ಅಯ್ಯಪ್ಪ ದೇವರ ಮೂಲ ಕೇರಳ. ಅಂದ ಹಾಗೆ ನಾನು ಬೆಳೆದು ಓದಿ ನಂತರ ಕೆಲಸ ಮಾಡುತ್ತಿದ್ದ ಕಡೆ ಕೇರಳದವರ ಸಂಖ್ಯೆ ಹೆಚ್ಚು ಮತ್ತು ತುಂಬಾ ಚಟುವಟಿಕೆಯಿಂದಲೂ ಕೂಡಿದ್ದರು. ಕೇರಳದ ಸುಮಾರು ಹುಡುಗಿಯರು ಕನ್ನಡದ ಹುಡುಗರ ಕೈ ಹಿಡಿದಿದ್ದರು. ಸಮುದ್ರ ತೀರದ ಹುಡುಗಿಯರು ಅಂದರೆ ಆಕರ್ಷಕ ಮೈಕಟ್ಟು, ಗುಂಗುರು ಕೂದಲು ಮತ್ತು ಕೊಂಚ ಮುಂದೆ ಬಂದ ಹಲ್ಲುಗಳು. ಬಹುಶಃ ಆಡುವ ಭಾಷೆಯ ಪ್ರಭಾವ ಇರಬಹುದು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹತ್ತನೆಯ ಕಂತು ನಿಮ್ಮ ಓದಿಗೆ

ಹಿಂದಿನ ಸಂಚಿಕೆಯಲ್ಲಿ ನಮ್ಮ ನಂಜಮ್ಮ ಅಜ್ಜಿಯ ಒಂದು ನೆನಪು, ಅವರು ದೇವಸ್ಥಾನದಿಂದ ಬರುತ್ತಾ ಬಿದ್ದಿದ್ದು, ನಾನು ಅವರಿಗೆ ರಾಕ್ಷಸ ಆಗಿ ಕಂಡಿದ್ದು ಹೇಳಿದೆ. ಮೀಟಿಂಗ್ ಅಂದರೆ ಕೊಳದಪ್ಪಳೆ ಎರವಲು ತಂದು ಇಡ್ಲಿ ಮಾಡಿಕೊಂಡು ತಿನ್ನುವುದು ಎಂದು ನಾನು ಅರ್ಥ ಮಾಡಿಕೊಂಡ ಸಂಗತಿಯೂ ಬಂತು. ದೊಡ್ಡಜಾಡಿ, ಅದರ ತುಂಬಾ ತುಪ್ಪ… ಮೊಸರನ್ನಕ್ಕೆ ತುಪ್ಪ ಸುರಿದುಕೊಂಡು ತಿಂದದ್ದು ನೆನೆದೆ. ನಮ್ಮ ತಾಯಿ ತವರು ಹಳ್ಳಿಯ ಖ್ಯಾತರ ಬಗ್ಗೆ ಕಿರು ಟಿಪ್ಪಣಿ ಮಾಡಿದ್ದೆ. ಮುಂದೆ ಇದನ್ನು ವಿಸ್ತೃತವಾಗಿ ಹೇಳುತ್ತೇನೆ. ನಮ್ಮ ತಾಯಿ ವಿಷಯ ನಿಮಗೆ ಹೆಚ್ಚಾಗಿ ಹೇಳಿಲ್ಲ. ಅಮ್ಮನ ಬಗ್ಗೆ ತುಂಬು ಅಭಿಮಾನದಿಂದ ಹೇಳಬೇಕಾದ ಬೆಂಗಳೂರು ನಂಟಿನ ಸಂಗತಿಗಳು ಬೇಕಾದಷ್ಟಿವೆ. ಅದು ಮುಂದೆ ಬರುತ್ತದೆ. ಅಕ್ಕ ಅಮ್ಮ ಹಾಗೂ ಒಬ್ಬ ಸೋದರ ಮಾವ ನೈಂಟಿಸ್ ಕ್ಲಬ್ ಸದಸ್ಯರು ಅಂತ ವಿವರಿಸಿದ್ದೆ. ಎರಡನೇ ಸೋದರ ಮಾವನ ಸೆಂಚುರಿ ಪ್ರಸಂಗ ಬಂತು. ನಮ್ಮಲ್ಲಿ ಹೆಚ್ಚು ನೈಂಟಿಸ್ ಕ್ಲಬ್‌ನವರು ಅಂತ ಹೇಳಿದ್ದೆ. ಅಯ್ಯಪ್ಪ ದೇವರ ಬಗ್ಗೆ ಶುರು ಹಚ್ಚಿದ್ದೆ..

ಈಗ ಮುಂದೆ….

ಅಯ್ಯಪ್ಪ ದೇವರ ಕ್ರೇಜ್ ಶುರು ಆದಾಗ ಎಪ್ಪತ್ತರ ಸುಮಾರಿನಲ್ಲಿ ಅಯ್ಯಪ್ಪ ದೇವಸ್ಥಾನ ಪ್ರಕಾಶ ನಗರದಲ್ಲಿ ಶುರು ಆಯಿತು. ನವಂಬರ್ ಬಂತು ಅಂದರೆ ಸಾಕು ಬೆಳಿಗ್ಗೆ ಸಂಜೆ ರಾತ್ರಿ ಭಜನೆ ಕೇಳುತ್ತಿತ್ತು. ಪ್ರಸಾದ ಸಹ ಕೊಡುತ್ತಿದ್ದರಂತೆ. ಅವರ ಅಂದರೆ ಭಕ್ತರ ಯೂನಿಫಾರ್ಮ್ ಕರೀ ಬಟ್ಟೆ ನನಗೆ ಅದೇಕೋ ಹಿಡಿಸುತ್ತಿರಲಿಲ್ಲ. ಈಗಲೂ ಅಷ್ಟೇ ಕರೀ ಬಟ್ಟೆ ನನಗೆ ನಾಪಸಂದ್. ಕೆಲವು ಸಲ ನೀವು ನನ್ನನು ಕರೀ ಟಿ ಶರ್ಟ್‌ನಲ್ಲಿ ನಮ್ಮ ಪಾರ್ಕ್‌ನಲ್ಲಿ ನೋಡ್ತೀರಿ. ಮಗ ಸೊಸೆ ದುಬಾರಿ ಬೆಲೆಯ ಕರಿ ಟಿ ಶರ್ಟ್ ನನ್ನ ಕೇಳದೇ ಕೊಡಿಸಿಬಿಡುತ್ತಾರೆ, ಬಿಸಿ ತುಪ್ಪ! ಹಾಕಿಕೊಳ್ಳಲೇಬೇಕು! ಅಯ್ಯಪ್ಪ ದೇವಸ್ಥಾನದ ಮೈಕ್‌ನಿಂದ ಭಜನೆ ಕಿವಿಗೆ ಬೀಳುತ್ತಿತ್ತು, ಅದರಿಂದ ಈಗಲೂ ಕೆಲವು ಸಾಲುಗಳು ತಲೇಲಿ ನಿಂತಿವೆ. ಇದ್ದಕ್ಕಿದ್ದ ಹಾಗೆಯೇ ಯಾವ ಯಾವುದೋ ಸಂದರ್ಭದಲ್ಲಿ ಸ್ವಾಮಿಯೇ ಶರಣಂ… ಬಾಯಿಂದ ಬಂದು ನನ್ನನ್ನು ನಗೆಪಾಟಲಿಗೆ ಗುರಿ ಮಾಡಿದೆ!

(ಸಿ. ಆರ್. ಸತ್ಯ)

ಅಯ್ಯಪ್ಪ ದೇವರ ಮೂಲ ಕೇರಳ. ಅಂದ ಹಾಗೆ ನಾನು ಬೆಳೆದು ಓದಿ ನಂತರ ಕೆಲಸ ಮಾಡುತ್ತಿದ್ದ ಕಡೆ ಕೇರಳದವರ ಸಂಖ್ಯೆ ಹೆಚ್ಚು ಮತ್ತು ತುಂಬಾ ಚಟುವಟಿಕೆಯಿಂದಲೂ ಕೂಡಿದ್ದರು. ಕೇರಳದ ಸುಮಾರು ಹುಡುಗಿಯರು ಕನ್ನಡದ ಹುಡುಗರ ಕೈ ಹಿಡಿದಿದ್ದರು. ಸಮುದ್ರ ತೀರದ ಹುಡುಗಿಯರು ಅಂದರೆ ಆಕರ್ಷಕ ಮೈಕಟ್ಟು, ಗುಂಗುರು ಕೂದಲು ಮತ್ತು ಕೊಂಚ ಮುಂದೆ ಬಂದ ಹಲ್ಲುಗಳು. ಬಹುಶಃ ಆಡುವ ಭಾಷೆಯ ಪ್ರಭಾವ ಇರಬಹುದು. ಯಾಕೆ ಹೀಗೆ ಅಂದರೆ ನಮ್ಮ ಕನ್ನಡದ ವಂಶ ವೃಕ್ಷ ಚಿತ್ರದಲ್ಲಿ ಸಿಂಹಳದ ಹೆಂಗಸಿನ ಒಂದು ಪಾತ್ರ (ಕರುಣಾ ರತ್ನೆ ಇರಬೇಕು) ಬರುತ್ತೆ ನೆನಪಿದೆಯೇ.. ಅಲ್ಲಿ ಆ ಪಾತ್ರಕ್ಕೆ ಆಯ್ಕೆ ಆದವರು ಹಲ್ಲು ಕೊಂಚ ಉಬ್ಬಿದೆ ಅಂತ ಅನಿಸುವ ಹಾಗಿದ್ದರು. ನಾವು ಆಡುವ ಭಾಷೆ ನಮ್ಮ ಮುಖವನ್ನು ರೂಪಿಸುತ್ತದೆ ಅನಿಸುತ್ತೆ. ಲಂಕೇಶರು ಮಾಧ್ವರು ಹೇಗೆ ಇರುತ್ತಾರೆ ಎಂದು ಒಂದು ಕಡೆ ತಮ್ಮ ಸಂಶೋಧನೆ ತಿಳಿಸಿದ್ದರು. ಮುಬ್ಬಲ್ಲು ಇರುತ್ತೆ ಮಾಧ್ವರಿಗೆ ಅಂತ. ಅವರು ತುಂಬಾ ಮೆಚ್ಚುತ್ತಿದ್ದ ಆಗಿನ ಪುಟ್ಟ ಹೆಣ್ಣು ಕವಿಗೆ ಮುಬ್ಬಹಲ್ಲು ಇದೆ ಅಂತ ಅವರ ಶಿಷ್ಯ ವಿವರಿಸಿದ್ದ.

ಕೇರಳದ ಹುಡುಗರು ಇಲ್ಲಿನ ಹೆಣ್ಣುಗಳ ಹೃದಯ ಗೆದ್ದಿದ್ದರು. ಕೇರಳದವರೇ ಹೆಚ್ಚು ಇದ್ದ ಸ್ಥಳದಲ್ಲಿ ಒಂದು ಮಿನಿ ಕೇರಳ ಸೃಷ್ಟಿಸಿಕೊಳ್ಳುತ್ತಿದ್ದರು. ಅಲ್ಲಿನ ಮೀನು, ಅಲ್ಲಿನ ನೇಂದ್ರ ಬಾಳೆ, ಅಲ್ಲಿನ ವೆಲ್ಲಂ, ಚಿಪ್ಸು, ಹಲ್ವಾ ಹಾಗೂ ಅಲ್ಲಿನ ತರಕಾರಿಗಳು ಸಹ. ಅಲಸಂದೆ ಕಾಯಿಯ ಕಾಳು ತುಂಬಿದ ಉದ್ದನೆ ಕಾಯಿ ಇಲ್ಲೇ ನಾನು ಮೊದಲು ನೋಡಿದ್ದು, ಅದಕ್ಕೆ ಪೈರು ಅಂತ ಕರೀತಿದ್ದರು. ಕುಸುಬಲು ಅಕ್ಕಿ ಸಹ ಅಲ್ಲಿಯದೇ. ಸುವರ್ಣ ಗೆಡ್ಡೆ ಇಲ್ಲಿ ಹೆಚ್ಚು ವ್ಯಾಪಾರ ಆಗೋದು. ಪುಟ್ಟ ಪುಟ್ಟ ಸುವರ್ಣಗಡ್ಡೆ ರೀತಿಯ ಒಂದು ಗಡ್ಡೆ ಸಹ ಅಲ್ಲಿಯದೆ. ಅದಕ್ಕೆ ನಮ್ಮ ಕರಾವಳಿಯಲ್ಲಿ ಸೇಮೆ ಗೆಡ್ಡೆ ಅನ್ನುತ್ತಾರೆ ಅಂತ ನಂತರ ಗೊತ್ತಾಯಿತು. ಬೆಳಿಗ್ಗೆ ಗಂಜಿ ಕುಡಿಯುವ ಅಭ್ಯಾಸ ಇಲ್ಲಿ ಹುಟ್ಟಿ ಹಾಕಿದವರು ಅವರೇ. ಸೀಮೆ ಅಕ್ಕಿ ಅಲ್ಲಿಯದು. ಇದಕ್ಕೆ ಮೊದಲೇ ರಾಘವೇಂದ್ರ ಸ್ವಾಮಿ ಮಠದಲ್ಲಿ ದ್ವಾದಶಿ ಊಟಕ್ಕೆ ಗಂಜಿ ಬಡಿಸುತ್ತಿದ್ದರು. ಸೋಂದೆ ಮಠದಲ್ಲಿ ಪ್ರತಿ ಊಟದಲ್ಲಿಯೂ ಕಾಯಿಗಂಜಿ ಇರುತ್ತೆ ಅಂತ ಈಚೇಗೆ ಅಲ್ಲಿಗೆ ಭೇಟಿ ನೀಡಿದ ನನ್ನ ಸ್ನೇಹಿತರು ಹೇಳುತ್ತಾರೆ. ಇದು ಅಂತಿರಲಿ..

(ಸಾಯಿಬಾಬಾ ಅವರೊಂದಿಗೆ ನಾ ಕಸ್ತೂರಿ)

ಅವರಲ್ಲೂ ಹೆಚ್ಚಿನವರು ಅಯ್ಯಪ್ಪ ಭಕ್ತರು. ವರ್ಷಕ್ಕೊಮ್ಮೆ ಸ್ವಾಮಿ ದರ್ಶನಕ್ಕೆ ಅಂತ ನೇಮ ನಿಯಮ ಪಾಲಿಸಿಕೊಂಡು ಹೋಗುತ್ತಿದ್ದರು. ಎಲ್ಲರೂ ಗಡ್ಡ ಬಿಟ್ಟು ಹಣೆ ತುಂಬಾ ಕುಂಕುಮ ವಿಭೂತಿ ಧರಿಸಿ ಕೊರಳಿಗೆ ಮಾಲೆ ಹಾಕುತ್ತಿದ್ದರು. ಎಲ್ಲರೂ ಕರಿ ಬಣ್ಣದ ಬಟ್ಟೆ ತೊಟ್ಟಿರುವವರು. ಹೆಂಗಸರಿಗೆ ಇಲ್ಲಿ ಪ್ರವೇಶ ಇಲ್ಲ. ಇವರಿಗೊಬ್ಬರು ಲೀಡರ್, ಅವರಿಗೆ ಗುರುಸಾಮಿ ಅಂತ ಕೂಗುತ್ತಿದ್ದರು. ಗುರುಸಾಮಿ ಇವರಿಗೆ ದೀಕ್ಷೆ ಕೊಡೋದು, ಅಲ್ಲಿಗೆ ಕರಕೊಂಡು ಹೋಗೋದು ಮಾಡ್ತಾ ಇದ್ದರು. ನನಗೂ ಸಹ ಆರೇಳು ಗುರು ಸಾಮಿಗಳ ಪರಿಚಯ. ಗಡ್ಡ ಬಿಟ್ಟು ಹಣೆಯ ಮೇಲೆ ಗಂಧ ಹಚ್ಚಿಕೊಂಡು ಕರಿ ಬಟ್ಟೆ, ಕಾವಿ ಟವಲ್ ತೊಟ್ಟು ಇವರು ಕೆಲವು ಸಲ ತೆಲುಗು ಸಿನೆಮಾದ ಮಂತ್ರವಾದಿಗಳು ಇದ್ದ ಹಾಗೆ ಕಾಣುತ್ತಿದ್ದರು. ಇವರ ಪ್ರಭಾವ ನನ್ನ ಮೇಲೆ ಆಗದೇ ಅಯ್ಯಪ್ಪನನ್ನು ಕಾಣಲು ಈ ತನಕ ಹೋಗಿಲ್ಲ. ದೇವರು ಯಾರನ್ನು ಬೇಕಾದರೂ ತನ್ನ ಬಳಿ ಕರೆಸಿಕೊಳ್ಳುತ್ತಾನಂತೆ..! ಇನ್ನೂ ಅಯ್ಯಪ್ಪ ಆ ಯೋಚನೆ ಮಾಡಿಲ್ಲ..! ಕೇರಳದವರ ಮಧ್ಯೆ ಇದ್ದು ಕಲಿಯದ ಎಷ್ಟೋ ವಿಷಯಗಳಲ್ಲಿ ಮಲಯಾಳ ಭಾಷೆ ಸಹ ಒಂದು. ಅದೇಕೋ ಈ ಭಾಷೆ ಮಾತಾಡೋದು ಕಷ್ಟ ಅನಿಸಿಬಿಡ್ತು. ಆದರೆ ಅಲ್ಲಿಂದ ಬಂದವರು ಸುಲಭವಾಗಿ ನಮ್ಮ ಕಸ್ತೂರಿ ಕನ್ನಡ ಕಲಿತರು ಮತ್ತು ಇಲ್ಲಿನ ಕಾರ್ಮಿಕ ಸಂಘಗಳ ನಾಯಕರೂ ಆದರು. ಕನ್ನಡದಲ್ಲಿ ಬರೆದರು. ಕನ್ನಡದ ಹಾಸ್ಯ ಸಾಹಿತಿ ಮತ್ತು ಸಾಯಿಬಾಬಾ ಅವರ ಶಿಷ್ಯ ಶ್ರೀ ನಾ.ಕಸ್ತೂರಿ ಮೂಲತಃ ಮಲಯಾಳಿ. ಇಲ್ಲಿಂದ ಹೊರ ಹೋಗಿ ಲೀಡರ್ ಆದ ಕನ್ನಡದವರು ಕೈ ಬೆರಳಿಂದ ಎಣಿಸಬಹುದಾದವರು. ನಮ್ಮ ವಿಜ್ಞಾನಿ ಶ್ರೀ ಸಿ ಆರ್ ಸತ್ಯ ಕೇರಳದಲ್ಲಿ ಕರ್ನಾಟಕ ಸಂಘ ಕಟ್ಟಿದ ವಿಜ್ಞಾನಿ, ISRO ದಲ್ಲಿ ಶ್ರೀ ಅಬ್ದುಲ್ ಕಲಾಂ ಅವರ ಸಂಗಡ ಕೆಲಸ ಮಾಡಿದವರು. ಈಗ ಇಬ್ಬರೂ ಇಲ್ಲ. ನನ್ನ ಭಾಮೈದ ಸುಧೀಂದ್ರ ಸಹ ಅಲ್ಲಿನ ಇಸ್ರೋದಲ್ಲಿದ್ದವರು, ಸೊಗಸಾದ ಮಲಯಾಳ ಮಾತು ಆಡುತ್ತಾರೆ.

ಅಯ್ಯಪ್ಪ ದೇವಸ್ಥಾನದ ಮೈಕ್‌ನಿಂದ ಭಜನೆ ಕಿವಿಗೆ ಬೀಳುತ್ತಿತ್ತು, ಅದರಿಂದ ಈಗಲೂ ಕೆಲವು ಸಾಲುಗಳು ತಲೇಲಿ ನಿಂತಿವೆ. ಇದ್ದಕ್ಕಿದ್ದ ಹಾಗೆಯೇ ಯಾವ ಯಾವುದೋ ಸಂದರ್ಭದಲ್ಲಿ ಸ್ವಾಮಿಯೇ ಶರಣಂ… ಬಾಯಿಂದ ಬಂದು ನನ್ನನ್ನು ನಗೆಪಾಟಲಿಗೆ ಗುರಿ ಮಾಡಿದೆ!

ಅಯ್ಯಪ್ಪ ಭಕ್ತರ ಒಂದು ಪ್ರಸಂಗ ನೆನಪಿಗೆ ಬಂತು. 78/79 ರಲ್ಲಿ ಅಪ್ಪ ಅಮ್ಮ ಅಕ್ಕ ಇವರನ್ನು ದಕ್ಷಿಣ ಭಾರತ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದೆ. ತಿರುವನಂತಪುರದ ಪದ್ಮನಾಭ ಸ್ವಾಮಿ ದೇವಸ್ಥಾನದ ಒಳಗೆ ಒಮ್ಮೆಲೆ ನುಗ್ಗಾಟ ಹೆಚ್ಚಾಯಿತು. ಏನು ಅಂತ ನೋಡಿದರೆ ಸುಮಾರು ಇನ್ನೂರಕ್ಕೂ ಹೆಚ್ಚು ಅಯ್ಯಪ್ಪ ಭಕ್ತರು ಏಕ್ ದಂ ನುಗ್ಗಿದ್ದಾರೆ. ಎಪ್ಪತ್ತು ವರ್ಷದ ಅಪ್ಪ ಇವರ ಮಧ್ಯೆ ಸಿಕ್ಕಿಕೊಂಡು ಉಸಿರು ಬಿಡಲೂ ಆಗದೇ ಒದ್ದಾಡ್ತಾ ಇದ್ದಾರೆ. ಅಲ್ಲಿಗೆ ಬಂದವರ ಮೇಲೆ ಕೂಗಾಡ್ತಾ ಅಪ್ಪನ್ನ ಆಚೆ ಕರಕೊಂಡು ಬಂದು ಕೂಡಿಸಿದೆ. ಎಳನೀರು ಸಿಗತ್ತಾ ನೋಡು ಅಂದರು ಅಂತ ಒಂದು ಗಂಟೆ ಊರು ಸುತ್ತಿದರೆ ಎಳನೀರು ಪತ್ತೇನೆ ಇಲ್ಲವೇ…!. ಇಷ್ಟೊಂದು ನೋಡಿದ ಕಡೆ ಎಲ್ಲಾ ತೆಂಗಿನ ಮರ ಇದಾವೆ ಎಳನೀರು ಇಲ್ಲವೇ ಅಂತ ಬೇಸರ ಆಯಿತು. ಯಾರೋ ತಾಟಿ ನಿಂಗನ್ನ ಮಾರ್ತಾ ಇದ್ದ. ಅವನ ಹತ್ತಿರ ತಾಟಿ ನಿಂಗು ಕೊಂಡೆ. ಅದರಲ್ಲಿ ಒಂದೋ ಎರಡೋ ಚಮಚ ನೀರು ಸಿಗೋದು. ಇಪ್ಪತ್ತೋ ಮುವತ್ತೋ ತಾ ಟಿ ನಿಂಗು ಕೊಚ್ಚಿಸಿ ಅದರಲ್ಲಿನ ನೀರನ್ನು ಒಂದು ಕವರ್‌ನಲ್ಲಿ ಒಂದು ಲೋಟದಷ್ಟು ತುಂಬಿಸಿಕೊಂಡು ತಂದು ಅಪ್ಪನಿಗೆ ಕೊಟ್ಟೆ. ಒಂದು ಗುಟುಕು ಹೀರಿದ ಅಪ್ಪ ವಯಕ್ ಅಂದರು. ಇದೇನೋ ತುಂಬಾ ಹುಳಿ, ಕೆಟ್ಟ ವಾಸನೆ….. ಅಂದರು. ನಾನು ರುಚಿ ನೋಡಿ ತರಬೇಕಿತ್ತು ಅನಿಸಿತು. ಅಂದ ಹಾಗೆ ನಮ್ಮ ಅಪ್ಪನಿಗೆ ಹೊಗೆಸೊಪ್ಪು, ನಶ್ಯ, ನಿಕೋಟಿನ್, ನೀರಾ, ಸೇಂದಿ, ಆಲ್ಕೋಹಾಲ್… ಇದ್ಯಾವುದರ, ಇಂತಹ ಯಾವುದೇ ಸಭ್ಯ ಸದ್ಗೃಹಸ್ಥರ ಒಳ್ಳೇ ಅಭ್ಯಾಸ ಇರಲಿಲ್ಲ! ಅವರ ವೀಕ್‌ನೆಸ್ ಅಂದರೆ ಕಳ್ಳೆಪುರಿ. ಐದಾರು ಸೇರು ಕಳ್ಳೆಪುರಿ ತಿಂದು ಒಂದು ಚೆಂಬು ನೀರು ಕುಡಿತಾ ಇದ್ದರು! ಎಲೆ ಅಡಿಕೆ ಕುತ್ತನಿಯಲ್ಲಿ ಕುಟ್ಟಿ ಬಾಯಿಗೆ ಹಾಕಿಕೊಳ್ಳುತ್ತಿದ್ದರು. ತುಂಬಾ ಚಿಕ್ಕ ವಯಸ್ಸಿಗೇ ಅಂದರೆ ಮೂವತ್ತರ ಆಸುಪಾಸಿನಲ್ಲೇ ಹಲ್ಲು ಕಿತ್ತಿಸಿದ್ದರಂತೆ. ನಾವು ನೋಡಿದಾಗಲಿಂದ ಅವರಿಗೆ ಬೊಚ್ಚು ಬಾಯೇ. ನನ್ನ ಮೂರನೇ ಅಣ್ಣ ಹಲ್ಲಿನ ಡಾಕ್ಟರಾದಮೇಲೆ ಅವರಿಗೆ ಹಲ್ಲು ಕಟ್ಟಲು ಪ್ರಯತ್ನಿಸಿದ್ದ. ಒಸಡು ಪೂರ್ತಿ ಸವೆದಿದೆ ಅಂತ ಪ್ರಯತ್ನ ಕೈಬಿಟ್ಟಿದ್ದ.

ಅಪ್ಪನಿಗೆ ಎಳನೀರು ಸಿಗದೇ ಪಟ್ಟ ಪಾಡು ವಿವರಿಸಿದೆ. ಕೋಪದಲ್ಲಿಯು ವಿವರಣೆ ಒಪ್ಪಿದ ಹಾಗೆ ತಲೆ ಆಡಿಸಿದರು. ದೇವಸ್ಥಾನದ ಕಮಿಟಿ ಸದಸ್ಯರ ಮುಂದೆ ರಶ್‌ನಿಂದ ಆದ ಪಾಡು ವಿವರಿಸಿ ಕ್ಯೂ ಕಾಪಾಡುವ ಸಲಹೆ ಕೊಟ್ಟೆ! ಪುಕ್ಕಟೆ ಸಲಹೆ ಕೊಡೋಕೇನು. ಅವರು ತಲೆ ಆಡಿಸಿ ನಕ್ಕರು! ಕತೆ ಅಲ್ಲಿಗೆ ಮುಗೀತು. ಊರಿಗೆ ಬಂದಮೇಲೆ ಅಲ್ಲಿ ಎಳನೀರು ಸಿಗಲಿಲ್ಲ ಆದ್ದರಿಂದ ಇಂತಹ ತೊಂದರೆ ಆಯ್ತು ಅಂತ ಕೇರಳದ ಗೆಳೆಯರಿಗೆ ಹೇಳಿದೆ. ಅಲ್ಲಿ ಎಳನೀರು ಕಾಯಿ ಯಾರೂ ಹಾಕಲ್ಲ, ಕಾಯಿಗಳು ಒಣಕೊಬ್ರಿ ಪುಡಿ ಮಾಡುವ ಫ್ಯಾಕ್ಟರಿಗೆ ಹೋಗುತ್ತೆ, ಅದರಲ್ಲಿ ಹೆಚ್ಚು ಕಾಸು ಸಿಗುತ್ತೆ. ಹಾಗೆ ನೋಡಿದರೆ ನಾವು ಇಲ್ಲೇ ಎಳನೀರು ಕುಡಿದದ್ದು ಮತ್ತು ಅದರ ರುಚಿ ನೋಡಿದ್ದೂ…. ಅಂದರು. ಕೇರಳದವರು ಹಣ ಕಾಸಿನ ವಿಷಯದಲ್ಲಿ ತುಂಬಾ ಹುಷಾರು ಅಂತ ಕೇಳಿದ್ದೆ, ಕನ್ಫರ್ಮ್ ಆಯ್ತು. ಇದು ಹಾಗಿರಲಿ..

ನನ್ನ ಹೈಸ್ಕೂಲ್ ಸ್ಕೂಲ್ ಮೇಟ್ ಶ್ರೀಮತಿ ಚಂದ್ರಿಕಾ ಈ ಕೆಳಗಿನ ಸಂಗತಿ ತಿಳಿಸಿದರು..

“ದೇವಸ್ಥಾನಗಳ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ. ಹಳೆಯ ನೆನಪುಗಳು ಬಂದವು. ESI ಆಸ್ಪತ್ರೆಗೆ ಅಂಟಿದಂತೆ ಒಂದು ಪ್ರಾಣ ದೇವರ ಗುಡಿ ಇದೆ. ನಾವು ಪ್ರತಿ ಶನಿವಾರ ಹೋಗಿ ಬರುತ್ತಿದ್ದೆವು. ಹಾಗೆ ಒಂದು ಲೋಟ ತೆಗೆದುಕೊಂಡು ಹೋಗಿ ಮನೆಯವರಿಗೆ ತೀರ್ಥ ತರುತ್ತಿದ್ದೆವು. ಈಗ ಇದು ತುಂಬಾ ದೊಡ್ಡದಾಗಿ ಬೆಳೆದಿದೆ.”

ನವರಂಗ ಬಳಿಯ ಅಂಬಾ ಭವಾನಿ ದೇವಸ್ಥಾನ ನಂತರ ಬಂದಿದ್ದು. ಅಲ್ಲೂ ಸಹ ಬಹು ವೈಭವದಿಂದ ಅಮ್ಮನವರ ಪೂಜೆ ನಡೆಯುತ್ತದೆ ಎಂದು ಕೇಳಿದ್ದೇನೆ.

ಸಿದ್ಧರಾಮನ ದಿಣ್ಣೆ, ಜೂಗನ ಹಳ್ಳಿ ಹಾಗೂ ಎದ್ದಲೂರುದಿಣ್ಣೆಗಳಲ್ಲಿ ಗ್ರಾಮ ದೇವತೆಗಳು ಇದ್ದವು. ಈಗ ಸುಮಾರು ದೇವಸ್ಥಾನಗಳು ಇವೆ. ಸ್ವಾಮಿ ನಾರಾಯಣ ದೇವಸ್ಥಾನ ಆರೇಳು ವರ್ಷಗಳ ಹಿಂದೆ ಸ್ಥಾಪಿತವಾಗಿದೆ. ಆಗ್ಗೂ ಈಗ್ಗೂ ದೇವಸ್ಥಾನ ಹೆಚ್ಚಿದೆ.

ಪೋಸ್ಟ್ ಆಫೀಸ್ ಬಳಿಯ ಚರ್ಚ್ ಸುಮಾರು ಹಳೆಯದು. ಅದೇಕೋ ಚರ್ಚ್‌ಗಳು ಅಷ್ಟು ಹೆಚ್ಚಿನ ಸಂಖ್ಯಾ ಬಲ ಹೊಂದಿಲ್ಲ. ಮೊದಲ ಮಸೀದಿ ಅಂದರೆ ನಾಲ್ಕನೇ ಬ್ಲಾಕ್‌ದು. ಸುಮಾರು ಜನ ಮುಸ್ಲಿಮರು ಇಲ್ಲಿಗೆ ಬರುತ್ತಿದ್ದರು. ಆಗ ಪುಟ್ಟ ಹುಡುಗರಾಗಿದ್ದವರು ಈಗ ಮುಖದ ತುಂಬ ಬಿಳೀ ಗಡ್ಡ ಬಿಟ್ಟು ಏನೋ ನೀನ್ ಗೋಪಿ ತಾನೇ ಅಂತ ಕೇಳಿದಾಗ ಡಾಂಗ್ ಹೊಡೆದಿದ್ದೇನೆ. ಈಗ ಅದು ಅಂದರೆ ಮಸೀದಿ ವಿಸ್ತಾರವಾಗಿದೆ, ನನ್ನ ಜತೆಯ ಅಲ್ಲಿನವರು ಹಣ್ಣು ಹಣ್ಣು ಮುದುಕರಾಗಿ ಬಿಳೀ ಗಡ್ಡ ಬಿಟ್ಟಿದ್ದಾರೆ! ಸುಮಾರು ಹಣ್ಣು ಮುದುಕರು ಅವರೇ ಗುರುತು ಹಿಡಿದು ಮಾತು ಆಡಿಸಿದಾಗ ತುಂಬಾ ಖುಷಿ ಆಗುತ್ತದೆ.

(ಮುಂದುವರೆಯುವುದು…)