‘ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ಡದೇನಲ್ಲ’ ಎನ್ನುವ ಮೂಲಕ ಕಾಲ ನಿರಂತತೆಯಿಂದ ಕೂಡಿರುತ್ತದೆ. ಆದರೆ ಕಾಲದ ತೆಕ್ಕೆಯಲ್ಲಿ ಜೀವಿಸುವ ಜೀವಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಆತ ಅಲ್ಪ ಎನ್ನುತ್ತಾರೆ. ‘ಕಾಲ’ ಎನ್ನುವುದೇ ನಿಲ್ದಾಣವಾದರೆ ಅಲ್ಲಿ ಚರಿತ್ರೆ, ಸಂಸ್ಕೃತಿ, ನಾಗರಿಕತೆ ಇತ್ಯಾದಿಗಳು ಬಂದು ಹೋಗುತ್ತಿರುತ್ತವೆ. ಹೇಗೆ ಕುಂಬಳೆಯ ರೈಲು ನಿಲ್ದಾಣದಲ್ಲಿ ಮದರಾಸು ಮೇಲ್, ಜನತಾ, ಜಯಂತಿ ಮೊದಲಾದ ವೇಗಧೂತ ರೈಲುಗಳು ನಿಲ್ಲುವುದಿಲ್ಲವೋ ಹಾಗೆ ಅನುಸರಿಸಲಾಗದ, ಹೊಂದಿಕೊಳ್ಳಲಾರದವು ಸರ್ರನೆ ಸರಿದು ಹೋಗುತ್ತವೆ.
ಇಂದು ಕೆ.ವಿ. ತಿರುಮಲೇಶರ ಹುಟ್ಟುಹಬ್ಬ. ಕಳೆದ ವರ್ಷ ತೀರಿಹೋದ ಅವರ ನೆನಪಿಗೆ ಅವರ ‘ಅವಧ’ ಕವನ ಸಂಕಲನದ ಕುರಿತ ಸುಮಾವೀಣಾ ಬರಹ ಇಲ್ಲಿದೆ

‘ಅ’ಕಾರಪ್ರೇಮಿ ಕೆ.ವಿ. ತಿರುಮಲೇಶರ ‘ಅವಧ’ ಕವನ ಸಂಕಲನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ. ಇದೀಗ ಎರಡನೆ ಮುದ್ರಣ ಕಂಡಿದೆ. ಮಾತುಗಳಿಗಿಂತ ಕವಿತೆಗಳೇ ನನ್ನ ಬಗ್ಗೆ ಹೇಳುತ್ತವೆ ಎನ್ನುವ ತಿರುಮಲೇಶರು ಮಿತಭಾಷಿ ಎನ್ನುವುದು ಸರ್ವವಿದಿತ. ಭ್ರಮರಿ ಎಲ್ಲೆಡೆ ವಿಭ್ರಮಿಸಿ ಮಧುವನ್ನು ಸಂಗ್ರಹಿಸುವಂತೆ ಕವಿ ಮನಸ್ಸು ಇಲ್ಲಿ ಸ್ವಚ್ಛಂದವಾಗಿ ವಿಭ್ರಮಿಸಿ ಕಾವ್ಯಮಧುವನ್ನು ಓದುಗರಿಗೆ ಸಂಚಯಿಸಿಕೊಟ್ಟಿದೆ ಎನ್ನಬಹುದು. ಬದುಕಿನ ಎಲ್ಲಾ ಕಾಣ್ಕೆಗಳನ್ನು ‘ಅವಧ’ ಕವನ ಸಂಕಲನ ಹೊಂದಿರುವುದರಿಂದ ತಿರುಮಲೇಶರೆ ಹೇಳುವಂತೆ ಇದು ಓದುಗರಿಷ್ಟದ ಕವನ ಸಂಕಲನವೂ ಆಗಿದೆ.

166 ಕವನಗಳನ್ನು ಹೊಂದಿರುವ ‘ಅವಧ’ ಮೂರು ಭಾಗಗಳಲ್ಲಿ ನಿಬದ್ಧವಾಗಿದೆ. ಪ್ರಸ್ತುತ ಕವನ ಸಂಕಲನದ ಮೊದಲನೆ ಭಾಗದ ‘ಕುಂಬಳೆಯೆಂಬ ನಿಲ್ದಾಣ’ ಕವನವನ್ನು ಅನುಸಂಧಾನಿಸುವ ಪ್ರಯತ್ನ ಮಾಡುತ್ತಿರುವೆ. ‘ಕುಂಬಳೆಯೆಂಬ ನಿಲ್ದಾಣʼ ಹೆಸರೆ ಎಷ್ಟು ಸೂಚ್ಯ ಅನ್ನಿಸುತ್ತದೆ. ನಿಲ್ಲುವ ತಾಣ ನಿಲ್ದಾಣ ಅದೇ ಕುಂಬಳೆಯೇ ಏಕಾಗಬೇಕು? ಬೇರೆ ಊರಾಗಬಾರದೆ? ಎಂದರೆ ಬೇರೆ ಊರಿನ ಹೆಸರನ್ನೂ ತಿರುಮಲೇಶರು ಇಡಬಹುದಿತ್ತು. ಆದರೆ ತಾವು ಬೆಳೆದ ತಾವನ್ನು ಅಲ್ಲಿಯ ನೆನಪುಗಳನ್ನು ಅವಲೋಕಿಸುತ್ತಲೆ ಪರಂಪರೆಯನ್ನು ಪ್ರತಿಮಾವಿಧಾನದಲ್ಲಿ ಕಟ್ಟಿಕೊಟ್ಟಿದ್ದಾರೆ ಅನ್ನಿಸುತ್ತದೆ.

‘ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ಡದೇನಲ್ಲ’ ಎನ್ನುವ ಮೂಲಕ ಕಾಲ ನಿರಂತತೆಯಿಂದ ಕೂಡಿರುತ್ತದೆ. ಆದರೆ ಕಾಲದ ತೆಕ್ಕೆಯಲ್ಲಿ ಜೀವಿಸುವ ಜೀವಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಆತ ಅಲ್ಪ ಎನ್ನುತ್ತಾರೆ. ‘ಕಾಲ’ ಎನ್ನುವುದೇ ನಿಲ್ದಾಣವಾದರೆ ಅಲ್ಲಿ ಚರಿತ್ರೆ, ಸಂಸ್ಕೃತಿ, ನಾಗರಿಕತೆ ಇತ್ಯಾದಿಗಳು ಬಂದು ಹೋಗುತ್ತಿರುತ್ತವೆ. ಹೇಗೆ ಕುಂಬಳೆಯ ರೈಲು ನಿಲ್ದಾಣದಲ್ಲಿ ಮದರಾಸು ಮೇಲ್, ಜನತಾ, ಜಯಂತಿ ಮೊದಲಾದ ವೇಗಧೂತ ರೈಲುಗಳು ನಿಲ್ಲುವುದಿಲ್ಲವೋ ಹಾಗೆ ಅನುಸರಿಸಲಾಗದ, ಹೊಂದಿಕೊಳ್ಳಲಾರದವು ಸರ್ರನೆ ಸರಿದು ಹೋಗುತ್ತವೆ. ಬದುಕೊಂದು ಅಭಿನಯದ ಪ್ರಯಾಣ ಎಂದು ತೆಗೆದುಕೊಂಡರೂ ಇಲ್ಲಿ ಬರುವ ಪಾತ್ರಗಳು ತಮ್ಮ ಅಭಿನಯದ ಸರದಿ ಬಂದಾಗ ರಂಗವನ್ನೇರಿ ಮುಗಿದ ಬಳಿಕ ಇಳಿಯುವಂತೆ ಸರದಿ ಪ್ರಕಾರ ರೈಲುಗಳು ಇಲ್ಲಿ ಬಂದು ಹೋಗುತ್ತವೆ. ಬಂದಷ್ಟೇ ವೇಗದಲ್ಲಿ ಅವು ಹೋಗುವುದರಿಂದ ಅವುಗಳ ಕಣ್ಗಾವಲು ಕಷ್ಟ ಎಂದು ಜೀವಜಾಲವನ್ನು ಕುರಿತು ಹೇಳುತ್ತಾರೆ.

ಮುಂದಿನ ಸಾಲುಗಳಲ್ಲಿ ಪರಂಪರೆಯನ್ನು ಆಲದ ಮರದ ಬಿಳಲುಗಳು ಬೇರಾಗಿರುವದರೊಂದಿಗೆ ಸಮೀಕರಿಸಿ ಹೇಳುತ್ತಾ ಮರದ ನೆರಳಿನಲ್ಲಿ ದನಗಳು ವಿಶ್ರಮಿಸಿ ಮೇವನ್ನು ಮೆಲುಕುತ್ತಾ ಎದ್ದು ಹೊರಡುವಂತೆ ಪರಂಪರೆಯ ಬಿಳಲಿನಲ್ಲಿ ಜನಗಳು ಇದ್ದು ಹೊರಡುತ್ತಾರೆ. ಆದರೆ ಈ ವಿಶ್ರಾಂತಿ, ಪ್ರಯಾಣ ಎಲ್ಲಕ್ಕೂ ಅಂತ್ಯ ಎಂಬುದಿರುತ್ತದೆ. ಆ ಆಸನವನ್ನು ಕಾಲನ ಮುಂದಿನ ಅತಿಥಿಗಳಿಗೆ ಬಿಡಬೇಕು ಎಂಬ ನಿರ್ಧಾರವನ್ನು ಕವಿ ಸರ್ವರಿಗೂ ಒಪ್ಪಿತ ರೀತಿಯಲ್ಲಿಯೇ ಹೇಳುತ್ತಾರೆ. ಉತ್ಸಾಹಿಗಳಾಗಿ ಮರದ ಮೇಲಿನ ಹಣ್ಣನ್ನು ಎಷ್ಟು ಬೇಕೋ ಅಷ್ಟನ್ನು ತಿಂದು ತೃಪ್ತಿ ಹೊಂದಿದ ನಿರುತ್ಸಾಹಿಗಳಾಗಿ ಮಿಕ್ಕಿದ್ದನ್ನು ಅಲ್ಲೇ ಬಿಟ್ಟು ಹೊರಡುವ ಪಕ್ಷಿಗಳ ಅನುಕೂಲ ಸಿಂಧು ಮನುಷ್ಯ ಜನಾಂಗವನ್ನು ಇಲ್ಲಿ ಸಂಕೇತಿಸುತ್ತದೆ. ಹೇಗೆ ಸಮುದ್ರದ ತೆರೆಗಳು ಬಂದು ಬಂದು ಮರಳ ಮನೆಗಳನ್ನು ಇಲ್ಲವಾಗಿಸುತ್ತವೆಯೋ ಹಾಗೆ ಬದಲಾವಣೆಗಳು ಹಳೆಯದನ್ನು ಮರೆಸುತ್ತವೆ ಎಂದು ತಾನು ಚಿಕ್ಕಂದಿನಿಂದ ಕಂಡ ಅರಬ್ಬೀ ಸಮುದ್ರದ ಪ್ರಕ್ಷುಬ್ಧತೆ, ಪ್ರಶಾಂತತೆಯನ್ನು ಪರೋಕ್ಷವಾಗಿ ನೆನಪಿಸಿಕೊಳ್ಳುತ್ತಾರೆ.

ರೈಲು ನಿಲ್ದಾಣವೆಂದರೆ ಅಲ್ಲಿ ಹಣ್ಣು, ತಿಂಡಿ ತಿನಿಸುಗಳ ವ್ಯಾಪಾರ ಹೆಚ್ಚೇ ಇದ್ದು ಪರಿಚಯವಿರದವರೂ ಪರಿಚಯದವರಂತೆ ವ್ಯವಹರಿಸುತ್ತಾರೆ ಎನ್ನುವುದನ್ನು ಮಗುವಿನ ಹುಟ್ಟು ಬೆಳವಣಿಗೆಗೆ ಹೋಲಿಸುತ್ತಾರೆ. ಕಾಲನ ನಿಲ್ದಾಣಕ್ಕೆ ಅದೆಷ್ಟೋ ಹೊಸಹುಟ್ಟುಗಳು ನಿತ್ಯ ಆಗಮಿಸುತ್ತವೆ. ಅವುಗಳೆಲ್ಲ ತಿಳಿದಿರದ ಜನ ವಾತಾವರಣದಲ್ಲಿದ್ದು ಎದ್ದು ಹೋಗಬೇಕಾಗುತ್ತದೆ ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದಾರೆ.

ಪರಂಪರೆ ಎಂಬ ಮುದುಕ ಅಲ್ಲಿದ್ದಾನೆ. ಆತನ ಮೂಲಕ ಮನುಷ್ಯ ಜನಾಂಗದ ವಿಸ್ಮಯಗಳು, ವಿಭ್ರಾಂತಿಗಳು ಎಲ್ಲವನ್ನು ಕಾಣಬಹುದು ಎನ್ನುತ್ತಾರೆ. ರೈಲ್ವೆ ನಿಲ್ದಾಣ ಎಂದರೆ ಅದೊಂದು ದಾಖಲೆಯ ಕೇಂದ್ರ ಎಷ್ಟು ಜನ ಬಂದಿದ್ದರು? ಎಷ್ಟು ಜನ ಪ್ರಯಾಣ ಮಾಡುತ್ತಾರೆ? ಅಲ್ಲಿ ಅವಘಡಗಳಾದವೋ? ಅತ್ಮಹತ್ಯೆಗಳು ಸಂಭವಿಸಿದವೋ? ಎನ್ನುವ ಮಾಹಿತಿ ನಿಖರವಾಗಿ ಇರುತ್ತದೆ. ಹಾಗೆ ಕಾಲನನ್ನು ಸರಿಸಿಹೋದ ಬೆಳವಣಿಗೆಗಳು, ಬದಲಾವಣೆಗಳು ಇಲ್ಲಿ ಪಟ್ಟಿಯಲ್ಲಿವೆ ಎನ್ನುತ್ತಾರೆ. ಇಂಥ ಪ್ರಯಾಣದಲ್ಲಿ ರೈಲುಗಳು ಬಂದು ಹೋಗುವಂತೆ ಒಮ್ಮಿಂದೊಮ್ಮಗೆ ಕ್ಷಿಪ್ರ ಬದಲಾವಣೆ ಎಂಬ ಗಾಳಿಯೂ ಬೀಸಿ ಮಾಯವಾಗುತ್ತದೆ ಆದರೆ ಕಾಲದ ನಿರಂತರತೆ ಇದ್ದೇ ಇರುತ್ತದೆ ಎಂದು ಅಲ್ಲಿ ಬದಲಾವಣೆಗಳನ್ನು ಕಂಡರೂ ಮೂಲಸ್ವರೂಪದಲ್ಲಿ ಬದಲಾವಣೆಗಳು ಕಷ್ಟವೇ ಎನ್ನುತ್ತಾರೆ. ಬುದ್ಧ, ಬಸವ, ಗಾಂಧಿ ಎಲ್ಲರೂ ಬದಲಾವಣೆಯ ಹೊಂಗನಸನ್ನೇ ಹೊತ್ತವರು ಆದರೆ ಅವರಿರುವವರೆಗೆ ಬದಲಾವಣೆ ಆದಂತಿದ್ದು ಅವರ ನಿರ್ಗಮನದ ಬಳಿಕ ಬದಲಾವಣೆಗಳು ದಾಖಲೆಯಲ್ಲಿವೆಯೇ ಹೊರತು ಆಚರಣೆಯಲ್ಲಿಲ್ಲ ಎಂಬ ವಿಷಾದವನ್ನು ತಿರುಮಲೇಶರು ವ್ಯಕ್ತ ಪಡಿಸುತ್ತಾರೆ.

ಒಟ್ಟಾರೆ ಇಲ್ಲಿ ಕಾಲದ ನಿರಂತರತೆ, ಪರಂಪರೆಯ ಹೊಳಹುಗಳು, ಅಪಸವ್ಯಗಳು ಸರದಿಪ್ರಕಾರ ಸುಳಿದು ಕಡೆಗೆ ಏನೂ ಬದಲಾವಣೆಯಾಗದ ನಿರ್ಲಿಪ್ತತೆಯಲ್ಲಿ ಸ್ಥಾಯಿಯಾಗುತ್ತದೆ ಎಂಬುದನ್ನು ತಿರುಮಲೇಶರು ವಿಶೇಷವಾಗಿ ಹೇಳಿದ್ದಾರೆ ಅನ್ನಿಸುತ್ತದೆ.