ರುಚಿನೋಡಿ ರವೆಯನ್ನು ನೋಡುತ್ತಿದ್ದಂತೆ 12 ವರ್ಷದ ಮಗನ ನೆನಪಿಗೆ ಬಂದದ್ದೆ “ರವೆ ಉಂಡೆ ರವೆ ಉಂಡೆ ಬೀರಿನಲ್ಲಿ ಕಂಡೆ” ಎಂಬ ಶಿಶುಪದ್ಯದ ಸಾಲುಗಳು ಬಂದರೆ ನನಗೆಂತೂ ಆ ರವಮಂ ನಿರ್ಜಿತ ಕಂಠೀರವಮಂ ನಿರಸ್ತಘನ ರವಮಂ ಕೋಪಾರುಣ ನೇತ್ರಂ ಕೇಳ್ದಾ ನೀರೊಳಗಿರ್ದುಂ ಬೆಮರ್ತನ್ ಉರಗಪತಾಕಂ ಎಂಬ ರನ್ನನ ಕೃತಿಯ 6ನೇ ಸಂಧಿಯ 22 ನೆಯ ಪದ್ಯ. ಇದು ದುರ್ಯೋಧನನ್ನು ಆತನ ಕೋಪವನ್ನು ವಿವರಿಸುವ ಪದ್ಯ. ಅದೇ ಟಿ.ವಿ.ಯವರ ಕೈಗೆ ಸಿಕ್ಕರೆ ರವ ಶಬ್ದ ನೀರವ ನೀರವ ಮೌನ ಎನ್ನುತ್ತಿದ್ದರು ಅಷ್ಟೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ನಾಲ್ಕನೆಯ ಬರಹ ನಿಮ್ಮ ಓದಿಗೆ
ಈಗಂತೂ ಗಣಪತಿಯ ಆಕರ್ಷಕ ಮೂರ್ತಿಗಳು ಎಲ್ಲಾ ಕಡೆ ರಾರಾಜಿಸುತ್ತಿವೆ. ಹಬ್ಬದ ಸಡಗರದಂತೆ ಕನ್ನಡವೂ ಹಬ್ಬಬೇಕು ಎಂಬುದೇ ಈ ಬರಹದ ಉದ್ದೇಶ. ಗಣಪತಿ ಮೂರ್ತಿ ಸಾರುವ ಸಂದೇಶವನ್ನು ನಾವು ಗ್ರಹಿಸಿದರೆ ಮಾತ್ರ ನಾವು ಗರಿಕೆ ಅರ್ಪಿಸಿದ್ದು ಸಾರ್ಥಕ ಅನ್ನಿಸುತ್ತದೆ. ಗಣಪತಿ ಮೂರ್ತಿಯನ್ನು ಪ್ರತಿಷ್ಟಾಪಿಸುವುದು ಮತ್ತೆ ನೀರಿನಲ್ಲಿ ವಿಸರ್ಜಿಸುವುದು ಹುಟ್ಟು ಸಾವುಗಳನ್ನು ಪ್ರತಿನಿಧಿಸಿದರೆ ಪರಿಸರ ಗಣಪ ಪರಿಸರದ ಬಗ್ಗೆ ಅರಿವನ್ನು ಮೂಡಿಸುತ್ತಾನೆ. ಗಣಪನ ಎದಿರು ಸ್ವಾತಂತ್ರ್ಯದ ಹಂಬಲವಿರಿಸಿಕೊಂಡಿದ್ದ ಅನೇಕರಿಂದ ಚರ್ಚೆಯಾಗುತ್ತಿತ್ತು. ಆ ನೆಪದಲ್ಲಿ ಮನೋರಂಜನೆ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ಆದರೀಗ ಮನಿ ರಂಜನೆ ಬಂದಿದೆ; ಹಣವಿದ್ದರೆ ಎಲ್ಲವೂ ಅನ್ನುವ ಭಾವನೆ ಬಂದಿದೆ.
ಪರಿಸರ ಯಾವಾಗಲೂ ನಮ್ಮೆದುರು ಅಂದರೆ ಗೊನೆಬಿಟ್ಟ ಬಾಳೆ, ತೆನೆ ಭರಿತ ಭತ್ತ ಬಾಗಿಯೇ ಇರುತ್ತವೆ. ಅವುಗಳ ಮುಂದೆ ಮನುಷ್ಯ ಬೀಗುತ್ತಾನೆ ಎಂದು ಯೋಚಿಸುತ್ತಿರುವಾಗಲೇ ಧಾರಾಳವಾಗಿ ತುಪ್ಪದಲ್ಲಿ ಹುರಿದ ಒಣಹಣ್ಣಿನ ಘಮ, ಬಾಂಬೆರವ ಕೇಸರಿ ಬಾತ್ ನಮ್ಮನ್ನು ಕರೆಯುತ್ತಿತ್ತು.
ರುಚಿನೋಡಿ ರವೆಯನ್ನು ನೋಡುತ್ತಿದ್ದಂತೆ 12 ವರ್ಷದ ಮಗನ ನೆನಪಿಗೆ ಬಂದದ್ದೆ “ರವೆ ಉಂಡೆ ರವೆ ಉಂಡೆ ಬೀರಿನಲ್ಲಿ ಕಂಡೆ” ಎಂಬ ಶಿಶುಪದ್ಯದ ಸಾಲುಗಳು ಬಂದರೆ ನನಗೆಂತೂ ಆ ರವಮಂ ನಿರ್ಜಿತ ಕಂಠೀರವಮಂ ನಿರಸ್ತಘನ ರವಮಂ ಕೋಪಾರುಣ ನೇತ್ರಂ ಕೇಳ್ದಾ ನೀರೊಳಗಿರ್ದುಂ ಬೆಮರ್ತನ್ ಉರಗಪತಾಕಂ ಎಂಬ ರನ್ನನ ಕೃತಿಯ 6ನೇ ಸಂಧಿಯ 22 ನೆಯ ಪದ್ಯ. ಇದು ದುರ್ಯೋಧನನ್ನು ಆತನ ಕೋಪವನ್ನು ವಿವರಿಸುವ ಪದ್ಯ. ಅದೇ ಟಿ.ವಿ.ಯವರ ಕೈಗೆ ಸಿಕ್ಕರೆ ರವ ಶಬ್ದ ನೀರವ ನೀರವ ಮೌನ ಎನ್ನುತ್ತಿದ್ದರು ಅಷ್ಟೆ. ಅಷ್ಟರಲ್ಲಿ ಹಿಂದಿನ ಮಕ್ಕಳು ಎಲಿಫೆಂಟ್ ಫೇಸಿನ ಗಣಪ ಎನ್ನುತ್ತಿದ್ದರು. ಅದೆಲ್ಲಾ ಹೋಗಲಿ ಪ್ರಸ್ತುತ ಅವರಿಗೆ ವ್ಯಾಕರಣ ಎಂದರೆ ಕ್ಯಾಕರ್ನಾ ಎನ್ನುವಲ್ಲಿಗೆ ಬಂದಿದ್ದಾರೆ. ವ್ಯಾಕರಣ ಇರಲಿ ಅಕ್ಷರ ವ್ಯತ್ಯಾಸ ತಿಳಿಯರು. ದನ>ಧನ ನಡುವಿನ ವ್ಯತ್ಯಾಸವೇ ತಿಳಿದಿರಲಾರರು. ಆದರೆ ರಾಜ್ಯೋತ್ಸವ ಬಂದಾಗ “ಹಚ್ಚೇವು ಕನ್ನಡದ ದೀಪ….” ಹಾಡನ್ನು ಹಾಡುತ್ತಾರೆ, ಅದಕ್ಕೆ ನರ್ತಿಸುತ್ತಾರೆ. ಸಾಮಾಜಿಕರು ಗಮನಿಸಿರಬಹುದು. ದೀಪ ಹಚ್ಚುವುದು ಬೇರೆ ಕಚ್ಚುವುದು ಬೇರೆ. ಹಾವು ಕಚ್ಚಿತು ಎನ್ನುವುದು ಸರಿ ಅಲ್ವೆ! ನಮ್ಮ ಹಿರಿಯರು ಋಣಾತ್ಮಕವನ್ನೂ ಧನಾತ್ಮಕವಾಗಿ ಹೇಳಿದವರು. ಉದಾ; ಬಳ್ಳಿ ಮುಟ್ಟಿದೆ, ಮಜ್ಜಿಗೆ ಹೆಚ್ಚಿದೆ ಇತ್ಯಾದಿ…. ಮಕ್ಕಳ ವಿಚಾರ ಬಂದಾಗ ಈ ಶಾಲಾದಿನಾಚರಣೆಗಳು ಬಂದಾಗ ಅವರ ಉತ್ಸಾಹವನ್ನು ಗಮನಿಸಬೇಕು ಉತ್ಸಾಹದ ಜೊತೆಗೆ ಅಸೂಯೆಯೂ ಇರುತ್ತದೆ ಅನ್ನಿ. ಅಂದ ಹಾಗೆ ನನಗೆ ಶ್ವೇತಾಸೂಯಾಗ ನೆನಪಾಯಿತು.

ಈ ಶ್ವೇತಾಸೂಯಾಗ ಯಾವುದು ಎನ್ನದಿರಿ? ಸ್ವಲ್ಪ ಓದುತ್ತಾ ಹೋದಂತೆ ತಮಗೇ ತಿಳಿಯುತ್ತದೆ. ಶ್ವೇತಾಳ ತರಗತಿಯಲ್ಲಿ ಎಲ್ಲರೂ ತಾಮುಂದು ನಾ ಮುಂದು ಎಂದು ಶಾಲಾವಾರ್ಷಿಕೋತ್ಸವದ ಡಾನ್ಸಿಗೆ ಸೇರಿಯೇ ಬಿಟ್ಟರು! ಶ್ವೇತಾಳೂ ಸೇರಿದಳು. ಶಾಲೆಯಲ್ಲಿ ಯಾವ ಕ್ಲಾಸ್ ರೂಮಲ್ಲಿ ನೋಡಿದ್ರು ಮೊಬೈಲ್ ಹಿಡಿದುಕೊಂಡು ಪ್ರಾಕ್ಟಿಸ್! ಪ್ರಾಕ್ಟಿಸ್! ಪ್ರಾಕ್ಟಿಸ್!….. ಪಾಪ ಶ್ವೇತಾಗೆ ಹೀರೋಯಿನ್ ಆಗಬೇಕು ಎನ್ನುವ ಆಸೆ ಮೊದಲಿನಿಂದಲೂ ಇತ್ತು. ಪ್ರಾಕ್ಟಿಸ್ ಮಾಡುವಾಗ ಟೀಚರ್ ನಿನ್ನನ್ನು ಹಿರೋಯಿನ್ ಮಾಡ್ತೀನಿ….. ಹಿರೋಯಿನ್ ಮಾಡ್ತೀನಿ ಎನ್ನುತ್ತಿದ್ದವರು ಕಡೆಗೆ ನಿನಗೆ ಕೂದಲು ಉದ್ದ ಇಲ್ಲ ಎಂದು ಉದ್ದ ಕೂದಲು ಇರುವ ಹುಡುಗಿಯನ್ನು ಹಿರೋಯಿನ್ ಮಾಡಿದರು. ಆದ ಕಾರಣ ಶ್ವೇತಾ “ನಾಗಿನ್ ನಾಗಿನ್….” ಬುಸುಗುಡಲಾರಂಭಿಸಿದಳು. ಹೀಗೆ ಬುಸುಗುಡುತ್ತಲೇ ಇದ್ದ ಶ್ವೇತಾಗೆ ದಿನದಿಂದ ದಿನಕ್ಕೆ ಅವಳಲ್ಲಿದ್ದ ಅಸೂಯಾಯಾಗದ ತವಕ ಅರ್ಥಾತ್ ಹೊಟ್ಟೆಕಿಚ್ಚು ಹೆಚ್ಚಾಯಿತು. ಆದರೆ ಏನು ಮಾಡಲಾಗುವುದಿಲ್ಲವಲ್ಲ.. ಎಂದು ಹಳಿದುಕೊಂಡು ಅವಡುಕಚ್ಚಿಕೊಂಡು ಪ್ರಾಕ್ಟಿಸ್ ಮಾಡುತ್ತಿದ್ದಳು. ಶಾಲಾವಾರ್ಷಿಕೋತ್ಸವದ ದಿನ ಬಂದೇ ಬಂದಿತು…. ವೇದಿಕೆ ಸಜ್ಜಾಗಿತ್ತು ಅತಿಥಿಗಳ ಭಾಷಣವೂ ಮುಗಿಯುತ್ತಿತ್ತು. ‘ನಾನ್ ಹಿರೋಯಿನ್’ ಎನ್ನುವ ಹೆಚ್ಚುಗಾರಿಕೆಯಿಂದ ಆ ಹುಡುಗಿಯೂ ಚಂದದ ಅಲಂಕಾರ ಮಾಡಿಕೊಂಡು ಸರದಿಯನ್ನು ಕಾಯುತ್ತಿದ್ದಳು, ಶ್ವೇತಾಗೆ ಅವಳ ಅಲಂಕಾರ ನೋಡಿ ‘ನಾನು ಹಿರೋಯಿನ್ ಆಗಿದ್ರೆ ಹೀಗೆ ಇರಬಹುದಿತ್ತ! ಹೊಟ್ಟೆ ಎಷ್ಟು ಉರಿಸ್ತಾಳೆ’ ಎಂದುಕೊಳ್ಳುತ್ತಿದ್ದಳು ಅವರ ನೃತ್ಯದ ಸರದಿ ಬಂದಾಗ ಧೈರ್ಯದಿಂದ ಹಿರೋಯಿನ್ ನಿಲ್ಲುವೆಡೆ ನಿಂತು ನಂತರ ನೋಡಿಕೊಂಡರೆ ಆಯಿತು ಎಂದು ಎಲ್ಲಾ ಚಿಂತೆ ಬಿಟ್ಟು ಅಸೂಯಾಯಾಗವನ್ನು ಈಡೇರಿಸಿಕೊಂಡಳು. ಅರ್ಥಾತ್ ನರ್ತಿಸಿದಳು. ಹೀಗೆ ಶ್ವೇತಾಸೂಯಾಯಾಗ ಸಂಪನ್ನವಾಯಿತು ಎನ್ನಿ. ಇದೊಂದು ರೀತಿ ಮಕ್ಕಳ ಮನಃಸ್ಥಿತಿ.
ದುಡ್ಡಿದ್ದವರು ಹಾಗೆಯೇ.. ಕಾಸ್ಟ್ಲಿ ಎಂದರೆ ಕ್ಲಾಸ್ ಆಗಿರುತ್ತದೆ ಎನ್ನುತ್ತಾರೆ. ಅರ್ಥಾತ್ ಅತ್ಯಂತ ದುಬಾರಿ ಬೆಲೆಯದ್ದು ಅಂದರೆ ಉತ್ತಮ ಗುಣಮಟ್ಟದ್ದು ಅನ್ನುವ ತಪ್ಪು ಕಲ್ಪನೆ ಇರುತ್ತದೆ. ಕಾಸ್ಟ್ಲಿ ಶಾಪಿಂಗ್ ಮಾಡುವುದು ಮುಖ್ಯವಲ್ಲ. ಕ್ವಾಲಿಟಿ ಶಾಪಿಂಗ್ ಮುಖ್ಯ. ಇರಲಿ ವಿದೇಶಿ ಉದ್ಯೋಗಿ ಪತಿ ಊರಿಗೆ ಬಂದಾಗ ಹೆಂಡತಿ ಆಸೆ ತೀರಿಸಬೇಕೆಂದು ಅರ್ಜಂಟಾಗಿ ಮಸಾಲೆ ದೋಸೆ ತರ ಹೋಗುತ್ತಾನೆ. ಆತುರಕ್ಕೆ ಹೆಲ್ಮೆಟ್ ಹಾಕುವುದಿಲ್ಲ, ಗಾಡಿ ಡಾಕ್ಯುಮೆಂಟ್ಸ್ ಯಾವುದು ಕೊಂಡೊಯ್ಯಲ್ಲ. ತರಾತುರಿಯಿಂದ ಬಿಸಿ ಮಸಾಲೆ ದೋಸೆ ತೆಗೆದುಕೊಂಡವನೆ ಭರ್ರನೆ ಮುನ್ನುಗ್ಗಿ ಬರುತ್ತಿರಬೇಕಾದರೆ ಸಡನ್ ಆಗಿ ಪೋಲಿಸರು ಅಡ್ಡಹಾಕುತ್ತಾರೆ. ಅಷ್ಟರಲ್ಲಾಗಲೆ ಗರಿ ಗರಿ ಮಸಾಲೆ ದೋಸೆ ಬಿಸಿ ಆರಿ ಈತನ ದೇಹದ ಉಷ್ಣಾಂಶ ಏರತೊಡಗುತ್ತದೆ. ಹೆಲ್ಮೆಟ್ ಇಲ್ಲ ಇನ್ಶ್ಯೂರೆನ್ಸ್ ಇಲ್ಲ ಡಾಕ್ಯಮೆಂಟ್ಸ್ ಇಲ್ಲ ಅನ್ನುವ ಕಾರಣಕ್ಕೆ 6300 ಕೇಸ್ ಬಿಲ್ ಆಗುತ್ತದೆ. ಮನೆಗೆ ಬಂದವನೆ ಬಯ್ಯಬೇಡ ಇದರ ಬೆಲೆ 6300 ಅಂದರೆ ಹೆಂಡತಿ, ಏನು ಚಿನ್ನ ಅರೆದು ಚಿನ್ನ ತುಂಬಿಸಿದ್ದಾರ ಎನ್ನುತ್ತಾ ಹಾರಿ ಬೀಳುತ್ತಾಳೆ. ಫಾರಿನ್ ಪತಿ ನಡೆದ ಘಟನೆಗಳನ್ನು ಹೇಳುತ್ತಾನೆ.
ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವುದು ಎನ್ನುತ್ತಾರಲ್ಲ ಹಾಗೆ ಒಂದು ದೋಸೆ ಎಷ್ಟು ಕಾಡಿಸುತ್ತದೆ. ನಾವು ಹಾಗೆ ಬಚ್ಚಲುಗಿಂಡಿಯಲ್ಲಿ ಹೋಗುವುದನ್ನು ತಡೆಯಲು ಮುಂದಾಗುತ್ತೇವೆ. ಮುಂಬಾಗಿಲಲ್ಲೆ ನಷ್ಟವಾಗಿ ಹೋಗಿರುತ್ತದೆ. ತೀರಾ ಕ್ಯಾಲ್ಕುಲೇಟ್ ಮಾಡಬಾರದು ಅಲ್ವ!

ಡೌನ್ ಇದೆ ಎಂದು ಗಾಡಿಯನ್ನು ನ್ಯೂಟ್ರಲ್‌ನಲ್ಲಿ ತೆಗೆದುಕೊಂಡು ಬಂದರೆ ಮತ್ತೆ ಅಪ್ ಹತ್ತಬೇಕಾದರೆ ಇನ್ನಷ್ಟು ಪೆಟ್ರೋಲ್ ಖಾಲಿಆಗುತ್ತಲ್ಲ ಹಾಗೆ. ಜೇಡರ ದಾಸಿಮಯ್ಯ ಹರಿದ ಗೋಣಿಯಲ್ಲೊಬ್ಬ ಕಳವೆಯ ತುಂಬಿದ ಮನುಷ್ಯನಿಗೆ ದುರಾಸೆ; ಹೆಚ್ಚು ಹೆಚ್ಚು ಗಳಿಸಬೇಕು, ಹೆಚ್ಚು ಉಳಿಸಬೇಕು ಅದೂ ಕಡಿಮೆ ಕರ್ಚಿನಲ್ಲಿ ಇದೊಂದು ಅಪಸವ್ಯ ಅಲ್ವೆ! ಹೇಗಾಗುತ್ತೆ ಇದು. Vat ಬಂದಾಗ ಅದೊಂದು ಕಷ್ಟ GST ಬಂದ ಮೇಲಂತೂ ಅನ್ಯ ಲೆಕ್ಕ ಸಾಧ್ಯವೇ ಇಲ್ಲ. ಮೊನ್ನೆ ಬಟ್ಟೆ ಅಂಗಡಿಗೆ ಹೋಗಿದ್ದೆ. ಲೈನಿಂಗ್ ಕ್ಲಾತ್ ತರಲು. ಅದಕ್ಕೂ ಬಿಲ್ ಕೇಳಿದೆ. ಕೊಟ್ಟರು ವಿಶೇಷ ಏನೂ ಇಲ್ಲ. ಆದರೆ ಅಂಗಡಿಯವನು ನಿಮಗೆ ಬಟ್ಟೆ ದರ ಹೇಳುವಾಗ GST ಸೇರಿಸಿ ಹೇಳಿರಲಿಲ್ಲ. ಬಿಲ್‌ನಲ್ಲಿ ಆ್ಯಡ್ ಮಾಡ್ತೀನಿ. ಯಾಕೆ ಬೇಕು ಸ್ವಲ್ಪ ಯಾಮಾರಿದ್ರೂ ಆನ್ಲೈನಲ್ಲೇ ಕಟ್ಟಬೇಕು ದಂಡ ಎಂದ. ಇನ್ನೊಮ್ಮೆ FIXED PRICE ಇರುವ ಅಂಗಡಿಗೆ ಹೋದೆ ಅಲ್ಲಿ GST ಅದರಲ್ಲೇ ಸೇರಿಕೊಂಡಿತ್ತು. ಹೆಚ್ಚು ಲಾಭವಿಲ್ಲದ, ಚೌಕಾಸಿ ಇಲ್ಲದ ಒಂದೇ ಬೆಲೆ ವ್ಯಾಪಾರ ನಿಜಕ್ಕೂ ಒಳ್ಳೆಯದೆ. ಈ ಪರ್ಸೆಂಟೆಜ್ ಡಿಸ್ಕೌಂಟ್ ಎಂದಿಗೂ ಜೇಬಿನಲ್ಲಿ ಬಾಯ್ತೆರೆದ ಕತ್ತರಿ ಇಟ್ಟುಕೊಂಡಂತೆ ಸರಿ….

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.
