ಸಂಜೆ ಅಪ್ಪ ಬಾಳೆಹಣ್ಣು ತಂದಿದ್ದನ್ನು ನೋಡಿದ್ದ. ಕೂಡಲೆ ರಾತ್ರಿ ಎದ್ದು ಡಜನ್ ಬಾಳೆ ಹಣ್ಣನ್ನು ತಿಂದು ಮಲಗಿದ. ಬೆಳಿಗ್ಗೆ ಹಣ್ಣು ಇಲ್ಲದನ್ನು ನೋಡಿ ಅಮ್ಮಗ ನೋಡಿ ಗಾಭರಿಯಾಯಿತು. ಬಾಳೆ ಹಣ್ಣು ತಿಂದವರಾರು? ಸಮುನ ಮೇಲೆ ಅನುಮಾನ ಬಂದು “ಸತ್ಯ ಹೇಳು ತಿಂದವನು ನೀನು ತಾನೆ?” ಎಂದು ತರಾಟೆ ತೆಗೆದುಕೊಂಡಳು. ಸಮು ನಡೆದ ವಿಷಯವನ್ನೆಲ್ಲ ಹೇಳಿ ಬೆಳಿಗ್ಗೆ ಮಲವಿಸರ್ಜನೆ ಮಾಡುವಾಗ ಸಿಕ್ಕ ಬೀಜಗಳನ್ನು ಖುಷಿಯಿಂದ ತೋರಿಸಿ “ಅಮ್ಮಾ, ನೋಡು ನನ್ನ ಹೊಟ್ಟೆಯಲ್ಲಿ ಹುಣಸೆ ಮರ ಬೆಳೆಯಲು ಸಾಧ್ಯನ ಇಲ್ಲ?” ಎಂದು ಗೆಲುವಿನಿಂದ ತೋರಿಸಿದ.
ಗುಂಡುರಾವ್ ದೇಸಾಯಿ ಬರೆದ ಮಕ್ಕಳ ಕತೆ “ಸಮು ಮತ್ತು ಹುಣಸೆ ಬೀಜ” ನಿಮ್ಮ ಈ ಭಾನುವಾರದ ಓದಿಗೆ
ಸಮು ಹುಣಸೆ ಹಣ್ಣು ತಿನ್ನುತ್ತಿದ್ದ. ಅಕ್ಕ “ಬೇಡಾ ಸಮು ಅದನ್ನು ತಿನ್ನಬಾರದು, ಹಲ್ಲು ಬ್ಯಾನಿ ಆಗತದ, ಪಿತ್ತ ಆಗಿ ವಾಂತಿ ಆಗುತ್ತದ” ಎಂದಳು. ಅದನ್ನೆಲ್ಲಾ ಕೇಳದೆ ಸಮು ಹಾಗೆ ಮುಂದುವರೆಸಿದ್ದ. ‘ಅನುಭವಿಸು ಆಗಲೇ ಬುದ್ಧಿ ಬರೋದು’ ಎಂದು ಅಕ್ಕ ಒಳಗೆ ಹೋದಳು. ಸ್ವಲ್ಪ ಹೊತ್ತು ಬಿಟ್ಟಮೇಲೆ ಅಳುತ್ತಾ ಬಂದ ಸಮು “ಅಕ್ಕಾ ಅಕ್ಕಾ, ನಾನು ಬೀಜಗಳನ್ನ ನುಂಗಿ ಬಿಟ್ಟಿರುವೆ. ಏನು ಆಗೋದಿಲ್ಲಲ?” ಎಂದ.
“ಅಯ್ಯೋ! ಬೀಜಗಳನ್ನ ನುಂಗಿಬಿಟ್ಟಿ? ಬೇಡಾ ಅಂತ ಬಡಕೊಂಡೆ. ಕೇಳಿದೆಯಾ? ಅನುಭವಿಸು” ಎಂದಳು ಅಕ್ಕ.
ಅಂಜಿದ್ದ ಸಮು ಮತ್ತಿಷ್ಟು ಕಂಗಾಲಾದ. “ಅಕ್ಕಾ ಏನಾಗ್ತದ ಬೀಜ ನುಂಗಿದ್ರ?”
“ಬೀಜನ ಮಣ್ಣಲ್ಲಿ ಹೂತ್ರೆ ಏನಾಗುತ್ತೆ?”
“ಬೀಜ ಮೊಳಕೆ ಒಡದು ಗಿಡ ಬೆಳೆಯುತ್ತದೆ”
“ಹಾಗೆ ನಿನ್ನ ಹೊಟ್ಟೆಯಲ್ಲೂ……….!” ಅಂದಾಗ ಸಮುಗ ಎದೆ ಡವಡವ ಬಡಿದುಕೊಳ್ಳಲಾರಂಭಿಸಿತು. ಎಂದೋ ಕೇಳಿದ ನೆನಪು. ಬೀಜ ನುಂಗಿದಾಗ ಕೂಡಲೆ ಬಾಳೆಹಣ್ಣು ತಿನ್ನಬೇಕು, ಲ್ಯಾಟ್ರಿನ್ ಆಗುತ್ತದೆ. ಅದರಲ್ಲಿ ಬೇಗ ಬರುವ ಹಾಗೆ ಮಾಡಬೇಕು ಎಂದು ಮಲಗಿದ. ಆದರೆ ನಿದ್ದೆ ಬರಲಿಲ್ಲ.
ಸಂಜೆ ಅಪ್ಪ ಬಾಳೆಹಣ್ಣು ತಂದಿದ್ದನ್ನು ನೋಡಿದ್ದ. ಕೂಡಲೆ ರಾತ್ರಿ ಎದ್ದು ಡಜನ್ ಬಾಳೆ ಹಣ್ಣನ್ನು ತಿಂದು ಮಲಗಿದ. ಬೆಳಿಗ್ಗೆ ಹಣ್ಣು ಇಲ್ಲದನ್ನು ನೋಡಿ ಅಮ್ಮಗ ನೋಡಿ ಗಾಭರಿಯಾಯಿತು. ಬಾಳೆ ಹಣ್ಣು ತಿಂದವರಾರು? ಸಮುನ ಮೇಲೆ ಅನುಮಾನ ಬಂದು “ಸತ್ಯ ಹೇಳು ತಿಂದವನು ನೀನು ತಾನೆ?” ಎಂದು ತರಾಟೆ ತೆಗೆದುಕೊಂಡಳು.
ಸಮು ನಡೆದ ವಿಷಯವನ್ನೆಲ್ಲ ಹೇಳಿ ಬೆಳಿಗ್ಗೆ ಮಲವಿಸರ್ಜನೆ ಮಾಡುವಾಗ ಸಿಕ್ಕ ಬೀಜಗಳನ್ನು ಖುಷಿಯಿಂದ ತೋರಿಸಿ “ಅಮ್ಮಾ, ನೋಡು ನನ್ನ ಹೊಟ್ಟೆಯಲ್ಲಿ ಹುಣಸೆ ಮರ ಬೆಳೆಯಲು ಸಾಧ್ಯನ ಇಲ್ಲ?” ಎಂದು ಗೆಲುವಿನಿಂದ ತೋರಿಸಿದ.
ಅಮ್ಮ “ಛೀ… ಎಂತಹ ಕೆಲಸ ಮಾಡಿದೆ. ಹೇಳಬೇಕಿತ್ತಲ್ಲ. ಹೇಳದೆ ಇಷ್ಟೊಂದು ಬಾಳೆಹಣ್ಣು ತಿಂದುಬಿಡೋದಾ? ಹೆಚ್ಚುಕಮ್ಮಿ ಆಗಿದ್ರೆ ಏನು ಮಾಡತಿದ್ದೆ?” ಎಂದಳು.
“ಅಕ್ಕ ಹೇಳಿದ ವಿಷಯ ಕೇಳಿ ಭಯ ಆಯ್ತಮ್ಮ, ಅದಕ್ಕೆ ಹಾಗೆ ಮಾಡಿದೆ ಕ್ಷಮಿಸಮ್ಮ” ಎಂದನು ಸಮು.
“ಆಯ್ತು, ಇನ್ನೊಮ್ಮೆ ಈ ರೀತಿ ಮಾಡಬೇಡ” ಎಂದು ತಿಳಿ ಹೇಳಿದಳು.
ಈ ಘಟನೆ ನಡೆದು ವಾರವಾಗಿರಲಿಲ್ಲ ಅಕ್ಕ “ಬಾಯಿ ಚುಟು ಚುಟು ಅಂತಿದೆ ಏನಾದ್ರೂ ಕೊಡಮ್ಮ” ಎಂದಳು.
“ಏನಿಲ್ಲ… ಮನೆಯಲ್ಲಿ. ಏನು ಕೊಡಲಿ….? ಸಂಜೆ ಅಪ್ಪನಿಗೆ ಹೇಳತೀನಿ. ತರುತ್ತಾರೆ” ಎಂದಳು ಅಮ್ಮ.
“ಇಲ್ಲಮ್ಮ ನನಗೆ ಹುಣಸೆ ಬೀಜ ಕೊಡು, ಅವನ್ನೆ ಹುರಕೊಂಡು ತಿಂತಿನಿ” ಎಂದಳು ಅಕ್ಕ.
“ನಿತ್ಯ ನೀನೆ ತಿಂದು ತಿಂದು ಖಾಲಿ ಮಾಡಿದಿ ಎಲ್ಲಿ ತರಲಿ?” ಎಂದಳು ಅಮ್ಮ.
“ನನಗೆ ಬೇಕ ಬೇಕು” ಎಂದು ಅಕ್ಕ ಹಠ ಹಿಡಿದಳು.
ಅಲ್ಲೆ ಇದ್ದ ಸಮು “ಅಕ್ಕ ನನಗೆ ತಿಂದ್ರ ಗಿಡ ಆಗುತ್ತೆ ಅಂತಿದ್ದಿ, ನಿನಗೆ ಆಗಲ್ಲೇನು?” ಎಂದ.
“ಪೆದ್ದು, ನೀನು ಹಸಿದು ತಿಂದಿಯಾ, ವಾರ ಆಗಲಿ ಅದು ಬೆಳೆಯುತದೆ. ಬಾಯಿಯಿಂದ, ಕಿವಿ, ಕಣ್ಣು, ಮೂಗಿನಿಂದ ಹೊರಗೆ ಬರುತ್ತೆ. ಆದರೆ ಹುರಿದು ತಿಂದರೆ ಬೆಳೆಯೊಲ್ಲ” ಎಂದಳು.
“ಅಮ್ಮಾ…. ನೋಡಮ್ಮ ಅಂಜಸ್ತಾಳ ” ಅಂತ ಸಮು ಅಳತಾ ನಿಂತ.
“ಹೇ… ಹಾಗೆಲ್ಲಾ, ಅಂಜಸ್ತಾರೇನು?” ಎಂದು ಅಮ್ಮ ಅಕ್ಕನಿಗೆ ಬೈದಳು.
ಅಕ್ಕ “ಹಾಂ… ಏನು ಮಾಡತೀಯಾ ಗೊತ್ತಿಲ್ಲ… ಅಮ್ಮಾ ನನಗೆ ಕೊಡು. ಇಲ್ಲಾ ಸಮ್ಮುನ ಅಂಜಸಾಕಿ” ಅಂತ ಗಂಟು ಬಿದ್ದಳು. ‘ನನ್ನ ಕೆಲಸ ನನಗೆ ನಿನ್ನದೊಂದು ಕಿರಿಕಿರಿ’ ಎಂದು ಎಲ್ಲಾ ಕಡೆ ಹುಡುಕಿದಾಗ ಕಪಾಟಿನಲ್ಲಿ ನಾಲ್ಕು ಬೀಜಗಳು ಕಂಡವು. “ಇರೋವು ಇಷ್ಟ, ಕಾಡಬೇಡ”ಎಂದು ಅವುಗಳನ್ನೆ ಕೊಟ್ಟಳು. ಅಕ್ಕ ಅದನ್ನು ಹುರಿದು ಉಪ್ಪು ಹಾಕಿ ಕಲಿಸಿ ‘ಕಟುಂ ಕಟುಂ’ ಎಂದು ಕಡಿಯುತ್ತಾ ತಿನ್ನುವಾಗ ಸಮು “ಅಕ್ಕಾ.. ನನಗೆ ಒಂದು ಕೊಡು, ನಿನ್ನೆ ಕುರುಕುರೆ ಕೊಟ್ಟಿದ್ದೆನಲ್ಲ” ಎಂದು ಕೇಳಿದ. ಎಷ್ಟೇ ಕೇಳಿದ್ರೂ… ಗೋಗರೆದ್ರೂ ಅಕ್ಕ ಕೊಡಲಿಲ್ಲ. ನೋಡುವವರೆಗೂ ನೋಡಿ ಸಮು ಜೋರಾಗಿ ನಗಲು ಆರಂಭಿಸಿದ.
“ಯಾಕೆ ನಗತಿಯಾ?” ಅಂತ ಅಮ್ಮ ಕೇಳಿದ್ಲು. ಅಕ್ಕನು ಧ್ವನಿಗೂಡಿಸಿದ್ಲು.
“ಅಮ್ಮಾ ಅಮ್ಮಾ ಆ ಬೀಜ ಕೊಟ್ಟೆ ಅಲ್ಲ, ಎಲ್ಲಿದ್ದವು ಹೇಳು?”
“ಕಪಾಟಿನಲ್ಲಿ”
ಜೋರಾಗಿ ನಗುತ್ತಾ ಸಮ್ಮು “ಅಮ್ಮಾ ಅವು ಯಾವವು ಗೊತ್ತಾ? ನಾನು ಮೊನ್ನೆ ಹುಣಸೆ ಹಣ್ಣು ತಿನ್ನುವಾಗ ನುಂಗಿದ ಬೀಜಗಳು. ಲ್ಯಾಟ್ರಿನ್ ಮಾಡುವಾಗ ಬಂದದ್ದು… ಹ್ಯಾ ಛೀ…” ಅಂದು ಬಿಟ್ಟ.
ಈಗ ಅಳುವ ಸರದಿ ಅಕ್ಕನದಾಯಿತು. ‘ವಾಯಕ್…….. ವ್ಯಾಕ್…….’ ಅಂತ ಉಬ್ಬಳಸ್ತಾ ಬಚ್ಚಲ ಮನಿಗೆ ಓಡಿದಳು. ಜೋರಾಗಿ ಅಳತೊಡಗಿದಳು. “ಎಂತಹ ಮೋಸ ಮಾಡಿದೆ. ದಡ್ಡ, ಶತ ದಡ್ಡ. ಏನು ಮಾಡಿದ್ದು ಬುದ್ದಿ ಇಲ್ವೇನೊ? ಹೊಟ್ಟೆಗಿದ್ರಾ ಅವೇನು ಗಿಡ ಬೆಳಿತಿದ್ವಾ? ಅಷ್ಟ್ಯಾಕ ಮನಸಿಗೆ ತೆಗೆದುಕೊಂಡು ಅದನ್ನ ಕೈ ಹಾಕಿ ತಗದು ಇಲ್ಲಿ ತಂದಿಟ್ಟಿ? ಯಾಕ್ ಚೀ…. ಓಹೋ ……ಅಮ್ಮಾ ನಾನು ಸಾಯ್ತಿನಿ” ಅಂತ ಗೋಳಾಡತೊಡಗಿದಳು.
ಅಷ್ಟರಲ್ಲಿ ಹೊರಗಿನಿಂದ ಬಂದ ಅಪ್ಪ ಎಲ್ಲಾ ವಿಷಯ ಕೇಳಿ ನಕ್ಕ.
“ಇಲ್ಲಪ್ಪ ನಾನು ಹೇಳಿದ್ದು ತಪ್ಪಾಯ್ತು. ಇನ್ನೊಮ್ಮೆ ನಾನು ಹಾಗೆ ಮಾಡುವುದಿಲ್ಲ” ಎಂದು ಅಳತೊಡಗಿದಳು.
ಸಮು “ಹಾಂಗೆ ಆಗಬೇಕು… ಹಾಂಗೆ ಆಗಬೇಕು….. ನಾ ನಗಬೇಕು… ನೀ ಅಳಬೇಕು” ಎಂದು ಕೂಗತೊಡಗಿದ.
“ಸಮು……?” ಎಂದು ಅಪ್ಪ ಕಣ್ಣು ತಿರುವಿದ.
“ಇಲ್ಲಪ್ಪ ತಪ್ಪಾಯ್ತು” ಎಂದು ಸಮು ಗಪ್ಪಾದ.
“ಅಪ್ಪಾ ಏನಾದ್ರೂ ಮಾಡು, ವಾಂತಿ ಬಂದ ಹಾಗೆ ಆಗುತಿದೆ, ತಲೆ ಸುತ್ತಿದಂತೆ ಆಗತಿದೆ. ಏನಾದ್ರೂ ಮಾಡಪ, ವಾಸನೆ ತಡಿಯೋಕೆ ಆಗತಾ ಇಲ್ಲ” ಎಂದಳು ಅಕ್ಕ.
“ಸಮು, ಅವನ್ನು ತೊಗೊಂಡು ಬಾರೊ?” ಎಂದು ಅಪ್ಪ ಕೂಗಿದ.
ಒಂದು ಹಾಳೆಯಲ್ಲಿ ಸುತ್ತಿದ್ದ ನುಂಗಿದ ಬೀಜಗಳನ್ನು ತಂದು ತೋರಿಸಿದ. “ನೀನು ತಿಂದಿದ್ದು ಇವಲ್ಲ ಬೇರೆ. ಅಂದು ಅವನಿಗೆ ಗಿಡ ಬೆಳೆಯುತ್ತೆ ಎಂದು ಹೆದರಿಸಿದ್ದಕ್ಕೆ ಹೆದರಿ ನಿತ್ರಾಣನಾಗಿದ್ದ. ಸಮಾಧಾನಿಸಿ ನಿನಗೂ ಬುದ್ಧಿ ಕಲಿಸೋಣ ಎಂದು ನಾಟಕ ಮಾಡಿದ್ವಿ” ಎಂದಾಗ ಅಕ್ಕಗೆ ಹೋದ ಜೀವ ಬಂದಂತಾಯಿತು.
“ಲೇ, ಕಳ್ಳಾ… ಸಮು ನನಗೆ ಚಳ್ಳೆ ಹಣ್ಣು ತಿನ್ನಿಸಿದ್ಯಾ? ಮಾಡತೀನಿ ಬಾ” ಎಂದು ಬಡಿಯಲು ಹೋದಳು. ಅಪ್ಪ “ಸುಳ್ಳು ಹೇಳೋದಕ್ಕಿಂತ ಸತ್ಯ ಹೇಳಿ ಪರಿಹಾರ ನೀಡಬೇಕು. ಹೆದರಿಸಬಾರದು” ಎಂದಾಗ
“ಸ್ವಾರಿಪ ಇನ್ನೊಮ್ಮೆ ತಪ್ಪು ಮಾಹಿತಿ ನೀಡೊಲ್ಲ” ಎಂದು ಪ್ರಾಮೀಸ್ ಮಾಡಿದ್ಲು.
ಮರಳಿ ಗಾಭರಿಯಿಂದ ಬಂದ ಸಮು “ಅಪ್ಪಾ, ಅಪ್ಪಾ…. ಇಲ್ಲಿ ಬೀಜ ನೋಡಿ.. ಇವು ಎಷ್ಟು ಸ್ವಚ್ಛ ಅವ. ವಾಸನೇನೂ ಇಲ್ಲ… ನನಗೇಕೋ ಡೌಟು…….! ಇವು ಯಾವವು…? ಅಕ್ಕ ಹುರಿದುಕೊಂಡು ತಿಂದದ್ದು ಯಾವವು ಹಾಗಾದರೆ?” ಅಂದಾಗ ಮತ್ತೆ ಅಳುವ ಸರದಿ ಅಕ್ಕನದಾಗಿತ್ತು..
ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿಯವರು. ಇವರ ನಾನೇ ಸತ್ತಾಗ(ಹಾಸ್ಯ ಬರಹ), ಮುತ್ತಿನ ಹನಿ(ಸಂಪಾದಿತ ಕಾವ್ಯ), ಸಿಟಿಯೊಳಗೊಂದು ಮನೆಯ ಮಾಡಿ-(ಲಲಿತ ಪ್ರಬಂಧ), ಡಯಟಿಂಗ್ ಪುರಾಣ (ಹಾಸ್ಯ ಬರಹ), ಸಾದ್ವಿ ಶಿರೊಮಣಿ ತುರಡಗಿ ತಿಮ್ಮಮ್ಮನವರು(ಚರಿತ್ರೆ), ವೆಂಕಟೇಶ ವೈಭವ (ಸಂಪಾದನೆ), ಮಾಸಂಗಿ (ಮಕ್ಕಳು ಬರೆದ ಕಥೆಗಳ ಸಂಪಾದನೆ), ಏಲಿಯನ್ಸ ಲೋಕದಲ್ಲಿ(ಮಕ್ಕಳ ಕಥೆಗಳ ಸಂಕಲನ), ಪದ್ದಾಯಣ ಹಾಗೂ ಇತರ (ಮಕ್ಕಳ ನಾಟಕಗಳು) ಕೃತಿಗಳು ಪ್ರಕಟವಾಗಿವೆ.