Advertisement
ಕೆ. ವಿ. ತಿರುಮಲೇಶ್ ಅನುವಾದಿಸಿದ ಟಿ. ಎಸ್. ಎಲಿಯಟ್ ನ ಎರಡು ಕವಿತೆಗಳು

ಕೆ. ವಿ. ತಿರುಮಲೇಶ್ ಅನುವಾದಿಸಿದ ಟಿ. ಎಸ್. ಎಲಿಯಟ್ ನ ಎರಡು ಕವಿತೆಗಳು

ನಿಗೂಢ ಬೆಕ್ಕು: ಮೆಕಾವಿಟಿ

(ಟಿ.ಎಸ್. ಎಲಿಯಟ್ ನ Macavity: The Mystery Cat ಎಂಬ ಇಂಗ್ಲಿಷ್ ಕವಿತೆಯ ಅನುವಾದ)

ಮೆಕಾವಿಟಿ ಒಂದು ನಿಗೂಢ ಬೆಕ್ಕು, ಅದನ್ನು ಕರೀತಾರೆ ಪ್ರಚ್ಛನ್ನ ಪಾಂಜ
ಯಾಕೆಂದ್ರೆ ಕಾನೂನಿಗೇ ಸವಾಲು ಹಾಕುವಂಥ ಕ್ರಿಮಿನಲದು
ಸ್ಕಾಟ್ಳೆಂಡ್ ಯಾರ್ಡಿನ ಸೋಲು, ಫ್ಲೈಯಿಂಗ್ ಸ್ಕ್ವಾಡಿನ ಶಾಪ
ಯಾಕೆಂದ್ರೆ ಜಾಗ ಸೇರುವ ಹೊತ್ತು-ಮೆಕಾವಿಟಿ ಅಲ್ಲಿ ಇಲ್ಲ

ಮೆಕಾವಿಟಿ, ಮೆಕಾವಿಟಿ, ಇನ್ನೊಬ್ಬರಿಲ್ಲ ಮೆಕಾವಿಟಿಯಂಥವರು
ಮನುಷ್ಯನ ಕಾನೂನನು ಮುರಿದಿದೆ, ಗುರುತ್ವಾಕರ್ಷಣವ ಮೀರ್ತಾ ಇದೆ
ಅದರ ನೆಲ ಬಿಟ್ಟೇಳುವ ಶಕ್ತಿ ಫಕೀರನನ್ನೇ ಹುಬ್ಬೇರಿಸುವುದು
ಮತ್ತು ನೀವು ಜಾಗ ಸೇರುವ ಹೊತ್ತು—ಮೆಕಾವಿಟಿ ಅಲ್ಲಿ ಇಲ್ಲ!
ನೆಲಮಾಳಿಗೆಯಲಿ ಹುಡುಕುತ್ತೀರಿ, ಗಾಳಿಯಲಿ ನೋಡುತ್ತೀರಿ—
ಆದರೆ ಹೇಳ್ತೀನಿ ಒಮ್ಮೆ, ಮತ್ತು ಇನ್ನೊಮ್ಮೆ, ಮೆಕಾವಿಟಿ ಅಲ್ಲಿ ಇಲ್ಲ!

ಮೆಕಾವಿಟಿಯೊಂದು ಅಲ್ಲಂ ರಂಗಿನ ಪುಚ್ಚೆ, ತುಂಬಾ ಎತ್ರ ಮತ್ತು ಸಪೂರ;
ಕಂಡರೆ ನಿಮಗೆ ಗೊತ್ತಾಗುತ್ತೆ, ಯಾಕೆಂದ್ರೆ ಅದಕ್ಕೆ ಒಳಗಿಳಿದ ಕಣ್ಣು.
ಗಹನ ಚಿಂತನೆಯಿಂದ ಬಾಗಿದ ಹುಬ್ಬು, ಶಿರವೊಂದು ಗೋಲಗುಮ್ಮಟ;
ಅಸಡ್ಡೆಯಿಂದ ಧೂಳಿಡಿದ ಕೋಟು, ತಿದ್ದಿ ತೀಡದ ಮೀಸೆ
ಆಡಿಸುವುದು ತಲೆ ಆಚೆಗೆ ಈಚೆಗೆ, ಹಾವಿನಂಥ ಚಲನೆ,
ಹಾಗೂ ಅರೆನಿದ್ರೆಯಲ್ಲಿದೆ ಅಂತ ನೀವಂದುಕೊಂಡರೆ, ಯಾವತ್ತೂ ಅದು ಜಾಗೃತ.

ಮೆಕಾವಿಟಿ, ಮೆಕಾವಿಟಿ, ಯಾರೂ ಇಲ್ಲ ಮೆಕಾವಿಟಿಯಂಥವರು,
ಯಾಕೆಂದ್ರೆ ಥೇಟ್ ದೆವ್ವವೆ ಅದು ಬೆಕ್ಕಿನ ರೂಪದ, ನೀತಿಗೆಟ್ಟ ಪೆಡಂಬೂತ.
ಅಡ್ಡ ಗಲ್ಲಿಯಲಿ ಕಾಣಸಿಗುವುದು, ಅಥವಾ ಸರ್ಕಲಿನಲ್ಲಿ—
ಆದ್ರೆ ಕೃತ್ಯ ಗೊತ್ತಾದಾಗ, ಮೆಕಾವಿಟಿ ಅಲ್ಲಿ ಇಲ್ಲ.

ಹೊರಮಟ್ಟಿಗದು ಮರ್ಯಾದಸ್ಥ (ಇಸ್ಪೀಟಿನಲಿ ವಂಚಿಸ್ತೆ ಅಂತಾರೆ.)
ಸ್ಕಾಟ್ಳೆಂಡ್ ಯಾರ್ಡಿನ ಯಾವುದೆ ಫೈಲ್ ನಲಿ ಅದರ ಕಾಲಗುರುತಿಲ್ಲ
ಅಡುಗೆ ಮನೆ ಲೂಟಿಯಾದಾಗಲು, ಆಭರಣ ಭಂಡಾರ ಖಾಲಿಯಾದಾಗಲು,
ಹಾಲಿನ ಭಾಂಡಿಗೆ ಕಾಣೆಯಾದಾಗಲು, ಇನ್ನೊಂದು ನಾಯಿಮರಿ ಕೊಲೆಯಾದಾಗಲು
ಅಥವಾ ಗ್ರೀನ್ ಹೌಸ್ ಪುಡಿಯಾದಾಗಲು, ಅದರ ಚಪ್ಪರ ಮುರಿದುಬಿದ್ದಾಗಲು
ಅಯ್! ಏನದ್ಭುತ! ಮೆಕಾವಿಟಿ ಅಲ್ಲಿ ಇಲ್ಲ!

ಹಾಗೂ ಇನ್ನೊಂದು ಒಪ್ಪಂದ ಎಡವಟ್ಟಾಗಿದೆ ಅಂತ ವಿದೇಶ ಮಂತ್ರಾಲಯಕ್ಕೆ ಗೊತ್ತಾದಾಗ,
ಅಥವಾ ನೌಕಾದಳ ಕೆಲ ನೀಲಿ ನಕ್ಷೆಗಳನ್ನ ಕಳಕೊಂಡಾಗ,
ಹಾಲ್ ನಲ್ಲಾಗಲಿ ಮೆಟ್ಟಿಲಲ್ಲಾಗಲಿ ಕಾಗದದ ಚೂರೊಂದು ಇದ್ದೀತು—
ಆದರೆ ತನಿಖೆ ನಡೆಸೋದು ನಿಷ್ಪ್ರಯೋಜಕ—ಮೆಕಾವಿಟಿ ಅಲ್ಲಿ ಇಲ್ಲ!
ಬೆಳಕಿಗೆ ಬಂದಾಗ ನಷ್ಟ ಗುಪ್ತಚರ ಇಲಾಖೆ ಹೇಳುತ್ತೆ:
‘ಅದು ಮೆಕಾವಿಟೀನೇ ಇರಬೇಕು!’- ಆದರೆ ಅದೊಂದು ಮೈಲಿ ದೂರ.
ವಿಶ್ರಾಂತಿ ತೆಗೊಳ್ತ ಮಲಗಿರತ್ತೆ, ಅಥವಾ ಹೆಬ್ಬೆಟ್ಟು ನೆಕ್ತ,
ಅಥವಾ ಕ್ಲಿಷ್ಟ ಖಂಡಭಾಗಹಾರ ಬಿಡಿಸ್ತ.

ಮೆಕಾವಿಟಿ, ಮೆಕಾವಿಟಿ, ಇನ್ನೊಬ್ಬರಿಲ್ಲ ಮೆಕಾವಿಟಿಯಂಥವರು
ಅಂಥ ವಂಚಕ ಬೆಕ್ಕು ಹಿಂದೆಂದು ಇರಲಿಲ್ಲ, ಅಥವಾ ಅಂಥ ನಾಜೂಕಯ್ಯ.
ಯಾವಾಗಲು ಅದಕ್ಕೊಂದು ಅಲಿಬೈ ಇರತ್ತೆ, ಮತ್ತು ಕೈಯಲಿ ಇನ್ನೆರಡು.
ಹಾಗೂ ಯಾವಾಗ ತಾನೆ ಕೃತ್ಯ ನಡೆದಾಗಲು, ಮೆಕಾವಿಟಿ ಅಲ್ಲಿ ಇರಲೇ ಇಲ್ಲ!
ಜನ ಅಂತಾರೆ, ಕುಕೃತ್ಯಖ್ಯಾತ ಬೆಕ್ಕುಗಳೆಲ್ಲಾ
(ಮುಂಗೋಜೆರ್ರಿಯ ನೆನಪಾಗುತ್ತೆ, ಅಥವಾ ಗ್ರಿಡ್ಳ್ ಬೋನ್ ಎಂಬುದರ)
ಮೆಕಾವಿಟಿಯ ಕಿಂಕರರಲ್ಲದೆ ಬೇರೆ ಬೆಕ್ಕುಗಳಲ್ಲ: ಅವುಗಳ
ಕೆಲಸ ಕಾರ್ಯಗಳ ಸೂತ್ರಧಾರ ಅದು: ಪಾತಕದ ನೆಪೋಲಿಯನ್ನು!

ಟಿಪ್ಪಣಿ: ಟಿ. ಎಸ್. ಎಲಿಯಟ್ ನ Old Possum’s Book of Practical Cats ಎಂಬ ಪುಸ್ತಕದಿಂದ. ಪೋಸುಮ್ ಎನ್ನುವುದು ಎಝ್ರಾ ಪೌಂಡ್ ಎಲಿಯಟ್ಗೆ ಇರಿಸಿದ ಅಡ್ಡ ಹೆಸರಾಗಿತ್ತು. ಪೋಸುಮ್ ಬೆಕ್ಕಿನ ಹಾಗೆ ಕಾಣಿಸುವ ಒಂದು ಚಿಕ್ಕ ಕಾಡು ಪ್ರಾಣಿ, ಬುದ್ಧಿವಂತ ಎಂದು ಪ್ರತೀತಿ.

ಘೇಂಡಾಮೃಗ

(ಟಿ. ಎಸ್. ಎಲಿಯಟ್ ನ The Hippopotamus ಎಂಬ ಕವಿತೆಯನ್ನು ಅನುಸರಿಸಿ)

ಗಡಸು ಮೂತಿ ಚತುಷ್ಪಾದಿ ಘೇಂಡಾಮೃಗ
ಶಿಲೆಯಲ್ಲಿ ಹೆಜ್ಜೆ ಮೂಡುವಷ್ಟು ಅದರ ವಜ್ಜೆ
ಗಟ್ಟಿಮುಟ್ಟು ಮೈ ಕೈ ಅಂತನಿಸಿದರೂ ನಮಗ
ಅದು ಅಂತರ್ಯದಲ್ಲಿ ಬರೀ ಎಲುಬು ಮಾಂಸ ರಜ್ಜೆ.

ಎಲುಬು ಮಾಂಸ ರಜ್ಜೆ ದುರ್ಬಲ ಮತ್ತು ಸಣಕಲ
ರೋಗ ರುಜಿನ ಸಂಕುಲದಿಂದ ಛಿದ್ರ.
ನಮ್ಮ ಜೈ ಕನ್ನಡ ಸಾಹಿತ್ಯ ಪರಿಷತ್ತಿನ ತಳ
ಚಾಮರಾಜ ಪೇಟೆಯಲ್ಲಿ ಭದ್ರ.

ಬಡ ಘೇಂಡಾ’ದ ಅಶಕ್ತ ಬಾಹುಗಳ ಒಳಕ್ಕೆ
ಸಿಗದು ಇಹದ ಯಾವುದೇ ಸಂಪತ್ತು.
ಆದರೆ ಒಂದಿಂಚೂ ಕದಲಬೇಕಾದ್ದಿಲ್ಲ ಅನುದಾನಕ್ಕೆ
ನಮ್ಮ ಜೈ ಕನ್ನಡ ಸಾಹಿತ್ಯ ಪರಿಷತ್ತು.

ಎಷ್ಟೇ ಜಿಗಿದರೂ ಎಟುಕೋದಿಲ್ಲ ಎಂದಿಗೂ
‘ಮೃಗದ ಕೈಗೆ ಮಾವಿನ ಮರದ ಹಣ್ಣು.
ಪರಿಷತ್ತಿಗಾದರೆ ಅಯಾಚಿತ ಬಾಗಿಲ ವರೆಗೂ
ಹಾಲು ಹೈನ ತುಪ್ಪ ಮೊಸರು ಗಿಣ್ಣು.

ಬಯಲಾಗಿಬಿಡುತ್ತದೆ ಜೋಡಿಯ ದಿನ
ಕರ್ಣಕಠೋರ ಘೇಂಡಾಮೃಗದ ಕರ್ಕಶ ಶಬ್ದ.
ಬದಲಿಗೆ ಪ್ರತಿ ದಿನ ಪರಿಷತ್ತಿನ ಕಥೆ ಕವನ
ಅರ್ಪಿತವಾಗಿ ದೇವರಿಗೆ ಎಲ್ಲವೂ ಸ್ತಬ್ದ.

ದಿನವೆಲ್ಲಾ ಘೇಂಡಾಮೃಗಕ್ಕೆ ನಿದ್ದೆಯ ಮತ್ತು
ರಾತ್ರಿಯಾಯಿತೆಂದರೆ ಬೇಟೆಯ ಹುಡುಕಾಟ.
ದೇವರ ರೀತಿ ವಿಚಿತ್ರ- ಕ. ಸಾ. ಪರಿಷತ್ತಿಗೆ ಗೊತ್ತು
ಒಟ್ಟಿಗೇ ಹೇಗೆ ಮಾಡುವುದು ನಿದ್ದೆ ಹಾಗೂ ಊಟ.

ಗಗನಗಾಮಿ ‘ಮೃಗ ದೇವವಿಮಾನದಲ್ಲಿ ಹಾರಿ
ದೂತರು ಘೋಷಿಸುತ್ತ “ಉಘೇ ಉಘೇ!”
ಕೈ ಬೀಸಿ ಹೇಳುವುದು ಜನರ ಕಡೆ ದೃಷ್ಟಿ ಬೀರಿ
“ಸಂಭವಾಮಿ ಯುಗೇ ಯುಗೇ!”

ಮಾನಸಸರೋವರದಲ್ಲಿ ದೇವಕನ್ನಿಕೆಯರು
ಖುದ್ದಾಗಿ ಅದರ ಮೈತಿಕ್ಕಿ ತೊಳೆದು
ಕುಳ್ಳಿರಿಸಲು ಸ್ವತಃ ದೇವೇಂದ್ರನೆದುರು
ಹಾಡುವುದು ಅದು ಬಂಗಾರದ ವೀಣೆ ಹಿಡಿದು.

ಮುದ್ದು ಮಾಡುವರು ವಿಶ್ವ ಸುಂದರಿಯರು ಪ್ರತಿ ಸಾರೆ
ಅಚ್ಚ ಬಿಳಿ ಹಿಮಾಂಬರದಲ್ಲಿ ಹೊದ್ದು
ಇತ್ತ ನಮ್ಮ ನಿಜವಾದ ಕ. ಸಾ. ಪರಿಷತ್ತಾದರೆ
ಹೊರಳುವುದು ತನ್ನ ತಮಂಧದಲ್ಲಿ ಬಿದ್ದು.

 

ಟಿಪ್ಪಣಿ: ‘ಹಿಪೋಪೊಟಾಮಸ್’ ಎಂದರೆ ನೀರ್ಗುದುರೆ; ಇಲ್ಲಿ ಅದಕ್ಕೆ ಬದಲಾಗಿ ಘೇಂಡಾಮೃಗವನ್ನು ಬಳಸಿಕೊಳ್ಳಲಾಗಿದೆ, ಮೂಲದ ಚರ್ಚು ಇಲ್ಲಿ ಪರಿಷತ್ತು. ಎಲಿಯಟ್ ಚರ್ಚನ್ನು ಹಾಸ್ಯ ಮಾಡಲು ಬರೆದ ಪದ್ಯ. ಎಲಿಯಟ್ ಸ್ವತಃ ಇಂಗ್ಲಿಷ್ ನಾಗರಿಕತ್ವದ ಜತೆಗೆ ಆಂಗ್ಲಿಕನ್ ಚರ್ಚನ್ನು ಸ್ವೀಕರಿಸಿದವ. ಮೂಲದಲ್ಲಿ ಅವನ ಲೇವಡಿಗೆ ಗುರಿಯಾಗಿರುವುದು ರೋಮನ್ ಕ್ಯಾಥಲಿಕ್ ಚರ್ಚು ಎಂದು ತಿಳಿಯಬೇಕಾಗುತ್ತದೆ. ಇಲ್ಲಿ ಅದಕ್ಕೆ ಪ್ರತಿಯಾಗಿ ಕ. ಸಾ. ಪರಿಷತ್ತು ಬಂದಿದೆ.

About The Author

ಕೆ.ವಿ. ತಿರುಮಲೇಶ್

ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.

1 Comment

  1. Prajna Mattihalli

    very happy to read your poems sir though it is translated one can enjoy your touch

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ