Advertisement
ಕುಸಿದ ನೆಲದ ಕೆಳಗಿದ್ದ ಅದೃಷ್ಟ: ಎಚ್. ಗೋಪಾಲಕೃಷ್ಣ ಸರಣಿ

ಕುಸಿದ ನೆಲದ ಕೆಳಗಿದ್ದ ಅದೃಷ್ಟ: ಎಚ್. ಗೋಪಾಲಕೃಷ್ಣ ಸರಣಿ

ಇಂದಿನವರೆಗೆ ಸುತ್ತ ಪರಿಸರ ಹೀಗಿರಬೇಕಾದರೆ ಚಾವಣಿಯ ಮೇಲೆ ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ಹಿಗ್ಗಿ ನಡೆ ಮುಂದೆ ಮಾಡುತ್ತಿದ್ದ ನಾನು ಎಲ್ಲೋ ಕಾಲು ಇಟ್ಟಿದ್ದೆ ಅಂತ ಕಾಣುತ್ತದೆ. ಏಕ್ ದಂ ಡಿವಿಜಿ ಪ್ರತ್ಯಕ್ಷ ಆದರು. ಪದ ಕುಸಿಯೆ ನೆಲವಿಹುದು… ಅಂತ ಅವರು ತಾನೇ ಹೇಳಿದ್ದು? ಕಾಲು ಕುಸಿಯಿತು ಮತ್ತು ನೆಲ ಸಹ ಇತ್ತು. ಆದರೆ ಅದು ಕೆಳಗೆ ಇದ್ದದ್ದು. ನಾನು ಸುಮಾರು ಹತ್ತು ಹನ್ನೆರೆಡು ಅಡಿ ಮೇಲಿಂದ ನೆಲಕ್ಕೆ ಕುಸಿದೆ…
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೊಂದನೆಯ ಕಂತು

ಕಳೆದ ಸಂಚಿಕೆ ಹೀಗೆ ಕೊನೆಗೊಂಡಿತ್ತು..

ಮನೆ ಪ್ಲಾಸ್ಟರ್ ಮೊದಲು ಮನೆ ಒಳಗೆ ಬರಬೇಕಾದ ವಿದ್ಯುತ್ ವೈರಿಂಗ್ ಕೆಲಸಕ್ಕೆ ನನಗೆ ಗೊತ್ತಿರುವ ಮತ್ತೊಬ್ಬನನ್ನು ತಂದಿದ್ದೆ. ಮಲ್ಲಪ್ಪನಿಗೆ ಈ ಕೆಲಸ ಸಹ ತಪ್ಪಿತ್ತು. ಈ ಕೆಲಸ ಮಾಡಲು ಬಂದವನು ಸೇಲಂ ಕಡೆ ಹುಡುಗ ಮತ್ತು ಆಗತಾನೇ ಕೆಲಸ ಶುರುಮಾಡಿದ್ದ. ತಲೆ ತುಂಬಾ ತಾನು ಆಗತಾನೇ ಕಲಿತ ವಿಷಯ ತುಂಬಿ ಹೋಗಿತ್ತು.

ಅವನ ತಲೆಯಲ್ಲಿ ಓಡುತ್ತಿದ್ದ ಹೊಸ ಐಡಿಯಾ ನನ್ನ ಮನೆಯಲ್ಲಿ ಅಳವಡಿಸಿ ಅದರಿಂದ ಅವನ ಕಾರ್ಯಜಾಲ ವಿಸ್ತರಿಸಿಕೊಳ್ಳಬೇಕು ಎನ್ನುವ ಐಡಿಯಾ ಅವನ ತಲೆಯಲ್ಲಿ ತುಂಬಿತ್ತು ಅಂತ ಕಾಣ್ಸುತ್ತೆ. ಇವುಗಳನ್ನು ಅವನು ನನ್ನ ಮನೆಯಲ್ಲಿ ಹೇಗೆ ಪ್ರಯೋಗ ಮಾಡಿ ನನ್ನ ಮನೆಯನ್ನು ಒಂದು ವಿಶಿಷ್ಟ ಮ್ಯೂಸಿಯಂ ಪೀಸ್ ಮಾಡಿದ ಎನ್ನುವ ರೋಚಕ ಕತೆಯನ್ನು ನಿಮಗೆ ಹೇಳಲೇಬೇಕು. ಅದಕ್ಕೆ ಮೊದಲು ನಮ್ಮ ಅಂದಿನ keb ಬಗ್ಗೆ ಕೊಂಚ ವಿವರ..

ಎಂಟು ಹತ್ತು ಹೊಸ ಬಡಾವಣೆಗೆ ಒಂದು ಆಫೀಸು. ಅಲ್ಲಿಗೆ ಸಾವಿರಾರು(ನಲವತ್ತು ವರ್ಷ ಹಿಂದೆ ತೆತ್ತು ಬರುವ ಜನ ಸಾವಿರದ ಲೆಕ್ಕದಲ್ಲಿ ಕೊಡುತ್ತಾ ಇದ್ದರು. ಅದು ಏರ್ತಾ ಏರ್ತಾಏರ್ತಾ ಏರಿ ಈಗ ಅದು ಐವತ್ತು ನೂರು ಕೋಟಿ ಹತ್ತಿರ ಬಂದಿದೆಯಂತೆ …) ತೆತ್ತು ಬಂದಿರೋ ಇಂಜಿನಿಯರುಗಳು. ತೆತ್ತು ಬಂದಿರೋದರಿಂದ ಅರಸನ ಅಂಕೆ ಇಲ್ಲ, ಅವೇ ದೆವ್ವಗಳ ಅಂಶ ಆಗಿದ್ದರಿಂದ ದೆವ್ವದ ಕಾಟ ಇಲ್ಲದೆ ಹತ್ತಾರು ತಲೆಮಾರುಗಳಿಗೆ ಆಗುವಷ್ಟು ಮೇಯುತ್ತಿದ್ದರು. ಅವರಿಗೆ ನೆರವಾಗಲು ಕೆಲವು ಕಾನೂನು ಅವರ ಹತ್ತಿರ ಇದ್ದವು. ನೇರವಾಗಿ ಗ್ರಾಹಕ ಮನೆಗೆ ವಿದ್ಯುತ್ ಕೊಡಿ ಎಂದು ಕೇಳುವ ಹಾಗಿಲ್ಲ. ವಿದ್ಯುತ್ ಕಂಟ್ರಾಕ್ಟರ್ ಹಿಡಿದು ಅವನು ಫೈಲ್ ರೆಡಿ ಮಾಡ್ಕೊಂಡು ಲಂಚ ಪಂಚ ಮಾತಾಡಿ ನಮ್ಮ ಹತ್ತಿರ ವಸೂಲ್ ಮಾಡ್ತಿದ್ದ ಮತ್ತು ಎಲ್ಲರಿಗೂ ಹಂಚುತ್ತಲೂ ಇದ್ದ…. ಈ ಕತೆಗೆ ಮುಂದೆ ಬರ್ತೇನೆ. ಅಲ್ಲಿಯವರೆಗೂ ಸಾವಧಾನ!

ಮುಂದಕ್ಕೆ

ಹಿಂದಿನ ಕತೆಗೆ ಕೊಂಚ ಅಡಿಷನ್ ಆಗಿದೆ. ಅದನ್ನೂ ಓದಿ ಇದಕ್ಕೆ ಬನ್ನಿ ಪ್ಲೀಸ್.

ನೆನಪುಗಳು ಹೀಗೆ ಸಮುದ್ರದ ಅಲೆಗಳ ಹಾಗೆ ಒಂದರ ಹಿಂದೆ ಒಂದು ಬಂದರೆ ದಾಖಲೆ ಆಗಬೇಕಾದ ಹಲವು ಸಂಗತಿಗಳು ಎವಪೊರೇಟ್ ಆಗಿ ಬಿಡ್ತಾವೆ. ಲೇಖನ ಮತ್ತೊಮ್ಮೆ ಓದಬೇಕಾದರೆ ಒಂದು ಮುಖ್ಯ ಸಂಗತಿ ಬಿಟ್ಟೆ ಅಂತ ನೆನಪಾಯಿತು. ಅದೇನಪ್ಪಾ ಅಂತಹ ಪ್ರಮುಖ ಸುದ್ದಿ ಅಂತ ನಿಮಗೆ ಆಶ್ಚರ್ಯ ಆಗಿದೆ ತಾನೇ? ಈಗ ಅದಕ್ಕೇ ಬಂದೆ. ಇದು ನನ್ನ ಲೆಕ್ಕದಲ್ಲಿ ಹೇಗೆ ಪ್ರಮುಖ ಅನ್ನುವುದಕ್ಕೆ ಸಮಜಾಯಿಶಿ ಕೊಟ್ಟು ಮುಂದಕ್ಕೆ ಹಾರ್ತೇನೆ. ಬಹುಶಃ ನಾನು ನಂಬದ ದೈವ ನಾನು ಇನ್ನೂ ಹಲವು ನೂರು (ಹೌದು ನೂರು, ಕಾರಣ ಸಹಸ್ರ ಅಂದರೆ ನಾನು ಮನುಕುಲಕ್ಕೆ ಹೊರಗೆ ಅನ್ನುವ ಅಪಾಯ ಉಂಟು) ಚಂದ್ರಗಳನ್ನು ಕಾಣುವ ಯೋಗ ನನ್ನ ಹಣೆಯಲ್ಲಿ ಬರೆದಿತ್ತು ಅಂತ ಕಾಣ್ಸುತ್ತೆ. ಅದಕ್ಕೆ ಬರುವ ಮೊದಲು ಒಂದು ಸಣ್ಣ ಹಿನ್ನೆಲೆ ಇರಲಿ.

ಆಗ ನಾಲ್ಕು ದಶಕಗಳ ಹಿಂದೆ ಮನೆ ಮೇಲಿನ ತಾರಸಿಗೆ ಕಾಂಕ್ರಿಟ್ ಹಾಕಿ ಚಾವಣಿ ತಯಾರಿಕೆಗೆ ಒಂದು ವಿಧಾನ ರೂಢಿಸಿಕೊಂಡಿದ್ದರು. ಅದರಂತೆ ಸಿಸ್ಟಂ ಹೀಗಿತ್ತು. ಚಾವಣಿಯನ್ನು ಸರ್ವೇ ಕಟ್ಟಿಗೆ ಸಪೋರ್ಟ್‌ನಿಂದ ನಿಲ್ಲಿಸುತ್ತಿದ್ದರು. ಸಪೋರ್ಟ್‌ಗೆ ಇಟ್ಟಿರುವ ಸರ್ವೇ ಕಟ್ಟಿಗೆ ಯಾವುದೂ ನೇರ ಇರುತ್ತಿರಲಿಲ್ಲ. ಸೊಟ್ಟಕ್ಕೆ ಪಟ್ಟಕ್ಕೆ ಅರವತ್ತು ಡಿಗ್ರಿ. ಎಪ್ಪತ್ತು ಡಿಗ್ರಿ, ನೂರ ಇಪ್ಪತ್ತು ಡಿಗ್ರಿ… ಹೀಗೆ ವೋರೆ ಇರ್ತಿದ್ದವಾ? ಅದರ ಅಂದರೆ ಈ ಸರ್ವೇ ಕಟ್ಟಿಗೆ ಬುಡಕ್ಕೆ, ತಲೆಗೆ ಮರದ ತುಂಡು ಸಪೋರ್ಟ್‌ಗೆ ಇರ್ತಾ ಇತ್ತು. ಮೊದಲನೇ ಸಲ ಈ ರೀತಿಯ ಸರ್ವೇ ಮರಗಳು ಸೊಟ್ಟ ಸೊಟ್ಟ ನಿಂತು ಅದರ ಮೇಲೆ ಅದೆಷ್ಟೋ ಟನ್ ಭಾರದ ಕಬ್ಬಿನ, ಸಿಮೆಂಟ್, ಕಲ್ಲು ಮರಳು ಇವುಗಳ ಭಾರ ಹೊರುವುದು ನೆನೆದಾಗ ಖಂಡಿತ ಛಾವಣಿ ಕುಸಿದು ಅದರಡಿಯಲ್ಲಿ ಹದಿನೈದು ಇಪ್ಪತ್ತು ಬಡ ಕೂಲಿಗಳು ಸಿಕ್ಕಿ ಹಾಕಿಕೊಂಡು ದೇವರ ಪಾದ ಸೇರುತ್ತಾರೆ ಎನ್ನುವ ಭಯ ಆಕ್ರಮಿಸಿತ್ತು. ಮತ್ತು ಅಷ್ಟು ಜನ ಸತ್ತ ನಂತರ ಅದರ ಹೊಣೆ ನನ್ನ ತಲೆ ಮೇಲೆ ಬಂದು ಅದೆಷ್ಟು ಸಾವಿರ ವರ್ಷ ನಾನು ಜೈಲಿನಲ್ಲಿ ಇರಬೇಕಾಗುತ್ತೆ ಅಂತ ಕೆಲವು ದಿವಸ ನಿದ್ರೆ ಕೆಟ್ಟಿದ್ದೆ. ಇದರ ಬಗ್ಗೆ ಮಲ್ಲಯ್ಯನ ಜ್ಞಾನದಾರೆ ನನ್ನ ಕಡೆ ಹರಿಯುವ ಮೊದಲು ನಮ್ಮ ಏರಿಯಾದ ಸುಮಾರು ರಸ್ತೆಗಳಿಗೆ ಹೋಗಿ ಮೌಲ್ಡಿಂಗ್‌ಗೆ ಸಿದ್ಧ ಇರುವ ಹಲವು ಮನೆ ನೋಡಿದ್ದೆ. ಎಲ್ಲಾ ಮನೆಗಳೂ ಈ ರೀತಿಯ ಸೊಟ್ಟ ನಿಲ್ಲಿಸಿದ ಸರ್ವೇ ಮರದ ಸಪೋರ್ಟ್‌ನಲ್ಲೇ ಇದ್ದದ್ದು! ಹೀಗೆ ಸೊಟ್ಟ ಬಾಗಿ ಸರ್ವೇ ಮರ ನಿಲ್ಲಿಸೋದು ಸಹ ಒಂದು ಕಲೆ, ಆರ್ಟ್ ಅಂತ ಅನಿಸಿತ್ತು. ಕೆಮಿಸ್ಟ್ರಿ ಮ್ಯಾಥಮಟಿಕ್ಸ್ ಫಿಸಿಕ್ಸ್ ಓದಿ ಒಂದು ಎರಡು ಮೂರು ಡಿಗ್ರಿ ಪಡೆದಿರುವ ಯಾವ ಮೇಧಾವಿಯೇ ಆಗಲಿ ಹೀಗೆ ಸೊಟ್ಟ ಸೊಟ್ಟ ನಿಲ್ಲಿಸಿದ ಸರ್ವೇ ಕಟ್ಟಿಗೆ ಮೇಲೆ ಅಷ್ಟೊಂದು ಭಾರ ಹೊರುವ ಟೆಂಪರರಿ ಮತ್ತು ಮುಂದೆ ಪರ್ಮನೆಂಟ್ ಆಗಲಿರುವ ರೂಫು ನಿರ್ಮಿಸೋದು ಅಸಾಧ್ಯ ಅಂತ ಆಗ ಅನಿಸಿತ್ತು ಮತ್ತು ಈ ನಲವತ್ತು ವರ್ಷದಲ್ಲಿ ಅವತ್ತಿನ ಅನಿಸಿಕೆ ಇನ್ನೂ ಆಳ ಹೋಗಿ ಕೂತಿದೆ! ಅದರ ಜತೆಗೆ ಕೆಮಿಸ್ಟ್ರಿ ಮ್ಯಾಥಮಟಿಕ್ಸ್ ಫಿಸಿಕ್ಸ್ ಓದಿ ಒಂದು ಎರಡು ಮೂರು ಡಿಗ್ರಿ ಪಡೆದಿರುವ ಯಾವ ಮೇಧಾವಿಯೇ ಆಗಲಿ ಹೀಗೆ ಸೊಟ್ಟ ಸೊಟ್ಟ ಸರ್ವೇ ಕಟ್ಟಿಗೆ ನಿಲ್ಲಿಸಲು ಸಾಧ್ಯವೇ ಇಲ್ಲ ಎನ್ನುವ ನಂಬಿಕೆ ಬೃಹತ್ತಾಗಿ ಬೆಳೆದಿದೆ.

ಈಗಲೂ ಯಾವುದಾದರೂ ಮೌಲ್ಡಿಂಗ್‌ಗೆ ರೆಡಿ ಇರುವ ಮನೆ ಹತ್ತಿರ ಕಣ್ಣು ಹಾಯಿಸಿ. ನಿಮಗೆ ಆಶ್ಚರ್ಯ ಆಗಲಿಲ್ಲ ಅಂದರೆ ನೂರು ರುಪಾಯಿ ಫೈನ್ ತೆರಲು ನಾನ್ ರೆಡಿ!(ಈ ನೂರು ರುಪಾಯಿ ಕತೆಗೆ ಯಾಕೆ ಬರಬೇಕಾಯಿತು ಅಂದರೆ ಅದಕ್ಕೊಂದು ಪುಟ್ಟ ಎಪಿಸೋಡ್ ಅಂಟಿಸಬೇಕು.. ಮೊನ್ನೆ ಮನೆಯಿಂದ ಒಂದೂವರೆ ಕಿಮೀ ದೂರ ಇರುವ ರಕ್ತ ಪರೀಕ್ಷೆ ಲ್ಯಾಬೋರೇಟರಿಗೆ ಹೋಗಬೇಕಿತ್ತು. ಆಟೋ ಬುಕ್ ಮಾಡಿದರೂ ಸಿಗಲಿಲ್ಲ. ಸರಿ ಅಂತ ರಸ್ತೆಗೆ ಬಂದೆವು. ಯಾರೋ ಆಟೋದವರು ಎಲ್ಲಿಗೆ ಅಂದರು. ನಾವು ಹೋಗಬೇಕಿದ್ದ ಜಾಗ ಹೇಳಿದೆ. ಅದು ಗೊತ್ತಾ? ಅಂತ ಕೇಳಿದರು. ಹೂಂ ಅಂದೆ. ಕೂತ್ಕಳಿ ಅಂದರು, ಕೂತೆವು. ಮೀಟರು? ಅಂದೆ. ಅಯ್ಯೋ ಏನೋ ಕೊಡಿ ಅಂದರು. ಆಟೋ ಇಳಿದೆ. ಜೇಬಿನಿಂದ ನಲವತ್ತು ತೆಗೆದೆ. ಒಂದೂವರೆ ಕಿಮೀ ಇದೆ. ಮಿನಿಮಮ್ ಆಗುತ್ತೆ. ಇದು ತಗೊಳ್ಳಿ ಹತ್ತು ಹೆಚ್ಚಿಗೆ ಇದೆ…. ಅಂದೆ. ಅರವತ್ತು ಕೊಡಿ ಮೂರು ಕಿಮೀ ಮೇಲಿದೆ… ಅಂದರು. ಮೂರು ಇದ್ದರೆ ನಾನು ನೂರು ರುಪಾಯಿ ಕೊಡ್ತೀನಿ ಬಾ ವಾಪಸ್ ಹೋಗೋಣ ಅಂದೆ. ರಿಕ್ಷಾದವರ ಹತ್ತಿರ ಜಗಳ ಆಡಬೇಕು ಅಂದರೆ ನನಗೆ ಅದೇನೋ ಎಕ್ಸಟ್ರಾ ಶಕ್ತಿ ಬಂದು ಬಿಡುತ್ತೆ. ನಾನು ನೂರು ಕೊಡ್ತೀನಿ ಅಂದದ್ದಕ್ಕೆ ರಿಕ್ಷಾ ಡ್ರೈವರ್ ನಾನು ಸಾವಿರ ಕೊಡ್ತೀನಿ ಅನ್ನಬೇಕೆ? ಇರು ಬೇರೆ ರಿಕ್ಷಾ ಕೂಗು ಅದರಲ್ಲಿ ನಾನು ಬರ್ತೀನಿ. ನಿನ್ನ ರಿಕ್ಷಾ ಹಿಂದೆ… ಅಂತ ಬೇರೆ ರಿಕ್ಷಾ ಕೂಗಲು ಹೊರಟೆ. ಹೆಂಡತಿ ನನ್ನ ಕೈಲಿದ್ದ ನಲವತ್ತು ಕಿತ್ಕೊಂಡು ಡ್ರೈವರ್ ಸೀಟ್ ಮೇಲೆ ಇಟ್ಟು ನನ್ನ ಕೈ ಹಿಡಕೊಂಡು ದರ ದರ ಎಳೆದುಕೊಂಡು ಲ್ಯಾಬೋರೇಟರಿ ಒಳ ಹೊಕ್ಕಳು. ಸಾವಿರ ರುಪಾಯಿ ಸಂಪಾದಿಸುವ ಅದೂ ಈ ವಯಸ್ಸಿನಲ್ಲಿ ಸಂಪಾದನೆ ಮಾಡುವ ಒಂದು ಒಳ್ಳೇ ಗೋಲ್ಡನ್ ಆಪರ್ಚುನಿಟಿ ಕಳೆದು ಹೋಗಿತ್ತು. ಆ ಸಂಕಟ ಇನ್ನೂ ಹೊಟ್ಟೇಲಿ ಇದೆ!)

ಅಂದ ಹಾಗೆ ಈ ಸರ್ವೇ ಜೋಡಿಸುತ್ತಾರಲ್ಲ ಅವರಲ್ಲಿ ಯಾರೂ ಬೀ ಈ ಇರಲಿ, ಎಸೆಲ್ಸಿ ಇರ್ಲಿ, ಐದನೇ ಕ್ಲಾಸು ಸಹ ಪಾಸಾಗಿರೋಲ್ಲ! ಇದು ನನ್ನನ್ನು ಆಗಾಗ ಕಾಡುವ ಪ್ರಶ್ನೆ. ಬರೀ ಐದನೇ ಕ್ಲಾಸು ಓದಿ ಇವರು ಇಂತಹ ಅತಿ ಚುರುಕು ಮತ್ತು ಮೇಧಾವಿತನ ತುಂಬಿದ ಕೆಲಸ ಮಾಡುತ್ತಾರಲ್ಲ, ಅಕಸ್ಮಾತ್ ಹೆಚ್ಚು ಓದಿದ್ದರೆ ಇನ್ನೂ ಎಂತಹ ದೊಡ್ಡ ಕೆಲಸ ಮಾಡುತ್ತಿದ್ದರೂ ಅಂತ!

ಚಾವಣಿ ಪ್ರಿಪರೇಶನ್ ಬಗ್ಗೆ ಬನ್ನಿ. ಚಾವಣಿ ಮೇಲೆ ಸಮತಟ್ಟಿನಲ್ಲಿ ಕಲಸಿದ ಮಣ್ಣು ಹರಡುತ್ತಿದ್ದರು. ಮತ್ತು ಕಂಬಿ ಕಟ್ಟಿ ಮೇಲೆ ಚಾಪೆಯ ಹಾಗೆ ಹಾಸುತ್ತಿದ್ದರು. ಕಂಬಿ ಸಹ ಅದರ ಗಾತ್ರಕ್ಕೆ ತಕ್ಕಂತೆ ಅಗಲ ಉದ್ದ ಹಬ್ಬುತ್ತಿತ್ತು. ನಮ್ಮ ಕಾಲದಲ್ಲಿ ಹತ್ತು, ಹನ್ನೆರೆಡು, ಹದಿನಾರು ಮಿಲೀಮಿಟರಿನ ಕಬ್ಬಿಣದ ಗುಂಡು ರಾಡ್‌ಗಳು ಉಪಯೋಗ ಆಗುತ್ತಿತ್ತು. ಮತ್ತು ಇನ್ನೂ ದಪ್ಪದ ರಾಡ್‌ಗಳು ಕಾನೋಪಿ ಮುಂತಾದೆಡೆ ಹಾಕುತ್ತಿದ್ದರು. ಹಣ ಹೆಚ್ಚು ಇದ್ದವರು ಅಡ್ಡ ಉದ್ದ ಕಂಬಿಗಳ ಅಂತರ ಕಡಿಮೆ ಇಟ್ಟರೆ ಹೆಚ್ಚಿನವರು ಸಾಲ ಪಾಲ ಮಾಡಿ ಮನೆ ಕಟ್ಟುವವರು ಈ ಅಂತರ ಹೆಚ್ಚಿಸುತ್ತಾ ಇದ್ದರು. ಈ ಎರಡನೇ ಗುಂಪಿಗೆ ನನ್ನ ರೀತಿಯ ಹೆಚ್ಚಿನವರು ಸೇರುತ್ತಾ ಇದ್ದದ್ದು. ಕಂಬಿ ಚಾಪೆ ಹಾಸುವಾಗ ಅಲ್ಲೇ ಬಾರ್ ಬೆಂಡರ್‌ಗಳಿಗೆ (ಕಬ್ಬಿಣದ ಚಾಪೆ ಹಾಕುವ ಕೆಲಸಗಾರರಿಗೆ ಬಾರ್ ಬೆಂಡರ್ ಅನ್ನುವ ಹೆಸರು ಆಗ. ಬಹುಶಃ ಈಗಲೂ ಅದೇ ಹೆಸರಿದೆಯೋ ಅಥವಾ ಪರಿಷ್ಕರಣೆ ಹೊಂದಿದೆಯೋ ತಿಳಿಯದು) ಮನೆ ಒಳಗೆ ಎಲ್ಲೆಲ್ಲಿ ಹುಕ್‌ಗಳು ಬೇಕು ಎಂದು ತಿಳಿಸಬೇಕು. ಹುಕ್ ಯಾಕೆ ಅಂದರೆ ಮುಂದೆ ತೊಟ್ಟಿಲು ಕಟ್ಟಲು, ಫ್ಯಾನ್ ನೇತು ಹಾಕಲು… ಹೀಗೆ. ಹೇಗಿದ್ದರೂ ನನ್ನ ಮನೆ, ನನ್ನ ಕಬ್ಬಿಣ, ನಾನು ಕೂಲಿ ಕೊಡ್ತಿರುವ ಬಾರ್ ಬೆಂಡರ್… ಈ ಹಮ್ಮಿನಲ್ಲಿ ಬೇಕಾದದ್ದಗಿಂತಲೂ ಹೆಚ್ಚು ಹುಕ್‌ಗಳನ್ನು ಹಾಕಿಸಿಕೊಳ್ಳುವ ಜನರಿದ್ದರು, ನನ್ನ ಹಾಗೆ!

ಮನೆ ಮುಗಿಸಿದ ನಂತರ ನನ್ನ ಗೆಳೆಯ ಗೋಪಾಲರಾಯ ಮನೆಗೆ ಬಂದಿದ್ದ. ಅವನು ತನ್ನ ಫ್ಯಾಕ್ಟರಿ ಕೆಲಸದ ಜತೆಗೆ ಕಬ್ಬಿಣದ ವಾರ್ಡ್ ರೋಬ್ ಮಾಡಿ ಮಾರುತ್ತಿದ್ದ. ಟಾರ್ ಡಬ್ಬಗಳನ್ನು ತಟ್ಟಿ ಸಮ ಮಾಡಿಕೊಂಡು ವಾರ್ಡ್ ರೋಬ್ ಅಂದರೆ ಬೀರು ಮಾಡಲು ಉಪಯೋಗಿಸುತ್ತಾನೆ ಎಂದು ತಮಾಷೆ ಮಾಡುತ್ತಿದ್ದೆವು. ಅದರಿಂದ ಅವನಿಗೆ ಟಾರ್ ಡಬ್ಬ ಯಾ ಸ್ಟೀಲ್ ಗೋಪಾಲ್ರಾಯ ಎನ್ನುವ ಅಡ್ಡ ಹೆಸರಿಟ್ಟು ಕರೆಯುತ್ತಿದ್ದೆವು. ಅವನು ಮನೆಗೆ ಬಂದ. ಮನೆ ಎಲ್ಲಾ ನೋಡಿದ. ಅವನಿಗೆ ಹುಕ್‌ನ ವಿಶೇಷತೆಯನ್ನು ಹಿಗ್ಗಿನಿಂದ ಬಣ್ಣಿಸಿದೆ. ನನ್ನ ವರ್ಣನೆ ಮುಗಿದ ನಂತರ ಅವನು ಹೇಳಿದ್ದು… ಗೋಪಿ ಇನ್ನೊಂದು ದೊಡ್ಡ ಅನುಕೂಲ ನೀನು ಲೆಕ್ಕ ಹಾಕಿಲ್ಲ…. ನಾನು ಏನು ಮರೆತೆ ಅಂತ ತಲೆ ಕೆರೆದುಕೊಳ್ಳುತ್ತಾ ಅವನ ಮುಖ ನೋಡಿದೆ… ಮನೆ ಸಾಲ ಹೆಚ್ಚಾಗಿ ತೀರಿಸಲು ತೊಂದರೆ ಆದರೆ ಅದೇ ಹುಕ್‌ನಿಂದಾ ನೇಣು ಹಾಕ್ಕೋಬಹುದು ಅಲ್ವಾ….? ನನ್ನ ಯೋಚನೆಗೆ ಒಂದು ಹೊಸಾ ಆಯಾಮ ಕೊಟ್ಟಿದ್ದ ಇವನು. ಬಹುಶಃ ಇದೇ ಕಾರಣ ಅಂತ ಕಾಣುತ್ತೆ, ಈಚಿನ ಮನೆಗಳಿಗೆ ಹುಕ್ ಇಡುವ ಸಂಪ್ರದಾಯವೇ ಇಲ್ಲ. ಮನೆ ಪೂರ್ತಿ ಮುಗಿದ ಮೇಲೆ ಅದೇನೋ ತಂದು ರೂಫ್‌ಗೆ ಕಂಡಿ ಮಾಡಿ ಹುಕ್ ಹಾಕ್ತಾರೆ ಅಲ್ಲಿಂದ ಉಯ್ಯಾಲೆ ಪಯ್ಯಾಲೆ ನೇತು ಬಿಡ್ತಾರೆ. ನನ್ನ ಮನೆ ಮಹಡಿ ಮೇಲೆ ಕಟ್ಟಿದಾಗ ಇದೇ ಪ್ರಯೋಗ ಮಾಡಿದರು, ನಮ್ಮ ಕಂಟ್ರಾಕ್ಟರ್. ನೂರಾ ಇಪ್ಪತ್ತು ಕೇಜಿಯ ನಾನು ಅಲ್ಲಿಂದ ನೇತು ಹಾಕಿದ್ದ ಉಯ್ಯಾಲೆ ಮೇಲೆ ಕೂತಿದ್ದೇನೆ. ಉಯ್ಯಾಲೆ ಹುಕ್ ತುಂಡಾಗಿ ಧೋಪ್ ಅಂತ ಬಿದ್ದೆ. ಅದೇನೋ ಲಕ್ ಅಂತಾರೆ ನೋಡಿ, ಮೇಜರ್ ಡ್ಯಾಮೇಜ್ ಆಗಲಿಲ್ಲ, ಸೊಂಟ ಮುರಿಯಲಿಲ್ಲ! ಕತೆ ರೆಕ್ಕೆ ಕಟ್ಟಿಕೊಂಡು ಹೇಗೆ ಎಲ್ಲೆಲ್ಲಿಗೋ ಹಾರುತ್ತೆ ನೋಡಿ….

ಕಂಬಿಯ ಚಾಪೆ ಹಾಸುವ ಮುನ್ನ ಎಲೆಕ್ಟ್ರಿಕ್ ಪೈಪು ಚಾವಣಿ ಮೇಲೆ ಹಬ್ಬಿಸುತ್ತಿದ್ದರು. ನಂತರ ಅದರ ಮೂಲಕ ವೈರ್‌ಗಳು ಬರುತ್ತಿತ್ತು. ಈ ಪೈಪ್ ಕೂಡಿಸುವ ಮೊದಲು ಮಣ್ಣಿನ ಚಾವಣಿ ತಯಾರಾಗುತ್ತಿತ್ತು ಅಂತ ಹೇಳಿದೆ ತಾನೇ? ಅದಕ್ಕೆ ಮೊದಲು ಈ ಚಾವಣಿಗೆ ಸಗಣಿ ನೀರು ಸವರಿ ಸಾರಿಸಿ ಇಡುತ್ತಿದ್ದರು. ರಂಗೋಲಿ ಮಾತ್ರ ಹಾಕುತ್ತಿರಲಿಲ್ಲ. ಸಗಣಿ ಸಾರಿಸಿದರೆ ನಂತರ ಮೌಲ್ಡಿಂಗ್ ಕೆಳಗಿನ ಮಣ್ಣು ಉದುರಿಸುವುದು ಸುಲಭ ಎಂದು ಈ ಯೋಚನೆ. ಈ ನಲವತ್ತು ವರ್ಷದಲ್ಲಿ ಭಾರೀ ಬದಲಾವಣೆ ಆಗಿವೆ. ಸಗಣಿ ಸಾರಿಸುವಿಕೆ ನಂತರ ಪೇಪರ್ ಹಾಕುತ್ತಿದ್ದರು. ನಂತರ ಪಾಲಿಥಿನ್ ಹಾಳೆ ಬಂತು, ಗೋಣಿ ತಟ್ಟು ಹಾಕುತ್ತಿದ್ದರು. ಸೇಲಂ ಕಡೆ ಹಳೇ ಸೀರೆ ತಂದು ಅದನ್ನು ಜೋಡಿಸಿ ಈ ಕೆಲಸಕ್ಕೆ ಉಪಯೋಗಿಸುತ್ತಿದ್ದರು. ನಂತರ ಈಚಲ ಚಾಪೆ ಬಂತು. ಈಚೆಗೆ ಒಂದು ಕಡೆ ಕಡ್ಡಿ ಚಾಪೆ ಹಾಸುವುದು ನೋಡಿದೆ, ಅದೂ ಹೊಸ ಚಾಪೆಗಳು ಕಡ್ಡಿಯಿಂದ ಮಾಡಿದವು. ಅದನ್ನು ನೋಡುತ್ತಾ ನೋಡುತ್ತಾ ನನ್ನ ಮನಸು ಅರವತ್ತು ವರ್ಷ ಹಿಂದೆ ಓಡಿತು. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಹೆಂಚಿನ ಸೂರಿನ ಅಡಿಯಲ್ಲಿ ಚಾಪೆ ಹಾಸಿ ತಣ್ಣಗೆ ಮಲಗಿ ಗೊರಕೆ ಹೊಡೆಯುತ್ತಿದ್ದ ಅಜ್ಜ ಕಣ್ಣ ಮುಂದೆ ಬಂದ!

ಪ್ಲಾಸ್ಟಿಕ್‌ಮಯ ಆಗುತ್ತಿರುವ ಈ ಗಜತ್ತು ಸಾರಿ ಈ ಜಗತ್ತು (ಪದದಲ್ಲಿ ಅಕ್ಷರಗಳನ್ನು ಉಲ್ಟಾ ಪಲ್ಟಾ ಮಾಡುವುದು ಡಿಮೆನ್ಶಿಯಾದ ಒಂದು ಸಿಂಪ್ಟಮ್ ಅಂತೆ. ನನಗೂ ಅದು ಶುರು ಆಗಿರಬಹುದಾ…?)

ಮುಂದೆ ಪ್ಲಾಸ್ಟಿಕ್ ಅನ್ನೇ ಇದಕ್ಕೂ ಅಂದರೆ ರೂಫ್ ಛಾವಣಿಗೆ ಅಳವಡಿಸಬಹುದೇನೋ..

ಈ ಹಿನ್ನೆಲೆ ಯಾಕೆ ಇಷ್ಟು ಬಿಡಿಸಿ ಬಿಡಿಸಿ ಹೇಳಿದೆ ಅಂದರೆ ಈಗ ಅದಕ್ಕೇ ಬಂದೆ..

ಸಗಣಿ ಸಾರಿಸಿ ಮಾರನೇ ದಿವಸ ಅದರ ಮೇಲೆ ಕಂಬಿ ಇರಿಸಬೇಕು ಇದು ಪೂರ್ವ ಯೋಜನೆ. ಕೆಲಸ ಮುಗಿಸಿ ಮೇಸ್ತ್ರಿ ಮಲ್ಲಯ್ಯ ಅವನ ಪಟಾಲಂ ಹೊರಟ್ರಾ.. ಸಗಣಿ ಸರಿಯಾಗಿ ಕಲಿಸಿ ಹಾಕಿದಾರ ಎಂದು ನೋಡುವ ಉಮೇದು ಹುಟ್ಟಬೇಕೇ? ಬೇಡದೆ ಇರುವ ಸಂಬಂಧ ಇಲ್ಲದಿರುವ ಕೆಲಸದಲ್ಲಿ ತಲೆ ತೂರಿಸುವುದು ನಮ್ಮೆಲ್ಲರ ಹುಟ್ಟು ಗುಣ. ಸಗಣಿ ಸರಿಯಾಗಿ ಹಾಕಿಲ್ಲ ಅಂದರೆ ಅದು ಅವನ ಹೆಡ್ ಏಕ್ ಅಂದರೆ ತಲೆ ನೋವು ಅಂತ ತೆಪ್ಪಗೆ ಇರಬಹುದಾಗಿತ್ತು. ಆದರೆ ಮನಸು ಮರ್ಕಟ ತಾನೇ. ಸೀದಾ ಮೆಟ್ಟಲು ಮೂಲಕ ಮೇಲೆ ಏರಿದೆ ಒಂದು ತುದಿಯಲ್ಲಿ ನಿಂತು ನೋಡಿದೆ. ವಿಶಾಲವಾದ ಅಂಗಳದ ಹಾಗಿರುವ ಸಗಣಿ ಸಾರಿಸಿದ ಚಾವಣಿ! ಇನ್ನೂ ಮುಂದೆ ಹೋಗು ಅಂತ ಮನಸು ಹುರಿದುಂಬಿಸಿತು. ನಾನೇನೂ ಸನ್ಯಾಸಿ ಅಲ್ಲ. ಮನಸಿನ ಆಜ್ಞೆ ಮೀರುವ ಹುಲು ಮಾನವ ನಾನಲ್ಲ! ಮುಂದೆ ನಡೆದೆ. ಇನ್ನೂ ಮುಂದೆ ಇನ್ನೂ ಮುಂದೆ, ನಡೆ ಮುಂದೆ, ನಡೆ ಮುಂದೆ, ನಡೆ ಮುಂದೆ ಎನ್ನುವ ರಾಜಕುಮಾರ್ ನಟನೆಯ ಮಾರ್ಗದರ್ಶಿ ಚಿತ್ರದ ಹಾಡು ತಲೆ ತುಂಬಾ ತುಂಬಿತ್ತ…. ಮುಂದೆ ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ಹಿಗ್ಗಿ ನಡೆ ಮುಂದೆ… ಮಾಡಿದೆನಾ..

ಚಾವಣಿ ಕೆಳಗೆ ಅಗಲಕ್ಕೆ ಕಟ್ಟಿದ್ದ ಕಬ್ಬಿಣದ ಕಂಬಿ ಚಾಪೆ, ಅದರ ಅಂಚಿನಲ್ಲಿ ಆಕಾಶ ನೋಡುತ್ತಾ ಇದ್ದ ಗಟ್ಟಿಯಾಗಿ ವೈರುಗಳಿಂದ ಬಿಗಿದು ಕಟ್ಟಿಸಿಕೊಂಡ ಹತ್ತು ಹನ್ನೆರೆಡು ಹದಿನಾರು ಮಿಮಿ ದಪ್ಪದ ರಾಡ್‌ಗಳು… ಅದರ ಮೇಲೆ ಬಿದ್ದರೆ ಅಂಗಾಲಿನ ಮೂಲಕ ತಲೆ ಯಿಂದ ಆಚೆ ಬರಬಹುದಾದ ಕಂಬಿಗಳ ಸಲಾಖೆಗಳು.. (ನಾನು ಲಾ ಓದಬೇಕಾದರೆ Jurisprudence ಅಂತ ಒಂದು ಸಬ್ಜೆಕ್ಟು. ಅದಕ್ಕೆ ಸಂಬಂಧಪಟ್ಟ ಒಂದು ಪುಸ್ತಕದಲ್ಲಿ ಒಂದು ಫೋಟೋ ಇತ್ತು. ಒಂದು ಮೂರು ನಾಲ್ಕು ವರ್ಷದ ಮಗು, ಅದಕ್ಕೆ ಅಂಡಿನಿಂದ ಕುತ್ತಿಗೆ ಪಕ್ಕದವರಿಗೂ ಹಾದು ಬಂದಿರುವ ಒಂದು ಕಬ್ಬಿಣದ ಸಲಾಕೆ…. ಮಗು ಆಟ ಆಡುತ್ತಾ ಬಿದ್ದಾಗ ಅದಕ್ಕೆ ಚುಚ್ಚಿದ ಸಲಾಕೆ ಹೀಗೆ ಆಚೆ ಬಂದಿತ್ತು. ಅದು ಜವಾಬ್ದಾರಿ ನಿಷ್ಕರ್ಷೆ ಬಗ್ಗೆ ಇದ್ದ ಲೇಖನಕ್ಕೆ ಪೂರಕವಾಗಿ ಈ ಫೋಟೋ ಇತ್ತು. ಎಷ್ಟೋ ವರ್ಷಗಳಾಗಿದ್ದರು ಈ ಫೋಟೋ ನನ್ನ ಮನಸಿನಲ್ಲಿ ಹಾಗೇ ಪ್ರಿಂಟ್ ಆಗಿಬಿಟ್ಟಿದೆ)

ಇಂದಿನವರೆಗೆ ಸುತ್ತ ಪರಿಸರ ಹೀಗಿರಬೇಕಾದರೆ ಚಾವಣಿಯ ಮೇಲೆ ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ಹಿಗ್ಗಿ ನಡೆ ಮುಂದೆ ಮಾಡುತ್ತಿದ್ದ ನಾನು ಎಲ್ಲೋ ಕಾಲು ಇಟ್ಟಿದ್ದೆ ಅಂತ ಕಾಣುತ್ತದೆ. ಏಕ್ ದಂ ಡಿವಿಜಿ ಪ್ರತ್ಯಕ್ಷ ಆದರು. ಪದ ಕುಸಿಯೆ ನೆಲವಿಹುದು… ಅಂತ ಅವರು ತಾನೇ ಹೇಳಿದ್ದು? ಕಾಲು ಕುಸಿಯಿತು ಮತ್ತು ನೆಲ ಸಹ ಇತ್ತು. ಆದರೆ ಅದು ಕೆಳಗೆ ಇದ್ದದ್ದು. ನಾನು ಸುಮಾರು ಹತ್ತು ಹನ್ನೆರೆಡು ಅಡಿ ಮೇಲಿಂದ ನೆಲಕ್ಕೆ ಕುಸಿದೆ..

ಅದೇನೋ ಗಟ್ಟಿ ಪಿಂಡ ಅಂತ ಕೆಲವು ಭಂಡ ಮಂತ್ರಿಗಳಿಗೆ ಹೇಳುತ್ತಾರೆ ನೋಡಿ. ನಾನು ಮಂತ್ರಿ ಪಂತ್ರಿ ಅಲ್ಲದೇ ಹೋದರೂ ಈ ಗಟ್ಟಿ ಪಿಂಡ ಗುಂಪಿಗೆ ಲೀಡರ್ ಆಗಲು ಸೂಕ್ತ ಆಗಿದ್ದೋನು. ಎಲ್ಲೆಲ್ಲೋ ಎದ್ದು ಬಿದ್ದು ಪ್ರಾಣ ಕಾಪಾಡಿಕೊಂಡು ಬಂದವನು. ಈಗಲೂ ಹಾಗೇ ಆಯ್ತು. ಕೆಳಗೆ ಬಿದ್ದವನು ಎಂತಹ ಜಾಗ ಆರಿಸಿಕೊಂಡಿದ್ದೆ ಅಂದರೆ ಅತ್ತ ಇತ್ತ ಕಂಬಿ ಕಟ್ಟಿದ ಚಾಪೆಯ ಹಾಗಿರುವ ಹಾಸಿಗೆ, ತಲೆಯಿಂದ ಮೂರು ಅಡಿ ದೂರದಲ್ಲಿ ಸೈಜ್ ಕಲ್ಲು, ಜಲ್ಲಿ ರಾಶಿ, ಕಾಲಿನಿಂದ ಎರಡು ಅಡಿ ದೂರದಲ್ಲಿ ಹಾರೆ ಪಿಕಾಸಿ ಗುದ್ದಲಿ….. ಬಿದ್ದ ಜಾಗದಿಂದ ಬಲಕ್ಕೆ ಎಡಕ್ಕೆ ಎರಡೇ ಅಡಿ ದೂರದಲ್ಲಿ ಸರ್ವೆ ಮರಗಳು… ಅಂದರೆ ಒಂದೇ ಒಂದು ಅಡಿ ಅತ್ತ ಇತ್ತ ಬಿದ್ದಿದ್ದರೂ ನಿಮಗೆ ಈ ಕತೆ ಕೇಳುವ ಸೌಭಾಗ್ಯ ಇರ್ತಿರಲಿಲ್ಲ; ಹೇಳುವ ಪ್ರಿವಿಲೇಜ್ ನನಗೂ ಇಟ್ಟಿರಲಿಲ್ಲ ಮತ್ತು ಮತ್ತು ಮತ್ತು ಈ ವಾಕ್ಯ ತುಂಬಾ ದುಃಖ ತುಂಬಿದ ಹೃದಯದಿಂದ ಹೇಳುತ್ತಾ ಇದ್ದೇನೆ, ನಿಮಗೆ ಕತೆ ಹೇಳುವ ಪುಣ್ಯ ಖಂಡಿತ ನನಗೆ ಇರ್ತಾ ಇರಲಿಲ್ಲ! ಆಗ ಫಾರ್ಟಿ ಇಯರ್ಸ್ ಬ್ಯಾಕ್, ನಾನು ನಾಸ್ತಿಕ ಮಹಾಪ್ರಭು, ವಿಚಾರವಾದಿ ಸಂಘದ ಆಕ್ಟಿವ್ ವರ್ಕರ್ ಮತ್ತು ಸಂಪೂರ್ಣ ನೂರಕ್ಕೆ ನೂರು, ನಿರೀಶ್ವರವಾದಿ, ನರಸಿಂಹಯ್ಯ ಅವರ ಶಿಷ್ಯ.

ನಾನು ರೂಫ್ ಮೇಲಿಂದ ಬಿದ್ದ ಕತೆ ಇದು…

ಜೀವ ಉಳಿಯಿತು, ಕೂದಲು ಕೊಂಕಲಿಲ್ಲ, ಒಂದು ಚೂರು ತರಚಿದ ಗಾಯವೂ ಸಹ ಇಲ್ಲ. ಎಲ್ಲಕ್ಕಿಂತಲೂ ಹೆಚ್ಚಾಗಿ ಮಲ್ಲಯ್ಯ ಮತ್ತು ಗ್ಯಾಂಗ್ ಮುಂದೆ ಆಗಬಹುದಾಗಿದ್ದ ದೊಡ್ಡ ಅವಮಾನದಿಂದ ತಪ್ಪಿಸಿಕೊಂಡಿದ್ದು. ಆಗ ನಿಜವಾಗಲೂ ದೇವರು ಮನಸಿಗೆ ಬರಲಿಲ್ಲ. ಇದರ ಬಗ್ಗೆ ಮುಂದೆ ಹೇಳುತ್ತೇನೆ.

ಅಂಗಾತ ಬಿದ್ದಿದ್ದೆ ಅಂತ ಹೇಳಿದೆ. ಕೂಲಿ ಅವರು ಹೊರಟು ಹೋಗಿದ್ದರು ಮತ್ತು ಸುತ್ತ ಮುತ್ತ ಯಾರೂ ಇಲ್ಲ.(ಈ ಪ್ರಸಂಗ ಸುಮಾರು ವರ್ಷಗಳ ನಂತರ ಮತ್ತೆ ಕಣ್ಮುಂದೆ ಕುಣಿದಾಡಿತು. ಅದು ಹೇಗೆ ಅಂದರೆ ಒಂದು ಪುಸ್ತಕ ಬಿಡುಗಡೆ ಸಮಾರಂಭ. ಅದರಲ್ಲಿ ವೇದಿಕೆ ಮೇಲೆ ಮತ್ತು ಮಿತ್ರಾ ಅವರು ಪ್ರಮುಖರು. ಅರಾಸೆ ಅವರ ಪಾರಮಾರ್ಥಿಕ ಪದಕೋಶ ಬಿಡುಗಡೆ ಅರಾ ಮಿತ್ರ ಅವರಿಂದ. ಅದಕ್ಕೆ ಹಿಂದಿನ ದಿನ ಅರಾಸೆ ಅವರನ್ನು ಬೆಂಗಳೂರು ಟ್ರಾಫಿಕ್ ಮಧ್ಯೆ ಸಂದಿಗೊಂದಿ ನುಗ್ಗಿಸಿ ಹಲವು ಬಸ್ ಹತ್ತಿ ಇಳಿಸಿ ನಮ್ಮ ಮನೆಗೆ ಕರೆದುಕೊಂಡು ಹೋಗಿದ್ದೆ. ಅರಾಸೆ ಬೆಂಗಳೂರಿಗೆ ಬಂದರೆ ನಾನು ಅವರ ಎಸ್ಕೋರ್ಟ್. ಸುಮಾರು ಸಲ ಅವರನ್ನು ಹೀಗೆ ಕರೆದೊಯ್ದಿದ್ದ ಅನುಭವ ನನ್ನದು.

ಮತ್ತೆ ಪುಸ್ತಕ ಬಿಡುಗಡೆಗೆ. ಅರಾಸೆ ತಮ್ಮ ಪುಸ್ತಕದ ಬಗ್ಗೆ ಮಾತಾಡಿ ಮಿತ್ರಾ ಅವರು ಮೈಕ್ ಮುಂದೆ ಬಂದರು. ಪುಸ್ತಕದಲ್ಲಿನ ಒಂದು ವ್ಯಾಖ್ಯಾನ ಅವರಿಗೆ ಸರಿ ಅಂತ ಅನಿಸಿರಲಿಲ್ಲ. ಅದರ ಬಗ್ಗೆ ಹೇಳಿದರು ತಾನೇ? ಅರಾಸೆ ಅದಕ್ಕೆ ವಿವರಣೆ ಕೊಡಲು ನಿಂತರು. ಇಬ್ಬರಿಗೂ ವೇದಿಕೆ ಮೇಲೆ ಚರ್ಚೆ ಶುರು ಆಯ್ತು. ಅದು ಹೇಗೋ ಸರಿಹೋಯ್ತು. ಮತ್ತೆ ಅರಾಸೆ ಮೈಕ್ ಹಿಡಿದರು. ಪುಸ್ತಕ ಹೊರಬರಲು ನೆರವಾದ ಎಲ್ಲರಿಗೂ ವಂದನೆ ಆಯ್ತಾ? ಒಂದು ಮರೆತೆ ಅಂತ ಇಡೀ ಸಭಾಂಗಣ ಅವಲೋಕಿಸಿದರು. ನೋಡಿ ಕೊನೇ ಸಾಲಲ್ಲಿ ಕೂತಿದ್ದಾನಲ್ಲಾ ಗೋಪಾಲಕೃಷ್ಣ ಅವನಿಲ್ಲ ಅಂದರೆ ನಾನು ಇವತ್ತು ಇಲ್ಲಿ ಇರ್ತಿರಲಿಲ್ಲ, ಬೆಂಗಳೂರಿನಲ್ಲಿ ಯಾವುದಾದರೂ ವಾಹನದ ಕೆಳಗೆ ಸಿಕ್ಕಿ ಪರಂಧಾಮ ಸೇರಬೇಕಿತ್ತು. ಅವನಿಗೆ ನಾನು ಋಣಿ…. ಈ ಧಾಟಿಯಲ್ಲಿ ಅವರ ಮಾತು ಮುಂದುವರೆದು ಊಟಕ್ಕೆ ಸಮಯ ಆಯ್ತು.

ಊಟದ ಸಾಲಿನಲ್ಲಿ ನಿಂತಿದ್ವಿ. ಮಿತ್ರಾ ಹಿಂದೆ ನಾನು ನಮ್ಮ ಗೆಳೆಯರು. ಮಿತ್ರಾ ನನ್ನ ಕಡೆ ತಿರುಗಿದರು. ಎಂತಹ ದೊಡ್ಡ ಅನಾಹುತ ಮಾಡಿದ್ದೀ ನೀನು… ಅಂದರು. ಪೆಚ್ಚು ಪೆಚ್ಚಾಗಿ ಅವರ ಮುಖ ನೋಡಿದೆ. ಅವನನ್ನ ಯಾಕೆ ಉಳಿಸಿದೆ……? ಹೀಗೆ ಮಾತು ಹರಿಯಿತು! ಮಿತ್ರಾ ಅವರ ಜೋಕು ಅರ್ಥ ಮಾಡಿಕೊಂಡು ನಕ್ಕೆ. ಅರಾಸೆ ನಗುವಿಗೆ ಜತೆಯಾದರು…!)

ಮತ್ತೆ ನಾನು ಬಿದ್ದ ಜಾಗಕ್ಕೆ…. ಸತ್ತಿಲ್ಲ ಅಂತ ಕನ್ಫರ್ಮ್ ಆಗಿತ್ತಲ್ಲ. ಮೇಲಕ್ಕೆ ಏಳಲು ಹೊರಳಿದೆನಾ.. ಎಡಗೈ ನನ್ನ ಮಾತು ಕೇಳಿಸಿಕೊಳ್ಳುತ್ತಿಲ್ಲ ಅಂತ ಖಾತ್ರಿ ಆಯಿತು. ಬಲಕ್ಕೆ ತಿರುಗಿ ಕಷ್ಟಪಟ್ಟು ಕಾಲಿನ ಮೇಲೆ ನಿಂತೆ. ಮೈ ಕೈ ಕೊಡವಿಕೊಂಡು ಬಟ್ಟೆಗೆ ಅಂಟಿದ್ದ ಮರಳು ಬಿಡಿಸಿದೆ. ಮೈ ನಿಗುರಿಸಿ ಸೈಕಲ್ ಹತ್ತಿರ ಬಂದೆ. ಎಡಗೈ ಪೂರ್ತಿ ಸ್ಟ್ರೈಕ್ ಮಾಡ್ತಾ ಇತ್ತು. ಬಲಗೈನಿಂದ ಸೈಕಲ್ ಬಲದ ಹ್ಯಾಂಡಲ್ ಹಿಡಿದುಕೊಂಡು ಮನೆಯತ್ತ ಹೆಜ್ಜೆ ಹಾಕಿದೆ. ಕುರುಕ್ಷೇತ್ರ ಯುದ್ಧದಲ್ಲಿ ಅಂದಿನ ಡ್ಯೂಟಿ ಮುಗಿಸಿ ಮನೆಗೆ ಹೋಗುವ ಸೈನಿಕ ನೆನಪಾದ. ಇಡೀ ಜೀವನ ಒಂದು ರೀತಿ ಮಹಾಭಾರತ ಅಲ್ವೇ ಅಂತ ಅನಿಸಿತು.

ಅಕಸ್ಮಾತ್ ಇವತ್ತು ನಾನು ಸತ್ತು ಹೋಗಿದ್ದರೆ, ಮನೆ ಮೌಲ್ಡಿoಗ್ ಆಗ್ತಾ ಇತ್ತಾ ಅನ್ನುವ ಯೋಚನೆ ಶುರು ಆಯಿತು. ಮನೆ ಸೇರಿದ ನಂತರ ಬಿದ್ದ ಕತೆ ಹೇಳಬೇಕೋ ಬೇಡವೋ ಎನ್ನುವ ಜಿಗ್ಞಾಸೆ. ಅಕಸ್ಮಾತ್ ಸತ್ತು ಹೋಗಿದ್ದರೆ ಸರಿ ರಾತ್ರಿಯಲ್ಲಿ ಸುದ್ದಿ ಹೇಗೆ ತಿಳಿಸುತ್ತಾ ಇದ್ದರು?.. ಹೀಗೆ ವಿಚಿತ್ರ ಯೋಚನೆಯಲ್ಲಿ ಮನೆ ಸೇರಿದೆ. ಮನೆ ಪಕ್ಕದಲ್ಲೇ ನಮ್ಮದೇ ಕಾರ್ಖಾನೆಯ ಮಹಿಳಾ ಉದ್ಯೋಗಿ ವಾಸ ಇದ್ದರು. ನನ್ನ ಹೆಂಡತಿ ಅವರಿಗೆ ಮುಖ ಕೊಟ್ಟು ಮಾತಾಡುತ್ತಿದ್ದಳು, ಅವಳ ಬೆನ್ನು ನನ್ನ ಕಡೆ. ಮಾತಿನ ಮಧ್ಯೆ ನನ್ನನ್ನ ನೋಡಿದರು.

ನಿಮ್ಮ ಯಜಮಾನ್ರು.. ಅಂತ ಹೇಳಿದವರು ಮಾತು ಅರ್ಧಕ್ಕೆ ನಿಲ್ಲಿಸಿದರು. ಏನಾಯ್ತು ಸಾರ್…. ಅಂತ ಹತ್ತಿರ ಬಂದರು! ನನಗೆ ಶಾಕ್ ಹೊಡೆದ ಹಾಗಾಯ್ತು! ಇಷ್ಟೂ ಆರಾಮವಾಗಿ ಬಂದಿದ್ದೀನಿ, ಇವರು ಯಾಕೆ ಹೀಗೆ ಕೇಳ್ತಿದ್ದಾರೆ ಅಂತ… ಹೆಂಡತಿ, ನನ್ನ ಹೆಂಡತಿ ರೌಂಡ್ ಅಬೌಟ್ ಟರ್ನ್ ಆದಳು….

ಅಯ್ಯೋ ಏನಿದು…. ಅಂತ ಅವಳೂ ಅನ್ನ ಬೇಕೇ…?

ಇಬ್ಬರೂ ಹತ್ತಿರ ಬಂದರು.

ಏನಾಯ್ತು ಯಾಕೆ ಹೀಗಿದ್ದೀರಿ ಯಾಕೆ ಇಷ್ಟು ಹೊತ್ತು…..? ಪ್ರಶ್ನೆಗಳ ಸುರಿಮಳೆ ಅಥವಾ ಜಡಿ ಮಳೆಯೋ ಏನೋ ಒಂದು ಅಪ್ಪಳಿಸಲು ಶುರು ಹಚ್ಕೋತಾ……..? ಮುಂದೇನಾಯ್ತು, ಏನು ಸಮಜಾಯಿಶಿ ಹೇಳಿದೆ ಅನ್ನುವುದನ್ನು ಮುಂದೆ ವಿವರವಾಗಿ ವರದಿಸುತ್ತೇನೆ, ಸರಿ ತಾನೇ. ಅಲ್ಲಿಯವರೆಗೆ ಕೊಂಚ ಕಾಯಿರಿ ಸರ, ಕಾಯಿರಿ ಮೇಡಂ…..

ಇನ್ನೂ ಉಂಟು…..

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ