ಪಂಜೆ ಮಂಗೇಶರಾಯರು “ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ” ಎಂದು ಭೂರಮೆಯನ್ನು ಅಪ್ರತಿಮ ಪ್ರಕೃತಿ ಸೌಂದರ್ಯದ ಹಿನ್ನೆಲೆಯಲ್ಲಿ ಹಾಡಿ ಮುಂದೆ “ಸವಿದು ಮೆದ್ದರೋ ಹುಲಿಯ ಹಾಲಿನ ಮೇವನು ಕವಣೆ ತಿರಿಕಲ್ಲಾಟ ಹಗ್ಗಕ್ಕೆ ಸೆಳೆದರೋ ಹೆಬ್ಬಾವನು?” ಎಂದು ಬರೆಯುತ್ತಾರೆ. ಇದು ಅಕ್ಷರಶಃ ಸತ್ಯ. ಅಂಥ ಕೆಚ್ಚೆದೆಯ ಅಪ್ರತಿಮ ವೀರರು ಈ ಮೂವರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ

ಕಾರಿಯಪ್ಪ, ತಿಮ್ಮಯ್ಯ, ದೇವಯ್ಯ ಮಡಿಕೇರಿಯ ತ್ರಿಮೂರ್ತಿಗಳು

ಮಡಿಕೇರಿಗೆ ಇನ್ನೂ ಆರು ಕಿಲೋಮೀಟರ್ ದೂರವಿರುವಾಗಲೆ ‘ಮಡಿಕೇರಿ ನಗರಕ್ಕೆ ಸ್ವಾಗತ’ ಎಂಬ ಸ್ವಾಗತ ಕಮಾನು ಅರಣ್ಯ ಇಲಾಖೆಯ ಬಳಿ ಎದುರಾಗುತ್ತದೆ. ಅಬ್ಬಿ ಫಾಲ್ಸ್‌ಗೆ ದಾರಿ ಎಂಬ ನಾಮಫಲಕವೂ ಇಲ್ಲಿದೆ. ಅಬ್ಬಿ ಎಂದರೆ ಜಲಪಾತ ಫಾಲ್ಸ್ ಎಂದರೂ ಜಲಪಾತ. ಆದರೂ ಅಬ್ಬಿಫಾಲ್ಸ್ ಪದ ಪ್ರಯೋಗವಿದೆ. ಪರಸ್ಪರ ಪೂರಕ ಅರ್ಥವಿರುವ ಜೋಡುನುಡಿಗೆ ಇದು ಒಳ್ಳೆಯ ಉದಾಹರಣೆ. ಮುಂದೆ ಹೋಮ್ ಸ್ಟೇಗಳು ನಂತರ ಸಿಗುವುದೆ ಚೈನ್ ಗೇಟ್ ಮುಂದೆ ನಡೆದರೆ ಸುದರ್ಶನ್ ಸರ್ಕಲ್. ಅಲ್ಲಿಯೇ ಇರುವುದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಸ್ಮಾರಕ. ಕಾರಿಯಪ್ಪನವರ ಪ್ರತಿಮೆ ಇಲ್ಲಿದೆ. ನಾವು ಮೂರನೆ ಬಿ.ಎ ಓದುತ್ತಿದ್ದಾಗ ಕಾರಿಯಪ್ಪ ಸ್ಮಾರಕ ಉದ್ಘಾಟನೆ ಆದದ್ದು ನೆನಪಿದೆ. ಅಂದಗೋವೆ ಸುಂಠಿಕೊಪ್ಪದಿಂದ ಬರುತ್ತಿದ್ದ ಸುನಂದ ಸ್ಮಾರಕ ಬಗ್ಗೆ ಹೇಳುವಾಗ “ಅಲ್ಲಿ ಬುಕ್ ಇಟ್ಟಿದ್ದಾರೆ ಓಪನ್ ಆಗಿ ಗೊತ್ತುಂಟ?” ಎಂದಳು ನಾನು ಅಯ್ಯೋ! ಮಳೆಯಲ್ಲಿ ಚಂಡಿಯಾಗಲ್ವ? ಎಂದು ಕೇಳಿದೆ. “ಪೊಟ್ಟಿ ಪೇಪರ್ ಪುಸ್ತಕ ಅಲ್ಲ ಅದು, ಕಲ್ಲಿನ ಪುಸ್ತಕ” ಎಂದಿದ್ದಳು. ಅಲ್ಲಿಂದ ಮುಂದೆ ಮಡಿಕೇರಿಯಿಂದ ಹಾಸನಕ್ಕೆ ಹೋಗುವಾಗ ಹಾಸನದಿಂದ ಮಡಿಕೇರಿಗೆ ಬರುವಾಗ ಮರೆಯದೆ ಆ ಪುಸ್ತಕವನ್ನು ನೋಡುವೆ. ಆದರೆ ಅಲ್ಲೇನಿದೆ ತಿಳಿಯುವುದಿಲ್ಲ. ಸುನಂದಳ ನೆನಪು ಒಟ್ಟು ಆ ಪುಸ್ತಕದಲ್ಲಿದೆ ಅಷ್ಟೇ.

ಮಡಿಕೇರಿಯನ್ನು ಮೈಸೂರು ಮತ್ತು ಹಾಸನ ರಸ್ತೆಗೆ ಜೋಡಿಸುವ ಪ್ರಮುಖ ಸರ್ಕಲ್ ಸುದರ್ಶನ್ ಸರ್ಕಲ್‌. ನಾಡಹಬ್ಬ ದಸರಾ ಸಮಯದಲ್ಲಿ ‘ಸುದರ್ಶನ್ ಸರ್ಕಲ್’ ಎಂಬ ಹೆಸರು ಹೆಚ್ಚಾಗಿ ಕೇಳಿಬರುತ್ತದೆ. ವಾಹನ ದಟ್ಟಣೆ ಆಗಬಾರದು ಅನ್ನುವ ಕಾಣಕ್ಕೆ ವಿಜಯದಶಮಿ ಮುಗಿದು ಮರುದಿನ ಹನ್ನೊಂದು ಗಂಟೆಯವರೆಗೂ ಇಲ್ಲಿಯೇ ವಾಹನಗಳನ್ನು ತಡೆ ಹಿಡಿಯುತ್ತಾರೆ. ನಗರಕ್ಕೆ ಯಾರೇ ಗಣ್ಯರು ಆಗಮಿಸಿದರೂ ಇಲ್ಲಿಂದಲೇ ಅವರಿಗೆ ಸ್ವಾಗತ ಕೋರುವುದು. ಸುದರ್ಶನ್ ಸರ್ಕಲ್ ಮಡಿಕೇರಿಯ ಹೆಬ್ಬಾಗಿಲು ಎನ್ನಬಹುದು. ದಸರಾ ಮಂಟಪಗಳು ಸುತ್ತುವರೆದು ಬರುವ ಟೋಲ್ ಗೇಟ್ ಇನ್ನೊಂದು ಸರ್ಕಲ್. ಇಲ್ಲಿ ಬಹಳ ಹಿಂದೆ ಟೋಲ್ ಸಂಗ್ರಹಣೆ ಮಾಡುತ್ತಿದ್ದಿರಬೇಕು. ಈಗ ಟೋಲ್ ಸಂಗ್ರಹಣೆ ಇಲ್ಲ. ಆದರೂ ಟೋಲ್ ಗೇಟ್ ಎಂದೇ ಜನಪ್ರಿಯ.

(ಮಾರ್ಷಲ್ ಕೆ.ಎಂ. ಕಾರಿಯಪ್ಪ)

ಮಡಿಕೇರಿ ನಗರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ಮಾರ್ಗ ಮತ್ತು ದಕ್ಷಿಣ ಕೊಡಗಿನ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕುಗಳನ್ನು ಸಂಪರ್ಕಿಸುವ ರಸ್ತೆ. ಅದಕ್ಕೂ ಮಿಗಿಲಾಗಿ ಭಾಗಮಂಡಲ ಮತ್ತು ತಲಕಾವೇರಿಗೆ ಹೋಗುವ ರಸ್ತೆಗಳ ಸಮುಚ್ಚಯ ಇದು. ಇಡೀ ಮಡಿಕೇರಿಯ ಶಿರೋಭಾಗವೇ ಇದು. ಜಿಲ್ಲಾಸ್ಪತ್ರೆ, ಸೇಂಟ್ ಮೈಕಲ್ಸ್ ಚರ್ಚ್ ಮತ್ತು ಸ್ಕೂಲ್, ಡಿಸಿಸಿ ಬ್ಯಾಂಕ್ ಇಲ್ಲಿಯೇ ಇರುವುದು. ಜನರಲ್ ತಿಮ್ಮಯ್ಯನವರ ಪ್ರತಿಮೆ ಇಲ್ಲಿದೆ ಹಾಗಾಗಿ ಇದನ್ನು ‘ತಿಮ್ಮಯ್ಯ ಸರ್ಕಲ್’ ಎಂದೂ ಕರೆಯುವುದಿದೆ. ಎರಡು ವಾರಗಳ ಹಿಂದೆ ಈ ಸರ್ಕಲ್ಲಿಗೆ ಕೆ. ಎಸ್. ಆರ್. ಟಿ.ಸಿ ಬಸ್ ಡಿಕ್ಕಿ ಹೊಡೆದು ಸರ್ಕಲ್ಲಿನ ಕಟ್ಟಡಕ್ಕೆ ಭಾಗಶಃ ಹಾನಿಯಾಗಿದೆ. ಒಂದರ ಜೊತೆಗೆ ಇನ್ನೊಂದು ಎಂಬಂತೆ ಒಂದು ವಾರದ ಹಿಂದೆ ಹಳೆಯ ಪ್ರೈವೇಟ್ ಬಸ್ಸ್ಟ್ಯಾಂಡಿನಲ್ಲಿರುವ ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತಕ್ಕೂ ಕೆ.ಎಸ್ ಆರ್.ಟಿ.ಸಿ ಬಸ್ ಢಿಕ್ಕಿ ಹೊಡೆದು ಕಟ್ಟಡದ ಕೆಲಭಾಗ ಹಾನಿಗೊಳಗಾಗಿದೆ. ಈ ಆಕಸ್ಮಿಕ ಘಟನೆಗಳಿಗೆ ವಿಷಾದ ವ್ಯಕ್ತಪಡಿಸುತ್ತ ಈ ಮಹನೀಯರ ಕುರಿತೇ ಈ ಸರಣಿಯ ಮಾತುಗಳಿಗೆ ಮುಂದಡಿಯಿಡುವೆ.

ಮಾರ್ಷಲ್ ಕೆ.ಎಂ. ಕಾರಿಯಪ್ಪ, ಜನರಲ್ ತಿಮ್ಮಯ್ಯ, ಅಜ್ಜಮಾಡ ದೇವಯ್ಯ ಪ್ರತಿಮೆಗಳು ಮಡಿಕೇರಿ ನಗರದ ಪ್ರಮುಖ ಸ್ಥಳಗಳಲ್ಲಿರುವ ಪ್ರತಿಮೆಗಳು. ಇವು ಕೊಡಗಿನ ಪರಾಕ್ರಮಿಗಳ ಇತಿಹಾಸವನ್ನು ದಾಖಲಿಸುವ ಜೊತೆಗೆ ಆಧುನಿಕ ಭಾರತದ ಇತಿಹಾಸವನ್ನೂ ಸಾರಿ ಹೇಳುತ್ತವೆ. (ಭಾರತೀಯ ಸೇನೆಯಲ್ಲಿ ಅಂದಿನಿಂದ ಇಂದಿನವರೆಗೆ ಅಗಣಿತ ಪರಾಕ್ರಮಿಗಳು ಸೇವೆಗೈದಿದ್ದಾರೆ, ಇನ್ನೂ ಸೇವೆ ಮಾಡುತ್ತಲೇ ಇದ್ದಾರೆ. ಅವರಿಗೆಲ್ಲರಿಗೂ ಪ್ರಣಾಮಗಳನ್ನು ಸಲ್ಲಿಸುತ್ತಾ ಅವರ ದೇಶಸೇವೆಯನ್ನು ಸ್ಮರಿಸುತ್ತ ಪುತ್ಥಳಿ ರೂಪದಲ್ಲಿರುವ ಈ ಮೂವರ ಬಗ್ಗೆ ಈ ಬರೆಹದಲ್ಲಿ ವಿಚಾರ ಮಾಡುತ್ತೇನೆ)

ಪಂಜೆ ಮಂಗೇಶರಾಯರು “ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ” ಎಂದು ಭೂರಮೆಯನ್ನು ಅಪ್ರತಿಮ ಪ್ರಕೃತಿ ಸೌಂದರ್ಯದ ಹಿನ್ನೆಲೆಯಲ್ಲಿ ಹಾಡಿ ಮುಂದೆ “ಸವಿದು ಮೆದ್ದರೋ ಹುಲಿಯ ಹಾಲಿನ ಮೇವನು ಕವಣೆ ತಿರಿಕಲ್ಲಾಟ ಹಗ್ಗಕ್ಕೆ ಸೆಳೆದರೋ ಹೆಬ್ಬಾವನು?” ಎಂದು ಬರೆಯುತ್ತಾರೆ. ಇದು ಅಕ್ಷರಶಃ ಸತ್ಯ. ಅಂಥ ಕೆಚ್ಚೆದೆಯ ಅಪ್ರತಿಮ ವೀರರು ಈ ಮೂವರು. ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದವೋಲ್ ಕಾಪಾಡಿದವರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಎಂದರೆ ಶಿಸ್ತಿಗೆ ಇನ್ನೊಂದು ಹೆಸರು. ವಾರ್ಷಿಕ ಪೋಲಿಸ್ ಕ್ರೀಡಾಕೂಟಕ್ಕೆ ಡಾ. ಪಿ.ಎಸ್. ರಾಮಾನುಜಮ್ ಅವರು ಮಡಿಕೇರಿ ಜಿಲ್ಲಾ ಎಸ್.ಪಿ.ಗಳಾಗಿದ್ದಾಗ ವಾರ್ಷಿಕ ಪೋಲಿಸ್ ಕ್ರೀಡಾಕೂಟದಲ್ಲಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿರುತ್ತಾರೆ. ಅದೇ ಸಮಯದಲ್ಲಿ ಡಾ. ಪಿ.ಎಸ್.ರಾಮಾನುಜಮ್ ಅವರನ್ನು ತಮ್ಮ ಮನೆಗೆ ಅತಿಥಿಯಾಗಿ ಆಹ್ವಾನಿಸಿರುತ್ತಾರೆ. ಹೇಳಿಕೇಳಿ ಫೀಲ್ಡ್ ಮಾರ್ಷಲ್ ಹುದ್ದೆಯಲ್ಲಿದ್ದವರು ತಡಮಾಡುವುದು ಬೇಡ ಎಂದು ನಿಗದಿಯಾಗಿದ್ದ ಸಮಯಕ್ಕಿಂತ ಮುಂಚಿತವಾಗಿಯೇ ಅಂದಿನ ಎಸ್.ಪಿ.ಯವರು ಅವರ ಮನೆ ರೋಷನಾರಕ್ಕೆ ತೆರಳಿದರೆ ಬಾಗಿಲು ತೆರೆದಿರುವುದಿಲ್ಲ. ಇದೇನು ಹೀಗೆ ಎನ್ನುತ್ತಲೆ ಇರುವಾಗ ನಿಗದಿಯಾಗಿದ್ದ ಸಮಯಕ್ಕೆ ಸರಿಯಾಗಿ ಬಾಗಿಲು ತೆರೆಯುತ್ತದೆ. ಅವರು ಸಮಯಕ್ಕೆ ಕೊಡುತ್ತಿದ್ದ ಪ್ರಾಮುಖ್ಯತೆ ಕಂಡು ರಾಮಾನುಜಮ್ ತಲೆಬಾಗುತ್ತಾರೆ. ಈ ಕುರಿತ ತಮ್ಮ ಅನುಭವವನ್ನು ತುಷಾರ ವಾರಪತ್ರಿಕೆಯಲ್ಲಿ ಹಂಚಿಕೊಂಡಿದ್ದನ್ನು ನಾನು ವಿದ್ಯಾರ್ಥಿನಿಯಾಗಿದ್ದಾಗ ಓದಿದ ನೆನಪು. ಯಾರೇ ಆಗಲಿ ಸಮಯಕ್ಕೆ ಬದ್ಧರಾಗಿರಬೇಕು. ಇದು ನಮ್ಮ ವ್ಯಕ್ತಿತ್ವ ಸೂಚಿಯೂ ಹೌದು!

(ಜನರಲ್ ತಿಮ್ಮಯ್ಯ)

ಮಾರ್ಷಲ್ ಕೆ.ಎಂ. ಕಾರಿಯಪ್ಪ, ಜನರಲ್ ತಿಮ್ಮಯ್ಯ, ಅಜ್ಜಮಾಡ ದೇವಯ್ಯ ಪ್ರತಿಮೆಗಳು ಮಡಿಕೇರಿ ನಗರದ ಪ್ರಮುಖ ಸ್ಥಳಗಳಲ್ಲಿರುವ ಪ್ರತಿಮೆಗಳು. ಇವು ಕೊಡಗಿನ ಪರಾಕ್ರಮಿಗಳ ಇತಿಹಾಸವನ್ನು ದಾಖಲಿಸುವ ಜೊತೆಗೆ ಆಧುನಿಕ ಭಾರತದ ಇತಿಹಾಸವನ್ನೂ ಸಾರಿ ಹೇಳುತ್ತವೆ.

ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ ಇವರ ಸಂಪೂರ್ಣ ಹೆಸರು. ಇವರು ಭಾರತದ ಮೊದಲ ದಂಡನಾಯಕರು ಹಾಗು ಮಹಾದಂಡನಾಯಕ ಎಂಬ ಪದವಿಯನ್ನು ಮೊದಲು ಪಡೆದವರು. ಮೂಲತಃ ಉತ್ತರ ಕೊಡಗಿನ ಶನಿವಾರಸಂತೆಯವರು. ತಮ್ಮ ನಿವೃತ್ತಿಯ ಬಳಿಕವೂ ಅನೇಕ ರಾಷ್ಟ್ರಗಳ ಸೇನಾ ಪುನರಾಚನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವರು. ಇವರು ನೆಹರೂ, ವಿಜಯಲಕ್ಷ್ಮಿಪಂಡಿತ್ ಮೊದಲಾದವರಿಂದ ‘ಕಿಪ್ಪರ್’ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದರು. ಇನ್ನು ‘ಕ್ಯಾರಿ’ ಎನ್ನುವುದು ಇವರ ಇನ್ನೊಂದು ಅಡ್ಡಹೆಸರು. 1986 ರಲ್ಲಿ ಫೀಲ್ಡ್ ಮಾರ್ಷಲ್ ಪದವಿ ಸ್ವೀಕರಿಸಿದ ತರುವಾಯ ಮಡಿಕೇರಿಗೆ ಆಗಮಿಸಿದಾಗ ಅವರಿಗೆ ಪುಷ್ಪಾರ್ಚನೆ ಮಾಡಲು ಬೆಳ್ಳಗೆ ಗುಂಡು ಗುಂಡಾಗಿರುವ ನಮ್ಮ ಸಿನಿಯರ್ಸ್‌ನ್ನು ಸೆಲೆಕ್ಟ್ ಮಾಡಿ ಕರೆದುಕೊಂಡುಹೋಗಿದ್ದರು. ಒಂದು ಕಾಲಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜಾಗಿದ್ದ ಸೀನಿಯರ್ ಕಾಲೇಜ್ ಎಂದೇ ಕರೆಸಿಕೊಳ್ಳುತ್ತಿದ್ದ ಕಾಲೇಜಿಗೆ ಮಂಗಳೂರು ವಿಶ್ವವಿದ್ಯಾಲಯದ ಆಡಳಿತಕ್ಕೆ ಸೇರಿದ ನಂತರ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಕಾಲೇಜು ಎಂದು ಹೆಸರಿಡಲಾಯಿತು.

ಕೋಡಂದೆರ ಸುಬ್ಬಯ್ಯ ತಿಮ್ಮಯ್ಯ ಜನರಲ್ ತಿಮ್ಮಯ್ಯನವರ ಸಂಪೂರ್ಣ ಹೆಸರು. ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಭಾತರದ ಪರವಾಗಿ ಕಾರ್ಯ ನಿರ್ವಹಿಸಿದ ಪ್ರಮುಖರು. ಜಪಾನಿಯರ ಶರಣಾಗತಿ ಸಮಯದಲ್ಲಿ ತಿಮ್ಮಯ್ಯನವರು ನಮ್ಮ ದೇಶವನ್ನು ಪ್ರತಿನಿಧಿಸಿದ್ದರು. ಇವರ ತಾಯಿ ಸೀತಮ್ಮ ಆಗಿನ ಕಾಲಕ್ಕೆ ಕೈಸರ್-ಎ- ಹಿಂದ್ ಪದವಿ ಪಡೆದವರಾಗಿದ್ದರು. ತಾಯಿಯ ಮೂಲ ಗುಣವೆ ಅವರನ್ನು ಧೀರೋದಾತ್ತ ಆಗುವುದಕ್ಕೆ ಪ್ರೇರಣೆ ಎಂದರೆ ತಪ್ಪಿಲ್ಲ. ‘ಸನ್ನಿಸೈಡ್ʼ ಇವರ ಮನೆಯ ಹೆಸರು ಜನರಲ್ ತಿಮ್ಮಯ್ಯ ಮೆಮೋರಿಯಲ್ ಮ್ಯೂಸಿಯಮ್ ಅನ್ನು 2021 ರಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ಶ್ರೀಯುತ ರಾಮನಾಥ್ ಕೋವಿಂದರು ಉದ್ಘಾಟಿಸಿದರು.

(ಅಜ್ಜಮಾಡ ದೇವಯ್ಯ)

ಅಜ್ಜಮಾಡ ದೇವಯ್ಯ ಇವರು ಭಾರತದ ಎರಡನೆ ಸರ್ವಶ್ರೇಷ್ಟ ಗೌರವ ಪದವಿ ‘ಮಹಾ ವೀರ ಚಕ್ರ’ವನ್ನು ಪಡೆದವರು. ಮೂಲತಃ ವಾಯುಪಡೆಯಲ್ಲಿದ್ದವರು. 1965 ರಲ್ಲಿ ಭಾರತ ಮತ್ತು ಪಾಕ್ ನಡುವಿನ ನಡೆದ ಯುದ್ಧದಲ್ಲಿ ಶತ್ರುರಾಷ್ಟ್ರದವರ ಯುದ್ಧ ವಿಮಾನವನ್ನು ದೇವಯ್ಯ ಹೊಡೆದುರುಳಿಸಿದ್ದೂ ಅಲ್ಲದೆ ಅವರಿದ್ದ ವಿಮಾನ ಹೊತ್ತಿ ಉರಿಯುತ್ತಿದ್ದರೂ ಅದೇ ವಿಮಾನದಲ್ಲಿ ಹೋರಾಡುತ್ತಲೇ ವೀರಮರಣವನ್ನಪ್ಪಿದವರು. ಇವರ ನೆನಪಿಗೆ ಹಳೆ ಪ್ರೈವೇಟ್ ಬಸ್ ನಿಲ್ದಾಣದಲ್ಲಿ ಪುತ್ಥಳಿ ಅನಾವರಣ ಮಾಡಿರುವುದು ಶ್ಲಾಘನೀಯ.

ಕೋಟೆ ಕೆಳಭಾಗದಲ್ಲಿ ಟೌನ್ ಹಾಲಿನ ಎಡಭಾಗಕ್ಕೆ ಎರಡನೆ ಪ್ರಾಪಂಚಿಕ ಯುದ್ಧದಲ್ಲಿ ಹೋರಾಡಿದವರ ನೆನಪಿನ ಸ್ಮಾರಕವೂ ಇದೆ. ಕೋಟೆ ಎಂದ ಕೂಡಲೆ ಆವರಣದಲ್ಲಿರುವ ಎರಡು ಕಲ್ಲಿನ ಆನೆಗಳು ಪ್ರವಾಸಿಗರ ಆಕರ್ಷಣೆ. ಇವುಗಳ ಕುರಿತು ಕ್ವಚಿತ್ತಾಗಿ ಹೇಳುವುದಾದರೆ; ಸಾಕಿದ ರಾಜನಿಗೆ ಸಲಾಮ್ ಮಾಡಲಿಲ್ಲ ಅನ್ನುವ ಕಾರಣಕ್ಕೆ ರಾಜ ಮುಂಗೋಪದಿಂದ ಕೊಲ್ಲಿಸಿ ಕೋಪ ತಣ್ಣಗಾದ ನಂತರ ಅವುಗಳ ಪ್ರತಿಕೃತಿಗಳನ್ನು ಮಾಡಿಸಿ ತಾನು ಮಲಗುವ ಕೋಣೆ ಎದಿರು ಸ್ಥಾಪಿಸಿಕೊಂಡವು.

ಪ್ರತಿದಿನ ಶಾಲೆ ಬಿಟ್ಟು ಮನೆ ಹಾದಿ ಹಿಡಿಯುವಾಗ ದಿನವೂ ನೋಡಬೇಕೆನಿಸುತ್ತಿದ್ದದ್ದು ಆ ಮನೆಯ ಹೆಸರು. ಮನೆ ಮುಂಭಾಗದ ಸ್ಲ್ಯಾಬಷ್ಟನ್ನೂ CAUVERY ಎಂಬೊಂದೇ ಪದ ತುಂಬಿದ್ದದ್ದು. ನಾನು ಗೆಳತಿ ರೇಷ್ಮಳಲ್ಲಿ ಚರ್ಚೆ ಮಾಡಬೇಕು ಎಂದರೂ ಆಕೆಗೆ ಅದು ಇಷ್ಟವಾಗುತ್ತಿರಲಿಲ್ಲ. ಅವಳನ್ನು ಬಿಟ್ಟು ಬೇರೆಯವರಲ್ಲಿ ಚರ್ಚೆ ಮಾಡಿದರೂ ಸಮರ್ಪಕ ಉತ್ತರ ಸಿಗುತ್ತಿರಲಿಲ್ಲ. ನಮ್ಮ ಇಂಗ್ಲಿಷ್ ಸಿಸ್ಟರ್ ಒಮ್ಮೆ ಅಮೆರಿಕನ್ ಇಂಗ್ಲಿಷ್, ಬ್ರಿಟಿಷ್ ಇಂಗ್ಲಿಷ್ ಎಂದಿದ್ದರು. ಆದರೆ ಗೊಂದಲವಿದ್ದೇ ಇತ್ತು. ಅಮೆರಿಕನ್ ಇಂಗ್ಲಿಷಿನಲ್ಲಿ CAUVERY ಎಂದರೆ ನಾವು KAVERI ಎಂದು ಬರೆಯುತ್ತೇವೆ. ಹಾಗೆ CARIAPPAಪದವನ್ನು KARIAPPA ಎಂದು ಬರೆಯುತ್ತೇವೆ. ಕನ್ನಡ ಪದಗಳು ಬ್ರೀಟೀಷಿಕರಣಗೊಂಡಾಗ CAUVERY, KARIAPPA ಎಂದಾಗಿವೆಯಷ್ಟೆ.


ಕೊಡಗು ಪದವನ್ನು ವಿಶ್ಲೇಷಣೆ ಮಾಡುವುದಾದರೆ ‘ಕೊಡಗು’ ಪದ ‘ಕೊಡಿ’ ಎಂಬ ಪದದಿಂದ ಬಂದಿದೆ. ಇಂಗ್ಲೀಷಿನಲ್ಲಿ strenght, stong, powefull hill country, forested high land country ಎಂಬ ಅರ್ಥವಿದೆ. ಕೊಡವ ಭಾಷೆಯಲ್ಲಿ ‘ಕೊಡಿ’ ಎಂದರೆ ಎತ್ತರವಾದ ದಟ್ಟ ಪರ್ವತಗಳ ಸಾಲು ಎಂದರ್ಥ. ಪುರಾಣಗಳಲ್ಲಿ ‘ಕ್ರೋಢ ದೇಶ’, ‘ಕೊಡಿಮಲೆನಾಡು’ ಎಂದು ಉಲ್ಲೇಖವಿದೆ. ಕೊಡವ ಭಾಷೆಯಲ್ಲಿ ಇಂದಿಗೂ ‘ಕೊಡಗು’ ಪದ ಪ್ರಯೋಗವಿಲ್ಲ. ಬದಲಾಗಿ “ಕೊಡವನಾಡ್” ಪದ ಬಳಕೆಯಿದೆ. ಬ್ರಿಟಿಷರು ಕೊಡಗನ್ನು Coorg ಎಂದು ಕರೆಯುತ್ತಿದ್ದರು. ಆಂಗ್ಲೀಕರಣಗೊಂಡ ಕೊಡಗು ಪದವೆ ಕೂರ್ಗ್ ಅಷ್ಟೇ. ಕೊಡವರು ಎಂಬುದು ಕೂರ್ಗೀಸ್ ಆಗಿದೆ. ಆಭರಣ, ಧಿರಿಸು, ಉಟೋಪಚಾರ, ಸಾಂಸ್ಕೃತಿಕ ಆಚರಣೆ ಎಲ್ಲವೂ ‘ಕೂರ್ಗಿ ಸ್ಟೈಲ್’ ಎಂಬ ಪದದಿಂದಲೇ ಗುರುತಿಸಿಕೊಂಡಿವೆ. ಕೂರ್ಗಿ ಸ್ಟೈಲ್ ಎಂದ ಮೇಲೆ ಕೂರ್ಗಿ ವಿಶೇಷ ಆಭರಣಗಳ ಕುರಿತು ವಿವರಿಸಲೇಬೇಕು. ‘ಇಂಪಿಲ್ಲದ ಕೇದಗೆಯನ್ನು ಪೆಂಪಿಲ್ಲದ ಕುಲವಧುವನ್ ಒಪ್ಪುಗುವೇಂ’ ಎಂದು ಕವಿ ರನ್ನ ಹೇಳಿದ್ದಾನೆ. ಅಂತೆಯೇ ಕೊಡಗಿನ ವಧು ಧರಿಸುವ ಪೆಂಪಿನ ಆಭರಣಗಳನ್ನು ಒಪ್ಪದವರಿದ್ದಾರೆಯೇ? ಈ ಕುರಿತು ಮುಂದಿನ ಬರೆಹದಲ್ಲಿ ಭೇಟಿಯಾಗುವೆ.

(ಮುಂದುವರಿಯುವುದು…)