ನನಗೆ ಖೈದಿಗಳ ಬಗ್ಗೆ ತಿರಸ್ಕಾರವಾಗಲೀ, ಅವಮಾನವಾಗಲೀ, ಪೋಲೀಸರ ಬಗ್ಗೆ ಅನಗತ್ಯ ಭಯ-ಗೌರವಗಳಾಗಲೀ ಬೆಳೆಯಲಿಲ್ಲ. ಇವರೆಲ್ಲ ನಮ್ಮ ಕುಟುಂಬಗಳಿಂದ ಭಿನ್ನರಾದವರು ಎಂದೂ ಅನಿಸಲಿಲ್ಲ. ಎಲ್ಲರಂತೆಯೇ ಅವರನ್ನು ನೋಡಬೇಕೆನಿಸುತ್ತದೆ. ಅವರೂ ಕೂಡ ನಮ್ಮ ಸಮಾಜದ ಒಂದು ಭಾಗವೆನಿಸುತ್ತದೆ. ಇದನ್ನು ಒಪ್ಪಲು ಯಾವ ಸಭ್ಯರಿಗಾದರೂ ಕಷ್ಟವಾಗುತ್ತದೆ. ಆದರೆ ಕ್ರೀಡಾಪಟುಗಳು, ವಿಜ್ಞಾನಿಗಳು, ನಟರು, ಸಂಗೀತಗಾರರನ್ನು ಈ ಸಮಾಜ ರೂಪಿಸಿದೆ ಎಂಬುದು ಎಷ್ಟು ನಿಜವೋ, ಖೈದಿಗಳು, ಖೈದಿಗಳಾಗಬೇಕಾಗಿ ಬಂದವರು, ಅವರನ್ನು ಕೂಡ ಈ ಸಮಾಜವೇ ರೂಪಿಸಿದೆ ಎಂಬುದನ್ನೂ ಒಪ್ಪಬೇಕು.
ಖ್ಯಾತ ಕತೆಗಾರ ಕೆ. ಸತ್ಯನಾರಾಯಣ ಬರೆಯುವ ಖೈದಿಗಳ ಕುರಿತ ವಿಭಿನ್ನ ಸರಣಿ “ಜೈಲು ಕತೆಗಳು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ
ಕ್ಯಾತಂಗೆರೆ ಜೈಲು ವಿಶ್ವವಿದ್ಯಾಲಯದಲ್ಲಿ
ಇಲ್ಲಿಯ ಜೈಲು ಕಥನಗಳ ನಾಗರಿಕರೆಲ್ಲ ಸಜ್ಜನರಲ್ಲ, ಸಭ್ಯಗೃಹಸ್ಥರಲ್ಲ, ತಪ್ಪು ಮಾಡಿರುವವರು, ತಪ್ಪು ಒಪ್ಪಿಕೊಂಡಿರುವವರು, ಅದಕ್ಕಾಗಿ ಶಿಕ್ಷೆ ಅನುಭವಿಸುತ್ತಿರುವವರು ಎಂಬುದು ಕೂಡ ಸರಿ. ಆದರೂ ಇವರೆಲ್ಲರೂ ನನಗೆ, ಇದನ್ನು ಓದುತ್ತಿರುವ ನಿಮಗಿಂತ ಹೆಚ್ಚು ಆತ್ಮೀಯರು. ದೀರ್ಘಕಾಲ ನನ್ನೊಳಗೆ ಉಳಿದು ಬೆಳೆದಿರುವವರು. ಪ್ರೀತಿ ಎನ್ನುವುದು ಪಕ್ಷಪಾತ ಅನ್ನುವುದಾದರೆ, ನಾನು ಒಂದು ರೀತಿಯಲ್ಲಿ ಮಾತ್ರವಲ್ಲ, ಎಲ್ಲ ರೀತಿಯಲ್ಲೂ ಪಕ್ಷಪಾತಿಯೇ!
ಈ ಮನೋಧರ್ಮಕ್ಕೆ ಕಾರಣವೆಂದರೆ ಜೈಲು, ಖೈದಿಗಳು, ಅಪರಾಧ, ಪಾಪ, ಶಿಕ್ಷೆ, ಪುಣ್ಯ, ಪೋಲೀಸರು, ನ್ಯಾಯಾಧೀಶರು, ಇತ್ಯಾದಿಗಳನ್ನೆಲ್ಲ ಕುರಿತು ನನ್ನ ಜೀವನ ದೃಷ್ಟಿ ರೂಪುಗೊಂಡದ್ದು ಈಗ ಮಂಡ್ಯ ನಗರದ ಭಾಗವಾಗಿರುವ ಕ್ಯಾತಂಗೆರೆಯಲ್ಲಿದ್ದ ದೊಡ್ಡ ಜೈಲೆಂಬ ವಿಶ್ವವಿದ್ಯಾಲಯದಿಂದ ದೊರಕಿದ ಜೀವನದರ್ಶನದಿಂದ. ಇದಕ್ಕೆ ಪೀಠಿಕೆಯಾಗಿರುವುದು, ಕೊಪ್ಪ ಗ್ರಾಮದ ಪೋಲೀಸ್ ಸ್ಟೇಶನ್ನಲ್ಲಿದ್ದ ಲಾಕಪ್.
ಕೊಪ್ಪ ಗ್ರಾಮಕ್ಕೆ ಪಿಯುಸಿ ಕಾಲೇಜು ಬರುವ ಮೊದಲೇ ಪೋಲೀಸ್ ಸ್ಟೇಶನ್ ಬಂತು. ಒಳ್ಳೆಯ ಮಜಬೂತಾದ ಕಟ್ಟಡ. ದೊಡ್ಡ ಕಾಂಪೋಂಡ್. ವಿಶಾಲವಾದ ಜಗುಲಿ. ಜಗುಲಿ ಮುಂದೆ ಹೂ ತೋಟ. ಲಾಕಪ್ ಕೋಣೆಯು ರಸ್ತೆಗೇ ಕಾಣಿಸುತ್ತಿತ್ತು. ಲಾಕಪ್ನಲ್ಲಿರುವವರು ಸಾಮಾನ್ಯವಾಗಿ ಗೊತ್ತಿದ್ದವರೇ. ನಾವು ಬೀದಿಯಿಂದಲೇ ಅವರನ್ನು ನೋಡಬಹುದಿತ್ತು. ಅಸಹಾಯಕರಾಗಿ ನಿಂತಿರುತ್ತಿದ್ದರು, ನೋಡುತ್ತಿದ್ದರು ಮತ್ತು ದೃಷ್ಟಿಯಲ್ಲಿ ಅಂಗಲಾಚುತ್ತಾ ನಮ್ಮನ್ನು ನೋಡುತ್ತಿದ್ದರು. ಮತ್ತೆ ಮತ್ತೆ ನಮಗೆ ಅವರನ್ನು ನೋಡಬೇಕೆನಿಸುತ್ತಿತ್ತು. ಪೋಲೀಸರ ಕಣ್ಣಿಗೆ ಬೀಳದ ಹಾಗೆ ಬೀದಿಯಲ್ಲಿ ನಿಂತುಕೊಂಡು, ಕಂಬಿಯ ಒಳಗಡೆ ಇರುವವರನ್ನು ನೋಡುತ್ತಲೇ ಇದ್ದೆವು. ನೋಡು, ನೋಡುತ್ತಲೇ ಇವರು ನಮ್ಮವರು, ಸುಮ್ಮನೆ ಲಾಕಪ್ ಒಳಗೆ ನೂಕಿ ತೊಂದರೆ ಕೊಡುತ್ತಿದ್ದಾರೆ ಅನಿಸುತ್ತಿತ್ತು.
ಇದಕ್ಕೆ ಹೋಲಿಸಿದರೆ, ಕ್ಯಾತಂಗೆರೆಯ ಜೈಲು ತುಂಬಾ ದೊಡ್ಡದು. ಜೈಲಿನಲ್ಲಿ ಬಂಧುಗಳು ವಾಸವಾಗಿದ್ದಾರೆಂದರೆ, ಯಾವುದೋ ಗಂಭೀರವಾದ ತಪ್ಪು, ಕೊಲೆ, ಮೋಸ ಮಾಡಿ “ಸಿಕ್ಕಿಹಾಕಿಕೊಂಡು” ಶಿಕ್ಷೆಗೆ ಒಳಗಾಗಿದ್ದಾರೆಂದೇ ಎಲ್ಲರ ತಿಳುವಳಿಕೆ. ಬಿಳಿ ಬಣ್ಣದ ಎತ್ತರದ ಗೋಡೆ. ಅದರ ಸಮಕ್ಕೂ ಬೆಳೆದು ನಿಂತ ಸರ್ವೇ ಮರಗಳು. ದೊಡ್ಡ ಗಡಿಯಾರ, ಗಂಟೆ. ಕಬ್ಬಿಣದ ದೊಡ್ಡ ಬಾಗಿಲನ್ನು ಇಬ್ಬರು ಕಾನ್ಸ್ಟೇಬಲ್ಗಳು ಕಷ್ಟಪಟ್ಟು ತೆಗೆಯುವರು. ಬಾಗಿಲು ತೆಗೆಯುವಾಗ ಮುಂದುಗಡೆ ಗಂಡಸರು, ಅವರ ಹಿಂದೆ ಹೆಂಗಸರು, ಕೊನೆಯಲ್ಲಿ ಬಾಲಕರು. ಈ ದೊಡ್ಡ ಬಾಗಿಲ ಒಳಗಡೆ ಬಂದೀಖಾನೆ. ಅಲ್ಲಿಗೆ ನಾವು ಯಾರೂ ಹೋಗುವ ಹಾಗಿಲ್ಲ. ಬಾಗಿಲನ್ನು ತೆರೆದಾದ ಮೇಲೆ ನಾವು ನೋಡಬೇಕಾಗಿದ್ದ ನೆಂಟರಿಷ್ಟರನ್ನು, ಗ್ರಾಮಸ್ಥರನ್ನು ಹೊರಗಡೆ ಕರೆದುಕೊಂಡು ಬರುತ್ತಿದ್ದರು. ಅವರಿಗೆ ಹಾಕಿದ್ದ ಬಿಳಿ ಟೋಪಿ ಮಾಸಲು ಬಣ್ಣಕ್ಕೆ ತಿರುಗಿರುತ್ತಿತ್ತು. ಸುಕ್ಕುಸುಕ್ಕಾಗಿ ತಲೆಯ ಮೇಲೆ ಹೇಗೆ ಹೇಗೋ ಕುಳಿತಿರುತ್ತಿತ್ತು. ಬನಿಯನ್ ತುಂಡಾಗಿದ್ದು, ಹೊಟ್ಟೆಯ ಕೆಳಭಾಗವೆಲ್ಲ ಕಾಣುತ್ತಿತ್ತು. ಇವರನ್ನೆಲ್ಲ ಕರೆದುಕೊಂಡು ಬಂದು ಜೈಲು ಕಾಂಪೋಂಡ್ ಒಳಗಿದ್ದ ಹಸಿರುವಾಣಿ ತುಂಬಿದ್ದ ಕೈ ತೋಟದಲ್ಲಿ ಬಿಡುತ್ತಿದ್ದರು.
ನಾವು ಊರಿಂದ ಬೆಳಿಗ್ಗೆ ಅಷ್ಟು ಹೊತ್ತಿಗೇ ಗಾಡಿ ಕಟ್ಟಿಕೊಂಡು ಹೊರಟು ಹತ್ತೂವರೆ ಹೊತ್ತಿಗೆ ಜೈಲ ಆವರಣಕ್ಕೆ ಬಂದರೆ, ಸುಮಾರು ಹನ್ನೊಂದಕ್ಕೆ ಖೈದಿಗಳನ್ನು ತೋಟದೊಳಗೆ ಬಿಡುತ್ತಿದ್ದರು. ತೋಟದೊಳಗೆ ಮೂರು ಕಲ್ಲು ಬೆಂಚುಗಳು, ಒಂದು ಬಾವಿ. ಬಾವಿಕಟ್ಟೆಯ ಸುತ್ತ ಕುಳಿತುಕೊಂಡು ನಾವು ನಮ್ಮ ಕಡೆಯ ಖೈದಿಗಳಿಗೆ ಊಟ ಮಾಡಿಸುತ್ತಿದ್ದೆವು. ಎಲ್ಲರೂ ಕುಕ್ಕುರುಗಾಲಿನಲ್ಲಿ ಕುಳಿತುಕೊಂಡೇ ಊಟ ಮಾಡುವುದು. ಮುತ್ತುಗದೆಲೆಯಲ್ಲಿ ಊಟ. ನೀರು ಕುಡಿಯಲು ಲೋಟ ತಂದಿರುತ್ತಿರಲಿಲ್ಲ. ಎಲ್ಲರೂ ಕೈಗೆ ಬಿಡಿಸಿಕೊಂಡೇ ಕುಡಿಯುತ್ತಿದ್ದರು. ನೋಡಲು ಬಂದವರಿಗೆಲ್ಲ ಬರೀ ಅನ್ನ, ಸಾರು, ಹೆಸರು, ಇಷ್ಟೇ. ಮುದ್ದೆ, ಇಡ್ಲಿ, ಪಲ್ಯ, ಇವೆಲ್ಲವನ್ನೂ ಖೈದಿಗಳಿಗೆ ಮಾತ್ರ ನೀಡುತ್ತಿದ್ದರು. ಮಕ್ಕಳಿಗೆ ಶಾಸ್ತ್ರಕ್ಕೆ ಒಂದೆರಡು ತುತ್ತು ನೀಡಿ, ಹೋಗಿ, ಆಡ್ಕೋ ಹೋಗಿ ಎಂದು ಕಳಿಸುವರು. ಹಣ್ಣು-ಹಂಪಲು ಅಂತ ವಿಶೇಷವಾಗಿ ಏನೂ ತರದೇ ಹೋಗಿದ್ದರೂ, ಸೀಬೆಹಣ್ಣು, ಬಾಳೆಹಣ್ಣು ಇದ್ದೇ ಇರುವುದು. ಹೊರಡುವ ಸಮಯ ಬಂದಾಗ, ಎಲ್ಲರೂ ಅಳುತ್ತಿದ್ದರು. ಹೆಂಗಸರು ತಲೆ ತಲೆ ಚಚ್ಚಿಕೊಳ್ಳುತ್ತಿದ್ದರು. ಖೈದಿಗಳು ಕೇಸು ಅಪೀಲಿನಲ್ಲಿ ಹೇಗೆ ನಡೆಯುತ್ತಿದೆ, ಮೇಲಿನ ಕೋರ್ಟಿನಲ್ಲಿ ಶಿಕ್ಷೆ ಕಡಿಮೆಯಾಗುವುದೇ, ವಕೀಲರು ಸರಿಯಾಗಿ ಕೇಸು ನಡೆಸುತ್ತಿದ್ದಾರೆಯೇ, ಊರಿನ ಸಮಾಚಾರ ಏನು, ನಿಗದಿಯಾದ ಲಗ್ನಗಳು ನಡೆದವೇ, ತೀರಿಹೋದವರ, ಕಾಯಿಲೆಯ ವಿವರಗಳು, ಎಲ್ಲವನ್ನೂ ಕುರಿತು ಕೇಳುತ್ತಿದ್ದರು. ಇನ್ನೇನು ದರ್ಶನ ಮುಗಿಯಿತೆನ್ನುವಲ್ಲಿಗೆ ಬೀಡಿ ಕಟ್ಟು, ಬೆಂಕಿಕಡ್ಡಿ ಪೊಟ್ಟಣವನ್ನು ಖೈದಿಗಳಿಗೆ ಒಂದು ಮರೆಯಲ್ಲಿ ಕೊಡುವರು. ಅವರು ಕೂಡ ಒಂದು ಮರೆಯಲ್ಲೇ ಚಡ್ಡಿಯ ಒಳಜೇಬಿಗೆ ಸೇರಿಸುವರು. ಇದೆಲ್ಲ ಎರಡು-ಮೂರು ಘಂಟೆ ನಡೆಯುವುದು. ಕೊನೆಯಲ್ಲಿ ಜೈಲರ್ ಬಂದು ಎಲ್ಲರನ್ನೂ ಗದರಿದ ಹಾಗೆ ಮಾಡುವನು. ಸರಿ, ಸಾಕು, ಸಾಕು ಹೊರಡಿ ಎಂದು ಹೇಳುವನು. ಬಲವಂತ, ಆತುರ ಏನೂ ಮಾಡುತ್ತಿರಲಿಲ್ಲ. ಎಲ್ಲ ಮುಗಿದ ಮೇಲೆ ನಮ್ಮ ಹಿರಿಯರು ಜೈಲರ್ಗೆ ಭಕ್ಷೀಸ್ ರೂಪದಲ್ಲಿ ಮುಷ್ಠಿಯೊಳಗೆ ಇಟ್ಟುಕೊಂಡ ರೂಪಾಯಿ ನೋಟನ್ನು ಕೊಡುವರು. ಜೈಲರ್ ಉದಾಸೀನ ಪ್ರಕಟಿಸುತ್ತಲೇ ಎಲ್ಲವನ್ನೂ, ಎಲ್ಲರನ್ನೂ ಕಣ್ಣಿನಲ್ಲೇ ಅಂದಾಜು ಮಾಡಿ, ಇಷ್ಟವಿಲ್ಲದೆ ಎಲ್ಲವನ್ನೂ ತೆಗೆದುಕೊಳ್ಳುತ್ತಿರುವಂತೆ ಕಾಣುತ್ತಿದ್ದರು. ಮತ್ತೆ ನಾವು ಯಾವಾಗ ಬರಬೇಕು ಎಂಬುದನ್ನು ಕೂಡ ಅವರೇ ಸೂಚಿಸುತ್ತಿದ್ದರು. ಚೌಕಾಭಾರ ಆಡುತ್ತಲೋ, ಬುಗುರಿ ಆಡುತ್ತಲೋ ಇರುವ ಮಕ್ಕಳು ಆತುರಾತುರವಾಗಿ ಆಟ ಮುಗಿಸುವರು. ಇಷ್ಟು ಹೊತ್ತಿಗೆ ನಮ್ಮ ಪೈಕಿ ಪೇಟೆಗೆ ಹೋಗಿದ್ದವರು ಸಾಮಾನು ತೆಗೆದುಕೊಂಡು ವಾಪಸ್ ಬರುತ್ತಿದ್ದರು.
ಊರಿಗೆ ವಾಪಸ್ ಹೋಗುವಾಗ, ಕೇಸು-ಖೈದಿಗಳ ಬಗ್ಗೆ ಚರ್ಚೆ. ಖೈದಿಗಳ ನೆತ್ತಿ ಕೂದಲೆಲ್ಲ ಉದುರಿಹೋಗಿದೆ, ಮುಖದ ಮೇಲೆ ಮಡವೆ-ಮಚ್ಚೆಗಳು, ಒಂದೆರಡು ಸುತ್ತು ತೆಗೆದುಹೋಗಿದ್ದಾನೆ, ಏನು ಕರ್ಮ ಮಾಡಿದ್ದೆವೋ ಹಿಂದಿನ ಜನ್ಮದಲ್ಲಿ, ಕೆರೆ ಕೆಳಗಿನ ಬಯಲಿನಲ್ಲಿ ನಾಲ್ಕು ಎಕರೆ ಜಮೀನಿದ್ದರೂ, ಜೈಲು ಒಳಗಡೆ ಕಲ್ಲು ಒಡೆಯುತ್ತಾ, ಸೌದೆ ಸೀಳುತ್ತಾ, ನೆಲ ಸಾರಿಸ್ತಾ ಕಾಲ ಕಳೆಯಬೇಕಲ್ಲ; ಅದೃಷ್ಟಾನ ಕತ್ತೆ ಕಾಯ್ತಾ ಇದ್ದರೆ, ಹೀಗೆ ಆಗೋದು; ಅಪೀಲು ಇನ್ನೇನು ಮುಗೀತಾ ಬಂತು, ಕೇಸು ನಮ್ಮ ಪರವಾಗಿ ಆದರೆ ಪರವಾಗಿಲ್ಲ, ಇಲ್ಲದೆ ಹೋದರೆ ಆಸ್ತಿ, ಮನೆಯೆಲ್ಲ ಅಡವಿಟ್ಟರೂ ಪರವಾಗಿಲ್ಲ, ದಾಯಾದಿಗಳನ್ನು ನಿರ್ನಾಮ ಮಾಡಬೇಕು – ಹೀಗೆ ಸೇಡಿನ, ಪ್ರೀತಿಯ, ಆತಂಕದ ಮಾತುಗಳ ಪ್ರವಾಹ. ಇಷ್ಟೆಲ್ಲಾ ಮಾತನಾಡುವ ಗಂಡಸರು ಗಾಡಿಯಲ್ಲಾಗಲೀ, ಗಾಡಿಯ ಜೊತೆಯಲ್ಲಾಗಲೀ ಊರಿನ ತನಕ ಬರುತ್ತಿರಲಿಲ್ಲ. ಮಾರ್ಗಮಧ್ಯದಲ್ಲಿ ಬರುವ ಹಳ್ಳಿಗಳಲ್ಲಿ ಏನೋ ಕೆಲಸ ಇದೆಯೆಂದೋ, ಇಲ್ಲ ಯಾರನ್ನಾದರೂ ನೋಡಬೇಕೆಂದೋ ಇಳಿದುಬಿಡುತ್ತಿದ್ದರು. (ನಂತರದ ವರ್ಷಗಳಲ್ಲಿ ತಿಳಿದು ಬಂದದ್ದೇನೆಂದರೆ, ಹಾಗೆ ಹೋಗುವವರೆಲ್ಲ, ಇಲ್ಲ ಇಸ್ಪೀಟ್ ಆಡುವುದಕ್ಕೋ, ಇಲ್ಲ ಕಿರಿಯ ಪತ್ನಿಯ ಮನೆಗೋ ಹೋಗಿ ತಂಪಾಗಿ ತಂಗಿದ್ದು ಎಷ್ಟೋ ದಿನಗಳ ನಂತರ ಊರಿಗೆ ಬಂದು ಸೇರುವರು.)
ಖೈದಿಗಳೆಲ್ಲ ಸಾಮಾನ್ಯವಾಗಿ ನೆಂಟರಿಷ್ಟರು ಮತ್ತು ನೆರೆಹೊರೆಯವರೇ ಆಗಿರುತ್ತಿದ್ದರು. ಗೊತ್ತಿರುವವರು ಯಾರಾದರೂ ಜೈಲಿನಲ್ಲಿ ಇದ್ದೇ ಇರುತ್ತಿದ್ದುದರಿಂದ, ಅದಕ್ಕೆ ಸಂಬಂಧಪಟ್ಟ ವ್ಯವಹಾರ, ತಂತ್ರಗಳ ಮಾತೆಲ್ಲ ಯಾವಾಗಲೂ ಮನೆಯಲ್ಲಿ ನಡೆಯುತ್ತಿದ್ದರಿಂದ, ಜೈಲಿನ ಬಗ್ಗೆ ಭಯವಿದ್ದರೂ ತುಂಬಾ ನಿಗೂಢವಾದ ಭಾವನೆಯೇನೂ ಬರುತ್ತಿರಲಿಲ್ಲ. ಬಂದರೂ ಕ್ಷಣಿಕ. ಅಲ್ಲದೆ ಖೈದಿಗಳ ಅಪರಾಧಗಳು, ಪಾಪ-ಪುಣ್ಯದ ವಿವರಗಳು ಬಾಲಕರಾದ ನಮಗೂ ಗೊತ್ತಿರುವಂತವೇ ಆಗಿದ್ದವು. ಗದ್ದೆ ನೀರಿಗಾಗಿ ಜಗಳ, ಯಾರು ಯಾರನ್ನೋ ಇಟ್ಟುಕೊಂಡಿರುವುದರ ಬಗ್ಗೆ ಗುಮಾನಿಯಿಂದ ನಡೆಯುವ ಕೊಲೆ, ಮದುವೆಗೆ ಒಡವೆ ಮಾಡಿಸಿಟ್ಟ ಮೇಲೆ ಸಂಬಂಧಿಗಳಲ್ಲೇ ಯಾರಾದರೂ ಲಪಟಾಯಿಸುತ್ತಾ ಇದ್ದದ್ದು, ಇಂತಹ ಕೇಸುಗಳೇ! ಕಳ್ಳತನ, ಅಪರಾಧ ಮಾಡದಿದ್ದವರೂ ಜೈಲಿಗೆ ಹೋಗಬೇಕಾಗುತ್ತಿತ್ತು. ಪರವೂರಿನಲ್ಲಿ ಕಳ್ಳತನ ನಡೆದರೆ, ಕಳ್ಳರು ತುಂಬಾ ದಿನ ಸಿಗದೇ ಹೋದರೆ, ಹಳೆ ಕಳ್ಳರನ್ನು ಹಿಡಿಯುತ್ತಿದ್ದರು. ಆವಾಗ ನಮ್ಮ ಊರಿಗೇ ಹುಡುಕಿಕೊಂಡು ಬರುತ್ತಿದ್ದರು. ಹಾಗೆ ಕಳ್ಳರನ್ನು ಹಿಡಿದುಕೊಂಡು ಹೋಗುವಾಗ ನೆಂಟರಿಷ್ಟರೆಲ್ಲ ಪೋಲೀಸ್ ಮತ್ತು ಕಳ್ಳ ಇಬ್ಬರ ಹಿಂದೆಯೂ ಮೆರವಣಿಗೆಯಲ್ಲಿ ಹೊರಡುವರು. ಗ್ರಾಮದ ಗಡಿ ದಾಟುವ ತನಕ ಕೈಗೆ ಕೋಳ ಹಾಕಬಾರದು, ತೀರಾ ಅವಮಾನ ಆಗುವ ಹಾಗೆ ಮೆರವಣಿಗೆ ಮಾಡಬಾರದು ಎಂಬ ಬೇಡಿಕೆಗೆ ಪೋಲೀಸರು ಕೂಡ ಸ್ಪಂದಿಸುತ್ತಿದ್ದರು. ಆದರೆ ಅದಕ್ಕೆಂದೇ ಬೇರೆ ಫೀಸ್ ಕೊಡಬೇಕಾಗುತ್ತಿತ್ತು. ಪೋಲೀಸಿನವರೆಗೆಂದು, ಕೇಸು ನಡೆಸುವುದಕ್ಕೊಂದು, ವಕೀಲರಿಗೆ ದುಡ್ಡು ಸುರಿಯಲೆಂದು – ಒಡವೆ, ಜಮೀನುಗಳನ್ನೆಲ್ಲ ಮಾರಿಯೋ, ಅಡವಿಟ್ಟೋ ದುಡ್ಡು ತರಲು ಹೋದವರು, ವರ್ಷಾನುಗಟ್ಟಲೆ ನಾಪತ್ತೆಯಾಗಿಬಿಡುತ್ತಿದ್ದರು. ದುಡ್ಡೆಲ್ಲ ಖರ್ಚಾಗಿ, ತಿನ್ನುವುದಕ್ಕೂ ಗತಿಯಿಲ್ಲದ ಹಾಗಾದ ಮೇಲೆ ಮುಖ ಸಪ್ಪಗೆ ಮಾಡಿಕೊಂಡು, ಕಾಲೆಳೆದುಕೊಂಡು ಊರಿಗೆ ಬರುವರು. ಇಂತಹ ಮನೆಹಾಳರ ಕುಟುಂಬಗಳ ಜವಾಬ್ದಾರಿ ಊರಲ್ಲಿ ಉಳಿದ ನೆಂಟರಿಷ್ಟರ ಮೇಲೆ ಬೀಳುವುದು. ಖೈದಿಯ ಕುಟುಂಬ ಸಾರ್ವಜನಿಕ ಆಸ್ತಿಯಾಗುವುದು.
ಪೋಲೀಸ್ ಪೇದೆಗಳೇ ಕೆಲವು ಸಂದರ್ಭಗಳಲ್ಲಿ ಈ ವ್ಯವಸ್ಥೆ ಆತ್ಮೀಯವಾಗಲು, ಮಾನವೀಯವಾಗಲು ಕಾರಣವಾಗುತ್ತಿದ್ದರು. ಖೈದಿಗಳ ಪೈಕಿ ಯಾರಾದರೂ ತೀರಿಹೋದರೆ, ಅವರನ್ನು ಸುಡುವ ಹೊತ್ತಿಗೆ, ಹೂಳುವ ಹೊತ್ತಿಗೆ ಕಾನ್ಸ್ಟೇಬಲ್ಗಳೇ ಖೈದಿಗಳನ್ನು ಕರೆದುಕೊಂಡು ಬರುವುದು ಮಾತ್ರವಲ್ಲ, ತಿಥಿ, ಹಾಲು-ತುಪ್ಪ, ಶಿವಗಣಾರಾಧನೆ, ವೈಕುಂಠ ಸಮಾರಾಧನೆಯ ದಿನಗಳಿಗೂ ಮತ್ತೆ ಖೈದಿಗಳನ್ನು ಜೈಲಿನಿಂದ ಕರೆದುಕೊಂಡು ಬರುತ್ತಿದ್ದರು. ಖೈದಿಗಳು ತಮ್ಮ ಮನೆಯೊಳಗೆ ಸ್ನಾನ ಮಾಡಿ, ಹಣೆಗೆ ವಿಭೂತಿ ಹಚ್ಚಿಕೊಂಡು, ಮಡಿ ಮಾಡಿದ ಬಟ್ಟೆ ಹಾಕಿಕೊಂಡು ಆಚರಣೆಗಳಲ್ಲಿ ಭಾಗವಹಿಸುತ್ತಿದ್ದರೆ, ಕಾನ್ಸ್ಟೇಬಲ್ಗಳು ಕೂಡ ಊರಿನಲ್ಲಿ ಯಾರಿಗಾದರೂ ಭಾವ-ನೆಂಟರೋ, ದಾಯಾದಿಗಳೋ ಆಗಿರುತ್ತಿದ್ದರು. ಅಂಥವರ ಮನೆಗಳಲ್ಲಿ ತಂಗುತ್ತಿದ್ದರು. ಹಾಗಿಲ್ಲದಿದ್ದರೆ, ಖೈದಿಗಳ ಮನೆಗಳಲ್ಲೇ ತಂಗುವರು. ಅಲ್ಲೇ ಸಕಲವೂ ವ್ಯವಸ್ಥೆಯಾಗುತ್ತಿತ್ತು.
ಹಬ್ಬ ಹರಿದಿನಗಳು ಬಂದರಂತೂ ಜೈಲು, ಗ್ರಾಮ, ಮನೆಗಳಿಗೆ ವ್ಯತ್ಯಾಸವೇ ಉಳಿಯುತ್ತಿರಲಿಲ್ಲ. ಇಂತಹ ಸಂದರ್ಭಗಳಲ್ಲಿ, ಮೂರು-ನಾಲ್ಕು ಖೈದಿಗಳ ಮನೆಗಳವರು, ಇಲ್ಲದಿದ್ದರೆ ಅಕ್ಕಪಕ್ಕದ ಗ್ರಾಮಗಳ ಖೈದಿಗಳ ಮನೆಗಳವರು ಒಟ್ಟಿಗೇ ಸೇರಿಕೊಂಡು, ಗಾಡಿ ಕಟ್ಟಿಕೊಂಡು ಗುಂಪಾಗಿ ಕ್ಯಾತಂಗೆರೆಗೆ ಹೊರಡುತ್ತಿದ್ದರು. ಆವಾಗ ಮಾತ್ರ ಊಟ, ತಿಂಡಿ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿರಲಿಲ್ಲ. ಜೈಲ್ ಕಾಂಪೋಂಡಿನ ಕೈ ತೋಟದ ಮೂಲೆಯಲ್ಲೇ ಒಲೆ ಹೂಡುತ್ತಿದ್ದರು. ಇದಕ್ಕಾಗಿ ಇಲಾಖೆಯವರೇ ದಿಂಡುಗಲ್ಲುಗಳನ್ನು ಒದಗಿಸಿದ್ದರು. ನಮ್ಮ ಹಾಗೆ ಬೇರೆಯವರು ಕೂಡ ಇದೇ ದಿಂಡುಗಲ್ಲುಗಳನ್ನು ಒಲೆ ಹೂಡಲು ಉಪಯೋಗಿಸುತ್ತಿದ್ದರಿಂದ, ದಿಂಡುಗಲ್ಲುಗಳೆಲ್ಲ ಕಪ್ಪು ಬಣ್ಣಕ್ಕೆ ತಿರುಗಿದ್ದವು.
ಇನ್ನೇನು ದರ್ಶನ ಮುಗಿಯಿತೆನ್ನುವಲ್ಲಿಗೆ ಬೀಡಿ ಕಟ್ಟು, ಬೆಂಕಿಕಡ್ಡಿ ಪೊಟ್ಟಣವನ್ನು ಖೈದಿಗಳಿಗೆ ಒಂದು ಮರೆಯಲ್ಲಿ ಕೊಡುವರು. ಅವರು ಕೂಡ ಒಂದು ಮರೆಯಲ್ಲೇ ಚಡ್ಡಿಯ ಒಳಜೇಬಿಗೆ ಸೇರಿಸುವರು. ಇದೆಲ್ಲ ಎರಡು-ಮೂರು ಘಂಟೆ ನಡೆಯುವುದು. ಕೊನೆಯಲ್ಲಿ ಜೈಲರ್ ಬಂದು ಎಲ್ಲರನ್ನೂ ಗದರಿದ ಹಾಗೆ ಮಾಡುವನು. ಸರಿ, ಸಾಕು, ಸಾಕು ಹೊರಡಿ ಎಂದು ಹೇಳುವನು. ಬಲವಂತ, ಆತುರ ಏನೂ ಮಾಡುತ್ತಿರಲಿಲ್ಲ.
ಒಂದೊಂದು ಸಲ ಅಡುಗೆ ಸಾಮಾನುಗಳು, ಸೌದೆ, ತರಕಾರಿಗಳನ್ನು ಗಾಡಿಯಲ್ಲೇ ಹಾಕಿಕೊಂಡು ಹೋಗುತ್ತಿದ್ದರೆ, ಇನ್ನು ಕೆಲವು ಸಲ ಬೇವಿನಹಳ್ಳಿ ಅಂಗಡಿಯಿಂದಲೋ, ಇಲ್ಲ ಕ್ಯಾತಂಗೆರೆಗೆ ಹತ್ತಿರವಿರುವ ಮಂಡ್ಯದ ಬನ್ನೂರು ಬಡಾವಣೆಯಿಂದಲೋ ತರುತ್ತಿದ್ದರು. ನಮ್ಮ ಹಾಗೆ ಬೇರೆ ಊರಿಂದ ಬಂದವರೂ ಸೇರಿಕೊಂಡು ಒಟ್ಟಿನಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗುತ್ತಿತ್ತು. ಕೋಸಂಬರಿ, ಗೆಣಸಿನ ಪಲ್ಯ, ಮುದ್ದೆ, ತೊವ್ವೆ, ಸಾರು, ಕಡ್ಲೆಬೇಳೆ ವಡೆ, ಸೀಮೆಅಕ್ಕಿ ಪಾಯಸ, ಅರಿಷಿನದ ಅನ್ನ, ಹೀಗೆ ಹಬ್ಬದ ಅಡಿಗೆಯನ್ನು ತಯಾರಿಸಲು ಹೆಂಗಸರು ತೊಡಗಿದ್ದರೆ, ಗಂಡಸರು ಒಂದು ಮೂಲೆಯಲ್ಲಿ ಕುಳಿತು ಬೀಡಿ ಸೇದುತ್ತಿರುತ್ತಿದ್ದರು. ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಮಾತ್ರ ಊರಿಂದ ಅಡಕೆ ಪಟ್ಟಿಯಲ್ಲಿ ಕಟ್ಟಿಕೊಂಡು ಬಂದಿದ್ದ ಬೆಣ್ಣೆಯನ್ನು ಜೈಲಿನ ಅಧಿಕಾರಿಗಳಿಗೆ ಮನೆಯ ಯಜಮಾನರೇ ಸಮರ್ಪಿಸುವರು. ಕಾನ್ಸ್ಟೇಬಲ್ಗಳು, ಜವಾನರು, ನಮ್ಮ ಜೊತೆಯೇ ಕುಳಿತು ಊಟ ಮಾಡಿದರೆ, ದಫೇದಾರ್, ಇನ್ಸ್ಪೆಕ್ಟರ್ಗಳೆಲ್ಲ ಊಟವನ್ನು ಜೈಲಿನ ತಟ್ಟೆಗಳಲ್ಲಿ ಬಡಿಸಿಕೊಂಡು ಒಳಗೆ ತೆಗೆದುಕೊಂಡು ಹೋಗಿ ಕೂಡುತ್ತಿದ್ದರು. ಬಾಲಕರಾದ ನಮಗೆ ಆಟ ಆಡುವುದರ ಜೊತೆ, ಪಟಪಟ ಬೂಟು ಶಬ್ದ ಮಾಡಿಕೊಂಡು ಓಡಾಡುತ್ತಿರವ ಪೋಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆಯುವ ಸಂಭ್ರಮ.
ಜೈಲಿಗೆ ಹೋಗಿ ಬಂದವರು ಒಂದು ರೀತಿಯಲ್ಲಿ Reference Point ಆಗಿ ಕೆಲಸ ಮಾಡುತ್ತಿದ್ದರು. ಇದರಿಂದ ಒಂದು ರೀತಿಯ ಸಮಾಜ ಸೇವೆಯೂ ಆಗುತ್ತಿತ್ತು. ಮನುಷ್ಯ ಸಂಬಂಧಗಳು ಕೂಡ ಸುಧಾರಿಸುತ್ತಿದ್ದವು. ಮುಂದೆ ಜೈಲಿಗೆ ಹೋಗಬೇಕಾದ ಕುಟುಂಬಗಳಿಗೆ ಮಾರ್ಗದರ್ಶನ, ಜೈಲಿನಲ್ಲಿ ಹೇಗೆ ನಡೆದುಕೊಳ್ಳುತ್ತಾರೆ, ಜೈಲಿನವರನ್ನು ಹೇಗೆ ನೋಡಿಕೊಳ್ಳಬೇಕು, ಜೈಲಿನಲ್ಲಿ ಕೆಲಸವನ್ನು ಕದಿಯುವುದು ಹೇಗೆ, ಇದನ್ನೆಲ್ಲ ಸೋದಾಹರಣವಾಗಿ ಹೇಳಿಕೊಡುತ್ತಿದ್ದರು.
ಜೈಲಿನಿಂದ ವಾಪಸ್ ಬಂದ ಯಾರನ್ನೂ ಅನುಮಾನದಿಂದ ನೋಡುತ್ತಿರಲಿಲ್ಲ, ಕೀಳಾಗಿ ಕಾಣುತ್ತಿರಲಿಲ್ಲ. ಮನೆತನದ ಮರ್ಯಾದೆಗೋಸ್ಕರ, ಗೌರವ ಉಳಿಸಲು, ಸೇಡು ತೀರಿಸಲು ಹೋದಾಗ ಏನೋ ತಪ್ಪು ಮಾಡಿದ್ದಾರೆ ಎಂದು ವಿಶೇಷವಾಗಿಯೇ ಗೌರವಿಸುವರು. ವಾಪಸ್ ಬಂದ ದಿನ, ಎಣ್ಣೆ ನೀರಿನ ಸ್ನಾನ ಮಾಡಿ, ಹೊಸ ಬಟ್ಟೆಗಳನ್ನು ಹಾಕಿಕೊಂಡು ದೇವಸ್ಥಾನಕ್ಕೆ ಬಂಧು-ಬಳಗದವರ ಜೊತೆ ಹೋಗಿ, ಮನೆದೇವರಿಗೆ ನಮಸ್ಕರಿಸಿ ನಂತರ ಎಲ್ಲರಿಗೂ ಸಂತರ್ಪಣೆ, ಬೀಗರ ಮನೆಯವರನ್ನು ಕೂಡ ಕರೆಯುತ್ತಿದ್ದರು. ಹೆಂಡತಿಯಾದವಳು ದೇವಸ್ಥಾನದಲ್ಲೇ ನಾಲ್ಕು ಜನರ ಎದುರಿಗೆ ಮಂಗಳಾರತಿ ಆಗುವಾಗ ಸಂತೋಷದಿಂದಲೂ, ಬಿಡುಗಡೆಯ ಭಾವದಿಂದಲೂ ಕಣ್ಣೀರು ಹಾಕುವಳು. ನಿಜ, ಹೀಗೆ ಜೈಲಿಂದ ವಾಪಸ್ ಬಂದ ಎಲ್ಲರಿಗೂ ಮತ್ತೆ ಹಿಂದಿನಂತೆ ಕುಟುಂಬದೊಡನೆ ವಾಸಿಸಲು ಸಾಧ್ಯವಾಗುತ್ತಿರಲಿಲ್ಲ. ಇಂಥವರು ಕರಿಘಟ್ಟಕ್ಕೋ, ಕುಂತೂರು ಬೆಟ್ಟಕ್ಕೋ ಹೋಗಿ ವೈರಾಗ್ಯ ಹಿಡಿಯುತ್ತಿದ್ದರು. ಇದರಿಂದ ಖೈದಿಗಳ ಮನೆತನದ ಗೌರವ ಇನ್ನೂ ಹೆಚ್ಚಾಗುತ್ತಿತ್ತು.
ಹೀಗೆಲ್ಲಾ ಆಗಿ ನನಗೆ ಖೈದಿಗಳ ಬಗ್ಗೆ ತಿರಸ್ಕಾರವಾಗಲೀ, ಅವಮಾನವಾಗಲೀ, ಪೋಲೀಸರ ಬಗ್ಗೆ ಅನಗತ್ಯ ಭಯ-ಗೌರವಗಳಾಗಲೀ ಬೆಳೆಯಲಿಲ್ಲ. ಇವರೆಲ್ಲ ನಮ್ಮ ಕುಟುಂಬಗಳಿಂದ ಭಿನ್ನರಾದವರು ಎಂದೂ ಅನಿಸಲಿಲ್ಲ. ಎಲ್ಲರಂತೆಯೇ ಅವರನ್ನು ನೋಡಬೇಕೆನಿಸುತ್ತದೆ. ಅವರೂ ಕೂಡ ನಮ್ಮ ಸಮಾಜದ ಒಂದು ಭಾಗವೆನಿಸುತ್ತದೆ. ಇದನ್ನು ಒಪ್ಪಲು ಯಾವ ಸಭ್ಯರಿಗಾದರೂ ಕಷ್ಟವಾಗುತ್ತದೆ. ಆದರೆ ಕ್ರೀಡಾಪಟುಗಳು, ವಿಜ್ಞಾನಿಗಳು, ನಟರು, ಸಂಗೀತಗಾರರನ್ನು ಈ ಸಮಾಜ ರೂಪಿಸಿದೆ ಎಂಬುದು ಎಷ್ಟು ನಿಜವೋ, ಖೈದಿಗಳು, ಖೈದಿಗಳಾಗಬೇಕಾಗಿ ಬಂದವರು, ಅವರನ್ನು ಕೂಡ ಈ ಸಮಾಜವೇ ರೂಪಿಸಿದೆ ಎಂಬುದನ್ನೂ ಒಪ್ಪಬೇಕು.
ಇದೆಲ್ಲ ರೊಮ್ಯಾಂಟಿಕ್, ಮುಗ್ಧ ಚಿಂತನೆ ಎನ್ನುವವರ ಮಾತು ಸರಿ. ಆದರೆ ನಾನು ಒಪ್ಪುವುದಿಲ್ಲ. ಇವರೆಲ್ಲರೂ ಪರಿಚಿತರು, ಬಂಧುಗಳು, ಸ್ವಗ್ರಾಮದವರು ಎಂಬ ಕಾರಣಕ್ಕೇ ನಾನು ಇವರನ್ನು ಪ್ರೀತಿಸುತ್ತಿಲ್ಲ, ಇವರ್ಯಾರೂ ಸಮಾಜಘಾತುಕ ಕೆಲಸಗಳನ್ನು ಮಾಡಿದವರಲ್ಲ, ಸಾರ್ವಜನಿಕ ಸಂಪತ್ತನ್ನು ಕೊಳ್ಳೆ ಹೊಡೆದವರಲ್ಲ, ಸುಖಲೋಲುಪತೆಯಲ್ಲಿ ತೇಲಿದವರಲ್ಲ, ಸಣ್ಣಪುಟ್ಟ ಕಳ್ಳತನಗಳನ್ನು ಮಾಡಿದವರು, ಸ್ವಲ್ಪ ದುರಾಸೆ ಪಟ್ಟವರು, ದಾಯಾದಿ ಜಗಳಗಳಲ್ಲಿ ಮಿತಿಮೀರಿ ವರ್ತಿಸಿದವರು, ಕ್ಷಣದ ಉದ್ವೇಗದಲ್ಲಿ ಕೊಲೆಯನ್ನೂ ಮಾಡಿದವರು. ಇನ್ನೊಬ್ಬರಿಗೆ, ಸಮಾಜಕ್ಕೆ ವಂಚನೆ ಮಾಡಿದವರಲ್ಲ. ತಮ್ಮ ತಪ್ಪನ್ನು ತಾವೇ ಒಪ್ಪಿಕೊಳ್ಳುವಷ್ಟು ನಿಸ್ಪೃಹರು. ಕಾನೂನು ತಿಳಿಯದೆ, ಕಾನೂನನ್ನು ಎದುರಿಸಲಾಗದೇ, ಕಾನೂನಿನ ನೆರವನ್ನು ಪಡೆಯಲಾಗದೇ, ನ್ಯಾಯಾಧೀಶರ, ಕಾನೂನು ಪಂಡಿತರ ಕೃಪಾದೃಷ್ಟಿ ಇವರ ಮೇಲೆ ಬೀಳದೇ ಕೂಡ ಇವರೆಲ್ಲ ಅಪರಾಧಿಗಳಾಗಿರಬಹುದು. ಎಷ್ಟೋ ಸಲ ಇಂಥವರ ಬಂಧನವೆಲ್ಲ ತಪ್ಪು ತಿಳುವಳಿಕೆ, ಆತುರ, ಕಲ್ಪಿತ ಸಾಕ್ಷ್ಯಗಳ ಆಧಾರದ ಮೇಲೆ ಆಯಿತೆಂದೇ ಪೋಲೀಸರೇ ನ್ಯಾಯಾಲಕ್ಕೆ ಮುಚ್ಚಳಿಗೆ ಬರೆದುಕೊಟ್ಟಿದ್ದಾರೆ.
ಇದನ್ನೆಲ್ಲ ಏಕೆ ಬರೆದೆನೆಂದರೆ, ನನಗೂ ಸಭ್ಯ ಸಮಾಜದ ಬಗ್ಗೆ ಆಸೆಯಿದೆ. ಅಂತಹ ಸಮಾಜದಲ್ಲಿ ಈ ಎಲ್ಲ ಆತ್ಮೀಯರಿಗೂ ಅವಕಾಶ, ಆಕಾಶ ಎರಡೂ ಇದೆಯೆಂದು ನಂಬಿದ್ದೇನೆ.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.
ಜೈಲುಕತೆಗಳಿಗೆ ಮನತಟ್ಟುವ ಮುನ್ನುಡಿ.
Thanks Shri prakash Nayak
ಕಣ್ಣಿಗೆ ಕಟ್ಟಿದಂತೆ ಕಥೆ ಸಾಗುತ್ತದೆ. ದೀರ್ಘ ಮತ್ತು ಸರಳ ಶೈಲಿಯಲ್ಲಿದ್ದು ಓದುಗರನ್ನು ಆಕರ್ಷಿಸುತ್ತದೆ. ಸಣ್ಣ ಸಣ್ಣ ವಿಷಯಗಳನ್ನೂ ಲೇಖಕರು ಗಮನಿಸಿದ್ದಾರೆ. ವಿವಿಧ ಶೈಲಿಯ ಖೈದಿಗಳು ಮತ್ತವರ ಕುಟುಂಬದವರ ಪರಿಚಯವಾಗುತ್ತದೆ. ವಂದನೆಗಳು.
Thanks Narayan Sharmaji
ಬಹಳ ರಸವತ್ತಾಗಿದೆ ಬರಹ!
I loved the portrayal of the detailed socio economic framework in which the society was functioning. In the eyes of the young boy, the society was balanced in its working, where everyone had a place and played their role. The writing made me want to read faster to know – what next?