ನಾಯಿಗಳ ಸಲೂನಿನಲ್ಲಿ ಉಗುರುಗಳನ್ನು ಕತ್ತರಿಸುತ್ತಾರೆಂದು ಗೊತ್ತಾಗಿ ಅಲ್ಲಿಗೆ ಕರೆದುಕೊಂಡು ಹೋದೆವು. ಅಲ್ಲಿ ಅವನ ಯಾವ ತಂತ್ರಗಳು ನಡೆಯದೇ, ಆಕೆಗಿರುವ ಅನುಭವದಿಂದ ಉಗುರುಗಳನ್ನು ಕತ್ತರಿಸಿಯೇ ತೀರುತ್ತಾಳೆ ಎಂದು ನಾವು ಮನಸ್ಸಿನಲ್ಲಿ ಮಂಡಿಗೆ ಮೆಲ್ಲುತ್ತ ಹೊರಗೆ ಕಾಯುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದ ಆಕೆಯನ್ನು ನೋಡಿ ಬೆಟ್ಟದ ಚಾಮುಂಡಿದೇವಿಯೇ ದರ್ಶನ ಕೊಟ್ಟಂತಾಯಿತು. ಆದರೆ.. ಅವಳು ಸಹ ತನಗೆ ಆಗಲಿಲ್ಲ ಎಂದು ಕೂರಾನನ್ನು ಕರೆತಂದು ಕೊಟ್ಟು ಬಿಟ್ಟಳು!
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಆರನೆಯ ಕಂತು

ಕೂರಾ ಸ್ವಭಾವದಲ್ಲಿ ಸೂಕ್ಷ್ಮ. ಅದರ ಜೊತೆಗೆ ಪುಕ್ಕಲುತನವೂ ಇದೆ. ಸಣ್ಣವನಿದ್ದಾಗ ಅಡುಗೆ ಮನೆಯಲ್ಲಿ ಕುಕ್ಕರ್ ವಿಷಲ್ ಕೂಗಿದರೆ ಓಡಿ ಹೋಗುತ್ತಿದ್ದ. ಅವನು ಮನೆಯನ್ನು ಅಥವಾ ನಮ್ಮನ್ನು ಕಾಯುವ ಬದಲಾಗಿ ಅವನಿಗೆ ಭಯವಾಗಬಾರದು ಎಂದು ನಾವು ಅವನನ್ನು ಕಾಯುವುದೇ ಹೆಚ್ಚಾಗಿತ್ತು. ಅದರಲ್ಲೂ ಅವನು ಮಲಗಿದ್ದಾಗ ಅವನಿಗೆ ಎಚ್ಚರವಾಗದಿರಲಿ ಎಂದು ನಾನು ಮೆಲ್ಲನೆ ಹೆಜ್ಜೆಗಳನ್ನಿಡುತ್ತ ನಡೆಯುತ್ತೇನೆ. ಅವನೋ… ಶನಿವಾರ ಭಾನುವಾರಗಳಲ್ಲು ಸಹ ಬೆಳಗಾಗುವ ಮೊದಲೇ ಬೊಗಳಿ ನನ್ನನ್ನು ಎಬ್ಬಿಸಿ ಬಿಡುತ್ತಾನೆ. ಅದೂ ಅವನು ಬೊಗಳುವುದು ಯಾವುದಕ್ಕೆ? ರಸ್ತೆಯಲ್ಲಿ ಹಾರಿ ಹೋಗುವ ಯಾವುದೋ ಎಲೆಯ, ಪೇಪರಿನ ಸದ್ದಿಗೆ. ಎದುರಿನ ಮನೆಯವರು ಅವರ ಮನೆಯ ಮುಂದೆ ನಡೆದಾಡಿದರೆ ಇವನು ಬೊಗಳುತ್ತಾನೆ. ಪಕ್ಕದ ಮನೆಯ ಮುಂದೆ ಅವರದೇ ಕಾರು ಬಂದು ನಿಂತು ಅವರು ಅದರಿಂದ ಇಳಿಯುವಾಗ ಬೊಗಳುತ್ತಾನೆ. ಯಾವುದಕ್ಕೆ ಬೊಗಳಬೇಕು, ಯಾವುದಕ್ಕೆ ಬೊಗಳಬಾರದು ಎಂದು ನಾಯಿಗಳಿಗೆ ದೇವರು ಟ್ರೇನಿಂಗ್ ಕೊಟ್ಟು ಕಳಿಸೋದಿಲ್ಲವಾ ಅಂತ. ಮನೆಯೊಳಗೆ ಒಂದು ನೊಣ ಬಂದರು ಅವನಿಗೆ ಆಗುವುದಿಲ್ಲ. ತಲೆ ಕೆಟ್ಟು ಬಿಡುತ್ತದೆ. ಮನೆಯೆಲ್ಲ ಓಡಾಡಿ, ಗಾಳಿಯಲ್ಲಿ ಗುದ್ದಾಡಿ, ನೊಣ ಹಿಡಿಯಲು ಹರಸಾಹಸ ಪಟ್ಟು, ತಲೆ ಮೇಲೆ ಮಾಡಿ ಹಾರುವ ನೊಣವನ್ನು ನುಂಗಲು ಯತ್ನಿಸುತ್ತ, ಎಷ್ಟು ಒದ್ದಾಡಿದರು ಅದು ಸಿಕ್ಕದೇ ಹೋದಾಗ ಬಾಲ ಮುದುರಿಸಿಕೊಂಡು ಕೋಣೆಗೆ ಹೋಗಿ ಮಲಗಿ ಬಿಡುತ್ತಾನೆ. ಎಂತೆಂತಹ ದೊಡ್ಡ ನಾಯಿಗಳಿಗು ಸಹ ಹೆದರದೇ ಅವುಗಳ ಮುಂದೆ ಬೊಗಳುತ್ತ ಭಂಡ ಧೈರ್ಯ ತೋರಿಸುವ ನಮ್ಮ ಉತ್ತರಕುಮಾರನಿಗೆ ಈ ನೊಣಕ್ಕಿಂತಲು ಹೆಚ್ಚಿನ ಭಯ ಹುಟ್ಟಿಸುವ ಸಂಗತಿಯೊಂದಿದೆ. ಅದೇನೆಂದರೆ ಅವನ ನಾಲ್ಕು ಕಾಲಿನ ಉಗುರುಗಳು! ಏನಪ್ಪಾ ಇದು ಉಗುರಿನ ಕತೆ ಎಂದಿರೇ.. ಇದಕ್ಕೆ ಉಗುರುಪುರಾಣ ಎಂತಲೂ ಹೇಳಬಹುದು. ಯಕಃಶ್ಚಿತವಾದಂತಹ ಉಗುರಿನಿಂದ ಅದು ಹೇಗೆ ಭಯ ಹುಟ್ಟಲು ಸಾಧ್ಯ ಎಂದು ಉಗುರನ್ನ ಕಡೆಗಣಿಸದಿರಿ.

ಮನುಷ್ಯರಂತೆಯೇ ನಾಯಿಗಳ ಉಗುರುಗಳನ್ನು ಆಗಾಗ ಕತ್ತರಿಸುತ್ತಿರಬೇಕು. ಇಲ್ಲದೇ ಹೋದರೆ ಉದ್ದಕ್ಕೆ ಚೂಪಾಗಿ ಬೆಳೆದು ಅವು ಮೈ ಮೇಲೆ ಹತ್ತಿ ಬಂದಾಗಲೆಲ್ಲ ಪರಚುತ್ತ ಗಾಯ ಮಾಡುತ್ತವೆ. ಅದಲ್ಲದೇ ಉಗುರುಗಳನ್ನು ಕತ್ತರಿಸುವುದು ಅವುಗಳ ಆರೋಗ್ಯಕ್ಕು ಸಹ ಕ್ಷೇಮ. ಇಲ್ಲದಿದ್ದರೆ ಅವುಗಳಿಗು ನಮ್ಮ ಹಾಗೆಯೇ ಉಗುರು ಸುತ್ತಾಗುತ್ತದೆ. ತೀರಾ ಉದ್ದಕ್ಕೆ ಬಂದರೆ ಅವೇ ತಮ್ಮ ಉಗುರುಗಳನ್ನು ಕಚ್ಚಿಕೊಂಡು ಸಣ್ಣ ಮಾಡಿಕೊಳ್ಳುತ್ತವೆ. ನಮ್ಮದು ಸಾಕುನಾಯಿಯಾಗಿರುವುದರಿಂದ ಇಂತಹ ವಿಷಯಗಳಲ್ಲಿ ಹೆಚ್ಚಿನ ಕಾಳಜಿ. ಆದರೆ ನಾಯಿಗಳ ಉಗುರಿನಲ್ಲಿ ನರವಿರುವುದರಿಂದ ಆ ನರಕ್ಕೆ ತಾಗದಂತೆ ಅದರ ಮುಂದಿನ ಭಾಗವನ್ನು ಮಾತ್ರ ಕತ್ತರಿಸಬೇಕು. ಬೆಳ್ಳಗಿನ ಉಗುರುಗಳಿದ್ದರೆ ಬೆಳಕಿಗೆ ಈ ನರ ಸ್ಪಷ್ಟವಾಗಿ ಗೋಚರಿಸುತ್ತದೆ. ಅಂತಹ ನಾಯಿಗಳ ಉಗುರುಗಳನ್ನು ತೆಗೆಯುವುದು ಸುಲಭ. ನಾಯಿಗಳಿಗೆ ಭಯವಿದ್ದರೂ ಅವುಗಳನ್ನು ತೆಗೆಯುವಾಗ ಎಲ್ಲಿ ನರಕ್ಕೆ ತಗುಲಿ ಬಿಡುತ್ತದೋ ಎಂದು ಮನುಷ್ಯರಿಗೆ ಭಯವಿರುವುದಿಲ್ಲ. ಆದರೆ ಕೂರಾನಂತಹ ಕಪ್ಪು ಉಗುರುಗಳ ನಾಯಿಗಳ ಉಗುರುಗಳನ್ನು ಕತ್ತರಿಸುವುದಕ್ಕೆ ತುಸು ಸಂಯಮ ಮತ್ತು ಜಾಣ್ಮೆಯಿರಬೇಕು. ಈ ಎಲ್ಲ ವಿಷಯ ನಮಗೆ ಗೊತ್ತಾಗಿದ್ದು ಹಲವು ಯೂಟ್ಯೂಬ್ ವಿಡಿಯೋಗಳನ್ನು ನೋಡಿದ ಬಳಿಕ. ಅವರು ತೋರಿಸಿದ ಹಾಗೆ ಉಗುರು ತೆಗೆಯಬೇಕೆಂದು ಅದಕ್ಕೆ ಬೇಕಾದ ಸಲಕರಣೆಗಳನ್ನು ತಂದಿಟ್ಟುಕೊಂಡು ಒಂದು ದಿನ ಸನ್ನದ್ಧರಾಗಿ ಕೂತೆವು. ನಮ್ಮ ಕೈಯ್ಯಲ್ಲಿ ಇಲ್ಲಿಯವರೆಗು ನೋಡಿರದಿದ್ದ ಹೊಸ ಸಾಧನವೊಂದನ್ನು ನೋಡಿ ಕೂರಾನಿಗೆ ಆಗಲೇ ಸಂಶಯ ಶುರುವಾಗಿತ್ತು. ನಮ್ಮನ್ನೇ ಪ್ರಶ್ನಾರ್ಥಕ ಕಣ್ಣುಗಳಿಂದ ನೋಡುತ್ತಿದ್ದ. ಒಬ್ಬರು ಮುಂದೆ ಕೂತು ಅವನಿಗೆ ಟ್ರೀಟ್ ತಿನ್ನಿಸುವುದು ಇನ್ನೊಬ್ಬರು ಅವನಿಗೆ ಗೊತ್ತಾಗದ ಹಾಗೆ ಅವನ ಉಗುರನ್ನು ಕತ್ತರಿಸುವುದು ಎಂಬುದು ನಮ್ಮ ರಣತಂತ್ರವಾಗಿತ್ತು. ಸುಮಾರು ಹತ್ತು ಟ್ರೀಟ್ ತುಂಡುಗಳ ಬಳಿಕ ಯಶಸ್ವಿಯಾಗಿ ಒಂದು ಉಗುರನ್ನು ತೆಗೆದೆವು. ಎರಡನೇ ಉಗುರನ್ನು ತೆಗೆಯುವ ಹೊತ್ತಿಗೆ ಅವನಿಗೆ ಹೊಟ್ಟೆ ತುಂಬಿತ್ತೇನೋ ಕೂತಲ್ಲಿಂದ ಓಡಿ ಬಿಟ್ಟ. ಟ್ರೀಟ್ ತಿಂದು ಅವನಿಗೆ ಶಕ್ತಿ ಬಂದಿತ್ತು, ಮನೆಯೆಲ್ಲ ಓಡಾಡಿಸಿದ. ನಮ್ಮ ಹೊಟ್ಟೆ, ತಾಳ್ಮೆ ಎರಡೂ ಖಾಲಿಯಾಗಿ ಗುಟುರು ಹಾಕುತ್ತಿದ್ದವು.

ಅದಾದ ಮೇಲೆ ಎಷ್ಟೇ ಸಲ ಪ್ರಯತ್ನಿಸಿದರು ಅವನ ಉಗುರುಗಳನ್ನು ತೆಗೆಯಲು ಆಗಲೇ ಇಲ್ಲ. ಓಡಿ ಹೋಗಿ ಮೂಲೆಯಲ್ಲಿ ಕುಳಿತುಕೊಳ್ಳುವುದು, ನಮ್ಮ ಮೇಲೆ ಜಿಗಿದಾಡಿ ರಂಪ ಮಾಡುವುದು, ಸಕ್ಕರೆ ಹಲ್ಲುಗಳಲ್ಲಿ ಕಚ್ಚಲು ಯತ್ನಿಸುವುದು.. ಪ್ರತಿ ಸಲ ಅವನದ್ದೇ ರಣಭೇರಿ. ಎಷ್ಟೇ ಸಿದ್ಧವಾಗಿ ಕೂತರೂ ನಮ್ಮ ಪ್ರಯತ್ನಗಳು ವಿಫಲವಾಗುತ್ತಲೇ ಹೋದವು. ನಮ್ಮ ಕೈಯ್ಯಲ್ಲಿರುವ ಸಾಧನ ಉಗುರುಗಳನ್ನು ತೆಗೆಯುವ ಕ್ಲಿಪ್ಪರ್ ಎಂದು ಅವನಿಗೆ ಗೊತ್ತಾಗಿ ಬಿಟ್ಟಿರುವುದರಿಂದ ನಮ್ಮ ಕೈಯ್ಯಲ್ಲಿ ಅದನ್ನು ನೋಡಿದ ಕೂಡಲೇ ಎಲ್ಲಿದ್ದಲ್ಲಿಂದ ಚೆಂಗನೆಯ ನೆಗೆತ. ಚೂಪಾದ ಉಗುರುಗಳಿದ್ದ ಕಾಲುಗಳನ್ನೆತ್ತಿ ನಮ್ಮ ಮೇಲೆ ಹತ್ತಿದರೆ ಪರಚಿದಂತಾಗುತ್ತಿತ್ತು. ಅದರಲ್ಲೂ ಮೈ ಮೇಲೆ ಹತ್ತುವ ಚಟವೂ ಇರುವುದರಿಂದ ಅವನ ಉಗುರುಗಳು ನಮ್ಮನ್ನು ಪರಚುತ್ತ ಗಾಯ ಮಾಡುತ್ತಲೇ ಇದ್ದವು. ಅದರಿಂದ ಅವನಿಗೆ ಒಳಗೊಳಗೆ ಖುಷಿಯೂ ಆಗುತ್ತಿತ್ತು ಎಂದು ನನಗೆ ಖಂಡಿತವಾಗಿ ಗೊತ್ತಿದೆ. ಇದಕ್ಕೇನು ಪರಿಹಾರ, ಏನು ಮಾಡಿದರೆ ಈ ನಿತ್ಯಸಂಕಟದಿಂದ ಮುಕ್ತಿ ಹೊಂದಬಹುದು ಎಂದು ನಾವು ಎಲ್ಲಾ ದೇವರುಗಳ, ನಾಯಿಪೋಷಕರ, ಯುಟ್ಯೂಬ್ ವಿಡಿಯೋಗಳ ಮೊರೆ ಹೊಕ್ಕಿದ್ದೆವು.

ಯಾರೋ ಕಾಂಕ್ರೀಟ್ ನೆಲದ ಮೇಲೆ ಓಡಿಸಿದರೆ ಆ ಉಗುರುಗಳು ನೆಲದಿಂದ ಸವೆಯುತ್ತವೆ ಎಂದು ಹೇಳಿದ್ದರಿಂದ ಕೂರಾನನ್ನು ಪ್ರತಿಮುಂಜಾನೆ ಓಡಲು ಕರೆದುಕೊಂಡು ಹೋಗುವ ಕೆಲಸವೂ ಆಯಿತು. ಅದು ಸ್ವಲ್ಪ ಕೆಲಸ ಮಾಡಿತಾದರು ಚೂಪಾದ ಉಗುರುಗಳ ಕಾಟ ಸಂಪೂರ್ಣವಾಗಿ ಮುಗಿಯಲಿಲ್ಲ. ನಾಯಿಗಳ ಸಲೂನಿನಲ್ಲಿ ಉಗುರುಗಳನ್ನು ಕತ್ತರಿಸುತ್ತಾರೆಂದು ಗೊತ್ತಾಗಿ ಅಲ್ಲಿಗೆ ಕರೆದುಕೊಂಡು ಹೋದೆವು. ಅಲ್ಲಿ ಅವನ ಯಾವ ತಂತ್ರಗಳು ನಡೆಯದೇ, ಆಕೆಗಿರುವ ಅನುಭವದಿಂದ ಉಗುರುಗಳನ್ನು ಕತ್ತರಿಸಿಯೇ ತೀರುತ್ತಾಳೆ ಎಂದು ನಾವು ಮನಸ್ಸಿನಲ್ಲಿ ಮಂಡಿಗೆ ಮೆಲ್ಲುತ್ತ ಹೊರಗೆ ಕಾಯುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದ ಆಕೆಯನ್ನು ನೋಡಿ ಬೆಟ್ಟದ ಚಾಮುಂಡಿದೇವಿಯೇ ದರ್ಶನ ಕೊಟ್ಟಂತಾಯಿತು. ಆದರೆ.. ಅವಳು ಸಹ ತನಗೆ ಆಗಲಿಲ್ಲ ಎಂದು ಕೂರಾನನ್ನು ಕರೆತಂದು ಕೊಟ್ಟು ಬಿಟ್ಟಳು! ಕೂರಾ ವಿಜಯದ ನಗೆ ಬೀರಿದ್ದ. ಆಗ ಅರ್ಥವಾಗಿದ್ದು ಇದು ಮುಗಿಯದ ಸಮಸ್ಯೆ. ಹೀಗೆಯೇ ಮುಂದುವರೆದರೆ ನಮ್ಮ ಜೀವನ ಬಹಳ ಘೋರವಾಗಲಿದೆ ಎಂಬುದನ್ನು ನೆನೆದು ನಡುಕ ಹುಟ್ಟಿತ್ತು.

ನಾನು ಮಾತ್ರ ಛಲ ಬಿಡದ ತ್ರಿವಿಕ್ರಮನ ಹಾಗೆ ಆಗಾಗ ಅವನ ಉಗುರು ತೆಗೆಯುವ ಪ್ರಯತ್ನ ಮಾಡುತ್ತಿರುತ್ತೇನೆ. ಕೆಲವೊಮ್ಮೆ ಮಗನೇ ಎಂದು ಮುದ್ದು ಮಾಡಿ ಇನ್ನು ಕೆಲವೊಮ್ಮೆ ಮಗನೇ! ಎಂದು ಬೈಯ್ಯುತ್ತ ಕಾರ್ಯಸಾಧಿಸಲು ಹೆಣಗುತ್ತೇನೆ. ಅವನು ಮಲಗಿದ್ದಾಗ ಅವನಿಗೆ ಗೊತ್ತಾಗದ ಹಾಗೆ ಅವನ ಪಕ್ಕಕ್ಕೆ ಹೋಗಿ ಕೂತು ಅವನ ಕಾಲು ಹಿಡಿದರೂ ಅವನ ನರಕ್ಕೆ ತಾಕಬಾರದು ಎಂಬ ಕಾರಣಕ್ಕೆ ನನಗು ಪುಕುಪುಕು. ಅಷ್ಟೊತ್ತಿಗೆ ಅವನಿಗೆ ವಾಸನೆ ಬಂದು ಮತ್ತದೇ ಕಥೆ ರಿಪೀಟ್. ಈಗೀಗ ಅವನ ಕಾಲು ಹಿಡಿದರೆ ಸಾಕು ಎದ್ದು ಓಡಲು ಶುರು ಮಾಡಿದ್ದಾನೆ. ಇದನ್ನು ಬರೆಯುವ ಹೊತ್ತಿನಲ್ಲಿ ಇಲ್ಲೇ ಪಕ್ಕದಲ್ಲಿ ಕೂತಿರುವ ಅವನ ಉಗುರುಗಳು ನನ್ನನ್ನು ಪರಚುತ್ತಿವೆ.

(ಮುಂದುವರೆಯುತ್ತದೆ…)
(ಹಿಂದಿನ ಕಂತು: ಸೂಜಿಗಳು ಮತ್ತು ಸಂಕಷ್ಟಗಳು)