ತೊಡೆಯ ಮೇಲೆ ಪೆಟ್ಟು ತಿಂದ ಶಿವುವಿಗೆ ತಾನು ಮಂಜುವನ್ನು ಸೋಲಿಸಲಾರೆ ಎಂಬುದು ಅರ್ಥವಾಯಿತೋ ಏನೋ? ಇನ್ನೂ ಬೀಳಲಿರುವ ಒದೆಗಳಿಂದ ತಪ್ಪಿಸಿಕೊಳ್ಳಲು ಇರುವ ಏಕಮಾತ್ರ ಉಪಾಯವೆಂಬಂತೆ ಅವನು ತನ್ನ ಕಾಲು ಹಿಡಿದುಕೊಂಡು ನೆಲಕ್ಕೆ ಬಿದ್ದುಕೊಂಡು “ಅಯ್ಯೋ.. ಅಮ್ಮಾ.. ಅಯ್ಯಯ್ಯಮ್ಮಾ” ಎನ್ನುತ್ತಾ ಒದ್ದಾಡತೊಡಗಿದ. ತಾನಾಗಿ ಹೊಡೆಯಲಾಗದ ಮಂಜುವಿಗೆ ಮೇಷ್ಟರ ಕೈಯಿಂದ ಹೊಡೆಸುವ ಉಪಾಯವೂ ಅವನದಾಗಿತ್ತೋ ಏನೋ? ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿ, ಬೇಗ ಈ ವಿಷಯ ಮೇಷ್ಟರನ್ನು ಮುಟ್ಟುವಂತೆ ಮಾಡಲೆಂದು ಎದೆ, ಕಾಲು ಹಿಡಿದುಕೊಂಡು ಒದ್ದಾಡುತ್ತಾ “ಅಯ್ಯೋ.. ಅಮ್ಮಾ.. ನಂಗ್ ಉಸಿರಾಡುಕಾತಿಲ್ಯೋ.. ಅಪ್ಪಯ್ಯೋ.. ಅಬ್ಯೋ” ಎಂದು ಇನ್ನೇನು ಐಸಿಯುಗೆ ಸೇರಿಸಬೇಕಾದ ರೋಗಿಯಂತೆ ನಟಿಸತೊಡಗಿದ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ
ಅದೊಂದು ಶಾಲೆ; ಅಲ್ಲಿ ಪೀಟಿ ಟೀಚರ್ರೊಬ್ಬರಿದ್ದರು. ದಪ್ಪ ದೇಹದವರಾಗಿದ್ದ ಅವರಿಗೆ ತನ್ನನ್ನು ಎಲ್ಲರೂ ಅಪಹಾಸ್ಯ ಮಾಡುತ್ತಾರೆ ಎಂಬ ಕೀಳರಿಮೆಯೂ ಇತ್ತು. ಹೇಳೀ ಕೇಳೀ ಕೈಯಲ್ಲಿ ಕೋಲು, ಸೀಟಿ ಹಿಡಿದುಕೊಂಡೇ ಹುಟ್ಟಿದ್ದ ಪೀಟಿ ಟೀಚರ್. ಜೊತೆಗೆ ತನ್ನನ್ನು ಜನ ಅಪಹಾಸ್ಯ ಮಾಡುತ್ತಾರೆ ಎಂಬ ಕೋಪ ಬೇರೆ. ಬ್ರಹ್ಮಾಸ್ತ್ರ ಹಾಗೂ ಪಾಶುಪತಾಸ್ತ್ರಗಳೆರಡೂ ಸೇರಿದ ಮಾರಣಾಂತಿಕ ಜೋಡಿಯಂತಿದ್ದ ಇವೆರಡನ್ನೂ ತಮ್ಮೊಳಗಿಟ್ಟುಕೊಂಡ ಅವರು ಯಾವಾಗ ಬೇಕಾದರೂ ಮೂರನೇ ಕಣ್ಣು ಬಿಡಬಹುದಾದ ಉರಿಗೋಪದ ಮಹಾದೇವನಂತೆ ಓಡಾಡಿಕೊಂಡಿದ್ದರು. ಇಂತಿದ್ದಾಗ ಸಬ್ಜೆಕ್ಟ್ ಒಂದಕ್ಕೆ ಟೀಚರ್‌ರ ಅಭಾವ ಆಗಿದ್ದರಿಂದ ಅವರನ್ನೇ ಪಾಠ ಮಾಡಲಿಕ್ಕೆ ಹಚ್ಚಲಾಯಿತು. ಹೀಗೆ ಯಾವಾಗ ಬೇಕಾದರೂ ಆಸ್ಫೋಟಗೊಳ್ಳಬಹುದಾದ ಜ್ವಾಲಾಮುಖಿಯೊಂದು ಮಕ್ಕಳ ತರಗತಿಗೇ ಬಂದು ಕುಂತಂತಾಯಿತು.
ಬಾಯಿಗಿಂತ ಜಾಸ್ತಿ ಕೈಯಲ್ಲಿ, ಅದರಲ್ಲೂ ಕೈಯಲ್ಲಿರುವ ಕೋಲಲ್ಲಿ ಮಾತಾಡಿ ಅಭ್ಯಾಸವಿದ್ದ ಆಕೆಗೆ ತಾಳ್ಮೆಯಿಂದ ಪಾಠ ಮಾಡುವುದು ಸವಾಲಿನ ಕೆಲಸವೇ ಆಗಿತ್ತು. ಹೀಗಿರುವಾಗಲೇ ಸ್ವಾತಂತ್ರ್ಯ ದಿನ ಬಂತು. ಧ್ವಜಾರೋಹಣ, ಪ್ರಭಾತ್ ಪೇರಿಗಳೆಲ್ಲ ಮುಗಿದು ಸಭಾ ಕಾರ್ಯಕ್ರಮಕ್ಕೆ ತಯಾರಿ ಮಾಡಲಾಗುತ್ತಿತ್ತು. ಪ್ರಭಾತ್ ಪೇರಿಯಲ್ಲಿ ಕಪಿ ಸೈನ್ಯದಂಥಾ ವಿದ್ಯಾರ್ಥಿಗಳನ್ನು ನಿಯಂತ್ರಿಸುತ್ತಾ ಬಿಸಿಲಲ್ಲಿ ಓಡಾಡಿದ್ದರಿಂದಲೋ ಏನೋ ಪೀಟಿ ಟೀಚರ್ ದಣಿದಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಹಂಚಲೆಂದು ಇಟ್ಟಿದ್ದ ಸಿಹಿ ತಿಂಡಿಗಳ ಪೈಕಿ ಒಂದನ್ನೆತ್ತಿಕೊಂಡು ಬಾಯಿಗಿಟ್ಟುಕೊಂಡರು.
ಅಲ್ಲಿ ಮಂಜ ಎನ್ನುವ ತುಂಟ ಹುಡುಗನೊಬ್ಬನಿದ್ದ. ಬಾಯಲ್ಲೇ ಬೊಂಬಾಯಿ ಹೊಂದಿದ್ದ ಅವನು ಸಹಪಾಠಿಗಳಿಗೆ ಮಾತ್ರವಲ್ಲದೇ ಟೀಚರ್‌ಗಳ ಎದುರೂ ತಲೆಹರಟೆ ಮಾಡುತ್ತಿದ್ದ. ಇಂತಿದ್ದವನ ಕಣ್ಣಿಗೆ ಈಗ ಸ್ವೀಟು ತಿನ್ನುತ್ತಿದ್ದ ಪೀಟಿ ಟೀಚರ್ ಬಿದ್ದರು! ಅವರನ್ನು ನೋಡಿದವನೇ ಮಂಜ “ವೀಣಾ ಮೇಡಂ, ಬನ್ನಿ ಬನ್ನಿ. ಪೀಟಿ ಮೇಡಂ ಒಬ್ರೇ ಎಲ್ಲ ಸ್ವೀಟೂ ತಿಂತಿದಾರೆ. ನಿಮಗೆ ಉಳಿಸಲ್ಲ ಬನ್ನಿ” ಎಂದು ಕೂಗಿಬಿಟ್ಟ. ಅಷ್ಟೇ! ಒಳಗಿದ್ದ ಪೀಟಿ ಮೇಡಂ ಕೆಂಡಾಮಂಡಲವಾದರು. ತಿಂಡಿಗೆ ಕೈ ಹಾಕಿ ವಿದ್ಯಾರ್ಥಿಯ ಕೈಯಲ್ಲಿ ಸಿಕ್ಕಿ ಬಿದ್ದ ಮುಖಭಂಗ ಒಂದೆಡೆಯಾದರೆ ಅದನ್ನವನು ಚುನಾವಣಾ ಫಲಿತಾಂಶದಂತೆ ಸಾರ್ವತ್ರಿಕವಾಗಿ ಘೋಷಣೆ ಮಾಡಿದನೆಂಬ ಕೋಪ ಇನ್ನೊಂದೆಡೆ! ನೋಡ ನೋಡುತ್ತಿದ್ದಂತೆಯೇ ಭದ್ರಕಾಳಿಯಾದ ಅವರು “ಏನೋ ಅಂದೆ? ತಲೆ ತಿರುಗ್ತಿದೆ ಅಂತ ಒಂದು ಸಣ್ಣ ಪೀಸು ತಿಂದ್ರೆ ಅಷ್ಟೂ ತಿಂದ್ರು ಅಂತ ಹಾಸ್ಯ ಮಾಡ್ತೀಯಾ? ಬಾರೋ ಇಲ್ಲಿ. ಹತ್ರ ಬಾರೋ” ಎಂದು ಆರ್ಭಟಿಸುತ್ತಾ, ಅಲ್ಲೇ ಇದ್ದ ರೂಲು ದೊಣ್ಣೆಯನ್ನು ಗದೆಯಂತೆ ಎತ್ತಿಕೊಂಡು, ಗದಾಯುದ್ಧ ಪ್ರವೀಣೆಯಂತೆ ಓಡಿ ಬಂದರು. ಸುನಾಮಿಯೇ ಮನುಷ್ಯಳಾಗಿ ಬಂದಂತೆ ಬಂದ ಅವರನ್ನು ನೋಡಿದ ಮಂಜನಿಗೀಗ ತನ್ನ ಡೊಕ್ಕೆ ಮುರಿಯುವುದು ಖಾತ್ರಿ ಎಂಬುದು ಗೊತ್ತಾಯಿತು. ತಡ ಮಾಡದೇ ಅವನು “ಅಯ್ಯಯ್ಯೋ, ಅಪ್ಪಯ್ಯೋ” ಎಂದು ಆರ್ತನಾದ ಮಾಡುತ್ತಾ ಶಾಲೆಯ ಕಟ್ಟೆಯಿಂದ ನೆಗೆದು ಹಾರಿ ಹೊರಗೋಡತೊಡಗಿದ. ಅವನ ಕೂಗನ್ನು ಕೇಳಿ ಅತ್ತ ನೋಡಿದ ವಿದ್ಯಾರ್ಥಿಗಳಿಗೆ ಬಿಟ್ಟ ಬಾಣದಂತೆ ನೆಗೆದೋಡುತ್ತಿರುವ ಮಂಜನೂ, ಅವನ ಹಿಂದೆಯೇ ಕೀಚಕ ವಧೆಗೆ ಪೂರ್ತಿ ತಯಾರಾಗಿರುವ ಭೀಮನಂತೆ ಕೋಲಾಹಲ ಮಾಡುತ್ತಾ ತಾವೂ ಕಟ್ಟೆ ನೆಗೆದು ಬರುತ್ತಿರುವ ಪೀಟೀ ಟೀಚರ್ರೂ ಕಂಡರು. ಮಂಜನಾದರೂ ತನಗೂ ಸಾವಿಗೂ ನಡುವೆ ಇರುವುದು ಮೂರೇ ಹೆಜ್ಜೆ ಎಂಬಂತೆ ಓಡುತ್ತಾ ಶಾಲೆಯ ಅಂಗಳ ದಾಟಿದ. ಅಲ್ಲಿ ಅಡ್ಡ ಬಂದ ಗೇಟನ್ನು ತೆರೆಯಲೂ ಸಮಯ ಸಾಲದೇ ಕಪೀ ಸೈನ್ಯದ ದಂಡನಾಯಕನಂತೆ ಛಂಗನೆ ಹಾರಿ ಆಚೆ ರಸ್ತೆಗೆ ಬಿದ್ದ. ಬಿದ್ದವನೇ ರೋಷಾವೇಷದಲ್ಲಿ “ಭಾರತ್ ಮಾತಾಕೀ ಜೈ”, “ಬ್ರಿಟೀಷರೇ ಭಾರತ ಬಿಟ್ಟು ತೊಲಗಿ” ಎಂದು ಘೋಷಣೆ ಕೂಗುತ್ತಾ ರಸ್ತೆಯಾಚೆಯ ಬೇಲಿ ನೆಗೆದು, ಅತ್ತಲಿನ ಗದ್ದೆಯಲ್ಲಿ ಬಿದ್ದು ಕಣ್ಮರೆಯಾದ. ಇತ್ತ ತಲೆಗೇರಿದ್ದ ಉರಿಗೋಪದ ನಡುವೆಯೂ ಅವನ ಓಟದ ವೇಗ ಕಂಡು ಅಚ್ಚರಿಗೊಳಗಾದ ಪೀಟಿ ಟೀಚರ್ ಗೇಟಿನ ಬಳಿ ನಿಂತು ಬೇಟೆ ಕೈಜಾರಿದ ಕಾಳಿಂಗ ಸರ್ಪದಂತೆ ಭುಸುಗುಡುತ್ತಾ ಕೋಲನ್ನು ಅವನು ಹೋದ ದಿಕ್ಕಿಗೆ ಬಿಸಾಕಿದರು. ಮುಗಿದು ಹೋದ ಯುಗವೊಂದರ ಮಾರಾಮಾರಿಯೊಂದು ಇದ್ದಕ್ಕಿದ್ದಂತೆ ಮರು ಪ್ರಸಾರವಾದಂತೆ ಕಂಡ ಈ ದೃಶ್ಯಾವಳಿಯನ್ನು ಭಯಭೀತರಾಗಿ ನೋಡಿದ ವಿದ್ಯಾರ್ಥಿಗಳೆಲ್ಲಾ ಎಲ್ಲಿ ಅವರ ಕೋಪ ನಮ್ಮತ್ತ ತಿರುಗುವುದೋ ಎಂಬ ಆತಂಕದಲ್ಲಿ ಅಲ್ಲಿಂದ ಕಾಲ್ಕಿತ್ತರು.
****
ವಿಜ್ಞಾನದ ತರಗತಿ ನಡೆದಿತ್ತು. ಮೇಷ್ಟರು ‘ಮನುಷ್ಯನ ಜೀರ್ಣಾಂಗ ವ್ಯೂಹದ ಚಿತ್ರ ಬರೆಯಿರಿ’ ಎಂದಿದ್ದರು. ಹುಡುಗರಿಗೆಲ್ಲ ಮನುಷ್ಯ ಬಾಯಿಂದ ಉಣ್ಣುತ್ತಾನೆ ಎನ್ನುವುದರ ಹೊರತಾಗಿ, ಮುಂದೆ ಉಂಡಿದ್ದು ಎಲ್ಲಿ ಹೋಗುತ್ತದೆ, ಏನೇನಾಗುತ್ತದೆ ಎನ್ನುವುದರ ಯಾವುದೇ ನೆನಪೂ ಇರಲಿಲ್ಲ. ಬಾಯಿಂದ ಹಿಡಿದು ಕಿಡ್ನಿಯ ತನಕ ಯಾವ್ಯಾವ ಅಂಗ ನೆನಪಿಗೆ ಬರುತ್ತದೋ ಅದನ್ನು ಚಿತ್ರಿಸುತ್ತಿದ್ದರು. ಕೆಲವರ ಚಿತ್ರದಲ್ಲಿ ಕರುಳು ಆಹಾರ ಜೀರ್ಣ ಮಾಡುವ ಅಂಗವಾಗಿದ್ದರೆ ಇನ್ನು ಕೆಲವರದ್ದರಲ್ಲಿ ಹೃದಯ ಆಹಾರವನ್ನು ಅರೆಯುತ್ತಿತ್ತು. ಇನ್ನೂ ಕೆಲವರು ಮೂತ್ರಕೋಶದಲ್ಲಿ ಮನುಷ್ಯ ತಿಂದಿದ್ದೆಲ್ಲ ಜೀರ್ಣವಾಗುತ್ತದೆ ಎಂಬಂತೆ ಚಿತ್ರಿಸಿದ್ದರು. ಹೀಗೆ ಜೀವ ವಿಜ್ಞಾನಿಗಳೆಲ್ಲ ಬೆಚ್ಚಿ ಬೀಳುವಂಥಾ ಚಿತ್ರಗಳನ್ನು ಬಿಡಿಸುತ್ತಾ ಅವರೆಲ್ಲ ಕುಳಿತಿದ್ದರು.
ಅವರ ನಡುವೆ ಕೃಷ್ಣ ಎನ್ನುವವನಿದ್ದ. ಬಾಯಿ ಬಿಟ್ಟು ಮಾತಾಡದೇ ಕೊಂಯ್ ಕೊಂಯ್ ಎಂಬಂತೆ ನಾಚಿಕೆಯಲ್ಲಿ ಮಾತಾಡುತ್ತಿದ್ದ ಅವನಿಗೆ ಎಲ್ಲರೂ ಗುಂಯ್ಕ ಎಂದು ರೇಗಿಸುತ್ತಿದ್ದರು. ಅವನೂ ಎಲ್ಲರಂತೆಯೇ ಜೀರ್ಣಾಂಗ ವ್ಯೂಹದ ಚಿತ್ರ ಬರೆಯುತ್ತಿದ್ದ. ನಿಜ ಹೇಳಬೇಕೆಂದರೆ ಚೆನ್ನಾಗೇ ಬರೆದಿದ್ದ. ಆ ನಡುವೆ ಅವನ ಪಕ್ಕ ಕುಳಿತಿದ್ದ ಮಂಜ ಅವನತ್ತ ತಿರುಗಿ “ಎಲ್ಲೀ, ನೀನು ಬರ್ದಿರೋ ಚಿತ್ರ ತೋರ್ಸು” ಎಂದು ಅವನ ಹಾಳೆಯನ್ನು ಎಳೆದು ನೋಡಿದ. ಈ ಲೋಕದಲ್ಲಿ ಮನುಷ್ಯನ ಆಹಾರವನ್ನು ಜೀರ್ಣಿಸುವ ಅಂಗಗಳನ್ನೇ ಹೆಚ್ಚೂ ಕಡಿಮೆ ಅವನು ತನ್ನ ಜೀರ್ಣಾಂಗ ವ್ಯೂಹದಲ್ಲೂ ಪರಿಗಣಿಸಿದ್ದ. ಆದರೆ ಅವನು ಬರೆದ ಮನುಷ್ಯ ಮುಖದ ತುಟಿ ಮಾತ್ರ ಸ್ವಲ್ಪ ಚೂಪವಾಗಿ ಹೊರಕ್ಕೆ ಬಂದಿತ್ತು ಹಾಗೂ ನಮ್ಮ ಮಂಜನಿಗೂ ಅಷ್ಟೇ ಸಾಕಾಯಿತು. “ಅರೇ, ಇದೇನಿದು? ನಿನ್ನ ಜೀರ್ಣಾಂಗ ವ್ಯೂಹ ಬೀಡಿ ಸೇದ್ತಿದೆ!” ಎಂದು ಬಿಟ್ಟ. ಅಷ್ಟೇ! ಈ ಮಾತನ್ನು ಕೇಳಿಸಿಕೊಂಡವರೆಲ್ಲ ಫುಸ್ ಫುಸ್ಸೆಂದು ಒಳಗೊಳಗೇ ನಗತೊಡಗಿದರು. ಅಷ್ಟಕ್ಕೇ ಬಿಡದ ಮಂಜ “ಎಲ್ಲ ಜೀರ್ಣ ಆದ್ಮೇಲೆ ಹಿಂದೆ ಹೊಗೆ ಹೋಗ್ತಿರೋ ಚಿತ್ರಾನೂ ಬರಿ” ಎಂದೂ ಸೇರಿಸಿದ. ಈ ಬಾರಿ ಹುಡುಗರ ನಗೆಯನ್ನು ಹಿಡಿದಿಡಲಿಕ್ಕೆ ಅವರ ಮುಖದ ಯಾವ ಸ್ನಾಯುವಿಗೂ ಸಾಧ್ಯವಾಗಲಿಲ್ಲ. ಕ್ಯಹೋಹೋ ಎಂದು ನಕ್ಕ ಸದ್ದು ಮೇಷ್ಟರನ್ನೂ ತಲುಪಿತು. ಕೋಲು ಝಳಪಿಸುತ್ತಾ ಬಂದ ಅವರು ಏನ್ರೋ ಅದು ಎಂದು ಗದರಿದರು. ಆಗ ಅಲ್ಲೇ ಇದ್ದ ಹುಡುಗನೊಬ್ಬ “ಸಾ ಸಾ, ಕೃಷ್ಣನ ಜೀರ್ಣಾಂಗ ವ್ಯೂಹ ಬೀಡಿ ಸೇದ್ತಿದೆ ಸಾ. ಅಂತ ಮಂಜ ಹೇಳಿದ ಸಾ” ಎಂದುಬಿಟ್ಟ. ಮೇಷ್ಟರಿಗೂ ಅಚ್ಚರಿಯಾಗಿರಬೇಕು. ಶ್ವಾಸಾಂಗವ್ಯೂಹ ಬೀಡಿ ಸೇದುವುದನ್ನೂ ನಂಬಬಹುದು. ಆದರೆ ಇದೇನಿದು ವೈದ್ಯಕೀಯ ವಿಚಿತ್ರ? ಜೀರ್ಣಾಂಗವ್ಯೂಹ ಬೀಡಿ ಎಳೆಯುತ್ತಿರುವುದು? ಯಾವ ಪಾಠದಲ್ಲಿ ತಾನಿದನ್ನು ಹೇಳಿದೆ ಎಂದು ತಲೆ ಕೆಡಿಸಿಕೊಳ್ಳುತ್ತಲೇ ಕೃಷ್ಣನ ಚಿತ್ರವನ್ನು ನೋಡಿದರು. ಅದು ತನ್ನ ಪಾಡಿಗೆ ತಾನು ಬೀಡಿ ಸೇದುತ್ತಾ, ಜೀರ್ಣ ಮಾಡುವ ಕೆಲಸ ಮಾಡುತ್ತಾ ಕುಳಿತಿತ್ತು. ಅದನ್ನು ನೋಡಿದ ಮೇಷ್ಟರಿಗೂ ಅರೆಕ್ಷಣ ನಗು ಬಂತಾದರೂ ತಕ್ಷಣ ಅದನ್ನು ನಿಯಂತ್ರಿಸಿಕೊಂಡು “ಸರಿಯಾಗೇ ಇದ್ಯಲ್ಲೋ. ಯಾರೋ ಅದು ಹಾಗೆ ಹೇಳಿದ್ದು?” ಎನ್ನುತ್ತಾ ನಗಿಸಿದ ಮಂಜನಿಗೂ, ನಕ್ಕ ಉಳಿದವರಿಗೂ ಎರಡು ಬಾರಿಸಿ, ಈ ಬೀಡಿ ಪ್ರಕರಣಕ್ಕೆ ತೆರೆ ಎಳೆದರು.

ಮಿಡ್ಲಿಸ್ಕೂಲೆಂದರೆ ಅದು ಪವಾಡಗಳೂ, ಪ್ರಹಸನಗಳೂ ಜರುಗುವ ತಾಣ. ಎಲ್ಲವನ್ನೂ ನಂಬುವ, ಯಾವುದನ್ನೂ ಯೋಚಿಸದ ಮುಗ್ಧ ಮಕ್ಕಳಿರುವ ಜಾಗ. ಮಿಡ್ಲಿಸ್ಕೂಲು ಹಾಗೂ ಹೈಸ್ಕೂಲು ಮಾಸ್ತರುಗಳ ಬದುಕಿನಲ್ಲಿ ದಿನಕ್ಕೊಂದರಂತೆ ಯಕ್ಷಿಣಿ, ಅದ್ಭುತಗಳು ಜರುಗುತ್ತಲೇ ಇರುತ್ತವೆ.
ಶನಿವಾರದಂದು ತರಗತಿಗಳು ಬಹಳ ಬೇಗ ಆರಂಭವಾಗುತ್ತಿದ್ದವು. ಏಳೂ ಮುಕ್ಕಾಲಕ್ಕೆಲ್ಲಾ ಪ್ರಾರ್ಥನೆ ಮುಗಿದು ಎಂಟಕ್ಕೆಲ್ಲ ತರಗತಿಗಳು ಪ್ರಾರಂಭವಾಗುತ್ತಿದ್ದವು. ಹೀಗಾಗಿ ದೂರದೂರುಗಳಿಂದ ನಡೆದು ಬರುತ್ತಿದ್ದ ಎಷ್ಟೋ ಹುಡುಗ, ಹುಡುಗಿಯರಿನ್ನೂ ರಾತ್ರಿ ಮಲಗುವಾಗಿನ ಅವತಾರದಲ್ಲೇ ಇರುತ್ತಿದ್ದರು.
ತರಗತಿಯಲ್ಲಿ ಶಿವು ಎನ್ನುವವನೊಬ್ಬನಿದ್ದ. ದೂರದಿಂದ ನಡೆದು ಬರುತ್ತಿದ್ದ ಅವನು ಪ್ರತೀ ಶನಿವಾರದಂದು ಈಗಷ್ಟೇ ಹಾಸಿಗೆ ಬಿಟ್ಟೆದ್ದು ಬಂದ ಸ್ಥಿತಿಯಲ್ಲೇ ಶಾಲೆಗೆ ಬರುತ್ತಿದ್ದ. ಅವನ ಪಕ್ಕ ಕೂರುತ್ತಿದ್ದ ಮಂಜನಿಗಿದು ಅವನನ್ನು ಆಡಿಕೊಳ್ಳುವ ಸಂಗತಿಯಾಗಿತ್ತು. “ಶಿವು ಪ್ರತೀ ಸೋಮವಾರ ಹಲ್ಸೆಟ್ ಸ್ವಾಮಿಯ ವ್ರತ ಮಾಡ್ತಾನೆ. ಅದಕ್ಕೇ ಅವತ್ತು ಅವನು ಹಲ್ಲುಜ್ಜುವುದಿಲ್ಲ. ಬಾಯ್ತೆರೆದರೆ ನಾತ ಬರ್ತದೆ” ಎಂದವನು ರೇಗಿಸುತ್ತಿದ್ದ. ಇದು ಆಗಾಗ ಪುನರಾವರ್ತನೆಯಾಗುತ್ತಿತ್ತಾದರೂ ಆ ದಿನ ಏಕೋ ಶಿವುಗೆ ತುಂಬಾ ರೇಗಿ ಹೋಯಿತು. “ನಾನು ಬರೀ ಹಲ್ಲು ತಿಕ್ಕಲ್ಲ. ಆದ್ರೆ ನೀನು ಎಮ್ಮೆ ಕೊಟ್ಟಿಗೆಯಿಂದ ಎದ್ದು ಬರ್ತೀ. ಎಮ್ಮೆ ಕಾಯೋ ಬಸಪ್ಪ ನೀನು” ಎಂದು ತಿರುಗಿ ಹೇಳಿಬಿಟ್ಟ. ಮಂಜನ ಅಪ್ಪ ಬಸಣ್ಣ ಎಮ್ಮೆ ವ್ಯಾಪಾರ ಮಾಡುತ್ತಿದ್ದುದೇ ಅವನ ಹೀಯಾಳಿಕೆಗೆ ಅಸ್ತ್ರವಾಗಿ ಒದಗಿ ಬಂದಿತ್ತು. ಅಪ್ಪನ ಹೆಸರು ತೂರಿ ಬಂದಿದ್ದೇ ತಡ, ಇಬ್ಬರು ಹುಡುಗರ ಜಗಳವಾಗಿದ್ದ ಇದು ಒಂದು ತಲೆಮಾರಿನ, ಮನೆತನದ, ಪ್ರತಿಷ್ಠೆಯ ಕಾದಾಟವಾಗಿ ಬದಲಾಯಿತು! ಇಬ್ಬರೂ ಈ ಕೋಳಿ ಜಗಳಕ್ಕೆ ಸಂಬಂಧವೇ ಇಲ್ಲದ ತಮ್ತಮ್ಮ ಅಪ್ಪಂದಿರನ್ನು ಬೈಯುತ್ತಾ ಆವೇಶಕ್ಕೆ ತುತ್ತಾದರು. ತೀರಿ ಹೋದ ಅಜ್ಜಂದಿರಿಗೂ ಕೆಲ ಬೈಗುಳಗಳು ಸಂದವು. ಕೊನೆಗೆ ವಾಕ್ಯುದ್ಧ ಮೀರಿ ಇಬ್ಬರೂ ಕೈ ಕೈ ಮಿಲಾಯಿಸಿಯೇ ಬಿಟ್ಟರು. ಆಗೆಲ್ಲ ಟೀವಿಯಲ್ಲಿ ಬರುತ್ತಿದ್ದ ಡಬ್ಲ್ಯೂ ಡಬ್ಲ್ಯೂ ಎಫ್ ನ ಗಾಢವಾದ ಪ್ರಭಾವ ಅವರ ಮೇಲಿದ್ದರಿಂದ, ಕೊಂಚ ಬಲಿಷ್ಠನಾಗಿದ್ದ ಮಂಜ ಥೇಟ್ ಅಂಡರ್ ಟೇಕರ್ ನಂತೆ ಶಿವುವಿನ ಕೊರಳಿಗೆ ಕೈ ಹಾಕಿ ಬೆಂಚಿನಿಂದ ಕೆಳಗೆ ದೂಡಿಬಿಟ್ಟ. ಆಯ ತಪ್ಪಿದ ಶಿವು ಹಿಂದಿದ್ದ ಹುಡುಗಿಯರ ಮೇಲೆ ಕಾಲು ಮೇಲಾಗಿ ಬಿದ್ದ. ಇದರಿಂದ ಗಾಬರಿಗೊಂಡ ಹುಡುಗಿಯರು ಕ್ಯಾವ್ ಕ್ಯಾವ್ ಎಂದು ಆರ್ತನಾದ ಮಾಡುತ್ತಾ ದಿಕ್ಕಾಪಾಲಾಗಿ ಓಡಿದರು.
ಎಲ್ಲರ ಎದುರು, ಅದರಲ್ಲೂ ಹುಡುಗಿಯರ ಎದುರು ತಾನು ಕಾಲು ಮೇಲಾಗಿ ಬಿದ್ದಿದ್ದು ಶಿವುವಿಗೆ ಅವಮಾನವಾದಂತಾಯಿತು. ತನ್ನೀ ಮುಖಭಂಗಕ್ಕೆ ಕಾರಣವಾದ ಮಂಜುವನ್ನು ಕೆಳಕ್ಕೆ ಕೆಡಗುವ ವೀರಾವೇಶದಲ್ಲಿ ಮೇಲೆದ್ದ ಅವನು “ಬ್ರಾಕ್ ಲೆನ್ಸರ್” ಎಂದು ತನ್ನಿಷ್ಟದ ಫೈಟರ್‌ನ ಹೆಸರು ಕೂಗುತ್ತಾ ಮಂಜನ ಮೇಲೆ ನುಗ್ಗಿ ಹೋದ. ಆದರೆ ಅವನ ಈ ಗೂಳಿ ಮಾದರಿಯ ಧಾಳಿಯಿಂದ ತಪ್ಪಿಸಿಕೊಂಡ ಮಂಜ ಪಕ್ಕಕ್ಕೆ ಹೊರಳಿ ಇವನ ಕಾಲಿಗೆ ಫಟೀರನೆ ಹೊಡೆದು ಬಿಟ್ಟ. ತೊಡೆಯ ಮೇಲೆ ಪೆಟ್ಟು ತಿಂದ ಶಿವುವಿಗೆ ತಾನು ಮಂಜುವನ್ನು ಸೋಲಿಸಲಾರೆ ಎಂಬುದು ಅರ್ಥವಾಯಿತೋ ಏನೋ? ಇನ್ನೂ ಬೀಳಲಿರುವ ಒದೆಗಳಿಂದ ತಪ್ಪಿಸಿಕೊಳ್ಳಲು ಇರುವ ಏಕಮಾತ್ರ ಉಪಾಯವೆಂಬಂತೆ ಅವನು ತನ್ನ ಕಾಲು ಹಿಡಿದುಕೊಂಡು ನೆಲಕ್ಕೆ ಬಿದ್ದುಕೊಂಡು “ಅಯ್ಯೋ.. ಅಮ್ಮಾ.. ಅಯ್ಯಯ್ಯಮ್ಮಾ” ಎನ್ನುತ್ತಾ ಒದ್ದಾಡತೊಡಗಿದ. ತಾನಾಗಿ ಹೊಡೆಯಲಾಗದ ಮಂಜುವಿಗೆ ಮೇಷ್ಟರ ಕೈಯಿಂದ ಹೊಡೆಸುವ ಉಪಾಯವೂ ಅವನದಾಗಿತ್ತೋ ಏನೋ? ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿ, ಬೇಗ ಈ ವಿಷಯ ಮೇಷ್ಟರನ್ನು ಮುಟ್ಟುವಂತೆ ಮಾಡಲೆಂದು ಎದೆ, ಕಾಲು ಹಿಡಿದುಕೊಂಡು ಒದ್ದಾಡುತ್ತಾ “ಅಯ್ಯೋ.. ಅಮ್ಮಾ.. ನಂಗ್ ಉಸಿರಾಡುಕಾತಿಲ್ಯೋ.. ಅಪ್ಪಯ್ಯೋ.. ಅಬ್ಯೋ” ಎಂದು ಇನ್ನೇನು ಐಸಿಯುಗೆ ಸೇರಿಸಬೇಕಾದ ರೋಗಿಯಂತೆ ನಟಿಸತೊಡಗಿದ.
ಈ ಬಾರಿ ಬೆಚ್ಚಿ ಬೀಳುವ ಸರದಿ ಮಂಜನದಾಗಿತ್ತು. ತಾನು ಕಾಲಿಗೆ ಹೊಡೆದೊಡನೆ ಅವನಿಗೇಕೆ ಉಸಿರಾಟದ ತೊಂದರೆ ಆಗುತ್ತಿದೆ ಎನ್ನುವುದೇ ಅವನಿಗೆ ಅರ್ಥವಾಗಲಿಲ್ಲ. ಮನುಷ್ಯನ ಉಸಿರಾಟ ವ್ಯವಸ್ಥೆಯ ಹೆಡ್ ಕ್ವಾಟರ್ಸ್ ಕಾಲಿನಲ್ಲಿರುತ್ತದೆ ಎಂದವನು ಯಾವ ಪಾಠದಲ್ಲೂ ಓದಿರಲಿಲ್ಲ. ಕಾಲಿಗೆ ಬಡಿದರೆ ಮನುಷ್ಯ ಉಸಿರು ಕಟ್ಟಿ ಸಾಯುತ್ತಾನೆ ಎಂದು ಅವನಿಗೆ ಯಾವ ಮಾಸ್ತರೂ ಪಾಠ ಮಾಡಿರಲಿಲ್ಲ. ಆದರೂ ಈಗ ಶಿವುಗೆ ಉಸಿರು ಕಟ್ಟುತ್ತಿದೆ! ಅವನಿನ್ನೇನು ಸಾಯಲಿದ್ದಾನೆ! ಹುಡುಗಿಯರೆದುರು ಹೀರೋ ಆಗಲು ಹೋದ ತಾನು ಇನ್ನೇನು ಜೈಲು ಸೇರಲಿದ್ದೇನೆ!
ನಡುಗಿ ಹೋದ ಮಂಜ. ಕಡಲೆ, ಪಂಚಕಜ್ಜಾಯದಾಸೆಗೆ ತಾನು ಕೈ ಮುಗಿಯುತ್ತಿದ್ದ ದೇವರೆಲ್ಲ ಅವನ ಕಣ್ಮುಂದೆ ಬಂದರು. ಚಲನಚಿತ್ರಗಳಲ್ಲಿ ಅವನು ನೋಡಿದ್ದ ಬಳ್ಳಾರಿ ಜೈಲಿನ ಕಂಬಿಯ ಹಿಂದೀಗ ಬಿಳಿ ಬಟ್ಟೆ ತೊಟ್ಟು ತಾನೇ ನಿಂತಂತೆನಿಸಿತು. ಉಸಿರಾಟ ವ್ಯೂಹ ಎದೆಯಲ್ಲಿದೆ ಎಂದ ಹಾಳು ವಿಜ್ಞಾನವೀಗ ತನ್ನ ದಾರಿ ತಪ್ಪಿಸಿದೆ. ತಾನೀಗ ಪಾರಾಗುವುದಕ್ಕೆ ನೆಪವೇ ಇಲ್ಲ! ಹೀಗೆಲ್ಲ ಯೋಚಿಸಿದ ಮಂಜನಿಗೆ ಕಟ್ಟಕಡೆಯ ಉಪಾಯವೊಂದು ಹೊಳೆಯಿತು. ತನ್ನಿಂದ ಪಾರಾಗಲಿಕ್ಕೆ ಶಿವು ಮಾಡಿದ ಅದೇ ಉಪಾಯ! ನಿಂತನಿಂತಲ್ಲೇ ಅವನು ತನ್ನ ಎದೆ ಹಿಡಿದುಕೊಂಡು ಅಮ್ಮಾ ಎನ್ನುತ್ತಾ ಅಲ್ಲೇ ಬಿದ್ದುಬಿಟ್ಟ. ಚೆನ್ನಾಗಿಯೇ ಬಡಿದುಕೊಳ್ಳುತ್ತಿದ್ದ ಅವನ ಹೃದಯಕ್ಕೂ ಕನ್ಫ್ಯೂಸಾಗುವಂತೆ ಎದೆ ನೀವಿಕೊಳ್ಳುತ್ತಾ ಆ.. ಎಂಬ ಆರ್ತನಾದ ಮಾಡಿ, ತನಗೂ ಪೆಟ್ಟಾಗಿದೆ, ಯಾವ ಮೇಷ್ಟರೂ ತನಗೆ ಹೊಡೆಯುವಂತಿಲ್ಲ ಎಂಬುದನ್ನು ಸಾರುತ್ತಾ ಬಿದ್ದು ಕಣ್ಮುಚ್ಚಿಕೊಂಡ.

ಇತ್ತ ನಡೆಯುತ್ತಿರುವ ಸರಣಿ ಪ್ರಹಸನಗಳನ್ನೂ, ಒಬ್ಬರ ಮೀರಿದ ಇನ್ನೊಬ್ಬರ ನಟನೆಗಳನ್ನೂ ನೋಡುತ್ತಿದ್ದ ಉಳಿದವರಿಗೆ ಏನೊಂದೂ ಹೊಳೆಯಲೇ ಇಲ್ಲ. ಮಂಜನಿಂದ ಕಾಲಿಗೆ ಹೊಡೆಸಿಕೊಂಡ ಶಿವುಗೇಕೆ ಉಸಿರಾಟಕ್ಕೆ ತೊಂದರೆಯಾಯಿತು? ಖುದ್ದು ಅವನಿಗೆ ರುಬ್ಬಿದ ಮಂಜನೇಕೆ ಹೀಗೆ ಬಿದ್ದು ಕಣ್ಮುಚ್ಚಿಕೊಂಡ? ಎಂಬ ಇನ್ನೂ ಮುಂತಾದ ಪ್ರಶ್ನೆಗಳು ಅವರನ್ನು ಗಣಿತದ ಪ್ರಶ್ನೆ ಪತ್ರಿಕೆಯಂತೆಯೇ ಕಾಡತೊಡಗಿದವು. ಹೀಗೆ ಅವರೆಲ್ಲ ಕಕ್ಕಾಬಿಕ್ಕಿಯಾಗಿ ನಿಂತಿರುವಂತೆಯೇ ಕೆಲ ನಿಮಿಷಗಳು ಸರಿದವು. ಅಷ್ಟರಲ್ಲಿ ಅತ್ತಲಿಂದ ಮೇಷ್ಟರು ಓಡೋಡುತ್ತಾ ಬರುವುದು ಕಾಣಿಸಿತು. ತಮ್ಮ ಕೊಠಡಿಯಲ್ಲಿ ಏನೋ ಬರೆಯುತ್ತಾ ಕುಳಿತಿದ್ದ ಅವರ ಕೋಣೆಗೆ ಹುಡುಗರಿಬ್ಬರು ನುಗ್ಗಿ “ಸಾ.. ಸಾ.. ಮಂಜ, ಶಿವು ಫೈಟಿಂಗ್ ಮಾಡ್ಕಂಡು ಮಂಜ ಶಿವುಗೆ ಹೊಡ್ದ ಸಾ. ಶಿವಂಗೀಗ ಉಸಿರಾಡೋಕಾಗ್ತಿಲ್ಲ. ಮಂಜ ಕೋಮಾಗೆ ಹೋಗಿದಾನೆ. ಬೇಗ ಬನ್ನಿ ಸಾ” ಎಂದಿದ್ದರು. ಈಗ ಗಾಬರಿಯಾಗುವ ಸರದಿ ಮೇಷ್ಟರದಾಗಿತ್ತು. ಏನೋ ತುರ್ತು ಕೆಲಸವಿದ್ದುದರಿಂದ ತರಗತಿಗೆ ಹೋಗುವುದನ್ನು ಇಪ್ಪತ್ತೇ ಇಪ್ಪತ್ತು ನಿಮಿಷ ತಡ ಮಾಡಿದ್ದಕ್ಕೆ ಒಬ್ಬ ಉಸಿರಾಟದ ತೊಂದರೆಗೆ ಒಳಗಾಗಿದ್ದಾನೆ. ಇನ್ನೊಬ್ಬ ಕೋಮಾಗೇ ಹೋಗಿದ್ದಾನೆ! ಇಷ್ಟೆಲ್ಲ ಆಗಿರಲಿಕ್ಕಿಲ್ಲ ಎಂಬ ಅರಿವಿತ್ತಾದರೂ ತಮ್ಮ ಅಸಾಸುರ ಶಿಷ್ಯರನ್ನು ಹಗುರವಾಗಿ ತೆಗೆದುಕೊಳ್ಳಲಿಕ್ಕೆ ಅವರ ಮನಸ್ಸು ಒಪ್ಪಲಿಲ್ಲ. ಯಕಶ್ಚಿತ್ ಹಿಡಿ ಕಡ್ಡಿ ಕೈಗೆ ಸಿಕ್ಕರೂ ಕತ್ತಿ, ಕೊಡ್ಲಿಗಳಂತೆ ಅವುಗಳಿಂದಲೇ ಸಾಮ್ರಾಜ್ಯಗಳನ್ನು ಉಳಿಸಿಕೊಳ್ಳುವವರಂತೆ ಹೊಡೆದಾಡುವ ಸಮರವೀರ ಶಿಷ್ಯರ ಯುದ್ಧೋನ್ಮಾದವನ್ನು ಕಡೆಗಣಿಸುವುದು ಹೇಗೆ? ಹೀಗೊಂದು ಸಣ್ಣ ಭಯವನ್ನು ಕಣ್ಣಲ್ಲಿಟ್ಟುಕೊಂಡೇ ಮಾಸ್ತರು ತರಗತಿಗೆ ಬಂದರು.
ಆ್ಯಂಬುಲೆನ್ಸು, ಡಾಕ್ಟರು, ಐಸಿಯು.. ಇವುಗಳ ಪೈಕಿ ಯಾವುದು ಬೇಕಾಗುತ್ತದೋ ಎಂದುಕೊಂಡು ಓಡಿ ಬಂದವರ ಕಣ್ಣಿಗೆ ಕಂಡಿದ್ದು ಮಾತ್ರ ಪವಾಡ. ಇತ್ತ ಧೊಪ್ಪನೆ ಬಿದ್ದ ಮಂಜನಿಗೆ ಎರಡು ಮೂರು ನಿಮಿಷಕ್ಕಿಂತ ಹೆಚ್ಚಿಗೆ ಕಣ್ಮುಚ್ಚಿ ಮಲಗುವುದು ಸಾಧ್ಯವಾಗಲಿಲ್ಲ. ಸುತ್ತ ನೆರೆದ ಹುಡುಗರು ಮಂಜಾ, ಮಂಜಾ ಎನ್ನುತ್ತಾ ಎಲ್ಲೆಲ್ಲೋ ತಟ್ಟುತ್ತಿದ್ದರು. ಇನ್ನೇನು ಸಹಿಸುವುದು ಅಸಾಧ್ಯ ಎನ್ನುವಷ್ಟರಲ್ಲೇ ದಿವಾಕರ ತನ್ನ ಜೇಬಿನಲ್ಲಿದ್ದ ಚಕ್ಕುಲಿಗಳೆರಡನ್ನು ತೆಗೆದು “ತಗೊಳ್ಳೋ, ತಿನ್ನೋ, ಎಲ್ಲ ಸರಿ ಆಗುತ್ತೆ” ಎನ್ನುತ್ತಾ ಅವನ್ನು ಬಾಯಿಯ ಹತ್ತಿರ ತಂದ. ಚಕ್ಕುಲಿಯ ಕುರುಕಲು ಎಣ್ಣೆ ಗಂಧ ಮೂಗಿಗೆ ರಾಚಿದ್ದೇ ಮಂಜನ ಕಣ್ಣು ಅರ್ಧ ತೆರೆದುಕೊಂಡಿತು. ಇದನ್ನು ಕಂಡ ದಿವಾಕರ ಚಕ್ಕುಲಿಯನ್ನು ಅವನ ಬಾಯಿಗೇ ಹಾಕಿದ. ಕುರುಂ ಕುರುಂ ಚಕ್ಕುಲಿಯೊಂದು ತಾನೇ ತಾನಾಗಿ ಬಾಯೊಳಗೆ ಹೊಕ್ಕಿರುವ ಈ ದಿವ್ಯ ಘಳಿಗೆಯಲ್ಲಿ ಮಂಜನೊಳಗಿನ ನಟ ಸೋಲೊಪ್ಪಲೇ ಬೇಕಾಯಿತು. ಕೆಲ ಕ್ಷಣಗಳ ಮಟ್ಟಿಗೆ ಕೋಮಾದಿಂದ ಹೊರಬರಲು ನಿರ್ಧರಿಸಿದ ಮಂಜ ಮೆಲ್ಲನೆ ಎದ್ದುಕುಳಿತು ಈಗಷ್ಟೇ ಸುಧಾರಿಸಿಕೊಂಡ ರೋಗಿಯಂತೆ ನಟಿಸುತ್ತಾ ಚಕ್ಕುಲಿ ಮೆಲ್ಲತೊಡಗಿದ.

ಕೋಮಾಗೆ ಹೋದ ರೋಗಿಯೊಬ್ಬ ಎದ್ದು ಚಕ್ಕುಲಿ ಮೆಲ್ಲುತ್ತಿರುವ, ವೈದ್ಯಲೋಕದ ಮಹಾನ್ ಪವಾಡವನ್ನು ಕಂಡ ಮಾಸ್ತರಿಗೆ ತಮ್ಮ ಕಣ್ಣನ್ನೇ ನಂಬಲಾಗಲಿಲ್ಲ. ಅತ್ತ ಉಸಿರಾಟದ ತೊಂದರೆ ಆಗಿರುವ ಶಿವು ಸಹಾ ಚಕ್ಕುಲಿ ಕಡಿಯುತ್ತಾ ಕುಳಿತಿದ್ದಾನೆ! ತರಗತಿಗೆ ಬರುವುದು ಕಾಲೇ ಕಾಲು ಗಂಟೆ ತಡವಾಗಿದ್ದಕ್ಕೇ ತನ್ನ ಶಿಷ್ಯೋತ್ತಮರು ಸೃಷ್ಟಿಸಿರುವ ಪವಾಡ ಸದೃಶ ದೃಶ್ಯಗಳನ್ನು ಕಂಡ ಅವರಿಗೆ ತಾನಿನ್ನೇನಾದರೂ ಒಂದಿಡೀ ಗಂಟೆ ಬಾರದೇ ಹೋದರೆ ಇನ್ನೂ ಏನೇನಾಗುತ್ತದೋ ಎಂದು ನೆನೆಸಿಕೊಂಡೇ ಗಾಬರಿಯಾಯಿತು. ಈ ಪುಂಡರೆಲ್ಲ ಸಾಕ್ಷಾತ್ ಮಂಗಳ ಗ್ರಹದ ಏಲಿಯನ್‌ಗಳಾಗಿ ಬದಲಾಗಿ, ಇಡೀ ಶಾಲೆಯನ್ನೇ ಹಾರುವ ತಟ್ಟೆ ಮಾಡಿಕೊಂಡು ಹಾರಿಸಿಕೊಂಡು ಹೋಗುತ್ತಾರೇನೋ ಎಂದು ಯೋಚಿಸಿದ ಅವರು ತಕ್ಷಣ ನಡೆದ ಘಟನೆಯ ವಿಚಾರಣೆಗೆ ಆರಂಭಿಸಿದರು. ಕೊನೆಗೆ ಉಸಿರಾಟದ ತೊಂದರೆ ಇದ್ದವನಿಗೆ ನಾಲ್ಕು ಹಾಗೂ ಕೋಮಾಗೇ ಹೋದವನಿಗೆ ಆರು ಲತ್ತೆಗಳನ್ನು ಘೋಷಿಸುವ ಮೂಲಕ ಈ ಇಡೀ ಪ್ರಹಸನಕ್ಕೆ ಭರ್ಜರಿ ತೆರೆ ಎಳೆದರು.

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ’ ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ ‘ಮರ ಹತ್ತದ ಮೀನು’ ಕಥಾ ಸಂಕಲನಗಳು ಪ್ರಕಟವಾಗಿವೆ.
