“ಏಕೆಂದರೆ.. ಒಂಟಿತನ! ಯಾರೂ ನನ್ನ ಜೊತೆ ಮಾತನಾಡುವುದಿಲ್ಲ. ಯಾರೂ ನನ್ನನ್ನು ನೋಡಲು ಸಹ ಬಯಸುವುದಿಲ್ಲ. ನಾನು ಒಂಟಿತನಕ್ಕೆ ರೂಢಿಯಾಗಿದ್ದೇನೆ. ಹೇಗೋ ‘ಏಕಾಂತತೆ’ಯಂತೆ ಭಾಸವಾಗುವ ಈ ಮನಸ್ಥಿತಿಗೆ ನಾನು ರೂಢಿಸಿಕೊಂಡಿದ್ದೇನೆ. ಈ ಸ್ಥಿತಿ.. ಈ ಒಂಟಿತನ.. ಈ ಏಕಾಂತತೆಯಲ್ಲಿ ಮಾತ್ರ ನಾವು ಶಾಂತಿಯಿಂದ ಇರಲು ಸಾಧ್ಯ. ಯಾರೂ ನಮ್ಮನ್ನು ನೋಡುವುದಿಲ್ಲ, ಯಾರೂ ನಮ್ಮ ಬಳಿಗೆ ಬರುವುದಿಲ್ಲ, ಯಾರೂ ನಮ್ಮನ್ನು ನೋಯಿಸುವುದಿಲ್ಲ, ಯಾರೂ ಕೋಪಗೊಳ್ಳುವುದಿಲ್ಲ.. ಅವರ ಮಾತುಗಳನ್ನು ಕೇಳಿ ಒಳಗೆ ನರಳುವ ಮತ್ತು ಪುಡಿಪುಡಿಯಾಗುವ ದುರದೃಷ್ಟ ನಮಗಿಲ್ಲ!”
ಕೋಡೀಹಳ್ಳಿ ಮುರಳೀಮೋಹನ್ ಅನುವಾದಿಸಿದ ತೆಲುಗಿನ ಎಸ್.ವಿ. ಕೃಷ್ಣ ಬರೆದ ಕತೆ “ಅಂತರ್ ನೇತ್ರ” ನಿಮ್ಮ ಈ ಭಾನುವಾರದ ಓದಿಗೆ
“ಕಾಫಿ… ಕಾಫಿ… ಕಾಫಿ…”
ಯೋಚನೆಗಳಿಂದ ಹೊರಬಂದು ತಲೆ ತಿರುಗಿಸಿದೆ! ಹೊರಡುವ ಸಮಯ ಹತ್ತಿರವಾಗುತ್ತಿದ್ದಂತೆ ಕಂಪಾರ್ಟ್‌ಮೆಂಟ್ ಹತ್ತುವ ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚಾಯಿತು. ಈಗಾಗಲೇ ಹತ್ತಿದ್ದವರು ತಮ್ಮ ನೆರೆಹೊರೆಯವರೊಂದಿಗೆ ಹರಟೆ ಹೊಡೆಯುತ್ತಿದ್ದರು. ಕೆಲವರು ನನ್ನಂತೆಯೇ ಕಾಫಿ ಕುಡಿಯುತ್ತಾ ಆಲೋಚನೆಯಲ್ಲಿ ಮುಳುಗಿದ್ದರು. ಒಟ್ಟಿನಲ್ಲಿ ಎಲ್ಲರೂ ತಮ್ಮ ಲೋಕದಲ್ಲಿದ್ದರು. ನಾನು ಕಿಟಕಿಯಿಂದ ಹೊರಗೆ ನೋಡಲು ಹಿಂತಿರುಗಿದೆ. ಇದು ನಾನು ಗುಂಟೂರಿಗೆ ಪ್ರಯಾಣಿಸುತ್ತಿರುವುದು ಐದನೇ ಅಥವಾ ಆರನೇ ಬಾರಿ! ನಾನು ಮಗುವಾಗಿದ್ದಾಗ ಮೊದಲ ಬಾರಿಗೆ ಹೋಗಿದ್ದೆ. ಆದರೆ, ಕಳೆದ ಐದು ವರ್ಷಗಳಿಂದ, ನಾನು ಗುಂಟೂರು ಪಟ್ಟಣದ ಬಗ್ಗೆ ಯೋಚಿಸಿದಾಗಲೆಲ್ಲಾ, ನನ್ನ ಆತ್ಮೀಯ ಸ್ನೇಹಿತೆ ಮಂಜುಳಾ ತಕ್ಷಣ ನೆನಪಿಗೆ ಬರುತ್ತಾಳೆ! ಈಗಲೂ ನಾನು ಹೈದರಾಬಾದ್ ಬಿಟ್ಟು ಹೊರಟಿದ್ದು… ಅವಳ ಮದುವೆಗೆ ಹಾಜರಾಗಲು ಮಾತ್ರ!
“ನಾನೇಕೆ ಮಂಜೂ! ಮದುವೆಯಲ್ಲಿ ನನ್ನನ್ನು ನಿನ್ನ ಫ್ರೆಂಡ್ ಆಗಿ ನೋಡಿದರೆ.. ನಿಮ್ಮ ಅತ್ತೆ-ಮಾವಂದಿರಿಗೆ ನಿನ್ನ ಬಗ್ಗೆ ಇಂಪ್ರೆಷನ್ ಹೋಗುತ್ತದೆ! ನನ್ನ ಹೃದಯ ನಿನಗೆ ಗೊತ್ತಲ್ಲ.. ನಾನು ಬರದಿದ್ದರೂ ನನ್ನ ಹಾರೈಕೆಗಳು ಯಾವಾಗಲೂ ನಿನಗಿರುತ್ತವೆಂದು!” ಎಂದು ಒಪ್ಪಿಸಲು ನೋಡಿದರೂ.. ಅವಳು ಕೇಳಿಸಿಕೊಳ್ಳಲಿಲ್ಲ.
“ಬಾಯಿ ಮುಚ್ಚು! ನೀನು ನನ್ನ ಮದುವೆಗೆ ಬರದಿದ್ದರೆ.. ಏನು ಮಾಡುತ್ತೇನೋ ಗೊತ್ತಾ?”
“.. ಏನು ಮಾಡುತ್ತೀಯ?” ನಾನು ಕುತೂಹಲದಿಂದ ನೋಡುತ್ತಾ ಕೇಳಿದಾಗ ಹೇಳಿದಳು..
“ಇನ್ನು ಎಂದಿಗೂ ನಿನ್ನ ಜೊತೆ ಮಾತನಾಡುವುದಿಲ್ಲ!”
ನಾನು ಹಗುರವಾಗಿ ನಕ್ಕಿದೆ.
“ಹೋಗು.. ನೀನೂ, ನಿನ್ನ ಪ್ರತಿಜ್ಞೆಗಳೂ! ನಿನ್ನ ಬಗ್ಗೆ ನನಗೆ ಗೊತ್ತಿಲ್ಲವೇ ಮಂಜೂ! ನನ್ನೊಂದಿಗೆ ಮಾತನಾಡದೆ ಎರಡು ದಿನ ಕೂಡ ನೀನು ಇರಲಾರೆ! ಏನಾದರೂ ನಡೆಯುವ ವಿಷಯ ಹೇಳಮ್ಮ!” ಎಂದೆ.
“ಹಾಗಾದರೆ ಕೇಳು!” ಎಂದು ಆಕ್ರೋಶದಿಂದ..
“ನೀನು ನನ್ನ ಮದುವೆಗೆ ಬರದಿದ್ದರೆ..”
ನಾನು ಆಸಕ್ತಿಯಿಂದ ನೋಡುತ್ತಿರುವುದನ್ನು ಗಮನಿಸಿ ಹೇಳಿದಳು..
“ನಾನೂ ನಿನ್ನ ಮದುವೆಗೆ ಬರುವುದಿಲ್ಲ!”
ಅಷ್ಟೇ… ನಾನು ಜೋರಾಗಿ ನಕ್ಕಿದೆ. ಈ ಬಾರಿ ಅವಳು ದಿಗ್ಭ್ರಮೆಯಿಂದ ನನ್ನ ಕಡೆ ನೋಡಿದಳು.
“ಏನಾಯಿತೇ.. ಈಗ ನಾನೇನು ಅಂದೆ ಅಂತ? ಹೀಗೆ ನಗುತ್ತಿದ್ದೀಯ?”
ನಾನು ನಗುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಾ..
“ಮತ್ತೆ.. ಇಂತಹ ಜೋಕ್ ಹಾಕಿದರೆ ನಗದೇ ಇರುತ್ತಾರೇ?” ಎಂದು ಬಿದ್ದು ಬಿದ್ದು ನಗುತ್ತಿದ್ದ ನಾನು.. ಮನಸ್ಸಿನಲ್ಲಿ ಎಲ್ಲೋ ಚುಚ್ಚಿದಂತಾಗಿ ಎದೆಯ ದುಃಖದ ಪದರ ಕಣ್ಣಿನಲ್ಲಿ ತೇವದ ತೆರೆಯಾಗಿ ಬದಲಾಗುತ್ತಿದ್ದಂತೆ ಬಾಯಿ ತೆರೆದೆ..
“ಮಂಜೂ.. ನಿಜವಾಗಿಯೂ ನನಗೆ ಮದುವೆಯಾಗುತ್ತಾ?”
*****
‘ದಯವಿಟ್ಟು ಗಮನಿಸಿ.. ತೆನಾಲಿಗೆ ಹೋಗುವ ನಾಗಾರ್ಜುನ ಎಕ್ಸ್‌ಪ್ರೆಸ್ ಹೊರಡಲು ಸಿದ್ಧವಾಗಿದೆ!’ ಅನೌನ್ಸರ್ ಮಾತುಗಳನ್ನು ಕೇಳಿದ ತಕ್ಷಣ, ಪ್ಲಾಟ್‌ಫಾರ್ಮ್ ಮೇಲೆ ಇದ್ದ ಪ್ರಯಾಣಿಕರಲ್ಲಿ ಗದ್ದಲ ಪ್ರಾರಂಭವಾಯಿತು. ಕಿಟಕಿ ಪಕ್ಕದಲ್ಲೇ ಕುಳಿತಿದ್ದ ನಾನು ಅಪ್ರಯತ್ನವಾಗಿ ಸಮಯ ನೋಡಿದೆ.. ರೈಲು ಹೊರಡಲು ಐದು ನಿಮಿಷಗಳು ಬಾಕಿ ಇವೆ!
ನಾನು ಕುಳಿತಿದ್ದ ಕಂಪಾರ್ಟ್‌ಮೆಂಟ್‌ಗೆ ಮೂವರು ವ್ಯಕ್ತಿಗಳು ಸಾಮಾನುಗಳನ್ನು ಹೊತ್ತುಕೊಂಡು ಬಂದರು. ನನ್ನ ಎದುರು ಖಾಲಿ ಕಾಣುತ್ತಿದ್ದ ಸೀಟಿನ ಹತ್ತಿರ ಬಂದು ಕೂರಲು ಸಿದ್ಧರಾಗುತ್ತಿದ್ದಂತೆ ಬಾಗಿ, ಯಥಾಲಾಪವಾಗಿ ನನ್ನ ಕಡೆ ನೋಡಿದರು. ಅಷ್ಟೇ… ಇದ್ದಕ್ಕಿದ್ದಂತೆ ಕೆಳಗೆ ಇಡಲು ಹೊರಟಿದ್ದ ಸಾಮಾನುಗಳನ್ನು ಎತ್ತಿಕೊಂಡು, ತಿರುಗಿ ಇನ್ನೊಂದು ಕಂಪಾರ್ಟ್‌ಮೆಂಟ್ ಕಡೆ ಹೊರಟು ಹೋದರು. ನನ್ನ ಮನಸ್ಸು ನರಳಿತು.
ಅದು ನಿಜ… ಯಾರೂ ನನ್ನನ್ನು ಸಾಮಾನ್ಯವಾಗಿ ನೋಡಲು ಇಷ್ಟಪಡುವುದಿಲ್ಲ. ಒಮ್ಮೆ ನನ್ನನ್ನು ನೋಡಿದ ಮೇಲೆ ಮುಖ ತಿರುಗಿಸದೆ ಇರಲು ಸಾಧ್ಯವಿಲ್ಲ. ಒಂದು ಅಥವಾ ಎರಡು ಗಂಟೆಗಳ ಪ್ರಯಾಣಕ್ಕಾಗಿ ರೈಲು ಹತ್ತಿದವರು ನನ್ನನ್ನು ದಿಟ್ಟಿಸಿ ನೋಡುತ್ತಾ ಹೆಚ್ಚು ಸಮಯ ಕಳೆಯಲು ಬಯಸುವುದಿಲ್ಲ. ಅದಕ್ಕಾಗಿಯೇ ಅವರು ಬೇರೆ ಸೀಟು ಹುಡುಕಿಕೊಂಡು ಹೋದರು.
ಒಂದು ವೇಳೆ… ಅನಿವಾರ್ಯವಾಗಿ ಅವರು ನನ್ನ ಎದುರು ಕುಳಿತುಕೊಳ್ಳಬೇಕಾದರೆ, ನನ್ನನ್ನು ನೋಡುತ್ತಾ ಕುಳಿತುಕೊಳ್ಳುವುದಿಲ್ಲ. ಪಕ್ಕಕ್ಕೆ ತಿರುಗಿ ಎಲ್ಲೋ ನೋಡುತ್ತಿರುತ್ತಾರೆ. ಅವರು ಆಕಸ್ಮಿಕವಾಗಿ ನನ್ನನ್ನು ನೋಡಿದಾಗಲೂ, ‘ಅಸಹ್ಯ, ತಿರಸ್ಕಾರ ‘ ಎಂಬ ಭಾವನೆಯನ್ನು ಬಿಟ್ಟು ಬೇರೆ ಯಾವುದೇ ಭಾವನೆ ಇರುವುದಿಲ್ಲ. ನನ್ನ ಊಹೆ ತಿಳಿಗಾದದಿಂದ, ಕಳೆದ ಇಪ್ಪತ್ತೈದು ವರ್ಷಗಳಿಂದ ಈ ಸಮಾಜದಲ್ಲಿ ಇದು ನನಗೆ ಅಭ್ಯಾಸವಾಗಿಬಿಟ್ಟಿದೆ! ಇದು ಅವಮಾನವೋ ಅಥವಾ ಅಪಹಾಸ್ಯವೋ ಎಂದು ವಿಶ್ಲೇಷಿಸುತ್ತಾ, ನನ್ನನ್ನು ನಾನು ಸಮಾಧಾನಪಡಿಸಿಕೊಳ್ಳುತ್ತಾ ಸಮಯ ಕಳೆಯುತ್ತಿದ್ದ ದಿನಗಳು ಕೂಡ ದಾಟಿಹೋದವು.
ಅದಕ್ಕಾಗಿಯೇ.. ನಾನು ‘ಮೌನಿಕ’ ಆಗಿದ್ದೇನೆ… ಜಗತ್ತನ್ನು ದೂರದಿಂದಲೇ ನೋಡುತ್ತಾ ಓದುವ ಜೀವನ ಪಾಠಕಿಯಾಗಿದ್ದೇನೆ. ಸಮಾಜ ನನ್ನನ್ನು ವೀಕ್ಷಿಸುವ ವಿಧಾನವನ್ನು ಅರ್ಥಮಾಡಿಕೊಳ್ಳುವ ಸಂಶೋಧಕಿಯಾಗಿದ್ದೇನೆ!
“ಎಕ್ಸ್‌ಕ್ಯೂಸ್ ಮಿ… ಈ ಸೀಟು ಖಾಲಿಯಿದೆ ಅಲ್ಲವೇ..?” ಎಂಬ ಮಾತುಗಳಿಗೆ ಎಚ್ಚರಗೊಂಡು ತಲೆ ತಿರುಗಿಸಿ ನೋಡಿದೆ. ನನ್ನ ಎದುರಿನ ಸೀಟಿನ ಮೇಲೆ ಕೈಯಿಂದ ತಡವುತ್ತಾ ಅವನು ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದನು,
“… ಯಾರೂ ಇಲ್ಲ. ಖಾಲಿಯೇ!” ನಾನು ಹೇಳಿದೆ.
ಅವನು ತನ್ನ ಕೈಯಿಂದ ಸೀಟನ್ನು ತಟ್ಟಿ ಕುಳಿತುಕೊಂಡನು.
“ಅಯ್ಯೋ… ಜಾಗ್ರತೆ!” ಎಂದೆ ಅಪ್ರಯತ್ನವಾಗಿ.
ಅವನು ಎಚ್ಚರಿಕೆಯಿಂದಲೇ ಕುಳಿತ. ಏಕೋ.. ಆ ಕ್ಷಣದಲ್ಲಿ, ನನಗೆ ತುಂಬಾ ಹೆಮ್ಮೆ ಅನಿಸಿತು. ನನ್ನ ಎದುರು ಒಬ್ಬ ವ್ಯಕ್ತಿ ಕುಳಿತಿದ್ದಕ್ಕೆ!
*****
“ಆಸೆ ಇಲ್ಲದೆ ಬದುಕುವುದು ಕಷ್ಟ. ಕಣ್ಣುಗಳಿಲ್ಲದ ಕಾರಣ ನಿಮಗೆ ಎಂದಿಗೂ ಬೇಸರವಾಗಲಿಲ್ಲವೇ? ಈ ಲೋಕವನ್ನು ನೋಡಬೇಕೆನಿಸಲಿಲ್ಲವೇ?”
ಟ್ರೈನ್ ಹೊರಟು ಎರಡು ಗಂಟೆಗಳಾಗುತ್ತಿತ್ತು. ಈ ಎರಡು ಗಂಟೆಗಳಲ್ಲೂ ನಮ್ಮಿಬ್ಬರ ನಡುವೆ ನಡೆಸಿದ ಸಂಭಾಷಣೆಗಳು ಏಕೋ.. ನಮ್ಮನ್ನು ಸ್ವಲ್ಪ ಹತ್ತಿರಕ್ಕೆ ತಂದಂತೆ ಅನಿಸಿತು. ನನ್ನ ಪ್ರಶ್ನೆಗೆ ಉತ್ತರಿಸದೆ ಅವನು ಮುಗುಳ್ನಕ್ಕನು. ಆ ನಗು ಸಲೀಸಾಗಿತ್ತು!
“ಹುಟ್ಟಿನಿಂದಲೇ ದೃಷ್ಟಿ ಇಲ್ಲದ ನನಗೆ ‘ಆಸೆ’ ಅಂದರೆ ಏನು ಎಂದು ತಿಳಿದಿಲ್ಲ. ಎಲ್ಲರೂ ‘ಆಸೆ’ ಎಂಬುದನ್ನು ‘ಬೆಳಕು’ಗೆ ಹೋಲಿಸುತ್ತಾರೆ. ಆದರೆ.. ನನಗೆ ಮಾತ್ರ ಬೆಳಕು ಎಂದರೇನು ಎಂದು ತಿಳಿದಿಲ್ಲ. ನನಗೆ ತಿಳಿದಿರುವ ಲೋಕವೆಲ್ಲ ಕತ್ತಲೆ! ‘ದೃಷ್ಟಿ’ ಎಂಬುದು ಒಂದಿದೆಯೆಂದೂ, ಅದರಿಂದ ನೋಡುತ್ತಾರೆಯೆಂದೂ, ಆ ನೋಟದಿಂದಲೇ ಈ ಲೋಕ ಕಾಣಿಸುತ್ತದೆಂದೂ.. ಊಹೆ ಬರುವವರೆಗೂ ನನಗೆ ಗೊತ್ತಿರಲಿಲ್ಲ. ಪ್ರಪಂಚದ ಬಗ್ಗೆ ತಿಳುವಳಿಕೆಯನ್ನು ಪಡೆದಂತೆ ಅನಿಸಿತು.. ನನಗೆ ದೃಷ್ಟಿ ಇಲ್ಲದಿರುವುದೇ ಒಳ್ಳೆಯದೆಂದು! ಆಗ ಅರ್ಥವಾಯಿತು….. ನಾನೇ ಅದೃಷ್ಟಶಾಲಿ ಎಂದು!”
“ಏಕೆ?”
“ಲೋಕದಲ್ಲಿ ಶುದ್ಧತೆ, ಒಳ್ಳೆಯತನ ಎಲ್ಲಿದೆ ಹೇಳಿ? ಎಲ್ಲೆಲ್ಲೂ ಮಲಿನ, ಭ್ರಷ್ಟಾಚಾರ, ದುಷ್ಟತನವೇ ಅಲ್ಲವೇ! ಪಕ್ಕದವನ ಬೆಳವಣಿಗೆಯನ್ನು ನೋಡಿ ‘ಅಸಹನೆ’. ‘ಅವನಿಗಿರುವದು ನನಗಿಲ್ಲವೇ’ ಎಂದು ಹೊಟ್ಟೆಕಿಚ್ಚು. ಪ್ರಮೋಷನ್ ಬರಲಿಲ್ಲವೆಂದು ಪ್ರತಿಭಟನೆ. ಟ್ರಾನ್ಸ್‌ಫರ್ ಆಗಲಿಲ್ಲವೆಂದು ವೇದನೆ. ಮನುಷ್ಯರ ಮನಸ್ಸುಗಳೆಲ್ಲ ಹೇಸಿಗೆಯಾಗಿವೆ! ಮಹಾಕವಿ ಶ್ರೀಶ್ರೀ ಹೇಳಿದ ಹಾಗೆ “ಮನದೀ ಒಕ ಬ್ರತುಕೇನಾ.. ಕುಕ್ಕಲವಲೆ, ನಕ್ಕಲವಲೆ/ಮನದೀ ಒಕ ಬ್ರತುಕೇನಾ.. ಸಂದುಲಲೋ ಪಂದುಲವಲೆ!” (ನಮ್ಮದೂ ಒಂದು ಬದುಕೇನಾ.. ನಾಯಿಗಳಂತೆ, ನರಿಗಳಂತೆ/ ನಮ್ಮದೂ ಒಂದು ಬದುಕೇನಾ.. ಗಲ್ಲಿಗಳಲ್ಲಿ ಹಂದಿಗಳಂತೆ!)” ಎಂದು..
ಒಂದು ಕ್ಷಣ ನಿಂತು..
“ಕ್ಷಮಿಸಿರಿ.. ನಾನು ಏನಾದರೂ ತಪ್ಪು ಹೇಳಿದ್ದರೆ!” ಎಂದನು.
“ಇಲ್ಲ ಇಲ್ಲ.. ನೀವು ಮಾತನಾಡುತ್ತಿದ್ದರೆ ಶುದ್ಧತೆ ಕಾಣಿಸುತ್ತಿದೆ. ನಿಮ್ಮ ಮಾತುಗಳಲ್ಲಿ ವಾಸ್ತವ ಕೇಳಿಸುತ್ತಿದೆ. ಹೌದು.. ನೀವು ಹೇಳುವುದು ನಿಜವೇ! ಮನುಷ್ಯರೆಲ್ಲ ಜಾತಿಮತಗಳ ಹೋಲಿಕೆಗಳಲ್ಲಿ, ಸ್ಥಿತಿಗತಿಗಳ ತೂಕಗಳಲ್ಲಿ, ತಾರತಮ್ಯಗಳ ಅಂದಾಜುಗಳಲ್ಲಿ, ಲಾಭನಷ್ಟಗಳ ಲೆಕ್ಕಾಚಾರದಲ್ಲಿ, ಅನುದಿನವೂ ಕೀಳರಿಮೆ ಅಹಂಕಾರಗಳ ಘರ್ಷಣೆಯಲ್ಲಿ… ತಮ್ಮ ‘ಅಂತರಾತ್ಮ’ಗಳನ್ನು ಕೊಂದು, ಪ್ರೀತಿಯಿಲ್ಲದ ‘ನಿಧಿ’ಯನ್ನು ಅತಿಯಾದ ಆತ್ಮವಿಶ್ವಾಸವೆಂದು ಭಾವಿಸುತ್ತಾ ಬದುಕುತ್ತಿದ್ದಾರೆಯೇ ಹೊರತು.. ಮನಃಪೂರ್ವಕವಾಗಿ ಯಾರೂ ಬದುಕುತ್ತಿಲ್ಲ!” ಎಂದೆ.
ಅವನಿಗೆ ಆಶ್ಚರ್ಯವಾಯಿತು..
“ನೀವೂ ನನ್ನಂತೆಯೇ ಮಾತನಾಡುತ್ತಿದ್ದೀರಲ್ಲ! ನಿಮ್ಮ ಭಾವನೆಗಳು ನನ್ನ ಭಾವನೆಗಳಂತೆಯೇ ಇವೆಯಲ್ಲ!” ಎಂದನು.
“ನನಗೂ ಹಾಗೇ ಅನಿಸಿತು. ಅದಕ್ಕಾಗಿಯೇ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಇನ್ನೂ ಕೇಳಬೇಕೆನಿಸುತ್ತದೆ.. ಹೇಳಿ!” ಎಂದೆ.
ಅವನು ನಗುತ್ತಾ..
“ಹೇಳುವುದಕ್ಕೇನಿದೆರೀ.. ನಾನು ಹೇಳುವುದೆಲ್ಲ ಎಲ್ಲರಿಗೂ ತಿಳಿದಿರುವ ವಿಷಯಗಳೇ, ಪ್ರತಿಯೊಬ್ಬರೂ ಒಪ್ಪಿಕೊಳ್ಳುವ ವಿಷಯಗಳೇ.. ಹೊಸದೇನಿದೆ ಹೇಳಿ?! ಮನುಷ್ಯರಾಗಿ ಒಬ್ಬರನ್ನೊಬ್ಬರು ಹೀರುತ್ತಾ ಕೊಲ್ಲುತ್ತಾ ಇದ್ದಾರೆ. ನಿಜ ಹೇಳಿ.. ಚಿಕ್ಕ ಮಕ್ಕಳನ್ನು ಬಿಟ್ಟರೆ ಮನುಷ್ಯರಲ್ಲಿ ಯಾರಾದರೂ ಮನಃಪೂರ್ವಕವಾಗಿ ನಗಲು ಸಾಧ್ಯವೇ?” ಎಂದನು.
“ನಗುವುದನ್ನು ಬಿಟ್ಟುಬಿಡಿ.. ತಮ್ಮ ಪಾಪಗಳು ತೊಳೆದುಹೋಗುವಂತೆ ಕನಿಷ್ಠ ಮನಃಪೂರ್ವಕವಾಗಿ ಅಳಲು ಸಹ ಸಮರ್ಥರಾಗಿದ್ದಾರೇ? ಎಂಬ ಪ್ರಶ್ನೆಗೂ ಇಲ್ಲವೆಂದೇ ಉತ್ತರಿಸಬೇಕಾಗುತ್ತದೆ!’ ಎಂದೆ.
“ಅದೇ ಮತ್ತೆ! ಮನುಷ್ಯರು ಇಷ್ಟು ಭಯಾನಕವಾಗಿರುತ್ತಾರೆಂದೂ, ಅವರ ಅಂತರಂಗಗಳು ಇಷ್ಟು ವಿಕೃತವಾಗಿರುತ್ತವೆಯೆಂದೂ ತಿಳಿದುಕೊಳ್ಳುತ್ತಿದ್ದಂತೆ.. ಅದೆಲ್ಲವನ್ನು ನೋಡುವ ದುರಾದೃಷ್ಟ ನನಗೆ ಇಲ್ಲದಿರುವುದು ಅದೃಷ್ಟವೇ ಅಲ್ಲವೇ! ಆದ್ದರಿಂದ ಆ ದೇವರು ನನಗೆ ಒಳ್ಳೆಯದೇ ಮಾಡಿದ್ದಾನೆ..”
ಈ ಬಾರಿ ನಾನು ನಕ್ಕಿದೆ. “ನಿಮಗೆ ಸಂಬಂಧಿಸಿದಂತೆ ನೀವೆಷ್ಟು ಅದೃಷ್ಟವಂತರೋ.. ನನ್ನ ಮಟ್ಟಿಗೆ ನಾನೂ ಅಷ್ಟೇ!” ಎಂದೆ.
“ಏಕೆ ಹಾಗೆ..?”
“ಏಕೆಂದರೆ.. ಒಂಟಿತನ! ಯಾರೂ ನನ್ನ ಜೊತೆ ಮಾತನಾಡುವುದಿಲ್ಲ. ಯಾರೂ ನನ್ನನ್ನು ನೋಡಲು ಸಹ ಬಯಸುವುದಿಲ್ಲ. ನಾನು ಒಂಟಿತನಕ್ಕೆ ರೂಢಿಯಾಗಿದ್ದೇನೆ. ಹೇಗೋ ‘ಏಕಾಂತತೆ’ಯಂತೆ ಭಾಸವಾಗುವ ಈ ಮನಸ್ಥಿತಿಗೆ ನಾನು ರೂಢಿಸಿಕೊಂಡಿದ್ದೇನೆ. ಈ ಸ್ಥಿತಿ.. ಈ ಒಂಟಿತನ.. ಈ ಏಕಾಂತತೆಯಲ್ಲಿ ಮಾತ್ರ ನಾವು ಶಾಂತಿಯಿಂದ ಇರಲು ಸಾಧ್ಯ. ಯಾರೂ ನಮ್ಮನ್ನು ನೋಡುವುದಿಲ್ಲ, ಯಾರೂ ನಮ್ಮ ಬಳಿಗೆ ಬರುವುದಿಲ್ಲ, ಯಾರೂ ನಮ್ಮನ್ನು ನೋಯಿಸುವುದಿಲ್ಲ, ಯಾರೂ ಕೋಪಗೊಳ್ಳುವುದಿಲ್ಲ.. ಅವರ ಮಾತುಗಳನ್ನು ಕೇಳಿ ಒಳಗೆ ನರಳುವ ಮತ್ತು ಪುಡಿಪುಡಿಯಾಗುವ ದುರದೃಷ್ಟ ನಮಗಿಲ್ಲ!”
ನಾನು ‘ನನ್ನ’ ಬಗ್ಗೆ ಮಾತನಾಡಲು ಪ್ರಾರಂಭಿಸಿ ಅವನನ್ನು ಸೇರಿಸಿ ‘ನಾವು’ ಎಂದು ಹೇಳುವ ಮೂಲಕ ಕೊನೆಗೊಳಿಸಿದೆ ಎಂದು ನನಗೆ ನೆನಪಾಯಿತು. ಆದರೆ ಅವನು ಅದನ್ನು ಗಮನಿಸಿದ್ದಾನೋ ಇಲ್ಲವೋ ನನಗೆ ತಿಳಿದಿಲ್ಲ.. ಅವನು ನನ್ನ ಮಾತುಗಳಿಗೆ ‘ನಿಜವೇ’ ಎಂದು ಹೇಳುವ ಹಾಗೆ ತಲೆಯಾಡಿಸುತ್ತಾ,
“ನನಗೆ ಮಾತ್ರ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ, ನಿಮ್ಮೊಂದಿಗೆ ಮಾತನಾಡುತ್ತಿದ್ದರೆ ತುಂಬಾ ಆಹ್ಲಾದಕರವಾಗಿ, ಆತ್ಮೀಯವಾಗಿ ಅನಿಸುತ್ತಿದೆ. ನನ್ನೊಂದಿಗೆ ಇಷ್ಟು ಚೆನ್ನಾಗಿ ಯಾರೂ ಮಾತನಾಡಿಲ್ಲ. ನನ್ನಂತಹ ಭಾವನೆಗಳು ಇದ್ದು, ನನ್ನಂತಹ ಅಭಿಪ್ರಾಯಗಳು ಇದ್ದು, ನನ್ನಂತೆಯೇ ಮಾತನಾಡುವ ನಿಮ್ಮನ್ನು ಭೇಟಿಯಾದ ದಿನವನ್ನು, ನಿಮ್ಮೊಂದಿಗೆ ಮಾತನಾಡುತ್ತಿರುವ ಈ ಸಮಯವನ್ನು ನಾನೆಂದಿಗೂ ಮರೆಯುವುದಿಲ್ಲ” ಎಂದನು.
ನನ್ನ ಜೀವನದಲ್ಲಿ ಮೊದಲ ಬಾರಿ ಒಬ್ಬ ಪುರುಷನ ಬಾಯಿಂದ ನನ್ನ ಬಗ್ಗೆ ಇಂತಹ ಹೊಗಳಿಕೆಯನ್ನು ಕೇಳಿದ್ದಕ್ಕೇನೋ.. ಸಂತೋಷದ ಜೊತೆಗೆ ಮನಸ್ಸಿನಲ್ಲಿ ಸ್ವಲ್ಪ ಹೆಮ್ಮೆಯೂ ಅನಿಸಿತು. ಅಷ್ಟೇ ಅಲ್ಲ… ಅವನಿಗೆ ನನ್ನ ಬಗ್ಗೆ ಅನಿಸಿದಂತೆಯೇ ನನಗೂ ಅವನ ಬಗ್ಗೆ ಅನಿಸಿತು. ನಿಜಕ್ಕೂ ಅವನ ಮಾತುಗಳನ್ನು ಕೇಳಿದ ನಂತರ, “ನಾನು ಹೇಳಲು ಪ್ರಯತ್ನಿಸುತ್ತಿರುವುದು ಅದನ್ನೇ ಅಲ್ಲವೇ, ನನ್ನ ಮನಸ್ಸನ್ನು ಪದಗಳಾಗಿ ಭಾಷಾಂತರಿಸಿ ಹೇಳಿಬಿಟ್ಟನೋ?’ ಅನಿಸಿತು.
ಸ್ವಲ್ಪ ಹೊತ್ತಿಗೆ ನನ್ನನ್ನು ನಾನು ಸಮಾಧಾನಪಡಿಸಿಕೊಂಡು ಹೇಳಿದೆ.
“ನೀವು ನನ್ನನ್ನು ನೋಡಿಲ್ಲ, ನೋಡಲು ಸಾಧ್ಯವಿಲ್ಲವಾದ್ದರಿಂದ ನಿಮಗೆ ಹತ್ತಿರವಾಗಿ ನಿಮ್ಮ ಮೆಚ್ಚುಗೆ ಪಡೆಯಬೇಕೆಂಬ ಆಸೆ ನನಗೇನಿಲ್ಲ ಬಿಡಿ! ಮೊದಲೇ ಹೇಳಿದೆ.. ನಾನೆಂತವಳೆಂದು! ನಾನೀಗ ಹೇಳಿದಕ್ಕೆ ಬೇರೆ ರೀತಿಯಲ್ಲಿ ಭಾವಿಸಬೇಡಿ!”
ಅವನು ಕೇಳುತ್ತಿದ್ದಾನೆ ಮತ್ತು ಅರ್ಥಮಾಡಿಕೊಂಡಿದ್ದಾನೆ ಎಂದು ಅನಿಸಿತು ಅವನ ಮೌನ. ಸ್ವಲ್ಪ ಹೊತ್ತು ನಾವಿಬ್ಬರೂ ಮಾತನಾಡಲಿಲ್ಲ. ಏನೋ ಕಾರಣಕ್ಕೆ… ಆ ಸ್ವಲ್ಪ ಸಮಯ ನನಗೆ ತುಂಬಾ ಭಾರವೆನಿಸಿತು.
“ತೆಗೆದುಕೊಳ್ಳಿ!” ಎಂದೆ.. ಬ್ಯಾಗಿನಿಂದ ಟಿಫಿನ್‌ಬಾಕ್ಸ್ ಹೊರಗೆ ತೆಗೆದು, ಮುಚ್ಚಳ ತೆರೆದು ಅವನ ಮುಂದೆ ಹಿಡಿದೆ.
“ಏನಿದು…” ಎಂದು ಕೈಯಿಂದ ತಡವಿ, ಮತ್ತೆ ಹಿಂತಿರುಗಿಸುತ್ತಾ ಹೇಳಿದನು..
“ಈಗೇನು ಬೇಡರೀ! ನಾನು ತಿನ್ನಲಾರೆ. ಹಸಿವಿಲ್ಲ!”
“ಹಸಿವಾದರೆ ತಿನ್ನಲು ಇದು ಊಟವಲ್ಲ ಬಿಡಿ. ರವೆ ಉಂಡೆಗಳು! ನಾಚಿಕೆಪಡಬೇಡಿ.. ತೆಗೆದುಕೊಳ್ಳಿ!” ಬಲವಂತ ಮಾಡಿದೆ.
ಅವನು ಸೌಮ್ಯವಾಗಿಯೇ ತಿರಸ್ಕರಿಸಿದನು. ನನಗೇನೋ ‘ಗಿಲ್ಟಿ’ಯಾಗಿ ಅನಿಸಿತು.
“ಇವುಗಳಲ್ಲಿ ಮಾದಕ ದ್ರವ್ಯ ಬೆರೆಸಿದ್ದೇನಂತ ಸಂಶಯವೇ? ನಿಮ್ಮನ್ನು ಅಪಸ್ಮಾರದಲ್ಲಿ ಹಾಕಿ ನಿಮ್ಮ ಹತ್ತಿರವಿರುವುದನ್ನೆಲ್ಲ ದೋಚಿಕೊಳ್ಳುತ್ತೇನೆಂದು ಅನುಮಾನವೇ?” ಎಂದೆ ಆತ್ಮೀಯವಾಗಿ.
“ಓಹ್.. ಹಾಗೆ ಏಕೆ ಯೋಚಿಸಿತ್ತೀರಿ? ಅದಲ್ಲ!” ಎಂದು ನೊಂದುಕೊಂಡು..
“ಹಾಗಿದ್ದರೂ ದೋಚಿಕೊಳ್ಳಲು ನನ್ನ ಹತ್ತಿರ ಏನಿದೆ ಹೇಳಿ? ಒಂದು ವೇಳೆ ನೀವು ದೋಚಿಕೊಳ್ಳಬೇಕೆಂದರೂ.. ನನ್ನ ಹತ್ತಿರವಿರುವುದಕ್ಕಿಂತ ನಿಮ್ಮ ರವೆ ಉಂಡೆಯೇ ಬೆಲೆಬಾಳುವಂಥದ್ದು.. ಗೊತ್ತಾ?!” ನಗುತ್ತಾ ಎಂದನು.
“ಹಾಗಾದರೆ? ನಾನೆಂತವಳೆಂದು ಹೇಳಿದೆನಲ್ಲ.. ಎಲ್ಲರಂತೆಯೇ ನನ್ನಂಥವಳ ಹತ್ತಿರದಿಂದ ಏನೂ ತೆಗೆದುಕೊಳ್ಳಬಾರದೆಂದು ನೀವೂ ಭಾವಿಸುತ್ತಿದ್ದೀರಾ?” ಏಕೋ.. ನನ್ನ ಕಂಠ ಸ್ವಲ್ಪ ಒರಟಾಯಿತು. ಎಷ್ಟೇ ಬೇಡವೆಂದರೂ.. ನನ್ನೊಳಗಿನ ‘ಕೀಳರಿಮೆ’ ಕೆಲವೇ ಕೆಲವು ‘ಆಪ್ತ’ ಜನರೊಂದಿಗೆ ‘ ಹೀಗೆ ವ್ಯಕ್ತವಾಗುತ್ತದೆ.
“ಅಯ್ಯಯ್ಯೋ.. ನೀವೇನು ಹಾಗೆ ಯೋಚಿಸಬೇಡಿರೀ! ನನಗೆ ಸ್ವಲ್ಪ ಹೆಚ್ಚು ನಾಚಿಕೆ!” ಎಂದು..
“ಏನಿದು.. ಕೊಡಿ! ಹೀಗೆ ಕೊಡಿ!” ಎಂದು ಕೈ ಚಾಚಿದ ಆತ್ಮೀಯವಾಗಿ.
ಅವನ ಹಾಗೆ ಆತ್ಮೀಯತೆ ತೋರಿಸುವುದು ನನಗೆ ಸಂತೋಷ ಅನಿಸಿತು. ನನ್ನ ಕೈಯಲ್ಲಿದ್ದ ಟಿಫಿನ್‌ಬಾಕ್ಸ್ ಅವನ ಕೈಗೆ ತಗಲುವಂತೆ ಮುಂದಿಟ್ಟೆ. ಅನಿಶ್ಚಿತದಿಂದಲೇ ತೆಗೆದುಕೊಂಡನು.
“ರವೆ ಉಂಡೆ ತುಂಬಾ ಚೆನ್ನಾಗಿದೆ… ಖರೀದಿಸಿದ್ದೀರಾ? ಮಾಡಿದ್ದೀರಾ?” ಕೇಳಿದ ಸ್ವಲ್ಪ ತಿಂದು ನೋಡಿ.
ನಾನು ನಕ್ಕಿದೆ.
“ಅಡುಗೆ ವಿಷಯದಲ್ಲಿ ತಿನ್ನಲು ಬೇಕಾದ್ದೆಲ್ಲ ಮಾಡಲು ನನಗೆ ಬರುತ್ತದೆ! ನನಗೆ ಖರೀದಿಸುವ ಅಭ್ಯಾಸವಿಲ್ಲ! ನಾನು ಚೆನ್ನಾಗಿಲ್ಲದಿದ್ದ ಮಾತ್ರಕ್ಕೆ ನಾನು ಮಾಡುವುದು ಸಹ ಚೆನ್ನಾಗಿರುವುದಿಲ್ಲ ಅಂತ ಅರ್ಥವಲ್ಲವೇ?” ಅವನನ್ನೇ ನೇರವಾಗಿ ನೋಡುತ್ತಾ ಕೇಳಿದೆ.
ಇದ್ದಕ್ಕಿದ್ದಂತೆ ಅವನ ಮುಖವೆಲ್ಲ ದುಃಖ ಆವರಿಸಿತು. ನೋವನ್ನು ಕಣ್ಣಿನಿಂದ ‘ನೋಡುವ’ ಸ್ಥಿತಿ ಅವನಿಗಿಲ್ಲದಿದ್ದರೂ.. ನೋವಿನ ಬಗ್ಗೆ ತನ್ನ ತಿಳುವಳಿಕೆಯನ್ನು ವ್ಯಕ್ತಪಡಿಸುವ ಸಾಮರ್ಥ್ಯದ ಪ್ರಾಮಾಣಿಕತೆ ಅವನ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸಿತು.
ಅವನು ತಕ್ಷಣ ಬಾಯಿ ತೆರೆದನು… ನಗುವಿನೊಂದಿಗೆ…
“ನಿಮ್ಮನ್ನು ನೀವು ನಿರೂಪಿಸಿಕೊಳ್ಳುವ ಮಾರ್ಗಗಳಲ್ಲಿ ಈ ಅಡುಗೆ ಕೆಲಸ ಸಹಿತ ಒಂದೇನೋ! ಯಾರೋ ಹೇಳಿದರು.. ಒಬ್ಬ ವ್ಯಕ್ತಿ ಪ್ರಿಯವಾದದ್ದೇನಾದರೂ ಕಳೆದುಕೊಂಡಾಗ ಆ ಕ್ಷಣದಲ್ಲೇ ಒಬ್ಬ ಅದ್ಭುತ ಸೃಷ್ಟಿಕರ್ತ ಆಗುತ್ತಾನಂತೆ. ಆ ಕಳೆದುಕೊಂಡದ್ದೇ ಕಡಿಮೆಯೆನಿಸುವ ಇನ್ನೊಂದು ದೊಡ್ಡ ವಿಜಯವನ್ನೇನೋ ಸಾಧಿಸುತ್ತಾನಂತೆ! ನಮ್ಮಂಥವರಿಗೆ ಸರಿಯಾಗಿ ಸರಿಹೊಂದುವ ಮಾತು ಅದು!”
ಆಶ್ಚರ್ಯದಿಂದ ನೋಡಿದೆ ಅವನ ಕಡೆ! ಅವನ ಮಾತುಗಳನ್ನು ಕೇಳುತ್ತಿದ್ದರೆ ನನ್ನೊಳಗಿನ ಕೀಳರಿಮೆ ‘ಆತ್ಮವಿಶ್ವಾಸ’ವಾಗಿ ರೂಪಾಂತರಗೊಳ್ಳುತ್ತಿರುವುದು ತಿಳಿಯುತ್ತಿದೆ. ಅಷ್ಟೇ ಅಲ್ಲ.. ತಾನೂ ‘ನಮ್ಮಂಥ’ ಎಂಬ ಪದ ಬಳಸಿದ್ದು ನನಗೆ ಇಷ್ಟವಾಯಿತು.
“ನನಗಲ್ಲ.. ನಿಮಗೆ ಸಂಪೂರ್ಣವಾಗಿ ಸರಿಹೊಂದುತ್ತದೆ ಆ ಮಾತು! ‘ಅಂಧತ್ವ’ ಎಂಬುದು ಒಂದು ಒಳ್ಳೆಯತನದ ಮುಖವಾಡವಾಗಿದ್ದರೆ.. ಅದರ ಹಿಂದೆ ಅಡಗಿರುವ ‘ಮೇಧೋ ದೃಷ್ಟಿ’ ನಿಮ್ಮದು! ಲೋಕದವರ ದೃಷ್ಟಿಯಲ್ಲಿ ನೀವು ಅಂಧರೇನೋ ಆದರೆ, ಲೋಕದ ಬಗ್ಗೆ ಮಾತ್ರ ನೀವು ಅಂಧರಲ್ಲ!” ಎಂದೆ.
ಅವನು ಉತ್ತರಿಸದೆ ಕೇಳಿ ಸುಮ್ಮನಾದನು.
ಮತ್ತೊಮ್ಮೆ ಮೌನ ನಮ್ಮಿಬ್ಬರ ನಡುವೆ ನರ್ತಿಸಿತು. ಆದರೆ ಈ ಬಾರಿ ಮೌನ.. ಭಾರವಾಗಿ ನನಗೆ ಅನಿಸಲಿಲ್ಲ. ಕಾರಣ.. ಅವನ ಕಣ್ಣುಗಳು ಶೂನ್ಯದಲ್ಲಿ ನೋಡುತ್ತಿದ್ದರೂ, ಅವನು ನೋಡಲು ಸಾಧ್ಯವಾಗದಿದ್ದರೂ.. ಅವನ ಮನೋನೇತ್ರಗಳು ಮಾತ್ರ ನನ್ನನ್ನೇ ನೋಡುತ್ತಿರುವಂತೆ ತೋರುತ್ತದೆ!
ವಿಚಿತ್ರವಾದ ವಿಷಯವೇನೆಂದರೆ… ಆ ನೋಟದಲ್ಲಿನ ಭಾವ ‘ನಾನೊಬ್ಬ ಹೆಂಗಸು’ ಎಂಬ ವಿಷಯವನ್ನು ನೆನಪಿಸುತ್ತಾ.. ನಾನು ಹಿಂದೆಂದೂ ಅನುಭವಿಸದ ‘ಥ್ರಿಲ್’ ಅನ್ನು ನೀಡಿತು.
*****
“ನಿಮ್ಮ ಮನೆಯಲ್ಲಿ ಯಾರ್ಯಾರಿರುತ್ತಾರೆ?” ಇದ್ದಕ್ಕಿದ್ದಂತೆ ಕೇಳಿದೆ.
“ನಾನೂ, ನಮ್ಮ ಅಜ್ಜಿ!”
“ಇನ್ನೂ..?” ಎಂದು ಒಂದು ಕ್ಷಣ ನಿಂತು.. “ಅಂದರೆ.. ಹೆಂಡತಿ, ಮಕ್ಕಳು..?” ಎಂದು ಕೇಳಿದೆ.
“ಹಾಗೇನೂ ಇಲ್ಲ. ನಾನಿನ್ನೂ ಮದುವೆಯಾಗಿಲ್ಲ!” ಹೇಳಿದನು.
“ಅದೇನು..?” ಅಸಂಕಲ್ಪಿತವಾಗಿಯೇ ಕೇಳಿದೆ.
“ಏನೋ.. ಗೊತ್ತಿಲ್ಲ. ಮಾಡಿಕೊಂಡಿಲ್ಲ.. ಅಷ್ಟೇ!”
ಸ್ವಲ್ಪ ಹೊತ್ತಿನ ನಂತರ ಮತ್ತೆ ಕೇಳಿದೆ..
“ನಿಮಗೆ ‘ಜೊತೆ’ಯಾಗಿ ಇನ್ನೊಬ್ಬರು ಇದ್ದರೆ ಚೆನ್ನಾಗಿರುತ್ತಿತ್ತು.. ಅನಿಸಲಿಲ್ಲವೇ?”
ಅವನು ತಲೆ ಅಡ್ಡವಾಗಿ ಅಲ್ಲಾಡಿಸಿದ.
“ನಮ್ಮ ಅಜ್ಜಿ ಇದ್ದರೆ ಸಾಕು! ಮೂರನೇ ವ್ಯಕ್ತಿ ಬಂದರೆ… ನನ್ನಲ್ಲಿ ನೀವಂದ.. ಏನದು ಯಾವುದೋ ‘ದೃಷ್ಟಿ’ ಅಂದಿರಲ್ಲ ಆಗ.. ಮಾಯದೃಷ್ಟಿನಾ?” ಎಂದು ಅವನು ತಡಕಾಡುತ್ತಿದ್ದರೆ..
“ಮೇಧೋ.. ಮೇಧೋದೃಷ್ಟಿ!” ಎಂದು ಸರಿಪಡಿಸಿದೆ.
“.. ನನಗಿರುವ ಆ ದೃಷ್ಟಿ ಕೂಡ ಹೋಗುತ್ತದೆ. ತುಂಬಾ ಅನ್ಯಾಯವಾಗಿಬಿಡುತ್ತದೆ. ಅದಕ್ಕೆ ಬೇಡ”
“ಅದೇನು.. ಹಾಗೆ ಏಕೆ ಅಂದುಕೊಳ್ಳುತ್ತೀರಿ? ಒಂದು ವೇಳೆ ಮೂರನೇ ವ್ಯಕ್ತಿ ಯಾರಾದರೂ ನಿಮ್ಮನ್ನು ಇಷ್ಟಪಟ್ಟು, ಬಯಸಿ ಬಂದರೆ?”
“ಯಾರೂ ಬರುವುದಿಲ್ಲ.. ನನಗೆ ಗೊತ್ತು!” ತುಂಬಾ ಸ್ಪಷ್ಟವಾಗಿ, ಖಚಿತವಾಗಿ ಹೇಳಿದನು.
“ಇಲ್ಲ.. ನಿಮಗೆ ಗೊತ್ತಿಲ್ಲ.. ಬಂದಿದೆ.. ಬಂದುಬಿಟ್ಟಿದೆ!”
“ಏನು..? ಏನು ಹೇಳುತ್ತಿದ್ದೀರಿ?!” ಬೆಚ್ಚಿಬೀಳುತ್ತಾ.. ತಡಬಡಿಸುತ್ತಾ ಕೇಳಿದನು.
ನಾನು ಸಮಾಧಾನ ಮಾಡಿಕೊಂಡು..
“ಗುಂಟೂರು! ಗುಂಟೂರು ಸ್ಟೇಷನ್ ಬಂದುಬಿಟ್ಟಿದೆ ಅಂತ ಹೇಳುತ್ತಿದ್ದೇನೆ!” ಎಂದೆ.
“ಓಹೋ ..!” ಎಂದು ನಿಟ್ಟುಸಿರು ಬಿಡುತ್ತಾ ನಿಧಾನವಾದಂತೆ ಸರಿಹೋದನು.
ರೈಲಿನ ವೇಗ ಕಡಿಮೆಯಾಗಲು ಪ್ರಾರಂಭಿಸಿತು.. ನಿಲ್ದಾಣ ಸಮೀಪಿಸುತ್ತಿರುವ ಸೂಚನೆ! ರೈಲು ಹತ್ತಿದ ಪ್ರತಿ ಬಾರಿಯೂ ‘ಯಾವಾಗ ಬರುತ್ತದೆ!?’ ಎಂದು ಕಾಯುತ್ತಿದ್ದ ಸ್ಟೇಷನ್.. ಈ ಬಾರಿ ತಕ್ಷಣ ಬಂದುಬಿಟ್ಟಿದ್ದು ನನಗೆ ಇಷ್ಟವಾಗಲಿಲ್ಲ. ರೈಲು ಇಳಿಯಬೇಕೆಂದರೆ ಮನಸ್ಸೆಲ್ಲ ದುಃಖವಾಗಿದೆ.
“ನಾನು ಇಳಿಯಬೇಕಾದ ಸ್ಟೇಷನ್ ಬಂದುಬಿಟ್ಟಿದೆ. ಇನ್ನು ಜನಗಣಮನ ಅಧಿನಾಯಕ ಜಯಹೇ..!” ಎಂದೆ ತೆಳುವಾಗಿ ನಗುತ್ತಾ.
ನಗಲಿಲ್ಲ ಅವನು.. ಏನೋ ಹೇಳಬೇಕೆಂದು ತುಂಬಾ ಕಷ್ಟಪಟ್ಟು ನಿಯಂತ್ರಿಸಿಕೊಳ್ಳುತ್ತಿದ್ದಂತೆ ಅನಿಸಿತು ನನಗೆ. ಸ್ಟೇಷನ್ ಹತ್ತಿರವಾಗುತ್ತಿದೆ. ಅದೇನೋ ನಾನೇ ಕೇಳೋಣವೆಂದು ಬಾಯಿ ತೆರೆದೆ.. ಅಷ್ಟರಲ್ಲಿ.. ಅವನೇ ಕೇಳಿದನು.
“ನನ್ನೊಂದಿಗೆ ಮಾತನಾಡಲು ಇನ್ನೇನೂ ಇಲ್ವಾ?”
ಆಶ್ಚರ್ಯದಿಂದ ನೋಡಿದೆ.
“ಏನಿರುತ್ತದೆ ಇನ್ನೂ? ಈಗಾಗಲೇ ತುಂಬಾ ವಿಷಯಗಳನ್ನು ಮಾತನಾಡಿಕೊಂಡಿದ್ದೇವೆ ಅಲ್ಲವೇ! ನೀವೇ ಹೇಳಿ ಏನಾದರೂ.. ಟ್ರೈನ್ ನಿಲ್ಲಲಿದೆ. ಹೇಳಿ ಬೇಗ.. ಪ್ಲೀಸ್!” ಎಂದೆ.
“ನೀವು ಹೈದರಾಬಾದ್‌ನಲ್ಲೇ ಇರುತ್ತೀರಲ್ಲವೇ?”
“ಹೌದು.. ಆದರೆ, ಇಬ್ಬರದೂ ಪಕ್ಕಪಕ್ಕದ ಮನೆಗಳಲ್ಲ ಅಲ್ಲವೇ!” ಎಂದೆ ಅಸಂಕಲ್ಪಿತವಾಗಿ. ಅವನ ‘ಮನಸ್ಸು’ ಓದಿದಂತೆ, ಅದರಲ್ಲಿನ ‘ಭಾವನೆ’ ಅರ್ಥವಾದಂತೆ!
ಜೇಬಿನಿಂದ ಏನೋ ತೆಗೆದು ನನಗೆ ಕೊಡಲು ಹೊರಟಂತೆ ಕೈ ಮುಂದೆ ಚಾಚಿದನು.
“ಏನಿದು?” ಎನ್ನುತ್ತಲೇ ತೆಗೆದುಕೊಂಡು ನೋಡಿದೆ. ವಿಸಿಟಿಂಗ್ ಕಾರ್ಡ್! ಅವನದು !!
*****
“ಇಂದು ಹುಣ್ಣಿಮೆ! ನಿದ್ರೆ ಮಾಡಲು ಮನಸ್ಸಾಗುತ್ತಿಲ್ಲ. ನಮ್ಮ ಮನೆಯಲ್ಲಾದರೆ ಬಯಲಲ್ಲಿ ಕುಳಿತು ಆಕಾಶದಲ್ಲಿ ಚಂದ್ರನ ಕಡೆ ನೋಡುತ್ತಾ ಜಾಗರಣೆ ಮಾಡಬೇಕೆನಿಸುತ್ತದೆ..” ಹೇಳುತ್ತಾ ಮಧ್ಯದಲ್ಲಿ ನಿಲ್ಲಿಸಿದೆ.
“ಹೌದಾ… ಹುಣ್ಣಿಮೆ ಅಷ್ಟು ಚೆನ್ನಾಗಿರುತ್ತದೆಯೇನೋ!..?”
“ಇಲ್ಲ.. ಆ ದಿನ ನಾನು ನಿಮ್ಮೊಂದಿಗೆ ರೈಲಿನಲ್ಲಿ ಮಾತನಾಡಿದ ನಂತರ ಈವರೆಗೂ ನಾನು ಯಾರೊಂದಿಗೂ ಮಾತನಾಡಿಲ್ಲ. ಇಂದು ನಿಮ್ಮೊಂದಿಗೆ ಮಾತನಾಡಲೆಂದೇ ಬಂದಿದ್ದೇನೆ. ಹುಣ್ಣಿಮೆ ಬೆಳದಿಂಗಳನ್ನು ನೋಡುತ್ತಾ ನಮ್ಮ ಮನೆಯಲ್ಲಿ ಒಂಟಿಯಾಗಿ, ಮೌನವಾಗಿ ಇರುವುದಕ್ಕಿಂತ.. ಇಲ್ಲಿ ನಿಮ್ಮ ಮನೆಯಲ್ಲಿ, ನಿಮ್ಮೊಂದಿಗೆ ಮಾತನಾಡುತ್ತಾ, ಮತ್ತು ಇನ್ನೊಂದು ಬದಿಯಲ್ಲಿರುವ ಚಂದ್ರನನ್ನು ನೋಡುತ್ತಾ ಕಳೆಯಬಹುದೆಂಬ ಉದ್ದೇಶದಿಂದ ಬಂದಿದ್ದೇನೆ..”
ಅವನ ಕಣ್ಣಲ್ಲಿ ‘ಬೆಳಕು’ ಕಾಣಿಸಿತು ನನಗೆ.. ವಿಚಿತ್ರವಾಗಿ!
“ಹಾಗಾದರೆ.. ಆ ಹುಣ್ಣಿಮೆಗೆ ಥ್ಯಾಂಕ್ಸ್!” ಎಂದನು ನಗುತ್ತಾ.
ನನಗೆ ತಿಳಿಯದೆಯೇ ನನ್ನ ಹೃದಯ ಆನಂದದಿಂದ ತುಂಬಿ ಹೋಯಿತು. ಅವನು ನಗುವುದನ್ನು ಮತ್ತು ತಮಾಷೆಯಾಗಿ ಮಾತನಾಡುವುದನ್ನು ನೋಡುತ್ತಿದ್ದರೆ.. ನನ್ನಂತೆಯೇ ಅವನೂ ಎಂದಿಗೂ ನಗುವುದು ಎಂಬ ಅದೃಷ್ಟಕ್ಕೆ ಪಾತ್ರನಾಗಿರಲಿಲ್ಲವೇನೋ.. ಅನಿಸಿತು.
“ಪ್ರಕೃತಿಯಲ್ಲಿ ನಿಮಗೆ ಯಾವುದು ಇಷ್ಟ?” ಕೇಳಿದೆ. ನನ್ನ ಮಾತುಗಳಿಗೆ ನಿರಾಸಕ್ತಿಯಿಂದ ಕೈಬೆರಳುಗಳಿಂದ ಕಣ್ಣುಗಳನ್ನು ತಿಕ್ಕಿಕೊಂಡನು.
“ಪ್ರಕೃತಿಯಲ್ಲಿ ಇಷ್ಟವಾದವು ಅಂದರೆ.. ಹೇಗಿದ್ದರೂ ನೋಡಲು ಸಾಧ್ಯವಾಗುವ ವರ ಇಲ್ಲದ ಕಾರಣ ಕೇಳುವುದು ಮಾತ್ರ ನನ್ನ ಭಾಗ್ಯ! ಕೇಳುವುದು, ವಾಸನೆ ನೋಡುವುದು, ರುಚಿ ನೋಡುವುದೇ ಅಲ್ಲವೇ ನನ್ನ ಜೀವನ! ಆ ಮೂರರ ಆಧಾರದ ಮೇಲೆ ಹೇಳುತ್ತಿದ್ದೇನೆ ನನಗೆ ಇಷ್ಟವಾದವೇನು ಎಂದು.. ಸಂಗೀತ ಅಂದರೆ ತುಂಬಾ ಇಷ್ಟ. ಮಲ್ಲಿಗೆ ಹೂವಿನ ವಾಸನೆ ಅಂದರೂ ತುಂಬಾ ಇಷ್ಟ! ಇನ್ನು ರುಚಿಯ ವಿಷಯದಲ್ಲಿ… ರುಚಿ ಇರುವ ಯಾವುದಾದರೂ ನನಗೆ ಇಷ್ಟವೇ!” ಎಂದನು.
“ಮತ್ತೆ.. ‘ಮನಸ್ಸಿ’ಗೆ ಇಷ್ಟವಾದ ರುಚಿಗಳಲ್ಲಿ?” ಎಂದೆ. ಅವನು ತಕ್ಷಣ ಉತ್ತರಿಸಲಿಲ್ಲ.
“ಮನಸ್ಸಿನ ರುಚಿ.. ಮನಸ್ಸಿನ ರುಚಿ..” ತಡಕಾಡುತ್ತ ತನ್ನಲ್ಲೇ ಎರಡು ಮೂರು ಬಾರಿ ಹೇಳಿಕೊಂಡನು.
“ಮನಸ್ಸಿನ ರುಚಿ ಅಂದರೆ.. ಬೇರೆ ರೀತಿಯಲ್ಲಿ ಯೋಚಿಸಬೇಡಿ. ಮನೋಸ್ಥಿತಿಗಳನ್ನು ಅವಲಂಬಿಸಿ ನಿರ್ದಿಷ್ಟ ರುಚಿಯ ಬಗ್ಗೆ ಇಷ್ಟವಿರುತ್ತದಲ್ಲ!” ಎಂದೆ.
“ನನಗೂ ಹಾಗೇ ಅನಿಸುತ್ತಿದೆ. ಆದರೆ, ಅದೆಲ್ಲ ಹೇಗೆ ಸಾಧ್ಯವಾಗುತ್ತದೆ?” ಎಂದೆ ನಿರಾಶೆಯಿಂದ.
“ಗೊತ್ತು..” ಗೊತ್ತಿರುವಂತೆ ತಲೆದೂಗುತ್ತಾ ನಕ್ಕನು.
‘ಏನು ಹೇಳುತ್ತಾನೋ…’ ಎಂದು ಎದುರುನೋಡತೊಡಗಿದೆ.
ನಿಜವೇ.. ಮನಸ್ಸುಗಳಲ್ಲಿ ಕೂಡ ತುಂಬಾ ವಿಧಗಳಿವೆ. ಅವನೇನೂ ಮಾತನಾಡಲಿಲ್ಲ. ನನಗೇನು ಮಾತನಾಡಬೇಕೆಂದು ಗೊತ್ತಾಗಲಿಲ್ಲ. ಎಲ್ಲರ ಮನೋಸ್ಥಿತಿಯೂ ಒಂದೇ ರೀತಿ ಇರುವುದಿಲ್ಲ. ನನಗೆ ಇಷ್ಟವಾದ, ಪ್ರಿಯವಾದ ಮನಸ್ಸಿನ ರುಚಿ’.. ತನ್ನೊಳಗಿನ ಲೋಪಗಳನ್ನು, ಕೊರತೆಗಳನ್ನು ಮುಚ್ಚಿಟ್ಟುಕೊಳ್ಳದೆ ಆತ್ಮಸಾಕ್ಷಿಯಾಗಿ, ಪ್ರಾಮಾಣಿಕವಾಗಿ, ಶುದ್ಧವಾಗಿ ಮಾತನಾಡುವ ಅವನ ವರ್ತನೆ!
“ನನಗೆ ನಿಮ್ಮ ಮನೋಸ್ಥಿತಿ ಇಷ್ಟವಾಯಿತು. ನಿಮ್ಮೊಳಗಿನ ಸದ್ಗುಣಗಳು ಸಹ! ನಿಮ್ಮ ಬಗ್ಗೆ ನಿಮಗೇ ತಿಳಿದಿರುವುದಲ್ಲದೆ.. ನಿಮ್ಮ ಬಗ್ಗೆ ಹತ್ತು ಜನರೂ ಅಂದುಕೊಳ್ಳುವುದು, ಹೇಳಿಕೊಳ್ಳುವುದು ಕೂಡ ಹೇಳಿದಿರಿ. ನಿಮ್ಮ ತಪ್ಪುಗಳೂ, ನಿಮ್ಮ ಗುಣಗಣಗಳೂ, ನಿಮ್ಮೊಳಗಿನ ದೋಷಗಳೂ.. ಎಲ್ಲವನ್ನೂ ವಿವರಿಸಿದಿರಿ. ಇಷ್ಟು ವರ್ಷಗಳಿಗೆ, ಇಷ್ಟು ವರ್ಷಗಳಿಗೆ ‘ಮನುಷ್ಯ’ ಎಂಬ ಪದಕ್ಕೆ ಸರಿಯಾದ ಅರ್ಥದಂತೆ ನೀವು ನನಗೆ ಕಾಣಿಸಿದಿರಿ..”
“ಕಾಣಿಸಿದಿನಾ..?”
ಆನಂದ, ಹೆಮ್ಮೆ, ಉತ್ಸಾಹ.. ಒಂದೇ ಬಾರಿ ನನ್ನ ಸ್ವರದಲ್ಲಿ ಧ್ವನಿಸಿದವು.
“ಹೌದು.. ಕಾಣಿಸಿದಿರಿ. ನನ್ನೊಳಗಿನ ಅಂತರಾತ್ಮಕ್ಕೆ! ನನ್ನ ಮನಸ್ಸಿಗೆ, ನನ್ನ ಮನೋದೃಷ್ಟಿಗೆ! ನಿಮ್ಮ ಮಾತುಗಳಲ್ಲಿ ಹೇಳುವುದಾದರೆ ನನ್ನ ಮೇಧೋ ದೃಷ್ಟಿಗೆ ಕಾಣಿಸಿದಿರಿ.. ಕಾಣಿಸುತ್ತಿದ್ದೀರಿ! ನಾನು ನಿಮ್ಮನ್ನು ನೋಡಬಲ್ಲೆ!”
ಅವನನ್ನು ಸಂಭ್ರಮದಿಂದ ನೋಡಿದೆ! ನನ್ನ ಬಗ್ಗೆ ಅವನ ಮನಸ್ಸಿನಲ್ಲಿ ಅಡಗಿಸಿಟ್ಟುಕೊಂಡಿದ್ದ ಭಾವನೆಗಳನ್ನು ಯಾವ ರೀತಿ, ಯಾವ ಸಮಯದಲ್ಲಿ, ಎಂತಹ ಸಂದರ್ಭದಲ್ಲಿ ವ್ಯಕ್ತಪಡಿಸುತ್ತಿದ್ದಾನೋ ಅರ್ಥವಾಗಿ.. ಒಮ್ಮೆಲೆ ಸ್ತ್ರೀ ಸಹಜವಾದ ನಾಚಿಕೆ ನನ್ನನ್ನು ಆವರಿಸಿತು.
ಅದಾದ ನಂತರ ಇಬ್ಬರೂ ಎಷ್ಟೋ ಮಾತುಗಳನ್ನು ಹೇಳಿಕೊಂಡೆವು. ಆಕಾಶದಲ್ಲಿ ಚಂದ್ರನ ಕಡೆ ನೋಡುತ್ತಾ, ತಂಪಾದ ಬೆಳದಿಂಗಳನ್ನು ಆಸ್ವಾದಿಸುತ್ತಾ, ಆಹ್ಲಾದಕರವಾದ ಅವನ ಮಾತುಗಳನ್ನು ಕೇಳುತ್ತಿದ್ದರೆ.. ಗಂಟೆಗಳು ಕೂಡ ಕ್ಷಣಗಳಂತೆ ಕಳೆದುಹೋದವು.
“ಇನ್ನು… ಹೋಗುತ್ತೇನೆ!” ಎಂದು ಎದ್ದೆ.
“ಆಗಲೇನಾ..?” ದುಃಖದಿಂದ ಹೇಳಿದನು.
“ಏನು..? ಎಂದಿಗಾದರೂ ಹೋಗಲೇಬೇಕಲ್ಲವೇ?” ಎಂದೆ. ನಿಜವಾಗಿ ನನಗೂ ಹೋಗಬೇಕೆನಿಸಿರಲಿಲ್ಲ. ಆದರೆ, ಅನಿವಾರ್ಯವಲ್ಲವೇ?! ನಾನು ಹೇಳಿದುದಕ್ಕೆ ಅವನೇನು ಉತ್ತರಿಸುತ್ತಾನೋ ಎಂದು ಕಾಯುತ್ತಿದ್ದೆ. ಅವನು ತನ್ನೊಳಗೆ ತರ್ಕವಿತರ್ಕ ಮಾಡುತ್ತಿರುವಂತೆ, ಸಂದಿಗ್ಧದಲ್ಲಿ ಉಳಿದುಕೊಂಡ ತುಂಬಾ ಹೊತ್ತು. ಆ ನಂತರ ಹೇಳಿದನು..
“ಹುಣ್ಣಿಮೆ.. ಇಷ್ಟು ಅದ್ಭುತವಾಗಿರುತ್ತದೆಯೆಂದು ನನಗಿಲ್ಲಿಯವರೆಗೂ ಗೊತ್ತಿರಲಿಲ್ಲ!”
“ನನಗೂ..!” ನನ್ನ ಮನಸ್ಸಿನ ಅನುಭವ ಅವನ ಮಾತುಗಳಲ್ಲಿ ವ್ಯಕ್ತವಾಗುತ್ತಿದ್ದಂತೆ ಹೇಳಿದೆ.
“ಇಂತಹ ಹುಣ್ಣಿಮೆಗಳು ಪ್ರತಿದಿನ ಬಂದರೆ ಎಷ್ಟು ಚೆನ್ನಾಗಿರುತ್ತಿತ್ತು..!”
ನನ್ನ ಮನಸ್ಸನ್ನು ಓದುತ್ತಿರುವಂತೆ ಪ್ರತಿ ಭಾವನೆಯನ್ನೂ ಅವನು ಮಾತುಗಳಲ್ಲಿ ತಿಳಿಸುತ್ತಿದ್ದರೆ ಅವನ ಕಡೆ ವಿಸ್ಮಯದಿಂದ ನೋಡಿದೆ.
“ಸರಿ ಹಾಗಾದರೆ… ಹೋಗೋಣ!” ನಾನು ಇಷ್ಟವಿಲ್ಲದೆ ಎದ್ದು ನಿಂತುಕೊಂಡೆ.
ಆಗಲೂ ಅವನೇನೂ ಮಾತನಾಡಲಿಲ್ಲ. ಸ್ವಲ್ಪ ಹೊತ್ತು ಕಾಯ್ದು..
“ಓಕೆ. ಗುಡ್‌ನೈಟ್!” ಎಂದು ಅಲ್ಲಿಂದ ಹೊರಟೆ. ಆಗ ಇದ್ದಕ್ಕಿದ್ದಂತೆ ಹೇಳಿದನು..
“ಆಸೆಗಳನ್ನು ಹುಟ್ಟಿಸುವುದು ನಿಮಗೆ ಚೆನ್ನಾಗಿ ಗೊತ್ತು..!”
ಆಶ್ಚರ್ಯದಿಂದ ಅವನ ಕಡೆ ನೋಡಿದೆ.
“ನಾನು ನಿಮ್ಮಲ್ಲಿ ಆಸೆಗಳನ್ನು ಹುಟ್ಟಿಸಿದೆನಾ..?” ಎಂದೆ.
“ಹೌದು! ಸಮಾಂತರ ರೇಖೆಗಳು ಎಂದಿಗೂ ಸೇರುವುದಿಲ್ಲವೇನೋ ಆದರೆ.. ನಾವು ಒಟ್ಟಾಗಿ ಇರುತ್ತೇವೆಂಬ ನಂಬಿಕೆ ನನಗಿದೆ!” ಎಂದನು.
“ಹೇಗೆ..?” ಅಪ್ರಯತ್ನವಾಗಿಯೇ ಕೇಳಿದೆ
“ಏಕೆಂದರೆ ಎಲ್ಲಾ ಗಂಡ ಹೆಂಡತಿಯರಂತೆ ಪರಸ್ಪರರ ನ್ಯೂನತೆಗಳನ್ನು ಎತ್ತಿ ತೋರಿಸುವ ಪರಿಸ್ಥಿತಿ ನಮ್ಮಿಬ್ಬರ ನಡುವೆ ಬರುವುದಿಲ್ಲವಾದ್ದರಿಂದ!”
“ಎಂತಹ ಧೀಮಾ? ಎಲ್ಲಾ ಹೆಂಡತಿಯರಂತೆ ನಾನೂ ಬದಲಾದರೆ?”
“ನೀನು ಬದಲಾಗುವುದಿಲ್ಲ..!”
ಅವನ ‘ನೀನು’ ಎಂಬ ಏಕವಚನ ಸಂಬೋಧನೆಯಲ್ಲಿ ಆತ್ಮೀಯತೆ, ಅನುರಾಗ ಮಾತ್ರವಲ್ಲ.. ನನ್ನ ಮನಸ್ಸನ್ನು ತನ್ನ ಮನಸ್ಸಿನೊಂದಿಗೆ ಆತ್ಮೀಯವಾಗಿ ಸ್ಪರ್ಶಿಸಿದ ಅನುಭವ, ತನ್ನ ಹೃದಯದಿಂದ ನನ್ನ ಹೃದಯವನ್ನು ಆತ್ಮೀಯವಾಗಿ ಅಪ್ಪಿಕೊಂಡ ನಿಶ್ಚಿಂತೆಯೂ ಧ್ವನಿಸಿತು.
“ನಾನು ಬದಲಾಗುವುದಿಲ್ಲವೆಂದು ಅಷ್ಟು ನಂಬಿಕೆ ನಿಮಗೆ? ..” ಅವನ ಉದ್ದೇಶ ಇನ್ನಷ್ಟು ಸ್ಪಷ್ಟವಾಗಿ ತಿಳಿದುಕೊಳ್ಳಬೇಕೆಂಬ ಪ್ರಯತ್ನ.
“ಎರಡು ಒಂದುಗಳು ಪಕ್ಕಪಕ್ಕ ಸೇರಿದರೆ ಎಷ್ಟಾಗುತ್ತದೆ?” ಇದ್ದಕ್ಕಿದ್ದಂತೆ ಕೇಳಿದನು.
ಅಸಂಬದ್ಧ ಪ್ರಶ್ನೆಯಂತೆ ಅನಿಸಿ.. ಆಶ್ಚರ್ಯದಿಂದ ಅವನ ಕಡೆ ನೋಡಿ, ತಕ್ಷಣ ಹೇಳಿದೆ.
“ಹನ್ನೊಂದು!”
ಅವನು ನಕ್ಕನು.
“ನೋಡಿದ್ರಾ! ನೀವೂ, ನಾನೂ ಸೇರಿದರೆ ‘ಎರಡು’ ಅಲ್ಲ.. ಹನ್ನೊಂದು! ಅದಕ್ಕೆ ನೀವು ಬದಲಾಗುವುದಿಲ್ಲ. ನಾವು ಕಾಲಕಾಲಕ್ಕೂ ಅನ್ಯೋನ್ಯವಾಗಿ ಇರುತ್ತೇವೆ!” ಎಂದು ನನ್ನ ಕೈಯನ್ನು ತನ್ನ ಕೈಗೆ ತೆಗೆದುಕೊಂಡನು.
ವಿಚಿತ್ರ.. ನನ್ನ ಕೈ ‘ತೆಗೆದುಕೊಳ್ಳಲು ಅವನು ತಡಕಾಡಲಿಲ್ಲ.
*****
ಮೂವತ್ತೈದು ವರ್ಷಗಳು ಕಳೆದಿವೆ..
ಒಂದು ಹೆಣ್ಣು ಮಗು.. ಒಂದು ಗಂಡು ಮಗು!
ನಮ್ಮಂತಲ್ಲ. ಯಾವುದೇ ಕೊರತೆಯಿಲ್ಲದ ಸಂಪೂರ್ಣ ಆರೋಗ್ಯವಂತರು. ಯಾವುದೇ ವೈಕಲ್ಯವಿಲ್ಲದ ಪರಿಪೂರ್ಣವಂತರು!
ಮದುವೆಗಳನ್ನೂ ಅದ್ಧೂರಿಯಾಗಿಯೇ ಮಾಡಿದೆವು. ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವುದೇ ನಮ್ಮ ದಿನಚರಿ ಈಗ!
ಇಷ್ಟು ವರ್ಷಗಳ ನಮ್ಮ ವೈವಾಹಿಕ ಜೀವನದಲ್ಲಿ ಎಂದಿಗೂ ಒಂದೇ ಒಂದು ಕೆಟ್ಟ ಮಾತು ಆಡಿಕೊಂಡಿಲ್ಲ ಇಬ್ಬರೂ. ಮುಖ್ಯವಾಗಿ.. ನಮ್ಮವರ ‘ಅಂಧತ್ವ’ ನನಗೆಂದಿಗೂ ನೆನಪೇ ಬರಲಿಲ್ಲ. ಹಾಗೆಯೇ.. ದೇಹವೆಲ್ಲ ಬಿಳಿ ತೇಪೆಗಳಿಂದ ತುಂಬಿಹೋಗಿದ್ದ ನನ್ನ ‘ಚರ್ಮವ್ಯಾಧಿ’ ಕೂಡ ಅವರಿಗೆ ನೆನಪಾಗಲಿಲ್ಲ.
ಇಷ್ಟಕ್ಕೂ.. ನನ್ನ ಹೆಸರೇನು ಎಂದು ಹೇಳಲಿಲ್ಲವಲ್ಲ ನಿಮಗೆ?
“ಶೋಭನಾ ಚಲಪತಿ!’
ಏನು.. ನಮ್ಮವರ ಹೆಸರೇನು ಎಂದು ಹೇಳಬೇಕೇನು?
ಉಹು.. ಹೇಳುವುದಿಲ್ಲ! ನನ್ನ ಹೆಸರಿನಿಂದ ಕೂಡ ಅವರನ್ನು ಬೇರ್ಪಡಿಸುವುದು
ನಾನು ಸಹಿಸಲಾರೆ!

ಕೋಡಿಹಳ್ಳಿ ಮುರಳಿಮೋಹನ್ ತೆಲುಗು ಬರಹಗಾರ, ಸಂಪಾದಕ, ಅನುವಾದಕ ಮತ್ತು ತೆಲುಗು ವಿಕಿಪೀಡಿಯನ್. ಡಾ.ಎಚ್. ನರಸಿಂಹಯ್ಯನವರ ಆತ್ಮಕಥೆ “ಹೋರಾಟದ ಹಾದಿ” ಯನ್ನ ತೆಲುಗು ಭಾಷೆಯಲ್ಲಿ “ಪೋರಾಟಪಥಂ” ಹೆಸರಿನಲ್ಲಿ ಅನುವಾದಿಸಿದ್ದಾರೆ. ಊರು ಹಿಂದೂಪುರ ಬಳಿಯ ಲೇಪಾಕ್ಷಿ ಮಂಡಲದ ಕೋಡಿಹಳ್ಳಿಯವರಾದ ಇವರು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದು, ಪ್ರಸ್ತುತ ದಕ್ಷಿಣ ಮಧ್ಯ ರೈಲ್ವೇಯಲ್ಲಿ ಹಿರಿಯ ವಿಭಾಗದ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅನೇಕ ವರ್ಷಗಳ ಹಿಂದೆ ಓದಿದ್ದ, ಪುನಃ ಮೊನ್ನೆ ಮೊನ್ನೆಯಷ್ಟೇ ಓದಿದ ಯಂಡಮೂರಿಯವರ ‘ಆನಂದೋ ಬ್ರಹ್ಮ’ ಕಾದಂಬರಿಯ ಕೆಲವು ಪುಟಗಳನ್ನು ಓದಿದ ಹಾಗೆ ಖುಷಿ ಆಯಿತು. ಮನಸ್ಸು ತಟ್ಟಿತು. ಬರವಣಿಗೆಯ ಶೈಲಿ, ವಸ್ತು ಎಲ್ಲವೂ ಸೊಗಸು
Vasantha kumar ಧನ್ಯವಾದಗಳು