ಮಂಜಮ್ಮ ಬಹುಶಃ ಮನಸ್ಸು ಮಾಡಿದ್ದರೆ ಮತ್ತೋರ್ವ ಪವಾಡ ಪುರುಷಳೇ ಆಗ ಬಿಡಬಹುದಿತ್ತೇನೋ ಎಂದು ಮರಡುಮನೆ ಸದಾಶಿವ ಅಭಿಪ್ರಾಯ ಪಡುತ್ತಾರೆ. ಆಕೆ ತುಂಬು ಸಂಸಾರದಲ್ಲಿದ್ದು ಎಲ್ಲ ಕೆಲಸ ಮಾಡುತ್ತಾ ಅದರಲ್ಲೇ ಪುರುಸೊತ್ತು ಮಾಡಿಕೊಂಡು ಧ್ಯಾನ, ತಪಸ್ಸುಗಳಲ್ಲಿ ಮುಳುಗಿಬಿಡುತ್ತಿದ್ದಳಂತೆ. ಊರಿನವರೆಲ್ಲ ತಮ್ಮ ತಮ್ಮ ಕಷ್ಟವನ್ನು ಹೇಳಲು ಬಂದಾಗಲೆಲ್ಲ ಅವರಿಗೆ ವೇದಾಂತದ ಉತ್ತರವನ್ನು ನೀಡಿ ಬದುಕನ್ನು ಎದುರಿಸಲು ಪ್ರೇರಣೆ ನೀಡುತ್ತಿದ್ದಳಂತೆ. ಹಂಸಗಾರಿನ ಲಕ್ಷ್ಮೀನಾರಾಯಣ ಮತ್ತು ಸಿದ್ಧಿವಿನಾಯಕ ದೇವರ ಭಕ್ತೆಯಾದ ಆಕೆ ಆ ದೇವರ ಸೇವೆಗಳಲ್ಲಿ, ಉತ್ಸವಗಳಲ್ಲೆಲ್ಲ ತಾನೇ ಕಟ್ಟಿದ ಪದ್ಯಗಳನ್ನು ಹಾಡುತ್ತಿದ್ದಳಂತೆ.
ಯಕ್ಷಗಾನದ ಮುದ್ರಿತ ಪ್ರಸಂಗಳ ಮೊದಲ ಪ್ರಸಂಗಕರ್ತೆ ಕಿಬ್ಬಚ್ಚಲ ಮಂಜಮ್ಮನ ಕುರಿತು ನಾರಾಯಣ ಯಾಜಿ ಬರೆದ ಲೇಖನ
ಕನ್ನಡ ಸಾಹಿತ್ಯದಲ್ಲಿ ಕವಯಿತ್ರಿಯರ ಸಂಖ್ಯೆ ಕ್ರಿ.ಶ. 1100ರ ಮಹಾದೇವಿ ಅಕ್ಕನಿಂದ ತೊಡಗಿ ಈ ಕಾಲದವರೆಗೆ ಬಹಳ ದೊಡ್ಡದು. ಮೌಲಿಕವಾಗಿಯೂ ಹಲವಾರು ಉತ್ತಮ ಕೃತಿಗಳು ಇವರಿಂದ ಹೊರಬಂದಿವೆ. ಹನ್ನೆರಡನೇ ಶತಮಾನದ ವಚನ ಸಾಹಿತ್ಯ 14-15ರ ದಾಸಸಾಹಿತ್ಯದಿಂದ ಮುಂದುವರಿದು ನವೋದಯ, ನವ್ಯ, ನವ್ಯೋತ್ತರ, ಬಂಡಾಯ, ಅದರೀಚೆಗಿನ ಸಾಹಿತ್ಯಗಳ ಅಧ್ಯಯನದಲ್ಲಿ ಯಕ್ಷಗಾನ ಕವಿಗಳಿಗೆ ಸೂಕ್ತ ಸ್ಥಾನ ದೊರೆಯದಿದ್ದುದು ಮಾತ್ರ ವಿಷಾದನೀಯ ಎಂತಲೇ ಹೇಳಬಹುದು.
ದಾಸ ಸಾಹಿತ್ಯಕ್ಕೆ ಅಖಿಲ ಕರ್ನಾಟಕ ವ್ಯಾಪ್ತಿಯಿದ್ದರೆ, ಅದೇ ರೀತಿ ರಾಗತಾಳಬದ್ಧವಾದ ಆದರೆ ರಂಗಮಾಧ್ಯಮಕ್ಕೆ ಅನುಕೂಲವಾಗುವಂತೆ ರಚಿತವಾದ ಯಕ್ಷಗಾನದ ಕಾವ್ಯಗಳಿಗೆ ಕನ್ನಡ ಸಾಹಿತ್ಯದ ಮುಖ್ಯ ಮಾರ್ಗಗಳಲ್ಲಿ ಯಾವ ಸ್ಥಾನವೂ ಇಲ್ಲ! ಸರಿಸುಮಾರು ಹದಿನೈದನೇ ಶತಮಾನದ ವಿಷ್ಣು ವಾರಂಬಳ್ಳಿ, ಕುಂಬಳೆಯ ಪಾರ್ತಿ ಸುಬ್ಬನಿಂದ ತೊಡಗಿ ಈ ಕಾಲದವರೆಗಿನ ಯಕ್ಷಕವಿಗಳ ಸಾಹಿತ್ಯದ ಅಧ್ಯಯನ ಪ್ರಾರಂಭವಾದುದೇ 1924ರಲ್ಲಿ ಎನ್ನಬಹುದು. ಡಾ. ಪಾದೇಕಲ್ಲು ವಿಷ್ಣುಭಟ್ಟರು ಸಂಪಾದಿಸಿದ ‘ಹಟ್ಟಿಯಂಗಡಿ ರಾಮಭಟ್ಟರ ಯಕ್ಷಗಾನ ಕೃತಿಗಳು’ ಗ್ರಂಥದಲ್ಲಿ ಐರೋಡಿ ಶಿವರಾಮಯ್ಯನವರು 1924ರಲ್ಲಿ “ಯಕ್ಷಗಾನೋಜ್ಜೀವಕರಾದ ಹಟ್ಟಿಯಂಗಡಿ ರಾಮಭಟ್ಟರು’ ಎಂಬ ಲೇಖನ ಪ್ರಕಟಸಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲಿಂದ ಮೊದಲುಗೊಂಡು ಯಕ್ಷಗಾನದ ಕವಿಗಳ ಕುರಿತು ಡಾ. ಶಿವರಾಮ ಕಾರಂತರು, ಸೇಡಿಯಾಪು ಕೃಷ್ಣಭಟ್ಟರು, ಕುಕ್ಕಿಲ ಕೃಷ್ಣ ಭಟ್ಟರು, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ನಾರಾಯಣ ಶಾನಭಾಗ ಮುಂತಾದವರು ತುಂಬಾ ಆಳವಾಗಿ ಈ ರಂಗದಲ್ಲಿ ಸಂಶೋಧನೆ ನಡೆಸಿ ಅನೇಕ ಅಜ್ಞಾತ ಕವಿಗಳನ್ನು ಬೆಳಕಿಗೆ ತಂದಿದ್ದಾರೆ.
ಸುಮಾರು ಆರುನೂರು ವರುಷಗಳ ಇತಿಹಾಸವಿರುವ ಯಕ್ಷಗಾನ ಸಾಹಿತ್ಯದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚಿನ ಕವಿಗಳ ಪ್ರಸಂಗಗಳಿವೆಯೆುನ್ನುವ ಅಂದಾಜಿದೆ. ಈ ಎಲ್ಲದರ ಪ್ರಸಂಗಕರ್ತರ ನಡುವೆ ಮಹಿಳಾ ಪ್ರಾಚೀನ ಕಾಲದಿಂದ ಈ ವರೆಗೆ ಪ್ರಸಂಗಕರ್ತೆಯರಾದ ಕವಿಯತ್ರಿಯರ ಸಂಖ್ಯೆ ಮಾತ್ರ ಕೇವಲ ಹದಿನಾಲ್ಕು ಎನ್ನುವದನ್ನು (ಈಚೆಗೆ ಯಕ್ಷಗಾನ ಕಲಾವಿದೆಯರಾದ ನಿರ್ಮಲಾ ಹೆಗಡೆ ಗೋಳಿಕೊಪ್ಪರವರನ್ನು ಒಳಗೊಂಡು) ಗಮನಿಸಿದಾಗ ಮಹಿಳೆಯರಿಗೆ ಈ ರಂಗ ಕೇವಲ ಪ್ರೇಕ್ಷಕರಾಗಿ ಮಾತ್ರ ಇರುವ ಆಯ್ಕೆಮಾತ್ರ ಆಗಿತ್ತೇನೋ ಎನಿಸದಿರದು.
ಈ ಬೆರಳೆಣಿಕೆಯ ಕವಿಯತ್ರಿಯರಲ್ಲಿ ಮೊದಲ ಹೆಸರು ಬರುವದು ಹರಪನಹಳ್ಳಿ ಭೀಮವ್ವ (ಕ್ರಿ. ಶ. ೧೮೨೨-೧೯೦೨) ನಾಲ್ಕು ಯಕ್ಷಗಾನ ಕೃತಿಗಳನ್ನು ರಚಿಸಿದ್ದಳೆಂಬ ತಿಳಿದು ಬರುತ್ತದೆ. ಈಕೆ ದಾಸ ಸಾಹಿತ್ಯದಲ್ಲೂ ಗಮನಾರ್ಹ ಕೊಡುಗೆ ನೀಡಿದ್ದಾಳೆ. ಈ ಭೀಮವ್ವನಿಗಿಂತಲೂ ಹಿಂದಿನ ಇತಿಹಾಸ ತೆಗೆದು ನೋಡಿದರೆ ಸುಮಾರು ಕ್ರಿ. ಶ. ೧೮೦೦ದಲ್ಲಿ ಇದ್ದ ಚಾವಾಡಿ ಮಹಾಲಕ್ಷ್ಮಿ ಹೆಬ್ಬಾರ ಎನ್ನುವವರು “ಕೆಂಪಾಸುರ ಕಾಳಗ” ವೆನ್ನುವ ಪ್ರಸಂಗ ಬರೆದಿದ್ದರೆಂದು ತಿಳಿದು ಬರುತ್ತದೆ. ಇವರು ಕನ್ನಡದ ಪ್ರಸಿದ್ಧ ಕವಿ ಮುದ್ದಣನ ಕಾವ್ಯಗುರು ಬವುಲಾಡಿ ವೆಂಕಟರಮಣ ಹೆಬ್ಬಾರರ ತಾಯಿ. ಈ ಎರಡೂ ಕವಿಗಳ ಕೃತಿ ಇಂದು ಉಪಲಬ್ಧವಿಲ್ಲ. ಇನ್ನು “ಪ್ರಸನ್ನಾಮೃತ” ಎಂಬ ಯಕ್ಷಗಾನ ಕೃತಿ (ಕ್ರಿ. ಶ. ೧೮೫೦) ರಚಿಸಿದ ಅಮ್ಮಣಿಯಮ್ಮ, “ಕೃಷ್ಣ ಲೀಲೆ” ಯನ್ನು ಬರೆದ ಗಣಪಕ್ಕ ಸಣ್ಣಭಡ್ತಿ (ಕ್ರಿ. ಶ. ೧೮೭೯-೧೯೩೦) ಮತ್ತು ಕೃಷ್ಣ ಪಾರಿಜಾತವನ್ನು ಬರೆದ ವೆಂಕಟಲಕ್ಷ್ಮಮ್ಮ (ಕ್ರಿ. ಶ. ೧೮೯೦) ಇವರು ಯಕ್ಷಗಾನದ ಪ್ರಾಚೀನ ಕವಿಯತ್ರಿಯರೆಂದು ಗುರುತಿಸಬಹುದು. ಈ ಎಲ್ಲ ಕವಿಯತ್ರಿಯರಪೈಕಿ ಗೋಕರ್ಣದ ಗಣಪಕ್ಕ ಸಣ್ಣಭಡ್ತಿಯವರ ಕೃಷ್ಣ ಲೀಲೆಯ ಕೆಲವೇ ಪದ್ಯಗಳು ಮಾತ್ರ ಲಭ್ಯವಿದೆ.
ಈ ಎಲ್ಲದರ ನಡುವೆ ನನ್ನ ಕಣ್ಣಿಗೆ ಬಿದ್ದದ್ದು ನನ್ನ ಮಾವ ಆರೋಡಿ ಮಂಜಯ್ಯನವರ ಸಂಗ್ರಹದಲ್ಲಿದ್ದ ಯಕ್ಷಗಾನ ಪ್ರಸಂಗಗಳ ಸಂಗ್ರಹಗಳ ನಡುವೆ ಸಿಕ್ಕ ‘ವೇದಾಂತ ತತ್ವಸಾರ ಜೀವ ಪರಮರ ಕಲ್ಯಾಣ, ಮನೋಬುದ್ಧಿ ಸಂವಾದ” ಹಾಗೂ ‘ಚಿಲ್ಲರೆ ಕೀರ್ತನೆಗಳು’ ಎನ್ನುವ ಕಿರು ಪುಸ್ತಕ. ಆ ಪುಸ್ತಕದ ಮೇಲಿದ್ದಿದ್ದು “ಸ ಭ ಸಾಗೂರ ತಾಲೂಕ ಕಿಬ್ಬಚ್ಚಲ ಮಂಜಮ್ಮನವರಿಂದ ರಚಿಸಲ್ಪಟ್ಟದ್ದನ್ನು ಕೆ. ವೆಂಕಟರಮಣ ಶಾಸ್ತ್ರಿ ಸೂರಿ ಇವರು ಚನ್ನಾಗಿ ಶೋಧಿಸಿ ವೆ. ರಾ. ಬೂದೀ ಮಹಾಭಲೇಶ್ವರಭಟ್ಟ ಕರ್ಕಿ ಇವರಿಗೋಸ್ಕರ ಎರಡನೇ ಆವರ್ತಿ ಎನ್ನುವ ೧೮೮೯ರಲ್ಲಿ ಪ್ರಕಟವಾದ ದ್ವಿತೀಯ ಮುದ್ರಣದ ಪ್ರತಿ. ಅಲ್ಲಿಗೆ ಕಾಲಗರ್ಭದಲ್ಲಿ ಹೂತುಹೋಗಿದ್ದ ಯಕ್ಷಗಾನದ ಕವಿಯತ್ರಿಯೊಬ್ಬಳು ಇತಿಹಾಸದಲ್ಲಿ ಪ್ರಥಮವಾಗಿ ಮುದ್ರಣವಾದ ಯಕ್ಷಗಾನ ಪ್ರಸಂಗ ಕರ್ತೆಯೆಂದು ನಿಸ್ಸಂದೇಹವಾಗಿ ದಾಖಲಾದಳು.
ನನಗೆ ಯಕ್ಷಗಾನದಲ್ಲಿ ಅಪರಿಮಿತ ಆಸಕ್ತಿ. ಈ ನನ್ನ ಯಕ್ಷಗಾನದ ಆಸಕ್ತಿಯನ್ನು ಗಮನಿಸಿ ನನ್ನ ಮಾವ ಈಗ ದಿವಂಗತರಾದ ಆರೋಡಿ ಮಂಜಯ್ಯನವರು ತನ್ನಲ್ಲಿದ್ದ ಅಪರೂಪದ ಯಕ್ಷಗಾನದ ಪ್ರಸಂಗಗಳ ಸಂಗ್ರಹವನ್ನು ತೆಗೆದುಕೊಳ್ಳಲು ನನಗೆ ಹೇಳಿದರು. ಸಾಗರ ತಾಲೂಕಿನ ತಾಳಗುಪ್ಪಾ ಸಮೀಪದ ಬೆಳ್ಳೆಣ್ಣೆ ವಾಸಿಯಾದ ಅವರು ಯಕ್ಷಗಾನದ ಅಪ್ಪಟ ಪ್ರೇಕ್ಷಕರಾಗಿದ್ದರು. ಸಂಕೋಚ ಸ್ವಭಾವದ ಅವರ ಪರಿಚಯ ಯಾವ ಕಲಾವಿದರಿಗೂ ಇಲ್ಲ. ಬಡತನ, ಮುಳುಗಡೆಯ ಹೋರಾಟದ ಮಧ್ಯೆಯೂ ಪುಸ್ತಕ ಸಂಗ್ರಹ ಅವರ ನೆಚ್ಚಿನ ಹವ್ಯಾಸ.
ಆ ಪುಸ್ತಕಗಳನ್ನು ಯಾರಿಂದ ಎಷ್ಟು ಕ್ರಯಕ್ಕೆ ಕೊಂಡುಕೊಂಡೆ ಎಂದು ಅಚ್ಚುಕಟ್ಟಾಗಿ ಬರೆದು ಅದಕ್ಕೊಂದು ಬೈಂಡ್ ಹೊಲಿದು ಅಟ್ಟದ ಮೇಲೆ ಜೋಪಾನವಾಗಿ ಇರಿಸಿದ್ದರು. ಆ ಸಂಗ್ರಹವನ್ನು ಬಿಡಿಸಿದಾಗ ಒಂದು ಕೃತಿ ನನ್ನ ಗಮನ ಸೆಳೆಯಿತು. ಅದರ ಮುಖಪುಟ ಗಮನಾರ್ಹವಾಗಿದೆ. ಅದು ಹೀಗಿದೆ.
ಈ ಕೃತಿಯನ್ನು ನೋಡಿ ಆಶ್ಚರ್ಯ ತಡೆಯಲಾಗಲಿಲ್ಲ. ಈ ಕೃತಿಯ ಮೊದಲನೇ ಮುದ್ರಣ 1886ರಲ್ಲಿ, ದ್ವಿತೀಯ ಮುದ್ರಣ 1889ರಲ್ಲಿ ಎಂದು ಹವ್ಯಕ ಅಧ್ಯಯನ ಕೇಂದ್ರವು 2011ರಲ್ಲಿ ಪ್ರಕಟಿಸಿದ ‘ಹವ್ಯಕ ಗ್ರಂಥಕಾರ ಕೃತಿದರ್ಪಣ’ದಲ್ಲಿ ದಾಖಲಾಗಿದೆ. ದ್ವಿತೀಯ ಮುದ್ರಣದಲ್ಲಿ ಸಾವಿರ ಪ್ರತಿಗಳು ಮುದ್ರಣಗೊಂಡಿರುವುದು ಇದರ ಅಂದಿನ ಜನಪ್ರಿಯತೆಗೆ ಸಾಕ್ಷಿ. ಇಂಥ ಗೌರವ ಸಮಕಾಲೀನ ಮತ್ತಾವ ಕೃತಿಗೂ ದೊರಕಿಲ್ಲ ಎಂಬುದು ಪರಿಶೀಲನಾರ್ಹ. ಈ ಯಕ್ಷಗಾನ ಪ್ರಸಂಗಗಳ ಪುಸ್ತಕದಲ್ಲಿ ಮೂರು ಭಾಗಗಳಿವೆ. ಮೊದಲಿನವೆರಡು ಯಕ್ಷಗಾನಗಳು. ಮೂರನೆಯದು ಭಜನೆ-ಬಿಡಿ ಕೀರ್ತನೆಗಳು. ಮೊದಲನೇ ಯಕ್ಷಗಾನ ಜೀವಪರಮರ ಕಲ್ಯಾಣದಲ್ಲಿ ನೂರಾರಂಭತ್ತೆರೆಡು ಪದ್ಯಗಳಿದ್ದರೆ ಎರಡನೇ ಯಕ್ಷಗಾನ ಮನೋಬುದ್ಧಿ ಸಂವಾದದಲ್ಲಿ ನೂರಾಮೂವತೈದು ಪದ್ಯಗಳಿವೆ. ಮೂರನೇ ಭಾಗದಲ್ಲಿ ಮೂವತ್ತೆರೆಡು ತುಂಡು ಪದಗಳಿವೆ.
ಇಲ್ಲಿಂದ ಈ ಮಂಜಮ್ಮ ಯಾರು? ಅವಳ ವಂಶಸ್ಥರು ಯಾರಾದರು ಇರುವರೇ ಎನ್ನುವ ಹುಡುಕಾಟ ಪ್ರಾರಂಭವಾಯಿತು. ಲಿಂಗನಮಕ್ಕಿ ಆಣೆಕಟ್ಟಿನಿಂದಾಗಿ ಅಲ್ಲಿನ ಅನೇಕ ಮನೆಗಳು ಮುಳುಗಡೆಯಾದ ಕಾರಣ ಆ ಭಾಗದಲ್ಲಿರುವ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿ ವಲಸೆ ಹೋದದ್ದರಿಂದ ಆಕೆಯ ಕುರಿತು ತಿಳಿದವರನ್ನು ಹುಡುಕುವದು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ನೆರವಿಗೆ ಬಂದವರು ನನ್ನ ಹೆಂಡತಿಯ ಸೋದರ ಮಾವ ಮರಡುಮನೆ ಸದಾಶಿವ. ಅವರ ಹತ್ತಿರ ‘ಕಿಬ್ಬಚ್ಚಲು ಎಂಬ ಗ್ರಾಮ ಎಲ್ಲಿದ್ದು?’ ಎಂದು ಕೇಳಿದ್ದೇ ತಡ, “ಇಲ್ಲೇ ಹತ್ತಿರವೇ ಕಿಬ್ಬಚ್ಚಲು ಮಾರಾಯ, ಅಲ್ಲಿ ಮಂಜಮ್ಮನ ಕೆರೆ ಹೇಳಿ ಇದ್ದು. ಹೋಗಿ ಕೇಳುವಾ.” ಎಂದೊಡನೆ ಅವರೊಡನೆ ಹೊರಟೆ. ಸಾಗರದಿಂದ ಸುಮಾರು ಹದಿನೈದು ಕಿ.ಮೀ. ದೂರದ ಸರಿಯಾಗಿ ರಸ್ತೆ ಸಂಪರ್ಕವಿಲ್ಲದ ಊರು. ಅಡಿಕೆ ತೋಟದ ಮಧ್ಯದಲ್ಲಿ ಒಂದು ಹಳೇ ಹಂಚಿನ ಮನೆಗೆ ನಮ್ಮನ್ನು ಕರೆದೊಯ್ದ. ದತ್ತಣ್ಣ ಎನ್ನುತ್ತಾ ಕರೆದರೆ ಸುಮಾರು ಐವತ್ತರಿಂದ ಐವತೈದರ ಪ್ರಾಯದ ವ್ಯಕ್ತಿ ನಮ್ಮನ್ನು ಸ್ವಾಗತಿಸಿದರು. ಪಕ್ಕಾ ಹವ್ಯಕರ ಆತ್ಮೀಯ ಆತಿಥ್ಯದ ನಂತರ ಕಿಬ್ಬಚ್ಚಲ ಮಂಜಮ್ಮನ ಕುರಿತು ಕೇಳಿದಾಗ ಆಕೆ ಅದೇ ಮನೆತನದವಳು ಎನ್ನುವದನ್ನು ಕೇಳಿ ಮೈ ರೋಮಾಂಚನಗೊಂಡಿತು. ಆದರೆ ದತ್ತಣ್ಣನಿಗೊ ಹೆಚ್ಚಿನ ವಿವರ ಗೊತ್ತಿಲ್ಲ. ಗೊತ್ತಿರುವಷ್ಟಾದರು ಕೇಳಬೇಕೆಂಬ ಕುತೂಹಲದಿಂದ ವಿಷಯ ಕೆದಕಿದಾಗ ಅಲ್ಲಿನ ಊರಿನ ಹಳೇ ಹಳೇ ಮುದಕರನ್ನೆಲ್ಲಾ ವಿಚಾರಿಸಿದಾಗ ಸಿಕ್ಕ ವಿವರದ ಆಧಾರದ ಮೇಲೆ ಕಿಬ್ಬಚ್ಚಲ ಮಂಜಮ್ಮನ ಚರಿತ್ರೆಯನ್ನು ದಾಖಲಿಸಲು ಯತ್ನಿಸಿದ್ದೇನೆ.
ಕಿಬ್ಬಚ್ಚಲ ಮಂಜಮ್ಮ
ಕಿಬ್ಬಚ್ಚಲು ಎಂಬುವದು ಹಂಸಗಾರು ಗ್ರಾಮದ ಒಂದು ಪುಟ್ಟ ಮಜರೆ. ದಟ್ಟ ಮಲೆನಾಡಿನ ಮಧ್ಯದಲ್ಲಿರುವ ಈ ಊರಿನಲ್ಲಿ ಮಂಜಮ್ಮನ ಸಂಸಾರ. ಅಲ್ಲಿ ದೊರೆತ ಮಾಹಿತಿಗಳಿಂದ ಈಕೆಯ ಕಾಲ 1830 ರಿಂದ 1900ರ ಸುಮಾರಿಗೆ ಎಂದು ಊಹಿಸಬಹುದು. ಬಾಲ್ಯದಿಂದಲೂ ದೈವಭಕ್ತೆಯಾದ ಈಕೆಯ ಗಂಡ (ಅವರ ಹೆಸರು ತಿಳಿದುಬಂದಿಲ್ಲ)ನೂ ದೈವಭಕ್ತಿಯುಳ್ಳವನಾಗಿದ್ದನಂತೆ. ಗಂಡ ಹೆಂಡತಿ ಇಬ್ಬರೂ ಹಂಸಗಾರಿನ ಲಕ್ಷ್ಮೀನಾರಾಯಣನ ಪರಮಭಕ್ತರಾಗಿದ್ದರಂತೆ. ಈ ದಂಪತಿಗಳಿಗೆ ಎಂಟು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳಿದ್ದವಂತೆ. ದಂಪತಿಗಳಿಬ್ಬರೂ ತೋಟದಲ್ಲಿ ಹೋಗಿ ಗಂಟೆಗಟ್ಟಲೆ ಜಪದಲ್ಲಿ ಮುಳುಗಿಬಿಡುತ್ತಿದ್ದರಂತೆ. ಆ ಸಂದರ್ಭದಲ್ಲಿ ಏನೋ ಪ್ರೇರಣೆಯಾಗಿ ಮಂಜಮ್ಮ ಅಲ್ಲೇ ಒಂದು ಕೆರೆಯನ್ನು ತೋಡಿಸಿದಳೆಂದೂ, ಆ ಕೆರೆಯ ನೀರಿನಲ್ಲಿ ಸ್ನಾನಮಾಡಿ ದಂಪತಿಗಳಿಬ್ಬರೂ ದಿನಗಟ್ಟಲೆ ತಪಸ್ಸಿಗೆ ಕುಳಿತುಬಿಡುತ್ತಿದ್ದರೆಂದೂ ಪ್ರತೀತಿ ಇದೆ. ಇವರ ತಪಸ್ಸಿಗೆ ಒಲಿದ ಶಿವ-ಪಾರ್ವತಿಯರು ಆ ಕೆರೆಯ ಹತ್ತಿರವೇ ಅವರಿಗೆ ಪ್ರತ್ಯಕ್ಷರಾಗಿದ್ದರೆಂದೂ ಹೇಳುತ್ತಾರೆ. ಈಗ ಆ ಕೆರೆಗೆ ಸಿಮೆಂಟಿನ ವೃತ್ತವನ್ನು ಕಟ್ಟಿ ತೋಟಕ್ಕೆ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಈಗಲೂ ದೀಪಾವಳಿಯ ದಿನ ಈ ಕೆರೆಯಿಂದಲೇ ಸುತ್ತಮುತ್ತಲಿನವರೆಲ್ಲ ನೀರನ್ನು ತೆಗೆದುಕೊಂಡು ಹೋಗುತ್ತಾರೆ. ಇವತ್ತಿಗೂ ಅದನ್ನು ಮಂಜಮ್ಮನ ಕೆರೆ ಎಂತಲೇ ಕರೆಯುತ್ತಾರೆ.
ಮನೆಯ ಮುಂದಿರುವ ಒಂದೇ ಕಲ್ಲಿನಿಂದ ಕೆತ್ತಿದ ತುಳಸೀ ಕಟ್ಟೆಯೂ ಮಂಜಮ್ಮನ ಕಾಲದ್ದಂತೆ. ಮಂಜಮ್ಮನಿಗೆ ದೈವಿಕ ಭಕ್ತಿಯ ಒಟ್ಟಿಗೆ ವೇದಾಂತದ ಮೇಲೆ ಆಸಕ್ತಿ ಇತ್ತು. ಆಕೆಯಲ್ಲಿನ ಭಕ್ತಿಯ ಪಾರಮ್ಯದಲ್ಲಿ ಯಾವುದೋ ಒಂದು ಅದ್ಯಾತ್ಮ ಶಕ್ತಿ ಒಲಿದು ದೃಷ್ಟಾಂತವಾದದ್ದು ಎನ್ನುವ ಪ್ರತೀತಿ ಇದೆ. ಈಗ ಲಭ್ಯವಿರುವ ಆಕೆಯ ಕೃತಿಯನ್ನು ಓದಿದರೆ ಈ ಮಾತಿಗೆ ಪುಷ್ಟಿ ಸಿಗುತ್ತದೆ. ಆಶ್ಚರ್ಯ ಎಂದರೆ ಮಂಜಮ್ಮನಿಗೆ ಓದು ಬರೆಯಲು ಬರುತ್ತಿರಲಿಲ್ಲವಂತೆ. ತಪಸ್ಸಿಗೆ ಕುಳಿತು ಧ್ಯಾನ ಮಾಡಿ ಎದ್ದಾಗ ಅವಳ ಬಾಯಿಂದ ವೇದಾಂತ, ಕಾವ್ಯ, ಯಕ್ಷಗಾನದ ಪದ್ಯಗಳೆಲ್ಲ ಸಹಜವಾಗಿ ಉದುರುತ್ತಿದ್ದವಂತೆ. ಆಕೆ ಹೇಳುತ್ತಾ ಹೊರಟರೆ ಅವಳ ದೂರದ ಸಂಬಂಧಿ ಹಿರೆಮನೆಯ ರಾಮನಾಥಯ್ಯ ಎಂಬವರು ಅದನ್ನೆಲ್ಲ ಬರೆದಿಟ್ಟುಕೊಳ್ಳುತ್ತಿದ್ದರಂತೆ.
ಮಂಜಮ್ಮ ಬಹುಶಃ ಮನಸ್ಸು ಮಾಡಿದ್ದರೆ ಮತ್ತೋರ್ವ ಪವಾಡ ಪುರುಷಳೇ ಆಗ ಬಿಡಬಹುದಿತ್ತೇನೋ ಎಂದು ಮರಡುಮನೆ ಸದಾಶಿವ ಅಭಿಪ್ರಾಯ ಪಡುತ್ತಾರೆ. ಆಕೆ ತುಂಬು ಸಂಸಾರದಲ್ಲಿದ್ದು ಎಲ್ಲ ಕೆಲಸ ಮಾಡುತ್ತಾ ಅದರಲ್ಲೇ ಪುರುಸೊತ್ತು ಮಾಡಿಕೊಂಡು ಧ್ಯಾನ, ತಪಸ್ಸುಗಳಲ್ಲಿ ಮುಳುಗಿಬಿಡುತ್ತಿದ್ದಳಂತೆ. ಊರಿನವರೆಲ್ಲ ತಮ್ಮ ತಮ್ಮ ಕಷ್ಟವನ್ನು ಹೇಳಲು ಬಂದಾಗಲೆಲ್ಲ ಅವರಿಗೆ ವೇದಾಂತದ ಉತ್ತರವನ್ನು ನೀಡಿ ಬದುಕನ್ನು ಎದುರಿಸಲು ಪ್ರೇರಣೆ ನೀಡುತ್ತಿದ್ದಳಂತೆ. ಹಂಸಗಾರಿನ ಲಕ್ಷ್ಮೀನಾರಾಯಣ ಮತ್ತು ಸಿದ್ಧಿವಿನಾಯಕ ದೇವರ ಭಕ್ತೆಯಾದ ಆಕೆ ಆ ದೇವರ ಸೇವೆಗಳಲ್ಲಿ, ಉತ್ಸವಗಳಲ್ಲೆಲ್ಲ ತಾನೇ ಕಟ್ಟಿದ ಪದ್ಯಗಳನ್ನು ಹಾಡುತ್ತಿದ್ದಳಂತೆ. ಆ ಕಾಲದಲ್ಲಿ ಸಾಗರ ಪ್ರಾಂತ್ಯದಲ್ಲಿ ಆಕೆ ಪ್ರಸಿದ್ಧಿಯಾಗಿದ್ದಳು ಎಂದು ಊರಿನವರು ಹೇಳುತ್ತಾರೆ.
ಸೂರಿ ವೆಂಕಟ್ರಮಣ ಶಾಸ್ತ್ರಿ ಕರ್ಕಿ ಆ ಕಾಲದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಓರ್ವ ಶ್ರೇಷ್ಠ ವಿದ್ವಾಂಸ. (ವಿವರಗಳಿಗೆ ಡಾ. ಶಾಲಿನಿ ರಘುನಾಥ ಭಟ್ಟರ ‘ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ-ಒಂದು ಅಧ್ಯಯನ’-ಸೌರಭ ಧಾರವಾಡ 1988 ಮತ್ತು ನಾರಾಯಣ ಶಾನಭಾಗರ ‘ಹವ್ಯಕ ಗ್ರಂಥಕಾರ ಕೃತಿದರ್ಪಣ’ ಪುಟ 17-19 ನೋಡಿ) ಅವರು ಸ್ವತಃ ಸಾಹಿತಿಯಲ್ಲದೇ ಪುಸ್ತಕ ಸಂಪಾದಕ, ಪ್ರಕಾಶಕ, ಪತ್ರಿಕೆಯ ಸಂಪಾದಕ, ಸಂಶೋಧಕ ಎಲ್ಲಾ ಆಗಿದ್ದರು. ಅವರ ಕಾಲ 1852 ರಿಂದ 1892. ಆ ಅಲ್ಪ ಕಾಲದಲ್ಲಿಯೇ ಅವರು ಮುಂಬೈಯ ಥಾಕುರದ್ವಾರದಲ್ಲಿ ಭಾರತೀ ಪ್ರೆಸ್ ಎನ್ನುವ ಮುದ್ರಣಾಲಯವನ್ನು ಸ್ಥಾಪಿಸಿದ್ದರು. ಹವ್ಯಕ ಹೀತೇಚ್ಚು ಎನ್ನುವ ಕಾವ್ಯನಾಮವನ್ನು ಹೊಂದಿರುವ ಅವರು ಮಹಾಕವಿ ಪರಮದೇವನ ತುರಂಗಭಾರತ ಮಹಾಕಾವ್ಯವನ್ನು ಸಂಪಾದಿಸಿ ಪ್ರಕಟಿಸಿದವರು.
ಅವರು ತೀರ್ಥಹಳ್ಳಿಯ ರಾಮಚಂದ್ರಾಪುರಮಠದಲ್ಲಿಯೂ ಪ್ರಮುಖ ಕರ್ತವ್ಯದಲ್ಲಿದ್ದರು ಎಂದು ತಿಳಿದು ಬರುತ್ತದೆ. ಅವರು ಆ ಕಾಲದಲ್ಲಿ ಕರ್ಕಿಯಿಂದ ಘಟ್ಟದ ಮೇಲೆಲ್ಲಾ ಕುದುರೆಯ ಮೇಲೆ ತಿರುಗಾಡುತ್ತಿದ್ದರಂತೆ. ಗೇರುಸೊಪ್ಪಾದಿಂದ ತೀರ್ಥಹಳ್ಳಿಗೆ ಹೋಗುವ ಮಾರ್ಗ ಹಂಸಗಾರಿನ ಮೇಲಿನಿಂದಲೇ ಹಾಯ್ದು ಹೋಗುತ್ತಿತ್ತು. ಹಾಗಾಗಿ ಕಿಬ್ಬಚ್ಚಲ ಮಂಜಮ್ಮನ ಕುರಿತು ಅವರಿಗೆ ತಿಳಿದು ಆಕೆ ಬರೆದ ಪುಸ್ತಕವನ್ನು ಪ್ರಕಟಿಸುವ ಆಸಕ್ತಿ ತೋರಿರಬೇಕು.
ಕರ್ಕಿಯಲ್ಲಿ ಬೂದಿಭಟ್ಟರ ಮನೆತನ ಈಗಲೂ ಇದೆ. ಈ ಮನೆತನದ ಪೂರ್ವಜರು ಶತಮಾನಗಳ ಹಿಂದೆಯೇ ಗ್ರಾಮೀಣ ಚಿಕಿತ್ಸೆಯ ಅಂಗವಾಗಿ ವಿಭೂತಿಯನ್ನು ಮಂತ್ರಿಸಿಕೊಡುತ್ತಿದ್ದದರಿಂದ ಬಂದ ವಿಭೂತಿಭಟ್ಟರ ಮನೆ ಎಂಬ ಹೆಸರು ಅಪಭ್ರಂಶಗೊಂಡು ಬೂದಿಭಟ್ಟರಮನೆ ಆಯಿತಂತೆ. ಇಂತಹ ಸುಮಾರು ಮೂವತ್ತರಷ್ಟು ಅಡ್ಡಹೆಸರುಗಳಿರುವ ಮನೆತನಗಳು ಕರ್ಕಿಯಲ್ಲಿರುವದೊಂದು ವಿಶೇಷ. ತಮ್ಮ ಎಪ್ಪತ್ತೊಂಭತ್ತನೇ ವಯಸ್ಸಿನಲ್ಲಿ 1991ರಲ್ಲಿ ದಿವಂಗತರಾದ ಬೂದಿ ತಿಮ್ಮಣ್ಣಭಟ್ಟರು ಕರ್ಮಕಾಂಡ ಮತ್ತು ಜ್ಯೋತಿಷ್ಯ ಪಂಡಿತರಾಗಿದ್ದರಂತೆ. ಇವರು ತಮ್ಮ ಮಗ ಪಿ.ಟಿ. ಭಟ್ಟರಿಗೆ ಹೇಳಿದ ಪ್ರಕಾರ ಸೂರಿ ವೆಂಕಟರಮಣ ಶಾಸ್ತ್ರಿಗಳ ಸಮಕಾಲೀನ ಬೂದಿ ಮಹಾಬಲೇಶ್ವರ ಭಟ್ಟರು ತಿಮ್ಮಣ್ಣ ಭಟ್ಟರ ಅಜ್ಜನ ಅಪ್ಪ (ಮುತ್ತಜ್ಜ). ಅವರು ಸೂರಿ ಶಾಸ್ತ್ರಿಗಳಿಗೆ ಆರ್ಥಿಕವಾಗಿ ಬಲನೀಡುತ್ತಿದ್ದರಂತೆ. ಕರ್ಕಿಯಲ್ಲಿ ಈಗಲೂ ಬೂದೀ ಭಟ್ಟರ ಮನೆತನ ಇದೆ. ಅಲ್ಲಿ ಮಹಾಬಲೇಶ್ವರ ಭಟ್ಟ ಎಂದು ಪ್ರಸಿದ್ಧರಾದವರು ಇದ್ದರಂತೆ. ಕಿಬ್ಬಚ್ಚಲ ಮಂಜಮ್ಮನ ಈ ಪುಸ್ತಕ ನೋಡಿದಾಗ ಅವರ ಮೇಲೂ ಮಂಜಮ್ಮ ಪ್ರಭಾವ ಬೀರಿರುವುದು ಸ್ಪಷ್ಟ. ಹಾಗಾಗಿ ಅವರ ಒತ್ತಾಸೆಯ ಮೇಲೆ ಮಂಜಮ್ಮನ ಕೃತಿಗಳನ್ನು ಪ್ರಕಟಿಸಿರಬಹುದಾಗಿದೆ.
ಮಂಜಮ್ಮ ವೇದಾಂತ ತತ್ವಸಾರ ಮಾತ್ರವಲ್ಲದೇ ಇನ್ನು ಅನೇಕ ಕೃತಿ ರಚಿಸಿದ್ದಳಂತೆ. ಅವಳ ವಂಶದ ಈಗಿನ ಕುಡಿ ದತ್ತ ಮೂರ್ತಿ ಹೇಳುವ ಪ್ರಕಾರ ಯಾರು ಯಾರೋ ಅವನ್ನೆಲ್ಲ ತೆಗೆದುಕೊಂಡು ಹೋಗಿದ್ದಾರೆ. ಮಂಜಮ್ಮನಿಂದ ಏಳನೆಯ ತಲೆಮಾರಿನವರಾದ ಇವರ ಮನೆಯಲ್ಲಿ ಮಂಜಮ್ಮ ರಚಿಸಿದ ಒಂದು ಕೃತಿಯೂ ಇಲ್ಲ. ಅವರಿಗೆ ಮಹಾತಪಸ್ವಿ, ಪರಿವ್ರಾಜಕಿ ಮಂಜಮ್ಮ ಎನ್ನುವ ತನ್ನ ಹಳೆಯ ತಲೆಮಾರಿನವಳು ಅನೇಕ ಪುಸ್ತಕ ಬರೆದಿದ್ದಾಳೆ ಎನ್ನುವದನ್ನು ತನ್ನ ಹಿರಿಯರಿಂದ ಕೇಳಿ ಗೊತ್ತು ಅಷ್ಟೇ! ಸದ್ಯ ನನಗೆ ಸಿಕ್ಕ ವೇದಾಂತ ತತ್ವಸಾರ ಕೃತಿಯಲ್ಲಿ ಮಂಜಮ್ಮನ ಜೀವನದ ಕುರಿತು ಯಾವ ವಿವರವೂ ಇಲ್ಲ.
ವೇದಾಂತ ತತ್ವಸಾರದಲ್ಲಿರುವ ‘ಜೀವ ಪರಮರ ಕಲ್ಯಾಣ’ ಮತ್ತು ‘ಮನೋಬುದ್ಧಿ ಸಂವಾದ’ ಎರಡರಲ್ಲೂ ಮಂಜಮ್ಮ ಆಯ್ದುಕೊಂಡಿದ್ದು ಶುದ್ಧ ಯಕ್ಷಗಾನದ ಛಂದಸ್ಸನ್ನು. ಅದಕ್ಕೆ ಕಾರಣ ಆ ಕಾಲಕ್ಕೆ ಅಲ್ಲೆಲ್ಲಾ ಇದ್ದ ಯಕ್ಷಗಾನದ ಪ್ರಭಾವ. ಯಕ್ಷಗಾನ ಛಂದಸ್ಸಿನ ಮಾತ್ರಾಬಂಧಗಳಾದ ಝಂಪೆ, ಏಕ, ಆದಿ, ಅಷ್ಟತಾಳಗಳು; ರಾಗಗಳಾದ ನವರೋಜು, ಢವಳಾರ, ಸೌರಾಷ್ಟ್ರ ಮುಂತಾದವುಗಳಲ್ಲಿ ಕೃತಿ ರಚನೆಗೊಂಡಿದೆ.
ಕವಿ ಬದುಕಿರುವದು ಆತನ ಕಾವ್ಯಗಳ ಮೂಲಕ. ಇದು ತನಕ ಬಂದ ಯಾವ ಕವಿ ಚರಿತ್ರೆಯಲ್ಲೂ ಸೇರದ ಇಂತಹ ಅನೇಕ ಪ್ರತಿಭೆಗಳು ಎಷ್ಟಿವೆಯೊ! ಅವನ್ನು ನೆನೆದು ಅವರಿಗೆ ನಮಿಸಿ ಕಿಬ್ಬಚ್ಚಲ ಮಂಜಮ್ಮನ ಯಕ್ಷಗಾನದ ಕೃತಿಗೆ ಪ್ರವೇಶ ಮಾಡುತ್ತಿದ್ದೇನೆ.
ಕೃತಿ ಪ್ರವೇಶ :
ಈಗ ನನಗೆ ಸಿಕ್ಕಿರುವ 1889ರರಲ್ಲಿ ದ್ವಿತೀಯ ಮುದ್ರಣಗೊಂಡ ವೇದಾಂತ ತತ್ವಸಾರ ಕೃತಿಯಲ್ಲಿರುವ ಎರಡು ಯಕ್ಷಗಾನ ಪ್ರಸಂಗಗಳು- ‘ಜೀವ ಪರಮರ ಕಲ್ಯಾಣ’ ಮತ್ತು ‘ಮನೋಬುದ್ಧಿ ಸಂವಾದ’ ಆಧರಿಸಿದ್ದು ವೇದಾಂತವನ್ನೇ. ಅದೂ ಅಲ್ಲದೇ ಇದೇ ಕೃತಿಯ ಕೊನೆಯಲ್ಲಿ ಸೂರಿ ಶಾಸ್ತ್ರಿಗಳು ತಮ್ಮಲ್ಲಿ ಸಿಗತಕ್ಕ ಕನ್ನಡ ಮತ್ತು ಬಾಳಬೋದಿಯ ಪುಸ್ತಕಗಳ ಪರಿಚಯಯಾದಿಯನ್ನು ಕೊಟ್ಟಿದ್ದಾರೆ. ಅದರಲ್ಲಿ ವೇದಾಂತ ತತ್ವಸಾರ (ಅನುಕ್ರಮ ಸಂ.-4) ಮತ್ತು ಜೀವಪರಮರ ಕಲ್ಯಾಣ (ಅ.ಸಂ.-11) ಎರಡೂ ಪುಸ್ತಕಗಳಿಗೆ ಬೆಲೆ 0-4-0 ಗೊಂದರಂತೆ ನಿಗದಿಪಡಿಸಲಾಗಿದೆ ಎನ್ನುವ ವಾಕ್ಯವಿದೆ. ಅಂದರೆ ವೇದಾಂತ ತತ್ವಸಾರ ಮತ್ತು ಜೀವ ಪರಮರ ಕಲ್ಯಾಣ ಎರಡೂ ಬೇರೆ ಬೇರೆಯಾಗಿ ಪ್ರಕಟಿಸಿದ್ದು ಎಂತಾಯಿತು. ಆದರೆ ‘ಮನೋಬುದ್ಧಿ ಸಂವಾದ’ ಹೆಸರು ಅವರ ಯಾದಿಯಲ್ಲಿ ಎಲ್ಲೂ ಇಲ್ಲ. ಈ “ಮನೋಬುದ್ಧಿ ಸಂವಾದ” ನಡೆದಿರುವದು ಮನಸ್ಸು ಮತ್ತು ಬುದ್ಧಿಯ ನಡುವೆ. ಈ ಕೃತಿ ಪ್ರಾರಂಭವಾಗುವದು ಮುಂದಿನ ಪದ್ಯದಿಂದ.
ರಾಗ- ಅಷ್ಟತಾಳ
|| ಶ್ರೀ ಗಜರಾಜ ಪ್ರಸನ್ನಾ || ಮನೋಬುದ್ಧಿ ಸಂವಾದಾ ||
ವಡೆಯ ಶ್ರೀಗುರು ಪರಮಾತ್ಮನೇ ಗತಿಯೆಂದು |
ಪೊಡವೊಡುತಿರು ಪಾಡುತಿರು ಮನವೇ |
ಯಡಬಿಡದೇ ನಂಬಿಕೊಂಡಿಹ ಜ್ಞಾನಕ್ಕೆ |
ಯಡರ ಮಾಡುವ ಬಲು ಮೂಢ ಜನರ ಸುದ್ಧಿ ||
ಇನ್ನಾದರು ಬಿಡುಯಲೆ ಮನವೆ ||1||
ಲೋಕದ ವ್ಯವಹಾರದಲ್ಲಿ ಮನುಷ್ಯನ ಇಂದ್ರಿಯಗಳು ಜ್ಞಾನದ ಹಾದಿಯಲ್ಲಿ ಸಾಗುವಾಗ ಮೂಢ ಜನರ ಸುದ್ದಿಯಿಂದಾಗಿ ವಿಷಯ ಸುಖಕ್ಕೆ ಎಳೆಯುತ್ತಿದೆ. ಅವನ್ನು ಇನ್ನಾದರೂ ಬಿಡು ಎಂದು ಪ್ರಾರ್ಥಿಸಿಕೊಳ್ಳುತ್ತಾಳೆ. ಮುಂದುವರಿಯುತ್ತಾ…
ಪಾವನಾತ್ಮಕರನು ಬಲುತರ ನಿಂದಿಸಿ ||
ಜೀವವ ಹೊರದು ಕೊಂಡೇನು ಫಲ ||
ದೇವ ಬ್ರಾಹ್ಮಣ ಗುರುಹಿರಿಯರೆಂದೆಂಬ ||
ಭಾವಭಕ್ತಿಗಳಿಲ್ಲದಂಥ ಜನರ ಸುದ್ಧಿ ||
ಎನ್ನುತ್ತಾ ಹಳವಳಿಸುತ್ತಾಳೆ. ಬಹುಶಃ ಆಧ್ಯಾತ್ಮದ ದಾರಿಯಲ್ಲಿ ಸಾಗುವಾಗ ಜನರ ಮಾತಿಗೆ ಪ್ರತಿಸ್ಪಂದನವಾಗಿ ಈ ಭಾಗವನ್ನು ಬರೆದಿರಬೇಕು ಎನಿಸುತ್ತದೆ. ಬುದ್ಧಿ ಮತ್ತು ಮನಸ್ಸು ಆಧ್ಯಾತ್ಮದ ಕಡೆಗೆ ಚಿಂತಿಸುತ್ತದೆ. ಅಕ್ಷರ ಗೊತ್ತಿಲ್ಲದ ಮಂಜಮ್ಮ ಇಲ್ಲಿ ವಿಷಯ ಸುಖದಿಂದ ಮೋಕ್ಷದ ಮೆಟ್ಟಿಲಾದ ಚಿತ್ತಶುದ್ಧಿಯ ಕಡೆ ಕೊಂಡೊಯ್ಯುವ ಭಾಗ ಯಕ್ಷಗಾನದ ಇತರ ಕವಿಗಳು ಬರೆದ ಪ್ರಸಂಗಗಳಿಗೆ ಹೋಲಿಸಿದರೆ ಕಬ್ಬಿಣದ ಕಡಲೆಯೇ. ಯಕ್ಷಗಾನದಂತೆ ಇಲ್ಲಿ ಪಾತ್ರಗಳ ಪ್ರವೇಶವಿಲ್ಲ. ಯುದ್ಧ, ಪ್ರಯಾಣ, ಹಾಸ್ಯ ಈ ಯಾವ ರಂಗಕ್ರಿಯೆಯೂ ಇಲ್ಲ. ಆದರೆ ಪದ್ಯಗಳ ರಚನೆ ಛಂದಸ್ಸು ಮಾತ್ರೆ ಯಕ್ಷಗಾನದ್ದೆ. ರಾಗ ದೇಶಿ- ಅಷ್ಟ ತಾಳ; ಝಂಪೆ, ಸಾಂಗತ್ಯ ಢವಳಾರ ರಾಗಗಳನ್ನು ಸೂಚಿಸಿದ್ದಾಳೆ.
ನೂರಾಐವತೈದು ಪದಗಳಲ್ಲಿ ಮುಗಿಯುವ ಈ ಪ್ರಸಂಗದಲ್ಲಿ ಕವಿಯಿತ್ರಿ ಮನುಷ್ಯರಿಗೆ ಪ್ರಪಂಚದ ಆದಿಯ ಗುಟ್ಟೇನು ಗೊತ್ತು ಎನ್ನುವಲ್ಲಿಂದ ಪ್ರಾರಂಭಿಸುತ್ತಾಳೆ. ಅದು ಮನಸ್ಸು ಬುದ್ಧಿಗೆ ವಿಷಯ ಸುಖದ ಕಡೆ ಹೋಗಬೇಡ, ಅಂತರ್ಮುಖಿಯಾಗು ಎನ್ನುವದನ್ನು ಸೂಚಿಸುವ ಮೂಲಕ.
|| ವಾದಿಸಿಯೇ ಕೇಳಿದರನಾದಿಲೊಂದು ಮಾತ್ರೆಪುಟ್ಟಿ |
ಬೀದಿವರಿದೆ ವ್ಯಕ್ತವಾಗುತಾದಿಯೆನಿಸಿತು ||
ಸೃಷ್ಟಿಯ ಹುಟ್ಟಿನ ರಹಸ್ಯವನ್ನು ವೇದಾಂತದ ಕಡೆ ಕೊಂಡೊಯ್ಯುತ್ತಾಳೆ. ಕಠೋಪನಿಷತ್ತಿನಲ್ಲಿ ಯಮ ನಚಿಕೇತನಿಗೆ ವಿಷಯ ಸುಖದಿಂದ ಮನಸ್ಸಿನೊಳಗಿರುವ ಅವ್ಯಕ್ತದೊಳಗಿನ ಪುರುಷನನ್ನು ವಿವರಿಸುವ ರೀತಿಯಲ್ಲಿ ಈ ಭಾಗ ಇದ್ದರೂ ಇದು ಕಠೋಪನಿಷತ್ತು ಒಂದನ್ನೇ ಆಧರಿಸಿಲ್ಲ. ಆದರೆ ಆತ ವಿದ್ಯೆಯನ್ನು ಸಾಕ್ಷಾತ್ಕರಿಸಿಕೊಳ್ಳಬೇಕು ಎನ್ನುವದನ್ನು ಪ್ರಾರಂಭದಲ್ಲಿಯೇ ಎಚ್ಚರಿಸುತ್ತಾಳೆ. ಈ ಬ್ರಹ್ಮಾಂಡವೇ ಮೂರು ಮಾತ್ರೆಗಳಾಗಿ ಸ್ವರ್ಗ, ಮರ್ತ್ಯ, ಪಾತಾಳಗಳಾದುದು. ಅಲ್ಲಿಂದ ಜೀವವೊಡೆದು ಕರ್ಮದ ವಾಸನೆಯಲ್ಲಿ ಪ್ರಪಂಚವಾದದ್ದನ್ನು ತುಂಬಾ ಮಾರ್ಮಿಕವಾಗಿ ವರ್ಣಿಸಿದ್ದಾಳೆ.
“ಪಂಚಭೂತ, ಪಂಚಕರಣ, ಪಂಚಮರುತ, ಪಂಚಕೋಶ, ಪಂಚವಿಷಯ ದಿಂದಲೇ ಪ್ರಪಂಚವಾಯಿತು ಎನ್ನುವ ಮೂಲಕ ಪಂಚೀಕರಣವನ್ನು ತಿಳಿಸಿ ಮುಂದೆ ಸತ್ವ, ರಜ, ತಮಗಳ ತತ್ವವಾದವನ್ನು ತಿಳಿಸಿ ಇವೆಲ್ಲ ವಿಷ್ಣುಮಾಯೆ, ಅದನ್ನ ತಿಳಿದವರು ಪರಮನಿಷ್ಠರು ಎನ್ನುತ್ತಾಳೆ. ಹಾಗಾಗಿಯೇ ನಾನು ನೀನುಯೆಂಬ ಮಾತು ಏನೂ ಇಲ್ಲ. ಜ್ಞಾನ ಮಾರ್ಗವೊಂದೇ ಅಂತಿಮ ಸಾಧನ. ಈ ಪಥಕ್ಕೆ ಏರಬೇಕಾದರೆ ಲೋಕದ ಜನ ಏನನ್ನು ಆಡಿಕೊಂಡರೂ ಲೆಕ್ಕಿಸಬೇಡ ಎನ್ನುವದನ್ನ ಹೀಗೆ ಹೇಳಿದ್ದಾಳೆ.
|| ಕರಿಯ ರಾಜ ನರಿಯ ಕಂಡು ಭರದಿ ಒದರುವನೆ ಬುದ್ಧಿ |
|| ಕುರಿಯ ಜನರಿಗಂಜುವರೆ ಹರಿಯ ಶರಣರು ||
ಪಕ್ಕಾ ಹವ್ಯಕರ ಆತ್ಮೀಯ ಆತಿಥ್ಯದ ನಂತರ ಕಿಬ್ಬಚ್ಚಲ ಮಂಜಮ್ಮನ ಕುರಿತು ಕೇಳಿದಾಗ ಆಕೆ ಅದೇ ಮನೆತನದವಳು ಎನ್ನುವದನ್ನು ಕೇಳಿ ಮೈ ರೋಮಾಂಚನಗೊಂಡಿತು. ಆದರೆ ದತ್ತಣ್ಣನಿಗೊ ಹೆಚ್ಚಿನ ವಿವರ ಗೊತ್ತಿಲ್ಲ.
ಇಲ್ಲಿ ಬುದ್ಧಿ ತಿರುಗಿ ಮನಸ್ಸನ್ನು ಪ್ರಶ್ನಿಸುವದು ಬಂಡಾಯದಿಂದಲ್ಲ. ಅದೂ ಕೂಡಾ ಪಕ್ವವಾಗಿದೆ. ಜ್ಞಾನ ಮಾರ್ಗದ ತುಡಿತದಲ್ಲಿದೆ. ಆದರೆ ಲೋಕದ ಡೊಂಕನ್ನೆ ನೋಡಿ ಕವಿ ಮರುಗುವದು ಬುದ್ಧಿ ಮನಸ್ಸಿಗೆ ಕೇಳುವ ಈ ಪದ್ಯದಿಂದ…
|| ಯೇಸು ಘನವೋ ಶಿವನೆ | ಹೇಸಿಕೆಯ
ಮಲಮೂತ್ರ | ಸೂಸಿ ತುಂಬಿರುವ ರುಧಿರಗಳು ||
ಕವಿ ಇಲ್ಲಿ ಸಂಸಾರದಿಂದ ಸಂಪೂರ್ಣ ವಿರಕ್ತಿ ಹೊಂದಿರುವದನ್ನು ಕಾಣುತ್ತೇವೆ. ಆದರೂ ಈ ಸಂಸಾರದ ತಾಪವನ್ನು ಕಳೆಯಲು ಶ್ರೀಪತಿಯ ಕರುಣೆಯಾಗಬೇಕು. ಅದಕ್ಕೆ
ತಾಪರಹಿತಾನಂದ ಗುರುಗಣಾಧೀಶ್ವರನೆ | ಪೋಪವಿರಬೇಕು ಕೇಳ್ಮನವೆ ||
ಎಂದು ಬುದ್ಧಿ ಬೇಡಿಕೊಳ್ಳುತ್ತಾಳೆ. ಹಾಗಂತ ಮಂಜಮ್ಮ ಜೀವವಿರೋಧಿಯಲ್ಲ. ಮಾನವ ಜನ್ಮ ದೊಡ್ಡದು ಎನ್ನುವದು ಚೆನ್ನಾಗಿ ತಿಳಿದಿವೆ. ಹಾಗಾಗಿಯೇ ಮನಸ್ಸು ಮುಂದಿನ ಪದ್ಯಗಳಲ್ಲಿ
ಸರ್ವ ದೇವತೆಗಳೂ ಋಷಿಗಳಿರುವ ಪುರವಿದು ||
ಎಂದು ದೇಹವನ್ನು ಕೊಂಡಾಡುತ್ತಾಳೆ. ಮೋಕ್ಷಸಾಧನೆ ಈ ದೇಹದಿಂದ ಮಾತ್ರ ಸಾಧ್ಯ ಎನ್ನುವದನ್ನ ಬುದ್ಧಿಗೆ ತಿಳಿಹೇಳುತ್ತಾಳೆ.
ಬುದ್ಧಿಗೆ ಸಂದೇಹ ಹೋಗಿಲ್ಲ. ಆವರಿಸಿದ ಮಾಯೆಯೆಂಬ ಮಾನಿನಿ ತನ್ನನ್ನು ಆವರಿಸಿದಾಗ ತಾನು ಅದರ ಕೈಗೊಂಬೆ ಎಂದು ಹಲಬುತ್ತದೆ. ಅದಕ್ಕೆ ಮನಸ್ಸು ಕೊಡುವ ಉತ್ತರ ಅರಿಯದವರಿಗೆ ದೊಡ್ಡ ಮಾರಿಯೆ ಹೊರತಾಗಿ ಅರಿತವರಿಗೆ ಲೋಕಮಾತೆ || ಎನ್ನುವ ಸಾಂಗತ್ಯದ ಪದ್ಯದ ಮೂಲಕ.
ಇಲ್ಲಿ ಭಕ್ತಿ ಮಾರ್ಗವೇ ಶ್ರೇಷ್ಠ ಎನ್ನುವಾಗ ಮತ್ತೆ ಬುದ್ಧಿಗೆ ಅರಿಷಡ್ವೈರಿಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಿಂದ ಅವನ್ನು ಅರಿಯಲು ಸಾಧ್ಯವಾಗಲಾರದು ಎಂಬ ಚಿಂತೆ. ಮತ್ತೆ ಅದಕ್ಕೆ ಉತ್ತರಿಸುವ ಆದಿತಾಳದ ಪದ್ಯ ಆ ಷಡ್ವೈರಿಗಳನ್ನೇ ಮಿತ್ರಭಾವಕ್ಕೆ ತರುವ ಬಗೆ ವಿವರಿಸುತ್ತ ವೇದಾಂತದ ರಹಸ್ಯಗಳನ್ನೆಲ್ಲ ಸರಳವಾಗಿ ವಿವರಿಸಿದೆ.
ಕಮಲದ ಬುಡದಲ್ಲಿ ಕುಳಿತ ಕಪ್ಪೆಗೆ ಕಮಲದ ಹೂವಿನ ಪರಿಮಳ ಏನು ಗೊತ್ತು? ಎನ್ನುವ ಪ್ರಶ್ನೆ ಕೇಳಿ ಭಕ್ತಿ ಮಾರ್ಗಕ್ಕೆಳೆಯುತ್ತಾಳೆ. ಹೀಗೆ ಮನಸ್ಸು ಮತ್ತು ಬುದ್ಧಿಯದು ಸಂವಾದವೇ (ಸಮ್ಯಕ್ ವಾದ) ಹೊರತು ಚರ್ಚೆಯಲ್ಲ. ಆದರೆ ಮನಸ್ಸು ಮತ್ತು ಬುದ್ಧಿಗಳು ಸ್ವಭಾವತಃ ಚಂಚಲ. ಅವು ಮೋಕ್ಷದ ದಾರಿ ತೋರಿಸಲಾರವು. ಏಕೆಂದರೆ ಮೋಕ್ಷ ಸಿಗಬೇಕಾದರೆ ಚಿತ್ತ ಶುದ್ಧಿಯಾಗಬೇಕು ಎನ್ನುತ್ತದೆ ವೇದಾಂತ. ಇಲ್ಲಿ ಈಗ ಭಕ್ತಿಮತಿ ಬಂದು ಮನಸ್ಸು ಮತ್ತು ಬುದ್ಧಿಯನ್ನು ಈ ಸಂವಾದಗಳೆಲ್ಲಾ ಸಂಸ್ಥಿರವಾದ ಕೈವಲ್ಯ ಕೊಡಲಾರವು, ಮೋಕ್ಷಸಾಧನೆ ಸುಲಿದ ಬಾಳೆಹಣ್ಣಲ್ಲ ಎನ್ನುತ್ತಾ ಆ ಹಾದಿಯ ರಹಸ್ಯ ಹೇಳುವ ಭಾಗ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಎನ್ನಬಹುದು.
ಆದಿಮೂಲವ ನೋಡಬೇಕು ಎನ್ನುತ್ತಾ ಯೋಗದ ರಹಸ್ಯವನ್ನು ವಿವರಿಸುತ್ತದೆ. ಹಾಗೇ ತೂರಿ ತುರ್ಯಾನದಂದದಲಿ ನಿಲ್ಲಬೇಕು ಎನ್ನುತ್ತಾ ಬ್ರಹ್ಮ ವಿದ್ಯೆಯನ್ನ ಬೋಧಿಸುತ್ತದೆ.ಅದನ್ನು ಅರಿತು ಬುದ್ಧಿ ಮನಸ್ಸು ಎನ್ನುವದು ನಿರ್ವಿಕಲ್ಪ ಸಮಾಧಿಯ ಸ್ಥಿತಿಯನ್ನು ಹೊಂದುತ್ತದೆ ಎನ್ನುವದರೊಂದಿಗೆ ಈ ಕಥಾಭಾಗಕ್ಕೆ ಮಂಗಳ ಹಾಡುತ್ತಾಳೆ.
ಈ ಇಡೀ ಪ್ರಸಂಗ ವೇದಾಂತವನ್ನು ಆಧರಿಸಿದ ನಿರೂಪಣೆ. ಇದನ್ನು ರೂಪಕದ ಪ್ರಕಾರಗಳಿಗೆ ಸೇರಿಸುವದು ಕಷ್ಟವೇ. ಆದರೆ ಪ್ರಚಲಿತ ತಾಳಮದ್ದಳೆಗೆ ಹೇಳಿ ಮಾಡಿಸಿದಂತಿದೆ. ನಚಿಕೇತೋಪಾಖ್ಯಾನ, ಶಂಕರ ವಿಜಯಗಳಂತೆ ವೇದಾಂತವನ್ನು ಬೋಧಿಸುವ ಈ ಕೃತಿಯನ್ನು ತಾಳಮದ್ದಳೆಗೆ ಅಳವಡಿಸುವ ಪ್ರಯತ್ನ ಮಾಡಬಹುದು.
ಯಕ್ಷಗಾನವೆಂಬುದು ಗಾನದೇಹಿ. ಇದಕ್ಕೆ ನೃತ್ಯ, ಆಹಾರ್ಯಗಳೆಲ್ಲ ಮತ್ತೆ ಸೇರಿಕೊಂಡಿದುದು ಎನ್ನುವ ವಾದವಿದೆ. ‘ಯಕ್ಷಗಾನದೊಳೊರೆವೆಂ… ಈ ಕೃತಿಯನು’ ಎನ್ನುವ ಪದ್ಯವನ್ನು ನಾವು ಆಗಿಂದಾಗ್ಗೆ ನೋಡುತ್ತೇವೆ. ಆದರೆ ಅದಕ್ಕೆ ಉದಾಹರಣೆ ಸಿಕ್ಕಿರಲಿಲ್ಲ. ಗಮಕದ ಸಾಲಿಗೆ ಸೇರದ ದೇಸಿ ಮಟ್ಟಿನಲ್ಲಿ ರಚಿತವಾದ ಈ ಕೃತಿ ಯಕ್ಷಗಾನ ಹಾಡುಗಬ್ಬ ಎನ್ನುವದಕ್ಕೆ ಉದಾಹರಣೆಯಾಗಿ ಸಿಗುವಂತೆ ತೋರುತ್ತದೆ. ಈ ಕುರಿತು ಚರ್ಚೆ ಆದರೆ ಒಳ್ಳೆಯದು. ಕನ್ನಡ ಸಾಹಿತ್ಯದಲ್ಲಿ ವೇದಾಂತದ ಕುರಿತು ವಿಪುಲವಾದ ಕೃತಿಗಳು ಬಂದಿವೆ. ವಚನದಿಂದ ಹಿಡಿದು ದಾಸಸಾಹಿತ್ಯದಲ್ಲಿನವರೆಗೆ ಎಲ್ಲವೂ ಭಕ್ತಿ ಮಾರ್ಗವನ್ನು ಬೋಧಿಸಿದವುಗಳೇ. ಆದರೆ ಶುದ್ಧ ವೇದಾಂತವನ್ನೇ ಆಧರಿಸಿದ ಭಕ್ತಿಯಿಂದ ಚಿತ್ತಶುದ್ಧಿಯ ಪರಮಯೋಗದ ರಹಸ್ಯವನ್ನು ಕಿಬ್ಬಚ್ಚಲು ಮಂಜಮ್ಮರಂತೆ ಬರೆದವರು ಸಿಗುತ್ತಿಲ್ಲ. ಹಾಗಾಗಿ ಯಕ್ಷಗಾನಕ್ಕೆ ನೂತನವಾದ ಯಕ್ಷಗಾನದ ಮಟ್ಟಿನಲ್ಲಿರುವ ಕೃತಿಯ ಅಧ್ಯಯನಕ್ಕೆ ಮಂಜಮ್ಮನ ಕೃತಿ ಒಳ್ಳೆಯ ವಸ್ತು.
ಜೀವ ಪರಮರ ಕಲ್ಯಾಣ
ಈ ಯಕ್ಷಗಾನ ರಂಗಕ್ರಿಯೆಯಲ್ಲಿ ಪ್ರಮುಖವಾಗಿರುವ ಯುದ್ಧದ ದೃಶ್ಯವನ್ನು ಒಳಗೊಂಡಿದೆ. ಇಲ್ಲಿ ಹಲವು ಪಾತ್ರಗಳ ಪ್ರವೇಶವಾಗುತ್ತದೆ. ಹೆಚ್ಚಿನ ಯಕ್ಷಗಾನ ಪ್ರಸಂಗಗಳಲ್ಲಿರುವಂತೆ ಇಲ್ಲಿಯೂ ನಾರದನ ಪ್ರವೇಶವಿದೆ. ಮಾತುಗಾರರಿಗೆ ವಿಪುಲ ಅವಕಾಶವನ್ನು ಕೊಡುವ ಪ್ರಸಂಗವಿದೆ. ನಾಂದಿ ಪದ್ಯದಲ್ಲಿ ಗಣಪತಿ, ಶಿವ, ಪಾರ್ವತಿ, ನಾರಾಯಣ ಹೀಗೆ ದೇವರನ್ನು ಸ್ಮರಿಸುತ್ತ, ಕಥಾಪ್ರಾರಂಭದ ಭಾಮಿನಿಯಲ್ಲಿ ಮಾಯೆ ಮುಸುಕಿದ ಜೀವಕ್ಕೆ ಅರಿವಿನ ಗುರುವಾಗಿ ಗಣಪತಿಯನ್ನ ಸ್ತುತಿಸುತ್ತಾಳೆ. ಹಾಗೂ ಕಥಾಪ್ರಾರಂಭಕ್ಕೆ ಅನುಮತಿ ಕೇಳುತ್ತಾಳೆ.
ಕಥಾ ಪ್ರವೇಶವಾಗುವುದೇ ಗುರುಶಿಷ್ಯರ ಸಂಭಾಷಣೆಯಲ್ಲಿ. ಇಲ್ಲಿ ಬರುವ ಗುರು ದೋಷರಹಿತ ಮತ್ತು ಜ್ಞಾನಿ. ಸಂದೇಹಗಳನ್ನೆಲ್ಲ ಪರಿಹರಿಸುವಾತ. ಶಿಷ್ಯನೂ ಅಷ್ಟೇ. ಆತ ಅಂತೇವಾಸಿ. ಆತನಿಗೆ ವೈರಾಗ್ಯ ಬಂದಿದೆ. ಆತ ಒಂದು ದಿನ ಅದೇ ವೈರಾಗ್ಯಭಾವದಲ್ಲಿ ಗುರುವಿನ ಬಳಿಗೆ ಬಂದು…
|| ನಿಂದು ಕರಗಳ ಮುಗಿದು | ಯೀ ಭವ |
ಸಿಂಧುವನು ನೆರೆ ಕಳಿವುಪಾಯವ |
ನಂದದಲಿ ದಯ ಮಾಡಿ ರಕ್ಷಿಪುದೆಂದನಾಗ ||
ಎಂದು ಕೇಳಿಕೊಳ್ಳುತ್ತಾನೆ. ಪರಂಪರೆಯ ಯಕ್ಷಗಾನದ ಪ್ರಾರಂಭದ ಪದ್ಯಗಳಂತೆ ಇದು ರಾಗ ಸೌರಾಷ್ಟ್ರ – ತ್ರಿವುಡೆ ತಾಳದಲ್ಲಿದೆ. ಶಿಷ್ಯನ ಸಂದೇಹ ಸರಳವಾಗಿ ಆದರೆ ಬಿಗುವಾಗಿಯೂ ಇರುವದನ್ನು ಈ ಕೆಳಗಿನ ಪದ್ಯಗಳಲ್ಲಿ ಕಾಣಬಹುದು.
|| ಆದಿಯಲಿ ತೋರುವ ಪ್ರಪಂಚಗ |
ಳಾದ ವೃತ್ತಾಂತಗಳನೆಲ್ಲವ |
ಹೇ ದಯಾಂಬುಧಿ ಗುರುವೆ ನನಗದ ಬೋಧಿಸುವದು ||
ಎನ್ನುತ್ತಾ ಅದರಿಂದ ಮುಂದುವರಿದು:-
ಬಂದ ಭವಕೋಟಲೆಯನೆಲ್ಲವ ಹಿಂದುಗಳೆದು |
ಚಂದದಿಂದಲೆ ಜೀವ ಪರಮರೊಳೊಂದೆಯಾಗುವ ಪರಿಯದೆಂತದ |
ರಂದವನು ಯರುಹೆನುತ ಗುರುಪದಕೊಂದಿಸಿದನು ||
ಇದು ಲೋಕದ ಸಂಶಯಕ್ಕೆ ಮಂಜಮ್ಮ ಕೇಳಿದ ಪ್ರಶ್ನೆಯೂ ಹೌದು. ಏಕೆಂದರೆ ಆಕೆಗೆ ಈ ಜೀವ ಜನ್ಮಗಳ ಮೇಲೆ ಜನ್ಮವನ್ನು ತಳೆಯುವದೇ
ಯೌವ್ವನ ಬರಲು ಸತಿಯರು |
ನೆರದು ತಮ್ಮಯ ಪುರುಷನೊಳಗೆರಕವನು ಪಡವಂತೆ ||
ಎನ್ನುವ ಗುಟ್ಟನ್ನು ಲೋಕಕ್ಕೆ ತಿಳಿಸಬೇಕಾಗಿದೆ. ಈ ರೀತಿಯ ತಂತ್ರಗಳ ಮೂಲಕ ಕಥಾ ಪ್ರವೇಶದ ವರಸೆ ಅದುವರೆಗೆ (ಅಂದರೆ 1886ರ ವರೆಗೆ) ಇನ್ನುಳಿದ ಕವಿಗಳ ಪ್ರಸಂಗದಲ್ಲಿಲ್ಲ. ಅದರ ನಂತರ ಬಂದ ಪ್ರಸಂಗಗಳಲ್ಲೂ ಬಂದ ಉದಾಹರಣೆಯೂ ಸಿಗುವದಿಲ್ಲ.
ಇಲ್ಲಿ ಗುರು ಸೃಷ್ಟಿಯ ಜೀವ ಉದಯಿಸಿದ ಕಥೆಯನ್ನು ಓರ್ವ ದೊರೆ ಮಗನಾದ ‘ಹಂಕರ’ ಎನ್ನುವವನಿಗೆ ವಿವರಿಸುತ್ತಾನೆ. ಹಂಕರ ಎನ್ನುವ ವೇದಾಂತದ ಪಾರಿಭಾಷಿಕ ಶಬ್ದ ಪರಿಚಯ ಆಕೆಗಿದ್ದದ್ದನ್ನು ನೋಡಿದರೆ ವೇದದ ರಹಸ್ಯಗಳೆಲ್ಲ ಈ ನಿರಕ್ಷರ ಮತಿಗೆ ಸಿದ್ದಿಸಿದ್ದು ಹೇಗೆ ಎನ್ನುವ ಸಂಶಯ ಬರದಿರದು. (ಹಂಕರಗಳು – 3 : ವೈಕಾರಿಕ, ಅಹಂಕಾರಿಕ ಮತ್ತು ತಾಮಸ) ಆತನಿಗೆ ಪತ್ನಿಯಾಗಿ ಬರುವವಳು ಶೂನ್ಯ ಭೂಪತಿಯ ಮಗಳು ಮಾನ್ಯೆ ಸುಖೇಚ್ಛೆ ಎಂಬವಳು. ಹಂಕರಕ್ಕೆ ಸುಖ ದೊರಕಿದಾಗ ನಾರಿಧರಿಸಿದ ಗರ್ಭದ ಕುರಿತು ವರ್ಣನೆ.
|| ಭಾಮಿನಿ ||
ಅಬ್ಬರಿಸಿತೇನೆಂಬೆ ನಾರಿಯು | ಗರ್ಭವನು ಧರಿಸಿದಳು |
ಈ ಜಗತ್ತಿನ ಸರ್ವಲೋಕಗಳೆಲ್ಲ ಬಳಿಕವರಿಂದಲಾಯ್ತು ಎನ್ನುವ ಮೂಲಕ ಶಿಷ್ಯನಿಗೆ ಸೃಷ್ಟಿಯ ಆದಿಯನ್ನು ಹೇಳುತ್ತಾಳೆ. ಇದು ಸಾಂಖ್ಯ ತತ್ವ. ಯೋಗದ ನಡೆಯೂ ಹೌದು. ತ್ರಿಗುಣ, ತನ್ಮಾತ್ರೆ, ಪಂಚಭೂತ, ಬ್ರಹ್ಮ, ದೇವತೆಗಳ ಸೃಷ್ಟಿಯನ್ನೆಲ್ಲ ಸುಂದರವಾಗಿ ವರ್ಣಿಸುತ್ತಾಳೆ. ಆದರೆ ಹಂಕೃತಿ (ವಿಕಾರ, ಅಹಂಕಾರ ಮತ್ತು ತಾಮಸ) ಗಳು ಸೇರಿದಾಗ ಮತಿದುಷ್ಟವಾಗುವದು ಸಹಜ ತಾನೇ! ದುಷ್ಟಮತಿ ಎನ್ನುವ ಹೆಸರಿಂದ ಅಷ್ಟಪುರದ (ದೇಹದ) ಅಧಿಕಾರಿ ತಾನೆಂದು ಮೆರೆಯುತ್ತಾನಂತೆ. ಆತನ ರಾಜ್ಯಭಾರದ ದರ್ಪವನ್ನು ಭೈರವಿರಾಗದಲ್ಲಿ (ಅಷ್ಟ ತಾಳ) ಚೆನ್ನಾಗಿ ವರ್ಣಿಸಿದೆ. ಮುಂದೆ, ದುಷ್ಟಮತಿತ್ವ ತಲೆಗೇರಿದರೆ ಏನೇನೆಲ್ಲ ಅನಾಹುತ ಸೃಷ್ಟಿಸಬಹುದು ಎನ್ನುವದನ್ನು ಮುಂದಿನ ಪದ್ಯಗಳಲ್ಲಿ ಚೆನ್ನಾಗಿ ವರ್ಣಿಸಿದೆ. ಓರ್ವ ನುರಿತ ಯಕ್ಷಗಾನ ಕಲಾವಿದ ಈ ಭಾಗವನ್ನು ಚೆನ್ನಾಗಿ ಬಳಸಿಕೊಳ್ಳಬಲ್ಲ. (ಕೆರೆಮನೆ ಮಹಾಬಲ ಹೆಗಡೆ ಅವರ ದುಷ್ಟಬುದ್ಧಿಯ ಪೀಠಿಕೆ ಇಲ್ಲಿ ನೆನಪಿಗೆ ಬರುತ್ತದೆ) ದುಷ್ಟಮತಿಯ ದರ್ಪಕ್ಕೆ ವಿವೇಕವನ್ನು ಹೇಳುವವ ಶಾಂತಮತಿ. ಅದು ಅರ್ಥವಾಗಬೇಕಾದರೆ ಚಿತ್ತಶುದ್ಧಿಯಿಂದ ಕೇಳಬೇಕು. ಆದರೆ ಇಲ್ಲಿ ಶಾಂತನ ವಿವೇಕ ದುಷ್ಟಮತಿಗೆ ಅರ್ಥವಾಗುವದಿಲ್ಲ. ಮನಸ್ಸಿನಲ್ಲಿ ಉದ್ಭವವಾಗುವ ಈ ಎರಡೂ ಗುಣಗಳಿಗೆ ಎರಡು ಪಾತ್ರದ ರೂಪಕೊಟ್ಟು ರೂಪಕಕ್ಕೆ ಒಂದು ಹೊಸ ಆಯಾಮವನ್ನು ಮಂಜಮ್ಮ ಹತ್ತೊಂಭತ್ತನೇ ಶತಮಾನದ ಉತ್ತರಾರ್ಧದಲ್ಲಿ ನೀಡಿರುವದನ್ನು ವಿಮರ್ಶಕರು ಗಮನಿಸಬೇಕಾಗಿದೆ.
ಇಲ್ಲಿ ಮಟ್ಟೆತಾಳವನ್ನು ಉಪಯೋಗಿಸಿ ದುಷ್ಟಮತಿ ಶಾಂತನ ಹತ್ತಿರ ಯುದ್ಧ ಮಾಡುವ ದೃಶ್ಯ ಅದ್ಭುತವಾಗಿ ಮೂಡಿಬಂದಿದೆ. ಶಾಂತನ ವಿವೇಕವನ್ನು ದುಷ್ಟಮತಿ ತಿರಸ್ಕರಿಸಿ ಅವನ ಮೇಲೆ ಯುದ್ಧ ಸಾರುತ್ತಾನೆ. ಪಾರಂಪರಿಕ ಯಕ್ಷಗಾನದಲ್ಲಿ ಬರುವ ಚೂನಿ ಕಾಳಗದ ನಂತರ ಅಸ್ತ್ರ ಪ್ರತ್ಯಸ್ತ್ರದ ಘೋರ ಯುದ್ಧದ ತಂತ್ರವನ್ನು ಕವಯಿತ್ರಿ ಇಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾಳೆ. ಹನ್ನೆರಡು ಪದ್ಯಗಳಲ್ಲಿ ಬರೆದ ದುಷ್ಟಮತಿ ಮತ್ತು ಶಾಂತನ ಯುದ್ಧದಲ್ಲಿ ಬಳಕೆಯಾದ ಅಸ್ತ್ರಪ್ರತ್ಯಸ್ತ್ರಗಳು ರೋಚಕವಾಗಿವೆ.
ಮೊದಲು ದುಷ್ಟಮತಿ ಶಾಂತನ ಮೇಲೆ ಕಾಮದಸ್ತ್ರ ಪ್ರಯೋಗಿಸುತ್ತಾನೆ. ಶಾಂತ ಎನ್ನುವದು ವಿಕಾರರಹಿತ ಹಂಕರಗಳಿಲ್ಲದ ಸ್ಥಿತಿ ಎನ್ನುವ ಮೂಲತತ್ವ ಬಲ್ಲ ಮಂಜಮ್ಮ ಆತನಿಂದ ಪ್ರತ್ಯಸ್ತ್ರ ಬಿಡಿಸುವದು ವಿರತಿಯಾಸ್ತ್ರದ ಮೂಲಕ. ಮುಂದಿನದು ಮೋಹದಸ್ತ್ರ ಪ್ರಯೋಗ. ಅದಕ್ಕೆ ದಮಾಸ್ತ್ರದಿಂದ ಸೋಲು.
ದುಷ್ಟಮತಿ ಇದಕ್ಕೆಲ್ಲ ಬೆದರುವನಲ್ಲ. ಆತ ಈ ಬಾರಿ ಪ್ರಯೋಗಿಸಿದ್ದು ಮದಾಸ್ತ್ರವನ್ನು. ಇಲ್ಲಿ ಉಲ್ಲಸಿತಾಸ್ತ್ರದೆದುರು ಮದಾಸ್ತ್ರ ವಿಫಲ. ಮುಂದಿನದೇ ಮತ್ಸರಾಸ್ತ್ರದ ಪ್ರಯೋಗ. ವಿವೇಕಾಸ್ತ್ರದೆದುರು ಆ ಮತ್ಸರದ ಆಟ ಅಡಗಿತು. ಈ ಬಾರಿ ಲೋಭದಸ್ತ್ರ ಶಾಂತನ ಮೇಲೆ ದುರುವಿಕಾರದಿಂದ ಎರಗಿತಂತೆ. ಶಾಂತನ ಸುಧರ್ಮಶರದ ಎದುರು ಲೋಭ ಮಾಯ! ಅಂತಿಮವಾಗಿ ಧೃತಿಗೆಟ್ಟ ದುಷ್ಟಮತಿಯ ಕೈಗೆ ಸಿಕ್ಕಿದ್ದು ಮಹಾಕ್ರೋಧಾಸ್ತ್ರ. ಅದೂ ಹೇಗೆ? ಸಿಂಧು ಮೇರೆದಪ್ಪುವಂತೆ ಬಂದದ್ದನ್ನು ಶಾಂತ ಅದನ್ನೂ ಹಾರಿಸುತ ನಿಧಾನದಿಂದ ಮೌನವೆಸೆದನು. ಈ ಅರಿಷಡ್ವ್ಯೆರಿಗಳನ್ನೆಲ್ಲ ಪ್ರತ್ಯಸ್ತ್ರದಿಂದ ಗೆದ್ದ ಮೇಲಿನ ಸ್ಥಿತಿಯನ್ನು ಹದಿಮೂರನೇಯ ಪದ್ಯ ಮಾರ್ಮಿಕವಾಗಿ ವರ್ಣಿಸಿದೆ.
ಮೌನವದುವೆ ಹೃದಯದೊಳಗೆ |
ವೈನದಿಂದ ಪೊಗಲು ನಿದ್ರೆ |
ಯಾನುವಂತೆ ಮರೆದನೆಲ್ಲವೇನನೆಂಬೆನು ||13||
ದುಷ್ಟಮತಿಯ ಪ್ರವೃತ್ತಿಗಳು ಮುಗಿದ ಮೇಲೆ ಉಳಿದುದೇನು? ನಿವೃತ್ತಿ ಮಾರ್ಗತಾನೇ! ಅರಿವು ಒಳಗೆ ಮೂಡಿದಾಗ ಅದೇ ಬೆಳಗು. ಹಂಕರ (ವಿಕಾರ, ಅಹಂಕಾರ ಮತ್ತು ತಾಮಸ) ಇಳಿದ ಮೇಲೆ ಮತಿಗೆ ವಿವೇಕದುದಯ. ಆಗ ಪಶ್ಚಾತ್ತಾಪ ಪಡುವಾಗ ಕವಿ ವರ್ಣಿಸಿದ ಉಪಮೆ ಹೀಗಿದೆ.
ನಾನು ನಾನೆಂದೆಂಬ ಹಂಕರ |
ಭಾನುವರಿಯದ ಗೂಗೆಯಂದದಿ ಮಾಡಿತಕಟೆಂದ ||
ಇಲ್ಲಿನ ಉಪಮೆ ಬಾನುವರಿಯದ ಗೂಗೆಯಂದದಿ ಕನ್ನಡ ಸಾಹಿತ್ಯದಲ್ಲಿನ ಅಪರೂಪದ ಹೋಲಿಕೆ. ಇಂತಹ ಅನೇಕ ಹೋಲಿಕೆಗಳ ಮೂಲಕ ಬರೆದೈಲ್ಲಿನ ಕಾವ್ಯ ಸೌಂದರ್ಯ ಇಂದಿಗೂ ಕನ್ನಡ ಸಾಹಿತ್ಯದಲ್ಲಿ ಅನುಪಮವೇ.
ಮನಸ್ಸಿನ ವಿಕಾರ ಕಳೆದ ಮೇಲೆ ಜ್ಞಾನ ಉದಯಿಸುವದು ಎನ್ನುವದನ್ನು ದುಷ್ಟಮತಿಗೆ ಜ್ಞಾನಮತಿಯೆಂಬ ಮಗಳು ಜನಿಸಿದಳು ಎಂದು ವರ್ಣಿಸಿದ್ದಾಳೆ. ಮುಂದೆ ಅವಳು ಬೆಳೆದು ಯುಕ್ತ ವಯಸ್ಸಿಗೆ ಬಂದಾಗ ಅವಳಿಗೆ ತಕ್ಕ ವರನಾರು ಎಂದು ಚಿಂತಿಸುವಾಗ ಅಲ್ಲಿಗೆ ನಾರದ ಬಂದು ಪರಮ ಪುರುಷ ಆಕೆಯ ವರ ಎಂದು ತಿಳಿಸುತ್ತಾನೆ.
ಇಲ್ಲಿಂದ ಮುಂದಿನದು ಸಂಪೂರ್ಣ ಗಾನದೇಹಿ. ಒಂದೊಂದು ಪದ್ಯವೂ ಸಹ ಅಷ್ಟೇ ಸತ್ವದಿಂದ ಕೂಡಿದ ಜೀವ ಪರಮರ ಕಲ್ಯಾಣದ ವರ್ಣನೆಯೇ ಮುಂದಿನ ವಸ್ತು. ಅದರಲ್ಲಿಯೂ ಅಷ್ಟಪುರವನ್ನು ಶೃಂಗರಿಸುವದು ಹೀಗೆ.
ಅರುವಿನಸಿಯಿಂದ ನೆಲಗಟ್ಟ ನೆರೆಸಿದರೂ |
ದುರುವಿಕಾರದ ಕಲ್ಲ ದೂರ ಹೊರೆಸಿದರೂ ||
ಹೀಗೆ ಸಾಗುವ ದ್ವಿಪದಿಯಲ್ಲಿರುವ ಹನ್ನೊಂದು ಪದ್ಯಗಳು ಯಕ್ಷಗಾನದಲ್ಲಿ ಒಂದೇ ಅಲ್ಲ ಕನ್ನಡ ಸಾಹಿತ್ಯದಲ್ಲೂ ವಿಶೇಷ ಸ್ಥಾನ ಗಳಿಸುವಂತಹವು. ಒಂದು ಮದುವೆಯಲ್ಲಿನ ಮಂಟಪ ಕಟ್ಟುವದರಿಂದ ಹಿಡಿದು ಪರಮ ಪುರುಷನಿಗೆ ಎಣ್ಣೆ ಮಜ್ಜನ ಮಾಡಿಸುವದು, ಆತ ಕಾಶೀಯಾತ್ರೆಗೆ ಹೋಗುವಾಗ ಸನ್ಮತಿ ಆತನನ್ನು ತಡೆಯುವದೆಲ್ಲವನ್ನು ಅಪ್ಪಟ ವೇದಾಂತದ ಉಪಮೆಯನ್ನು ಕಾವ್ಯದ ಬಂಧಕ್ಕೆ ತಂದಿರುವದು ಅಂತಿಂಥ ಸಾಧನೆಯಲ್ಲ! ಇನ್ನು ಮದುವೆಗೆ ಬಂದ (ಅದು ಜ್ಞಾನಮತಿ ಮತ್ತು ಪರಮಪುರುಷನ ಮದುವೆ) ಜನರಾದರೂ ಕಡಿಮೆಯವರಲ್ಲ.
|| ಆರಂಭದೊಳಧಿಕಾರದುಪಾದ್ಯರು ಬಂದರಾಗ ||
ಎನ್ನುವಲ್ಲಿಂದ ತೊಡಗಿ
ಸಂಧಿಸಿರುವ ತುರ್ಯನಂದಗಾಮಿಗಳೆಲ್ಲ ಬಂದರಾಗ ||8||
ಎನ್ನುತ್ತಾಳೆ ಇಲ್ಲಿ ಕವಿ.
ಇಡೀ ಮದುವೆಯ ವೈಭವವನ್ನು ವೇದಾಂತದ ಪಾಠ ಮಾಡಿಸುವ ಕಥೆಯ ಪ್ರಾರಂಭದಲ್ಲಿ ಬರುವ ಗುರು ಮತ್ತೆ ಪ್ರಕಟನಾಗುತ್ತಾನೆ.
|| ಮೆರೆವ ಪರಮಾತುಮನು ತಾನೆಂ |
ದರಿದು ಗುರುಮುಖದಿಂದ ಮೋಕ್ಷದ |
ಸಿರಿಯ ಸೇರುವ ಪರಿಯಗುರು ಶಿಷ್ಯನಿಗೆ ಬೋಧಿಸಿದ ||
ವೇದಾಂತವನ್ನು ಒಣ ಎಂದು ಕರೆಯುತ್ತಾರೆ. ಆದರೆ ಈ ಒಣ ವೇದಾಂತದ ಕೊನರನ್ನು ಮಂಜಮ್ಮನಂತೆ ಕಾವ್ಯದಲ್ಲಿ ಚಿತ್ರಿಸಿದವರು ವಿರಳ. ಯಕ್ಷಗಾನದಲ್ಲಂತೂ ಈ ಬಗೆಯ ಪ್ರಸಂಗ ಮತ್ತೊಬ್ಬ ಕವಿಯಿಂದ ಬಂದೇ ಇಲ್ಲ. ಪುರಾಣ, ಮಲಯಾಳಿ ರಾಮಾಯಣ, ತೊರವೆ ರಾಮಾಯಣ, ಜೈಮಿನಿ ಸಪ್ತಶತಿ ಮುಂತಾದ ಕಾವ್ಯಗಳಿಂದ ರಂಗಕೃತಿಯಾಗಿ ಪ್ರಸಿದ್ಧಿ ಪಡೆದ ಆಟದ ಪ್ರಸಂಗದ ನಡುವೆ ಮಂಜಮ್ಮ ವಿನೂತನ ವಸ್ತುವನ್ನು ಸರಳವಾದ ಭಾಷೆಯಲ್ಲಿ ವಿವರಿಸಿದ್ದು ಅನನ್ಯ. ಇಂತಹ ಕವಿಗೆ ಇತಿಹಾಸದಲ್ಲಿ ಸೂಕ್ತ ಸ್ಥಾನ; ಪರಿಚಯ ಇಲ್ಲದೇ ಹೋಗಿದ್ದು ಸಾಹಿತ್ಯ ಮತ್ತು ಯಕ್ಷಗಾನಕ್ಕೆ ಕೊರತೆಯೇ ಸರಿ.
ಮಂಜಮ್ಮ ಬರೆದ ಅನೇಕ ಹಾಡುಗಳೂ ಇಂದು ಸಾಗರದ ಕಡೆ ಹೆಂಗಸರ ಕಂಠದಲ್ಲಿ ಇದೆ. ಈಕೆ ಬರೆದ ಅನೇಕ ಕೃತಿಗಳನ್ನು ಮುಂದೆ ಅನೇಕ ಜನ ತಮ್ಮದಾಗಿಸಿಕೊಂಡು ತಾವೇ ಕವಿಗಳು ಎಂದು ಮೆರೆದಿದ್ದಾರೆ ಎಂದು ಆಕೆಯ ವಂಶಜರಾದ ದತ್ತಮೂರ್ತಿ ವಿಷಾದದಿಂದ ಹೇಳುತ್ತಾರೆ. ಈಕೆಯ “ಆತ್ಮ ಮತ್ತು ಯಮ” ಎನ್ನುವ ಕೃತಿ ಮತ್ತೆ ಬೇರೆ ಹೆಸರನ್ನು ಪಡೆದುಕೊಂಡು ಒಂದು ಮೇಳದ ಪ್ರಸಿದ್ಧ ಕಲಾಕಾಣಿಕೆಯಾಗಿ ಮೆರೆದಿದ್ದನ್ನು ಅವರು ಉದಾಹರಿಸಿದರು.
ಈ ಯಕ್ಷಗಾನದ ಸಾಹಿತ್ಯವೆಲ್ಲ ಹೆಕ್ಕಿಕೊಂಡವರ ಸ್ವತ್ತು. ಹಾಗಾಗಿ ಆ ಕುರಿತು ಆಲೋಚಿಸುವದಕ್ಕಿಂತ ಮಂಜಮ್ಮ ಬರೆದ ಅಸಂಖ್ಯಾತ ಹಾಡುಗಳು, ಯಾರ ಯಾರ ಮನೆಯ ಕಪಾಟದಲ್ಲೋ ಅಡಗಿ ಕುಳಿತ ಆಕೆಯ ಕೃತಿಗಳು ಹೊರ ಬರಬೇಕಿದೆ.
‘ಮನೋಬುದ್ಧಿಸಂವಾದ’ ಮತ್ತು ‘ಜೀವಪರಮರ ಕಲ್ಯಾಣ’ ಈ ಎರಡೂ ಯಕ್ಷಗಾನಗಳಲ್ಲಿ ವೇದಾಂತದ ಸಾರಗಳನ್ನು ಸುಂದರವಾಗಿ ಅಡಕಗೊಳಿಸಲಾಗಿದೆ. ಬಿಡಿಪದ್ಯಗಳಲ್ಲಿರುವುದೂ ಭಕ್ತಿಪರವಾದ ಕೀರ್ತನೆ ಭಜನೆಗಳೇ. ಹೀಗೆ ಕೃತಿಯ ಉದ್ದಕ್ಕೂ ವೇದಾಂತ ವಿಚಾರಗಳೇ ಪಲ್ಲವಿಸಿಕೊಂಡಿರುವದರಿಂದ ವೇದಾಂತ ತತ್ವಸಾರ ಎಂಬ ಶೀರ್ಷಿಕೆ ಸ್ವನಾಮಧನ್ಯತೆ ಪಡೆದಿದೆ ಎಂಬುದು ಗಮನಾರ್ಹ.
ಈ ಕವಿಯತ್ರಿಯ ಕುರಿತು ವಿವರಗಳಿಗೆ ಈ ಲೇಖಕ ಪ್ರಕಟಿಸಿದ ವೇದಾಂತ ತತ್ವಸಾರ (ಪ್ರ. ಹವ್ಯಕ ಅಧ್ಯಯನ ಕೇಂದ್ರ, ಬೆಂಗಳೂರು) ಇದನ್ನು ನೋಡಬಹುದು.
ಮಂಗಳೂರಿನ ಅಶೋಕವರ್ಧನರು ಅವರ ಮಗ ಅಭಯಸಿಂಹ ಇದರ E-Book ಆವ್ರತ್ತಿಯನ್ನು ಪ್ರಕಟಿಸಿದ್ದು ಈ ಕೆಳಗಿನ ಲಿಂಕ್ ನಲ್ಲಿ ಉಚಿತವಾಗಿ ಓದಬಹುದು.
https://issuu.com/abhayasimha ಅಥವಾ http://www.athreebook.com/p/blog-page_19.html
ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.