‘ಅಯ್ಯೋ ನನ್ನ ಇಂಟರ್ನೆಟ್ ಹಾಳಾಗಿ ಹೋಗಿದೆ. ನಿನ್ನಂತಹ ಖಳರೊಡನೆ ಸಂಪರ್ಕಿಸಲು ಇದ್ದ ಈ ಭೂಲೋಕದ ಇದೊಂದು ಕೊಂಡಿಯೂ ಹೊರಟು ಹೋಗಿದೆ’ ಎಂದು ಪರದಾಡುತ್ತಿರುವ ಮಗುವಿನಂತಹ ಹಿರಿಯ ಲೇಖಕ ಕಾಮರೂಪಿ. `ತಡೀರಿ ಸಾರ್ ನಾನೂ ಒಂದು ಕೈ ನೋಡಿಯೇ ಬಿಡುತ್ತೇನೆ’ ಎಂದು ಕಲಿತ ವಿದ್ಯೆಯನ್ನೆಲ್ಲ ಬಳಸಿ ಇಂಟರ್ನೆಟ್ ಸರಿ ಮಾಡಲು ನೋಡಿದೆ. ಆಗಲಿಲ್ಲ. ನೋಡಿದರೆ ಫೋನೇ ಸತ್ತು ಹೋಗಿತ್ತು. ಕೋಲಾರದ ಯಾವುದೋ ಪೋಲಿ ಬಾಲಕನೊಬ್ಬ ಕಾಮರೂಪಿಯವರ ಮನೆಗೆ ಹೋಗುತ್ತಿದ್ದ ತಾಮ್ರದ ಭೂಗತ ತಂತಿಯನ್ನೇ ಕಿತ್ತು ಮಾರಿ ಬಿರಿಯಾನಿ ತಿಂದು ಬಿಟ್ಟಿದ್ದ. ಇದನ್ನು ಅರಿತ ಕಾಮರೂಪಿಯವರು ಮರುಕದಿಂದ ನಗುತ್ತಿದ್ದರು.
ಕೋಲಾರದ ಬೆಟ್ಟವೊಂದರ ಬಂಡೆಗಳ ಮೇಲೆ ಕಡುಬಣ್ಣಗಳ ಸೆರಗು ಹಾಸುತ್ತಿರುವ ಆಕಾಶ. ಅದರ ನಡುವಿನ ಬಯಲು ಹೊಲದಲ್ಲಿ ಟೊಮೆಟೋ ಸಸಿಗಳಿಗೆ ಗುಟುಕು ಗುಟುಕು ನೀರು ಉಣಿಸುತ್ತಿರುವ ದಣಿದ ತಾಯಿ. ಅವಳ ಸುತ್ತ ಹಸಿವೇ ಇಲ್ಲವೇನೋ ಎಂಬಂತೆ ಗಿರಗಿಟ್ಟಲೆ ಓಡುತ್ತಿರುವ ಹೊಳೆವ ಕಣ್ಣುಗಳ ಕಂದಮ್ಮಗಳು. ಪುರಾತನ ಕಾಲದಿಂದಲೇ ಇಲ್ಲಿ ಬದುಕುತ್ತಿದ್ದಾನೆ ಎಂಬಂತೆ ಗೌರವಾನ್ವಿತನಾಗಿ ಕಿವಿಯಲ್ಲಿ ಒಂಟಿ ಹಾಕಿಕೊಂಡಿದ್ದ ಮುದುಕನೊಬ್ಬ ‘ಸಾ, ಟೀ ಕುಡಿಯಕ್ಕೆ ಕಾಸು ಕೊಡಿ’ ಎಂದು ಕಾಸು ಕೀಳುತ್ತಿದ್ದ.
ಈ ಬೆಟ್ಟದ ಮೇಲೆ ಹೀಗೇ ಇರುವ ಏಳು ಹಳ್ಳಿಗಳು. ಈ ಏಳು ಹಳ್ಳಿಗಳ ನಡುವಲ್ಲೂ ಹಾದು ಹೋಗಿರುವ ಯಾವುದೋ ಕಾಲದ ಹಳೆಯ ಕೋಟೆಯೊಂದರ ಅವಶೇಷಗಳು. ಬೆಟ್ಟವೊಂದರೊಳಗೆ ನಾಲ್ಕುನೂರು ವರ್ಷಗಳ ಹಿಂದೆ ತಪಸ್ಸಿಗೆ ಕೂತಿದ್ದ ಮುಸಲ್ಮಾನ ಸೂಫಿ ಸಂತನೊಬ್ಬನ ಗುಹೆಯ ಬಾಗಿಲಿಗೆ ಈ ಕಾಲದ ಮುದುಕನೊಬ್ಬ ಏಣಿ ಇಟ್ಟುಕೊಂಡು ಹಸಿರು ಬಣ್ಣ ಬಳಿಯುತ್ತಿದ್ದ. ಗುಹೆಯ ಒಳ ಹೊಕ್ಕರೆ ಅದರೊಳಗೆ ಕೆಟ್ಟದಾಗಿ ಹೊಳೆಯುತ್ತಿದ್ದ ಮೊಸಾಯಿಕ್ ಹಾಸು. ಗುಹೆಯ ತುಂಬ ಆಕ್ರಿಲಿಕ್ ಪೇಯಿಂಟಿನ ಹಸಿಹಸಿ ವಾಸನೆ.
ಆ ಕಾಲದ ಸಂತ ಮುದುಡಿಕೊಂಡು ಕೂತಿರುತ್ತಿದ್ದ ಜಾಗಕ್ಕೆ ಬಣ್ಣದ ಬಲ್ಬುಗಳನ್ನು ಹಚ್ಚಿಟ್ಟು ಅಮಾನುಷ ಪರಿಮಳದ ಅಗರಬತ್ತಿಗಳನ್ನು ಉರಿಯಲು ಬಿಟ್ಟಿದ್ದರು. ಬಣ್ಣ ಬಳಿಯುತ್ತಿದ್ದ ಮುದುಕನ ಜೊತೆ ಮಾತಿಗಿಳಿದೆ. ಆತ ಆ ಸಂತನ ಕಥೆ ಹೇಳುತ್ತಿದ್ದ. ಒಂದು ಕಾಲದಲ್ಲಿ ಹುಲಿಗಳೂ, ಚಿರತೆಗಳೂ ಈ ಬಂಡೆಗಳ ನಡುವೆ ಓಡಾಡುತ್ತಿದ್ದವಂತೆ. ಅವುಗಳ ನಡುವೆಯೇ ಅರಭೀಸ್ಥಾನದಿಂದ ಬಂದ ಈ ಫಕೀರ ತಪಸ್ಸು ಮಾಡುತ್ತಿದ್ದನಂತೆಯಾರಿಗೂ ಯಾರೂ ತೊಂದರೆ ಕೊಡುತ್ತಿರಲಿಲ್ಲವಂತೆ.
‘ಅಯ್ಯೋ ಆ ಕಾಲ ಬುಡಿ ಎಲ್ಲರೂ ಒಳ್ಳೆಯವರು. ಈ ಕಾಲದಲ್ಲಿ ಎಲ್ಲವೂ ಹಾಳು’ ಬಣ್ಣ ಬಳಿಯುತ್ತಿದ್ದ ಮುದುಕ ನಡು ನಡುವೆ ಗೊಣಗುತ್ತಿದ್ದ. ಇದು ಯಾವುದೂ ಗೊತ್ತಿಲ್ಲದೆ ಹೊಲದ ಮಣ್ಣಲ್ಲಿ ಆಟವಾಡುತ್ತಿದ್ದ ಮಕ್ಕಳು ಆ ಸಾಯಂಕಾಲದ ಆಕಾಶದ ಕೆಳಗೆ ವಿನಾಕಾರಣ ಕೇಕೆ ಹಾಕುತ್ತಿದ್ದರು. ಹಾಗೇ ಆ ಕತ್ತಲಲ್ಲಿ ಮುಂದಕ್ಕೆ ಹೋದರೆ ಅತ್ಯಾಧುನಿಕ ಬಂಗಲೆಯೊಂದು ಮುಳುಗಿಯೇ ಹೋದ ಸೂರ್ಯನಿಗೆ ಹಂಬಲಿಸಿಕೊಂಡು ಪ್ರಪಾತಕ್ಕೆ ಮುಖ ಮಾಡಿಕೊಂಡು ನಿಂತಿತ್ತು. ದೊಡ್ಡದಾಗಿ ಮೂಗುತಿ ಹಾಕಿಕೊಂಡಿರುವ ಬೆಟ್ಟದ ಮೇಲಿನ ಚೆಲುವೆಯೊಬ್ಬಳು ಆ ಬಂಗಲೆಯನ್ನು ಕಾಯುತ್ತಿದ್ದಳು.
‘ಸಾರ್, ಸಾಹುಕಾರರು ತಿಂಗಳಿಗೊಮ್ಮೆಯೋ ಎರಡು ತಿಂಗಳಿಗೊಮ್ಮೆಯೋ ಬಂದು ನೋಡಿಕೊಂಡು ಹೋಗುತ್ತಾರೆ. ಇಲ್ಲಿ ಇರುವುದು ನಾನೇಯ’ಎಂದು ಖುಷಿಯಿಂದ ಅಂದಳು. ಇನ್ನೂ ಮುಂದಕ್ಕೆ ಕತ್ತಲಲ್ಲಿ ನಡೆದರೆ ಹೊಸದಾಗಿ ಶುರುವಾಗಿರುವ ಎಮು ಪಕ್ಷಿ ಸಾಕಾಣಿಕಾ ಕೇಂದ್ರ. ಸಂಜೆ ಕತ್ತಲಲ್ಲಿ ನೂರಾರು ಎಮು ಪಕ್ಷಿಗಳು ತಲೆ ತಗ್ಗಿಸಿ ಕತ್ತು ತೂಗಿಸಿಕೊಂಡು ನಿಂತಿದ್ದವು. ದೂರದ ಆಸ್ಟ್ರೇಲಿಯಾ ಖಂಡದ ಈ ದೈತ್ಯ ಹಕ್ಕಿಗಳು ಕೋಲಾರದ ಈ ಬೆಂಕಿಬಂಡೆಗಳ ಬಿಸಿಲಿಗೆ ಸಾವರಿಸಿಕೊಂಡು ಮಾಂಸದ ಹಕ್ಕಿಗಳಾಗಿ ಬದುಕುತ್ತಿದ್ದವು. ಅಲ್ಲಲ್ಲಿ ಹುಲ್ಲು ನೆಲದಲ್ಲಿ ಬಿದ್ದುಕೊಂಡಿರುವ ಶಿಲಾಯುಗದ ಆಯುದಗಳಂತಹ ಅವುಗಳ ಮೊಟ್ಟೆಗಳು. ನಗು ಬರುತ್ತಿತ್ತು.
ಕೋಟೆ ಕೊತ್ತಲಗಳಿಗೂ, ಧಾರ್ಮಿಕ ತಪಸ್ಸಿಗೂ, ಮಾಂಸದ ಕೋಳಿಗೂ, ಮಕ್ಕಳ ಆಟಕ್ಕೂ, ಮೋಡಗಳ ಲಾಸ್ಯಕ್ಕೂ ಎಲ್ಲಕ್ಕೂ ಬೇಕಾಗುವ ಕಲ್ಲು ಬಂಡೆಗಳ ಈ ಬೆಟ್ಟ. ಅನ್ಯ ಮನಸ್ಕನಾಗಿ ಇಲ್ಲಿ ಬಂದು ತಡವರಿಸುತ್ತಿರುವ ನಾನು, ಯಾಕೋ ಕಿತ್ತು ಬರುತ್ತಿರುವ ಹೃದಯ. ಉರಿವ ಕಣ್ಣುಗಳ ಕರಿ ಹೈದನೊಬ್ಬ ಮೊಬೈಲ್ ಟವರಿನ ಸಿಗ್ನಲ್ ಸಿಕ್ಕಿದ ಖುಷಿಯಲ್ಲಿ ಯಾರೊಡನೆಯೋ ನಾಚುತ್ತಾ ಮಾತಾಡುತ್ತಿದ್ದ. ಬಹುಶಃ ಆತನ ಇತ್ತೀಚೆಗಿನ ಪ್ರೇಮವಿರಬೇಕು. ತುಂಬಾ ಉತ್ಸಾಹದಲ್ಲಿದ್ದ.ಜಗತ್ತನ್ನೇ ತಿಂದು ತೇಗಬಲ್ಲನೆಂಬ ಆತನ ಉತ್ಸಾಹ. ಏನೋ ಒಂದನ್ನು ಗೆಲ್ಲಲು ಹೊರಟ ಎಲ್ಲರ ಕಣ್ಣುಗಳಲ್ಲೂ ಕಾಣಿಸುವ ಒಂದು ರೀತಿಯ ಕ್ರೌರ್ಯ ಪ್ರೇಮಿಗಳ ವಿಷಯದಲ್ಲೂ ನಿಜ ಅನಿಸುತ್ತಿತ್ತು.
ಬೆಟ್ಟದ ಮೇಲೆ ಹುಣ್ಣಿಮೆಯ ಚಂದ್ರ ಎದ್ದು ನಿಲ್ಲುವ ಮೊದಲೇ ಅಲ್ಲಿಂದ ಇಳಿದು ಬಿಡಬೇಕು ಅನ್ನಿಸಿತು. ಇಳಿಯುತ್ತಿರುವಾಗ ಜೊತೆಯಲ್ಲಿದ್ದವರು ಒಂದು ಕಥೆ ಹೇಳಿದರು ಅದು ಈ ಬೆಟ್ಟದ ಮೇಲಿದ್ದ ದುರ್ಗಿ ಎಂಬ ರಾಣಿಯೊಬ್ಬಳ ಕಥೆ. ಈಕೆ ಈ ಬೆಟ್ಟದ ಮೇಲೆ ರಾಜ್ಯಬಾರ ಮಾಡುತ್ತಿದ್ದಳಂತೆ. ಈಕೆ ಯಾರಿಗೂ ಕ್ಯಾರೇ ಅನ್ನುತ್ತಿರಲಿಲ್ಲವಂತೆ. ಒಂದು ಸಂಜೆ ಬ್ರಿಟಿಷ್ ದಂಡನಾಯಕನೊಬ್ಬ ಈ ಬೆಟ್ಟದ ಕೆಳಗಿಂದ ದಂಡು ತೆಗೆದುಕೊಂಡು ಹೋಗುತ್ತಿದ್ದನಂತೆ. ಆಗ ಬೆಟ್ಟದ ಮೇಲಿದ್ದ ರಾಣಿ ಅಲ್ಲಿಂದಲೇ ಬಾಣ ಬಿಟ್ಟು ಆ ದಂಡನಾಯಕನ ಟೋಪಿ ಹಾರಿಸಿಬಿಟ್ಟಳಂತೆ. ಸಿಟ್ಟಿಗೆದ್ದ ಆತ ತಿಂಗಳುಗಟ್ಟಲೆ ಈಕೆಯನ್ನು ಹಿಡಿಯಲು ತಿಣಿಕಿದನಂತೆ. ಆಕೆ ಸಿಗಲೇ ಇಲ್ಲವಂತೆ. ಬೆಟ್ಟದ ಹಾದಿ ಅಷ್ಟು ದುರ್ಗಮವಂತೆ. ಕೊನೆಗೆ ರಾಣಿಯ ಬಿಡಾರಕ್ಕೆ ಹಾಲು ತೆಗೆದುಕೊಂಡು ಹೋಗುವ ಕೆಳಗಿನ ಹಳ್ಳಿಯ ಮುದುಕಿಯೊಬ್ಬಳ ನೆರವಿನಿಂದ ರಾಣಿಯನ್ನು ಹಿಡಿದು ತರಿಯಲಾಯಿತಂತೆ.
‘ಕೋಲಾರದ ರಾಣಿಗೆ ಹಾಲೇ ಹಾಲಾಹಲವಾಯಿತು’ ಎಂದು ಅವರು ನಕ್ಕರು. ಬೆಟ್ಟದ ಕೆಳಗಿನ ಕೋಲಾರ ಆರು ಲೇನಿನ ಸೂಪರ್ ಹೈವೇಯ ದೊಡ್ಡದಾದ ಹೊಡೆತಕ್ಕೆ ಸಿಕ್ಕು ನಲುಗಿ ಹೋಗಿದೆ. ಏರು ಜವ್ವನೆಯೊಬ್ಬಳ ಕಿಬ್ಬೊಟ್ಟೆಯ ಮೇಲಿನ ಶಸ್ತ್ರಚಿಕಿತ್ಸೆಯ ಕೆಟ್ಟ ಗುರುತಿನಂತೆ ಹಾದು ಹೋಗಿರುವ ರಾಷ್ಟೀಯ ಹೆದ್ದಾರಿ. ಅದರ ಗರಕ್ಕೆ ಸಿಲುಕಿ ತಾನು ಈಗೇನು ಎಂಬ ಅರಿವಿಲ್ಲದೆ ನಲುಗಿ ಹೋಗಿರುವ ಪುರಾತನ ಪಟ್ಟಣ. ಪಟ್ಟಣದ ನಡುವೆ ಮುತ್ತೈದೆಯಂತೆ ನಿಂತಿರುವ ಗಡಿಯಾರ ಗೋಪುರ. ಅದರ ಪಕ್ಕದಲ್ಲೇ ಸುಲ್ತಾನ್ ಹೈದರಾಲಿಯ ತಂದೆಯ ಸಮಾದಿ. ಆ ಸಮಾದಿಯಿಂದ ಒಂದಷ್ಟು ಮುಂದಕ್ಕೆ ನಡೆದು, ಬಲಕ್ಕೆ ತಿರುಗಿ ಹಳೆಯ ಕಾಲದ ಚಿತ್ರಮಂದಿರವೊಂದರ ಮುಂದೆ ನಿಂತರೆ ಹಳೆಯ ಕಾಲದ ಎರಡು ಅಂತಸ್ತಿನ ಹಂಚಿನ ಮನೆಯೊಂದು ನಿಂತಿದೆ. ಆ ಮನೆಯ ಬಳಿಯಲ್ಲೇ ಒಂದು ಮಟನ್ ಅಂಗಡಿ ಮತ್ತು ಎಣ್ಣೆಸೋರಿಕೊಂಡು ನಿಂತಿರುವ ಒಂದು ವಿದ್ಯುತ್ ಟ್ರಾನ್ಸ್ ಫಾರ್ಮರ್. ಆ ಮನೆಯೊಳಗೆ ಕನ್ನಡದ ಅನನ್ಯ ಬರಹಗಾರ ‘ಕಾಮರೂಪಿ’ ಒಬ್ಬರೇ ಬದುಕುತ್ತಿದ್ದಾರೆ.ಅವರಿಗೆ ಈಗ ಹತ್ತಿರ ಹತ್ತಿರ ಎಂಬತ್ತು ವರ್ಷಗಳಾಗಿವೆ.
‘ಕಾಮರೂಪಿ’ಯವರ ನಿಜವಾದ ಹೆಸರು ಎಂ.ಎಸ್. ಪ್ರಭಾಕರ್. ಭಾರತದ ಈಶಾನ್ಯ ಪ್ರಾಂತದಲ್ಲೂ, ದೂರದ ದಕ್ಷಿಣ ಆಫ್ರಿಕಾದಲ್ಲೂ ಬಹಳಷ್ಟು ಕಾಲ ಆಂಗ್ಲ ಪತ್ರಕರ್ತರಾಗಿ ಕೆಲಸ ಮಾಡಿದವರು ಇವರು. ನೋಡಿದೊಡನೆ ಕಾಲು ಮುಟ್ಟಬೇಕು ಅನಿಸುವ ಅವರ ಕಣ್ಣಿನ ತೇಜಸ್ಸು ಮತ್ತು ಮುದ್ದಿಸಬೇಕೆನ್ನಿಸುವ ಅವರ ಮಗುವಿನ ಮನಸ್ಸು. ಕನ್ನಡದ ಮಹಾಮಹಾ ಬರಹಗಾರರ ಅಬ್ಬರಗಳ ನಡುವೆ ತಣ್ಣಗೆ ಕಟುವಾಗಿ ಸ್ವಲ್ಪವೇ ಬರೆದು ರೋಸಿ ಹೋಗಿ ದೂರ ಇದ್ದವರು. ಈಗ ತಮ್ಮ ಇಳಿಗಾಲದಲ್ಲಿ ತಮ್ಮದೇ ಬರಹವೊಂದರ ಪ್ರತಿಮೆಯಂತೆ ಈ ಪುರಾತನ ನಗರದಲ್ಲಿ ಬದುಕುತಿದ್ದಾರೆ. ಮಾತು ಮಾತಿಗೂ ತಾನು ಸಾವಿಗಾಗಿ ಕಾಯುತ್ತಿರುವ ಒಂಟಿ ಮುದುಕ ಅನ್ನುತ್ತಿದ್ದಾರೆ. ಬೆಟ್ಟದಿಂದ ಇಳಿದು ಬಂದ ಮೇಲೆ ಅವರಷ್ಟೇ ರೋಸಿ ಹೋಗಿರುವ ನನ್ನ ಮನಸ್ಸು. ಏನೆಲ್ಲವನ್ನೂ ಹತ್ತಿ ಇಳಿದು ಬಂದರೂ ಪಾದದ ಕೆಳಗೆ ಸೋರುತ್ತಿರುವ ಮರಳಿನಂತಹ ಜಿನುಗು ಜಿನುಗು ಹೃದಯ.
‘ಅಯ್ಯೋ ನನ್ನ ಇಂಟರ್ನೆಟ್ ಹಾಳಾಗಿ ಹೋಗಿದೆ. ನಿನ್ನಂತಹ ಖಳರೊಡನೆ ಸಂಪರ್ಕಿಸಲು ಇದ್ದ ಈ ಭೂಲೋಕದ ಇದೊಂದು ಕೊಂಡಿಯೂ ಹೊರಟು ಹೋಗಿದೆ’ ಎಂದು ಪರದಾಡುತ್ತಿರುವ ಮಗುವಿನಂತಹ ಹಿರಿಯ ಲೇಖಕ ಕಾಮರೂಪಿ. `ತಡೀರಿ ಸಾರ್ ನಾನೂ ಒಂದು ಕೈ ನೋಡಿಯೇ ಬಿಡುತ್ತೇನೆ’ ಎಂದು ಕಲಿತ ವಿದ್ಯೆಯನ್ನೆಲ್ಲ ಬಳಸಿ ಇಂಟರ್ನೆಟ್ ಸರಿ ಮಾಡಲು ನೋಡಿದೆ. ಆಗಲಿಲ್ಲ. ನೋಡಿದರೆ ಫೋನೇ ಸತ್ತು ಹೋಗಿತ್ತು. ಕೋಲಾರದ ಯಾವುದೋ ಪೋಲಿ ಬಾಲಕನೊಬ್ಬ ಕಾಮರೂಪಿಯವರ ಮನೆಗೆ ಹೋಗುತ್ತಿದ್ದ ತಾಮ್ರದ ಭೂಗತ ತಂತಿಯನ್ನೇ ಕಿತ್ತು ಮಾರಿ ಬಿರಿಯಾನಿ ತಿಂದು ಬಿಟ್ಟಿದ್ದ. ಇದನ್ನು ಅರಿತ ಕಾಮರೂಪಿಯವರು ಮರುಕದಿಂದ ನಗುತ್ತಿದ್ದರು.
‘ಏನು ಕಾಮರೂಪಿಯವರೇ ಈಗಲೂ ನಾನೊಬ್ಬ ಕಟ್ಟಾ ಕಮ್ಯುನಿಷ್ಟ್ ಎಂದು ಹೇಳುವ ತಾವು ತಮ್ಮ ಟೆಲಿಫೋನ್ ತಂತಿಯನ್ನು ಕದ್ದ ಬಡ ಹುಡುಗನ ಕುರಿತು ಯಾವ ನಿಲುವುನ್ನು ತಾಳುತ್ತೀರಿ’ ಎಂದು ಕೀಟಲೆ ಮಾಡಿದೆ. ‘ನಿನ್ನದು ಸಿಲ್ಲಿ ಪ್ರಶ್ನೆ’ ಎಂದು ಅವರು ನಕ್ಕರು ಆಮೇಲೆ ಬಹಳ ಹಳೆಯ ಕಾಲದ ದ್ರಾಕ್ಷಾರಸದ ಬಾಟಲೊಂದನ್ನು ಅವರು ಹೊರ ತೆಗೆದರು. ಜೊತೆಗೆ ಒಂದಿಷ್ಟು ಪಿಸ್ತಾ ತುಂಬಿಕೊಂಡಿರುವ ಪೊಟ್ಟಣಗಳು.
ಅವರನ್ನು ಬಿಟ್ಟು ಬರುವಾಗ ತಲೆಯೊಳಗೆ ಬರೀ ಬೆಳದಿಂಗಳು ಮತ್ತು ಹುಚ್ಚುಹುಚ್ಚು ಆಲೋಚನೆಗಳು…
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.