಗಿದರೆ ಬೆಳಗ್ಗೆ ಎದ್ದೇಳುವ ಯಾವ ಗ್ಯಾರಂಟಿ ಇಲ್ಲದಷ್ಟು ಪುರಾತನವಾಗಿದ್ದ ಅವಳ ಬದುಕು ಈಗ ಮತ್ತೆ ಹೊಸದಾಗಿ ಮದುವಣಗಿತ್ತಿಯಂತೆ ತಯಾರಾಗಿ ಶುರುವಾಗಿತ್ತು. ಪುಟ್ಟ ಸೀಮೆಎಣ್ಣೆ ಒಲೆ, ಮೂರು ಬೆರಳನ್ನು ಮಾತ್ರ ಒಟ್ಟಿಗೆ ಇಡಬಹುದಾದ ನಾಲ್ಕಾರು ಪಾತ್ರೆಗಳು, ಒಂದು ಚಾಪೆ ಒಂದು ರಗ್ಗು, ಕುಡಿಯುವ ನೀರಿಗೆ ಒಂದು ಮಡಕೆ, ಒಂದು ಔಷಧಿ ಡಬ್ಬಿ, ಒಂದು ಬಾಚಣಿಕೆ, ಇಷ್ಟು ವಸ್ತುಗಳನ್ನು ಬಿಟ್ಟು ಒಂದು ಕವಡೆಯೂ ಹೆಚ್ಚಿಲ್ಲದ ಕಾಶಮ್ಮನ ಹೊಸ ಬದುಕು ಅಕ್ಷಯ ತದಿಗೆಯ ದಿನ ವಿಧ್ಯುಕ್ತವಾಗಿ ಪ್ರಾರಂಭವಾಯಿತು.
ಮೂರು ಬೆರಳಿನ ಗಾತ್ರದ ಪಾತ್ರೆಯಲ್ಲಿ ಎರಡು ರೂಪಾಯಿಯ ಹಾಲು ತಂದು ಉಕ್ಕಿಸಿ ನಮಗೆಲ್ಲಾ ಚಾಕಲೇಟು ಕೊಟ್ಟು ಅವಳು ಅಡುಗೆ ಶುರುವಿಟ್ಟುಕೊಂಡಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ನೋಡುನೋಡುತ್ತಲೇ ಕಾಶಮ್ಮನು ಮಠದ ಕೇರಿಯ ಅವಿಭಾಜ್ಯ ಅಂಗವಾಗಿ ಬೆರೆತು ಹೋದಳು. ಗಂಡಸರಿಗೆ ಸಾಬರ ಕೇರಿಯ ಬೀಡಿ ಅಂಗಡಿ ಇದ್ದಂತೆ ಹೆಂಗಸರಿಗೆ ಮಧ್ಯಾಹ್ನದ ಹೊತ್ತಿಗೆ ಕೂತು ಮಾತನಾಡಲು ಇದೊಂದು ಜಾಗವಾಗಿತ್ತು. ಮಧ್ಯಾಹ್ನ ಊಟವಾದ ಮೇಲೆ ಕಾಶಮ್ಮನ ಕೋಣೆಯ ಮುಂದಿನ ಪುಟ್ಟ ಕಟ್ಟೆಯ ಮೇಲೆ ಕುಳಿತು ಸ್ವಲ್ಪ ಹೊತ್ತು ಹರಟುವುದು ಅಮ್ಮನ ದಿನಚರಿಯಲ್ಲಿ ಒಂದಾಗಿ ಸೇರಿಹೋಯಿತು. ಅವರಿಬ್ಬರೂ ನಮಗೆ ಅರ್ಥವಾಗದ ಏನೇನೋ ವಿಷಯಗಳನ್ನು ಮಾತನಾಡುತ್ತಿದ್ದರು. ಆದರೂ ಕೇಳಲು ಮಜವಾಗಿರುತ್ತಿತ್ತು ಎಂಬ ಕಾರಣಕ್ಕೆ ಶಾಲೆಯಿಂದ ಬಂದ ನಾವು ಅವಳ ಮನೆಯ ಮುಂದೆ ಸೇರುತ್ತಿದ್ದೆವು.
ಅವರಿಬ್ಬರು ಯಾರ್ಯಾರನ್ನೋ ಬೈದಾಡಿಕೊಳ್ಳುತ್ತಿದ್ದರು, ಯಾರನ್ನೋ ಹೊಗಳುತ್ತಿದ್ದರು. ಏನೇನೋ ವೇದಾಂತಗಳನ್ನು ಮಾತನಾಡುತ್ತಿದ್ದರು. ಮಾತೆಲ್ಲವೂ ಮುಗಿದಮೇಲೆ ಕಾಶಮ್ಮನು ತಾನೊಬ್ಬ ದೊಡ್ಡ ತತ್ವಜ್ಞಾನಿ ಎಂಬಂತೆ “ಅವರ ಬದುಕು ಅವರದು ನನ್ನದು ನನ್ನದೇ.. ವೃಥಾ ಇನ್ನೊಬ್ಬರನ್ನು ಯಾಕೆ ದೂರಲಿ ಹೇಳು? ದುಡಿದದ್ದು ಉಂಡೀಯೋ ಪಡೆದದ್ದು ಉಂಡೀಯೋ ಎಂದು ಮಹಾತ್ಮರು ಹೇಳಿದ್ದು ಕೇಳಿಲ್ಲವೇ..?” ಎಂದು ಮಾತು ಮುಗಿಸುತ್ತಿದ್ದಳು. ಅಮ್ಮನು ಹೌದೆಂಬಂತೆ ತಲೆದೂಗಿ ಎದ್ದು ಹೊರಡುತ್ತಿದ್ದಳು. ಆದರೆ ಕಾಶಮ್ಮ ಎಂದೂ ಯಾರನ್ನೂ ಕೆಟ್ಟದಾಗಿ ಮಾತನಾಡಿದ್ದನ್ನು ದೂರಿದ್ದನ್ನು ಹಂಗಿಸಿದ್ದನ್ನು ನಾವು ಕೇಳಿರಲಿಲ್ಲ. ತನ್ನ ವಯಸ್ಸಿಗೆ ತಕ್ಕ ಘನತೆಯನ್ನು ಎಳ್ಳಷ್ಟೂ ಮೀರದ ಗಾಂಭೀರ್ಯತೆ ಅವಳಲ್ಲಿತ್ತು.
ವಯಸಿನ ದಿನಗಳಲ್ಲಿ ಅವಳು ಎಂತಹ ಸುಂದರಿಯಾಗಿರಬಹುದೆಂಬ ಕುರುಹಿನ ಹಾಗಿರುವ ಸುಕ್ಕುಗಟ್ಟಲು ಇನ್ನೇನು ಸಿದ್ಧವಾಗಿದ್ದ ಚರ್ಮ ಅದರಡಿಯಲ್ಲಿಯೂ ಅವಳ ಗೋಧಿ ಮೈಬಣ್ಣವನ್ನೇ ಆಧರಿಸಿ ಮಿರಿಮಿರಿ ಮಿಂಚುತ್ತಿದ್ದ ಕೆನ್ನೆಗಳು ಆಗ ತಿಳಿಯದಿದ್ದರೂ ಈಗ ಅದ್ಭುತವೆನಿಸುತ್ತದೆ.
ಇಂತಿಪ್ಪ ಕಾಶಮ್ಮನಿಂದ ಯಾವುದೇ ಹಾನಿ ಇಲ್ಲ ಎಂಬುದನ್ನು ಮನಗಂಡ ಮಠದ ಕೇರಿಯ ಗಂಡಸರು, ತಂತಮ್ಮ ಹೆಂಗಸರನ್ನು ಧಾರಾಳವಾಗಿ ಅವಳ ಕೋಣೆಯ ಬಾಗಿಲಿಗೆ ಕಳಿಸಿಕೊಡುತ್ತಿದ್ದರು. “ಲೇ, ಇವಳೇ.. ಕಾಶಮ್ಮನ ಹತ್ತಿರ ಸುಣ್ಣ ಇದ್ಯಾ ಕೇಳ್ಕೊಂಡು ಬಾ..” ಎಂತ ಇನ್ನೂ ಅವಳ ಒಡನಾಟವನ್ನು ಹಚ್ಚಿ ಹರಡುತ್ತಿದ್ದರು. ಮಡಿ ತಪ್ಪದ ಕಾಶಮ್ಮನ ಕೈಲಿ ಯಾರು ಏನು ಬೇಕಾದರೂ ಕಡ ತೆಗೆದುಕೊಳ್ಳಬಹುದಿತ್ತು.
*****
ತಿಂಗಳಿಗೊಮ್ಮೆ ವೃದ್ಧಾಪ್ಯವೇತನ ಬರುವಾಗ ಮಾತ್ರ ಕಾಶಮ್ಮನಿಗೆ ಯಾರಾದರೂ ಸಹಾಯಕ್ಕೆ ಬೇಕಾಗುತ್ತಿತ್ತು. ಬ್ಯಾಂಕಿಗೆ ಹೋಗಿ ದುಡ್ಡು ತರಲು ಅವಳು ಸಂತಿಯನ್ನೋ, ಪ್ರಹ್ಲಾದನನ್ನೋ ಕಾಯಬೇಕಾಗುತ್ತಿತ್ತು. ಉಳಿದಂತೆ ಆ ಇನ್ನೂರು ಮುನ್ನೂರು ರೂಪಾಯಿಗಳಲ್ಲಿ ಇಡೀ ತಿಂಗಳು ಕಾಲ ಹಾಕುವ ಛಾತಿ ಅವಳಲ್ಲಿತ್ತು. ಬೆಳಗ್ಗೆ ಒಂದು ಹಿಡಿ ಅಕ್ಕಿ, ಸಂಜೆಗೆ ಎರಡು ಚಮಚೆಯ ಹಿಟ್ಟಿನ ಮುದ್ದೆ ಯಾವಾಗಲಾದರೊಮ್ಮೆ ಯಾರಾದರೂ ಒಂದು ಲೋಟ ಹಾಲು ಕೊಟ್ಟರೆ ಕಾಫಿಯೋ ಕರಿನೀರೋ.. ಯಾರಾದರೊಬ್ಬರ ಮನೆಯಿಂದ ಬರುತ್ತಿದ್ದ ಒಂದು ಕಾಫಿ ಲೋಟದಷ್ಟು ಸಾರೋ ಹುಳಿಯೋ ಮಜ್ಜಿಗೆಯೋ, ಅವಳ ಬದುಕಿನ ಬಂಡಿ ನೂಕಲು ಬೇಕಾದಷ್ಟಾಗುತ್ತಿತ್ತು. ನಮ್ಮಪ್ಪನು ಅವಳಿಗೆ ಒಂದು ತಿಂಗಳಿಗಾಗುವಷ್ಟು ಬಿಪಿ ಮಾತ್ರೆ ಕೊಡಿಸುವ ಜವಾಬ್ದಾರಿ ಹೊತ್ತರು. ಆದರೆ ಮಾತ್ರೆ ಮುಗಿದರೆ ಮಾತ್ರ ತಂದುಕೊಡಿ ಎಂದು ಕೇಳುತ್ತಿರಲಿಲ್ಲ ಸ್ವಾಭಿಮಾನಿ! ಬದಲಾಗಿ ಮಾರ್ಕೆಟ್ಟಿನ ಪಕ್ಕದ ಲಿಂಗಾಯತರ ಮನೆಯಲ್ಲಿ ಬೆಳ್ಳುಳ್ಳಿ ತಂದುಕೊಂಡು ಹಸಿ ಬೆಳ್ಳುಳ್ಳಿ ಎಸಳನ್ನು ಬೆಳಗ್ಗೆ ಬರಿ ಹೊಟ್ಟೆಗೆ ನುಂಗುತ್ತಿದ್ದಳು. ವಾಸನೆ ತಡೆಯಲಾರದೆ ವಾಂತಿ ಬಂದರೂ ಸಹಿಸಿಕೊಂಡು ನುಂಗಿ ಹೇಗೆ ತನ್ನ ರಕ್ತದೊತ್ತಡವನ್ನು ಹದ್ದುಬಸ್ತಿನಲ್ಲಿಟ್ಟಿದ್ದೇನೆ ಎಂಬುದನ್ನು ಮಧ್ಯಾಹ್ನ ಅಮ್ಮನಿಗೆ ವಿವರಿಸುತ್ತಿದ್ದಳು. ಎರಡು ಮೂರು ದಿನ ಈ ಬೆಳ್ಳುಳ್ಳಿ ಪ್ರಸಂಗ ಕೇಳಿದ ಮೇಲೆ ಅಮ್ಮನಿಗೆ ಅವಳ ಮಾತ್ರೆ ಖಾಲಿಯಾಗಿರುವುದು ನೆನಪಾಗುತ್ತಿತ್ತು.
*****
ಎಂದೂ ಯಾರ ಬಳಿಯು ಕೈಚಾಚಿ ಏನೂ ಬೇಡದ ಕಾಶಮ್ಮನಿಗೆ ಹೆಣ್ಣು ಮಕ್ಕಳೆಂದರೆ ಪಂಚಪ್ರಾಣ. ಅವಳ ಮೆತ್ತನೆಯ ಸೀರೆ ಹರಿಸಿ ನನಗೆ ಲಂಗ ಹೊಲಿಸುತ್ತಿದ್ದಳು. ನಮ್ಮಪ್ಪ ಅಮ್ಮ ಮಾಡಿದ ಚಿಕ್ಕಪುಟ್ಟ ಉಪಕಾರಗಳನ್ನು ಈ ರೀತಿ ನೆನೆಯುವುದು ಅವಳ ಪರಿ. ಆದರೆ ನನಗೋ, ಅವಳ ಹಳೇ ಮೆತ್ತನೆಯ ಕಾಟನ್ ಸೀರೆಗಳ ಲಂಗವು ಬಹು ಹಿತವೆನಿಸುತ್ತಿತ್ತು ಮತ್ತು ನಾನು ಇನ್ನೊಂದು ಹೊಲಿಸಿಕೊಡೆಂದು ದುಂಬಾಲು ಬೀಳುತ್ತಿದ್ದೆ. ಹೀಗೆ ಕೇಳುವಾಗ ಅಮ್ಮ ಪಕ್ಕದಲ್ಲಿ ಇಲ್ಲದ್ದು ಖಾತ್ರಿಯಾಗಬೇಕು, ಇಲ್ಲದಿದ್ದರೆ ಹಿಗ್ಗಾ-ಮುಗ್ಗಾ ಏಟು ತಿನ್ನುವ ಸೌಭಾಗ್ಯ ಒದಗಿ ಬರುತ್ತಿತ್ತು. ಅಕ್ಕನಿಗಾದರೆ ಲಂಗ ಹೊಲಿಸುವೆ, ನನಗೆ ಏನೂ ಕೊಡಿಸುವುದಿಲ್ಲವೆಂದು ನನ್ನ ತಮ್ಮನು ಆಗಾಗ ಬಂದು ಕಾಶಮ್ಮನ ಜೊತೆ ಜಗಳವಾಡಿ ಹೋಗುತ್ತಿದ್ದನು. ಆಗೆಲ್ಲಾ ಅವಳು ಸಿಟ್ಟಾಗುತ್ತಿರಲಿಲ್ಲ. ಬದಲಾಗಿ ಮೆಲ್ಲನೆ “ಮಗಾ, ನನ್ನ ಹಳೇ ಸೀರೆಯಿಂದ ನಿನಗೆ ಏನು ಹೊಲಿಸಲಿ? ಅಂಗಿಯೋ ಚಡ್ಡಿಯೋ..?” ಎಂದು ಕೇಳಿ ಜೋರಾಗಿ ನಗುವಳು. “ಪ್ರೀತಿ ಇದ್ದಿದ್ದರೆ ಏನಾದರೂ ಹೊಲಿಸುತ್ತಿದ್ದೆ. ಜುಬ್ಬ ಹೊಲಿಸಿದರೆ ಬೇಡವೆನ್ನುತ್ತಿತ್ತೆ?” ಎಂದು ಇವನು ಮುನಿಸಿಕೊಂಡು ಎದ್ದು ಓಡುವನು. ಆಗೆಲ್ಲಾ ಅವಳು ತಲೆ ಕೊಡವಿ ಮತ್ತಷ್ಟು ನಗುತ್ತಿದ್ದಳು. ಈ ಗಂಡಸರ ನಖರಾ ತನಗೇನು ಹೊಸದಲ್ಲ ಎಂಬಂತೆ “ಅಗಳಗಳೋ.. ಎದ್ದೇ ಹೋತು ಗಂಡು. ಈ ಸಿಟ್ಟು-ಸೆಡವು ನಂಗೇನೂ ಹೊಸ್ದಲ್ಲ, ನಾಳೆ ತಿನ್ನಕ್ಕೆ ಏನಾರ ಕೊಟ್ರೆ ನೀನೇ ಬರ್ತೀಯಾ. ಹೋಗಲೇ ಹುಚ್ಚ್ ಮೂಳಾ, ಲಂಗ ಬೇಕಂತೆ ಲಂಗ..” ಎಂದು ಕಟ್ಟೆ ಬಿಟ್ಟು ಎದ್ದು ಹೊರಡುವಳು.
ಹಾಗೆ ಅವಳು ಏಳುವ ರಭಸಕ್ಕೆ ಕೋಣೆಯ ಮುಂದಿನ ಚರಂಡಿಯ ಮೇಲೆ ಹರಿದಾಡುತ್ತಿದ್ದ ಪುರಾತನ ಡುಮ್ಮು ಹೆಗ್ಗಣಗಳು ಹೆದರಿ ತಾವು ಹೊರಬಂದ ಬಿಲಗಳಿಗೆ ಮರಳಿ ಓಡುತ್ತಿದ್ದವು. ಅಂತಹ ರಣ ಹೆಗ್ಗಣಗಳೊಟ್ಟಿಗೆ ನಿರ್ಭಯಳಾಗಿ ರಾತ್ರಿಗಳನ್ನು ಅದು ಹೇಗಾದರೂ ಕಳೆಯುತ್ತಿದ್ದಳೋ ಆ ಭಂಡ ಮುದುಕಿ! ನಮಗೆ ಭಯವಾಗುತ್ತಿತ್ತು. ಕಕ್ಕಸಿನಲ್ಲಿ ಕೂತಾಗ ಅವು ಆ ಗುಂಡಿಯಿಂದ ಹೊರಬಂದು ಅಂಡು ಕಚ್ಚಿ ಹೋಗುತ್ತವೆಂದು ಚಿಕ್ಕಪ್ಪ ತಮಾಷೆಗೆ ಹೇಳಿದ್ದನೋ ನಿಜವೋ ತಿಳಿಯದ ನಾವು ನಿತ್ಯಕರ್ಮದ ವೇಳೆಯನ್ನು ಯುದ್ಧ ಸಿದ್ಧತೆಗಳೊಂದಿಗೆ ಕಳೆಯುತ್ತಿದ್ದೆವು.
*****
ಈ ಪ್ರಪಂಚದ ಭಾಗವಾಗಿಯೂ ಆಗದಂತೆ, ಬಂಧಗಳಿಗೆ ಅಂಟಿಯೂ ಅಂಟದಂತೆ, ಎಲ್ಲರೊಟ್ಟಿಗೆ ಇದ್ದೂ ಇರದಂತೆ ಬದುಕೇ ಒಂದು ತಪಸ್ಸಾಗಿ ಬಹಳ ಮುಚ್ಚಟೆಯಿಂದ ಬದುಕುತ್ತಿದ್ದ ಅವಳು ಒಂದು ಸೋಜಿಗವೇ ಆಗಿದ್ದಳು. ನಮಗೆ ಅಸಹನೀಯವೆಂಬಂತೆ ತೋರುತ್ತಿದ್ದ ಅವಳ ಬದುಕನ್ನು ಅವಳು ಅತೀವವಾಗಿ ಪ್ರೀತಿಸುತ್ತಿದ್ದಳು. ಪ್ರತಿದಿನ ಎದ್ದಕೂಡಲೇ ಪುಟ್ಟ ಹೊಸಿಲಿಗೆ ಎರಡೆಳೆ ರಂಗೋಲಿ ಇಟ್ಟು ಯಾವುದಾದರೂ ದೇವರನಾಮವನ್ನು ಹಾಡುವುದು ಅವಳ ಪರಿಪಾಠ. ವಾರದಲ್ಲಿ ಒಂದು ದಿನವಾದರೂ ನಮಗೆಲ್ಲ ರಂಗೋಲಿ ತರಗತಿ ಅಥವಾ ದೇವರನಾಮದ ತರಗತಿ ತಪ್ಪುತ್ತಿರಲಿಲ್ಲ. ಅದಲ್ಲದೆ ಅಪ್ಪ-ಅಮ್ಮ ಅಜ್ಜ-ಅಜ್ಜಿಯರೊಂದಿಗೆ ಸಿಟ್ಟಾಗದಂತೆ ಹೇಗೆ ಹೊಂದಿಕೊಂಡು ಬಾಳಬೇಕು ಎಂಬ ಬಗ್ಗೆಯೂ ನಮಗೆ ತರಗತಿಗಳು ನಡೆಯುತ್ತಿದ್ದವು. ನಾವೆಲ್ಲರೂ ಈ ತರಗತಿಯ ಸಭ್ಯ ವಿದ್ಯಾರ್ಥಿಗಳಾಗಿದ್ದೆವೇನೋ ಎಂದು ನೀವು ತಿಳಿದರೆ ಅದು ತಪ್ಪು. ಅವಳು ಹೀಗೆ ಹೇಳಿಕೊಡುವಾಗಲೆಲ್ಲ ನಾವು ಅವಳೊಂದಿಗೆ ವಾದಕ್ಕಿಳಿಯುತ್ತಿದ್ದೆವು. ಅಪ್ಪ ಹೀಗೆ ಮಾಡಬಹುದೋ, ಅಜ್ಜಿ ಹಾಗೆ ಮಾಡಬಹುದೋ, ಇದೇ ಬುದ್ಧಿಯನ್ನು ಅವರಿಗೂ ಹೇಳು ಎಂದು ಜೋರಾಗಿ ಕೂಗಾಡುತ್ತಿದ್ದೆವು. ಆಗವಳು ಕೆಳ ಪಂಕ್ತಿಯಲ್ಲಿ ಕಾಣೆಯಾಗಿದ್ದ ಒಂದೇ ಒಂದು ಹಲ್ಲಿನ ಜಾಗದಲ್ಲಿ ನಳನಳಿಸುತ್ತಿದ್ದ ವಸಡು ಕಾಣುವಂತೆ ಕಿಲಕಿಲ ನಗುತಿದ್ದಳು. ಅವಳು ನಕ್ಕರೆ ನಮಗೆ ಅದೇನೋ ಆನಂದ. ಕೆಲವೊಮ್ಮೆ ಅವಳು ನಗಲೆಂದೇ ವಾದ ಮಾಡುತ್ತಿದ್ದೆವು.
“ಹುಚ್ಚುಮುಂಡೆವೇ.. ಹುಚ್ಚುಮುಂಡೇವೇ.. ನೀವು ಬದುಕಿರದೇ ಅವರಿಂದ ಕಣ್ರೋ..” ಎಂದು ಮತ್ತಷ್ಟು ನಗುವಳು. ಮುಪ್ಪೇ ಮುಟ್ಟದ ಹೂವಿನಂತೆ ಕಾಶಮ್ಮ ಯಾವಾಗಲೂ ನಳನಳಿಸುತ್ತಿದ್ದಳು.
ಒಂದು ಬೇಸಿಗೆ ರಜೆಯಲ್ಲಿ ಹಳ್ಳಿಯ ಮಾವನ ಮನೆಗೆ ಬಂದಿದ್ದ ನಾನು ಹಿಂತಿರುಗಿದಾಗ ಕಾಶಮ್ಮನ ಕೋಣೆಗೆ ಬೀಗ ಜಡಿದಿತ್ತು. ಅವಳ ಮೊಮ್ಮಗಳ ಮನೆಗೆ ಆಗಾಗ ಹೋಗಿ ಬರುವ ಪದ್ಧತಿ ಇದ್ದುದರಿಂದ ಹಾಗೆ ಹೋಗಿರಬಹುದೆಂದು ನಾನೂ ಸುಮ್ಮನಾದೆ. ಮೂರ್ನಾಲ್ಕು ದಿನವಾದರೂ ಮನೆಯಲ್ಲಿ ಕಾಶಮ್ಮನ ಸುದ್ದಿ ಬರಲೇ ಇಲ್ಲ. ಏನೋ ಸಂಶಯ ಬಂದು ಅಡುಗೆ ಮನೆಯಲ್ಲಿದ್ದ ಅಮ್ಮನ ಬಳಿಗೆ ಹೋಗಿ ಮೆಲ್ಲನೆ ಕೇಳಿದೆ “ಕಾಶಮ್ಮಜ್ಜಿ ಎಲ್ಲಿ?” ಅಮ್ಮ ತಟ್ಟನೆ ತಲೆಯೆತ್ತಿ ನೋಡಿ ಕಣ್ಣು ತಗ್ಗಿಸಿ ಮೆಲ್ಲನೆ ಸೆರಗಿನಿಂದ ಕಣ್ಣೊರೆಸಿಕೊಂಡಳು. ನನಗೆ ಮಾತು ಹೊರಡಲಿಲ್ಲ. ಸರಸರನೆ ಅವಳ ಕೋಣೆಯ ಬಳಿಗೆ ಓಡಿಹೋಗಿ ಪುಟ್ಟ ಕಿಟಕಿಯಿಂದ ಒಳಗೆ ಇಣುಕಿ ನೋಡಲು ಪ್ರಯತ್ನಿಸಿದೆ. ಕೋಣೆಯ ಒಳಗೆಲ್ಲಾ ಕಮಟುವಾಸನೆ ತುಂಬಿತ್ತು. ಕೆಲವೇ ದಿನಗಳ ಹಿಂದೆ ನಮ್ಮೆಲ್ಲರನ್ನು ಹಾಗೆ ನಗಿಸುತ್ತಿದ್ದ ಕಾಶಮ್ಮ ಈಗ ಪರಿಮಳವಾಗಿ ಹೋಗಿದ್ದಳು.
*****
ಇಂದಿಗೂ ಗಂಡನ ಮನೆಯಲ್ಲಿ ಕಷ್ಟವೆಂದು ಹಲುಬುವ ಹೆಣ್ಣುಗಳನ್ನು ಕಂಡಾಗ, ಎಲ್ಲ ಇದ್ದೂ ಏನೂ ಇಲ್ಲವೆಂಬಂತೆ ಬದುಕಿನ ಬಗ್ಗೆ ನೂರಾರು ದೂರು ಹೇಳುವವರನ್ನು ಕಂಡಾಗ, ಬದುಕಲು ಹೆದರಿ ಆತ್ಮಹತ್ಯೆ ಮಾಡಿಕೊಂಡವರ ಸುದ್ದಿ ಬಂದಾಗ, ಇಲ್ಲಿ ಇದ್ದು ಹೋಗುವ ಕೆಲವೇ ದಿನಗಳಿಗೆ ಹೆದರಿ ಹಲುಬಿಕೊಳ್ಳುತ್ತಾ ದಿನ ದೂಡುವವರನ್ನು ಕಂಡಾಗ ನನಗೆ ಕಾಶಮ್ಮ ನೆನಪಾಗುತ್ತಾಳೆ. ಯಾವುದೋ ಕಷ್ಟಕ್ಕೆ ನಾನು ಬಿಕ್ಕಿಬಿಕ್ಕಿ ಅಳುವಾಗ ಎದುರಿಗೆ ಬಂದು ತಟ್ಟನೆ ನನ್ನ ಅಳು ನಿಲ್ಲಿಸುತ್ತಾಳೆ. ಇನ್ನೇನೂ ಮಾಡಲಾರೆ ಎಂದು ಕೈಚೆಲ್ಲಿ ಕುಳಿತಾಗ ಪುಟ್ಟದೊಂದು ಕೋಣೆಯ ತುಂಬೆಲ್ಲ ಹರಡಿದ ಕಿಲಕಿಲ ನಗು ಕಿವಿಗೆ ಕೇಳಿದಂತಾಗಿ ನಾನು ಧಡಕ್ಕನೆ ಎದ್ದು ಕೂರುತ್ತೇನೆ. ಎಲ್ಲವೂ ಸಾಕೆನಿಸಿ ರೋಸಿ ಹೋದಾಗ ಮೆತ್ತನೆಯ ಕಾಟನ್ ಸೀರೆಯು ಮೈಗೆ ತಗುಲಿದಂತಾಗಿ ಹಿತವಾದ ಅಪ್ಪುಗೆಯೊಂದು ಗಾಳಿಯಲ್ಲಿ ತೇಲಿಬಂದು ಅವಳ ಪರಿಮಳವನ್ನು ಎದೆಗಿಟ್ಟು ಹೋಗುತ್ತದೆ.
ಕಾಶಮ್ಮನೆಂಬುದು ಒಂದು ಹೆಂಗಸು ಮಾತ್ರವೇ ಹೌದೇ? ಅಥವಾ ಒಂದು ಬತ್ತದ ಚೇತನದ ಒರತೆಯೋ… ಅವಳು ಹೋದಮೇಲೆ ಖಾಲಿ ಮಾಡಿದ ಕೋಣೆಯಿಂದ ಸೀಮೆಎಣ್ಣೆ ಒಲೆಯನ್ನು ತಂದಿಟ್ಟುಕೊಂಡಿದ್ದ ನನ್ನ ಅಮ್ಮನು ಆಗಾಗ “ಅವಳ ದಯೆಯಿಂದ ನಮ್ಮನೆಯಲ್ಲಿ ಅನ್ನ ಬೇಯುವುದು ಎಂದೂ ತಗ್ಗದಿರಲಿ.” ಅನ್ನುತ್ತಿದ್ದಳು. ಬದುಕು ಹೊತ್ತಿ ಉರಿಯುತ್ತಿದ್ದರೂ ಅದನ್ನು ಬೇರೆಯವರಿಗೆ ಬೆಳಕಾಗಿಸುವುದೇ ಮನುಷ್ಯತ್ವವೆಂದು ಬಾಯಲ್ಲಿ ಹೇಳದೇ ಪರಿಮಳದ ಬದುಕೊಂದನ್ನು ನಿಸೂರಾಗಿ ಬದುಕಿ ತಣ್ಣಗೆ ಎದ್ದುಹೋದವಳು ನನಗೆ ಎಂದೂ ಮಾಸದ ನೆನಪು. ಸಾವು ದೇಹಕ್ಕೆ ಮಾತ್ರ, ಅನ್ನುವುದು ಹಳೆಯ ಮಾತಲ್ಲವೇ?
ಕವಯಿತ್ರಿ, ಕಥೆಗಾರ್ತಿ ಮತ್ತು ಇಂಗ್ಲಿಷ್ ಅಧ್ಯಾಪಕಿ. ‘ನವಿಲುಗರಿಯ ಬೇಲಿ’ ಇವರ ಕವನ ಸಂಕಲನ.