Advertisement
ಕೂರಾಪುರಾಣ ೧೧: ಅವನಿದ್ದರೆ ಮನೆ ತುಂಬಿದಂತೆ, ಮನಸ್ಸು ಅರಳಿದಂತೆ…

ಕೂರಾಪುರಾಣ ೧೧: ಅವನಿದ್ದರೆ ಮನೆ ತುಂಬಿದಂತೆ, ಮನಸ್ಸು ಅರಳಿದಂತೆ…

ನಮ್ಮನ್ನು ಕಾಡುತ್ತಿದ್ದ ಒಂದು ಸಂಗತಿಯೆಂದರೆ ಇಡೀ ದಿನ ಅವರು ನಾಯಿಯನ್ನು ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದುದು. ಕೂರಾನಿಗೆ ಅದು ಅಭ್ಯಾಸವಿರದೇ ಇದ್ದುದ್ದರಿಂದ ಅವನು ಹೇಗೆ ವರ್ತಿಸುತ್ತಾನೋ ಎಂಬ ಚಿಂತೆ. ಅವರ ಮನೆಯಲ್ಲಿನ ವೈರ್, ಬೆಡಶೀಟ್, ಟವೆಲ್ ಎಲ್ಲವನ್ನು ಕಚ್ಚಿ ಹಾಕುವವನೇ.. ನಾವು ಭಾರತಕ್ಕೆ ಹಾರಿದ ಮೇಲೆ ಇಲ್ಲಿ ಅವನಿಗೆ ತೊಂದರೆಯಾದರೆ ಎಂದೆಲ್ಲ ಯೋಚನೆಗಳು ಬರತೊಡಗಿ ಮತ್ತಾರಾದರು ಆ ಆಪ್‌ನಲ್ಲಿ ನಮಗೆ ಹೊಂದುವಂತವರು ಸಿಗುತ್ತಾರೇನೋ ಎಂದು ನೋಡಹತ್ತಿದೆವು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಹನ್ನೊಂದನೆಯ ಕಂತು

ಭಾರತಕ್ಕೆ ಹೋಗಿ ಬಂದು ಆಗಲೇ ವರ್ಷದ ಮೇಲಾಗಿತ್ತು. ಹೋಗಬೇಕು ಎಂದು ಮನಸ್ಸು ತಹತಹಿಸುತ್ತಿದ್ದ ಹೊತ್ತಿನಲ್ಲಿಯೇ ತಂಗಿಯ ಮದುವೆ ನಿಶ್ಚಯವಾದ್ದರಿಂದ ನಾವು ಹೆಚ್ಚೇನು ಯೋಚಿಸದೇ ಫ್ಲೈಟ್ ಟಿಕೆಟ್ ಬುಕ್ ಮಾಡಿ ಬಿಟ್ಟೆವು. ನಮ್ಮೊಟ್ಟಿಗೆ ಬೆಸೆದುಕೊಂಡಿರುವ ಬಳ್ಳಿಗಳು ಇಲ್ಲದೇ ಇರುವುದರಿಂದ ಏನೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಅದು ನಮ್ಮಿಬ್ಬರ ಅನುಕೂಲ ಮತ್ತು ಅನಾನುಕೂಲಗಳನ್ನು ನೋಡಿಕೊಳ್ಳುವುದಷ್ಟೇ ಆಗಿತ್ತು. ಮುಖ್ಯವಾಗಿ ಬೇಕಾಗಿರುವುದು ಆಫೀಸಿನಲ್ಲಿ ರಜೆಗಳು. ಅದು ಸಿಕ್ಕಿ ಬಿಟ್ಟರೆ ಬಾಕಿಯದ್ದನ್ನೆಲ್ಲ ಹೇಗೋ ಅಡ್ಜಸ್ಟ್ ಮಾಡಿಕೊಳ್ಳಬಹುದಲ್ವ… ಆದರೆ ಈ ಬಾರಿ ಕೂರಾನಿಗೆ ಸಂಬಂಧಪಟ್ಟ ಸಮಸ್ಯೆಯೊಂದು ನಮ್ಮ ಮುಂದಿತ್ತು. ಅವನು ನಮ್ಮ ಜೊತೆಗಿದ್ದು ಇನ್ನು ವರ್ಷವೂ ಆಗಿರದೇ ಇದ್ದುದರಿಂದ ಇದೇ ಮೊದಲ ಬಾರಿಗೆ ಈ ಸಮಸ್ಯೆ ಎದುರಾದದ್ದು. ಅವನನ್ನು ಎಲ್ಲಿ ಬಿಟ್ಟು ಹೋಗಬೇಕೆಂಬ ಸಮಸ್ಯೆ!

ನಾವು ಹೋಗುತ್ತಿದ್ದುದು ಸುಮಾರು ಒಂದು ತಿಂಗಳ ಮಟ್ಟಿಗೆ ಆದ್ದರಿಂದ ಅಷ್ಟು ದಿನಗಳ ಕಾಲ ಸ್ನೇಹಿತರ ಮನೆಯಲ್ಲಿ ಬಿಡುವುದು ಅಸಾಧ್ಯದ ಮಾತು. ಒಂದೆರಡು ದಿನಗಳಾದರೆ ಅವರು ಹೇಗೋ ನೋಡಿಕೊಂಡಾರು. ಒಂದು ತಿಂಗಳ ಮಟ್ಟಿಗೆ ನೋಡಿಕೊಳ್ಳುವುದು ಕಷ್ಟವೇ ಅಲ್ಲವೇ.. ಅದೂ ಅಲ್ಲದೇ ನಮ್ಮ ಸ್ನೇಹಿತರಲ್ಲಿ ಯಾರ ಮನೆಯಲ್ಲಿಯು ನಾಯಿಯಿಲ್ಲವಾದ್ದರಿಂದ ಇಲ್ಲದ ತಾಪತ್ರಯಗಳಿಗೆ ಅವರನ್ನು ತಳ್ಳುವುದು ನಮಗಿಷ್ಟವಿರಲಿಲ್ಲ. ಬಹಳ ಸುಲಭವಾದ ಉಪಾಯವೆಂದರೆ ನಾಯಿಗಳ ಡೇ ಕೇರಿನಲ್ಲಿ ಬಿಡುವುದು. ಇಲ್ಲಿ ನಾಯಿಗಳಿಗು ಡೇ ಕೇರ್ ಸೌಲಭ್ಯವಿರುತ್ತದೆ. ಮನೆಗಳಲ್ಲಿ ನಾಯಿಯನ್ನು ಸಾಕಿದವರು ಆಫೀಸಿಗೆ ಹೋಗಿ ಕೆಲಸ ಮಾಡುವವರಾಗಿದ್ದರೆ ಬೆಳಿಗ್ಗೆ ತಾವು ಹೊರಡುವಾಗ ತಮ್ಮ ನಾಯಿಯನ್ನು ಡೇ ಕೇರಿನಲ್ಲಿ ಬಿಟ್ಟು ಸಂಜೆ ಆಫೀಸಿನಿಂದ ಮರಳುವಾಗ ಅದನ್ನು ತಮ್ಮ ಜೊತೆಗೆ ಕರೆ ತರುತ್ತಾರೆ. ಪ್ರತಿದಿನಕ್ಕೆ ಸುಮಾರು ಇಪ್ಪತ್ತೈದರಿಂದ ಐವತ್ತು ಡಾಲರಿನವರೆಗೆ ಚಾರ್ಜ್ ಮಾಡುತ್ತಾರೆ. ಇದಷ್ಟೇ ಅಲ್ಲ, ಒಂದು ವೇಳೆ ಬೆಳಿಗ್ಗೆ ಬಿಡುವ ಸಂಜೆಗೆ ಕರೆದೊಯ್ಯುವಷ್ಟು ಸಮಯ ಇಲ್ಲವೆಂದಲ್ಲಿ ಕೆಲವು ಡೇ ಕೇರಿನವರು ಬಸ್ಸುಗಳನ್ನು ಇಟ್ಟಿರುತ್ತಾರೆ. ಸಣ್ಣ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಹಾಗೆಯೇ ಈ ಬಸ್ಸುಗಳು ಪ್ರತಿದಿನ ಬೆಳಿಗ್ಗೆ ಬಂದು ನಾಯಿಗಳನ್ನು ಹತ್ತಿಸಿಕೊಂಡು ಸಂಜೆ ಬಿಟ್ಟು ಹೋಗುತ್ತವೆ. ತಮ್ಮ ಬಸ್ಸುಗಳಿಗಾಗಿ ಬಾಲ ಅಲ್ಲಾಡಿಸಿಕೊಂಡು ಕಾಯುವ ನಾಯಿಗಳ ವಿಡಿಯೋ ಹುಡುಕಿದರೆ ಹಲವಾರು ಸಿಕ್ಕುತ್ತವೆ.

ನಮಗೆ ಬೇಕಾಗಿದ್ದದ್ದು ಡೇ ಕೇರ್ ಅಲ್ಲ.. ಒಂದು ತಿಂಗಳ ಮಟ್ಟಿಗಿನ ವ್ಯವಸ್ಥೆ. ಕೂರಾ ಪಪ್ಪಿಯಿದ್ದಾಗ ಬಹಳ ಕಾಟ ಕೊಡುತ್ತಿದ್ದ ಎಂದು ಹೇಳಿದೆನಲ್ಲ. ಆಗ ಅವನನ್ನು ನೋಡಿಕೊಳ್ಳುವುದು ನನಗೆ ಕಷ್ಟವಾಗುತ್ತಿತ್ತು. ನನಗೆ ಮೀಟಿಂಗ್ ನಡೆದ ಹೊತ್ತಿನಲ್ಲಿಯೇ ಅಲ್ಲಿ ಇವನು ಕಾರ್ಪೆಟ್ ತಿನ್ನುತ್ತ ಕೂತಿರುತ್ತಿದ್ದ. ಎದ್ದು ಬರಲೂ ಆಗದ ಇತ್ತ ಅವನು ತಿನ್ನುವುದನ್ನು ನೋಡಿಯೂ ಸುಮ್ಮನೆ ಕೂಡಲಾಗದ ಪರಿಸ್ಥಿತಿ ನಂದು. ಸುಮ್ಮನೆ ಒಂದಾ ಮಾಡಲೆಂದು ಹಿತ್ತಲಿಗೆ ಹೋಗುವುದು… ಅಲ್ಲಿ ಕಡ್ಡಿ ಕಸ, ನಾನು ಬೆಳೆಸಿದ ಗಿಡ ಇತ್ಯಾದಿಗಳನ್ನು ತಿನ್ನುತ್ತ ಕೂರುವುದು. ಇವನು ನಾಯಿಯೋ ಸೊಪ್ಪು ತಿನ್ನುವ ಮೇಕೆಯೋ ಎಂದು ಅರ್ಥವಾಗುತ್ತಿರಲಿಲ್ಲ. ಬೈದು ಒಳಗೆ ಕರೆದುಕೊಂಡು ಬಂದು ಬಾಗಿಲು ಹಾಕಿದರೆ ಮತ್ತೆ ಬಾಗಿಲು ಕೆರೆಯುತ್ತ ಹೊರಗೆ ಹೋಗುತ್ತೇನೆ ಎನ್ನುವ ಹಟ. ಇಂತಹ ಎಲ್ಲ ಚೇಷ್ಟೆಗಳಿಂದಾಗಿ ಅವನನ್ನು ನೋಡಿಕೊಳ್ಳುವುದು ಕಷ್ಟವೆನ್ನಿಸಿ ಡೇ ಕೇರ್‌ಗೆ ಬಿಟ್ಟು ಬರುತ್ತಿದ್ದೆವು. ಅಲ್ಲಿ ಇನ್ನು ಅನೇಕ ನಾಯಿಗಳ ಜೊತೆಯಲ್ಲಿ ಅವನಿಗು ಸಮಯ ಕಳೆಯಲು ಅನುಕೂಲವಾಗಿತ್ತು. ಅದೇ ಡೇ ಕೇರಿನಲ್ಲಿಯೇ ಈಗ ಬೇಕಾಗಿದ್ದ ಒಂದು ತಿಂಗಳ ವಾಸ್ತವ್ಯದ ಬಗ್ಗೆ ವಿಚಾರಿಸಿದಾಗ ಅವರಲ್ಲಿ ರಾತ್ರಿ ಇಟ್ಟುಕೊಳ್ಳುವ ಸೌಲಭ್ಯವೂ ಇತ್ತು. ಹಲವರು ಪ್ರವಾಸಕ್ಕೆ ಹೋಗುವಾಗ ಒಂದೆರಡು ದಿನ ಅಥವಾ ಒಂದು ವಾರದ ಮಟ್ಟಿಗೆ ಬಿಟ್ಟು ಹೋಗುತ್ತಾರೆ ಎಂದು ಅವರು ಹೇಳಿದಾಗ ಏನೋ ಒಂದು ಆಯ್ಕೆ ಇದೆಯಲ್ಲ ಎಂದು ಸಮಾಧಾನವಾಯಿತು.

ಆದರೆ ದಿನದ ಲೆಕ್ಕದಲ್ಲಿ ಪ್ರತಿದಿನ ಮೂವತ್ತೈದು ಡಾಲರ್ ತೆಗೆದುಕೊಳ್ಳುತ್ತಿದ್ದ ಅವರು ಒಂದು ರಾತ್ರಿಗಾದರೆ ಐವತ್ತು ಡಾಲರ್ ಎಂದಾಗ ನಮ್ಮ ಹುಬ್ಬೇರಿದ್ದು ನಿಜ. ಒಂದು ದಿನಕ್ಕೆ ಐವತ್ತು, ತಿಂಗಳ ಲೆಕ್ಕದಲ್ಲಿ ಒಂದು ಸಾವಿರದ ಐನೂರು ಡಾಲರ್ ಆಯಿತು. ನಮ್ಮ ಒಬ್ಬರ ಫ್ಲೈಟ್ ಟಿಕೆಟ್ ಲೆಕ್ಕಕ್ಕೆ ಸಮ! ಸುಖಾಸುಮ್ಮನೆ ಇಷ್ಟೊಂದು ದುಡ್ಡು ಕೊಡಬೇಕೇ ಎಂದು ಹೊಟ್ಟೆ ಉರಿಯತೊಡಗಿತು. ಅವನಿಗೇನು ನಮ್ಮ ಮನೆಯ ಹಿತ್ತಲಿನಲ್ಲಿ ಬಿಟ್ಟರೂ ಹೊಟ್ಟೆಗೆ ಊಟ ಸಿಕ್ಕರೆ ಆರಾಮಾಗಿ ಓಡಾಡಿಕೊಂಡು ಇರಬಲ್ಲ, ಆಗಾಗ ನಮ್ಮ ಸ್ನೇಹಿತರು ಬಂದು ನೋಡಿಕೊಂಡು ಹೋದರಾಯಿತು ಎಂದೆಲ್ಲ ಯೋಚಿಸಿದೆವು. ಆದರೆ ಮನಸ್ಸು ಬರಲಿಲ್ಲ. ನಮ್ಮ ಸಲುವಾಗಿ ಕಾಯುತ್ತ ಆ ಕೂಸು ರಾತ್ರಿಗಳಲ್ಲಿ ಒಂಟಿಯಾಗಿ ಕಂಗೆಡುವುದು ಬೇಡ ಎನ್ನಿಸಿ ಮತ್ತೆ ಬೇರೆಲ್ಲಾದರು ಕಡಿಮೆ ಬೆಲೆಗೆ ಸಿಗಬಹುದೇ ಎಂದು ವಿಚಾರಿಸಹತ್ತಿದೆವು. ಹಾಗೆ ನೋಡಿದರೆ ನಮ್ಮ ಡೇ ಕೇರ್ ನವರದ್ದೇ ಕಡಿಮೆ ಬೆಲೆ. ಉಳಿದವರೆಲ್ಲ ದಿನಕ್ಕೆ ಎಂಬತ್ತು, ತೊಂಬತ್ತು, ನೂರು ಎಂದೆಲ್ಲ ಬೆಲೆ ಹಾಕಿದ್ದರು.

ಪಾರ್ಕಿನಲ್ಲಿ ಕೂರಾನಿಗೆ ಹಲವರು ಸ್ನೇಹಿತರಿದ್ದರು ಎಂದು ಹೇಳಿದೆನಲ್ಲ.. ಅವರೇನಾದರು ಅವನನ್ನು ನೋಡಿಕೊಳ್ಳಬಹುದೇ ಎಂಬ ಆಸೆಯೊಂದು ಚಿಗುರೊಡೆಯಿತು. ನಾವು ಭಾರತೀಯರು ಒಟ್ಟಿನಲ್ಲಿ ಏನೋ ಮಾಡಿ ಆದಷ್ಟು ಕಡಿಮೆ ದರದಲ್ಲಿ ಕೆಲಸ ಸಾಧಿಸುವುದರಲ್ಲಿ ಪ್ರವೀಣರಲ್ಲವೇ.. ಆದರೆ ಯಾರನ್ನು ನೇರವಾಗಿ ಕೇಳಲಾಗಲಿಲ್ಲ. ಒಂದು ತಿಂಗಳೆಂದರೆ ಕಡಿಮೆ ಸಮಯವಲ್ಲ; ಮತ್ತು ಇನ್ನೊಬ್ಬರ ನಾಯಿಯನ್ನು ನೋಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ನಮ್ಮ ನಾಯಿ ಪೋಷಣೆಯ ಅನುಭವದಿಂದ ಅರ್ಥವಾಗಿತ್ತು. ಕೆಲವರು ಒಂದಿಷ್ಟು ಪರಿಹಾರಗಳನ್ನು ಸೂಚಿಸಿದರಾದರೂ ಅದು ನಮಗೆ ಸರಿ ಬರಲಿಲ್ಲ. ನಾನು ಫೇಸ್‌ಬುಕ್ಕಿನ ಗ್ರೂಪುಗಳಲ್ಲಿ ಹಾಕಿ ಏನೋ ಪರಿಹಾರ ಸಿಗುತ್ತದೆ ಎಂದು ನೋಡುತ್ತಿದ್ದಾಗ ನಾಯಿಗಳಿಗೆಂದೇ ಇರುವ ಒಂದು ಆಪ್ ಬಗ್ಗೆ ಗೊತ್ತಾಯಿತು. ಬೇರೆಯವರ ನಾಯಿಗಳನ್ನು ನೋಡಿಕೊಳ್ಳುವ, ನಮ್ಮ ನಾಯಿಗಳಿಗೆ ಕೆಲ ದಿನ ಅಥವಾ ವಾರಗಳ ಮಟ್ಟಿಗೆ ವಾಸ್ತವ್ಯ ಹುಡುಕುವ ಆಪ್ ಅದಾಗಿತ್ತು. ನಾನು ಕೂಡಲೇ ರಿಜಿಸ್ಟರ್ ಮಾಡಿಕೊಂಡು ಕೂರಾನ ಹೆಸರು, ವಯಸ್ಸು, ವಿಳಾಸ, ಪ್ರೊಫೈಲ್ ಫೋಟೊ ಎಲ್ಲ ಹಾಕಿ ಅವನ ಬಗ್ಗೆ ಒಂದಿಷ್ಟು ಬರೆದಿದ್ದೆ. ಜೊತೆಗೆ ನಮಗೆ ಬೇಕಾಗಿದ್ದ ಒಂದು ತಿಂಗಳ ವಾಸ್ತವ್ಯದ ಬಗ್ಗೆ ವಿನಂತಿಯನ್ನು ಹಾಕಿಕೊಂಡಿದ್ದೆ.

ಬೇ ಏರಿಯಾಕ್ಕಷ್ಟೇ ಮೀಸಲಾಗಿದ್ದ ಆ ಆಪ್ ಅನ್ನು ನಮ್ಮ ಭಾರತೀಯನೇ ಸ್ಟಾರ್ಟ್ ಅಪ್ ಎಂದು ಶುರು ಮಾಡಿದ್ದು. ಅದಿನ್ನು ಶುರುವಾತಿನ ಹಂತದಲ್ಲಿದೆ. ಆದರೂ ಬಹಳಷ್ಟು ಜನರು ಅದನ್ನು ಉಪಯೋಗಿಸುತ್ತಿದ್ದರು. ನಾನು ಅದನ್ನು ತೆರೆದ ಕೂಡಲೆ ಒಂದು ದಿನದ ವಾಸ್ತವ್ಯ ಬೇಕಾಗಿದೆ, ನಾಲ್ಕು ದಿನಗಳ ವಾಸ್ತವ್ಯ ಬೇಕಾಗಿದೆ ಎಂಬೆಲ್ಲ ಪೋಸ್ಟ್‌ಗಳು ಮುದ್ದಾದ ನಾಯಿಚಿತ್ರಗಳ ಸಮೇತ ಕಾಣಿಸುತ್ತಿದ್ದವು. ಆಸಕ್ತಿಯಿದ್ದವರು ಅದಕ್ಕೆ ಕಮೆಂಟ್ ಮಾಡಿ ಪ್ಲೇ ಡೇಟ್ ಮಾಡೋಣ ಎಂದು ಉತ್ತರಿಸುತ್ತಿದ್ದರು. ಪ್ಲೇ ಡೇಟ್ ಎಂದರೆ ವಾಸ್ತವ್ಯ ಬೇಕಾಗಿರುವ ಮತ್ತು ವಾಸ್ತವ್ಯಕ್ಕೆ ಒಪ್ಪಿಕೊಂಡಿರುವ ಪೋಷಕರು ತಮ್ಮ ನಾಯಿಗಳೊಡನೆ ನಿಗದಿತ ಜಾಗದಲ್ಲಿ ಭೇಟಿಯಾಗುವುದು. ಅಲ್ಲಿ ನಾಯಿಗಳನ್ನು ಆಡಲು ಬಿಟ್ಟು ಅವುಗಳಿಗೆ ಪರಸ್ಪರ ಹೊಂದಿಕೆಯಾದರೆ ಮುಂದುವರೆಯುತ್ತಿದ್ದರು. ಹೀಗೆ ಅನೇಕ ನಾಯಿಗಳಿಗೆ ವಾಸ್ತವ್ಯ ನೀಡಿದವರ ಪ್ರೊಫೈಲಿಗೆ ಬ್ಯಾಡ್ಜ್ ಇತ್ಯಾದಿಗಳು ಕಾಣಿಸುತ್ತಿದ್ದವು.

ನಾನು ಪೋಸ್ಟ್ ಹಾಕಿದ ಮೇಲೆ ಒಂದು ವಾರವಾದರು ಯಾರು ಉತ್ತರಿಸಲಿಲ್ಲ. ನಾಲ್ಕೈದು ವಾರಗಳ ವಿನಂತಿಗಳನ್ನು ನಾನು ನಮ್ಮ ಭಾರತದವರ ಹೆಸರಿನಲ್ಲಿಯೇ ನೋಡುತ್ತಿದ್ದೆ. ಉಳಿದವರೆಲ್ಲ ಹೆಚ್ಚೆಂದರೆ ಒಂದು ವಾರದ ಮಟ್ಟಿಗೆ ವಿನಂತಿಸಿಕೊಂಡಿರುತ್ತಿದ್ದರು. ನಮ್ಮವರು ಭಾರತಕ್ಕೆ ಹೋಗುವುದು ಸಾಮಾನ್ಯವಾಗಿ ಒಂದು ತಿಂಗಳ ಮಟ್ಟಿಗೇ ಆದ್ದರಿಂದ ಅಂತಹವರ ಜೊತೆ ಸಂಧಾನ ಮಾಡಿಕೊಳ್ಳೋಣ ಎಂದು ಅಂತಹ ಪೋಸ್ಟುಗಳಿಗೆ ಉತ್ತರಿಸತೊಡಗಿದೆ. ನಾವು ಭಾರತಕ್ಕೆ ಹೋಗುವ ಮೊದಲು ಅಥವಾ ಹೋಗಿ ಬಂದರದ ದಿನಾಂಕಗಳಿದ್ದಲ್ಲಿ ಅವರಿಗೆ ಉತ್ತರಿಸಿ ನಾನು ನಿಮ್ಮ ನಾಯಿಯನ್ನು ನೋಡಿಕೊಳ್ಳುತ್ತೇನೆ, ನೀವು ನಮ್ಮದನ್ನು ನೋಡಿಕೊಳ್ಳಿ ಎಂದು ನೇರವಾಗಿ ಹೇಳುತ್ತಿದ್ದೆ. ಕೆಲ ದಿನಗಳ ನಂತರ ಅದರಲ್ಲಿ ಒಬ್ಬರು ಪ್ರತಿಕ್ರಿಯಿಸಿದರು. ಅವರು ಮೂರು ವಾರಗಳ ಕಾಲ ಹೋಗುವವರಿಂದ ತಮ್ಮ ನಾಯಿಗು ವಾಸ್ತವ್ಯ ನೋಡುತ್ತಿದ್ದರು.

ಸರಿ.. ಮಾತುಕತೆಯ ನಂತರ ನಮ್ಮ ಪ್ಲೇ ಡೇಟ್ ನಿಗದಿಯಾಯಿತು.

ಒಂದು ಶನಿವಾರ ಅವರು ಹೇಳಿದ ಪಾರ್ಕಿಗೆ ಕೂರಾನನ್ನು ಕರೆದುಕೊಂಡು ಹೋದೆವು. ಅಲ್ಲಿಗೆ ಬಂದ ನಾಯಿಯ ಹೆಸರು ಭಘೀರ. ಅವನಿಗೆ ಒಂಬತ್ತು ವರ್ಷಗಳು. ಆಕಾರದಲ್ಲಿ ದೈತ್ಯನಾಗಿದ್ದ ಭಘೀರ ಮೈಯ್ಯಲ್ಲೆಲ್ಲ ಕೂದಲು ಹೊಂದಿ ಅಲ್ಫಾ ನಾಯಿಯಂತಿದ್ದ. ಅವನ ಮುಂದೆ ನಮ್ಮ ಹತ್ತು ತಿಂಗಳ ಕೂರಾ ಬಾಲ ಅಲ್ಲಾಡಿಸುತ್ತ ಉತ್ತರಕುಮಾರನ ಧೈರ್ಯ ತೋರಿಸುತ್ತಿತ್ತು. ಎರಡು ನಾಯಿಗಳು ಚೆನ್ನಾಗಿಯೇ ಆಟವಾಡಿದ್ದನ್ನು ನೋಡಿ ನಮಗು ಸಮಾಧಾನ, ಅವರಿಗೂ! ಅವರಿಬ್ಬರು ಗಂಡ ಹೆಂಡತಿ ಮತ್ತು ಒಂದು ಪುಟ್ಟ ಮಗುವಿತ್ತು. ಇಬ್ಬರು ಕೆಲಸಕ್ಕೆ ಹೋಗುತ್ತಿದ್ದರಿಂದ ಭಘೀರನನ್ನು ಸಂಜೆಯವರೆಗೆ ಮನೆಯಲ್ಲಿಯೇ ಬಿಟ್ಟು ಬೀಗ ಹಾಕಿಕೊಂಡು ಹೋಗುತ್ತಿದ್ದರು. ಅದನ್ನು ಕೇಳಿದ ನಮಗೆ ಆಶ್ಚರ್ಯ! ನಾವು ಎಲ್ಲೇ ಹೋದರೂ ಕೂರಾನನ್ನು ಜೊತೆಗೆ ಕರೆದುಕೊಂಡು ಓಡಾಡುತ್ತಿದ್ದ ನಮಗೆ ಅದು ಅತ್ಯಂತ ಅಚ್ಚರಿಯ ಸಂಗತಿ. ಅವನು ಬಂದ ಮೇಲೆ ಸಿನಿಮಾಕ್ಕೂ ಹೋಗಿರಲಿಲ್ಲ ನಾವು! ಚಿಕ್ಕವಿದ್ದಾಗ ಹಾಗೆಯೇ ಆಗುತ್ತದೆ, ದೊಡ್ಡವಾದ ಮೇಲೆ ಎಲ್ಲ ನಾಯಿಗಳು ಸರಿ ಹೋಗುತ್ತವೆ ಎಂದು ತಮ್ಮ ಅನುಭವದಿಂದ ಹೇಳಿದರವರು.

ಸರಿ.. ಕೂರಾನನ್ನು ಅವರು ನೋಡಿಕೊಳ್ಳುವುದು, ಭಘೀರನನ್ನು ನಾವು ನೋಡಿಕೊಳ್ಳುವುದು ಎಂದಾಯಿತು. ಅವರ ಪ್ರವಾಸದ ಸಮಯ ನಮಗಿಂತ ಮೊದಲು ಇದ್ದುದ್ದರಿಂದ ಮೊದಲು ಭಘೀರ ನಮ್ಮಲ್ಲಿಗೆ ಬರುವವನಿದ್ದ. ಅವನ ಆಕಾರ ನೋಡಿ ಅವನನ್ನು ಕಾರಿನಲ್ಲಿ ಎಲ್ಲಿ ಕೂರಿಸುವುದು ಎಂದೆಲ್ಲ ಮಾತನಾಡಿದೆವು. ಆದರೆ ನಮ್ಮನ್ನು ಕಾಡುತ್ತಿದ್ದ ಒಂದು ಸಂಗತಿಯೆಂದರೆ ಇಡೀ ದಿನ ಅವರು ನಾಯಿಯನ್ನು ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದುದು. ಕೂರಾನಿಗೆ ಅದು ಅಭ್ಯಾಸವಿರದೇ ಇದ್ದುದ್ದರಿಂದ ಅವನು ಹೇಗೆ ವರ್ತಿಸುತ್ತಾನೋ ಎಂಬ ಚಿಂತೆ. ಅವರ ಮನೆಯಲ್ಲಿನ ವೈರ್, ಬೆಡಶೀಟ್, ಟವೆಲ್ ಎಲ್ಲವನ್ನು ಕಚ್ಚಿ ಹಾಕುವವನೇ.. ನಾವು ಭಾರತಕ್ಕೆ ಹಾರಿದ ಮೇಲೆ ಇಲ್ಲಿ ಅವನಿಗೆ ತೊಂದರೆಯಾದರೆ ಎಂದೆಲ್ಲ ಯೋಚನೆಗಳು ಬರತೊಡಗಿ ಮತ್ತಾರಾದರು ಆ ಆಪ್‌ನಲ್ಲಿ ನಮಗೆ ಹೊಂದುವಂತವರು ಸಿಗುತ್ತಾರೇನೋ ಎಂದು ನೋಡಹತ್ತಿದೆವು.

ಮತ್ತೊಂದು ಮೇಸೆಜ್ ಬಂದು ಮತ್ತೊಂದು ಪ್ಲೇ ಡೇಟ್ ಸೆಟ್ ಆಯಿತು. ಈ ಸಲ ಅವರಿಗೇನು ನಮ್ಮಿಂದ ವಾಸ್ತವ್ಯದ ಸಹಾಯ ಬೇಕಿರಲಿಲ್ಲ. ತಮ್ಮ ನಾಯಿಗೆ ಮತ್ತೊಂದು ನಾಯಿಯ ಸಂಗ ಸಿಕ್ಕರೆ ಸಾಕು, ಅದು ಸ್ನೇಹದಿಂದ ಆಟವಾಡಿದರೆ ಸಾಕು ಎಂದಾಕೆ ಹೇಳಿದ್ದಳು. ಮನೆಯಿಂದ ಮೂವತ್ತು ನಿಮಿಷದ ದಾರಿ. ಅವರದೇ ಕಮ್ಯುನಿಟಿಯ ಪಾರ್ಕೊಂದಕ್ಕೆ ಹೋದಾಗ ನಡು ವಯಸ್ಸಿನ ಸಣ್ಣ ದೇಹದ ಕೊರಿಯನ್ ಹೆಂಗಸೊಬ್ಬಳು ತನ್ನ ಮಧ್ಯಮ ಗಾತ್ರದ ನಾಯಿಯೊಡನೆ ಸಿಕ್ಕಳು. ಇನ್ನು ಪಾರ್ಕಿನ ಒಳಗೆ ಹೋಗಿರಲಿಲ್ಲ. ದಾರಿಯಲ್ಲಿ ಹೋಗುತ್ತಿರುವಾಗಲೇ ಆ ನಾಯಿ ಗುರ್ರ್ ಎಂದು ಸದ್ದು ಮಾಡುತ್ತ ಕೂರಾನ ಮೇಲೆ ಬಂದಿತು. ಆಕೆಗೆ ಅದನ್ನು ಸಂಭಾಳಿಸಲಿಕ್ಕೆ ಆಗದೇ ಕೈಯ್ಯಲ್ಲಿದ್ದ ಲೀಶ್ ಅನ್ನು ಬಿಟ್ಟು ಬಿಟ್ಟಾಗ ಅದು ಕೂರಾನ ಮೇಲೆ ಎಗರತೊಡಗಿ ನನಗೂ ಭಯವಾಗಿ ಸಮರ್ಥ ಕೂರಾನನ್ನು ಹಿಡಿದುಕೊಳ್ಳುವುದಲ್ಲದೇ ಆ ನಾಯಿಯನ್ನು ಸಹ ನಿಭಾಯಿಸಬೇಕಾಯಿತು. ಆ ನಾಯಿಗೆ ಯಾಕೆ ಇನ್ನೊಂದು ನಾಯಿಯ ಸ್ನೇಹಕ್ಕೆ ಈಕೆ ಹುಡುಕುತ್ತಿದ್ದಾಳೆ ಎಂದು ಆಗ ಅರ್ಥವಾಗಿತ್ತು! ಸ್ವಭಾವದಲ್ಲಿ ತುಸು ಮುಂಗೋಪಿಯಾಗಿದ್ದ ಆ ನಾಯಿ ತನ್ನ ಒಡತಿಯ ಬಗ್ಗೆ ಬಹಳ ಪೊಸೆಸಿವ್ ಇತ್ತು. ಕೂರಾ ಅವಳ ಹತ್ತಿರ ಹೋದರೆ ಸಾಕು ಗುರ್ರ್ ಎನ್ನುತ್ತಿತ್ತು. ಇದನ್ನೆಲ್ಲ ಕಣ್ಣಾರೆ ಕಂಡ ಮೇಲೆ ನಾವು ಕೂರಾನನ್ನು ಆ ನಾಯಿಯ ಜೊತೆಯಲ್ಲಿ ಬಿಡುವ ಮಾತೇ ಇರಲಿಲ್ಲ. ಮನಸ್ಸು ಕಹಿಯಾಗಿ ಬಿಟ್ಟಿದ್ದರಿಂದ ಇನ್ನು ಪಾರ್ಕಿನೊಳಗೆ ಹೋಗಿ ಪ್ರಯೋಜನವಿಲ್ಲ ಎನ್ನಿಸಿದರೂ ಅವಳಿಗೋಸ್ಕರ ನಡೆದೆವು. ಅಲ್ಲಿ ಹೋದಾಗ ಕೂರಾ ಮತ್ತು ಆ ನಾಯಿ ಜೊತೆಯಾಗಿ ಆಟವಾಡಲೇ ಇಲ್ಲ. ಆಕೆ ಸ್ವಲ್ಪ ಹೊತ್ತು ಮಾತನಾಡಿ ಎಲ್ಲಾ ನಾಯಿಗಳ ಜೊತೆ ಹೀಗೆಯೇ ಆಡುವ ತನ್ನ ನಾಯಿಯ ಬಗ್ಗೆ ಬೇಸರಿಸಿಕೊಂಡಳಾದರೂ ಹೆತ್ತವರ ಹೆಗ್ಗಣ ಎನ್ನುವ ಹಾಗೆ ಬಹಳ ಮಮತೆಯಿತ್ತು. ನಮಗೆ ಸಹಾಯ ಮಾಡಲಾಗದ್ದಕ್ಕೆ ನೊಂದುಕೊಂಡಳು ಪಾಪ.

ಆಮೇಲೆ ಮತ್ತಾರು ನಮಗೆ ಸಿಗದೇ, ಭಾರತಕ್ಕೆ ಹೊರಡುವ ದಿನ ಹತ್ತಿರವಾಗುತ್ತ ಬಂದಿದ್ದರಿಂದ ಭಘೀರನ ಜೊತೆಯಲ್ಲಿಯೇ ಇಟ್ಟರಾಯಿತು ಎಂದುಕೊಂಡೆವು. ಆದರೆ ಆಕೆ ಮೇಸೆಜುಗಳಿಗೆ ಉತ್ತರಿಸದೇ ಇದ್ದುದರಿಂದ ಬೇರೆ ಯಾರಾದರು ಸಿಕ್ಕಿರಬಹುದು ಎಂದೆನ್ನಿಸಿ ಹೀಗೆ ಬೇರೆಯವರ ಮನೆಯಲ್ಲಿ ಬಿಡುವ ವಿಚಾರವನ್ನೇ ಕೈ ಬಿಡಲಾಯಿತು. ಕೂರಾನ ಫ್ರೆಂಡ್ ಡಚ್ಚೆಸ್ ಹೋಗುತ್ತಿದ್ದ ಡೇ ಕೇರ್ ನವರ ಬೆಲೆ ಒಂದು ದಿನಕ್ಕೆ ಮೂವತ್ತೈದು ಎಂದು ಗೊತ್ತಾಯಿತು. ಅದು ಕಡಿಮೆಯೆನ್ನಿಸಿದರೂ ಪರಿಚಯವೇ ಇಲ್ಲದ ಆ ಜಾಗದಲ್ಲಿ ಒಂದು ತಿಂಗಳು ಬಿಡಲು ಮನಸ್ಸಾಗದೇ, ಹೋದರೆ ಹೋಗಲಿ ಎಂದು ಕೂರಾನಿಗೆ ಅವನು ಹೋಗುತ್ತಿದ್ದ ಡೇ ಕೇರ್ ನಲ್ಲಿಯೇ, ಅವನಿಗೆ ಕಂಫರ್ಟ್ ಆದ ಜಾಗದಲ್ಲಿಯೇ ಬಿಟ್ಟೆವು. ಅಷ್ಟೊತ್ತಿಗೆ ನಮಗೆ ದುಡ್ಡಿಗಿಂತ ಕೂರಾನ ಸುರಕ್ಷತೆ ಮುಖ್ಯ ಎಂದು ಅರಿವಾಗಿತ್ತು. ಅಷ್ಟು ದಿನಗಳ ಕಾಲ ಅವನನ್ನು ಬಿಟ್ಟಿರದ ನಮಗೆ ಭಾರತಕ್ಕೆ ಹೋದ ಮೇಲೂ ಅವನದೇ ಚಿಂತೆ. ಪ್ರೀತಿ ತುಂಬಿದ ಆ ಕಣ್ಣುಗಳನ್ನು ಯಾವಾಗ ನೋಡುತ್ತೇನೋ ಎನ್ನಿಸುವಂತಹ ಮಿಸ್ಸಿಂಗ್. ವಿಡಿಯೋ ಕಾಲ್ ಇತ್ಯಾದಿ ಮಾಡುವಂತಿಲ್ಲ ಎಂದಿದ್ದರು. ಆಗಾಗ ಫೋಟೊ ಕಳಿಸುತ್ತಿರಿ ಎಂದರೆ ಅದಕ್ಕು ಸಹ ಒಪ್ಪಿರಲಿಲ್ಲ. ಭಾರತಕ್ಕೆ ಹೋದ ಮಾರನೇ ದಿನವೇ ನಾನು ಅವರಿಗೆ ಕರೆ ಮಾಡಿ ಕೂರಾನ ಬಗ್ಗೆ, ಅವನು ಊಟ ತಿಂಡಿ ಮಾಡಿದನೋ ಇಲ್ಲವೋ ಎಂದು ವಿಚಾರಿಸಿದ್ದೆ. ‘ಹೋ.. ಹೀ ಇಸ್ ಆಲ್ ಫೈನ್’ ಎನ್ನುತ್ತಿದ್ದರು. ನಾಲ್ಕು ವಾರಗಳ ಸಮಯದಲ್ಲಿ ಒಂದೇ ಒಂದು ವಿಡಿಯೋ ಕಳಿಸಿದ್ದರು. ಅವರ ಅಂಗಳದಲ್ಲಿ ಓಡಾಡುತ್ತಿದ್ದ ಅವನನ್ನು ನೋಡಿ ಕಣ್ಣು ತುಂಬಿತ್ತು.

ಭಾರತದಿಂದ ಬಂದ ಕೂಡಲೇ ಆಯಾಸವನ್ನು ಲೆಕ್ಕಿಸದೇ ಅವನನ್ನು ಕರೆತರಲು ಓಡಿ ಹೋಗಿದ್ದೆವು. ನಾವು ಅಲ್ಲಿಗೆ ಬಿಟ್ಟು ಬಂದ ದಿನ ಪ್ರತಿಸಲದ ಹಾಗೆ ಸಂಜೆಯ ಹೊತ್ತಿಗೆ ಕರೆದುಕೊಂಡು ಹೋಗುತ್ತಾರೆ ಎಂದು ಕಾಯುತ್ತಿತ್ತೇನೋ ಕೂಸು. ಅದಾದ ಮೇಲೆ ದಿನಗಳು ಉರುಳಿದ ಹಾಗೆ ಅವನಿಗೆ ನಾವು ಬರುತ್ತೇವೋ ಇಲ್ಲವೋ ಎಂದೂ ಎನ್ನಿಸಿರಬಹುದು. ತನ್ನನ್ನು ಹೀಗೆ ಯಾರದೋ ಬಳಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಆ ಪುಟ್ಟ ಮೆದುಳಿನೊಳಗೆ ಅನ್ನಿಸಿ ಬೇಸರವೂ ಆಗಿರಬಹುದು. ಅಥವಾ ಅವನು ಪ್ರತಿ ಸಂಜೆ ಕಾಯುತ್ತಲೂ ಇರಬಹುದು.. ಅವನ ಮನಸ್ಸಿನಲ್ಲಿ ಏನೇನೆಲ್ಲ ನಡೆದಿತ್ತು ಯಾರಿಗ್ಗೊತ್ತು.. ನಾವು ಕರೆಯಲು ಹೋದ ದಿನ ಮಾತ್ರ ಅವನು ನಾವು ಬರುತ್ತೇವೆ ಎಂದೆಣೆಸಿರಲಿಕ್ಕಿಲ್ಲ. ನಮ್ಮನ್ನು ನೋಡಿದ ಕೂಡಲೇ ಅದೇನು ಸಂತೋಷ.. ಅದೇನು ಉತ್ಸಾಹ.. ಬಾಲ ಅಲ್ಲಾಡುವುದು ನಿಲ್ಲಲೇ ಇಲ್ಲ. ನಾವು ಅವನನ್ನು ಮಿಸ್ ಮಾಡಿಕೊಂಡದ್ದಕ್ಕಿಂತ ಹೆಚ್ಚಾಗಿ ಅವನು ನಮ್ಮನ್ನು ಮಿಸ್ ಮಾಡಿಕೊಂಡಿದ್ದ. ಅವನನ್ನು ಮನೆಗೆ ಕರೆದುಕೊಂಡು ಬಂದ ಕೂಡಲೇ ಮನೆ ಮತ್ತೆ ತುಂಬಿತು.

ಮುಂದುವರೆಯುತ್ತದೆ….

(ಹಿಂದಿನ ಕಂತು: ಬೆಳ್ಳಿ ಮೂಡಿತೋ ಕೋಳಿ ಕೂಗಿತೋ, ಫ್ರೆಂಡು ಊಳಿಟ್ಟಿತೋ..)

About The Author

ಸಂಜೋತಾ ಪುರೋಹಿತ

ಸಂಜೋತಾ ಪುರೋಹಿತ ಮೂಲತಃ ಧಾರವಾಡದವರು. ಸದ್ಯಕ್ಕೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ವಾಸವಾಗಿದ್ದಾರೆ. ಇಂಜಿನಿಯರ್ ಆಗಿರುವ ಇವರು ಕತೆಗಾರ್ತಿಯೂ ಹೌದು. ಇವರ ಪ್ರವಾಸದ ಅಂಕಣಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. 'ಸಂಜೀವಿನಿ' ಇವರ ಪ್ರಕಟಿತ ಕಾದಂಬರಿ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ