ತೊಟ್ಟಿಲು ತೂಗುವ ಮಳೆಹನಿ
ಹೂವಿನ ಕಣಜದಲಿ ನಾಗರದ ಹೆಡೆ ತೂಗುವಾಗ
ಅಳುವ ತುಟಿಗಳಲಿ ನಿತ್ಯದ ಸತ್ವ ರುಚಿಸುವುದಿಲ್ಲ
ಅವಳು ಸೆರಗ ಹಾಸಿದ ಪರಿಗೆ
ಸಮುದ್ರವೂ ಚಿರ ನಿದ್ರೆಗೆ ಸರಿಯುವ ಸಮಯ
ಸಾಲು ಚೈತ್ರದ ನೆರಳಡಿ ರೆಕ್ಕೆ ಬೀಸುವ ಅವಳುಡಿಯಲಿ
ಇರುಳು ತಲೆದಿಂಬಿನ ಪರದೆಯಲಿ ಅವಿತುಗೊಂಡಿತು
ನಿತ್ಯ ಗೋರಿ ಕಟ್ಟುವವರ ಸರದಿಗಾಗಿ
ತೆನೆಗಳ ರಾಶಿಯಾಗಬೇಕಾದ ನೆಲದ ಹುಡಿಯಲಿ
ಮಣ್ಣಿನ ಹೆಂಟೆಗಳು ಬಾಂಬಿನ ತೆಕ್ಕೆಯಲಿ ಅವಿತಂತೆ
ಬೆಳಕಿನ ಪದರು ಚೀರಿತು ಓಜೋನ ಚಹರೆಗೆ ನಲುಗಿ
ಈಗವಳು ಕೂದಲೆಳೆಯ ಬೆಳಕಿನ ಗುಂಗಲಿ
ತಲೆತುಂಬ ಮಲ್ಲಿ ಹೂ ಮುಡಿವ ಆಕಾಶದಂತವಳು
ಅಂಗಾಲು ನೆಕ್ಕಿ ಕಾಲ್ಗೆಜ್ಜೆಯಲಿ ಸುತ್ತು ಹೊಡೆವ
ಹಸಿಮಣ್ಣಿನ ಕಣ್ಣಿನವಳು
ದಾರಿಯ ಇಕ್ಕೆಲಗಳಲಿ ಸಾಲು ನೆರಳುಗಳ ದಾಟಿ
ಮೋಡದ ನೆರಿಗೆಯಲಿ ಮಿಂಚಿನ ಗರಿಬಿಚ್ಚಿ
ಮಳೆಹನಿಗಳ ಜೊತೆಗೂಡಿ ಬಿರಿದ ನೆಲದ
ಕೊರಳಲಿ ಹಸಿರು ತೊಟ್ಟಿಲು ತೂಗುವಳು
ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’ ಇವರ ಪ್ರಕಟಿತ ಕವನ ಸಂಕಲನ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ