ಮೆಸಿಡೋನಿಯೋ ಪರಿಚಯವಾಗುವ ಮೊದಲು ನಾನು ಯಾವತ್ತೂ ಒಬ್ಬ ಅಮಾಯಕ ಓದುಗನಾಗಿದ್ದೆ. ಅವನು ನನಗೆ ನೀಡಿದ ಮುಖ್ಯ ಉಡುಗೊರೆಯೆಂದರೆ ನನ್ನನ್ನು ಸಂಶಯಾತ್ಮಕವಾಗಿ ಓದುವಂತೆ ಮಾಡಿದುದು. ಆರಂಭದಲ್ಲಿ ನಾನವನನ್ನು ಭಕ್ತಿಭಾವದಲ್ಲಿ ನಕಲು ಮಾಡುತ್ತ ಇದ್ದೆ – ನಾನು ನಂತರ ಪಶ್ಚಾತ್ತಪಿಸಿದಂಥ ಕೆಲವು ಶೈಲೀಯ ಚಟಗಳನ್ನು ಅವನಿಂದ ಹೆಕ್ಕಿ ತೆಗೆದು. ಆದರೆ ನಾನೀಗ ಹಿನ್ನೋಟದಲ್ಲಿ ಅವನನ್ನು ನೋಡುವುದು, ಈಡನ್ ಗಾರ್ಡನ್ ಕಂಡು ಅಪ್ರತಿಭನಾದ ಆದಂನ ಹಾಗೆ. ಅವನ ಕೆಲವು ಪುಟಗಳಲ್ಲಿ ಅವನ ಪ್ರತಿಭೆ ನೆಲೆ ನಿಂತಿದೆ; ಅವನ ಪ್ರಭಾವ ಸಾಕ್ರೆಟಿಕ್ ಸ್ವಭಾವದ್ದು.
ಕೆ.ವಿ. ತಿರುಮಲೇಶ್ ಅನುವಾದಿಸಿದ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಪ್ರಬಂಧದ ಮೂರನೆಯ ಕಂತು

ಬ್ಯೂನೋಸ್ ಏರಿಸ್

ರೈನಾ ವಿಕ್ಟೋರಿಯಾ ಯೂಜೆನಿಯಾ ಹಡಗದಲ್ಲಿ ನಾವು ಬ್ಯೂನೋಸ್ ಏರಿಸ್ಗೆ ಮರಳಿದೆವು, ಮಾರ್ಚ್ 1921ರ ಕೊನೆಗೆ. ಅಷ್ಟೊಂದು ಯುರೋಪಿಯನ್ ನಗರಗಳಲ್ಲಿ ಬದುಕಿ ಬಂದ ಮೇಲೆ – ಜಿನೇವಾ, ಝೂರಿಕ್, ನಿಮೆಸ್, ಕೋರ್ದೋಬಾ, ಮತ್ತು ಲಿಸ್ಬನ್ ನ ನೆನಪುಗಳ ನಂತರ – ನನಗೆ ಆಶ್ಚರ್ಯವಾದುದೆಂದರೆ, ನನ್ನ ಹುಟ್ಟೂರು ಬೆಳೆದಿತ್ತು, ಅದು ಈಗ ಬಹು ದೊಡ್ಡದಾಗಿತ್ತು, ಹರಡಿತ್ತು, ಮತ್ತು ತನ್ನ ಮಟ್ಟಸ ಮಾಡುಗಳ ನಿಮ್ನ ಕಟ್ಟಡಗಳೊಂದಿಗೆ ಕೊನೆಯೇ ಇಲ್ಲ ಎಂಬಂತೆ, ಭೂಗೋಳ ಶಾಸ್ತ್ರಜ್ಞರು ಮತ್ತು ಕವಿಗಳು ಪಂಪಾ ಎಂದು ಕರೆಯುವ ಪಶ್ಚಿಮ ಪಾರ್ಶ್ವದ ಕಡೆಗೆ ಅದರ ಹರಹು ಚಾಚಿತ್ತು. ಅದು ಮರಳಿಮನೆಗೆ ಎಂಬುದಕ್ಕಿಂತ ಹೆಚ್ಚಿನದಾಗಿತ್ತು; ಅದೊಂದು ಮರುಶೋಧನೆ ಎನ್ನಬೇಕು. ಆದ್ದರಿಂದ ಬ್ಯೂನೋಸ್ ಏರಿಸ್ ಅನ್ನು ನಾನು ಗಮನವಿಟ್ಟು ಮತ್ತು ಆಸಕ್ತಿಯಿಂದ ನೋಡಲು ಸಾಧ್ಯವಾಯಿತು, ಯಾಕೆಂದರೆ ನಾನು ಅಲ್ಲಿಂದ ಬಹು ಕಾಲ ದೂರವಿದ್ದೆನಲ್ಲ. ನಾನು ವಿದೇಶಕ್ಕೆ ಹೋಗದೆ ಇದ್ದರೆ, ನಾನದನ್ನು ಈಗ ನನಗದು ಕೊಟ್ಟ ಪ್ರತ್ಯೇಕ ಘಾತ ಮತ್ತು ಪ್ರಭೆಯೊಂದಿಗೆ ನೋಡಲು ಎಂದಾದರೂ ಸಾಧ್ಯವಾಗುತ್ತಿತ್ತೋ ಎಂದು ಆಶ್ಚರ್ಯವಾಗುತ್ತದೆ. ನಗರ – ಇಡೀ ನಗರವಲ್ಲ ನಿಜ, ಬದಲು ಅದರಲ್ಲಿನ ಕೆಲವೊಂದು ಸ್ಥಳಗಳು, ನನಗೆ ಭಾವನಾತ್ಮಕವಾಗಿ ಮಹತ್ವದ್ದಾದ ಕಾರಣ – ನನ್ನ ಮೊದಲ ಕವನ ಸಂಕಲನ ‘ಫರ್ವೊರ್ ದ ಬ್ಯೂನೋ ಏರಿಸ್’ಗೆ ಸಹಾಯಕವಾದುವು.

ನಾನೀ ಕವಿತೆಗಳನ್ನು 1921 ಮತ್ತು 1922ರಲ್ಲಿ ಬರೆದೆ, ಹಾಗೂ ಸಂಕಲನ 1923ರಲ್ಲಿ ಬಂತು. ಪುಸ್ತಕ ನಿಜಕ್ಕೂ ಮುದ್ರಿತವಾದುದು ಐದು ದಿನಗಳಲ್ಲಿ; ಮುದ್ರಣವನ್ನು ತ್ವರಿತಗೊಳಿಸಬೇಕಾಯಿತು, ಯಾಕೆಂದರೆ ನಾವು ಯುರೋಪಿಗೆ ಮರಳುವ ಅಗತ್ಯವಿತ್ತು. (ನನ್ನ ತಂದೆಯವರು ಕಣ್ಣಿನ ಸಮಸ್ಯೆಗೆ ತಮ್ಮ ಜಿನೇವಾ ವೈದ್ಯರ ಭೇಟಿ ಮಾಡಬೇಕಾಗಿತ್ತು.) ಮುದ್ರಿತವಾದಾಗ ಒಟ್ಟು ಅರವತ್ತನಾಲ್ಕು ಪುಟಗಳಾಗುತ್ತವೆ ಎನ್ನುವುದು ನನ್ನ ಅಂದಾಜು ಆಗಿತ್ತು, ಆದರೆ ಹಸ್ತಪ್ರತಿ ಅದಕ್ಕಿಂತ ಲಂಬವಾಗಿದ್ದು, ಕೊನೆ ಗಳಿಗೆಯಲ್ಲಿ ಐದು ಕವಿತೆಗಳನ್ನು ಕೈಬಿಡಬೇಕಾಗಿ ಬಂತು – ದೇವರ ದಯ! ಆ ಕವಿತೆಗಳ ಕುರಿತು ನನಗೊಂದೂ ನೆನಪಿಗೆ ಬರವಲ್ಲದು. ಹುಡುಗತನದ ಉತ್ಸಾಹದಲ್ಲಿ ಹೊರತಂದ ಪುಸ್ತಕ ಅದು. ಕರಡು ತಿದ್ದಲಿಲ್ಲ, ಅನುಕ್ರಮಣಿಕೆ ಇರಲಿಲ್ಲ, ಪುಟ ಸಂಖ್ಯೆ ಕೂಡ ಹಾಕಿರಲಿಲ್ಲ. ಮುಖಪುಟಕ್ಕೆ ನನ್ನ ತಂಗಿ ಮರದ ಅಚ್ಚೊಂದನ್ನು ಮಾಡಿದಳು, ಹಾಗೂ ಮುನ್ನೂರು ಪ್ರತಿಗಳನ್ನು ಮುದ್ರಿಸಲಾಯಿತು.

ಆ ಕಾಲದಲ್ಲಿ ಪುಸ್ತಕ ಪ್ರಕಟಿಸುವುದೊಂದು ಖಾಸಗಿ ಸಾಹಸವಾಗಿತ್ತು. ಪ್ರತಿಗಳನ್ನು ಪುಸ್ತಕ ವ್ಯಾಪಾರಿಗಳಿಗೋ ಪುಸ್ತಕ ವಿಮರ್ಶೆಗೋ ಕಳಿಸುವ ಯೋಚನೆ ನನಗೆ ಎಂದೂ ಬರಲಿಲ್ಲ. ಹಲವು ಪ್ರತಿಗಳನ್ನು ನಾನು ಪುಕ್ಕಟೆ ವಿತರಿಸಿದೆ. ನನ್ನ ಪುಸ್ತಕ ವಿತರಣೆಯ ಒಂದು ವಿಧಾನ ನೆನಪಾಗುತ್ತದೆ. ‘ನೊಸೋಟ್ರೋಸ್’ನ ಕಚೇರಿಗೆ ಹೋದವರೆಲ್ಲ – ಅದು ಆ ಕಾಲದ ಹೆಚ್ಚು ಭದ್ರವಾದ ಮತ್ತು ಹಳೆಯದಾದ ಸಾಹಿತ್ಯ ಪತ್ರಿಕೆಗಳಲ್ಲಿ ಒಂದಾಗಿತ್ತು – ತಮ್ಮ ಓವರ್ ಕೋಟುಗಳನ್ನು ನಿಗದಿತ ಜಾಗದಲ್ಲಿ ತೂಗಿ ಹಾಕುತ್ತಿರುವುದನ್ನು ಗಮನಿಸಿ ನಾನು ಐವತ್ತೋ ನೂರೋ ಪ್ರತಿಗಳನ್ನು ಸಂಪಾದಕರಲ್ಲಿ ಒಬ್ಬನಾದ ಅಲ್ಫ್ರೆಡೋ ಬಿಯಾಂಚಿಯಲ್ಲಿಗೆ ಹೊತ್ತು ತಂದೆ. ಬಿಯಾಂಚಿ ನನ್ನನ್ನು ಮೋಜಿನಿಂದ ದಿಟ್ಟಿಸಿ ನೋಡಿ ಹೇಳಿದ, ‘ಈ ಪುಸ್ತಕಗಳನ್ನು ನಾನು ನಿನಗೆ ಮಾರಾಟಮಾಡಿ ಕೊಡಬೇಕೆನ್ನುವುದು ನಿನ್ನ ಇರಾದೆಯೇ?’ ‘ಅಲ್ಲ,’ ಎಂದೆ. ‘ಇವನ್ನು ನಾನು ಬರೆದಿದ್ದರೂ ನಾನು ಹುಚ್ಚನೇನೂ ಅಲ್ಲ. ಅಲ್ಲಿ ನೇತಾಡುತ್ತಿರುವ ಕೋಟುಗಳ ಜೇಬುಗಳಿಗೆ ಇವನ್ನು ತುರುಕಲು ನಿಮ್ಮನ್ನು ಕೇಳಬಹುದು ಎಂದುಕೊಂಡು ಬಂದೆ.’ ಆತ ಉದಾರವಾಗಿ ಅದನ್ನು ಮಾಡಿದ. ಒಂದು ವರ್ಷ ಊರಲ್ಲಿರದ ನಾನು ಮರಳಿದಾಗ ತಿಳಿದುಬಂದದ್ದು, ಓವರ್ ಕೋಟುಗಳ ಕೆಲವು ನಿವಾಸಿಗಳು ನನ್ನ ಕವಿತೆಗಳನ್ನು ಓದಿದ್ದರು, ಇನ್ನು ಕೆಲವರು ಅವುಗಳ ಬಗ್ಗೆ ಬರೆದಿದ್ದರು ಕೂಡ. ವಾಸ್ತವದಲ್ಲಿ ಈ ಮೂಲಕ ಕವಿಯೆಂಬ ಸ್ವಲ್ಪ ಪ್ರಸಿದ್ಧಿ ನನಗೆ ದೊರಕುವ ಹಾಗಾಯಿತು.

ಆ ಪುಸ್ತಕ ಮುಖ್ಯವಾಗಿ ರೊಮ್ಯಾಂಟಿಕ್ ಆಗಿತ್ತು, ಕೃಶ ಎನ್ನಬಹುದಾದ ಶೈಲಿಯಲ್ಲಿ ಬರೆದುದು, ಹಾಗೂ ಚುಟುಕಾದ ರೂಪಕಗಳಿಂದ ತುಂಬಿತ್ತು. ಅದು ಸೂರ್ಯಾಸ್ತಗಳನ್ನೂ, ಏಕಾಂತ ಸ್ಥಳಗಳನ್ನೂ, ಅಪರಿಚಿತ ತಿರುವುಗಳನ್ನೂ ಕೊಂಡಾಡುತ್ತಿತ್ತು. ಅದು ಬರ್ಕ್ಲಿಯನ್ ಅತಿಭೌತಿಕದ ಕಡೆಗೂ ಕುಟುಂಬ ಚರಿತ್ರೆಯತ್ತಲೂ ತಲೆ ಹಾಕುವ ಧೈರ್ಯ ಮಾಡುತ್ತಿತ್ತು; ಮೊದಲ ಪ್ರೇಮಗಳನ್ನೂ ದಾಖಲಿಸಿತ್ತು. ಜತೆಗೇ ನಾನು ಸ್ಪ್ಯಾನಿಶ್ ಹದಿನೇಳನೆಯ ಶತಮಾನವನ್ನೂ ಅಣಕಿಸುತ್ತಿದ್ದೆ, ಅಲ್ಲದೆ ಮುನ್ನುಡಿಯಲ್ಲಿ ನಾನು ಸರ್ ಥಾಮಸ್ ಬ್ರೌನ್ ನ ‘ರಿಲೀಜಿಯೋ ಮೆಡಿಚಿ’ಯ ಪ್ರಸ್ತಾಪ ಕೂಡಾ ಮಾಡಿದ್ದೆ. ಪುಸ್ತಕವೊಂದು ಪ್ಲಮ್ ಪುಡ್ಡಿಂಗ್ ನಂತೆ ಇತ್ತೆಂದು ನನ್ನ ಅನಿಸಿಕೆ – ಬಹಳಷ್ಟು ಇತ್ತು ಅದರಲ್ಲಿ. ಆದರೂ, ಈಗ ಹಿಂತಿರುಗಿ ನೋಡಿದಾಗ, ನನಗನಿಸುವುದು ಆ ಪುಸ್ತಕದಿಂದ ಆಚೆಗೆ ನಾನು ಬಂದಿಲ್ಲವೆಂದೇ. ನಂತರದ ನನ್ನ ಬರಹವೆಲ್ಲಾ ಅದರಲ್ಲಿ ಮೊತ್ತ ಮೊದಲು ತೆಗೆದುಕೊಂಡ ವಸ್ತುವಿಷಯಗಳ ಬೆಳವಣಿಗೆಯೇ ಆಗಿದೆಯೆಂದು ತೋರುತ್ತದೆ; ನನ್ನ ಇಡೀ ಜೀವಮಾನ ಆ ಒಂದು ಪುಸ್ತಕವನ್ನೇ ನಾನು ಮತ್ತೆ ಮತ್ತೆ ಬರೆಯುತ್ತ ಬಂದಿರಬಹುದು.

‘ಫರ್ವೊರ್ ದ ಬ್ಯೂನೋ ಏರಿಸ್’ನ ಕವಿತೆಗಳು ಅಲ್ಟ್ರಾಯಿಸ್ಟ್ ಕಾವ್ಯವಾಗಿದ್ದುವೇ? 1921ರಲ್ಲಿ ನಾನು ಯುರೋಪಿನಿಂದ ಮರಳಿದಾಗ, ಅಲ್ಟ್ರಾಯಿಸಂನ ಧ್ವಜ ಹಿಡಿದುಕೊಂಡು ಬಂದಿದ್ದೆ. ನಾನಿನ್ನೂ ಸಾಹಿತ್ಯ ಚರಿತ್ರಕಾರರಿಗೆ ‘ಅರ್ಜೆಂಟೀನಿಯನ್ ಅಲ್ಟ್ರಾಯಿಸಂನ ಪಿತ’ನೆಂದೇ ಪರಿಚಿತನಾಗಿದ್ದೇನೆ. ಆ ಕಾಲದಲ್ಲಿ ನಾನು ನನ್ನ ಒಡನಾಡಿ ಕವಿಗಳಾದ ಎಡುವರ್ಡೋ ಗೊಂಝಾಲಿಝ್ ಲನುಝಾ, ನೋರಾ ಲಾಂಗೆ, ಫ್ರಾನ್ಸಿಸ್ಕೋ ಪಿಞರೋ, ನನ್ನ ಸಂಬಂಧಿ ಗಿಲೆರ್ಮೋ ಯುವಾನ್ (ಬೋರ್ಹೆಸ್), ಮತ್ತು ರೋಬರ್ಟೋ ಓರ್ಟೆಲಿ ಮುಂತಾದವರ ಜತೆ ವಿಷಯಗಳನ್ನು ತಿರುವಿ ಹಾಕುತ್ತಿರುವಾಗ, ಸ್ಪ್ಯಾನಿಶ್ ಅಲ್ಟ್ರಾಯಿಸಂ ಭಾರದಿಂದ ಕುಸಿದಿದೆ – ಫ್ಯೂಚರಿಸಮಿನ ಹಾಗೆಯೇ – ಆಧುನಿಕತೆ ಮತ್ತು ತಾಂತ್ರಿಕ ಪರಿಕರಗಳಿಂದ – ಎಂಬ ತೀರ್ಮಾನಕ್ಕೆ ಬಂದೆವು. ಟ್ರೇನುಗಳು, ಗಾಳಿ ಚಕ್ರಗಳು (ಪ್ರೊಪೆಲ್ಲರುಗಳು), ವಿಮಾನಗಳು, ವಿದ್ಯುತ್ ಫ್ಯಾನುಗಳೇ ಮುಂತಾದವುಗಳಿಂದ ನಾವು ಮನಸೋಲಲಿಲ್ಲ. ನಮ್ಮ ಘೋಷಣಾಪತ್ರಗಳಲ್ಲಿ (ಮ್ಯಾನಿಫೆಸ್ಟೋಸ್) ನಾವಿನ್ನೂ ರೂಪಕಗಳ ಪ್ರಾಮುಖ್ಯತೆಯನ್ನು, ಮತ್ತು ಸಂಕ್ರಮಣ (ಟ್ರಾನ್ಸಿಶನ್) ಪದಗಳ ಹಾಗೂ ಆಲಂಕಾರಿಕ ವಿಶೇಷಣಗಳ ನಿರ್ಮೂಲನೆಯನ್ನು ಎತ್ತಿ ಹಿಡಿದಿದ್ದರೂ, ನಾವು ಬರೆಯ ಬಯಸಿದ್ದು ಸಾರವತ್ತಾದ ಕವಿತೆಗಳನ್ನು – ‘ಇಲ್ಲಿ ಮತ್ತು ಈಗ’ ಎನ್ನುವುದರ ಆಚೆಗಿನ ಕವಿತೆಗಳನ್ನು, ಸ್ಥಳೀಯ ಹಾಗೂ ಸಮಕಾಲೀನ ಸಂದರ್ಭಗಳ ಬಣ್ಣವಿಲ್ಲದ ಕವಿತೆಗಳನ್ನು. ‘ಪ್ಲೆಯಿನ್ನೆಸ್’ (‘ಸರಳತೆ’) ಎಂಬ ಕವಿತೆ ವೈಯಕ್ತಿಕವಾಗಿ ನಾನೇನು ಹುಡುಕುತ್ತಿದ್ದೆ ಎನ್ನುವುದನ್ನು ವಿವರಿಸುತ್ತದೆ ಎಂದು ಕಾಣುತ್ತದೆ:

ತೋಟದ ಗ್ರಿಲ್ ಗೇಟು
ಸಾಕಷ್ಟು ಬೆರಳಾಡಿಸಿದ ಪುಟದಂತೆ
ತೆರೆದುಕೊಳ್ಳುತ್ತದೆ ಸುಲಭವಾಗಿ
ಒಮ್ಮೆ ಒಳ ಹೊಕ್ಕರೆ ನಮ್ಮ ಕಣ್ಣುಗಳು
ಸ್ಮೃತಿಯಲ್ಲಿ ಈಗಾಗಲೇ
ಭದ್ರಪಡಿಸಿ ಒಪ್ಪವಾಗಿ ಇರಿಸಲ್ಪಟ್ಟ
ವಸ್ತುಗಳನ್ನು ಮತ್ತೆ ನೋಡಿ ನಿಲ್ಲುವ ಅಗತ್ಯವಿಲ್ಲ.
ಇಲ್ಲಿ ಅಭ್ಯಾಸಗಳು ಮತ್ತು ಮನಸ್ಸುಗಳು ಮತ್ತು
ಎಲ್ಲಾ ಕುಟುಂಬಗಳು ಕಂಡುಹಿಡಿಯುವಂಥ ಖಾಸಗಿ ಭಾಷೆ
ನನಗೆ ಪ್ರತಿದಿನದ ಸಂಗತಿಗಳು.
ಮಾತಾಡುವ ಅಥವ ಬೇರೊಬ್ಬನಂತೆ ನಟಿಸುವ
ಅಗತ್ಯವೇನಿದೆ?
ಇಡೀ ಮನೆಗೆ ಗೊತ್ತು ನನ್ನನ್ನು,
ನನ್ನ ಆತಂಕಗಳು ಮತ್ತು ದೌರ್ಬಲ್ಯಗಳ
ಅರಿವಿದೆ ಅವರಿಗೆ.
ಆಗಬಹುದಾದ ಅತ್ಯುತ್ತಮ ಸಂಗತಿಯೆಂದರೆ ಇದುವೆ –
ಬಹುಶಃ ದೈವ ನಮಗೆ ಈಯಬಹದಾದ್ದು:
ನೋಡಿ ಅಚ್ಚರಿಪಡಬೇಕಾಗಿ ಅಲ್ಲ, ಜಯ
ಗಳಿಸಬೇಕಾಗಿಯೂ ಇಲ್ಲ
ಬದಲು ಸುಮ್ಮನೆ ಒಳ ಬಿಟ್ಟರೆ ಸಾಕು
ನಿರಾಕರಿಸಲಾಗದ ವಾಸ್ತವತೆಯ ಭಾಗವಾಗಿ,
ಮಾರ್ಗದ ಕಲ್ಲುಗಳಂತೆ, ಮರಗಳಂತೆ.

ಬಹುಶಃ ನನ್ನ ವಾಪಸಾತಿಯ ದೊಡ್ಡ ಘಟನೆ ಮೆಸಿಡೋನಿಯೋ ಫರ್ನಾಂಡಿಸ್. ನಾನು ನನ್ನ ಜೀವನದಲ್ಲಿ ಭೇಟಿಯಾದ ವ್ಯಕ್ತಿಗಳಲ್ಲೆಲ್ಲಾ — ಹಾಗೂ ನಾನು ಸಾಕಷ್ಟು ಮಂದಿ ಗಮನಾರ್ಹ ವ್ಯಕ್ತಿಗಳನ್ನು ಕಂಡಿದ್ದೇನೆ — ನನ್ನ ಮೇಲೆ ಮೆಸಿಡೋನಿಯೋನಷ್ಟು ಅಗಾಧವೂ ಶಾಶ್ವತವೂ ಆದ ಪ್ರಭಾವ ಬೀರಿದ ಇನ್ನೊಬ್ಬ ಮನುಷ್ಯನಿಲ್ಲ. ಕಪ್ಪು ಬೌಲರ್ ಹ್ಯಾಟ್ ಧರಿಸಿದ ಈ ಪುಟ್ಟ ಸ್ವರೂಪಿ ನಾವು ಬಂದಿಳಿದ ದರ್ಸನಾ ನೋರ್ಟ್ ನಲ್ಲಿ ನಮಗೋಸ್ಕರ ಕಾಯುತ್ತಿದ್ದ, ಮತ್ತು ನಾನು ಅವನ ಗೆಳೆತನವನ್ನು ನನ್ನ ತಂದೆಯಿಂದ ಬಳುವಳಿಯಾಗಿ ಪಡೆದೆ. ಅವರಿಬ್ಬರೂ 1874ರಲ್ಲಿ ಜನಿಸಿದ್ದರು. ವಿರೋಧಾಭಾಸ ಎಂದರೆ ಮೆಸಿಡೋನಿಯೋ ಒಬ್ಬ ಉತ್ಕೃಷ್ಟ ಮಾತುಗಾರನಾಗಿದ್ದ ಮತ್ತು ಅದೇ ವೇಳೆ ಸುದೀರ್ಘ ಮೌನಿಯೂ ಮಿತಭಾಷಿಯೂ ಆಗಿದ್ದ. ನಾವು ಶನಿವಾರ ಶನಿವಾರ ಒಂದು ಕೆಫೆಯಲ್ಲಿ ಭೇಟಿಯಾಗುತ್ತಿದ್ದೆವು — ಪ್ಲಾಝಾ ಡೆಲ್ ಒನ್ಸ್ ನಲ್ಲಿನ ಪೆರ್ಲ ಎಂಬಲ್ಲಿ. ಅಲ್ಲಿ ನಾವು ಮೆಸಿಡೋನನ ಅಧ್ಯಕ್ಷತೆಯಲ್ಲಿ ಬೆಳಗಾಗುವವರೆಗೆ ಮಾತಾಡುತ್ತಿದ್ದೆವು. ನಾನೊಬ್ಬ ಓದುಗ ವ್ಯಸನಿಯಾಗಿದ್ದು ಹೊರಗೆ ಹೋಗುತ್ತಿದ್ದುದೇ ಕಡಿಮೆ (ಹೆಚ್ಚಿನ ದಿನವೂ ರಾತ್ರಿಯೂಟದ ನಂತರ ನಾನು ಮಲಗಲು ಹೋದಾಗ ಹಾಸಿಗೆಯಲ್ಲಿ ಓದಿಕೊಳ್ಳುತ್ತಿದ್ದೆ), ಆದರೆ ನನ್ನ ಇಡೀ ವಾರವೂ ಶನಿವಾರ ನಾನು ಹೋಗಿ ಮೆಸಿಡೋನಿಯೋನ ಕಾಣುವೆ ಮತ್ತು ಮಾತು ಕೇಳುವೆನೆಂಬ ನಿರೀಕ್ಷೆಯಲ್ಲಿ ಬೆಳಗುತ್ತಿತ್ತು.

ಅವನು ನಮ್ಮ ಮನೆಯ ಹತ್ತಿರವೇ ವಾಸಿಸುತ್ತಿದ್ದ ಮತ್ತು ನಾನವನನ್ನು ಯಾವಾಗ ಬೇಕಿದ್ದರೂ ಹೋಗಿ ಕಾಣಬಹುದಾಗಿತ್ತು, ಆದರೆ ನನಗೇಕೋ ಅನಿಸಿತು, ನನಗಂಥ ವಿಶೇಷ ಅಧಿಕಾರ ಇಲ್ಲ, ಹಾಗೂ ಮೆಸಿಡೋನಿಯೋನ ಶನಿವಾರಕ್ಕೆ ಪೂರ್ಣ ಮೌಲ್ಯ ಕೊಡುವುದಕ್ಕೆ ನಾನವನನ್ನು ಇಡೀ ವಾರ ಬಿಟ್ಟುಕೊಡುವುದು ಅಗತ್ಯ ಎಂದು. ಮೀಟಿಂಗುಗಳಲ್ಲಿ ಮೆಸಿಡೋನಿಯೋ ಬಹುಶಃ ಮೂರೋ ನಾಲ್ಕೋ ಸಲವಷ್ಟೇ ಮಾತಾಡುತ್ತಿದ್ದುದು, ಕೆಲವೇ ಕೆಲವು ಅನಿಸಿಕೆಗಳನ್ನು ನುಡಿಯುವ ಧೈರ್ಯ ಮಾಡುತ್ತ, ಅವುಗಳನ್ನು – ತೋರುವ ಮಟ್ಟಿಗೆ – ತನ್ನ ಹತ್ತಿರ ಕುಳಿತವನಿಗೆ ಮಾತ್ರ ಹೇಳುವಂತೆ ಹೇಳುತ್ತಿದ್ದ. ಅವನ ಮಾತುಗಳು ಯಾವತ್ತೂ ಇದಮಿತ್ಥಂ ಆಗಿರಲಿಲ್ಲ. ಮೆಸಿಡೋನಿಯೋ ಬಹಳ ವಿನಯಶೀಲನಾಗಿದ್ದ, ಮತ್ತು ಮೃದು ಮಾತಿನವ, ಉದಾಹರಣೆಗೆ, ‘ನೀವು ಗಮನಿಸಿರಬೇಕು ಎಂದು ನನಗನಿಸುತ್ತದೆ….’ ಎನ್ನುತ್ತಿದ್ದ. ಹಾಗೆ ಹೇಳಿದ ನಂತರ ಯಾವುದಾದರೊಂದು ಮನಮುಟ್ಟುವ ಬಹಳ ಸ್ವೋಪಜ್ಞ ಎನಿಸುವ ಯೋಚನೆಯನ್ನು ಹರಿಯಬಿಡುತ್ತಿದ್ದ. ಆದರೆ ಯಾವತ್ತೂ ಅವನು ತನ್ನ ಯೋಚನೆ ಕೇಳುಗನದ್ದೇ ಎಂಬ ಭಾವನೆ ಮೂಡಿಸುತ್ತಿದ್ದ.

ಅವನೊಬ್ಬ ತೆಳ್ಳಗಿನ, ನರೆತ ಮನುಷ್ಯನಿದ್ದ, ಮಾರ್ಕ್ ಟ್ವೇನಿನ ಹಾಗೆ ಕಾಣಿಸುವ ಒಂದು ತರದ ಬೂದು ಬಣ್ಣದ ತಲೆಗೂದಲು ಮತ್ತು ಮೀಸೆ. ಈ ಹೋಲಿಕೆ ಅವನಿಗೆ ಖುಷಿ ತರಿಸುತ್ತಿತ್ತು, ಆದರೆ ಅವನು ಪಾಲ್ ವಲೆರಿಯ ಹಾಗೂ ಕಾಣಿಸುತ್ತಿದ್ದ ಎಂದು ಯಾರಾದರೂ ನೆನಪು ಮಾಡಿದರೆ ಅದು ಅವನಿಗೆ ಪಥ್ಯವಾಗುತ್ತಿರಲಿಲ್ಲ, ಯಾಕೆಂದರೆ ಅವನಿಗೆ ಈ ಫ್ರೆಂಚರಿಂದ ಉಪಯೋಗವಿರಲಿಲ್ಲ.. ಅವನು ಯಾವಾಗಲೂ ಆ ಕಪ್ಪು ಬೌಲರನ್ನ ತೊಟ್ಟುಕೊಳ್ಳುತ್ತಿದ್ದ, ಬಹುಶಃ ನಾನು ಊಹಿಸಬಹುದಾದರೆ ಅದರಲ್ಲೇ ನಿದ್ರಿಸುತ್ತಲೂ ಇದ್ದ, ರಾತ್ರಿ ಮಲಗುವ ವೇಳೆ ಅವನು ಎಂದೂ ಬಟ್ಟೆ ಬದಲಾವಣೆ ಮಾಡುತ್ತಿರಲಿಲ್ಲ, ಹಾಗೂ ಶೀತ ಗಾಳಿ ಹಲ್ಲು ನೋವು ತರುವುದನ್ನು ತಡೆಯುವುದಕ್ಕೆ ತಲೆಯ ಸುತ್ತ ಒಂದು ಟವೆಲನ್ನು ಕಟ್ಟಿಕೊಳ್ಳುತ್ತಿದ್ದ. ಇದರಿಂದ ಅವನೊಬ್ಬ ಅರಬನಂತೆ ಕಾಣಿಸುತ್ತಿದ್ದ.

ಅವನ ಇತರ ವೈಚಿತ್ರ್ಯಗಳಲ್ಲಿ ಅರ್ಜೆಂಟೈನ್ ರಾಷ್ಟ್ರೀಯತೆ ಒಂದು (ರಾಷ್ಟ್ರಾಧ್ಯಕ್ಷರನ್ನು ಒಬ್ಬರ ಮೇಲೆ ಒಬ್ಬರ ಹಾಗೆ ಅವನು ಇಷ್ಟಪಡುತ್ತಿದ್ದ, ಅವರನ್ನು ಆರಿಸಿದ ಅರ್ಜೆಂಟೀನಿಯನ್ ಜನತೆ ತಪ್ಪಾಗಿರಲಾರದು ಎನ್ನುವ ಅಷ್ಟೇ ಕಾರಣಕ್ಕೆ), ದಂತ ವೈದ್ಯಕೀಯದ ಹೆದರಿಕೆ ಇನ್ನೊಂದು (ಇದು ದಂತವೈದ್ಯರ ಇಕ್ಕಳದಿಂದ ಪಾರಾಗುವುದಕ್ಕೆ, ಸಾರ್ವಜನಿಕವಾಗಿ ಕೂಡ, ಕೈಮರೆಯ ಹಿಂದೆ ಹಲ್ಲುಗಳನ್ನು ಜಗ್ಗುವುದಕ್ಕೆ ಅವನನ್ನು ಪ್ರೇರೇಪಿಸುತ್ತಿತ್ತು), ಮತ್ತು ಭಾವುಕ ಕಾರಣಕ್ಕಾಗಿ ಬೀದಿ ಹೆಣ್ಣುಗಳ ಪ್ರೇಮದಲ್ಲಿ ಬೀಳುವ ಒಂದು ಸ್ವಭಾವ.

(ನೆಸ್ಟರ್ ಇಬೆರಾ)

ಲೇಖಕನಾಗಿ ಮೆಸಿಡೋನಿಯೋ ಹಲವಾರು ಅಸಾಧಾರಣ ಸಂಪುಟಗಳನ್ನು ಪ್ರಕಟಿಸಿದ, ಅವನ ಲೇಖನಗಳು ಇನ್ನೂ ಸಂಕಲನಗೊಳ್ಳುತ್ತಿವೆ, ಅವನು ಸತ್ತು ಇಪ್ಪತ್ತು ವರ್ಷಗಳ ಹತ್ತಿರವೇ ಆಗಿದ್ದರೂ. 1928ರಲ್ಲಿ ಪ್ರಕಟವಾದ ಅವನ ಮೊದಲ ಪುಸ್ತಕದ ಹೆಸರು ‘ನೋ ಟೋಡಾ ಎಸ್ ವಿಜಿಲಿಯಾ ಲ ದ ಲೋಸ್ ಅಯೋಸ್ ಅಬಿಯೆರ್ಟೋಸ್’ (‘ನಮ್ಮ ಕಣ್ಣುಗಳು ತೆರೆದಿದ್ದಾಗಲೆಲ್ಲ ನಾವು ಎಚ್ಚರಾಗಿರುವುದಿಲ್ಲ’). ಅದು ಆದರ್ಶವಾದದ ಕುರಿತಾದ ಸುದೀರ್ಘ ಪ್ರಬಂಧವಾಗಿತ್ತು. ಬೇಕೆಂದೇ ಸಿಕ್ಕು ಸಿಕ್ಕಾದ ಒರಟು ಶೈಲಿಯಲ್ಲಿ ಬರೆದಿದ್ದ ಎನಿಸುತ್ತದೆ ನನಗೆ, ವಾಸ್ತವತೆಯ ಸಿಕ್ಕಾಣಕ್ಕೆ ಹೊಂದಿಕೆಯಾಗಿ. ಮರು ವರ್ಷ ಅವನ ಬರಹಗಳ ಮಿಸ್ಸೆಲಿನಿಯೊಂದು (ಸಂಕೀರ್ಣ) ಪ್ರಕಟವಾಯಿತು – ‘ಪಪೆಲೆಸ್ ದ ರೆಸಿಯೆನ್ವೆನಿಡೋ’ (‘ಹೊಸಬನ ಲೇಖನಗಳು’) – ಇದರಲ್ಲಿ ನನ್ನ ಕೈಯೂ ಸ್ವಲ್ಪ ಇತ್ತು, ಅಧ್ಯಾಯಗಳನ್ನು ಕಲೆಹಾಕುವುದರಲ್ಲಿ ಮತ್ತು ಓರಣಗೊಳಿಸುವುದರಲ್ಲಿ. ಇದೊಂದು ತರದ ನಗೆಚಾಟಿಕೆಗಳೊಳಗಿನ ನಗೆಚಾಟಿಕೆಗಳು. ಮೆಸಿಡೋನಿಯೋ ಕಾದಂಬರಿಗಳನ್ನೂ ಕವಿತೆಗಳನ್ನೂ ಬರೆದ, ಎಲ್ಲವೂ ಚಕಿತಗೊಳಿಸುವಂಥವು, ಆದರೆ ಓದಿಸಿಕೊಳ್ಳುವಂಥವಲ್ಲ. ಇಪ್ಪತ್ತು ಅಧ್ಯಾಯಗಳ ಒಂದು ಕಾದಂಬರಿಗೆ ಐವತ್ತಾರು ಬೇರೆ ಬೇರೆ ಮುನ್ನುಡಿಗಳಿವೆ. ಅವನ ಪ್ರತಿಭೆ ಏನೇ ಇದ್ದರೂ, ಮೆಸಿಡೋನೋ ಅವನ ಬರಹಗಳಲ್ಲಿ ಸಿಗುತ್ತಾನೆಂದು ನನಗೆ ಅನಿಸುವುದಿಲ್ಲ. ನಿಜವಾದ ಮೆಸಿಡೋನಿಯೋ ಇದ್ದುದು ಅವನ ಸಂಭಾಷಣೆಯಲ್ಲಿ.

ಮೆಸಿಡೋನಿಯೋ ವಸತಿ ಗೃಹಗಳಲ್ಲಿ ಸರಳ ಬದುಕನ್ನು ನಡೆಸುತ್ತಿದ್ದ, ಆದರೆ ಆಗಿಂದಾಗ್ಗೆ ನೆಲೆ ಬದಲಿಸುತ್ತ ಇದ್ದ, ಕಾರಣವೆಂದರೆ ಯಾವಾಗಲೂ ಬಾಡಿಗೆ ಸಂದಾಯಿಸಲು ತಪ್ಪುತ್ತಿದ್ದುದು. ಪ್ರತಿ ಸರ್ತಿ ಸ್ಥಳ ಬದಲಾಯಿಸಿದಾಗಲೂ ಅವನು ಅಟ್ಟಿ ಅಟ್ಟಿ ಹಸ್ತಪ್ರತಿಗಳನ್ನು ಬಿಟ್ಟು ಹೋಗುತ್ತಿದ್ದ. ಒಮ್ಮೆ ಅವನನ್ನು ಅವನ ಮಿತ್ರರು ತರಾಟೆಗೆ ತೆಗೆದುಕೊಂಡರು, ಅಷ್ಟೆಲ್ಲಾ ಹಸ್ತಪ್ರತಿಗಳನ್ನು ಹಾಗೆ ಕಳೆಯಲು ಬಿಡುವುದು ನಾಚಿಕೆಗೇಡು ಎಂದರು. ಅದಕ್ಕೆ ಅವನಂದುದು, ‘ಯಾವುದನ್ನೇ ಆಗಲಿ, ಕಳೆದುಕೊಳ್ಳುವಷ್ಟು ಶ್ರೀಮಂತ ನಾನೆಂದು ನೀವು ನಿಜಕ್ಕೂ ಯೋಚಿಸುತ್ತೀರಾ?’

ಹ್ಯೂಮ್ ಮತ್ತು ಶಾಪೆನ್ ಹಾವರ್ ನ ಓದುಗರು ಮೆಸಿಡೋನ್ ನಲ್ಲಿ ಹೊಸತೇನನ್ನೂ ಕಾಣಲಾರರು, ಆದರೆ ಅವನಲ್ಲಿನ ಗಮನಾರ್ಹ ಸಂಗತಿಯೆಂದರೆ, ಅವನ ಉಪಸಂಹಾರಗಳನ್ನು ತಲುಪಿದುದು ಅವನೇ ಎನ್ನುವುದು. ಆಮೇಲೆ ಅವನು ನಿಜಕ್ಕೂ ಹ್ಯೂಮ್, ಶಾಪೆನ್ ಹಾವರ್, ಬರ್ಕ್ಲಿ, ಮತ್ತು ವಿಲಿಯಮ್ ಜೇಮ್ಸ್ ರನ್ನು ಓದಿದ, ಆದರೆ ಅದಕ್ಕಿಂತ ಹೆಚ್ಚಿನ ಓದನ್ನು ಅವನು ಮಾಡಲಿಲ್ಲ ಎನ್ನುವುದು ನನ್ನ ಗುಮಾನಿ, ಮತ್ತು ಅವನು ಯಾವಾಗಲೂ ಅದೇ ಲೇಖಕರಿಂದ ಉದ್ಧರಿಸುತ್ತ ಇದ್ದ. ಸರ್ ವಾಲ್ಟರ್ ಸ್ಕಾಟನ್ನು ಕಾದಂಬರಿಕಾರರಲ್ಲೆಲ್ಲಾ ಅತ್ಯಂತ ಶ್ರೇಷ್ಠನೆಂದು ಅವನು ಪರಿಗಣಿಸುತ್ತಿದ್ದ, ಬಹುಶಃ ಬಾಲ್ಯಕಾಲದ ಆಕರ್ಷಣೆಯ ವಿಧೇಯತೆಯ ಕಾರಣದಿಂದ ಮಾತ್ರ ಎನಿಸುತ್ತದೆ.

ಅವನು ಒಮ್ಮೆ ವಿಲಿಯಮ್ ಜೇಮ್ಸ್ ನೊಂದಿಗೆ ಪತ್ರ ವ್ಯವಹಾರ ಮಾಡಿದುದಿತ್ತು. ಜೇಮ್ಸ್ ಗೆ ಅವನು ಇಂಗ್ಲಿಷ್, ಜರ್ಮನ್, ಮತ್ತು ಫ್ರೆಂಚ್ ಮಿಶ್ರಣದಲ್ಲಿ ಬರೆದಿದ್ದ, ಅದಕ್ಕವನು ನೀಡಿದ ವಿವರಣೆಯೆಂದರೆ, ‘ಈ ಯಾವುದೇ ಭಾಷೆಗಳಲ್ಲಿ ನನಗೆ ಗೊತ್ತಿರುವುದು ಅತ್ಯಲ್ಪವಾದ ಕಾರಣ, ನಾನು ಪದೇ ಪದೇ ಭಾಷೆಗಳನ್ನು ಬದಲಾಯಿಸುವುದು ಅಗತ್ಯವಾಯಿತು,’ ಎಂದು. ಮೆಸಿಡೋನಿಯೋ ಒಂದೋ ಎರಡೋ ಪುಟಗಳನ್ನು ಓದುವುದನ್ನು, ನಂತರ ಯೋಚಿಸಲು ಪ್ರೇರಿತನಾಗುವುದನ್ನು ನಾನು ಕಲ್ಪಿಸಿಕೊಳ್ಳುತ್ತೇನೆ. ನಮ್ಮನ್ನು ಮಾಡಿದ್ದು ಕನಸುಗಳನ್ನು ಮಾಡಿದ ಮಾಲುಗಳಲ್ಲಿ ಎಂದು ಮಾತ್ರವೇ ಅವನು ನಂಬಿದುದಲ್ಲ, ನಾವೆಲ್ಲ ಬದುಕಿರುವುದೂ ಒಂದು ಸ್ವಪ್ನಲೋಕದಲ್ಲಿ ಎನ್ನುವುದನ್ನು ಅವನು ನಿಜಕ್ಕೂ ನಂಬಿದ್ದ. ಸತ್ಯವು ಸಂವಹನೀಯ ಎನ್ನುವುದರ ಕುರಿತು ಅವನಿಗೆ ಅನುಮಾನವಿತ್ತು. ಕೆಲವು ತತ್ವಜ್ಞಾನಿಗಳು ಸತ್ಯವನ್ನು ಕಂಡಿದ್ದರು, ಆದರೆ ಅದನ್ನು ಸಂಪೂರ್ಣ ಸಂವಹಿಸುವಲ್ಲಿ ಅವರು ಸೋತಿದ್ದರು. ಹಾಗಿದ್ದರೂ, ಸತ್ಯದ ಶೋಧನೆ ಬಹಳ ಸುಲಭ ಎಂದೂ ಅವನು ನಂಬಿದ್ದ. ಒಮ್ಮೆ ಅವನು ನನಗಂದಿದ್ದ, ತಾನು ಪಂಪಾದಲ್ಲಿ ಮಲಗಲು ಸಾಧ್ಯವಾದರೆ, ಇಡೀ ಲೋಕ ಮರೆತು, ತನ್ನನ್ನೂ ಮರೆತು, ತನ್ನ ಹುಡುಕಾಟವನ್ನೂ ಮರೆತು, ಸತ್ಯ ಫಕ್ಕನೆ ತನಗೆ ತಾನೇ ಹೊಳೆಯಬಹುದು. ಆದರೆ ಆ ತ್ವರಿತ ಜ್ಞಾನವನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟವಾಗುವುದು ನಿಜ ಎಂದು ಕೂಡ ಸೇರಿಸಿದ್ದ.

ಬುದ್ಧಿ ಸರಿಯಿರುವ ನನ್ನೊಬ್ಬ ಗೆಳೆಯನ ಮುಂದೆ ಇಂಥ ಅಸಂಬದ್ಧಗಳನ್ನು ನಂತರ ನಾನು ಓದಿ ಹೇಳಿದಾಗ ಅವನಂದ, ‘ಆ್ಹ! ನಿನ್ನ ಪ್ರಕಾರ ಕವಿತೆಯ ಮುಖ್ಯ ಉದ್ದೇಶ ಬೆಚ್ಚಿಸುವುದು.’ ‘ಫೆರ್ವರ್’ನಲ್ಲಿದ್ದ ಕವಿತೆಗಳು ಅಲ್ಟ್ರಾಯಿಸ್ಟೋ ಅಲ್ಲವೋ ಎಂದರೆ, ಉತ್ತರ — ನನಗೆ — ಸಿಕ್ಕಿದುದು ನನ್ನ ಗೆಳೆಯನೂ ಫ್ರೆಂಚ್ ಅನುವಾದಕನೂ ಆದ ನೆಸ್ಟರ್ ಇಬೆರಾ. 

ಪ್ರತಿಭಾವಂತರ ಪಟ್ಟಿಯನ್ನು ಬಾಯಿಮಾತಿನಲ್ಲಿ ಮಾಡುವುದು ಮೆಸಿಡೋನಿಯೋಗೆ ಇಷ್ಟದ ಕೆಲಸವಾಗಿತ್ತು, ಅಂಥದೊಂದು ಪಟ್ಟಿಯಲ್ಲಿ ನಮ್ಮ ಪರಿಚಯದ ತುಂಬಾ ಪ್ರೀತಿಪಾತ್ರಳಾದ ಒಬ್ಬಳು ಮಹಿಳೆಯ ಹೆಸರನ್ನು ಕಂಡು ನಾನು ದಂಗಾಗಿದ್ದೆ. ಕ್ವಿಕಾ ಗೊಂಝಾಲಿಝ್ ಅಚಾ ದ ಟಾಮ್ಕಿನ್ಸನ್ ಅಲ್ವಿಯರ್ ಎನ್ನುವುದು ಅವಳ ಹೆಸರು. ನಾನು ಬಾಯಿ ಬಿಟ್ಟು ಅವನತ್ತ ನೋಡಿದೆ. ಕ್ವಿಕಾ ಹ್ಯೂಮ್ ಮತ್ತು ಶಾಪೆನ್ ಹಾವರ್ ನ ಸಾಲಿನಲ್ಲಿ ನಿಲ್ಲುತ್ತಾಳೆ ಎನ್ನುವ ವಿಶ್ವಾಸ ನನಗೇಕೋ ಇರಲಿಲ್ಲ. ಆದರೆ ಮೆಸಿಡೋನಿಯೋ ಹೇಳಿದ, ‘ತತ್ವಜ್ಞಾನಿಗಳು ಜಗತ್ತನ್ನು ಇತರರಿಗೆ ವಿವರಿಸಲು ಪ್ರಯತ್ನಿಸಬೇಕು, ಆದರೆ ಕ್ವಿಕಾ ಅದನ್ನು ಬರೇ ಅನುಭಾವಿಸುತ್ತಾಳೆ ಮತ್ತು ಅರಿಯುತ್ತಾಳೆ.’ ಅವನು ಅವಳ ಕಡೆ ತಿರುಗಿ ಕೇಳುತ್ತಿದ್ದ, ‘ಕ್ವಿಕಾ, ಇರುವಿಕೆ ಎಂದರೇನು?’ ಕ್ವಿಕಾ ಅನ್ನುತ್ತಿದ್ದಳು, ‘ನೀವು ಏನು ಹೇಳುತ್ತೀರೋ ನನಗೆ ತಿಳಿಯದು, ಮೆಸಿಡೋನಿಯೋ.’ ‘ನೋಡಿದಿಯ,’ ಎನ್ನುತ್ತಿದ್ದ ಅವನು ನನಗೆ. ‘ಇವಳಿದನ್ನು ಎಷ್ಟು ಪರಿಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾಳೆ ಎಂದರೆ ನಾವು ತಬ್ಬಿಬ್ಬಾಗಿದ್ದೇವೆ ಎನ್ನುವುನ್ನು ಕೂಡ ಗ್ರಹಿಸಲಾರಳು.’ ಇದು ಕ್ವಿಕಾ ಒಬ್ಬ ಪ್ರತಿಭಾವಂತ ಸ್ತ್ರೀ ಎನ್ನುವುದಕ್ಕೆ ಅವನ ನಿದರ್ಶನವಾಗಿತ್ತು. ನಂತರ ಇದೇ ಮಾತನ್ನು ಅವನು ಒಂದು ಮಗುವಿನ ಬಗ್ಗೆ, ಒಂದು ಬೆಕ್ಕಿನ ಬಗ್ಗೆ ಕೂಡ ಹೇಳಬಹುದು ಎಂದಾಗ ಮೆಸಿಡೋನಿಯೋಗೆ ಸಿಟ್ಟು ಬಂತು.

ಮೆಸಿಡೋನಿಯೋ ಪರಿಚಯವಾಗುವ ಮೊದಲು ನಾನು ಯಾವತ್ತೂ ಒಬ್ಬ ಅಮಾಯಕ ಓದುಗನಾಗಿದ್ದೆ. ಅವನು ನನಗೆ ನೀಡಿದ ಮುಖ್ಯ ಉಡುಗೊರೆಯೆಂದರೆ ನನ್ನನ್ನು ಸಂಶಯಾತ್ಮಕವಾಗಿ ಓದುವಂತೆ ಮಾಡಿದುದು. ಆರಂಭದಲ್ಲಿ ನಾನವನನ್ನು ಭಕ್ತಿಭಾವದಲ್ಲಿ ನಕಲು ಮಾಡುತ್ತ ಇದ್ದೆ – ನಾನು ನಂತರ ಪಶ್ಚಾತ್ತಪಿಸಿದಂಥ ಕೆಲವು ಶೈಲೀಯ ಚಟಗಳನ್ನು ಅವನಿಂದ ಹೆಕ್ಕಿ ತೆಗೆದು. ಆದರೆ ನಾನೀಗ ಹಿನ್ನೋಟದಲ್ಲಿ ಅವನನ್ನು ನೋಡುವುದು, ಈಡನ್ ಗಾರ್ಡನ್ ಕಂಡು ಅಪ್ರತಿಭನಾದ ಆದಂನ ಹಾಗೆ. ಅವನ ಕೆಲವು ಪುಟಗಳಲ್ಲಿ ಅವನ ಪ್ರತಿಭೆ ನೆಲೆ ನಿಂತಿದೆ; ಅವನ ಪ್ರಭಾವ ಸಾಕ್ರೆಟಿಕ್ ಸ್ವಭಾವದ್ದು. ನಾನು ನಿಜಕ್ಕೂ ಅವನನ್ನು ಪ್ರೀತಿಸಿದೆ, ಏಕದೇಶ ಮೂರ್ತಿ ಪೂಜೆ ಅದು, ಯಾರಿಗೂ ಕಡಿಮೆಯಿಲ್ಲದೆ.

1921-30ರ ಈ ಅವಧಿ ಹೆಚ್ಚಿನ ಚಟುವಟಿಕೆಯ ಕಾಲವಾಗಿತ್ತು, ಆದರೆ ಅದರಲ್ಲಿ ಮಿಕ್ಕವೂ ಅಜಾಗರೂಕ ಮತ್ತು ಅರ್ಥಹೀನವಾಗಿದ್ದುವು. ನಾನು ಏಳು ಪುಸ್ತಕಗಳನ್ನು ಬರೆದು ಪ್ರಕಟಿಸಿದೆ – ಅವುಗಳಲ್ಲಿ ನಾಲ್ಕು ಗದ್ಯ, ಮೂರು ಪದ್ಯ. ಮೂರು ಪತ್ರಿಕೆಗಳನ್ನೂ ಸ್ಥಾಪಿಸಿದೆ, ಅಲ್ಲದೆ ಬೇರೆ ಅರ್ಧ ಡಜನು ಪತ್ರಿಕೆಗಳಿಗೆ ಆಗಿಂದಾಗ್ಗೆ ಕ್ರಮಾಗತವಾಗಿ ಬರೆಯುತ್ತಿದ್ದೆ. ‘ಲ ಪ್ರೆನ್ಸ,’ ‘ನೋಸೋಟ್ರೋಸ್,’ ‘ಇನಿಶಿಯಲ್,’ ‘ಕ್ರೈಟೀರಿಯೋ,’ ಮತ್ತು ‘ಸಿಂತೆಸಿಸ್’ ಅವುಗಳಲ್ಲಿ ಕೆಲವು. ಈ ಉತ್ಪಾದಕತೆ ನನ್ನನ್ನೀಗ ಬೆರಗುಗೊಳಿಸುತ್ತದೆ, ಅದೇ ರೀತಿ ಆ ವರ್ಷಗಳಲ್ಲಿ ಬರೆದ ಕೃತಿಗಳ ಜೊತೆ ನನಗೆ ಅತಿ ದೂರದ ಸಂಬಂಧ ಕೂಡ ತೋರುವುದಿಲ್ಲ ಎಂಬ ಸತ್ಯ. ನಾಲ್ಕು ಲೇಖನ ಸಂಕಲನಗಳಲ್ಲಿ ಮೂರನ್ನು – ಅವುಗಳ ಹೆಸರುಗಳನ್ನು ಮರೆತು ಬಿಡುವುದೇ ಒಳ್ಳೆಯದು – ನಾನು ಮರುಮುದ್ರಿಸಲು ಎಂದೂ ಒಪ್ಪಲಿಲ್ಲ. 1953ರಲ್ಲಿ ನನ್ನ ಈಗಿನ ಪ್ರಕಾಶಕರು – ಎಮೆಸೆ — ನನ್ನ ಸಮಗ್ರ ಕೃತಿಗಳನ್ನು ಹೊರತರಲು ನಾನು ಒಪ್ಪಿದುದರ ಒಂದೇ ಒಂದು ಕಾರಣ, ಆ ಅಸಂಬದ್ಧಗಳನ್ನು ಹತ್ತಿಕ್ಕುವ ಅವಕಾಶವನ್ನು ಅದು ನನಗೆ ಒದಗಿಸುತ್ತದೆ ಎನ್ನುವುದು. ಇದು ನನಗೆ ಮಾರ್ಕ್ ಟ್ವೇನನ ಮಾತನ್ನು ನೆನಪಿಸುತ್ತದೆ; ಅವನ ಪ್ರಕಾರ ಒಳ್ಳೆಯದೊಂದು ಗ್ರಂಥಾಲಯವನ್ನು ಜೇನ್ ಆಸ್ಟಿನ್ ಳ ಕೃತಿಗಳನ್ನು ಹೊರತು ಪಡಿಸುವ ಮೂಲಕ ಆರಂಭಿಸಬಹುದು, ಅಲ್ಲದೆ ಇನ್ನು ಯಾವ ಪುಸ್ತಕಗಳು ಇಲ್ಲದೆ ಇದ್ದರೂ ಅದೊಂದು ಒಳ್ಳೆ ಗ್ರಂಥಾಲಯವೇ ಆಗಿರುತ್ತದೆ, ಯಾಕೆಂದರೆ ಜೇನ್ ಆಸ್ಟಿನ್ ಳ ಪುಸ್ತಕಗಳು ಅಲ್ಲಿರುವುದಿಲ್ಲ.

ಈ ಭಂಡ ಧೈರ್ಯದ ಮೊದಲ ಸಂಗ್ರಹದಲ್ಲಿ ಸರ್ ಥಾಮಸ್ ಬ್ರೌನ್ ಬಗ್ಗೆ ತೀರಾ ಕೆಟ್ಟದಾದ ಓಂದು ಲೇಖನವಿತ್ತು, ಅದು ಬಹುಶಃ ಸ್ಪ್ಯಾನಿಶ್ ಭಾಷೆಯಲ್ಲಿ ಅವನ ಕುರಿತಾಗಿ ನಡೆದ ಆದ್ಯ ಪ್ರಯತ್ನವಿದ್ದೀತು. ಇನ್ನೊಂದು ಪುಸ್ತಕ ರೂಪಕಗಳ ವರ್ಗೀಕರಣದತ್ತ ನಡೆಸಿದ ಯತ್ನ, ಇನ್ನುಳಿದ ಕಾವ್ಯ ಲಕ್ಷಣಗಳಾದ ಲಯ ಮತ್ತು ಸಂಗೀತವನ್ನು ಸುರಕ್ಷಿತವಾಗಿ ಕಡೆಗಣಿಸಬಹುದು ಎಂಬಂತೆ. ಒಂದು ದೀರ್ಘವಾದ ಪ್ರಬಂಧವಿತ್ತು ‘ಈಗೋ’ದ (‘ಅಹಂ’ನ) ನಾಸ್ತಿತ್ವದ ಬಗ್ಗೆ — ಬ್ರಾಡ್ಳಿಯಿಂದಲೋ, ಬುದ್ಧನಿಂದಲೋ, ಮೆಸಿಡೋನಿಯೋ ಫರ್ನಾಂಡಿಝ್ ನಿಂದಲೋ ಎತ್ತಿಕೊಂಡದ್ದು. ಈ ಬರಹಗಳನ್ನು ನಾನು ಬರೆದಾಗ, ನಾನು ಇಬ್ಬರು ಸ್ಪ್ಯಾನಿಶ್ ಲೇಖಕರಿಗೆ ಒಂದು ನಿಷ್ಠುರ ಮಂಗನ ಪಾತ್ರವಾಗಿದ್ದೆ; 17ನೆಯ ಶತಮಾನದ ವಿಲಕ್ಷಣ (ಬರೋಕ್) ಬರಹಗಾರರಾದ ಇವರು, ಕ್ವೆವೆಡೋ ಮತ್ತು ಸಾವೆದ್ರಾ ಫಯಾರ್ದೋ, ತಮ್ಮದೇ ಬಿಗುವಿನ, ಶುಷ್ಕ, ಮತ್ತು ಸ್ಪ್ಯಾನಿಶ್ ವಿಧಾನದಲ್ಲಿ ಸರ್ ಥಾಮಸ್ ಬ್ರೌನ್ ನ ‘ಅರ್ನ್ ಬರೀಯಲ್’ನ ಆ ಅದೇ ತರದ ಶೈಲಿಯನ್ನು ಬೆಂಬಲಿಸಿದವರು. ನಾನು ಸ್ಪ್ಯಾನಿಶ್ ನಲ್ಲಿ ಲ್ಯಾಟಿನ್ ಬರೆಯಲು ಸರ್ವ ಪ್ರಯತ್ನವನ್ನು ಮಾಡುತ್ತಿದ್ದೆ, ಹಾಗೂ ಪುಸ್ತಕ ತನ್ನದೇ ಆದ ಸುತ್ತು ಬಳಸಿನ ಮತ್ತು ಜಡ ಪಾಂಡಿತ್ಯದ ತೀರ್ಮಾನಗಳ ಭಾರಮಾತ್ರದಲ್ಲಿ ಕುಸಿಯುತ್ತದೆ. ಈ ಸೋಲುಗಳ ನಂತರದ್ದು ಒಂದು ಪ್ರತಿಕ್ರಿಯೆಯಾಗಿತ್ತು. ನಾನು ಇನ್ನೊಂದು ಅತಿರೇಕಕ್ಕೆ ಹೋದೆ – ಎಷ್ಟು ಸಾಧ್ಯವೋ ಅಷ್ಟೂ ಅರ್ಜೆಂಟೀನಿಯನ್ ಆಗುವುದಕ್ಕೆ ಪ್ರಯತ್ನಿಸಿದೆ. ಸೆಗೋವಿಯಾನ ಅರ್ಜೆಂಟೀನಿಯನ್ ನುಡಿಗಟ್ಟುಗಳ ನಿಘಂಟು ಒಂದನ್ನು ದೊರಕಿಸಿಕೊಂಡು ಹಲವಾರು ಸ್ಥಳೀಯ ಶಬ್ದಗಳನ್ನು ನನ್ನ ಬರಹಕ್ಕೆ ಸೇರಿಸಿಕೊಂಡೆ, ಪರಿಣಾಮವಾಗಿ ನನ್ನ ದೇಶೀಯರಲ್ಲಿ ಹಲವರಿಗೇ ಅದು ಅರ್ಥವಾಗಲಿಲ್ಲ. ನಾನು ನಿಘಂಟನ್ನು ಎಲ್ಲಿಟ್ಟಿದ್ದೇನೆ ಎನ್ನುವುದನ್ನು ಮರೆತುಬಿಟ್ಟಿರುವ ಕಾರಣ ಈಗ ನನ್ನ ಪುಸ್ತಕ ನನಗೇ ಅರ್ಥವಾಗಲಾರದು, ಆದ್ದರಿಂದ ಅದನ್ನು ಪೂರ್ತಾ ನಿಷ್ಪ್ರಯೋಜಕವೆಂದು ಕೈಬಿಟ್ಟಿದ್ದೇನೆ.

ಈ ಮೂರು ಹೆಸರು ಹೇಳಲಾಗದ ಪುಸ್ತಕಗಳಲ್ಲಿ ಮೂರನೆಯದು ಒಂದು ರೀತಿಯಲ್ಲಿ ಭಾಗಶಃ ವಿಮೋಚನೆ ಎನ್ನಬಹುದು. ನಾನು ಎರಡನೆಯ ಪುಸ್ತಕದ ಶೈಲಿಯಿಂದ ಹೊರಕ್ಕೆ ಹರಿದು ಬಂದು ಬುದ್ಧಿಸ್ವಾಸ್ಥ್ಯದ ಕಡೆಗೆ ನಿಧಾನವಾಗಿ ಮರಳುತ್ತಿದ್ದೆ, ತರ್ಕಬದ್ಧತೆಗೆ ಸ್ವಲ್ಪ ಪ್ರಯತ್ನವಿದ್ದು, ಓದುಗನನ್ನು ಸುಂದರ ಮಾತುಗಳಿಂದ ಬೆರಗುಗೊಳಿಸುವ ಬದಲು, ಸರಳ ಶೈಲಿಯಿಂದ ಆತನಿಗೆ ಅರ್ಥವಾಗುವ ಹಾಗೆ ಮಾಡುವ ಕಡೆಗೆ. ಅಂಥ ಒಂದು ಪ್ರಯೋಗ, ಸಂದೇಹಾತ್ಮಕ ಮೌಲ್ಯದ್ದು, ‘ಹೋಂಬ್ರೆಸ್ ಪೆಲೀಯರೋನ್’ (‘ಜನ ಕಾದಾಡಿದರು’), ಬ್ಯೂನೋ ಏರಿಸ್ ನ ಉತ್ತರ ಭಾಗದ ಹಳೆಯ ಕಥಾನಕದತ್ತ ನನ್ನ ಪ್ರಥಮ ಸಾಹಸ. ಅದರಲ್ಲಿ ನಾನು ಶುದ್ಧ ಅರ್ಜೆಂಟೈನ್ ಕತೆಯನ್ನು ಶುದ್ಧ ಅರ್ಜೆಂಟೈನ್ ರೀತಿಯಲ್ಲಿ ಹೇಳಲು ಪ್ರಯತ್ನಿಸಿದ್ದೆ. ಈ ಕತೆ ನಾನು ಆ ಲಾಗಾಯ್ತಿನಿಂದಲೂ ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಮತ್ತೆ ಮತ್ತೆ ಹೇಳುತ್ತ ಬಂದಿರುವುದೇ. ಅದೊಂದು ಉದ್ದೇಶರಹಿತ, ಅಥವಾ ನಿಸ್ವಾರ್ಥ ‘ಸಾಹಸಕ್ಕಾಗಿ ಸಾಹಸ’ದ ದ್ವಂದ್ವ ಯುದ್ಧದ ಕತೆ. ಭಾಷೆಯ ಬಗೆಗಿನ ಅರ್ಥದಲ್ಲಿ ನಾವು ಅರ್ಜೆಂಟೈನರು ಸ್ಪ್ಯಾನಿಯಾರ್ಡರಿಗಿಂತ ಭಿನ್ನರು ಎಂದು ಆ ಕತೆ ಬರೆದಾಗ ನಾನು ಒತ್ತಾಯ ಮಾಡಿದ್ದೆ. ಆದರೆ ಈಗ ನನಗನಿಸುತ್ತದೆ ನಾವು ನಮ್ಮ ಭಾಷಾ ಸಮಾನತೆಗಳನ್ನು ಒತ್ತಿ ಹೇಳಬೇಕು ಎಂದು. ನಾನಿನ್ನೂ ಬರೆಯುತ್ತಿದ್ದೆ, ಆದರೆ ಸ್ವಲ್ಪ ಮಿದುವಾಗಿ, ಸ್ಪ್ಯಾನಿಯಾರ್ಡರಿಗೆ ನಾನು ಅರ್ಥವಾಗದಿರಲಿ ಎಂದು, ಅ-ನರ್ಥವಾಗುವುದಕ್ಕೆ ನಾನು ಬರೆಯುತ್ತಿದ್ದೆ ಎನ್ನಬಹುದು.

ಜ್ಞಾನವಾದಿಗಳು (ಗ್ನೋಸ್ಟಿಕ್ಸ್) ಅನ್ನುತ್ತಿದ್ದರು, ಪ್ರಲೋಭನೆಯನ್ನು ತಪ್ಪಿಸುವ ಒಂದೇ ಒಂದು ದಾರಿಯೆಂದರೆ ಅದಕ್ಕೆ ಶರಣಾಗುವುದು, ಮತ್ತು ಆ ಮೂಲಕ ಅದನ್ನು ಕಿತ್ತೊಗೆಯುವುದು ಎಂದು. ಈ ವರ್ಷಗಳ ನನ್ನ ಪುಸ್ತಕಗಳಲ್ಲಿ, ನಾನು ಹೆಚ್ಚಿನ ಸಾಹಿತ್ಯಿಕ ಮಹಾ ಪಾಪಗಳನ್ನೂ ಮಾಡಿದ್ದೇನೆ ಅನಿಸುತ್ತದೆ, ಅವುಗಳಲ್ಲಿ ಕೆಲವನ್ನು ಒಬ್ಬ ಶ್ರೇಷ್ಠ ಲೇಖಕನಾದ ಲಿಯೊಪೋಲ್ಡೋ ಲುಗೋನೆಸ್ ನ ಪ್ರಭಾವದಲ್ಲಿ ಮಾಡಿದ್ದು, ಅವನನ್ನು ನಾನಿನ್ನೂ ಮೆಚ್ಚದೆ ಇರುವುದು ಸಾಧ್ಯವಿಲ್ಲ. ಈ ಪಾಪಗಳು ಒಳ್ಳೇ ಬರಹಗಳು, ಸ್ಥಳೀಯ ಬಣ್ಣಗಳು, ಅನಿರೀಕ್ಷಿತದ ಒಂದು ಹುಡುಕಾಟ, ಮತ್ತು ಹದಿನೇಳನೆ ಶತಮಾನದ ಶೈಲಿ. ಈ ಅತಿರೇಕಗಳ ಕುರಿತು ನಾನಿವತ್ತು ನನ್ನನ್ನು ತಪ್ಪಿತಸ್ಥನೆಂದು ಅಂದುಕೊಳ್ಳುವುದಿಲ್ಲ; ಈ ಪುಸ್ತಕಗಳನ್ನು ಬರೆದುದು ಇನ್ನು ಯಾರೋ. ಕೆಲವು ವರ್ಷ ಹಿಂದಿನ ತನಕ, ಬೆಲೆ ಕೈಗೆಟುಕುವ ತರ ಇದ್ದರೆ ನಾನು ಆ ಎಲ್ಲಾ ಪ್ರತಿಗಳನ್ನೂ ಕೊಂಡುಕೊಂಡು ಅವುಗಳನ್ನು ಉರಿಸಿಬಿಡುತ್ತಿದ್ದೆ.

ಈ ಕಾಲದ ನನ್ನ ಕವಿತೆಗಳಲ್ಲಿ ನಾನು ಬಹುಶಃ ನನ್ನ ಎರಡನೆ ಸಂಕಲನವಾದ ‘ಲೂನಾ ದ ಎನ್ಫ್ರೆಂಟೆ’ಯನ್ನೂ (‘ದಾರಿಯಾಚೆಗಿನ ಚಂದ್ರ’) ಹತ್ತಿಕ್ಕುತ್ತಿದ್ದೆ. 1925ರಲ್ಲಿ ಪ್ರಕಟವಾದ ಆ ಪುಸ್ತಕ ಒಂದು ತರದ ಹುಸಿ ಸ್ಥಳೀಯ ರಂಗಿನ ಹಬ್ಬವಾಗಿತ್ತು. ಅದರ ಮಂಗ ಚೇಷ್ಟೆಗಳಲ್ಲಿ ಒಂದು ಹತ್ತೊಂಬತ್ತನೆ ಶತಮಾನದ ಚಿಲಿಯನ್ ಮಾದರಿಯ ನನ್ನ ಮೊದಲ ಹೆಸರಿನ ಸ್ಪೆಲ್ಲಿಂಗ್ ಆಗಿತ್ತು: ‘Jorje’ (ಅದು ಉಚ್ಚಾರಣಾ ಸ್ಪೆಲ್ಲಿಂಗನತ್ತಣ ಅರೆ ಮನಸ್ಸಿನ ಪ್ರಯತ್ನವಾಗಿತ್ತು); ‘ಏಂಡ್’ನ (‘ಮತ್ತು’) ಸ್ಪ್ಯಾನಿಶ್ ಸ್ಪೆಲ್ಲಿಂಗ್ ‘ಐ (i)’ ಬಳಸಿದ್ದು, ‘ವೈ (ಥಿ)’ಗೆ ಬದಲಾಗಿ (ನಮ್ಮ ಅತಿ ಶ್ರೇಷ್ಠ ಲೇಖಕ ಸರ್ಮಿಯೆಂಟೋ ಅದನ್ನೇ ಮಾಡಿದ್ದ, ಎಷ್ಟು ಅ-ಸ್ಪ್ಯಾನಿಶ್ ಆಗಲು ಸಾಧ್ಯವೋ ಅಷ್ಟೂ ಶ್ರಮಿಸಿ); ಮತ್ತು ‘autoridd,’ ‘ciudd’ ಮುಂತಾದ ಪದಗಳಲ್ಲಿ ಕೊನೆಯ ‘ಡಿ (ಜ)‘ಯನ್ನು ತೆಗೆದು ಹಾಕಿದ್ದು. ನಂತರದ ಆವೃತ್ತಿಗಳಿಂದ ನಾನು ಅತಿ ನಿಕೃಷ್ಟ ಕವಿತೆಗಳನ್ನು ಕೈಬಿಟ್ಟೆ, ಚೇಷ್ಟೆಗಳನ್ನು ಕತ್ತರಿಸಿ ಹಾಕಿದೆ, ಒಂದೊಂದಾಗಿ — ಹಲವು ಮರು ಮುದ್ರಣಗಳಾಗುತ್ತಿದ್ದಂತೆ — ಪದ್ಯಗಳನ್ನು ತಿದ್ದಿ ಮಿದುಗೊಳಿಸಿದೆ. ಆ ಕಾಲದ ಮೂರನೆಯ ಸಂಕಲನ ‘ಕ್ವಾಡರ್ನೋ ಸ್ಯಾನ್ ಮಾರ್ಟಿನ್’ (ಶೀರ್ಷಿಕೆಗೂ ರಾಷ್ಟ್ರ ನಾಯಕನಿಗೂ ಏನೇನೂ ಸಂಬಂಧವಿರಲಿಲ್ಲ; ನಾನು ಕವಿತೆಗಳನ್ನು ಬರೆದಿಡುತ್ತಿದ್ದ, ಆದರೆ ಈಗ ಚಾಲ್ತಿಯಲ್ಲಿಲ್ಲದ, ಕಾಪಿ ಪುಸ್ತಕದ ಕಂಪೆನಿಯ ಬ್ರಾಂಡ್ ಹೆಸರು ಅದಾಗಿತ್ತು), ಕೆಲವು ನಿಜಕ್ಕೂ ಉತ್ತಮ ಕವಿತೆಗಳನ್ನು ಅದು ಒಳಗೊಂಡಿದೆ, ಉದಾಹರಣೆಗೆ, ‘ಲ ನೋಶ್ ಕ ಎನ್ ಎಲ್ ಸುರ್ ಲೋ ವೆಲರೋನ್’, ಈ ಶೀರ್ಷಿಕೆಯನ್ನು ರಾಬರ್ಟ್ ಫಿಟ್ಝೆರಾಲ್ಡ್ ‘Deathwatch on the Southside’, ‘ದಕ್ಷಿಣ ದಿಕ್ಕಿನಲ್ಲಿ ಮರಣ ನಿರೀಕ್ಷೆ’ ಎಂದು ಆಕರ್ಷಕವಾಗಿ ಅನುವಾದಿಸಿದ್ದಾನೆ, ಮತ್ತು ಅರ್ಜೆಂಟೀನಾದ ರಾಜಧಾನಿಯ ಎರಡು ಪ್ರಮುಖ ಸಮಾಧಿಗಳ ಕುರಿತಾದ ‘ಮ್ಯುರ್ಟೆಸ್ ದ ಬ್ಯೂನೋಸ್ ಏರಿಸ್’ (‘ಬ್ಯೂನೋಸ್ ಏರಿಸ್ನ ಸಾವುಗಳು’). ಈ ಪುಸ್ತಕದ ಒಂದು ಕವಿತೆ (ನನ್ನ ಮೆಚ್ಚಿನದೇನೂ ಅಲ್ಲ), ಅದು ಹೇಗೋ ಅರ್ಜೆಂಟೈನ್ ಮೈನರ್ ಕ್ಲಾಸಿಕ್ ಆಗಿದೆ: ‘ದ ಮಿಥಿಕಲ್ ಫೌಂಡಿಂಗ್ ಆಫ್ ಬ್ಯೂನೋಸ್ ಏರಿಸ್.’ ಈ ಪುಸ್ತಕ ಕೂಡ ವರ್ಷಾನುಗಟ್ಟಳೆ ಕತ್ತರಿ ಪ್ರಯೋಗಗಳಿಂದಲೂ, ಪರಿಷ್ಕರಣಗಳಿಂದಲೂ ಉತ್ತಮಗೊಂಡಿದೆ ಅಥವಾ ಶುದ್ಧೀಕರಣಗೊಂಡಿದೆ.

1929ರಲ್ಲಿ ಆ ಮೂರನೆ ಪ್ರಬಂಧ ಸಂಕಲನಕ್ಕೆ ಮೂರು ಸಾವಿರ ಪೆಸೋಗಳ ಮುನಿಸಿಪಲ್ ಬಹುಮಾನ ಬಂತು, ಆ ಕಾಲದಲ್ಲಿ ಅದೊಂದು ಬಹು ದೊಡ್ಡ ಮೊತ್ತವಾಗಿತ್ತು. ಬಂದ ಹಣದಲ್ಲಿ ನಾನು ‘ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ’ ಹನ್ನೊಂದನೆಯ ಆವೃತ್ತಿಯನ್ನು ಕೊಂಡುಕೊಳ್ಳುವುದು ಒಂದು ಅನುಕೂಲವಾಗಿದ್ದರೆ, ನನಗೆ ದೊರಕುವ ಒಂದು ವರ್ಷದ ವಿಶ್ರಾಂತಿ ಇನ್ನೊಂದು ಅನುಕೂಲವಾಗಿತ್ತು; ಇಡಿಯಾಗಿ ಅರ್ಜೆಂಟೈನ್ ವಿಷಯದ ಕುರಿತಾಗಿ ನಾನೊಂದು ಸುದೀರ್ಘ ಪುಸ್ತಕ ಬರೆಯಲು ತೀರ್ಮಾನಿಸಿದೆ. ನನ್ನ ಅಮ್ಮ ಬಯಸಿದ್ದು ನಾನು ಯಾರಾದರೂ ಮೂವರು ಯೋಗ್ಯ ಕವಿಗಳ ಕುರಿತು, ಉದಾ: ಅಸ್ಕಾಸುಬಿ, ಅಲ್ಮಾಫುವೆರ್ಟೆ, ಅಥವಾ ಲುಗೊನೆಸ್ ಕುರಿತು ಬರೆಯಬೇಕೆಂದು. ನಾನು ಹಾಗೆ ಮಾಡುತ್ತಿದ್ದರೆ ಎಂದು ಈಗ ಯೋಚಿಸುತ್ತೇನೆ. ಬದಲು ನಾನು ಏಕದೇಶ ಅಗೋಚರನಾದ ಜನಪ್ರಿಯ ಕವಿ ಎವರಿಸ್ಟೋ ಕರಿಯೆಗೋ ಕುರಿತು ಬರೆಯಲು ಆರಿಸಿಕೊಂಡೆ. ಅವನ ಕವಿತೆಗಳು ಚೆನ್ನಾಗಿಲ್ಲ ಎಂದರು ನನ್ನ ತಂದೆ ಮತ್ತು ತಾಯಿ. ‘ಆದರೆ ಅವನೊಬ್ಬ ಗೆಳೆಯ ಮತ್ತು ನಮ್ಮ ನೆರೆಯವ ಆಗಿದ್ದ,’ ಎಂದೆ ನಾನು. ‘ಸರಿ, ಅಷ್ಟಕ್ಕೆ ಅವನು ಒಂದು ಪುಸ್ತಕದ ವಿಷಯವಾಗಲು ಅರ್ಹನಾಗುತ್ತಾನೆ ಎಂದಾದರೆ ಮುಂದುವರಿ,’ ಎಂದರು ಅವರು.

ಕರಿಯೆಗೋ ನಗರದ ಹಾಳು ಬಿದ್ದ ಚಿಂದಿ ಹೊರವಲಯದ – ನನ್ನ ಬಾಲ್ಯದ ಪಾಲೆರ್ಮೋದ — ಕಾವ್ಯಾತ್ಮಕ ಸಾಧ್ಯತೆಗಳನ್ನು ಕಂಡುಕೊಂಡ ಮನುಷ್ಯ. ಅವನ ಔದ್ಯೋಗಿಕ ಬದುಕು ಟ್ಯಾಂಗೋ ಡಾನ್ಸ್ ನ ವಿಕಸನ ಗತಿಯನ್ನೇ ಅನುಸರಿಸಿತ್ತು – ಮೊದಲು ಗದ್ದಲ, ಸಾಹಸ, ಧೈರ್ಯ, ನಂತರ ಭಾವುಕತೆಯ ವಿಷಣ್ಣತೆಯ ಕಡೆ ತಿರುವು. 1912ರಲ್ಲಿ, ತನ್ನ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಅವನು ಕ್ಷಯದಿಂದ ಸತ್ತ, ತನ್ನ ಕೃತಿಗಳ ಏಕೈಕ ಸಂಪುಟವನ್ನು ಹಿಂದೆ ಬಿಟ್ಟು. ನಾವು ಜಿನೇವಾಕ್ಕೆ ಒಯ್ದ ಹಲವು ಅರ್ಜೆಂಟೈನ್ ಪುಸ್ತಕಗಳಲ್ಲಿ ಅವನು ನನ್ನ ತಂದೆಗೆ ಸಹಿಮಾಡಿ ಕೊಟ್ಟ ಅದರದೊಂದು ಪ್ರತಿ ಇತ್ತು ಎನ್ನುವುದು ನನಗೆ ನೆನಪಿದೆ; ನಾನದನ್ನು ಮತ್ತೆ ಮತ್ತೆ ಓದುತ್ತಿದ್ದೆ. 1909ರ ಸುಮಾರಿಗೆ ಕರಿಯೆಗೋ ಒಂದು ಕವಿತೆಯನ್ನು ನನ್ನ ತಾಯಿಗೆ ಅರ್ಪಿಸಿದ್ದ. ವಾಸ್ತವದಲ್ಲಿ ಅವನು ಅದನ್ನು ಬರೆದಿದ್ದು ಅವಳ ಆಲ್ಬಮಿನಲ್ಲಿ. ಅದರಲ್ಲಿ ಅವನು ನನ್ನ ಬಗ್ಗೆ ಬರೆದಿದ್ದ: ‘ಮತ್ತು ನಿನ್ನ ಮಗ ಮುಂದಕ್ಕೆ ಹೋಗಲಿ, ಸ್ಪೂರ್ತಿಯ ವಿಶ್ವಸನೀಯ ರೆಕ್ಕೆ ಕೊಂಡೊಯ್ದ ಕಡೆಗೆ ಒಂದು ಹೊಸ ಉದ್ಘೋಷದ ದ್ರಾಕ್ಷಿ ಸುಗ್ಗಿಯನು ಕೈಕಾರ್ಯಗೊಳ್ಳಲು, ಅದು ಉನ್ನತ ದ್ರಾಕ್ಷಿಗಳಿಂದ ಗಾನದ ದ್ರಾಕ್ಷಾರಸವನ್ನು ನೀಡುವುದು.’ ಆದರೆ ಬರೆಯಲು ಹೊರಟಾಗ ನನಗೆ ಕಾರ್ಲೈಲ್ ಗೆ ‘ಫ್ರೆಡರಿಕ್ ದ ಗ್ರೇಟ್’ ಬರೆಯಲು ಹೊರಟಾಗ ಆದುದೇ ಆಯಿತು.

ನಾನು ಹೆಚ್ಚು ಬರೆದಷ್ಟೂ ನನ್ನ ನಾಯಕನ ಬಗ್ಗೆ ನಾನು ಕಡಿಮೆ ಕಾಳಜಿ ವಹಿಸಿದ ಹಾಗೆ. ನಾನು ನೇರವಾದ ಜೀವನ ಚರಿತ್ರೆ ಬರೆಯಲು ಉದ್ದೇಶಿಸಿ ಹೊರಟಿದ್ದೆ, ಆದರೆ ಬರೆಯುತ್ತ ಹೋದಂತೆ ನನಗೆ ಹಳೆ ಕಾಲದ ಬ್ಯೂನೋಸ್ ಏರಿಸ್ ನಲ್ಲಿ ಹೆಚ್ಚು ಆಸಕ್ತಿ ಹುಟ್ಟಿತು. ಶೀರ್ಷಿಕೆಯಾದ ‘ಎವರಿಸ್ಟೋ ಕರಿಯೆಗೋ’ದ ಹೆಸರಿಗೆ ಪುಸ್ತಕ ಬರಲಿಲ್ಲ ಎನ್ನುವುದನ್ನು ಕಂಡುಕೊಳ್ಳಲು ಓದುಗರಿಗೆ ತಡವಾಗಲಿಲ್ಲ, ಆದ್ದರಿಂದ ಅದು ಕವುಚಿ ಬಿತ್ತು. ಇಪ್ಪತ್ತೈದು ವರ್ಷಗಳ ನಂತರ, 1955ರಲ್ಲಿ, ನನ್ನ ಸಮಗ್ರ ಕೃತಿಗಳ ನಾಲ್ಕನೆಯ ಸಂಪುಟವಾಗಿ, ದ್ವಿತೀಯ ಆವೃತ್ತಿ ಬಂದಾಗ, ನಾನು ಪುಸ್ತಕವನ್ನು ಹೊಸ ಅಧ್ಯಾಯಗಳೊಂದಿಗೆ ವಿಸ್ತರಿಸಿದೆ, ‘ಹಿಸ್ಟರಿ ಆಫ್ ದ ಟ್ಯಾಂಗೋ’ ಅವುಗಳಲ್ಲಿ ಒಂದಾಗಿತ್ತು. ಈ ಸೇರ್ಪಡೆಗಳಿಂದಾಗಿ, ‘ಎವರೆಸ್ಟೋ ಕರಿಯೆಗೋ’ ಹೆಚ್ಚು ತೃಪ್ತಿಕರವಾಗಿ ಮೈತುಂಬಿದೆ ಎಂದುಕೊಳ್ಳುತ್ತೇನೆ.

‘ಪ್ರಿಸ್ಮಾ’ (‘ಪ್ರಿಸಮ್’), 1921ರಲ್ಲಿ ಸ್ಥಾಪಿತವಾಗಿ ಎರಡೇ ಸಂಚಿಕೆಗಳಷ್ಟು ಬಂದದ್ದು, ನಾನು ಸಂಪಾದಿಸಿದ ಪತ್ರಿಕೆಗಳಲ್ಲಿ ಮೊದಲಿನದು. ನಮ್ಮ ಸಣ್ಣ ಅಲ್ಟ್ರಾಯಿಸ್ಟ್ ಬಳಗ ತನ್ನದೇ ಪತ್ರಿಕೆಯೊಂದನ್ನು ಬಯಸಿತ್ತು, ಆದರೆ ನಿಜವಾದ ಒಂದು ಪತ್ರಿಕೆ ನಮ್ಮ ಅಳವಿಗೆ ಮೀರಿದ ಸಂಗತಿಯಾಗಿತ್ತು. ನಾನು ಬಿಲ್ಬೋರ್ಡ್ ಜಾಹೀರಾತುಗಳನ್ನು ಕಂಡಿದ್ದೆ, ಅಂಥದೇ ಒಂದು ‘ಭಿತ್ತಿ ಪತ್ರಿಕೆ’ಯನ್ನು ಮುದ್ರಿಸಿ ನಾವೇ ಅವನ್ನು ನಗರದ ಬೇರೆ ಬೇರೆ ಭಾಗಗಳಲ್ಲಿ ಕಟ್ಟಡಗಳ ಗೋಡೆ ಮೇಲೆ ಅಂಟಿಸಬೇಕೆನ್ನುವ ಯೋಚನೆ ನನಗೆ ಬಂತು. ಪ್ರತಿಯೊಂದು ಸಂಚಿಕೆಯೂ ಒಂದು ದೊಡ್ಡ ಹಾಳೆಯಾಗಿತ್ತು ಮತ್ತು ಮ್ಯಾನಿಫೆಸ್ಟೋ ಒಂದನ್ನು ಹಾಗೂ ಆರೇಳು ಚಿಕ್ಕ ಮಿತಭಾಷೀ ಕವಿತೆಗಳನ್ನು ಒಳಗೊಂಡಿತ್ತು, ಅವುಗಳ ಸುತ್ತ ಸಾಕಷ್ಟು ಖಾಲಿ ಜಾಗದೊಂದಿಗೆ; ನನ್ನ ತಂಗಿಯ ಒಂದು ಕಟ್ಟಿಗೆಯ ಅಚ್ಚೂ ಇರುತ್ತಿತ್ತು. ನಾವು ರಾತ್ರಿ ಹೊರಡುತ್ತಿದ್ದೆವು – ಗೊಂಝಾಲೆಝ್ ಲನುಝಾ, ಪಿಞರೋ, ನನ್ನ ಕಸಿನ್, ಮತ್ತು ನಾನು — ನನ್ನ ಅಮ್ಮ ಕೊಟ್ಟ ಗೋಂದಿನ ಡಬ್ಬಿಗಳು, ಬ್ರಶ್ಸುಗಳು ಇತ್ಯಾದಿಗಳಿಂದ ಸನ್ನದ್ಧರಾಗಿ, ಮೈಲಿಗಟ್ಟಳೆ ನಡೆಯುತ್ತ, ಸಾಂತಾ ಫೆ, ಕಲ್ಲಾವೋ, ಆಂತ್ರೆ ರಿಯೋಸ್. ಮತ್ತು ಮೆಕ್ಸಿಕೋ ರಸ್ತೆಗಳ ಗುಂಟ ಅವುಗಳನ್ನು ಹಚ್ಚಿಬಿಡುತ್ತ. ನಮ್ಮೀ ಕೈಕೆಲಸದಲ್ಲಿ ಹೆಚ್ಚಿನವನ್ನೂ ಓದಿ ಅಪ್ರತಿಭರಾದ ಓದುಗರು ಓದುತ್ತಲೇ ಹರಿದು ಹಾಕುತ್ತಿದ್ದರು, ಆದರೆ ನಮ್ಮ ಅದೃಷ್ಟಕ್ಕೆ ಅವುಗಳಲ್ಲಿ ಒಂದು ‘ನೋಸೋಸ್ಟ್ರೋಸ್’ನ ಬಿಯಾಂಚಿಯ ಕಣ್ಣಿಗೆ ಬಿತ್ತು; ಅಲ್ಟ್ರಾಯಿಸ್ಟ್ ಸಂಗ್ರಹವೊಂದನ್ನು ತನ್ನ ಗಟ್ಟಿ ಪತ್ರಿಕೆಯ ಪುಟಗಳಲ್ಲಿ ಪ್ರಕಟಿಸಲು ಅವನು ನಮ್ಮನ್ನು ಆಮಂತ್ರಿಸಿದ.

‘ಪ್ರ್ರಿಸ್ಮಾ’ದ ನಂತರ ನಾವೊಂದು ಆರು ಪುಟಗಳ ಪತ್ರಿಕೆ ಸುರುಮಾಡಿದೆವು. ಅದು ನಿಜಕ್ಕೂ ಎರಡೂ ಬದಿ ಮುದ್ರಿಸಿ ಇಮ್ಮಡಿ ಮಡಚಿದ ಒಂದು ಹಾಳೆಯಾಗಿತ್ತು. ಇದು ಮೊದಲನೆ ‘ಪ್ರೋವಾ’ (‘ಮುಂಚೂಣಿ’), ಇದರ ಮೂರು ಸಂಚಿಕೆಗಳು ಮುದ್ರಿತವಾದುವು. ಎರಡು ವರ್ಷಗಳ ನಂತರ, 1924ರಲ್ಲಿ, ಎರಡನೆಯ ‘ಪ್ರೋವಾ’ ಬಂತು. ಒಂದು ಸಂಜೆ, ಕೋರ್ದೋಬಾದಿಂದ ಬ್ರಾಂಡನ್ ಕರಾಫಾ ಎಂಬ ಒಬ್ಬ ಯುವ ಕವಿ ನನ್ನನ್ನು ಗಾರ್ಡನ್ ಹೋಟೆಲಿನಲ್ಲಿ ಕಾಣಲು ಬಂದ, ನಮ್ಮ ದ್ವಿತೀಯ ಯುರೋಪಿಯನ್ ಪ್ರವಾಸದ ನಂತರ ನಾವಲ್ಲಿ ನೆಲಸಿದ್ದೆವು. ಅವನು ನನಗಂದ: ರಿಕಾರ್ಡೋ ಗಿರಾಲ್ಡಿಸ್ ಮತ್ತು ಪಾಬ್ಲೋ ರೋಜಾಸ್ ಪಾಝ್ ಹೊಸ ಸಾಹಿತ್ಯಿಕ ತಲೆಮಾರನ್ನು ಪ್ರತಿನಿಧೀಕರಿಸುವ ಒಂದು ಪತ್ರಿಕೆಯನ್ನು ತರಲು ತೀರ್ಮಾನಿಸಿದ್ದರು, ಹಾಗೂ ಅದೇ ಅದರ ಉದ್ದೇಶವಾಗಿದ್ದರೆ ನನ್ನನ್ನು ಕೈಬಿಡುವ ಹಾಗಿಲ್ಲ ಎಂದು ಎಲ್ಲರೂ ಹೇಳಿದ್ದರು. ಸಹಜವಾಗಿಯೇ ನನಗೆ ಖುಷಿಯಾಯಿತು. ಆ ರಾತ್ರಿ ನಾನು ಫೀನಿಕ್ಸ್ ಹೋಟೆಲಿಗೆ ಹೋದೆ, ಗಿರಾಲ್ಡಿಸ್ ಅಲ್ಲಿ ತಂಗಿದ್ದ. ಅವನು ಈ ಪದಗಳೊಂದಿಗೆ ನನ್ನನ್ನು ಸ್ವಾಗತಿಸಿದ:

‘ಬ್ರಾಂಡನ್ ನನಗೆ ಹೇಳಿದ, ಮೊನ್ನೆ ರಾತ್ರಿ ನೀವೆಲ್ಲ ಸೇರಿ ಯುವ ಬರಹಗಾರರ ಒಂದು ಪತ್ರಿಕೆ ಸುರುಮಾಡಲು ತೀರ್ಮಾನಿಸಿದಿರಿ, ಮತ್ತು ಅದರಿಂದ ನನ್ನನ್ನು ಕೈಬಿಡುವುದು ಸಾಧ್ಯವಿಲ್ಲ ಎಂದು ಪ್ರತಿಯೊಬ್ಬರೂ ಹೇಳಿದರು.’ ಅಷ್ಟರಲ್ಲಿ ಅಲ್ಲಿಗೆ ರೋಜಾಸ್ ಪಾಝ್ ಬಂದು ಉತ್ಸಾಹದಿಂದ ನುಡಿದ: ‘ನನಗೆ ತುಂಬಾ ಖುಷಿಯಾಗಿದೆ.’ ನಾನು ಮಧ್ಯೆ ಪ್ರವೇಶಿಸಿ ಹೇಳಿದೆ: ‘ಮೊನ್ನೆ ರಾತ್ರಿ ನಾವು ಮೂವರೂ ಸೇರಿ, ಹೊಸ ಲೇಖಕರ ಪತ್ರಿಕೆಯಿಂದ ನಿಮ್ಮನ್ನು ಕೈಬಿಡುವುದು ಸಾಧ್ಯವಿಲ್ಲ ಎಂದು ತೀರ್ಮಾನಿಸಿದೆವು.’ ಈ ಅಮಾಯಕ ತಂತ್ರದಿಂದಾಗಿ ‘ಪ್ರೋವಾ’ ಹುಟ್ಟಿಕೊಂಡಿತು. ನಾವು ಪ್ರತಿಯೊಬ್ಬರೂ ಐವತ್ತು ಪೆಸೋಸ್ ಹಾಕಿದೆವು. ಅದು ಮುನ್ನೂರರಿಂದ ಐನೂರು ಪ್ರತಿಗಳ, ತಪ್ಪಿಲ್ಲದ, ಉತ್ತಮ ಕಾಗದದ ಒಂದು ಸಂಚಿಕೆಗೆ ಸಾಕಿತ್ತು. ಆದರೆ ಒಂದೂವರೆ ವರ್ಷ ಹಾಗೂ ಹದಿನೈದು ಸಂಚಿಕೆಗಳ ನಂತರ ಚಂದಾದಾರರಿಲ್ಲದೆ, ಜಾಹೀರಾತುಗಳಿಲ್ಲದೆ ನಾವದನ್ನು ನಿಲ್ಲಿಸಬೇಕಾಯಿತು.

ಈ ವರ್ಷಗಳು ಸಂತೋಷಕರವಾಗಿದ್ದುವು, ಯಾಕೆಂದರೆ ಅವು ಹಲವು ಮಿತ್ರತ್ವಗಳನ್ನು ಪ್ರತಿನಿಧಿಸುತ್ತಿದ್ದುವು. ನೋರಾ ಲಾಂಗ್, ಮೆಸಿಡೋನಿಯೋ, ಪಿಞರೋ, ಮತ್ತು ನನ್ನ ತಂದೆ. ನಮ್ಮ ಕೆಲಸದ ಹಿಂದೊಂದು ಪ್ರಾಮಾಣಿಕತೆ ಇತ್ತು; ನಾವು ಪದ್ಯ ಮತ್ತು ಗದ್ಯ ಎರಡನ್ನೂ ಹೊಸತುಪಡಿಸುತ್ತೇವೆ ಎನ್ನುವುದು ನಮ್ಮ ಭಾವನೆಯಾಗಿತ್ತು. ಎಲ್ಲಾ ಯುವಕರಂತೆ, ನಾನು ಎಷ್ಟು ಅಸಂತುಷ್ಟನಾಗಬಹುದೋ ಅಷ್ಟೂ ಆದೆ: ಒಂದು ತರದ ಹ್ಯಾಮ್ಲೆಟ್ ಮತ್ತು ರಾಸ್ಕೋಲ್ನಿಕೋವ್, ಇಬ್ಬರನ್ನೂ ಒಟ್ಟಿಗೆ ಸುತ್ತಿ.

1924ರಲ್ಲಿ ನಾನು ಎರಡು ವಿಭಿನ್ನ ಸಾಹಿತ್ಯಿಕ ಪಂಗಡಗಳಿಗೆ ಪ್ರವೇಶ ಪಡೆದೆ. ಒಂದು, ನಾನಿನ್ನೂ ಇಷ್ಟಪಡುವಂಥ ರಿಕಾರ್ಡೋ ಗಿರಾಲ್ಡೆಸ್ ನದು, ಆಗಿನ್ನೂ ಅವನು ‘ಡಾನ್ ಸೆಗುಂಡೋ ಸೋಂಬ್ರಾ’ ಬರೆದಿರಲಿಲ್ಲ. ಗಿರಾಲ್ಡೆಸ್ ನನಗೆ ತುಂಬಾ ಉದಾರಿಯಾಗಿದ್ದ. ಅವನಿಗೆ ನಾನು ನನ್ನದೊಂದು ಒಡ್ಡೊಡ್ಡಾದ ಕವಿತೆಯನ್ನು ಕೊಡುತ್ತಿದ್ದೆ, ಅವನದನ್ನು ಸೂಕ್ಷ್ಮವಾಗಿ ಓದಿ, ನಾನು ಏನು ಹೇಳಲು ಪ್ರಯತ್ನಿಸಿದ್ದೇನೆ? ಆದರೆ ನನ್ನ ಸಾಹಿತ್ಯಿಕ ಅಸಾಮರ್ಥ್ಯ ಹೇಗೆ ನನ್ನನ್ನು ಹೇಳುವುದರಿಂದ ತಪ್ಪಿಸಿದೆ ಎನ್ನುವುದನ್ನು ದಿವ್ಯದೃಷ್ಟಿಯಿಂದ ಎಂಬಂತೆ ಕಂಡುಕೊಳ್ಳುತ್ತಿದ್ದ. ನಂತರ ಅವನು ಆ ಕವಿತೆಯ ಬಗ್ಗೆ ಇತರರ ಜೊತೆ ಮಾತಾಡುತ್ತಿದ್ದ. ಪಠ್ಯದಲ್ಲಿ ಅವನ್ನು ಕಾಣದೆ ಅವರು ತಬ್ಬಿಬ್ಬಾಗುತ್ತಿದ್ದರು.

ಇನ್ನೊಂದು ಗುಂಪು, ನಾನು ಪಶ್ಚಾತ್ತಾಪ ಪಡುವಂಥದು, ‘ಮಾರ್ಟಿನ್ ಫಿಯೆರೋ’ ಪತ್ರಿಕೆಯದು. ನಾನು ಇಷ್ಟಪಡದದ್ದೆಂದರೆ ಅದು ಪ್ರತಿನಿಧೀಕರಿಸುತ್ತಿದ್ದ ಧ್ಯೇಯ, ಎಂದರೆ ಸಾಹಿತ್ಯವೆನ್ನುವುದು ನಿರಂತರವಾಗಿ ಮರು ಹುಟ್ಟು ಪಡೆಯಬೇಕು – ಆದಂ ಪ್ರತಿ ಮುಂಜಾನೆ ಪುನರ್ಜನ್ಮ ಪಡೆಯುತ್ತಾನೆ ಎಂಬ ಫ್ರೆಂಚ್ ವಿಚಾರ ಅದು; ಹಾಗೂ ಪ್ಯಾರಿಸ್ ನಲ್ಲಿ ಪ್ರಚಾರ ಮತ್ತು ಒಳಜಗಳಗಳಲ್ಲಿ ಹೊರಳಾಡುವ ಸಾಹಿತ್ಯಿಕ ಸಂಚು ಕೂಟಗಳಿದ್ದು, ನಾವೂ ಅವುಗಳನ್ನು ತಿಳಿದಿರಬೇಕು ಮತ್ತು ಹಾಗೇ ಮಾಡಬೇಕು ಎನ್ನುವ ವಿಚಾರ. ಇದರ ಒಂದು ಪರಿಣಾಮವೆಂದರೆ ಬ್ಯೂನೋಸ್ ಏರಿಸ್ ನಲ್ಲಿ ಒಂದು ಸುಳ್ಳು ಸಾಹಿತ್ಯ ಜಗಳವನ್ನು ಸೃಷ್ಟಿಸಲಾಯಿತು, ಫ್ಲೋರಿಡಾ ಮತ್ತು ಬೋಯೆಡೋ ನಡುವೆ. ಫ್ಲೋರಿಡಾ ಉನ್ನತ ವರ್ಗವನ್ನೂ, ಬೋಯೆಡೋ ಕೆಳವರ್ಗವನ್ನೂ ಪ್ರತಿನಿಧೀಕರಿಸುತ್ತಿದ್ದುವು. ನಾನು ಬೋಯೆಡೋದಲ್ಲಿರಲು ಬಯಸಿದ್ದೆ, ನಾನು ಹಳೆ ಉತ್ತರ ಭಾಗದ ಕುರಿತು, ಕೊಳಚೆ ಜನಪ್ರದೇಶಗಳ ಕುರಿತೂ, ದುಃಖ ಮತ್ತು ಸೂರ್ಯಾಸ್ತಮಾನಗಳ ಕುರಿತೂ ಬರೆಯುತ್ತಿದ್ದ ಕಾರಣ.

ಇಬ್ಬರು ಪಿತೂರಿಕೋರರಾದ ಫ್ಲೋರಿಡಾದ ಅರ್ನೆಸ್ಟೋ ಪಲಾಸಿಯೋ ಮತ್ತು ಬೋಯೆಡೋದ ರಾಬರ್ಟೋ ಮರಿಯಾನಿಗಳಲ್ಲಿ ಒಬ್ಬರು ನನಗಂದರು, “ನಾನು ಈಗಾಗಲೇ ಫ್ಲೋರಿಡಾ ಹೋರಾಟಗಾರರ ಜತೆ ಇದ್ದೇನೆ, ಬದಲಾಯಿಸುವುದಕ್ಕೆ ಸಮಯ ಮೀರಿತು” ಎಂದು. ಇಡೀ ಸಂಗತಿ ಬರೇ ಒಂದು ಕಣ್ಣು ಕಟ್ಟಾಗಿತ್ತು. ಕೆಲವು ಲೇಖಕರು ಎರಡೂ ಗುಂಪುಗಳಲ್ಲಿ ಇದ್ದರು – ಉದಾಹರಣೆಗೆ, ರಾಬರ್ಟೋ ಅರ್ಲ್ಟ್ ಮತ್ತು ನಿಕೊಲಾಸ್ ಒಲಿವೆರಿ. ಈ ಸುಳ್ಳನ್ನು ಈಗ ‘ಅಮಾಯಕ ಯುನಿವರ್ಸಿಟಿಗಳು’ ಗಂಭೀರ ಅಧ್ಯಯನಕ್ಕೆ ತೆಗೆದುಕೊಂಡಿವೆ. ಆದರೆ ಅದು ನಿಜಕ್ಕೂ ಭಾಗಶಃ ಪ್ರಚಾರಕ್ಕೆ, ಭಾಗಶಃ ಬಾಲಿಶ ಕೀಟಲೆಗೆ ನಡೆದ ಸಂಗತಿ.

ಈ ಕಾಲಕ್ಕೆ ಸಂಬಂಧಿಸಿದ ಹೆಸರುಗಳೆಂದರೆ ಸಿಲ್ವೀನಿಯಾ ಮತ್ತು ವಿಕ್ಟೋರಿಯಾ ಒಕ್ಯಾಂಪೋ, ಕವಿ ಕಾರ್ಲೋಸ್ ಮಾಸ್ಟ್ರೋನಾರ್ದಿ, ಎಡುವರ್ಡೋ ಮಲಿಯಾ, ಮತ್ತು ಕೊನೆಯವನಲ್ಲದ ಅಲೆಯಾಂಡ್ರೋ ಕ್ಸುಲ್-ಸೋಲಾರ್. ಒಂದು ತರ ಬೀಸಿನ ಸಿದ್ಧ ಮಾತಿನಲ್ಲಿ ಹೇಳುವುದಾದರೆ, ಒಬ್ಬ ಅನುಭಾವಿ, ಕವಿ, ಮತ್ತು ಚಿತ್ರಕಲಾವಿದನಾಗಿದ್ದ ಕ್ಸುಲ್ ನಮ್ಮ ವಿಲಿಯಂ ಬ್ಲೇಕ್ ಆಗಿದ್ದ. ಒಂದು ಸೆಕೆಯ ಸಾಯಂಕಾಲ ನಾನವನನ್ನು ಕೇಳಿದ್ದು ಪ್ರತ್ಯೇಕವಾಗಿ ನನಗೆ ನೆನಪಿದೆ, ಈ ಉಸಿರುಗಟ್ಟಿಸುವ ದಿನ ನೀನೇನು ಮಾಡಿದಿ ಎಂದು. ಅವನ ಉತ್ತರ ‘ಏನೂ ಇಲ್ಲ, ಮಧ್ಯಾಹ್ನದ ಊಟದ ನಂತರ ಹನ್ನೆರಡು ಧರ್ಮಗಳನ್ನು ಹುಟ್ಟಿಸಿ ಬಿಟ್ಟದ್ದಲ್ಲದೆ.’ ಕ್ಸುಲ್ ಒಬ್ಬ ತತ್ವಜ್ಞಾನಿ ಕೂಡ ಆಗಿದ್ದ, ಎರಡು ಭಾಷೆಗಳನ್ನು ನಿರ್ಮಿಸಿದ್ದ. ಒಂದು ತತ್ವಜ್ಞಾನೀಯ ಭಾಷೆಯಾಗಿತ್ತು, ಜಾನ್ ವಿಲ್ಕಿನ್ಸ್ ನ ರೀತಿಯಲ್ಲಿ, ಇನ್ನೊಂದು ಸ್ಪ್ಯಾನಿಶ್ ಭಾಷೆಯ ಪುನರುಜ್ಜೀವನ, ಅನೇಕ ಇಂಗ್ಲಿಷ್, ಜರ್ಮನ್, ಮತ್ತು ಗ್ರೀಕ್ ಪದಗಳನ್ನು ಸೇರಿಸಿ.

ಬಾಲ್ಟಿಕ್ ಮತ್ತು ಇಟಾಲಿಯನ್ ಮೂಲದಿಂದ ಬಂದವನು ಅವನು. ‘ಕ್ಸುಲ್’ ಎನ್ನುವುದು ಅವನ ‘ಶುಲ್ಟ್ಸ್’ ಅವತರಿಣಿಕೆಯಾಗಿತ್ತು, ಹಾಗೂ ‘ಸೋಲಾರ್’ ಎನ್ನುವುದು ‘ಸೊಲಾರಿಸ್’ನದು. ಈ ಕಾಲದಲ್ಲಿ ನಾನು ಅಲ್ಫೋನ್ಸೋ ರೆಯಿಸ್ ನನ್ನು ಸಹಾ ಭೇಟಿಯಾದೆ. ಅವನು ಅರ್ಜೆಂಟೀನಾದಲ್ಲಿ ಮೆಕ್ಸಿಕನ್ ರಾಯಭಾರಿಯಗಿದ್ದ. ಮತ್ತು ಪ್ರತಿ ಭಾನುವಾರ ಎಂಬೆಸಿಯಲ್ಲಿ ನನ್ನನ್ನು ಭೋಜನಕ್ಕೆ ಕರೆಯುತ್ತಿದ್ದ. ರೆಯಿಸ್ ನನ್ನು ನಾನು ಈ ಶತಮಾನದ (20ನೆ ಶತಮಾನ) ಉತ್ಕೃಷ್ಟ ಗದ್ಯ ಶೈಲಿಕಾರನೆಂದು ಪರಿಗಣಿಸುತ್ತೇನೆ, ಮತ್ತು ನನ್ನ ಬರಹದಲ್ಲಿ ಸರಳತನ ಮತ್ತು ನೇರತನದ ಬಗ್ಗೆ ನಾನು ಅವನಿಂದ ಬಹಳಷ್ಟು ಕಲಿತುಕೊಂಡಿದ್ದೇನೆ.

ನನ್ನ ಜೀವನದ ಈ ಅವಧಿಯನ್ನು ಮೊತ್ತದಲ್ಲಿ ಹೇಳುವುದಾದರೆ, ನಾನಾಗ ಆಗಿದ್ದ ಅತಿ ಶಿಷ್ಟತೆಯ ಮತ್ತು ಸಿದ್ಧಾಂತ ಬದ್ಧ ಯುವಕನ ಜೊತೆ ನನಗೆ ಏನೇನೂ ಅನುಕಂಪವಿಲ್ಲ. ಈ ಗೆಳೆಯರಾದರೆ, ಇನ್ನೂ ಬಹಳ ಜೀವಂತವಾಗಿದ್ದಾರೆ, ಮತ್ತು ನನಗೆ ಹತ್ತಿರವಾಗಿದ್ದಾರೆ, ಅಷ್ಟರ ಮಟ್ಟಿಗೆ ಅವರು ನನ್ನ ಅಮೂಲ್ಯ ಭಾಗವಾಗಿದ್ದಾರೆ.