ಬೆನ್ನು ಸವರತೊಡಗಿದರೆ ಅಡ್ಡ ಬಿದ್ದು ಹೊಟ್ಟೆಯನ್ನು ಕೆರೆ ಎಂಬಂತೆ ಮುಂದಿನ ಎರಡು ಕಾಲುಗಳನ್ನು ಮಡಚಿದಾಗ ಮುದ್ದುಕ್ಕದೇ ಹೇಗೆ ಸಾಧ್ಯ? ಒಂದು ವೇಳೆ ನಾನು ಏಳುವುದು ತಡವಾದರೆ ನನ್ನ ಹಾಸಿಗೆಯ ಪಕ್ಕದಲ್ಲಿ ಬಂದು ಬಾಲ ಅಲ್ಲಾಡಿಸುತ್ತ ಕೂತು ಬಿಡುತ್ತಿದ್ದ. ಬೆಳಿಗ್ಗೆ ಎದ್ದ ಕೂಡಲೇ ಇವನದೇ ದಿವ್ಯದರ್ಶನ. ಈಗ ಹಾಗಿಲ್ಲ, ದೊಡ್ಡವನಾಗಿದ್ದಾನೆ. ಎದ್ದು ತನ್ನ ಕೆಲಸಗಳತ್ತ ಗಮನ ಕೊಡುತ್ತಾನೆ. ಆದರೆ ಆಗಾಗ ಮೈ ಕೆರೆಸಿಕೊಳ್ಳುವುದು, ಕಿವಿಗಳನ್ನು ಮಸಾಜ್ ಮಾಡಿಸಿಕೊಳ್ಳುವುದನ್ನು ಬಿಟ್ಟಿಲ್ಲ. ನಾವಷ್ಟೇ ಅಲ್ಲ, ನಮ್ಮ ಮನೆಗೆ ಯಾರೇ ಬಂದರೂ ಅವರು ಸಹ ಅದನ್ನೆಲ್ಲ ಮಾಡಲೇಬೇಕು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಹನ್ನೆರಡನೆಯ ಕಂತು
ಮನುಷ್ಯನಿಗೆ ಮಾತು ಕೊಟ್ಟು ಸಂವಹನದಿಂದಲೇ ಜಗತ್ತನ್ನು ಆಳುವಂತೆ ಮಾಡಿರುವ ಸೃಷ್ಟಿಕರ್ತ ನಾಯಿಗಳಿಗು ಮಾತು ಕೊಟ್ಟಿದ್ದರೆ ಅದೆಷ್ಟು ಚೆಂದವಿರುತ್ತಿತ್ತು ಎಂದು ಆಗಾಗ ಅನ್ನಿಸುತ್ತಿರುತ್ತದೆ. ನನ್ನ ನಾಯಿ ಮಾತನಾಡಲು ಶುರು ಮಾಡಿದರೆ ಬೇರೆ ಮನುಷ್ಯರೇ ಬೇಡ! ಈಗಲೇ ನಾನು ಮನುಷ್ಯರಿಂದ ದೂರವಾಗಿ ಕೂರಾ ಒಬ್ಬನಿದ್ದರೆ ಸಾಕು ಎನ್ನುವ ಮಟ್ಟಿಗೆ ಬಂದಿದ್ದೇನೆ. ಅವನನ್ನು ಮನೆಯಲ್ಲಿ ಬಿಟ್ಟು ಯಾರದ್ದೋ ಮನೆಗೆ, ಕಾರ್ಯಕ್ರಮಕ್ಕೆ, ಅಥವಾ ಪಾರ್ಟಿಗಳಿಗೆ ಹೋಗಬೇಕು ಎಂದಾದಲ್ಲಿ ಅವುಗಳನ್ನು ಕ್ಯಾನ್ಸಲ್ ಮಾಡಿ ಕೂರಾನ ಜೊತೆ ಇರಬಯಸುತ್ತೆನೆಯೇ ಹೊರತು ವೈಸ್ ವರ್ಸಾ ಎಂದಿಗೂ ಆಗುವುದಿಲ್ಲ. ನನಗೆ ನಿಧಾನವಾಗಿ ಇವನ ಮೇಲೆ ಅದೆಷ್ಟು ವ್ಯಾಮೋಹ ಹುಟ್ಟಿಕೊಳ್ಳುತ್ತಿದೆಯೆಂದರೆ ನನ್ನ ಗ್ಯಾಲರಿ ತುಂಬ ಇವನದ್ದೇ ಫೋಟೊಗಳು, ವಿಡಿಯೋಗಳು. ಅವನು ಕಣ್ಣಿಗೆ ಬೀಳದೇ ಇದ್ದರೆ ಸಮಾಧಾನವಿಲ್ಲ. ಮನೆಯಲ್ಲಿದ್ದಾಗ ಸದಾ ಹಿಂದೆಯಿಂದ ಹಿಂಬಾಲಿಸಿಕೊಂಡು ಬರುವ ಈ ಬಾಲಂಗೋಸಿ ಒಮ್ಮೊಮ್ಮೆ ಹಿಂದಿಂದೆ ಬರದೇ ಸುಮ್ಮನೆ ಮಲಗಿದರೆ ಏನೋ ಆಗಿದೆ ಅಂತಲೇ ಅರ್ಥ. ನಮಗಾದರೋ ಅನೇಕ ಪ್ರಪಂಚಗಳಿವೆ. ಕೆಲಸವೆಂಬ ಪ್ರಪಂಚ, ಸ್ನೇಹಿತರು, ಕುಟುಂಬ ಹೀಗೆ ಹಲವು. ಆದರೆ ಅವನ ಪ್ರಪಂಚ ನಾವಷ್ಟೇ. ಅವನ ಎರಡು ಕಣ್ಣುಗಳಲ್ಲಿ ಸದಾ ಕಾಣಿಸೋದು ನಾವಿಬ್ಬರು ಮಾತ್ರ. ಮುಂದೆ ಟಿವಿ ಓಡುತ್ತಿದ್ದರೂ ಅವನು ಇತ್ತ ಮುಖ ಮಾಡಿ ನಮ್ಮನ್ನೇ ನೋಡುತ್ತಿರುತ್ತಾನೆ. ಹಿಮಾವೃತ ಪರ್ವತ ಕಣ್ಮುಂದೆ ಇದ್ದರೂ ಅವನ ಕಣ್ಣುಗಳು ನಮ್ಮನ್ನು ದಿಟ್ಟಿಸುತ್ತಿರುತ್ತವೆ. ಹೀಗೆ ದಿನಗಟ್ಟಲೇ ಪ್ರವಾಹದಂತೆ ಹರಿಯುವ ಈ ಪ್ರೀತಿಯನ್ನು ಪಡೆಯಲು ಯಾವ ಜನ್ಮದಲ್ಲಿ ಯಾರ ಮನೆಯಲ್ಲಿ ನಾಯಿಯಾಗಿ ಹುಟ್ಟಿದ್ದೇವೋ ಎನ್ನಿಸುತ್ತಿರುತ್ತದೆ. ಕ್ಲಾಸಿಕ್ ಹಾಡು ‘ಭಾಗ್ಯವಂತರು ನಾವೇ ಭಾಗ್ಯವಂತರು..’ ತನ್ನಂತಾನೇ ಹಾಡಲು ಶುರುವಾದರೂ ಆಶ್ಚರ್ಯವಿಲ್ಲ.
ಕೂರಾ ಚಿಕ್ಕವನಿದ್ದಾಗ ಪ್ರತಿ ಬೆಳಗಿಗೆ ಅವನಿಗೆ ಭರ್ಜರಿಯಾಗಿ ಮುದ್ದು ಮಾಡಬೇಕಿತ್ತು. ಮನೆಯಲ್ಲಿ ಇರುವವರೆಲ್ಲರ ಹತ್ತಿರ ಹೋಗಿ ಬೆನ್ನು ತಾಗಿಸಿಕೊಂಡು ನಿಂತು ಬಿಡುತ್ತಿದ್ದ. ಅವನ ಬೆನ್ನು, ಮುಖ ಸವರಿ ಒಂದಿಷ್ಟು ಪ್ರೀತಿ ತೋರಿಸಿದರೆ ಮಾತ್ರ ಮುಂದಿನ ಕೆಲಸಗಳಿಗೆ ಮುಕ್ತಿ. ಬೆನ್ನು ಸವರತೊಡಗಿದರೆ ಅಡ್ಡ ಬಿದ್ದು ಹೊಟ್ಟೆಯನ್ನು ಕೆರೆ ಎಂಬಂತೆ ಮುಂದಿನ ಎರಡು ಕಾಲುಗಳನ್ನು ಮಡಚಿದಾಗ ಮುದ್ದುಕ್ಕದೇ ಹೇಗೆ ಸಾಧ್ಯ? ಒಂದು ವೇಳೆ ನಾನು ಏಳುವುದು ತಡವಾದರೆ ನನ್ನ ಹಾಸಿಗೆಯ ಪಕ್ಕದಲ್ಲಿ ಬಂದು ಬಾಲ ಅಲ್ಲಾಡಿಸುತ್ತ ಕೂತು ಬಿಡುತ್ತಿದ್ದ. ಬೆಳಿಗ್ಗೆ ಎದ್ದ ಕೂಡಲೇ ಇವನದೇ ದಿವ್ಯದರ್ಶನ. ಈಗ ಹಾಗಿಲ್ಲ, ದೊಡ್ಡವನಾಗಿದ್ದಾನೆ. ಎದ್ದು ತನ್ನ ಕೆಲಸಗಳತ್ತ ಗಮನ ಕೊಡುತ್ತಾನೆ. ಆದರೆ ಆಗಾಗ ಮೈ ಕೆರೆಸಿಕೊಳ್ಳುವುದು, ಕಿವಿಗಳನ್ನು ಮಸಾಜ್ ಮಾಡಿಸಿಕೊಳ್ಳುವುದನ್ನು ಬಿಟ್ಟಿಲ್ಲ. ನಾವಷ್ಟೇ ಅಲ್ಲ, ನಮ್ಮ ಮನೆಗೆ ಯಾರೇ ಬಂದರೂ ಅವರು ಸಹ ಅದನ್ನೆಲ್ಲ ಮಾಡಲೇಬೇಕು. ಅದೂ ಅವನಿಗೆ ಸಮಾಧಾನವಾಗುವವರೆಗೆ. ಇದೊಂದು ರೀತಿಯಲ್ಲಿ ನಿರ್ಮಲಾ ಸೀತಾರಾಮನ್ ಟ್ಯಾಕ್ಸ್ ತರಹ ಆಗಿ ಬಿಟ್ಟಿದೆ. ಬಂದವರೆಲ್ಲರು ತೆರಲೇಬೇಕು!
ನಾಯಿಗಳ ಮೇಲಿರುವ ಸಿನಿಮಾಗಳಾದ ಹ್ಯಾಚಿಕೋ (Hachi: A Dog’s Tale – 2009), ಎ ಡಾಗ್ಸ್ ಪರ್ಪಸ್ (A Dog’s Purpose – 2017), ಮ್ಯಾಕ್ಸ್ (Max – 2015), ಹೋಮವರ್ಡ್ ಬೌಂಡ್ (Homeward Bound: The Incredible Journey – 1993), ನಮ್ಮ ಕನ್ನಡದ ಚಾರ್ಲಿ ೭೭೭ ಮತ್ತು ಇನೇಕ ಸಿನಿಮಾಗಳು ನಾಯಿಗಳಿಗಿರುವ ಸ್ವಾಮಿನಿಷ್ಟೆ, ನಿಸ್ವಾರ್ಥ ಪ್ರೇಮ, ಶುದ್ಧ ಅಂತಃಕರಣದ ಸುತ್ತಲೇ ಸುತ್ತುತ್ತವೆ. ಹ್ಯಾಚಿಕೋ ಸಿನಿಮಾದ ಬಗ್ಗೆ ಗೊತ್ತಿಲ್ಲದೇ ಇರುವವರೇ ಇಲ್ಲ ಎನ್ನಿಸುತ್ತದೆ. ನಿಜವಾಗಿಯೂ ನಡೆದ ಘಟನೆಯಿದು. ಹ್ಯಾಚಿ ಎಂಬ ನಾಯಿ ತನ್ನ ಒಡೆಯನನ್ನು ಪ್ರತಿದಿನವು ಅವನು ಕೆಲಸಕ್ಕೆಂದು ಹೊರಟಾಗ ಟ್ರೇನ್ ಸ್ಟೇಷನ್ನಿನವರೆಗೆ ಬಂದು ಬಿಟ್ಟು ಹೋಗುತ್ತದೆ. ಮತ್ತೆ ಸಂಜೆ ಅವನು ಕೆಲಸ ಮುಗಿಸಿ ಬರುವ ಟ್ರೇನ್ ಸಮಯಕ್ಕೆ ಸ್ಟೇಷನ್ನಿಗೆ ಬಂದು ಕಾಯುತ್ತಿರುತ್ತದೆ. ಹೀಗೆ ದಿನಕ್ಕೆ ಎರಡು ಸಲ ಬರುವ ಈ ನಾಯಿ ಸ್ಟೇಷನ್ನಿನಲ್ಲಿರುವ ಕೆಲಸಗಾರರಿಗೆ, ಸ್ಟೇಷನ್ನಿನ ಮುಂದೆ ಇರುವ ಅಂಗಡಿ ಮುಗ್ಗಟ್ಟುಗಳ ಒಡೆಯರಿಗೆ, ಪ್ರತಿದಿನವು ಅಲ್ಲಿಂದ ಓಡಾಡುವ ಯಾತ್ರಿಕರೆಲ್ಲರಿಗು ಹೆಸರು ಹಿಡಿದು ಕರೆಯುವಷ್ಟು ಪರಿಚಯ. ಆದರೆ ಒಂದು ದಿನ ಬೆಳಿಗ್ಗೆ ಹೋದ ಒಡೆಯ ಸಂಜೆಯ ಟ್ರೇನಿಗೆ ವಾಪಸ್ಸಾಗುವುದೇ ಇಲ್ಲ. ಕೆಲಸದಲ್ಲಿರುವಾಗಲೇ ಆತನಿಗೆ ಹೃದಯಾಘಾತವಾಗಿ ಪ್ರಾಣ ಬಿಡುತ್ತಾನೆ. ಆದರೆ ಇದನ್ನು ಹ್ಯಾಚಿಗೆ ತಿಳಿಸಿ ಹೇಳುವುದು ಹೇಗೆ? ಅದರ ತಲೆಯಲ್ಲಿ ಸಂಜೆಯ ಟ್ರೇನಿಗೆ ತನ್ನ ಒಡೆಯ ವಾಪಸ್ಸಾಗಬೇಕು ಅಷ್ಟೇ. ಅದರಂತೆ ಇಡೀ ರಾತ್ರಿ ಅಲ್ಲಿಯೇ ಕಾಯುತ್ತದೆ. ಹಲವಾರು ದಿನಗಳು ಊಟ, ನೀರಿನ ಪರಿವೆಯಿಲ್ಲದೇ ಕಣ್ಣುಗಳನ್ನು ಸ್ಟೇಷನ್ನಿನ ಬಾಗಿಲಿನ ಮೇಲೆಯೇ ದಿಟ್ಟಿಸುತ್ತ ಯಾವ ಕ್ಷಣದಲ್ಲಾದರು ತನ್ನೊಡೆಯ ಬರಬಹುದು ಎಂದು ಕಾಯುವ ಹ್ಯಾಚಿಯನ್ನು ಒಡೆಯನ ಹೆಂಡತಿ ಮನೆಗೆ ಕರೆದುಕೊಂಡು ಹೋಗಲು ಯತ್ನಿಸಿದರೂ, ಬೇರೆ ಮನೆಗೆ ಕಳಿಸಿದರೂ ಅದು ಹೇಗೋ ಸ್ಟೇಷನ್ನಿನ ದಾರಿ ಪತ್ತೆ ಮಾಡಿ ಓಡುವುದೇ! ತನ್ನ ಪ್ರಾಣ ಇರುವವರೆಗು ಆ ಸ್ಟೇಷನ್ನಿನ ಮುಂದೆಯೇ ಕಾಯುತ್ತ ಕೂರುವ ಹ್ಯಾಚಿಯನ್ನು ನೋಡಿದರೆ ಗಂಟಲುಬ್ಬಿ ಕಣ್ಣು ಹನಿಯಾಗುತ್ತದೆ. ಸಮರ್ಥ ಆಫೀಸಿಗೆ ಹೋದಾಗಲೆಲ್ಲ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಬಾಗಿಲಿನ ಬಳಿಯೇ ಕೂತು ಕಾಯುವ ಕೂರಾನನ್ನು ನೋಡಿ ನಮ್ಮ ಮನೆಗೂ ಹ್ಯಾಚಿ ಅವತಾರವೆತ್ತಿ ಬಂದಿದೆ ಎನ್ನಿಸುತ್ತದೆ.
ಎ ಡಾಗ್ಸ್ ಪರ್ಪಸ್ ಮತ್ತೊಂದು ಹೃದಯ ಮಿಡಿಯುವಂತಹ ನಾಯಿಯ ಸಿನಿಮಾ. ಒಂದೇ ಒಂದು ಜನ್ಮದಲ್ಲಷ್ಟೇ ತನ್ನ ಒಡೆಯನಿಗಾಗಿ ತಹತಹಿಸುವುದಿಲ್ಲ ಈ ನಾಯಿ. ಪ್ರತಿ ಸಲ ಹೊಸ ಜನ್ಮ ಎತ್ತಿದಾಗಲೂ ಅದು ಹೇಗೋ ತನ್ನೊಡೆಯನನ್ನು ಹುಡುಕುವ ಕೆಲಸ ಮಾಡುತ್ತದೆ. ಸಿನಿಮಾದ ಹೆಸರೇ ಹೇಳುವಂತೆ ನಾಯಿಗಳಿಗಿರುವ ಧ್ಯೇಯೋದ್ದೇಶವೆಂದರೆ ತನ್ನ ಒಡೆಯನಿಗಾಗಿಯೇ ಬದುಕುವುದು. ಮ್ಯಾಕ್ಸ್ ಸಿನಿಮಾದಲ್ಲಿ ಮಿಲಿಟರಿಯಲ್ಲಿ ಕೆಲಸ ಮಾಡುವವನು ಸಾಕಿದ ನಾಯಿ ಅವನ ಸಾವಿನ ನಂತರ ಅವನ ಮನೆಯವರ ಪಾಲಾಗುತ್ತದೆ. ಆ ಸಾವು ಸ್ವಾಭಾವಿಕವಾದದ್ದಲ್ಲ ಎಂದು ತನ್ನದೇ ಪರಿಭಾಷೆಯಲ್ಲಿ ಹೇಳಿ ಅದರ ಒಳಗುಟ್ಟು ಬಗೆಯಲು ಕಾರಣವಾಗುವ ಮ್ಯಾಕ್ಸ್ ಹೆಸರಿನ ನಾಯಿ ಇಂತಹ ದುರ್ದೈವದ ಸಮಯದಲ್ಲಿ ಮನೆಯವರಿಗೆ ಕೊಡುವ ಎಮೋಷನಲ್ ಸಪೋರ್ಟ್ ನೋಡಿದರೆ ಮನಸ್ಸು ತುಂಬಿ ಬರುತ್ತದೆ. ಚಾರ್ಲಿ ಸಿನಿಮಾ ನೋಡದೇ ಇರುವರಾರು? ಈ ಸಿನಿಮಾ ಬಂದ ಮೇಲೆ ಅದೆಷ್ಟೋ ಜನ ನಾಯಿಯನ್ನು ಸಾಕತೊಡಗಿ ಅದಕ್ಕೆ ಚಾರ್ಲಿ ಎಂದು ಹೆಸರಿಟ್ಟಿರುವ ಅನೇಕ ಕತೆಗಳಿವೆ. ನಾನು ಚಾರ್ಲಿಯ ಧರ್ಮನಂತೆಯೇ! ಮೊದಲು ನಾಯಿಯೆಂದರೆ ದೂರ ಓಡುತ್ತಿದ್ದ, ಅದೊಂದು ನಾಯಿ ಎಂಬಂತೆ ವರ್ತಿಸುತ್ತಿದ್ದವಳು ಇವತ್ತು ನನ್ನ ಕೂರಾನಿಗಾಗಿ ಏನನ್ನು ಸಹ ಮಾಡಲು ಸಿದ್ಧ. ಅದು ನಾಯಿ ಪ್ರೀತಿಗಿರುವ ಶಕ್ತಿ.
ಆದರೆ ನಾಯಿಗಳನ್ನು ಸಾಕುವುದು ಸುಲಭದ ಕೆಲಸವೇನಲ್ಲ. ಎಷ್ಟೋ ಜನ ಒಳ್ಳೆಯ ಉದ್ದೇಶದಿಂದ ನಾಯಿಯನ್ನು ಮನೆಗೆ ಕರೆತಂದರೂ ಆಮೇಲೆ ಅದರ ಪೋಷಣೆ ಮಾಡಲಾಗದೇ ಅರ್ಧಕ್ಕೆ ಬಿಡುವ ಕಹಿ ದೃಶ್ಯಗಳು ಇನ್ಸ್ಟಾಗ್ರಾಮಿನಲ್ಲಿ ಕಾಣಿಸುತ್ತಿರುತ್ತವೆ. ಆ ನಾಯಿಗಳೋ ತಮ್ಮ ಒಡೆಯರಿಗಾಗಿ ಕಾಯುತ್ತ ಕಣ್ಣುಗಳಲ್ಲೇ ಜೀವ ತುಂಬಿಕೊಂಡು ಮುದುಡಿರುವುದನ್ನು ನೋಡಿದರೆ ಹೃದಯ ಹಿಂಡಿದಂತಾಗುತ್ತದೆ. ಎಷ್ಟು ಪ್ರೀತಿ ದಕ್ಕುವುದೋ ಅದರ ಅರ್ಧದಷ್ಟನ್ನಾದರೂ ಕೊಡಲೇಬೇಕು. ಮೊದಲಿನ ಹಾಗೆ ತುತ್ತು ಅನ್ನ, ನೀರು ಕೊಟ್ಟರೆ ಮನೆಯ ಮುಂದೆ ಬಿದ್ದುಕೊಂಡಿರುತ್ತದೆ ಎನ್ನುವ ಕಾಲವಲ್ಲ ಇದು. ಮನೆಯೊಳಗೆ, ಮನದೊಳಗೆ ಕಾಲಿಟ್ಟಿರುವ ಈ ಜೀವಿಗಳು ಹೆಚ್ಚಾಗಿ ಅವಲಂಬಿಸಿಕೊಂಡಿರುತ್ತವೆ. ಅವುಗಳು ದೀರ್ಘ ಕಾಲ ಬಾಳಬೇಕೆಂದರೆ ಅವುಗಳಿಗೆಂದೇ ಮೀಸಲಿರುವ ಆಹಾರ ಕೊಡಬೇಕು. ನಾವು ತಿನ್ನುವ ಮೊಸರನ್ನ, ಚಪಾತಿ ಕೊಟ್ಟರೂ ಅವು ಜೊಲ್ಲು ಸೋರಿಸಿಕೊಂಡೇ ತಿನ್ನುತ್ತವಾದರೂ ಹಾಲಿನ ಪದಾರ್ಥ, ಗೋಧಿ ಹಿಟ್ಟು ಇತ್ಯಾದಿಗಳಿಂದ ಅವುಗಳ ಪಚನಶಕ್ತಿ ಕುಂಠಿತವಾಗುತ್ತದೆ. ಇದರಿಂದ ಪಿತ್ತ, ಮೂತ್ರಕೋಶದ ಸಮಸ್ಯೆಗಳು ಹುಟ್ಟಿ ಅವುಗಳು ನರಳುವಂತಾಗಬಹುದು. ಕಾಲಕಾಲಕ್ಕೆ ವ್ಯಾಕ್ಸಿನ್ ಕೊಡಿಸಬೇಕು. ಕೂದಲೊಳಗೆ ನುಸಿ, ಹೇನು ಇತ್ಯಾದಿಗಳು ಸೇರಿಕೊಳ್ಳದಂತೆ ಪ್ರತಿದಿನವೂ ಬ್ರಶ್ ಮಾಡುತ್ತ ಸ್ವಚ್ಛವಾಗಿಟ್ಟಿರಬೇಕು. ಹೀಗೆ ಮಾಡಲು ಆಗದವರು ನಾಯಿಗಳನ್ನು ಸಾಕದೇ ಇರುವುದು ಒಳಿತು.

ಸಂಜೋತಾ ಪುರೋಹಿತ ಮೂಲತಃ ಧಾರವಾಡದವರು. ಸದ್ಯಕ್ಕೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ವಾಸವಾಗಿದ್ದಾರೆ. ಇಂಜಿನಿಯರ್ ಆಗಿರುವ ಇವರು ಕತೆಗಾರ್ತಿಯೂ ಹೌದು. ಇವರ ಪ್ರವಾಸದ ಅಂಕಣಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ‘ಸಂಜೀವಿನಿ’ ಇವರ ಪ್ರಕಟಿತ ಕಾದಂಬರಿ.