ತಂತ್ರಜ್ಞಾನಗಳು ಅವು ಯಾವುವೇ ಆಗಲಿ, ನಮ್ಮ ಜೀವನವನ್ನು ಸುಲಭಗೊಳಿಸುವ ಸಾಧನ-ಸೇವಕರುಗಳಾಗಿಯೇ ಪ್ರವೇಶಿಸುತ್ತವೆ. ಆದರೆ, ಅವು ಯಶಸ್ವಿಯಾದಷ್ಟೂ, ನಮ್ಮ ಯಜಮಾನರಾಗತೊಡಗುತ್ತವೆ. ಉದಾಹರಣೆಗೆ, ಗಡಿಯಾರದ ತಂತ್ರಜ್ಞಾನವನ್ನು ಗಮನಿಸಿ. ಕೇವಲ ನೂರು ವರ್ಷಗಳ ಹಿಂದೆ, ನಮ್ಮ ಹಳ್ಳಿಗಳಲ್ಲಿ ಯಾರೊಬ್ಬರ ಬಳಿಯೂ ಗಡಿಯಾರವಿರುತ್ತಿರಲಿಲ್ಲ. ಹಾಗಿದ್ದರೆ, ಅವರು ಸಮಯಕ್ಕೆ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲವೇ? ಆಗ ಸಮಯವೆಂದರೆ ಬೇರೊಂದು ಪರಿಕಲ್ಪನೆಯೇ ಇತ್ತು. ಅದನ್ನು ನಾವು ದೈಹಿಕವಾಗಿ, ನಮ್ಮ ಇಂದ್ರಿಯಗಳ ಮೂಲಕ ಅನುಭವಿಸುತ್ತಿದ್ದೆವು. ಸೂರ್ಯನ ಉದಯ, ಅಸ್ತಮಾನ, ತಂಗಾಳಿ, ಬಿಸಿಲು, ಪಕ್ಷಿಗಳ ಕಲರವ, ಹೊಟ್ಟೆಯ ಚುರುಗುಟ್ಟುವಿಕೆ ಇವೆಲ್ಲವೂ ನಾವು ಮಾಡಬೇಕಿದ್ದನ್ನು ನಿರ್ಧರಿಸುತ್ತಿದ್ದವು. ಆದರೆ, ಇಂದು ಒಂದು ಕೈಗಡಿಯಾರ/ಮೊಬೈಲ್ ಫೋನ್ ಇದು ಬ್ರೇಕ್‌ಫಾಸ್ಟ್ ಟೈಮ್ ಎಂದು ತಿಳಿಸುತ್ತದೆ. ಅದರ ಆಜ್ಞೆಯನ್ನು ನಾವು ಪರಿಪಾಲಿಸುತ್ತೇವೆ, ನಮಗೆ ಹಸಿವಿಲ್ಲದಿದ್ದರೂ! ಮಲಗುತ್ತೇವೆ ನಿದ್ರೆ ಬರದಿದ್ದರೂ!! ಎದ್ದೇಳುತ್ತೇವೆ ಎಷ್ಟೇ ನಿದ್ರೆಯಿದ್ದರೂ!!!
ಶೇಷಾದ್ರಿ ಗಂಜೂರು ಈಗ ನಮ್ಮ ನಡುವೆ ಇರುವ ಅತ್ಯುತ್ತಮ ವಿಜ್ಞಾನ ಬರಹಗಾರಲ್ಲಿ ಒಬ್ಬರು. ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ. ಇನ್ನು ಮುಂದೆ ಪ್ರತಿ ಬುಧವಾರ ಕೆಂಡಸಂಪಿಗೆಯಲ್ಲಿ ಇವರ ಅಂಕಣ ಪ್ರಕಟವಾಗಲಿದೆ. ವಿಜ್ಞಾನ, ತಂತ್ರಜ್ಞಾನ, ಮನೋವಿಜ್ಞಾನ, ತತ್ವಜ್ಞಾನ, ಸೃಜನಶೀಲತೆ, ಭಾಷೆ, ಪ್ರಪಂಚ, ಮನುಷ್ಯ ಬದುಕು ಮತ್ತು ಮನುಷ್ಯನ ನೆನಪುಗಳು ಈ ಎಲ್ಲವೂ ಅವರ ಸರಳ ಮತ್ತು ಸುಲಲಿತ ಕನ್ನಡದಲ್ಲಿ ನಿಮ್ಮೆದುರು ಬರಲಿವೆ.
ಗ್ರೀಕ್ ತತ್ವಜ್ಞಾನಿ ಪ್ಲೇಟೋ ತನ್ನ ಒಂದು ಪುಸ್ತಕದಲ್ಲಿ, ಸಾಕ್ರೆಟೆಸ್ ನ ಮೂಲಕ ಒಂದು ಕತೆ ಹೇಳಿಸುತ್ತಾನೆ. ಆ ಕತೆಯಲ್ಲಿ, ದೇವನೊಬ್ಬ ಈಜಿಪ್ಟಿನ ರಾಜ ಥೇಮಸ್ ಬಳಿಗೆ ಬರುತ್ತಾನೆ. ಆ ದೇವನಾದರೋ ಸಾಮಾನ್ಯನಲ್ಲ. ಅವನು ಅಂಕಿಗಳು, ಗಣಿತ, ಖಗೋಳ ಶಾಸ್ತ್ರ ಇತ್ಯಾದಿ ವಿದ್ಯೆಗಳ ಸೃಷ್ಟಿಕರ್ತ. ಅವನ ಮಿಕ್ಕೆಲ್ಲಾ ಸೃಷ್ಟಿಗಳಿಗಿಂತ ಮಿಗಿಲಾದದ್ದು ‘ಬರೆಯುವ ವಿದ್ಯೆ’. ಅವನು ತನ್ನ ವಿವಿಧ ಸೃಷ್ಟಿಗಳ ಪ್ರಯೋಜನಗಳ ಕುರಿತು ರಾಜನಿಗೆ ವಿವರಿಸುತ್ತಾನೆ. ‘ಬರೆಯುವ ವಿದ್ಯೆ’ಯ ಕುರಿತು ಮಾತನಾಡುತ್ತಾ, “ಓ ರಾಜನೇ, ಈ ವಿದ್ಯೆ ತಿಳಿದವರ ನೆನಪಿನ ಶಕ್ತಿ ಹೆಚ್ಚುತ್ತದೆ. ಅವರು ಜ್ಞಾನಿಗಳಾಗುತ್ತಾರೆ. ನೀನು ನಿನ್ನ ದೇಶದ ಪ್ರಜೆಗಳೆಲ್ಲರಿಗೂ ಈ ವಿದ್ಯೆ ಕಲಿಸುವ ಏರ್ಪಾಡು ಮಾಡು” ಎನ್ನುತ್ತಾನೆ. ಆದರೆ, ಥೇಮಸ್ ಒಪ್ಪುವುದಿಲ್ಲ. ಅವನೆನ್ನುತ್ತಾನೆ: “ಓ ದೇವನೆ, ಪ್ರತಿಯೊಬ್ಬನಿಗೂ ತನ್ನ ಸೃಷ್ಟಿಯ ಮೇಲಿನ ಮಮಕಾರದಿಂದ ಅದರ ಉಪಯುಕ್ತತತೆಯಷ್ಟೇ ಕಾಣುತ್ತದೆ. ಆದರೆ, ವಾಸ್ತವದಲ್ಲಿ, ಉಪಯುಕ್ತತೆ ಮತ್ತು ಅಪಾಯಗಳು ಆ ಸೃಷ್ಟಿಕರ್ತನಿಗೆ ಮೀರಿದ ವಿಷಯಗಳು. ಅವು ಆ ಸೃಷ್ಟಿಯನ್ನು ಉಪಯೋಗಿಸುವವರ ಮೇಲೆ ಅವಲಂಬಿತವಾಗಿರುತ್ತವೆ. ನಾವು ನಮ್ಮ ಇಂದ್ರಿಯಗಳ ಮೂಲಕ ಅನುಭವಿಸಿದ್ದನ್ನು ನಮ್ಮ ಮನದಲ್ಲಿಟ್ಟುಕೊಂಡಾಗ ಅದು ಪೂರ್ಣವಾಗಿ ನಮ್ಮದಾಗಿಯೇ ಇರುತ್ತದೆ. ಆದರೆ, ಅದನ್ನು ಇನ್ನಾರೋ ಸೃಷ್ಟಿಸಿದ ಚಿಹ್ನೆಗಳ ಮೂಲಕ ಬರೆದಿಟ್ಟರೆ, ಅವು ನೆನಪುಗಳಾಗುವುದಿಲ್ಲ. ಕೇವಲ ನೆನಪಿಸುವ ಸಾಧನವಾಗುತ್ತದೆ. ನೀನು ಕೊಡುತ್ತಿರುವುದು ಜ್ಞಾನವಲ್ಲ. ಜ್ಞಾನದ ಬಿಂಬವಷ್ಟೇ.”
ಸಾಕೆಟ್ರೆಸ್ ಒಬ್ಬ ವಿಚಾರವಾದಿ, ಭಾಷಣಕಾರ, ಪಂಡಿತ. ಆದರೆ ಬರಹಗಾರನಲ್ಲ. ಅವನು ಯಾವ ಪುಸ್ತಕವನ್ನೂ ಬರೆಯಲಿಲ್ಲ. ಅವನ ವಿಚಾರಗಳು ನಮಗೆ ಇಂದು ದೊರಕುತ್ತಿದ್ದರೆ, ಅವು ಅವನ ಶಿಷ್ಯ ಪ್ಲೇಟೋನ ಬರಹಗಳ ಮೂಲಕ.
ಬಹುಪಾಲು ವಿಜ್ಞಾನಿಗಳು ‘ಭಾಷೆ’ ಎನ್ನುವುದು ಮಾನವರಿಗೆ ಪ್ರಕೃತಿದತ್ತವಾದದ್ದು ಎನ್ನುತ್ತಾರೆ. ಆದರೆ ‘ಬರೆಯುವ ವಿದ್ಯೆ’ ಎನ್ನುವುದು ನಾವೇ ನಿರ್ಮಿಸಿಕೊಂಡಿರುವ ಒಂದು ತಂತ್ರಜ್ಞಾನ. ನಾವು ಮಾನವರಾದಾಗಿನಿಂದ ಮಾತನಾಡುತ್ತಿರಬಹುದಾದರೂ, ನಮ್ಮ ಬರೆಯುವಿಕೆಗೆ ಅಂತಹ ಸುದೀರ್ಘ ಇತಿಹಾಸವೇನೂ ಇಲ್ಲ. ನಾವು ಬರೆಯಲಾರಂಭಿಸಿ ಸುಮಾರು ಎಂಟು-ಹತ್ತು ಸಾವಿರ ವರ್ಷಗಳಾಗಿರಬಹುದು ಅಷ್ಟೇ.
ಬರಹದ ಬಳಕೆಯ ಮುಂಚೆ ಜ್ಞಾನವೇ ಇರಲಿಲ್ಲವೇ? ಖಂಡಿತಾ ಇತ್ತು. ಹಾಗಿದ್ದರೆ ಆ ಜ್ಞಾನವನ್ನು ಒಬ್ಬರಿಂದೊಬ್ಬರಿಗೆ ಸಂವಹಿಸುತ್ತಿದ್ದುದಾದರೂ ಹೇಗೆ? ಬಾಯಿ ಪಾಠಗಳ ಮೂಲಕ. ಈ ಬಾಯಿ-ಪಾಠಗಳು ಸುಲಭವಾಗಬೇಕಿದ್ದರೆ, ಅವಕ್ಕೊಂದು ಲಯವಿರಬೇಕು. ವೇದ ಸೂಕ್ತಗಳೂ ಸೇರಿದಂತೆ ನಮ್ಮ ಹಲವಾರು ಪುರಾತನ ಕೃತಿಗಳು ಲಯ-ಬದ್ಧವಾಗಿ ಮತ್ತು ಲಾಲಿತ್ಯ ಪೂರ್ಣವಾಗಿರುವುದು ಕೇವಲ ಕಾಕತಾಳೀಯವೇನಲ್ಲ. ಕಗ್ಗವನ್ನು ಕವನದ ಮೂಲಕವೇ ಬರೆದಿರುವುದಕ್ಕೆ ಡಿ.ವಿ.ಜಿ.ಯವರೇ ಕೊಡುವ ಕಾರಣ: “ಕವನ ಸುಲಭ ನೆನಪಿಗೆ – ಮಂಕುತಿಮ್ಮ”.
ಆದರೆ, ನಮ್ಮೆಲ್ಲಾ ಜ್ಞಾನಗಳನ್ನೂ, ಸಂಕೀರ್ಣ ವಿಷಯಗಳನ್ನೂ ಲಯ-ಬದ್ಧ ಕವನಗಳ ಮೂಲಕವೇ ಹೇಳಲು ಸಾಧ್ಯವೇ? ಹಾಗೆ ಹೇಳಲಾಗದಂತಹ ವಿಷಯಗಳು ಶ್ರುತಿಗಳಿಂದ ಸ್ಮೃತಿಗಳಾಗಲು ಅರ್ಹವಲ್ಲವೇ? ಮಂತ್ರಗಳಾಗಿ ಘೋಷಿಸಲು ಸಾಧ್ಯವಿರುವಂತಹುದ್ದಷ್ಟನ್ನೇ – ಅವು ನಮಗೆ ಅರ್ಥವೇ ಆಗದಿದ್ದರೂ ಸಹ ನಾವು ಕಾಪಾಡಿಕೊಳ್ಳಬೇಕೇ? ಬರಹದ ಇತಿಹಾಸವನ್ನು ಗಮನಿಸಿದರೆ, ಬರಹದ ಸೃಷ್ಟಿಯ ನಂತರವೂ, (ಭಾರತದಲ್ಲಂತೂ ತೀರಾ ಇತ್ತೀಚಿನವರೆಗೆ) ಆಗಿರುವುದು ಇದೇ ಅಲ್ಲವೇ? ನಾನು ಚಿಕ್ಕಂದಿನಲ್ಲಿ ಕಲಿತ ತ್ರಿಕಾಂಡ ಅಮರಕೋಶದ ಆರಂಭದ ಲಯಬದ್ಧ ಶ್ಲೋಕಗಳು ನನ್ನ ನೆನಪಿನಲ್ಲಿ ಇವೆಯಾದರೂ ಅವುಗಳ ಅರ್ಥ ಅಂದೂ ತಿಳಿದಿರಲಿಲ್ಲ ಇಂದೂ ತಿಳಿದಿಲ್ಲ. ಜಯದೇವನ “ಲಲಿತ ಲವಂಗ ಲತಾ ಪರಿಶೀಲನ ಕೋಮಲ ಮಲಯ ಸಮೀರೆ” ಎಂಬ ಸಾಲಿನ ಲಾಲಿತ್ಯ ಕೆಲವು ದಶಕಗಳ ಹಿಂದೆಯೇ ನನ್ನ ಮನ ಸೆಳೆದು ನೆನಪಿನಲ್ಲುಳಿದಿದೆಯಾದರೂ, ಆದರ ಬಗೆಗೆ ಓದಿ ಅರ್ಥ ಮಾಡಿಕೊಂಡಿದ್ದು ತೀರಾ ಇತ್ತೀಚೆಗೆ.
ಪುರಾತನ ಬರಹಗಳ ಕುರಿತು ನಾವು ಇನ್ನೊಂದು ವಿಷಯವನ್ನೂ ಗಮನಿಸಬಹುದು. ಆ ಬರಹಗಳಲ್ಲಿ ನಾವು ಇಂದು ಸಾಮಾನ್ಯವೆಂದೆನಿಸುವ ಯಾವುದೇ ಪಂಕ್ಚುಯೇಷನ್ ಚಿಹ್ನೆಗಳು ಕಾಣುವುದಿಲ್ಲ. ಪಂಕ್ಚುಯೇಷನ್ ಇರಲಿ, ಪದ-ಪದಗಳ ನಡುವಿನ ಖಾಲಿ ಜಾಗವೂ ಇರುವುದಿಲ್ಲ. ಅವುಗಳ ಉದ್ದೇಶಃ ನಾವು ಬಾಯಲ್ಲಿ ಹೇಳುವುದನ್ನು ಕೆಲವೊಂದು ಚಿಹ್ನೆಗಳ ಮೂಲಕ ದಾಖಲಿಸುವದಷ್ಟೇ; ನಮ್ಮ ಮನದ ಆಲೋಚನೆಗಳನ್ನಲ್ಲ. ನಾವು ಮಾತನಾಡುವಾಗ ಪದ-ಪದಗಳ ನಡುವೆ ಅಂತರವೇನೂ ಬಿಡುವುದಿಲ್ಲವಲ್ಲ. ಹೀಗಾಗಿ ಪದ-ಪದಗಳ ನಡುವೆ ಅಂತರ ಬಿಡುವ ಪದ್ಧತಿ ಬೇಕಿರಲಿಲ್ಲ.
ಮನಸ್ಸಿನಲ್ಲೇ ಓದಿಕೊಳ್ಳುವುದು ಸಾಮಾನ್ಯವೆಂದೆನಿಸಿರುವ ಈ ಕಾಲದ ನಮಗೆ, ಯಾರಾದರೂ ಜೋರಾಗಿ ಓದುತ್ತಿದ್ದರೆ, ಅದು ಆಶ್ಚರ್ಯವೆನ್ನಿಸಬಹುದು. ಆದರೆ, ಹಿಂದೆ ಇಂದು ತದ್ವಿರುದ್ಧವಾಗಿತ್ತು. ನಾಲ್ಕನೆಯ ಶತಮಾನದ ಕ್ರಿಶ್ಚಿಯನ್ ಸಂತ ಅಗಸ್ಟೀನ್, ತನಗೆ ಕ್ರಿಶ್ಚಿಯನ್ ಧರ್ಮವನ್ನು ಪರಿಚಯಿಸಿದ ಬಿಷಪ್ ಆಂಬ್ರೋಸನ ಕುರಿತು ಹೇಳುವಾಗ, ಆಂಬ್ರೋಸ್ ಮನಸ್ಸಿನಲ್ಲೇ ಓದಿಕೊಳ್ಳುತ್ತಿದ್ದುದನ್ನು ಒಂದು ಮಹಾ ವಿಚಿತ್ರವೆಂದೇ ಬಿಂಬಿಸುತ್ತಾನೆ.
ಉದ್ಘೋಷಿಲಷ್ಟೇ ಬರೆದಂತಹ ಈ ತರಹದ ಬರಹಗಳನ್ನು ಇತ್ತೀಚಿನ ಶಿಲಾಶಾಸನಗಳಲ್ಲಿ, ತಾಮ್ರ ಪತ್ರಗಳಲ್ಲಿಯೂ ನಾವು ಕಾಣಬಹುದು. ಇವು, ಆಧುನಿಕರಾದ ನಮಗೆ ಓದಲು ಕಷ್ಟವೆನ್ನಿಸಬಹುದು. ಆದರೆ, ಈ ಬರಹಗಳನ್ನು ಸ್ವಲ್ಪ ಜೋರಾಗಿ ಓದಿ, ಅವು ಉತ್ಪಾದಿಸುವ ಶಬ್ದವನ್ನು ಗಮನವಿಟ್ಟು ಕೇಳಿದರೆ ಅವು ಕೊಂಚ ಮಟ್ಟಿಗಾದರೂ ಸುಲಭವಾಗಿ ಓದಿಸಿಕೊಳ್ಳುತ್ತವೆ. ಅವು ಕೇಳಿ-ತಿಳಿಯಲೆಂದೇ ಬರೆದ ವಿಷಯಗಳಾದ್ದರಿಂದ, ಅವುಗಳಿಗೊಂದು ಪರಿಧಿಯೂ ಇತ್ತು – ಅವು ಬಹುಮಟ್ಟಿಗೆ ಧಾರ್ಮಿಕ ಮತ್ತು ಅಂದಿನ ಸಮಾಜ ಮುಖ್ಯವೆಂದು ಪರಿಗಣಿಸಿದಂತಹ ವಿಷಯಗಳೇ ಆಗಿದ್ದವು. ಹೀಗಾಗಿ, ಬರಹದ ಉಗಮವಾಗಿ ಸಾವಿರಾರು ವರ್ಷಗಳೇ ಸಂದಿದ್ದರೂ, ಓದು-ಬರಹಗಳು ಕೆಲವೊಂದು ವಿಷಯ/ವರ್ಗಗಳಿಗೇ ಸೀಮಿತವಾಗಿದ್ದವು.
ಬರೆಯುವಿಕೆ ಒಂದು ತಂತ್ರಜ್ಞಾನವಾದರೆ, ಆ ತಂತ್ರಜ್ಞಾನವನ್ನು ಸಾರ್ವಜನಿಕವಾಗಿಸಿದವನು ಗುಟೆನ್ ಬರ್ಗ್. ಸುಮಾರು ಐದುನೂರುವರ್ಷಗಳ ಹಿಂದೆ ಅವನು ನಿರ್ಮಿಸಿದ ಪ್ರಿಂಟಿಂಗ್ ಪ್ರೆಸ್, ಓದು-ಬರಹಗಳನ್ನು ಕೆಲ ವರ್ಗದ ಮತ್ತು ಕೆಲವು ವಿಷಯಗಳ ಮಡಿವಂತಿಕೆಯಿಂದ ಬಿಡುಗಡೆ ಮಾಡಿತು. ಅದರ ನಿರ್ಮಾಣದ ಕೆಲವೇ ವರ್ಷಗಳಲ್ಲಿ, ಯೂರೋಪಿನ ಕೆಳ ವರ್ಗದ ಜನರೂ ಓದಲಾರಂಭಿಸಿದರು. ಧಾರ್ಮಿಕ, ವೈಜ್ಞಾನಿಕ ಪುಸ್ತಕಗಳೊಂದಿಗೆ, ಜೋಕ್ ಪುಸ್ತಕಗಳೂ, ರಾಜಕೀಯ ಪಾಂಫ್ಲೆಟ್, ಪೋರ್ನೋಗ್ರಫಿಯಂತಹ ಯಾರೂ ಕೇಳಬಾರದೆಂದೆನಿಸಿದಂತಹ ವಿಚಾರಗಳೂ ಸಹ ಪ್ರಕಟವಾಗತೊಡಗಿದವು. ಬರಹವೆನ್ನುವುದು, ಜೋರಾಗಿ ಹೇಳಿ-ಕೇಳುವುದಕ್ಕಿಂತ, ಮನದಲ್ಲೇ ಓದಿ-ಅನುಭವಿಸುವ ತಂತ್ರಜ್ಞಾನವಾಯಿತು. ಪ್ರಿಂಟಿಂಗ್ ಪ್ರೆಸ್, ಓದನ್ನು ಸಾರ್ವಜನಿಕ ಮಾಡುತ್ತಲೇ ಮನದಲ್ಲೇ ಅನುಭವಿಸುವ ಆಪ್ತತೆಯನ್ನೂ ಮೂಡಿಸಿತು.
ಓದಿನ ಸ್ವಭಾವ ಬದಲಾದಂತೆ, ಅದು ನಮ್ಮ ಭೌತ ಪ್ರಪಂಚವನ್ನೂ ಬದಲಿಸಿದ್ದನ್ನು ಪಂಡಿತರು ಗುರುತಿಸುತ್ತಾರೆ. ಉದಾಹರಣೆಗೆ, ಮನಸ್ಸಿನಲ್ಲೇ ಓದುವುದು ಸಾಮಾನ್ಯವಾದಂತೆ, ಯೂರೋಪಿಯನ್ ಲೈಬ್ರರಿಗಳ ವಿನ್ಯಾಸಗಳೂ ಬದಲಾಗತೊಡಗಿದ್ದನ್ನು ಅವರು ತೋರಿಸುತ್ತಾರೆ. ಹೀಗೆ, ಆಲೋಚನೆ-ಮಾಹಿತಿ-ಜ್ಞಾನಗಳ ಈ ಮುಕ್ತ ಹಂಚಿಕೆಯಿಂದ ಮುಂದಿನ ಕೆಲವೇ ವರ್ಷಗಳಲ್ಲಿ ಯೂರೋಪಿಯನ್ ದೇಶಗಳು ಜಾಗತಿಕ ಅಧಿಪತ್ಯ ಪಡೆದಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.
ಕೆನಡಾದ ತತ್ವ ಶಾಸ್ತ್ರಜ್ಞ ಮಾರ್ಷಲ್ ಮೆಕ್-ಲುಹಾನ್, “ಮಾಧ್ಯಮವೇ ಸಂದೇಶ” ಎನ್ನುತ್ತಾನೆ. ಮಾಧ್ಯಮಗಳು ಸಶಕ್ತವಾದಾಗ, ಅವು ಕೇವಲ ಮಾಧ್ಯಮಗಳಾಗಿಯೇ ಉಳಿಯುವುದಿಲ್ಲ. ನಮ್ಮ ಆಲೋಚನೆಯ ವಿಧಾನಗಳನ್ನೇ ಬದಲಿಸಿ ತಾವೇ ಸಂದೇಶವಾಗಿ ಬಿಡುತ್ತವೆ. ಬರಹ/ಪ್ರಿಂಟಿಂಗ್ ಪ್ರೆಸ್ ವಿಷಯದಲ್ಲಿ ಇದು ಖಂಡಿತಾ ಸತ್ಯವಲ್ಲವೇ?!
******
ತಂತ್ರಜ್ಞಾನಗಳು ಅವು ಯಾವುವೇ ಆಗಲಿ, ನಮ್ಮ ಜೀವನವನ್ನು ಸುಲಭಗೊಳಿಸುವ ಸಾಧನ-ಸೇವಕರುಗಳಾಗಿಯೇ ಪ್ರವೇಶಿಸುತ್ತವೆ. ಆದರೆ, ಅವು ಯಶಸ್ವಿಯಾದಷ್ಟೂ, ನಮ್ಮ ಯಜಮಾನರಾಗತೊಡಗುತ್ತವೆ. ಉದಾಹರಣೆಗೆ, ಗಡಿಯಾರದ ತಂತ್ರಜ್ಞಾನವನ್ನು ಗಮನಿಸಿ. ಕೇವಲ ನೂರು ವರ್ಷಗಳ ಹಿಂದೆ, ನಮ್ಮ ಹಳ್ಳಿಗಳಲ್ಲಿ ಯಾರೊಬ್ಬರ ಬಳಿಯೂ ಗಡಿಯಾರವಿರುತ್ತಿರಲಿಲ್ಲ. ಹಾಗಿದ್ದರೆ, ಅವರು ಸಮಯಕ್ಕೆ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲವೇ? ಆಗ ಸಮಯವೆಂದರೆ ಬೇರೊಂದು ಪರಿಕಲ್ಪನೆಯೇ ಇತ್ತು. ಅದನ್ನು ನಾವು ದೈಹಿಕವಾಗಿ, ನಮ್ಮ ಇಂದ್ರಿಯಗಳ ಮೂಲಕ ಅನುಭವಿಸುತ್ತಿದ್ದೆವು. ಸೂರ್ಯನ ಉದಯ, ಅಸ್ತಮಾನ, ತಂಗಾಳಿ, ಬಿಸಿಲು, ಪಕ್ಷಿಗಳ ಕಲರವ, ಹೊಟ್ಟೆಯ ಚುರುಗುಟ್ಟುವಿಕೆ ಇವೆಲ್ಲವೂ ನಾವು ಮಾಡಬೇಕಿದ್ದನ್ನು ನಿರ್ಧರಿಸುತ್ತಿದ್ದವು. ಆದರೆ, ಇಂದು ಒಂದು ಕೈಗಡಿಯಾರ/ಮೊಬೈಲ್ ಫೋನ್ ಇದು ಬ್ರೇಕ್‌ಫಾಸ್ಟ್ ಟೈಮ್ ಎಂದು ತಿಳಿಸುತ್ತದೆ. ಅದರ ಆಜ್ಞೆಯನ್ನು ನಾವು ಪರಿಪಾಲಿಸುತ್ತೇವೆ, ನಮಗೆ ಹಸಿವಿಲ್ಲದಿದ್ದರೂ! ಮಲಗುತ್ತೇವೆ ನಿದ್ರೆ ಬರದಿದ್ದರೂ!! ಎದ್ದೇಳುತ್ತೇವೆ ಎಷ್ಟೇ ನಿದ್ರೆಯಿದ್ದರೂ!!!
ಓದಿನ ಸ್ವಭಾವ ಬದಲಾದಂತೆ, ಅದು ನಮ್ಮ ಭೌತ ಪ್ರಪಂಚವನ್ನೂ ಬದಲಿಸಿದ್ದನ್ನು ಪಂಡಿತರು ಗುರುತಿಸುತ್ತಾರೆ. ಉದಾಹರಣೆಗೆ, ಮನಸ್ಸಿನಲ್ಲೇ ಓದುವುದು ಸಾಮಾನ್ಯವಾದಂತೆ, ಯೂರೋಪಿಯನ್ ಲೈಬ್ರರಿಗಳ ವಿನ್ಯಾಸಗಳೂ ಬದಲಾಗತೊಡಗಿದ್ದನ್ನು ಅವರು ತೋರಿಸುತ್ತಾರೆ.
ಜರ್ಮನ್ ತತ್ವಶಾಸ್ತ್ರಜ್ಞ ಫ್ರೆಡರಿಕ್ ನೀಚೆ, ತನ್ನ ಮೂವತ್ತರ ವಯಸ್ಸಿನ ಆಸು-ಪಾಸಿನಲ್ಲಿ ದೃಷ್ಟಿ ಮಾಂದ್ಯತೆ ಅನುಭವಿಸಲಾರಂಭಿಸಿದ. ಓದು-ಬರಹ ಕಷ್ಟವಾಯಿತು. ಗಂಟೆಗಟ್ಟಲೆ ಕುಳಿತು ಕಣ್ಣೆವೆಯಿಕ್ಕದೆ ಬರೆಯುವುದರಿಂದ ಹೊಟ್ಟೆ-ತೊಳಸುವಿಕೆ ಇತ್ಯಾದಿ ಶುರುವಾಗಿ ಇಡೀ ದೈಹಿಕ ಆರೋಗ್ಯವೇ ಕುಗ್ಗತೊಡಗಿತು. ಕೊನೆಗೆ, ೧೮೮೨ರಲ್ಲಿ ಆಗಷ್ಟೇ ಚಾಲ್ತಿಗೆ ಬರುತ್ತಿದ್ದ ಟೈಪ್ ರೈಟರ್ ಒಂದನ್ನು ಖರೀದಿಸಿದ. ಕೆಲವಾರು ತಿಂಗಳುಗಳ ನಿರಂತರ ಪ್ರಯತ್ನದಿಂದ ಟೈಪ್ ಮಾಡುವಲ್ಲಿ ಪರಿಣಿತಿಯನ್ನೂ ಪಡೆದುಕೊಂಡ. ಕೊನೆಗೆ, ಕಣ್ಣು ಮುಚ್ಚಿಕೊಂಡು ಟೈಪ್ ಮಾಡುವಷ್ಟು ತಜ್ಞತೆ ಪಡೆದುಕೊಂಡ. ತನ್ನ ಬರಹಗಳಿಗೆ ಟೈಪ್ ರೈಟರ್ ಬಳಸಲಾರಂಭಿಸಿದ.
ಅವನು ಟೈಪ್ ರೈಟರ್ ಬಳಸಲಾರಂಭಿಸಿದ ಮೇಲೆ ಪ್ರಕಟಿಸಿದ ಲೇಖನಗಳಲ್ಲಿ ಅವನ ಬರಹದ ಶೈಲಿ – ಅವನ ಹಿಂದಿನ ಲೇಖನಗಳಿಗೆ ಹೋಲಿಸಿದರೆ – ಬದಲಾಗುತ್ತಿರುವುದನ್ನು ಅವನ ಓದುಗರು ಗಮನಿಸಿದರು. ಅವನ ಓದುಗ ಮಿತ್ರನೊಬ್ಬ ಇದರ ಕುರಿತು ನೀಚೆಗೆ ಪತ್ರವೊಂದನ್ನು ಬರೆದ. ಆ ಪತ್ರಕ್ಕೆ ಉತ್ತರಿಸುತ್ತಾ, ನೀಚೆ ಹೀಗೆಂದ: “ನೀನೆನ್ನುವುದು ನಿಜ. ನಾವು ಬಳಸುವ ಉಪಕರಣಗಳು ನಮ್ಮ ಆಲೋಚನೆಗಳನ್ನೂ ರೂಪಿಸುತ್ತವೆ”
ಆದರೆ, ನಮ್ಮ ಆಲೋಚನೆಗಳನ್ನು ರೂಪಿಸುವುದು ನಮ್ಮ ಮಿದುಳಲ್ಲವೇ? ನಾವು ಕೇವಲ ಸೌಲಭ್ಯಕ್ಕಾಗಿ ಬಳಸುವ ತಂತ್ರಜ್ಞಾನ – ಸಲಕರಣೆಗಳು ನಮ್ಮ ಆಲೋಚನೆಗಳನ್ನು ಬದಲಿಸುತ್ತಿವೆ ಎಂದರೆ, ಅವು ನಮ್ಮ ಮಿದುಳಿನ ಸ್ವರೂಪವನ್ನೇ ಬದಲಿಸುತ್ತಿವೆಯೇ?!
******
ಎರಡು ಸಾವಿರ ವರ್ಷಗಳ ಇತಿಹಾಸವಿರುವ ಲಂಡನ್ ನಗರದಲ್ಲಿ ಟ್ಯಾಕ್ಸಿ ಓಡಿಸುವುದು ಕಷ್ಟದ ಕೆಲಸ. ಈ ಎರಡು ಸಾವಿರ ವರ್ಷಗಳಲ್ಲಿ ಅಲ್ಲಿನ ರಸ್ತೆಗಳನ್ನು ಗೊತ್ತು-ಗುರಿ ಇಲ್ಲದೆ ನಿರ್ಮಿಸಲಾಗಿವೆ. ಟ್ಯಾಕ್ಸಿ ಚಾಲನೆಯ ಲೈಸೆನ್ಸ್ ಪಡೆಯಲು ಅಲ್ಲಿನ ಸರ್ಕಾರ ಒಂದು ಪರೀಕ್ಷೆ ನೀಡುತ್ತದೆ. ಆ ಪರೀಕ್ಷೆಯಲ್ಲಿ ‘ಪಾಸ್’ ಆಗಲು, ಅಭ್ಯರ್ಥಿಗಳು ಸುಮಾರು ೨೫,೦೦೦ ವಿವಿಧ ರಸ್ತೆಗಳ, ೫೦,೦೦೦ ಅಂಗಡಿ, ರೆಸ್ಟಾರಂಟ್, ಥಿಯೇಟರ್ ಇತ್ಯಾದಿಗಳ ಕುರಿತು ಮಾಹಿತಿಯನ್ನು ತಮ್ಮ ತಲೆಯಲ್ಲಿಟ್ಟುಕೊಂಡಿರಬೇಕು. ಇದು ಎಂತಹವರಿಗೂ ಸುಲಭ ಸಾಧ್ಯವಲ್ಲ. ಹೀಗಾಗಿ, ಈ ಪರೀಕ್ಷೆ ತೆಗೆದುಕೊಳ್ಳುವವರು, ಸುಮಾರು ಮೂರು-ನಾಲ್ಕು ವರ್ಷಗಳ ಕಾಲ ಪ್ರತಿ ನಿತ್ಯ ದ್ವಿ-ಚಕ್ರ ವಾಹನಗಳಲ್ಲಿ ಈ ರಸ್ತೆಗಳಲ್ಲಿ ಸುತ್ತಾಡಿ ಅವುಗಳ ಬಗೆಗಿನ ಮಾಹಿತಿಯನ್ನು ಮನನ ಮಾಡಿಕೊಂಡಿರುತ್ತಾರೆ.
ಹತ್ತಾರು ಸಾವಿರ ನಿರ್ದಿಷ್ಟ ಮಾಹಿತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ನಡೆಸುವ ಹಲವು ವರ್ಷಗಳ ಈ ನಿರಂತರ ಮನನದಿಂದ ಅವರ ಮಿದುಳಿನ ಭೌತಿಕ ಸ್ವರೂಪದಲ್ಲಿ ಬದಲಾವಣೆಗಳಾಗುತ್ತವೆಯೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನ್ಯೂರೋಸೈನ್ಸ್ ವಿಜ್ಞಾನಿಗಳು ಸುಮಾರು ಐದು ವರ್ಷಗಳ ಕಾಲ ಟ್ಯಾಕ್ಸಿ ಲೈಸೆನ್ಸ್ ಪಡೆಯಲು ಯತ್ನಿಸುತ್ತಿದ್ದ ಅಭ್ಯರ್ಥಿಗಳ ಮೇಲೆ ಅಧ್ಯಯನ ನಡೆಸಿದರು. ಸಮಯ ಸರಿದಂತೆ ಈ ಚಾಲಕರ ಮಿದುಳಿನಲ್ಲಿನ ಹಿಪ್ಪೊಕ್ಯಾಂಪಸ್ (ಬಹು ಕಾಲದ ನೆನಪಿನ ಶಕ್ತಿಗೆ ಪೂರಕವಾಗಿರುವ ಮಿದುಳಿನ ಭಾಗ) ಬದಲಾಗುತ್ತಿರುವುದನ್ನು, ಆ ಅಧ್ಯಯನ ತೋರಿಸಿತು. ಅವರು ನೆನಪಿಡುವುದು ಹೆಚ್ಚಾದಂತೆ, ಹಿಪ್ಪೋಕ್ಯಾಂಪಸ್ ನ ಹಿಂಭಾಗ ದೊಡ್ಡದಾಗುತ್ತಿತ್ತು.
ನಾವು ವಿವಿಧ ಮಾಹಿತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಪಡುವ ಕಷ್ಟದಿಂದ ನಮ್ಮ ಮಿದುಳಿನ ಒಂದು ಭಾಗ ಹಿಗ್ಗುವುದು ಮೇಲ್ನೋಟಕ್ಕೆ ಒಂದು ಒಳ್ಳೆಯ ಸಂಗತಿಯೇ ಎಂದೆನ್ನಿಸಬಹುದು. ಆದರೆ, ಈ ಅಧ್ಯಯನ ಮಾಡಿರುವ ನ್ಯೂರೋಸೈಂಟಿಸ್ಟ್‌ಗಳೇ ಹೇಳುವಂತೆ ಹಿಪ್ಪೋಕ್ಯಾಂಪಸ್ ನ ಹಿಂಭಾಗ ದೊಡ್ಡದಾದಂತೆಯೇ, ಅದರ ಮುಂಭಾಗ ಕುಗ್ಗಲಾರಂಭಿಸಿತ್ತು. ಮಿದುಳಿನ ಈ ಭಾಗ ಕುಗ್ಗುತ್ತಿರುವುದರಿಂದ ಆಗಿರಬಹುದಾದ ಪರಿಣಾಮಗಳನ್ನು ಅವರು ಅಧ್ಯಯನ ಮಾಡಿಲ್ಲ.
ಇಂದು, ಗೂಗಲ್ ಮ್ಯಾಪ್ ಬಳಸಿದರೆ ನಾವು ರಸ್ತೆಯ ಮಾಹಿತಿ ನೆನಪಿಡಬೇಕಿಲ್ಲ, ನಿಜ. ಮುಂದೊಮ್ಮೆ ನೆನಪಿನ ಅಗತ್ಯವೇ ಇಲ್ಲದೆ, ಬೇಕಾದ ಎಲ್ಲ ವಿಷಯಗಳನ್ನೂ ಬೇಕಾದ ಸಮಯಕ್ಕೇ ಗೂಗಲ್ ನಿಂದಲೇ ಕೇಳಿ ತಿಳಿಯಬಹುದೇನೋ. ಆದರೆ, ನೆನಪುಗಳೇ ನಮ್ಮನ್ನು ನಾವಾಗಿಸುವುದೂ ನಿಜವಲ್ಲವೇ?
******
ನಾನು ವಿಜ್ಞಾನಿಯಾಗಿ ಕೆಲಸ ಮಾಡುವ ಸಂಸ್ಥೆಯೂ ಸೇರಿದಂತೆ, ಹಲವಾರು ಸಂಸ್ಥೆಗಳು ಇಂದು ಕೃತಕ ಬುದ್ಧಿಮತ್ತೆಯ ಸಂಶೋಧನೆಯನೆಯಲ್ಲಿ ತೊಡಗಿಕೊಂಡಿವೆ. ಕಳೆದ ಎರಡು ವರ್ಷಗಳಲ್ಲಿ, ಕೃತಕ ನ್ಯೂರಲ್ ನೆಟ್ ಗಳಿಗೆ ಮಾನವರ ಭಾಷೆಯ ವಿವಿಧ ಮಜಲುಗಳನ್ನು ಕಲಿಸುವ ಯತ್ನಗಳು ಫಲಿತವಾಗುತ್ತಿವೆ. ಈ ನ್ಯೂರಲ್ ನೆಟ್ ಗಳು ನಮ್ಮ ಭಾಷೆಯನ್ನು ಅರ್ಥೈಸಿಕೊಳ್ಳುವಲ್ಲಿ ಪ್ರತಿ ನಿತ್ಯ ಮತ್ತಷ್ಟು ಯಶಸ್ಸನ್ನು ಕಾಣುತ್ತಿವೆ.
ಇಂದು, ಇವು, ಈಗ ಯಾವುದೋ ಪ್ರಯೋಗಶಾಲೆಯಲ್ಲಿ ಯಾರೋ ವಿಜ್ಞಾನಿಯೊಬ್ಬರ ಆಟಿಗೆಯಾಗಿ ಉಳಿದಿಲ್ಲ. ನಮಗೇ ತಿಳಿಯದಂತೆ ನಮ್ಮ ಜೀವನವನ್ನು ಪ್ರವೇಶಿಸಿವೆ. ಉದಾಹರಣೆಗೆ, ಇಂದು ಗೂಗಲ್ ಸರ್ಚ್ ನ ಹಿಂದೆ ಈ ನ್ಯೂರಲ್ ನೆಟ್ ಗಳು ಕೆಲಸ ಮಾಡುತ್ತಿವೆ. ಕೇವಲ ಕೆಲವೇ ತಿಂಗಳುಗಳ ಹಿಂದೆ, ನೀವು ರಾಜ್ ಕುಮಾರ್ ಜನ್ಮ ದಿನಕ್ಕಾಗಿ ಗೂಗಲ್ ನಲ್ಲಿ ಹುಡುಕಿದರೆ, ಅದು, ರಾಜ್‌ಕುಮಾರ್ ಅವರ ಜನ್ಮ ದಿನಾಂಕದ ಮಾಹಿತಿ ಇರಬಹುದಾದ ಲೇಖನ ಒಂದರ ಲಿಂಕ್ ಒಂದನ್ನು ಒದಗಿಸುತ್ತಿತ್ತು. ನೀವು ಆ ಲೇಖನವನ್ನು ಓದಿ, ಜನ್ಮ ದಿನವನ್ನು ತಿಳಿದುಕೊಳ್ಳಬೇಕಿತ್ತು. ಆದರೆ, ಇಂದು ನೀವು “Rajkumar Date of Birth” ಎಂದು ಹುಡುಕಿದರೆ, ಅದು “April 24, 1929” ಎಂಬ ಖಚಿತ ಮಾಹಿತಿಯನ್ನು ನೀಡುತ್ತದೆ. (ಈ ನ್ಯೂರಲ್ ನೆಟ್ ಕನ್ನಡವನ್ನು ಇನ್ನೂ ಕಲಿತಿಲ್ಲವಾದ್ದರಿಂದ, ನೀವು ಕನ್ನಡದಲ್ಲಿ “ರಾಜ್ ಕುಮಾರ್ ಜನ್ಮದಿನ” ಎಂದು ಕನ್ನಡದಲ್ಲಿ ಹುಡುಕಿದರೆ, ಅದು ಖಚಿತವಾದ ಉತ್ತರ ನೀಡುವುದಿಲ್ಲ. ಬದಲಿಗೆ ಎಂದಿನಂತೆ “ರಾಜ್ ಕುಮಾರ್ ಜನ್ಮದಿನ”ದ ವಿಚಾರವಿರಬಹುದಾದ ಲೇಖನಗಳಿಗೆ ಲಿಂಕ್ ಒದಗಿಸುತ್ತದೆ.)
ಇದು ಮೇಲ್ನೋಟಕ್ಕೆ ಒಂದು ಉತ್ತಮ ಬದಲಾವಣೆ, ಅಥವಾ “ಪ್ರಗತಿ” ಎಂದೆನಿಸಬಹುದು. ಆದರೆ, ಗೂಗಲ್ ನಿಮ್ಮ ಪ್ರಶ್ನೆಗೆ ನಿರ್ದಿಷ್ಟ ಉತ್ತರ ನೀಡದೆ, ರಾಜ್ ಕುಮಾರ್ ಕುರಿತು ಲೇಖನದ ಲಿಂಕ್ ಒಂದನ್ನು ಒದಗಿಸುತ್ತಿದ್ದಾಗ, ಆ ಲೇಖನವನ್ನು ಓದಿದರೆ, ನಿಮಗೆ ಅವರ ಜನ್ಮ ದಿನಾಂಕದೊಂದಿಗೆ ಮತ್ತಿನ್ನೆಷ್ಟೋ ಮಾಹಿತಿಗಳು ದೊರಕುತ್ತಿದ್ದವು. ಈ ಓದುವಿಕೆ ನಿಮ್ಮ ಮಿದುಳಿನಲ್ಲಿ ಮತ್ತಿನ್ನೇನೋ ಆಲೋಚನಾ ಲಹರಿಯನ್ನು ಸೃಷ್ಟಿಸುತ್ತಿತ್ತು. “ಪ್ರಗತಿ”ಯ ಹೆಸರಿನಲ್ಲಿ ಇಂದು ಆ ಲಹರಿಗಳಿಗೆ ಜಾಗವಿಲ್ಲದಂತಾಗುತ್ತಿವೆ.
ಆಳವಾದ ಓದು ನಮ್ಮ ಆಲೋಚನೆಯ ದಿಕ್ಕನ್ನು ಬದಲಿಸಬಲ್ಲದು. ಆದರೆ, ನಾವು ಕೇವಲ ಮಾಹಿತಿಗಾಗಿ ಹುಡುಕಾಡುವಾಗ ಅದು ಸುಲಭವಾಗಿ ದೊರಕಿದರೆ, ಈ ಓದಿನ ಅವಶ್ಯಕತೆಯಾದರೂ ಏನು?!
ಕೆಲವೇ ವರ್ಷಗಳ ಹಿಂದೆ, ನೀವೊಬ್ಬ ವಿಜ್ಞಾನಿಯಾಗಿದ್ದಲ್ಲಿ, ಯಾವುದಾದರೂ ವಿಶೇಷ ಮಾಹಿತಿ ಬೇಕಿದ್ದರೆ, ನೀವು ಲೈಬ್ರರಿಗೆ ಹೋಗಿ ನಿಮ್ಮ ಅಧ್ಯಯನಕ್ಕೆ ಸಂಬಂಧಿಸಿದ ಹಲವಾರು ಪುಸ್ತಕ, ಸೈಂಟಿಫಿಕ್ ಜರ್ನಲ್ ಗಳನ್ನು ಓದಿ ವಿಷಯ ಸಂಗ್ರಹಿಸಬೇಕಿತ್ತು. ಇಂದು ಇಂಟರ್ ನೆಟ್/ಗೂಗಲ್ ಸಹಾಯದಿಂದ ಜಗತ್ತಿನ ಯಾವುದೇ ಮಾಹಿತಿ ಕ್ಷಣಾರ್ಧದಲ್ಲಿ ನಮಗೆ ದೊರಕುವಂತಾಗಿದೆ. ಹಾಗಿದ್ದರೆ, ಇಂದಿನ ವಿಜ್ಞಾನಿಗಳು ಹೆಚ್ಚು-ಹೆಚ್ಚು ಪುಸ್ತಕ, ಸೈಂಟಿಫಿಕ್ ಪೇಪರುಗಳನ್ನು ಓದುತ್ತಿದ್ದಾರೆಯೇ? ಕುತೂಹಲದ ವಿಷಯವೆಂದರೆ, ಅವರು ತಮ್ಮ ಅಧ್ಯಯನಗಳಲ್ಲಿ ಉಲ್ಲೇಖಿಸುವ ಪುಸ್ತಕ/ಪೇಪರ್ ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ತಮಗೆ ಬೇಕಾದ ಉತ್ತರ ಸುಲಭವಾಗಿ ದೊರಕುವಾಗ, ಓದಿನ ವಿಸ್ತಾರ ಹೆಚ್ಚು ಹೇಗಾಗುತ್ತದೆ?!
ಇಂದು ವ್ಯವಧಾನ, ವಿಸ್ತಾರಕ್ಕಿಂತ ವೇಗ, ನಿರ್ದಿಷ್ಟತೆಗೆ ಹೆಚ್ಚಿನ ಮೌಲ್ಯ ನೀಡಲಾರಂಭಿಸಿದ್ದೇವೆ. ಸಂಜೀವಿನಿಯ ಪೂರ್ಣ ಮಾಹಿತಿಯಿಲ್ಲದೆ ಅದನ್ನು ಹುಡುಕಿದ ಹನುಮಂತನಿಗೆ, ಸಂಜೀವಿನಿಯೊಂದಿಗೆ ಇಡೀ ಬೆಟ್ಟವೇ ದೊರಕಿತಲ್ಲವೇ? ಗೂಗಲ್ ಕ್ಷಣಾರ್ಧದಲ್ಲಿ ಹುಡುಕಿ ಕೊಡುತ್ತದೆ ಎಂದ ಮಾತ್ರಕ್ಕೆ, ನಾವು ಕಾಂಗ್ರೆಸ್ ಹುಲ್ಲನ್ನೂ ಸಂಜೀವಿನಿಯ ಜೀವನ್ಮರಣದ ಆತುರದಲ್ಲಿ ಹುಡುಕಿದರೆ, ಅದು ದೊರಕುತ್ತದಾದರೂ, ನಿಧಾನವಾಗಿ ಬೆಟ್ಟವನ್ನು ಸುತ್ತಾಡಿದರೆ ಕಂಡುಬರುವ ಕೊತ್ತಂಬರಿ, ಪುದೀನ ಮತ್ತಿನ್ನೇನೋ ಗಿಡಗಳು ಕಾಣದಾಗುತ್ತವಲ್ಲವೇ?!
ನಾವು ಯೋಚನೆಯೇ ಮಾಡದೆ ಬಳಸುತ್ತಿರುವ ತಂತ್ರಜ್ಞಾನಗಳು ನಮ್ಮ ಆಲೋಚನೆಗಳನ್ನು, ನಮ್ಮ ಮಿದುಳನ್ನು ಕೊನೆಗೆ ನಮ್ಮನ್ನೇ ಬದಲಾಯಿಸುತ್ತಿವೆ. ಅವುಗಳ ಸೃಷ್ಟಿಯ ಹಿಂದಿನ ಗುರಿ ಏನೇ ಇರಲಿ, ರಾಜ ಥೇಮಸ್ ನ ಮಾತು ನೆನಪಿದೆಯಲ್ಲವೇ?!
(ಈ ಲೇಖನದ ಸಂಕ್ಷಿಪ್ತ ರೂಪ, ಆಂದೋಲನ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು)
ಶೇಷಾದ್ರಿ ಗಂಜೂರು ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ.
Lekhana bahala chennagide Sheshadriyavare. Matte matte yochisuvante maduttade. Vignana munduvaredante manava jasteene someberiyaguttiddaneno anno bhava nannalli mooduvuduntu. ಈ ಓದುವಿಕೆ ನಿಮ್ಮ ಮಿದುಳಿನಲ್ಲಿ ಮತ್ತಿನ್ನೇನೋ ಆಲೋಚನಾ ಲಹರಿಯನ್ನು ಸೃಷ್ಟಿಸುತ್ತಿತ್ತು. “ಪ್ರಗತಿ”ಯ ಹೆಸರಿನಲ್ಲಿ ಇಂದು ಆ ಲಹರಿಗಳಿಗೆ ಜಾಗವಿಲ್ಲದಂತಾಗುತ್ತಿವೆ… e matantu kanditha satya.
ವೇದರವರಿಗೆ ನಮಸ್ಕಾರ.
ನನ್ನ ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಮತ್ತು ಮೆಚ್ಚುಗೆಯ ಮಾತುಗಳಿಗೆ ನನ್ನ ಧನ್ಯವಾದಗಳು.
..
ಶೇಷಾದ್ರಿ