ಬತ್ತಿದ ನಾಡಿ ತಣಿಸೋ ನೈಜ ಕಣಜ

ಸಾಲು ದೀಪದ ಹಾಗೆ ಕೂಲಿಯ ಬೆನ್ನುಬಿದ್ದ
ಇರುವೆಗಳ ನೆತ್ತಿಯಲಿ
ಬುತ್ತಿಯ ಗಂಟು ಜೋಗುಳದ ನಾದದಂತೆ
ಕೂಗು ಹಾಕಿ ಬಳಗ ಕಲೆ ಹಾಕುವ
ಕಾಗೆಗಳ ಆಯಾಸದ ರೆಕ್ಕೆಗಳಿಗೆ
ಕಸುವು ತುಂಬುವ ಅನ್ನದಗಳಿನ ಧ್ಯಾನ

ಬಿಸಿಲಿಗೆ ಬೆನ್ನು ಮಾಡಿದ ಮಧರಂಗಿ ಕೈಯಾಗ
ಮಣ್ಣ ಹೆಂಟೆಗಳ ಚಿತ್ರ ಮೂಡಿಸಿದ
ಬುತ್ತಿಯ ಒಡಲು
ಬಾಗಿದ ಬೆನ್ನ ಬೆವರಿಗೆ ನಿಟ್ಟುಸಿರು

ಗೋಡೆ ಕಣ್ಣೊಳಗೆ ಬೆಸೆದು ಹಣ್ಣಾಗುವ
ಗೌಂಡಿಯ ಹೊಕ್ಕಳಿಗೆ
ಈ ಬುತ್ತಿಯ ಗಂಟಿನ ಒಳರಸ
ಕರುಳ ಲೇಪನದಂತೆ

ಸಜ್ಜೆಯ ತೆನೆ ಕೊಯ್ಯುವ
ಬಗ್ಗಿ ಗದ್ದೆಯ ಕಳೆ ಕೀಳುವ ಕೈಗಳಿಗೆ
ಹೆಜ್ಜೆ ಸದ್ದಿನ ರಸ್ತೆಯ ಇಕ್ಕೆಲಗಳಲಿ ಬಲಿಯಾದ
ಹೂವಿನ ದನಿಗೂ ಕೂಡಾ
ಈ ಬುತ್ತಿಯ ಗಂಟು
ಬೆನ್ನ ಬರೆಗಳ ಕಾವು ತಣಿಸೋ
ನವ ಚಿಗುರಿನ ತಾಣ

ಚುಕ್ಕಿಗಳ ಎದೆಗೊತ್ತಿಕೊಂಡು
ಕುರಿ ಹಿಕ್ಕೆಗಳ ಗುಡಿಸುವ ಅವಳೊಳಗೆ
ಈ ಬುತ್ತಿ ಗಂಟಿನ ಚರಿತ್ರೆ ಮಾಸದ ಗುರತು

ಅವಳೆಂದರೆ
ಬುತ್ತಿಯ ಕಣ್ಣಾಗಿ
ಬತ್ತಿದ ನಾಡಿ ತಣಿಸೋ ನೈಜ ಕಣಜ

 

ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’  ಮತ್ತು ‘ಅಲೆವ ನದಿ’ ಇವರ ಪ್ರಕಟಿತ ಕವನ ಸಂಕಲನಗಳು