Advertisement
ಕೆನ್ನೆಮೇಲೆ…. ಕೆಂಪು ಬಾಸುಂಡೆ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಕೆನ್ನೆಮೇಲೆ…. ಕೆಂಪು ಬಾಸುಂಡೆ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಸ್ವಲ್ಪ ಹೊತ್ತಾದ ಮೇಲೆ ಏನೋ ಜ್ಞಾಪಕ ಬಂದಂತೆ ಎದೆಯ ಮೇಲಿನ ಶರ್ಟ್ ನೋಡಿಕೊಂಡ. ಶರ್ಟ್ ಮೇಲೆ ಎರಡು ತೊಟ್ಟ ರಕ್ತ ಬಿದ್ದಿರುವುದು ಕಾಣಿಸಿತು. ಈಗ ಏನು ಮಾಡುವುದು? ಮನೆಗೋದರೆ ಅಮ್ಮ ಇಲ್ಲ ಸುಮತಿ ನೋಡೇನೋಡುತ್ತಾರೆ. ಮೂಗು ಊದಿಕೊಂಡಿದೆಯೇನೊ ಎನ್ನುವ ಅನುಮಾನ ಬಂದು, ಗುಡಿಯ ಒಳಗಡೆ ಹೋಗಿ ಕನ್ನಡಿಯಲ್ಲಿ ನೋಡಿದರೆ ಹೇಗೆ ಎನ್ನುವ ಆಲೋಚನೆ ಬಂದರೂ ಗುಡಿಯಲ್ಲಿ ಸಾಕಷ್ಟು ಜನರಿದ್ದು ಹೋಗುವುದು ಸರಿಇಲ್ಲ ಎಂದು ಅಲ್ಲೇ ಕುಳಿತುಕೊಂಡ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ನಾಲ್ಕನೆಯ ಕಂತು ನಿಮ್ಮ ಓದಿಗೆ

ಸೆಲ್ವಮ್ ಎಂದಿನಂತೆ ಮನೆ ಹೊರಗೆ ಅರೆ ಕತ್ತಲಲ್ಲಿ ಕಲ್ಲು ಬಂಡೆಯ ಮೇಲೆ ಕುಳಿತುಕೊಂಡಿದ್ದಾನೆ. ಗೋವಿಂದ ನಿಧಾನವಾಗಿ ಹತ್ತಿರಕ್ಕೆ ಬಂದು ಕಲ್ಲಿನ ಮೇಲೆ ಕುಳಿತುಕೊಂಡಿದ್ದೆ ಜೇಬಿನಲ್ಲಿದ್ದ ಎರಡು ಬೀಡಿಗಳನ್ನು ಹೊರಕ್ಕೆ ತೆಗೆದು ಒಂದನ್ನು ಗೋವಿಂದನಿಗೆ ಕೊಟ್ಟು ತಾನೊಂದನ್ನು ಬಾಯಲ್ಲಿ ಇಟ್ಟುಕೊಂಡು “ಕನಕ ಸ್ವಲ್ಪ ಬೆಂಕಿಕೊಡಮ್ಮ” ಎಂದ. ಕನಕ ಒಳಗಿಂದಲೇ “ಗೋವಿಂದಣ್ಣ ಬಂದರಾ? ಇಬ್ಬರೂ ಜೋಡಿಯಾಗಿ ಕುಳಿತುಕೊಂಡು ಬೀಡಿ ಸೇದದಿದ್ದರೆ ನಿಮಗಿಬ್ಬರಿಗೂ ರಾತ್ರಿ ಕಳೆಯುವುದೇ ಇಲ್ಲ” ಎನ್ನುತ್ತಾ ಒಲೆಯಿಂದ ಬೆಂಕಿತುಂಡನ್ನು ತಂದುಕೊಟ್ಟಳು. ಗೋವಿಂದ, “ಕೊಡು ಕನಕಕ್ಕ. ಎಷ್ಟು ದಿನ ಬದುಕುತ್ತೇವೊ ಏನೊ?” ಎಂದ. ಕನಕ, “ಹಾಗ್ಯಾಕೆ ಮಾತಾಡ್ತೀಯ? ಸುಮ್ಮನೆ ಇರು ಗೋವಿಂದಣ್ಣ” ಎನ್ನುತ್ತಾ ಮನೆಯೊಳಕ್ಕೆ ಹೋದಳು.

ಅಷ್ಟರಲ್ಲಿ ಮಣಿ ಹತ್ತಿರಕ್ಕೆ ಹೋಗಲೊ ಬೇಡವೊ ಎನ್ನುತ್ತಾ ದೂರದಲ್ಲಿ ಬರುವುದನ್ನು ನೋಡಿದ ಗೋವಿಂದ, “ಬಾ ಮಣಿ ಯಾಕೆ? ಬರ್ಲೋ ಬೇಡವೊ ಅನ್ನೋ ರೀತಿ ಮನೆ ಕಡೆಗೆ ಬರ್ತಾಇದ್ದೀಯ” ಎಂದ. ಸೆಲ್ವಮ್, “ಮಣಿ ಬಾ ಕುಳಿತುಕೊ” ಎಂದು ಹತ್ತಿರಕ್ಕೆ ಕರೆದ. ಮಣಿ ನಿಧಾನವಾಗಿ ಬಂದು ಬಾಗಿಲಿನ ಎಡಗಡೆ ಇದ್ದ ಗ್ರನೈಟ್ ಕಲ್ಲಿನ ಮೇಲೆ ಕುಳಿತುಕೊಂಡ. ಕೆನ್ನೆ ಊದಿಕೊಂಡಿರುವುದು ಎಲ್ಲಿ ಕಾಣಿಸಿಬಿಡುತ್ತದೊ ಎನ್ನುವ ಸಂದೇಹ ಅವನಿಗೆ. ಸೆಲ್ವಮ್, “ಓದು ಹೇಗೆ ನಡಿಯ್ತಾ ಇದೆ. ಸೆಕೆಂಡ್ ಪಿಯುಸಿ, ಭದ್ರ. ಚೆನ್ನಾಗಿ ಓದಿ ಫಸ್ಟ್ ಕ್ಲಾಸ್ ಬರಬೇಕು” ಹೇಳಿದ. ಮಣಿ, “ಓದ್ತಾಇದ್ದೀನಿ ಅಪ್ಪ” ಎಂದು ಎದ್ದು ಮನೆ ಒಳಗೆ ಹೋದವನು ಮತ್ತೆ ಹಿಂದಕ್ಕೆ ಬಂದು ಅಲ್ಲೇ ಕುಳಿತುಕೊಂಡ. ಮನೆ ಒಳಗೆ ವಿದ್ಯುತ್ ದೀಪ ಉರಿಯುತ್ತಿದ್ದು ಕೆನ್ನೆಯ ರಹಸ್ಯ ಎಲ್ಲಿ ಗೊತ್ತಾಗಿಬಿಡುತ್ತದೊ ಎನ್ನುವುದು ಅವನ ಅನುಮಾನ.

ಗೋವಿಂದ, “ಯಾಕೆ ಮಣಿ? ಒಳಗೋದವನು ಹಿಂದಕ್ಕೆ ಬಂದುಬಿಟ್ಟೆ?” ಎಂದಿದ್ದಕ್ಕೆ, ಮಣಿ, “ಇನ್ನೂ ಅಡಿಗೆಯಾಗಿಲ್ಲವಲ್ಲ” ಎಂದ. ಕನಕ, “ಆಗಿದೆ. ಎಲ್ಲರೂ ಬನ್ನಿ. ಗೋವಿಂದಣ್ಣ ನೀವೂ ಬನ್ನಿ” ಎಂದಳು. ಗೋವಿಂದ, “ಇಲ್ಲ ನೀವು ಮಾಡಿ. ನಾನು ಮತ್ತೆ ಬರ್ತೀನಿ” ಎಂದು ಎದ್ದು ಅವನ ಮನೆ ಕಡೆಗೆ ನಡೆದ. ಮಣಿ, ಸೆಲ್ವಮ್ ಮನೆ ಒಳಕ್ಕೆ ಹೋಗಿ ಕುಳಿತುಕೊಂಡರು. ಮಣಿ ಊದಿಕೊಂಡಿರುವ ಕೆನ್ನೆಯನ್ನು ಗೋಡೆ ಕಡೆಗೆ ತಿರುಗಿಸಿಕೊಂಡು ಕುಳಿತುಕೊಂಡ. ಕನಕ, “ಯಾಕೊ ಮಣಿ ಗೋಡೆಕಡೆಗೆ ತಿರುಗಿಕೊಂಡು ಕೂತಿದ್ದಾನಲ್ಲ?” ಎಂದಳು. ಸುಮತಿ ಮುಖವನ್ನು ಹತ್ತಿರದಿಂದ ನೋಡಿ ಗಲ್ಲದ ಮೇಲೆ ಕೈ ಇಟ್ಟುಕೊಂಡಳು. ಮಣಿ ಅವಳ ಕಡೆಗೆ ನೋಡಿ ಕಣ್ಣುಬಿಟ್ಟು ಏನೂ ಮಾತನಾಡದಂತೆ ಎಚ್ಚರಿಸಿದ. ಬೆಳಕು ಅಷ್ಟಿಲ್ಲದ ಕಾರಣ ಅವನ ಕೆನ್ನೆಯನ್ನು ಕನಕ, ಸೆಲ್ವಮ್ ಗಮನಿಸಲಿಲ್ಲ. ಮಣಿ ಊಟ ಮುಗಿಸಿ ತಪ್ಪಿಸಿಕೊಂಡೆ ಎಂದುಕೊಂಡು, “ಅಮ್ಮ ನಾನು ಕಮ್ಯೂನಿಟಿ ಹಾಲ್‌ಗೆ ಹೋಗ್ತೀನಿ” ಎಂದು ಎದ್ದು ಹೊರಕ್ಕೆ ಬಂದಿದ್ದೆ ಸುಮತಿ, “ಅಮ್ಮ, ಅಣ್ಣನ ಕೆನ್ನೆ ಊದಿಕೊಂಡಿದೆ” ಎಂದಳು.

ಕನಕ, “ಮಣಿ ಇಲ್ಲಿ ಬಾ” ಎಂದಳು. ಮಣಿ ಏನೋ ಗೊಣಗುತ್ತಾ ಮನೆ ಒಳಕ್ಕೆ ಬಂದ. ಊಟ ಮಾಡುತ್ತಿದ್ದ ಸೆಲ್ವಮ್, “ಮಣಿ ಕುಳಿತುಕೊ” ಎಂದ. ಮಣಿ ವಿಧಿ ಇಲ್ಲದೆ ಕುಳಿತುಕೊಂಡ. ಸೆಲ್ವಮ್, ಮಣಿ ಮುಖವನ್ನು ಎತ್ತಿನೋಡಿ ಕನಕಳ ಕಡಗೆ ತಿರುಗಿಸಿದ. ಕನಕ ಹತ್ತಿರಕ್ಕೆ ಬಂದು ನೋಡಿ ಕನ್ನೆಯನ್ನು ತಡವಿ ನೋಡಿ “ಏನಾಯಿತು?” ಎಂದಳು. ಮಣಿ, “ಏನೂ ಆಗಿಲ್ಲವಲ್ಲ” ಎಂದ. ಕನಕ, ಸೆಲ್ವಮ್ ಇಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಸೆಲ್ವಮ್ ಮಣಿಯ ಕೆನ್ನೆಯನ್ನು ಇನ್ನಷ್ಟು ಬೆಳಕಿನ ಕಡೆಗೆ ತಿರುಗಿಸಿ ಬೆರಳುಗಳಿಂದ ಸವರಿ “ಇದುವರೆಗೂ ನಾನು ಕೂಡ ಒಂದು ದಿನಾನು ನಿನ್ನನ್ನ ಹೊಡೆದಿಲ್ಲವಲ್ಲೊ. ಹೋಗಿಹೋಗಿ ಯಾರ ಕೈಯಲ್ಲೊ ಈ ರೀತಿ ಹೊಡೆಸಿಕೊಂಡು ಬಂದಿದ್ದೀಯಲ್ಲ?” ಎಂದ. ಕನಕ, `ಯಾರೋ ಎಷ್ಟು ಜೋರಾಗಿ ಹೊಡೆದಿದ್ದಾರೆ ನೋಡಿ. ಅವನ ಕೈ ಮುರಿದೋಗ’ ಎಂದಳು. ಮಣಿಗೆ ಮತ್ತೆ ಸೆಲ್ವಿ ಜೋರಾಗಿ ಹೊಡೆದಂತಾಗಿ ಮನೆಯಿಂದ ಹೊರಕ್ಕೆ ಎದ್ದು ಬಂದ. ಸೆಲ್ವಮ್ ಊಟ ಬಿಟ್ಟು ಕೈತೊಳೆದುಕೊಂಡು ಎದ್ದು ಬಂದು ಹೊರಗಡೆ ಬಂಡೆ ಮೇಲೆ ಕುಳಿತುಕೊಂಡ. ಕನಕ ಹೊರಕ್ಕೆ ಬಂದು “ಯಾರೋ ಹುಡುಗರ ಜೊತೆ ಜಗಳ ಆಗಿರಬೇಕು. ನಾಳೆ ಕೇಳ್ತೀನಿ ಬಿಡಿ” ಎಂದಳು.

*****

ಮರುದಿನ ಮಣಿ ಬೆಳಿಗ್ಗೆ 7:30 ಗಂಟೆಗೆಲ್ಲ ಅದೇ ತಿರುವಿನಲ್ಲಿ ಮಣಿ ಹಾಜರಾಗಿದ್ದ. ಸೆಲ್ವಿ, ರಾಜಿ ಮತ್ತು ಪಾರ್ವತಿ ಬರುತ್ತಿರುವುದನ್ನ ದೂರದಿಂದಲೇ ನೋಡಿದ ಮಣಿ ಉದ್ದಂಡಮ್ಮಾಳ್ ಗುಡಿಯ ಎದುರಿಗೆ ಹೋಗಿ ನಿಂತುಕೊಂಡನು. ಹುಡುಗಿಯರು ರಸ್ತೆಯ ತಿರುವಿಗೆ ಬಂದು ಅವನ ಕಡೆಗೆ ನೋಡಿದಾಗ ದೇವರಲ್ಲಿ ಏನೋ ಬೇಡಿಕೊಳ್ಳುತ್ತಿದ್ದವನು ಒಂದು ಕೈಯನ್ನ ಕೆನ್ನೆಗೆ ಅಡ್ಡ ಇಟ್ಟುಕೊಂಡನು. ಸೆಲ್ವಿಗೆ ಅವನನ್ನು ನೋಡಿ ಒಂದು ಘಳಿಗೆ ಅಯ್ಯೋ ಎನಿಸಿತು. ಅವರು ಮುಂದೆ, ಇವನು ಹಿಂದೆ, ಕಾಲೇಜ್ ಕಡೆಗೆ ನಡೆಯುತ್ತಾ ಹೊರಟರು. ಉದ್ದನೆ ತಾರ್ ರಸ್ತೆಯ ಮೇಲೆ ಸೆಲ್ವಿ ಮತ್ತು ಮಣಿ ಯೋಚನೆಗಳನ್ನು ಚೆಲ್ಲುತ್ತಾ ಹೋಗುತ್ತಿದ್ದರು. ರಸ್ತೆಯ ಎರಡೂ ಬದಿಯಲ್ಲಿ ಬ್ರಿಟಿಷರ ಕಾಲದಲ್ಲಿ ಹಾಕಿದ್ದು ಮೇ ತಿಂಗಳ ಗುಲ್‌ಮೊಹರ್ ಮರಗಳು ಹೆಣ್ಣು ಮಕ್ಕಳು ಬಸಿರಿಯಾಗಿರುವ ಲಕ್ಷಣಗಳನ್ನು ನಾಚಿಕೆಯಿಂದ ತೋರಿಸಿಕೊಳ್ಳುವಂತೆ ಬಣ್ಣಬಣ್ಣದ ಹೂವುಗಳನ್ನು ಬಿಡುವ ಸೂಚನೆಗಳನ್ನು ಕೊಡುತ್ತಿದ್ದವು. ಅವರು ಮುಂದೆ, ಇವನು ಹಿಂದೆ. ಕಾಲೇಜ್‌ವರೆಗೂ ನಡೆದರೂ ಅಂತರ ಅದೇ ರೀತಿಯಾಗಿ ಕಾದುಕೊಂಡಿದ್ದರು. ಕೆಲವು ವಿದ್ಯಾರ್ಥಿಗಳು ಹಾಯ್ ಹಲೋ ಎಂದು ಮುಂದಕ್ಕೆ ಸಾಗುತ್ತಿದ್ದರು. ಕಾಲೇಜ್ ಕಾಂಪೌಂಡ್ ಬಂದಿದ್ದೆ ಸೆಲ್ವಿ ಮತ್ತು ಆಕೆಯ ಗೆಳತಿಯರು ನೇರವಾಗಿ ಅವರ ತರಗತಿಯ ಒಳಕ್ಕೆ ಹೋಗಿ ಕುಳಿತುಕೊಂಡರು. ಮಣಿ ನೇರವಾಗಿ ಕ್ಯಾಂಟೀನ್‌ಗೋಗಿ ನಿನ್ನೆಯ ಬಾಕಿ ಹಣಕೊಟ್ಟು ಒಂದು ಟೀ ಹೇಳಿ ಮೂಲೆಯಲ್ಲಿ ಕುಳಿತುಕೊಂಡ. ಮಣಿ ತನಗೆ ಇಷ್ಟ ಬಂದಾಗ ತರಗತಿಗೆ ಹೋಗುತ್ತಿದ್ದ, ಇಲ್ಲವೆಂದರೆ ಇಲ್ಲ. ಕೆನ್ನೆಗೆ ಏಟು ತಿಂದಾಗಿನಿಂದ ಅವನ ತಲೆ ಕೆಟ್ಟುಹೋಗಿತ್ತು.

ಮೊದಲ ಪಿಯುಸಿ ಫಲಿತಾಂಶ ಬಂದು ಸೆಲ್ವಿ ಮತ್ತು ಆಕೆಯ ಇಬ್ಬರು ಗೆಳತಿಯರು ಪಾಸ್ ಆಗಿದ್ದರೆ ಮಣಿ ಎರಡನೇ ಪಿಯುಸಿಯಲ್ಲಿ ಢುಮ್ಕಿ ಹೊಡೆದಿದ್ದನು. ಒಂದು ತಿಂಗಳು ರಜೆ ಬಂದು ಅವನಿಗೆ ಏನು ಮಾಡುವುದೊ ತಿಳಿಯದೆ ಒಂದು ಕಡೆ ಫೇಲ್ ಆದ ಸಂಗತಿ, ಇನ್ನೊಂದು ಕಡೆ ಸೆಲ್ವಿ ಲವ್ ವಿಷಯ? ಏನೂ ಅರ್ಥವಾಗದೆ ನಾಲ್ಕಾರು ಕೂದಲಿನ ಹೋತ ಗಡ್ಡ ಬಿಟ್ಟುಕೊಂಡು ರಸ್ತೆಗಳಲ್ಲೆಲ್ಲ ಓಡಾಡುತ್ತಿದ್ದನು. ಸೆಲ್ವಿ ಮನೆ ಇರುವ ಕ್ಯಾಂಪ್‌ಗೆ ಸಾಯಂಕಾಲ ತಪ್ಪದೇ ಹೋಗಿ ಒಂದು ಸುತ್ತಾಕಿಕೊಂಡು ಬರುತ್ತಿದ್ದನು. ಆದರೆ ಸೆಲ್ವಿ ಮಾತ್ರ ಒಂದು ದಿನವೂ ಅವನ ಕಣ್ಣಿಗೆ ಬೀಳಲಿಲ್ಲ. ಒಂದು ದಿನ ಸೆಲ್ವಿ, ರಾಜಿ ಮತ್ತು ಪಾರ್ವತಿ ರಾಬರ್ಟ್ಸನ್‌ಪೇಟೆಯ ಮಾರುಕಟ್ಟೆಯಲ್ಲಿ ಸಿಕ್ಕಿ ಅವರ ಜೊತೆಗೆ ನಾಲ್ಕಾರು ಮಹಿಳೆಯರಿದ್ದು ಅವರ ಹಿಂದೆಯೇ ನಾಯಿ ಮರಿಯಂತೆ ಸುತ್ತಾಕಿದ. ಕೊನೆಗೆ ಅವರು ಎರಡು ಆಟೋಗಳಲ್ಲಿ ಕುಳಿತುಕೊಂಡು ಹೊರಟುಹೋದರು. ಸೆಲ್ವಿ ಮಾತ್ರ ಒಂದು ಸಲ ಹಿಂದಕ್ಕೆ ತಿರುಗಿ ಅವನ ಕಡೆಗೆ ನೋಡಿದಳು. ಆ ಒಂದು ನೋಟದಿಂದಲೇ ಅವನಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ಟಾನಿಕ್ ಸಿಕ್ಕಿದಂತಾಗಿತ್ತು.

ಅಂತೂ ಒಂದು ದಿನ ಸೆಲ್ವಿ ಮತ್ತು ಅವಳ ಗೆಳತಿಯರು ಉದ್ದಂಡಮ್ಮಾಳ್ ದೇವಸ್ಥಾನದ ಹತ್ತಿರ ಸಿಕ್ಕೆಯೇಬಿಟ್ಟರು. ಮೂವರೂ ಮಣಿ ಇರುವುದು ಗೊತ್ತೆ ಇಲ್ಲವೇನೊ ಅನ್ನುವ ರೀತಿಯಲ್ಲಿ ದೇವಸ್ಥಾನದ ಒಳಕ್ಕೆ ಹೋಗಿಬಿಟ್ಟರು. ಮಣಿ ದೇವಸ್ಥಾನದ ಒಳಕ್ಕೆ ಹೋಗದೆ ಹೊರಗೆ ಅವರು ಬರುವುದನ್ನೇ ಕಾಯತೊಡಗಿದ. ಸುಮಾರು ಹೊತ್ತಾದ ಮೇಲೆ ಮೂವರೂ ಹೊರಕ್ಕೆ ಬಂದರು. ಮಣಿ ಅಲ್ಲೇ ನಿಂತುಕೊಂಡಿರುವುದನ್ನು ನೋಡಿದ ಸೆಲ್ವಿ ತನ್ನ ಗೆಳತಿಯರನ್ನು ನೋಡಿ ಮಣಿ ಕಡೆಗೆ ಸನ್ನೆ ಮಾಡಿದಳು. ಮಣಿ ಅವರ ಹತ್ತಿರಕ್ಕೆ ಬಂದು ಕಲ್ಲಿನಂತೆ ನಿಂತುಕೊಂಡುಬಿಟ್ಟ. ಸೆಲ್ವಿ ಅವನ ಕೆನ್ನೆಯನ್ನು ನೋಡಿದಳು. ಅಲ್ಲಿ ಯಾವ ಕುರುಹು ಕಾಣದೆ, ಇವನಿಗೆ ಸರಿಯಾಗಿ ಏಟು ಬಿದ್ದಿಲ್ಲ? ಎಂದುಕೊಂಡಳು. ಆದರೆ ಮಣಿ ಕೆನ್ನೆಯನ್ನು ಕೈಯಿಂದ ಮುಚ್ಚಿಕೊಂಡ. ಸೆಲ್ವಿ, “ಅಲ್ಲೇನಿದೆ ಮುಚ್ಚಿಕೊಳ್ಳುವುದಕ್ಕೆ?” ಎಂದಳು. ಮಣಿ ನೆಲಕ್ಕೆ ನೋಡುತ್ತ “ಅಲ್ಲಿ ಮರೆಯಲಾರದು ಗುರುತಿದೆ” ಎಂದ. ಮೂವರೂ ನಕ್ಕರು. ಸೆಲ್ವಿ, ಪಾರ್ವತಿಗೆ ಸನ್ನೆ ಮಾಡಿ ಆಕೆ ಕೈಯಲ್ಲಿದ್ದ ತೆಂಗಿನಕಾಯಿ ಚೂರುಗಳನ್ನು “ತೊಕೊ ಮಣಿ” ಎಂದಳು. ಮಣಿ, “ನೀನು ಕೊಟ್ಟರೆ ನಾನು ತೆಗೆದುಕೊಳ್ಳುವುದಿಲ್ಲ” ಎಂದ. ಸೆಲ್ವಿ, ಮಣಿಯ ಮುಖವನ್ನೇ ದುರುಗುಟ್ಟಿ ನೋಡಿದಳು. ಗುಡಿಯ ಒಳಗೋಗುವ ಮಹಿಳೆಯರ ಗುಂಪಿನಲ್ಲಿದ್ದ ಮಹಿಳೆಯೊಬ್ಬರು “ಅದೇನು ಹಾಗೇ ನಿಂತಿದ್ದೀರ ದಾರಿಯಲ್ಲಿ. ಪಕ್ಕಕ್ಕೆ ನಿಂತುಕೊಂಡು ಮಾತನಾಡುವುದಕ್ಕೆ ಆಗುವುದಿಲ್ಲವ?” ಎಂದಳು. ಎಲ್ಲರೂ ಪಕ್ಕಕ್ಕೆ ಸರಿದು ನಿಂತುಕೊಂಡರು.

*****

ಮೂವರು ಏನೂ ಮಾತನಾಡದೇ ಅವರ ಕ್ಯಾಂಪ್ ಕಡೆಗೆ ಹೊರಟರು. ಮಣಿಗೆ ಏನು ಮಾಡಬೇಕೊ ಅರ್ಥವಾಗದೆ ಅವರ ಹಿಂದೆಯೇ ನಾಯಿ ಮರಿಯಂತೆ ಹೊರಟ. ರಾಜಿ ಮತ್ತು ಪಾರ್ವತಿಗೆ ಇವನು ರಸ್ತೆಯಲ್ಲಿ ಏನು ಮಾಡಿಬಿಡುತ್ತಾನೋ ಎನ್ನುವ ಆತಂಕ ತುಂಬಿಕೊಂಡಿತು. ಸೆಲ್ವಿ ಒಂದೆರಡು ಸಲ ಹಿಂದಕ್ಕೆ ತಿರುಗಿ ನೋಡಿ ಮೆತ್ತಗೆ “ಲೇ ಅವನ್ನ ಹಿಂದಕ್ಕೆ ಹೋಗುವಂತೆ ಹೇಳ್ರೆ” ಎಂದಳು. ಅವರು “ನಾವು ಹೇಳಿದರೆ ನಮ್ಮ ಮಾತು ಕೇಳಿಬಿಡ್ತಾನಾ ಅವನು?” ಎಂದರು. ಸೆಲ್ವಿ, “ನಮ್ಮ ಹಿಂದೆಯೇ ಬಂದು ಮನೆ ನೋಡಿಕೊಂಡು ದಿನಾಬೆಳಿಗ್ಗೆ ನಮ್ಮ ಮನೆ ಮುಂದೆ ಹಾಜರಾದರೆ ಏನು ಮಾಡುವುದು?” ಮೊದಲ ಬಾರಿಗೆ ಸ್ವಲ್ಪ ಆತಂಕ ವ್ಯಕ್ತಪಡಿಸಿದಳು.

ಅದುವರೆಗೂ ಸೆಲ್ವಿಯ ಮನೆ ಮಣಿಗೆ ಗೊತ್ತಿರಲಿಲ್ಲ. ಅವನ ಡ್ಯೂಟಿ ಏನಿದ್ದರು ಬೆಳಿಗ್ಗೆ ಸಾಯಂಕಾಲ ಉದ್ದಂಡಮ್ಮಾಳ್ ಗುಡಿಯವರೆಗೂ ಮುಗಿದುಹೋಗುತ್ತಿತ್ತು. ಮಣಿ ಸ್ವಲ್ಪ ದೂರದಲ್ಲಿ ಅವರ ಹಿಂದೆಯೇ ನಡೆದು ಬರುತ್ತಿದ್ದನು. ಮೂವರು ನೇರವಾಗಿ ಯಾವುದೋ ರಸ್ತೆ ಹಿಡಿದುಕೊಂಡು ಮಹಿಳೆಯರ ಶೌಚಾಲಯದ ಕಡೆಗೆ ಬಂದರು. ಶೌಚಾಲಯ ನೋಡಿ ಸ್ವಲ್ಪ ಕಕ್ಕಾಬಿಕ್ಕಿಯಾದ ಮಣಿ ಅಲ್ಲೇ ನಿಂತುಕೊಂಡ. ಹಿಂದೆ ಬರುತ್ತಿದ್ದ ಮಹಿಳೆಯರಲ್ಲಿ ಒಬ್ಬರು ಮಣಿಯನ್ನು ದುರುಗುಟ್ಟಿ ನೋಡಿ, “ಹೆಣ್ಣು ಮಕ್ಕಳು ಟಾಯ್ಲೆಟ್ ಕಡೆಗೋದರೂ ಬಿಡುವುದಿಲ್ಲ ತುಃ” ಎಂದಳು. ಮಣಿ ಅಲ್ಲೇ ಇದ್ದರೆ ಏನೋ ಗ್ರಹಚಾರ ಕಾದಿದೆಯೆಂದು ಹಿಂದಕ್ಕೆ ತಿರುಗಿಕೊಂಡು ಬಿರುಬಿರುನೆ ನಡೆದು ಹೋಗಿಬಿಟ್ಟ. ಮೂವರೂ ಸುಮ್ಮನೆ ಶೌಚಾಲಯದ ಒಳಗೋಗಿ ಎರಡು ನಿಮಿಷಗಳಿದ್ದು ಹೊರಕ್ಕೆ ಬಂದರು. ಮಣಿ ಅಲ್ಲಿ ಕಾಣದೆ ಹುಡುಗಿಯರು ಎದೆಗಳ ಮೇಲೆ ಕೈಗಳನ್ನ ಇಟ್ಟುಕೊಂಡು ಉಸಿರುಬಿಡುತ್ತ ಜೊತೆಗೆ ನಗುತ್ತಾ ತಮ್ಮತಮ್ಮ ಮನೆಗಳ ಕಡೆಗೆ ಹೊರಟುಹೋದರು.

*****

ಮರುದಿನ ಬೆಳಿಗ್ಗೆ 9 ಗಂಟೆ. ಸೆಲ್ವಿ ಮನೆಯ ಎದುರುಗಡೆ ಮೈದಾನದಲ್ಲಿ ಏನೋ ಜೋರಾಗಿ ಸದ್ದು ಕೇಳಿ ಬರುತ್ತಿದೆ. ಸುತ್ತಲಿನ ಮನೆಗಳವರು ಹೊರಕ್ಕೆ ಬಂದು ನೋಡುತ್ತಿದ್ದಾರೆ. ಕಾಲೇಜ್ ರಜೆ ಇದ್ದ ಕಾರಣ ಸೆಲ್ವಿ ಕೂಡ ಮನೆಯಲ್ಲಿದ್ದು ಹೊರಕ್ಕೆ ಬಂದು ನೋಡುತ್ತಾಳೆ. ದೂರದಲ್ಲಿ ಏನೋ ಜಗಳ ನಡೆಯುತ್ತಿದ್ದು ಯುವಕರು ಯಾರೆಂದು ಕಾಣಿಸಲಿಲ್ಲ. ಒಬ್ಬ ಯುವಕನನ್ನು ಮೂರುನಾಲ್ಕು ಯುವಕರು ಸುತ್ತುವರಿದಿರುವುದು ಮಾತ್ರ ಕಾಣಿಸುತ್ತಿತ್ತು. ಅಷ್ಟರಲ್ಲಿ ಕೆಲವು ಮಹಿಳೆಯರು ತಮ್ಮ ಹುಡುಗರೇನೊ ಎಂದು ಹತ್ತಿರಕ್ಕೆ ಓಡಿಹೋದರು. ಸೆಲ್ವಿಗೆ ದಿಢೀರನೆ ಮಣಿ ಜ್ಞಾಪಕಕ್ಕೆ ಬಂದು ಹತ್ತಿರಕ್ಕೆ ಓಡಿಹೋಗಿ ನೋಡಿದರೆ ಹೌದು! ಮಣಿ ಮಧ್ಯದಲ್ಲಿದ್ದು ಮೂರುನಾಲ್ಕು ಯುವಕರು ಅವನನ್ನು ಸುತ್ತುವರಿದುಕೊಂಡಿದ್ದಾರೆ.

ಒಬ್ಬ, “ಏ ಯಾವ ಲೈನೊ ನಿಂದು? ಇಲ್ಲಿಗ್ಯಾಕೆ ಬಂದೆ? ಬೆಳಿಗ್ಗೆಯಿಂದ ನೋಡ್ತಾ ಇದ್ದೀವಿ. ಇಲ್ಲೇ ಕುಳಿತಿದ್ದೀಯಾ? ಏನು ಹುಡುಗಿಯರನ್ನು ಲೈನ್ ಹೊಡೆಯುವುದಕ್ಕೆ ಬಂದಿದ್ದಿಯಾ?” ಎಂದರೆ ಇನ್ನೊಬ್ಬ, “ಕಳ್ಳತನ ಮಾಡುವುದಕ್ಕೆ ಬಂದಿರಬೇಕು” ಎನ್ನುವುದರ ಜೊತೆಗೆ ಒಂದು ಕೆಟ್ಟ ಮಾತನ್ನು ಬಳಿಸಿದ್ದೆ ಮಣಿ, “ನಾನು ಕಳ್ಳನ ತರಾ ಕಾಣ್ತಾ ಇದ್ದೀನಾ?” ಎಂದು ಅವನ ಮೇಲೆ ಏರಿ ಹೋದ. ಆ ಯುವಕ ಮಣಿಯ ಮುಖಕ್ಕೆ ಒಂದು ಗುದ್ದು ಗುದ್ದಿಬಿಟ್ಟ. ಮಣಿ ಪಕ್ಕಕ್ಕೆ ತಿರುಗಿಕೊಂಡಿದ್ದೆ ಇನ್ನೊಬ್ಬ ಯುವಕ ಮೂಗಿನ ಮೇಲೆ ಗುದ್ದಿದ. ಮಣಿ ಮೂಗಿನ ಮೇಲೆ ಕೈ ಇಟ್ಟುಕೊಂಡು ಕೈ ನೋಡುತ್ತಾನೆ. ಕೈಯೆಲ್ಲ ರಕ್ತ. ಇನ್ನೊಬ್ಬ, “ತಂಬಿ ಇದು ನಿಮ್ಮ ಏರಿಯಾ ಅಲ್ಲ. ಭದ್ರ ಇಲ್ಲಿಂದ ವಾಪಸ್ ಓಡಿ ಹೋಗಿಬಿಡು. ಇಲ್ಲ ಅಂದರೆ ಅಷ್ಟೇ ಇಲ್ಲಿಂದ ನಿನ್ನ ಬಾಡೀನೂ ಹೋಗುವುದಿಲ್ಲ” ಎಂದ. ಅಷ್ಟರಲ್ಲಿ ಹಿರಿಯರೊಬ್ಬರು ಮಧ್ಯದಲ್ಲಿ ತೂರಿ ಬಂದು, “ಯಾರೋ ಅದು? ಏನು ಗಲಾಟೆ? ತಂಬಿ ಯಾರು ನೀನು. ಇಲ್ಲಿಗ್ಯಾಕೆ ಬಂದೆ?” ಎಂದರು. “ಇಲ್ಲಣ್ಣ ಸುಮ್ಮನೆ ನಮ್ಮ ಫ್ರೆಂಡ್‌ನ ನೋಡೋಕೆ ಬಂದೆ. ಇವರು ಏನೋನೊ ಮಾತಾಡ್ತಾ ಇದ್ದಾರೆ” ಎಂದ.

ಅಷ್ಟರಲ್ಲಿ ಸೆಲ್ವಿ ಗುಂಪಿನ ಮಧ್ಯದಲ್ಲಿ ಕಾಣಿಸಿಕೊಂಡು ಮಣಿ ಅವಳ ಕಡೆಗೆ ನೋಡಿ ನಾಚಿಕೆಯಿಂದ ತಲೆ ತಗ್ಗಿಸಿಕೊಂಡ. ಸುತ್ತಲಿದ್ದ ಜನರು ಏನೇನೊ ಮಾತನಾಡುತ್ತಿದ್ದರು. ಮಣಿಗೆ ಈಗ ಏನು ಮಾಡಬೇಕೊ ಅರ್ಥವಾಗದೆ ಮತ್ತೆ ಸೆಲ್ವಿ ಕಡೆಗೆ ನೋಡಿದ್ದೆ ಸೆಲ್ವಿ ಇಲ್ಲಿಂದ ಹೋಗು ಎನ್ನುವಂತೆ ಕಣ್ಣುಗಳಲ್ಲೇ ಸನ್ನೆ ಮಾಡಿದಳು. ಹಿರಿಯಾತ, “ತಂಬಿ, ಆಯಿತು. ನೀನು ಇಲ್ಲಿಂದ ಹೋಗು” ಎಂದು ದಾರಿ ಮಾಡಿಕೊಟ್ಟರು. ಮಣಿ, “ಆಯಿತು ಅಣ್ಣ. ಹೋಗ್ತೀನಿ” ಎಂದು ಗುಂಪಿನಲ್ಲಿದ್ದ ಸೆಲ್ವಿ ಕಡೆಗೆ ನೋಡುತ್ತ ಹೊರಟುಹೋದ. ಸೆಲ್ವಿ ಜೊತೆಗೆ ನಾಲ್ಕಾರು ಹೆಣ್ಣುಮಕ್ಕಳಿದ್ದ ಕಾರಣ ಅವರ್ಯಾರಿಗೂ ಸೆಲ್ವಿ ಮತ್ತು ಮಣಿಯ ಮೇಲೆ ಸಂದೇಹ ಬರಲಿಲ್ಲ. ಮಣಿ ಅಲ್ಲಿಂದ ಹೊರಟುಹೋದನು. ಆದರೆ ಅವನಿಗೆ ತುಂಬಾ ಅವಮಾನವಾಗಿತ್ತು. ಇದು ಸೆಲ್ವಿ ಕೈಯಲ್ಲಿ ಕೆನ್ನೆಗೆ ಏಟು ತಿಂದಿದ್ದಕ್ಕಿಂತ ನೂರು ಪಟ್ಟು ಹೆಚ್ಚು ಅವಮಾನವಾಗಿತ್ತು. ಉದ್ದಂಡಮ್ಮಾಳ್ ಗುಡಿಯ ಹಿಂದಿದ್ದ ಕೊಳಾಯಿ ಹತ್ತಿರಕ್ಕೆ ಹೋಗಿ ಮುಖವನ್ನು ಚೆನ್ನಾಗಿ ತೊಳೆದುಕೊಂಡು ಅಲ್ಲಿಂದ ನಿಧಾವಾಗಿ ಹೊರಕ್ಕೆ ಬಂದು ದೇವಸ್ಥಾನದ ಮುಂದಿನ ಅರಳಿಕಟ್ಟೆ ಮೇಲೆ ಕುಳಿತುಕೊಂಡ.

ಸ್ವಲ್ಪ ಹೊತ್ತಾದ ಮೇಲೆ ಏನೋ ಜ್ಞಾಪಕ ಬಂದಂತೆ ಎದೆಯ ಮೇಲಿನ ಶರ್ಟ್ ನೋಡಿಕೊಂಡ. ಶರ್ಟ್ ಮೇಲೆ ಎರಡು ತೊಟ್ಟ ರಕ್ತ ಬಿದ್ದಿರುವುದು ಕಾಣಿಸಿತು. ಈಗ ಏನು ಮಾಡುವುದು? ಮನೆಗೋದರೆ ಅಮ್ಮ ಇಲ್ಲ ಸುಮತಿ ನೋಡೇನೋಡುತ್ತಾರೆ. ಮೂಗು ಊದಿಕೊಂಡಿದೆಯೇನೊ ಎನ್ನುವ ಅನುಮಾನ ಬಂದು, ಗುಡಿಯ ಒಳಗಡೆ ಹೋಗಿ ಕನ್ನಡಿಯಲ್ಲಿ ನೋಡಿದರೆ ಹೇಗೆ ಎನ್ನುವ ಆಲೋಚನೆ ಬಂದರೂ ಗುಡಿಯಲ್ಲಿ ಸಾಕಷ್ಟು ಜನರಿದ್ದು ಹೋಗುವುದು ಸರಿಇಲ್ಲ ಎಂದು ಅಲ್ಲೇ ಕುಳಿತುಕೊಂಡ. ಅಷ್ಟರಲ್ಲಿ ಯಾರೋ ಗಣಿ ಅಧಿಕಾರಿ ಕುಟುಂಬದ ಯುವತಿಯೊಬ್ಬಳು ಹೊಸ ಸ್ಕೂಟರ್ ತಂದು ದೇವಸ್ಥಾನದ ಮುಂದೆ ನಿಲ್ಲಿಸಿ ಬೀಗವಾಕಿ ಚಪ್ಪಲಿಯನ್ನು ಬಾಗಿಲು ಮುಂದೆ ಬಿಟ್ಟು ಒಳಕ್ಕೆ ಹೋದಳು. ಅವಳು ಹೋಗಿದ್ದೆ ತಡ. ಮಣಿ ದಡಕ್ಕನೇ ಎದ್ದು ಹೋಗಿ ಮೂಗನ್ನು ಕನ್ನಡಿಯಲ್ಲಿ ನೋಡುತ್ತಾನೆ. ಮೂಗು ಅಷ್ಟೇನೂ ಊದಿಕೊಂಡಿಲ್ಲ ಆದರೆ ಮೂಗಿನ ಒಳಗೆ ರಕ್ತ ಇರುವುದು ಕಾಣಿಸಿತು. ಮತ್ತೆ ದೇವಸ್ಥಾನ ಹಿಂದಕ್ಕೆ ಹೋಗಿ ಕೊಳಾಯಿಯಲ್ಲಿ ನೀರುಬಿಟ್ಟು ಮೂಗನ್ನು ಚೆನ್ನಾಗಿ ತೊಳೆದುಕೊಂಡ. ಗುಡಿಯನ್ನು ಸುತ್ತಾಕುತ್ತಿದ್ದ ದುಂಡಗಿನ ಮಹಿಳೆಯೊಬ್ಬರು ಮಣಿಯನ್ನ ದುರುಗುಟ್ಟಿ ನೋಡತ್ತಾ ಹೋದಳು. ಆ ಮಹಿಳೆ ಮಣಿಯನ್ನು ಯಾಕೆ ಹಾಗೆ ದುರುಗುಟ್ಟಿ ನೋಡಿದಳು ಎಂದು ಅವನಿಗೆ ಅರ್ಥವಾಗಲಿಲ್ಲ.

ಸೆಲ್ವಿ, ರಾಜಿ ಮತ್ತು ಪಾರ್ವತಿ ಮೂವರೂ ಸಾಯಂಕಾಲ ಅವರ ಕಾಲೋನಿಯ ದೋಬಿಘಾಟ್ ಹತ್ತಿರ ಮರದ ಕೆಳಗೆ ನಿಂತುಕೊಂಡು ಮಾತನಾಡುತ್ತಿದ್ದರು. ಮೊದಲ ಬಾರಿಗೆ ಸೆಲ್ವಿ ತನ್ನ ಗೆಳತಿಯರ ಜೊತೆಗೆ ತೀವ್ರ ಆತಂಕ ಮತ್ತು ಭಯ ವ್ಯಕ್ತಪಡಿಸುತ್ತ, “ಇವನೇನೆ ನನ್ನನ್ನ ಬಿಡುವುದಿಲ್ಲ ಅನಿಸುತ್ತೆ. ಈ ಕತೆ ಎಲ್ಲಿಗೋಗಿ ಮುಟ್ಟುತ್ತೊ ಏನೋ. ಆ ದಿನ ಕಾಲೇಜ್‌ನಲ್ಲಿ ಅವನ ಕೆನ್ನೆಗೆ ಹೊಡೆಯದೇ ಇದ್ದಿದ್ದರೆ ಅವನಿಂದ ಏನಾದರೂ ಮಾಡಿ ತಪ್ಪಿಸಿಕೊಳ್ಳಬಹುದಿತ್ತು. ಈಗ ಕಾಲೇಜಿಗೆಲ್ಲ ಗೊತ್ತಾಗಿ, ಸಾಲದೂ ಅಂತ ನಮ್ಮ ಕಾಲೋನಿವರೆಗೂ ಬಂದುಬಿಟ್ಟಿದೆ. ವಿಷಯ ನಮ್ಮಪ್ಪನಿಗೆ ಗೊತ್ತಾದರೆ ನನ್ನನ್ನ ಸುಮ್ಮನೆ ಬಿಡುವುದಿಲ್ಲ” ಎಂದಳು. ರಾಜಿ, “ಆಗಿದ್ದು ಆಗಿಹೋಯಿತು. ಈಗ ಅವನನ್ನು ನಿನ್ನ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳುವುದು ಒಳ್ಳೇದು. ಇಲ್ಲ ಅಂದರೆ ಅವನು ಪದೇಪದೇ ಮನೆ ಹತ್ತಿರಕ್ಕೆ ಬರ್ತಾನೆ ಇರ್ತಾನೆ” ಅಂದಳು. ಸೆಲ್ವಿ, “ಅವನನ್ನ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಬೇಕೆಂದರೆ ನಾನು ಅವ್ನ ಲವ್ ಮಾಡಬೇಕು? ಅಲ್ಲವೆ?” ಪ್ರಶ್ನಿಸಿದಳು. ಪಾರ್ವತಿ, “ಇಲ್ಲ ಅಂದರೆ ಇನ್ನು ಉಳಿದಿರುವುದು ಒಂದೇ ದಾರಿ. ನೀನು, ನಿಮ್ಮ ತಂದೆಗೆ ಹೇಳಿ ಅವರು, ಮಣಿ ಮನೆಯಲ್ಲಿ ತಿಳಿಸಿ ಮಣಿ ನಿನ್ನ ತಂಟೆಗೆ ಬರದಂತೆ ಮಾಡುವುದು” ಎಂದಳು. ಸೆಲ್ವಿ ಒಂದೆರಡು ಕ್ಷಣ ಆಲೋಚಿಸಿ ಒಂದು ದೀರ್ಘ ಶ್ವಾಸ ತೆಗೆದುಕೊಂಡು “ನಾವೇ ಅವನನ್ನ ನಮ್ಮಿಂದೆ ಬರದಂತೆ ಮಾಡುವುದಕ್ಕೆ ಆಗುವುದಿಲ್ಲವೆ?” ಪ್ರಶ್ನಿಸಿದಳು. ರಾಜಿ, “ಅದೇಗೇ ಅವ್ನ ಹೊಡೆಯುವುದಕ್ಕಾಗುತ್ತ? ಇಲ್ಲ ನಾವು ಪೊಲೀಸ್ ಠಾಣೆಗೆ ಹೋಗುವುದಕ್ಕಾಗುತ್ತ?” ಪ್ರಶ್ನಿಸಿದಳು.

ಸೆಲ್ವಿ, “ನನಗೆ ಬೆಳಿಗ್ಗೆಯಿಂದ ತಲೆ ತಿರಗ್ತಾ ಇದೆ. ಈ ರೋಡ್ ರೋಮಿಯೋಗಳು ಲೈಫ್‌ನಲ್ಲಿ ಯಾವಾಗಲೂ ಸಕ್ಸಸ್ ಆಗುವುದಿಲ್ಲ. ನಮ್ಮ ಲೈನ್‌ನಲ್ಲಿ ಇಂತಹ ಎಷ್ಟು ಜನರನ್ನು ನೋಡಿದ್ದೀವಿ” ಎಂದಳು. ಪಾರ್ವತಿ, “ನಾನೊಂದು ಮಾತೇಳ್ಲ. ನೀನು ಕೋಪಿಸ್ಕೊಬಾರದು?” ಎಂದಳು. ರಾಜಿ, “ಅಯ್ಯೋ ಹೇಳೆ. ಅವಳ್ಯಾಕೆ ಕೋಪಿಸ್ಕೋತಾಳೆ?” ಎಂದಳು. ಪಾರ್ವತಿ, ಮುಂದುವರಿಯುತ್ತ “ನನಗೆ ಗೊತ್ತಾದ ಹಾಗೆ ಮಣಿ ನಿನ್ನನ್ನ ತುಂಬಾ ಪ್ರೀತಿಸ್ತಾನೆ. ನಿನ್ನ ಹಿಂದೆ ಸುತ್ತಾಡಿಕೊಂಡು ತರಗತಿಗಳನ್ನೆಲ್ಲ ಬಿಟ್ಟು ಫೇಲಾಗಿದ್ದಾನೆ. ನೀನು ಅವನನ್ನ ಲವ್ ಮಾಡ್ತೀನಿ ಅಂತ ಹೇಳಿ ಕೆಲವು ಕಂಡೀಶನ್‌ಗಳನ್ನ ಹಾಕಬೇಕು. ಒಂದು, ಇಬ್ಬರೂ ಡಿಗ್ರಿ ಮುಗಿಸಬೇಕು. ಎರಡು, ಡಿಗ್ರಿ ಮುಗಿಸುವವರೆಗೂ ಮದುವೆ ಆಗ್ಬಾರದು. ಅಷ್ಟು ಹೇಳಿದರೆ ಅವನು ನಿನ್ನ ಮಾತು ಕೇಳ್ತಾನೆ. ಚೆನ್ನಾಗಿ ಓದಿ ಪಾಸೂ ಆಗ್ತಾನೆ” ಎಂದಳು. ಸೆಲ್ವಿ ಇದನ್ನೆಲ್ಲ ಆಗಲೇ ಯೊಚಿಸಿದ್ದು ಈಗ ಅವಳ ಗೆಳತಿಯರೂ ಅದನ್ನೇ ಹೇಳುತ್ತಿದ್ದರು. ಸೆಲ್ವಿ, “ಆಯಿತು. ಇನ್ನೆರಡು ದಿನ ಯೋಚನೆ ಮಾಡ್ತೀನಿ. ಆ ನಂತರ ನಾವು ಮೂವರೂ ಮಾತನಾಡಿ ಒಂದು ನಿರ್ಧಾರಕ್ಕೆ ಬರೋಣ” ಎಂದಳು. ಸೆಲ್ವಿ ತಂದೆ ಎಲ್ಲಿಂದ ಬಂದರೋ “ಸೆಲ್ವಿ ಏನಮ್ಮ ಕಾರ್ಮಿಕರ ತರಹ ಕತ್ತಲಲ್ಲಿ ಮೂರೂ ಜನ ಸೇರಿಕೊಂಡು ಮೀಟಿಂಗ್ ಮಾಡ್ತಾ ಇದ್ದೀರಿ?” ಎಂದರು. ಮೂವರೂ ಅವಕ್ಕಾಗಿ ಸೆಲ್ವಿ, “ಏನೂ ಇಲ್ಲಪ್ಪ” ಎನ್ನುತ್ತಾ ಮೂವರೂ ತಮ್ಮತಮ್ಮ ಮನೆಗಳ ಕಡೆಗೆ ಹೊರಟರು.

(ಹಿಂದಿನ ಕಂತು: ಕಪ್ಪು ನೆಲದಲ್ಲಿ ಹುಟ್ಟಿಕೊಂಡಿತು ಚಿನ್ನದ ನಗರ)

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ