ಗಾಂಧೀಜಿ ಒಮ್ಮೆ ಯರವಾಡ ಜೈಲಿನಲ್ಲಿದ್ದಾಗ ಒಂದು ರಾತ್ರಿ ಬರಿಯ ದುಃಸ್ವಪ್ನಗಳೇ ಬಿದ್ದು ಬೆಚ್ಚಿದ್ದಾಗ ವಿಚಾರಿಸಿದರಂತೆ. ಹಿಂದಿನ ರಾತ್ರಿಯ ಅಡಿಗೆಯನ್ನು ಒಬ್ಬ ಕೊಲೆಗಡುಕ ಅಪರಾಧಿ ಮಾಡಿದ್ದಾನೆಂದು ತಿಳಿದು ಅಂದಿನಿಂದ ರಾತ್ರಿಯ ಊಟವನ್ನೇ ಬಿಟ್ಟರಂತೆ. ನಮ್ಮ ಸೂಕ್ಷ್ಮ ಶರೀರದ ಚೈತನ್ಯ ಇನ್ನೊಬ್ಬರಿಗೂ ಅನುಭವಕ್ಕೆ ಬರುತ್ತದೆ ಎಂದು ಅರಿವಾಗುವುದು ಬ್ರಹ್ಮವಿದ್ಯೆಯೇನೂ ಅಲ್ಲ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಾಲ್ಕನೆಯ ಬರಹ
ಮೊನ್ನೆ ಗುರು ಪೂರ್ಣಿಮೆ. ಮಳೆಯೇಕೆ ಹಾದಿಯಲ್ಲಿ ಧೋ ಎಂದು ಸುರಿಯುತ್ತಿಲ್ಲ ಅಂತ ಅಂದುಕೊಳ್ಳುತ್ತಾ ಹಿಂದಿನ ದಿನ ಮಧ್ಯಾಹ್ನ ಕೊಡಗನ್ನು ತಲುಪಿದೆ. ಆ ದಿನ ತಾನೇ ಮಳೆ ಬಿಟ್ಟಿದೆ ಎಂದು ಮಂದಿ ಅಂದರು.
ಕಾರನ್ನು ಪ್ರೆಷರ್ ವಾಶ್ ಮಾಡುವ ಪೈಪ್ ತರಹದ ಒಂದು ದೂಶ್ (douche) ಎಂಬ ಸಾಧನವಿದೆ. ಆರೋಗ್ಯಧಾಮದ ಎರಡನೆಯ ಅಂತಸ್ತಿನಲ್ಲಿ ಇರುವ ಹೈಡ್ರೊ ಥೆರಪಿ ವಿಭಾಗದಲ್ಲಿ ಸ್ವಲ್ಪ ದೂರ ನಿಲ್ಲಿಸಿ ಶರೀರದ ಸ್ನಾಯುಗಳ ಬಿಗಿತವೆಲ್ಲ ಕಳೆದು ಹಗುರಾಗುವಂತೆ ಮನುಷ್ಯರನ್ನು ಹಿಂದೆ ಮುಂದೆ ಬಲಕ್ಕೆ ಎಡಕ್ಕೆ ತಿರು ತಿರುಗಿಸಿ ದೂಶ್-ಇಸುತ್ತಾರೆ. ಆ ರಾತ್ರಿ ಬರುವ ತನಿನಿದ್ರೆಯ ಸೊಗಸೇ ಬೇರೆ.
ವೆಲಿಂಗ್ಟನ್ ಮನೆಯ ಹಿತ್ತಲಲ್ಲಿ ಸ್ಪಾ ಒಂದನ್ನು ಹಾಕಿಸಿದ್ದೆವು. ಅದರೊಳಗಿನ ಬೆಚ್ಚಗಿನ ನೀರಿನ ರಭಸ, ಕತ್ತೆತ್ತಿದರೆ ಕಾಣಿಸುವ ನಕ್ಷತ್ರಗಳು, ಮೆಲುವಾಗಿ ಬೀಸುವ ಗಾಳಿ… ಕಾವ್ಯವೆಂದರೆ ಇದೇ ಅಂತನ್ನಿಸುತ್ತಿತ್ತು. ಹರಿಯ ಮತ್ತು ನನ್ನ ನಡುವಿನ ವಾದ-ಜಗಳಗಳನ್ನೂ ಅದು ಮೆದುವಾಗಿಸುತ್ತಿತ್ತಲ್ಲ!
ನಮ್ಮ ನಾಯಿ ಮೋಜೋಗೆ ಸಹ ಆ ಸತ್ಯ ಗೊತ್ತಿದ್ದಿರಬೇಕು. ನಮ್ಮಿಬ್ಬರ ಧ್ವನಿ ಏನಾದರೂ ಸ್ವಲ್ಪ ಏರಿದರೂ ಸಾಕು, ದಡಬಡನೆ ಕೆಳಗೆ ಹೋಗಿ ಸ್ಪಾ ಹತ್ತಿರ ನಿಂತು ಬೊಗಳಿ ಕರೆಯುತ್ತಿತ್ತು. ಹೋದ ತಕ್ಷಣ ದೂಶ್-ಇಸಿದುಕೊಂಡು ಸಂಧ್ಯಾರತಿಯಲ್ಲಿ ಅಧ್ಯಕ್ಷ ಸ್ವಾಮೀಜಿ ಹಾಡಿದ ನನ್ನ ಮೆಚ್ಚಿನ ‘ಶ್ರೀ ರಾಮ್ ತುಹಿ… ಶ್ರೀ ಕೃಷ್ಣ ತುಹಿ’ ಗುಂಗಿನಲ್ಲೇ ಬಿಸಿ ಬಿಸಿ ಊಟ ಮಾಡಿ ಸಾವಿನಂತಹ ನಿದ್ರೆಗೆ ಜಾರಿದೆ. ಬೆಳಗಿನ ಜಾವ ನಾಲ್ಕೂವರೆಗೆ ಅಲಾರಂ ಹೊಡೆದು ಎಚ್ಚರಿಸಿತು.
ಮಂದಿರದಲ್ಲಿ ಈ ಸಲದ ಹುಣ್ಣಿಮೆ ಪೂಜೆಗೆ ಎಲ್ಲವನ್ನೂ ಜೋಡಿಸಿದ್ದು ನನ್ನ ಗಮನ ಸೆಳೆದು ಹಿತವೆನ್ನಿಸಿತ್ತು. ‘ನನ್ನ ಎರಡನೆಯ ಮಗಳ ಕೈಲಿ ಪೂಜೆ ಮಾಡಿಸಿಬಿಡಿ ನೋಡೋಣ,’ ಎಂದು ವಿಶಾಲಮ್ಮ ತನ್ನ ಸ್ನೇಹಿತೆಯರೊಂದಿಗೆ ಗೋಳು ತೋಡಿಕೊಳ್ಳುತ್ತಿದ್ದದ್ದು ನೆನಪಿಗೆ ಬಂದು, ಸರಿ ವಿಶಾಲಮ್ಮ ನಿಮಗೊಂದು ಶಾಕ್ ಕೊಡುತ್ತೇನೆ ಇವತ್ತು ನೋಡ್ತಿರಿ ಅಂತ ಅಂದುಕೊಳ್ಳುತ್ತಾ ಬೆಳಗಿನ ಉಪಾಹಾರಕ್ಕೆ ಹೋದೆ.
ಪಕ್ಕದಲ್ಲಿ ಕೂತ ಬಿಳಿಯ ದಿರಿಸಿನ ಹೆಂಗಸು ಯಾಕೋ ಸ್ವಲ್ಪ ವಿಚಿತ್ರ ಅಂತ ಅನ್ನಿಸಿದ್ದು ನಿಜ. ನನಗೇನು ಎಂದು ತಲೆ ಕೊಡವಿಕೊಂಡೆ. ಸುಮಾರು ಒಂಬತ್ತು ಮುಕ್ಕಾಲಿಗೆ ಒಂದು ಕಡೆಯ ಸಾಲಿನ ಕೊನೆಯ ಕುರ್ಚಿ ಮೇಜುಗಳನ್ನು ಹಿಡಿದು, ಆಚೀಚೆಯ ಕಿಟಕಿಗಳೆಲ್ಲವನ್ನು ತೆರೆದು ಪೂಜೆಗೆ ತಯಾರಾಗಿ ಕೂತೆ.
ಈ ಬಿಳಿಯ ದಿರಿಸಿನ ಹೆಂಗಸು ಬಂದು, ‘ನೀವು ಪೂಜೆ ಮಾಡುವುದಿದ್ದರೆ ಮಾತ್ರ ಇಲ್ಲಿ ಕೂತುಕೊಳ್ಳಿ. ಇಲ್ಲದಿದ್ದರೆ ಈ ಕಡೆಗೆ ಬನ್ನಿ,’ ಎಂದಳು. ‘ಮತ್ತೇನು ಊಟ ಮಾಡಕ್ಕೆ ಕೂತಿದೀನಿ ಅಂತ ಅಂದುಕೊಂಡಿರಾ?’ ಎಂದೆ. ಎಲ್ಲಿ ಹೋದರೂ ಮಂದಿಗೆ ತಾವೇ ಪಾರುಪತ್ಯೆಗಾರರಂತೆ ವರ್ತಿಸುವ ಒಂದು ರೋಗವಿದೆ ಎನ್ನುವುದು ಕಳೆದ ನಾಲ್ಕು ವರ್ಷಗಳಲ್ಲಿ ಚೆನ್ನಾಗಿ ಅನುಭವವಾಗಿತ್ತು.
‘ಹಾಗಲ್ಲ, ಈ ಪೂಜೆ ಮದುವೆಯಾದ ಹೆಂಗಸರಿಗೆ ಮಾತ್ರ,’
ನನಗೆ ಈ ‘ಮಾತ್ರ’ ಎನ್ನುವ ಪದವೇ ಮಹಾ ಅಲರ್ಜಿ. ಕುಂಕುಮಾರ್ಚನೆ ಹೆಂಗಸರಿಗೆ ಮಾತ್ರ ಎನ್ನುವುದು ಸ್ವಲ್ಪವಾದರೂ ಅರ್ಥವಾಗುತ್ತೆ. ಆದರೆ ಅದನ್ನೂ ನಾನು ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಬೇರೆ ವಿಷಯ.
ಶಾರದಮ್ಮನ ಪೂಜೆ ಮದುವೆಯಾದವರಿಗೆ ಮಾತ್ರವೇ? ಇಷ್ಟಕ್ಕೂ ಆಕೆ ನಾನು ಮದುವೆಯಾಗಿಲ್ಲ ಅಂತ ಯಾಕೆ ಅಂದುಕೊಂಡಳೋ! ಹಠ ಹಿಡಿದ ಮಗುವಿನಂತೆ ಅವಳತ್ತ ಗುರಾಯಿಸಿದೆ.
‘ಒಂದು ಸಲ ಸ್ವಾಮೀಜಿಯನ್ನು ಕೇಳಿಬಿಡಿ,’ ಎಂದಳು.
ದಲಿತರನ್ನು ಶತಮಾನಗಳಿಂದ ಹಿಂದೂ ಧರ್ಮ ನಡೆಸಿಕೊಂಡಿರುವ ಅನುಭವ ನನಗೆ ಪದೇ ಪದೇ ಯಾಕೆ ಆಗುತ್ತಿರುತ್ತದೋ ಗೊತ್ತಿಲ್ಲ. ಅದೂ ಯೂನಿವರ್ಸಲ್ ಆಶ್ರಮದಲ್ಲಿ? ಸ್ವಲ್ಪ ದಿನದ ಹಿಂದೆ ಊಟದ ಮನೆಯಲ್ಲಿ ಒಂದು ಜಂತು ಶಾರದಮ್ಮನ ಭಾವಚಿತ್ರದ ಎದುರೇ ಕೂತು ‘ಹೆಂಗಸರೆಲ್ಲ ಕೊನೆಯ ಟೇಬಲಿನಲ್ಲಿ ಕೂರಬೇಕು’ ಎಂದು ತಾಕೀತು ಮಾಡಿತ್ತು.
ಇವರೆಲ್ಲ ‘ಭಕ್ತರು’!
ಕರ್ಮ!
ನನ್ನ ವಿದ್ಯಾರ್ಥಿಗಳಿಗೆ ನಾನು ಪದೇ ಪದೇ ಹೇಳುತ್ತಿದ್ದದ್ದು ಇದನ್ನೇ. ದೇವಸ್ಥಾನಕ್ಕೆ ಪ್ರವೇಶ ಇಲ್ಲ ಎಂದು ಹೇಳಲು ದೇವರಿಗೂ ಹಕ್ಕಿಲ್ಲ. ನೀವೇ ಬಾಯಿ ತುಂಬಾ ಬೈದು ಬಹಿಷ್ಕಾರ ಹಾಕಿಬಿಡಿ!

ಈ ದಿನ ಇನ್ನೊಂದು ಜಂತು! ಗುರು ಪೂರ್ಣಿಮೆಯ ದಿನ ಗುರುವಿನ ಎದುರು? ಯಾಕೋ ಮನಸ್ಸಿಗೆ ಅತೀವ ಆಯಾಸವೆನ್ನಿಸಿ ವಾದವೂ ಬೇಡವೆನ್ನಿಸಿತು. ಎದ್ದು ಆರೋಗ್ಯಧಾಮದತ್ತ ನಡೆದೆ. ಎಣ್ಣೆ ಸ್ನಾನ, ಹಬೆ ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು ಊಟದ ಚಿಂತೆಯನ್ನು ಬಿಟ್ಟು ಮೈಸೂರಿಗೆ ಮರಳಿ ಹೊರಟೆ.
ಬದುಕಿನ ಈ ಹಂತದಲ್ಲಿ ಇರುವ ಚೈತನ್ಯವನ್ನು ಕಾಪಾಡಿಕೊಳ್ಳುವುದಷ್ಟೇ ನನ್ನ ಕಾಳಜಿ. ಯಾರ ಬಗ್ಗೆ, ಯಾವುದರ ಬಗ್ಗೆ ಮನಸ್ಸು ದೂರವಿರು ಎಂದು ಪಿಸುಗುಟ್ಟಿದರೂ ಪಾಲಿಸುವ ಪ್ರತಿಜ್ಞೆ ಮಾಡಿದ್ದೇನೆ.
ಗಾಂಧೀಜಿ ಒಮ್ಮೆ ಯರವಾಡ ಜೈಲಿನಲ್ಲಿದ್ದಾಗ ಒಂದು ರಾತ್ರಿ ಬರಿಯ ದುಃಸ್ವಪ್ನಗಳೇ ಬಿದ್ದು ಬೆಚ್ಚಿದ್ದಾಗ ವಿಚಾರಿಸಿದರಂತೆ. ಹಿಂದಿನ ರಾತ್ರಿಯ ಅಡಿಗೆಯನ್ನು ಒಬ್ಬ ಕೊಲೆಗಡುಕ ಅಪರಾಧಿ ಮಾಡಿದ್ದಾನೆಂದು ತಿಳಿದು ಅಂದಿನಿಂದ ರಾತ್ರಿಯ ಊಟವನ್ನೇ ಬಿಟ್ಟರಂತೆ. ನಮ್ಮ ಸೂಕ್ಷ್ಮ ಶರೀರದ ಚೈತನ್ಯ ಇನ್ನೊಬ್ಬರಿಗೂ ಅನುಭವಕ್ಕೆ ಬರುತ್ತದೆ ಎಂದು ಅರಿವಾಗುವುದು ಬ್ರಹ್ಮವಿದ್ಯೆಯೇನೂ ಅಲ್ಲ.
ನಿನ್ನೆ ಗುರುವಿಗೆ ಎದುರಾಗಿ ದೂರದಲ್ಲಿ ಇದ್ದ ಬಳ್ಳಿ ಮಂಟಪದಲ್ಲಿ ನಿಂತು ಸಂಧ್ಯಾರತಿಯನ್ನು ಕಣ್ತುಂಬಿಕೊಳ್ಳುತ್ತಿದ್ದೆ. ಸ್ವಲ್ಪವೇ ಎದುರಿಗೆ ಯಾರೋ ಒಬ್ಬ ಅತ್ತಿಂದಿತ್ತ ಠಳಾಯಿಸುತ್ತಾ ಸ್ಟೈಲಾಗಿ ಫೋನಿನಲ್ಲಿ ಮಾತಾಡುತ್ತಿದ್ದ. ಸುಮಾರು ಐದು ನಿಮಿಷ! ಗುರುವನ್ನೇ ನೋಡಲೂ ಸಾಧ್ಯವಾಗಲಿಲ್ಲ. ಪ್ರಾರ್ಥನೆಯನ್ನು ತದೇಕಚಿತ್ತದಿಂದ ಆಲಿಸಲೂ ಆಗಲಿಲ್ಲ. ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ! ಹೀರೋ ತರ ಪೋಸು ಕೊಡುತ್ತಿತ್ತು ಜಂತು!
ಪ್ರಾರ್ಥನೆ ಮುಗಿದ ತಕ್ಷಣ ತಡೆಯಲಾಗದೆ ತರಾಟೆಗೆ ತೆಗೆದುಕೊಂಡೆ. ‘ಎಲ್ಲೊ ಒಂದು ಮೂಲೆಯಲ್ಲಿ ಕುಕ್ಕರು ಬಡಿದು ಮಾತಾಡಿಕೊಳ್ಳಯ್ಯ! ನಿನ್ನ ನೋಡಕ್ಕೆ, ನೀನು ಮಾತಾಡುವುದನ್ನ ಕೇಳಿಸಿಕೊಳ್ಳುವುದಕ್ಕೆ ಬಂದಿದೀನಿ ಅಂದುಕೊಂಡ್ಯಾ? ಇದಕ್ಕೇನಾ ನೀನು ಆಶ್ರಮಕ್ಕೆ ಬರೋದು?’
ಈ ಮನುಷ್ಯರೆಂಬ ಗಂಡುಜಂತುಗಳ ಸಮಸ್ಯೆಯಾದರೂ ಏನು?
ಮಂದಿರದ ಒಳಗೆ ಹಕ್ಕಿಗಳು ಹೆಂಗಸರ ಕಡೆ ಇರುವ ಫ್ಯಾನಿನಲ್ಲಿ ಮಾತ್ರ ಯಾಕೆ ಗೂಡು ಕಟ್ಟುತ್ತವೆ ಎಂದು ನೋಡಿದಾಗೆಲ್ಲಾ ಯೋಚಿಸುತ್ತಿದ್ದೆ.
ಆ ಗಳಿಗೆಯಲ್ಲಿ ಹೊಳೆದಿತ್ತು!

ಲೇಖಕಿ, ಅನುವಾದಕಿ ಮತ್ತು ಇಂಗ್ಲೀಷ್ ಪ್ರಾಧ್ಯಾಪಕಿ. ‘ಹೇಳುತೇನೆ ಕೇಳು: ಹೆಣ್ಣಿನ ಆತ್ಮಕಥನಗಳು’ ಇವರ ಮುಖ್ಯ ಕೃತಿ. ‘An Afternoon with Shakuntala’ ವೈದೇಹಿ ಅವರ ಕಥೆಗಳ ಇಂಗ್ಲೀಷ್ ಅನುವಾದ. ಕೊಡಗು ಜಿಲ್ಲೆಯ ಕನಾರಳ್ಳಿಯವರು. ನ್ಯೂಜಿಲ್ಯಾಂಡಿನಲ್ಲಿ ವಾಸವಾಗಿದ್ದಾರೆ.
