ಏನು ಕಲಿಯಬೇಕು ಎಂಬುದನ್ನು ಮಾತ್ರವಲ್ಲ ಅದನ್ನು ಏಕೆ ಮತ್ತು ಹೇಗೆ ಕಲಿಯಬೇಕು ಎಂಬುದನ್ನು ಕೂಡ ವಿದ್ಯಾರ್ಥಿಗಳಿಗೆ ಕಲಿಸಬಲ್ಲರು. ತಾವು ಕಲಿಸುತ್ತಿರುವ ಇಂಗ್ಲಿಷ್, ವಿಜ್ಞಾನ ಅಥವಾ ಸಮಾಜ ಪಾಠವು ತಾವು ಹೇಳುತ್ತಿರುವ ಭಾಷೆಯಲ್ಲಿ ಮಕ್ಕಳಿಗೆ ಅರ್ಥ ಆಗುತ್ತಿಲ್ಲ ಎಂದು ಅನ್ನಿಸಿದಾಗ ತಕ್ಷಣ ಅದನ್ನು ಮಕ್ಕಳ ಮಾತೃಭಾಷೆಯಲ್ಲಿ ಹೇಳಿ ಮಕ್ಕಳಿಗೆ ಅದನ್ನು ತಲುಪಿಸಬಲ್ಲರು. ಶಿಕ್ಷಕ ಅಂದರೆ ಎರಡನೆಯ ಪೋಷಕ ಎಂಬ ಮಾತಿದೆ. ಪ್ರೀತಿಯಿಂದ ಪೋಷಿಸುತ್ತಾ ಕಲಿಸುವ ಮಾನವೀಯ ಸ್ಪರ್ಶ ನೀಡುವ ಅಧ್ಯಾಪಕರನ್ನು ಅಂತರ್ಜಾಲವು ಸ್ಥಳಾಂತರಿಸಲು ಸಾಧ್ಯ ಇಲ್ಲ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂರನೆಯ ಬರಹ

ಪುರಂದರ ದಾಸರ ಒಂದು ಪ್ರಸಿದ್ಧ ಕೀರ್ತನೆ ಹೀಗೆ ಪ್ರಾರಂಭವಾಗುತ್ತೆ – “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ……. ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಯುಕುತಿ …”

ಚಿಕ್ಕಮಕ್ಕಳಾಗಿದ್ದ ಕಾಲದಿಂದ “ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ” ಎಂಬುದನ್ನು ಕೇಳುತ್ತಾ ಬೆಳೆದದ್ದು ನಮ್ಮ ಪೀಳಿಗೆ. ನಮಗೆ ಗುರುವೆಂದರೆ ದೇವರ ಸಮಾನ ಎಂಬ ಭಾವವಿರುತ್ತಿದ್ದು, ಅದು ನಮ್ಮ ಮನಸ್ಸಿನ ಪ್ರಧಾನ ಭಾವಗಳಲ್ಲಿ ಒಂದಾಗಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ. ಅದರಲ್ಲೂ ಗುರು-ಶಿಷ್ಯ ಪರಂಪರೆಯ ದಟ್ಟ ವಿನ್ಯಾಸ ಇರುವ ಶಾಸ್ತ್ರೀಯ ಸಂಗೀತ, ಭರತನಾಟ್ಯಗಳನ್ನು ಎಳೆ ವಯಸ್ಸಿನಿಂದ ಕಲಿಯುವಂತಹ ಜೀವನ ಸನ್ನಿವೇಶ ಇದ್ದ ನನ್ನಂತಹವರಿಗೆ ಗುರುವೆಂದರೆ ಒಂದು ಪ್ರಶ್ನಾತೀತ ವ್ಯಕ್ತಿ ಎಂದೇ ಭಾಸವಾಗುತ್ತಿತ್ತು.

ಸಾಂಪ್ರದಾಯಿಕ ಶಾಸ್ತ್ರೀಯ ಕಲೆಗಳ ಕಲಿಕೆಯ ವಾತಾವರಣಕ್ಕೆ ಸಾಕಷ್ಟು ಭಿನ್ನವಾಗಿ, ವೈಜ್ಞಾನಿಕ ಮನೋಭಾವ, ವೈಚಾರಿಕತೆಗಳು ಪ್ರಮುಖ ಸ್ಥಾನವನ್ನು ಪಡೆದಿದ್ದ ಆಧುನಿಕ ಶಾಲೆ-ಕಾಲೇಜುಗಳ ಇಂಗ್ಲಿಷ್ ವಿದ್ಯಾಭ್ಯಾಸ ಕ್ರಮಕ್ಕೂ ನಮ್ಮ ಪೀಳಿಗೆ ತೆರೆದುಕೊಂಡಿತ್ತಲ್ಲ. ಅಲ್ಲಿನ ವಾತಾವರಣವು ಸ್ವಲ್ಪ ಬೇರೆ ರೀತಿಯಲ್ಲಿತ್ತು. ಸಂಗೀತ-ಭರತನಾಟ್ಯ ತರಗತಿಗಳಂತೆ ಅಲ್ಲಿ ಪ್ರತಿ ದಿನವೂ ಶಿಷ್ಯರು ಗುರುವಿನ ಕಾಲು ಮುಟ್ಟಿ ತಮ್ಮ ದಿನವನ್ನು ಪ್ರಾರಂಭಿಸಬೇಕಿಲ್ಲದಿದ್ದರೂ, ಗುರು (ಅವರನ್ನು ಶಾಲೆಕಾಲೇಜುಗಳಲ್ಲಿ ಮಿಸ್, ಟೀಚರ್, ಸರ್, ಮ್ಯಾಮ್ ಎಂದೆಲ್ಲ ಕರೆಯುತ್ತೇವಲ್ಲ) ಎಂದರೆ `ಪ್ರಶ್ನಾತೀತ ಜ್ಞಾನಭಂಡಾರ’ ಎಂಬ ಭಾವ ಮಾತ್ರ ಆಗಲೂ ಪ್ರಬಲವಾಗಿಯೇ ಇತ್ತು.

ಸರಿ, ಮುಂದೆ ತೊಂಬತ್ತರ ದಶಕದ ಮೊದಲ ವರ್ಷಗಳಲ್ಲಿ ನಮ್ಮ ಪೀಳಿಗೆಯವರು ಅಧ್ಯಾಪಕರಾದಾಗ ಈ `ಪ್ರಶ್ನಾತೀತ ಜ್ಞಾನಭಂಡಾರ’ದ ಪಾತ್ರವನ್ನು ನಿಭಾಯಿಸುವ ಭಾರದ ಅರಿವಾಯಿತು ನಮಗೆ! ಅಯ್ಯೋ ….. ದಿನದಿನವೂ ಬದಲಾಗುತ್ತಿದ್ದು, ಒಗೆದ ಬಟ್ಟೆಯಂತೆ ನಮ್ಮನ್ನು ನಿರ್ದಯವಾಗಿ ಹಿಂಡುವ ಬದುಕಿನ ಕಟುವಾಸ್ತವವೆಲ್ಲಿ, ಮುಗ್ಧ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕಣ್ಣಲ್ಲಿ ದೀಪದಂತೆ ಹೊಳೆಯುವ ಜ್ಞಾನದ ಹಸಿವಿನ ಅಗಾಧತೆಯೆಲ್ಲಿ! ಎಷ್ಟು ಓದಿದರೆ, ಕಲಿತರೆ ತಾನೇ ಸಾಕಾಗಬಹುದು, ಈ ಮುದ್ದು ಎಳೆಜೀವಗಳಿಗೆ `ಕಲಿಸು’ವುದಕ್ಕೆ, ನಾವು ಎಂದಾದರೂ ಆ `ಪ್ರಶ್ನಾತೀತ ಜ್ಞಾನಭಂಡಾರ’ ಎಂಬ ಸಂಸ್ಕೃತಿನಿರ್ಮಿತ, ಮಹೋನ್ನತ ಬಿಂಬಕ್ಕೆ ಸರಿಹೊಂದುತ್ತೇವೆಯೇ ಎಂಬ ಅಳುಕು ಕಾಡಿದ್ದು ಸುಳ್ಳಲ್ಲ.
ಅಧ್ಯಾಪಕರ ಈ `ಅಳುಕನ್ನು’ ನೂರು ಮಡಿ ಹೆಚ್ಚಿಸಿದ ಒಂದು ಬೆಳವಣಿಗೆ ಅಂದರೆ ಹೊಸ ಸಹಸ್ರಮಾನದಲ್ಲಿ ಇಡೀ ಭೂಮಂಡಲವನ್ನೇ ಅಪರಿಮಿತವಾಗಿ, ಅಸೀಮವಾಗಿ, ಅನ್ಯಾದೃಶವಾಗಿ ಆಕ್ರಮಿಸಿಬಿಟ್ಟ ಅಂತರ್ಜಾಲ! `ವರ್ಲ್ಡ್ ವೈಡ್ ವೆಬ್’ ಎಂದು ಕರೆಸಿಕೊಂಡ ಈ ಜಾಲದಲ್ಲಿ ಸಿಕ್ಕಿದವರಲ್ಲಿ ಅತಿ ಹೆಚ್ಚು ತಲ್ಲಣ, ಆತಂಕಕ್ಕೆ ಒಳಗಾದ ಮಂದಿ ಅಂದರೆ ಅದು ಅಧ್ಯಾಪಕ ಸಮುದಾಯ ಎಂದು ನನ್ನ ಅನಿಸಿಕೆ! ಗೂಗಲ್ ಎಂಬ ಮುಖವಿಲ್ಲದ ಹುಡುಕುಯಂತ್ರವು(ಸರ್ಚ್ ಇಂಜಿನ್) ಗುರುಸ್ಥಾನಕ್ಕೆ ಬಂದು ಕುಳಿತದ್ದು ಗೊತ್ತೇ ಆಗದಷ್ಟು ವೇಗವಾಗಿ ಎಲ್ಲ ಅಂದರೆ ಎಲ್ಲವೂ ಬದಲಾಗಿಬಿಟ್ಟಿತು! `ಮೇಷ್ಟ್ರನ್ನು ಕೇಳಬೇಕು’, `ಮ್ಯಾಮ್‌ನ ಕೇಳಬೇಕು’, `ಪುಸ್ತಕ ಓದಿ ತಿಳ್ಕೋಬೇಕು’ ಎಂಬ ಎಲ್ಲ ಪದಪುಂಜಗಳನ್ನೂ `ಗೂಗಲಿಸು, ಗೊತ್ತಾಗುತ್ತೆ’ ಎಂಬ ಪದಪುಂಜವು ನುಂಗಿ ನೀರು ಕುಡಿದುಬಿಟ್ಟಿತಲ್ಲ! ಭಗವಂತಾ …!

*****

ನೋಡಿ ಮತ್ತೆ! ಗೂಗಲ್ ಎಂಬ ಕಲ್ಪವೃಕ್ಷ-ಕಾಮಧೇನುವು ಕೈಯಲ್ಲಿರುವ ಜಂಗಮವಾಣಿಗಳಿಂದಾಗಿ, ಎಲ್ಲರ ಬೆರಳ ತುದಿಯಲ್ಲಿರುವ ಕಾಲ ಇದು. ಇನ್ನೀಗ ಎಐ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಮಾನವ ನಿರ್ಮಿತ ಬುದ್ಧಿಮತ್ತೆ)ನ ಜಾದೂವಂತೂ ಬೆರಳು ತೋರಿಸಿದರೆ ಹಸ್ತ ನುಂಗುವಷ್ಟು ಚುರುಕಾಗಿದೆ. ಇಂತಹ `ಸ್ಮಾರ್ಟ್’ ಕಾಲಮಾನದಲ್ಲಿ `ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ತಮ್ಮ ಪಾತ್ರವು ಬದಲಾಗಿದೆಯೇ’ ಎಂಬುದು, ಎಲ್ಲ ಅಧ್ಯಾಪಕರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಯೋಚಿಸುವ, ಯೋಚಿಸಿ ವಿಹ್ವಲಗೊಳ್ಳುವ ವಿಷಯವಾಗಿದೆ. ಯಾವುದೇ ಪ್ರಶ್ನೆಗಾದರೂ `ಇದೋ ಇಲ್ಲಿ, ತಗೋ ಕೊಟ್ಟೆ’ ಎಂಬಂತೆ ತಕ್ಷಣ ಉತ್ತರ ಕೊಡುವ ತಂತ್ರಾಂಶವು ವಿದ್ಯಾರ್ಥಿಗಳ ಮಟ್ಟಿಗೆ ಅಂತರ್ಜಾಲ ಸೌಲಭ್ಯದಿಂದಾಗಿ ಲಭ್ಯವಾಗಿದೆ. ಅದರಲ್ಲಿ ಮಾಹಿತಿ ಮಾತ್ರ ಅಲ್ಲ, ನೂರಾರು ಅಂತರ್ಜಾಲ ಶಿಕ್ಷಣ ಕಾರ್ಯಕ್ರಮಗಳೂ (ಆನ್‌ಲೈನ್ ಕೋರ್ಸುಗಳು) ಸಹ ಲಭ್ಯ ಇವೆ. ಈ ಹೊತ್ತಿನಲ್ಲಿ `ತಮ್ಮ ಬೋಧನೆ ಅಪ್ರಸ್ತುತವೇನೋ’ ಎಂಬ ಭೀತಿಯು ಅಧ್ಯಾಪಕರನ್ನು ಕಾಡಿದರೆ ಅದು ಆಶ್ಚರ್ಯದ ವಿಷಯವಲ್ಲ. “ಗೂಗಲ್ ಜಮಾನಾದಲ್ಲಿ ತಮ್ಮನ್ನು ತಾವು ಪ್ರಸ್ತುತವಾಗಿಟ್ಟುಕೊಳ್ಳವುದು ಹೇಗೆ?” ಎಂಬುದು ತಮ್ಮ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡ ಯಾವುದೇ ಅಧ್ಯಾಪಕರನ್ನಾದರೂ ಕಾಡುವಂತಹ ಕಷ್ಟಕರ ಪ್ರಶ್ನೆಯಾಗಿದೆ.

ವೃತ್ತಿಯಿಂದ ನಾನು ಒಬ್ಬ ಕನ್ನಡ ಅಧ್ಯಾಪಕಿ. ಪದವಿ/ಸ್ನಾತಕೋತ್ತರ ಪದವಿ/ಸಂಶೋಧನಾ ಶಿಕ್ಷಣ – ಈ ಹಂತಗಳಿಗೆ ಕನ್ನಡ ಪಾಠ ಮಾಡುವವಳು ನಾನು. ಅಂದ ಮೇಲೆ ನನ್ನನ್ನು ಸಹ ಈ `ಅಪ್ರಸ್ತುತತೆʼಯ ಪ್ರಶ್ನೆ ಕಾಡಿತು. ಆಗ ನಾನು ಗಂಭೀರವಾಗಿ ಯೋಚಿಸಲಾರಂಭಿಸಿದೆ, ನನ್ನನ್ನು ನಾನು ಈ ಹೊಸ ಕಾಲಕ್ಕೆ ಪ್ರಸ್ತುತವಾಗಿರಿಸಿಕೊಳ್ಳುವುದು ಹೇಗೆ? ಆಗ ನನಗೆ ಹೊಳೆದ ಒಂದು ಪದದ ಉತ್ತರ ಅಂದರೆ ಕಲಿಕೆ. ಕಲಿಯಬೇಕು ನಾನು. ಈ ಹೊಸ ಕಾಲದ ಮಕ್ಕಳ ನಾಡಿಮಿಡಿತವನ್ನು ಕೇಳಿಸಿಕೊಳ್ಳಬೇಕು. ಅವರು ಯಾವ ನುಡಿಗಟ್ಟುಗಳನ್ನು ಬಳಸುತ್ತಾರೆ, ಅವರ ಆದ್ಯತೆಗಳೇನು, ಯಾವ ಯಾವ ತಂತ್ರಜ್ಞಾನಗಳನ್ನು ಅವರು ಬಳಸುತ್ತಾರೆ, ಅವರ ಇಷ್ಟಾನಿಷ್ಟಗಳೇನು, ಅವರ ಮನಸ್ಸನ್ನು ಯಾವ ಸೇತುವೆಯ ಮೂಲಕ ತಲುಪಬೇಕು ……… ಇಂತಹ ಪ್ರಶ್ನೆಗಳಿಗೆ ನಾನು ಉತ್ತರ ಕಂಡುಕೊಳ್ಳಬೇಕಿತ್ತು.

*****

ಈ ಹುಡುಕಾಟದಲ್ಲಿ ಕೆಲವು ವಿಷಯಗಳು ಹೊಳೆದವು ನನಗೆ. ಅವು ಈ ಕೆಳಗಿನಂತಿವೆ ನೋಡಿ.

ನಮ್ಮ ಅಸ್ತಿತ್ವದ ಮೂಲಕ್ಕೇ ಹೋಗಿ ಮಾತಾಡುವುದಾದರೆ ಒಂದು ವಿಷಯವಂತೂ ನಿಜ. ಮನುಷ್ಯರಿಗೆ ಮನುಷ್ಯರು ಬೇಕು. ಜೊತೆಗೆ ನಾಳೆ ಹೇಗಿರುತ್ತದೆ, ಜೀವನ ಯಾವ ತಿರುವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಗೂಗಲ್ ಮೂಲಕವಾಗಲೀ ಅಥವಾ ಪ್ರಪಂಚದ ಯಾವುದೇ ತಂತ್ರಜ್ಞಾನದಿಂದಾಗಲೀ ತಿಳಿಯಲು ಸಾಧ್ಯವಿಲ್ಲ. ಗೂಗಲ್ ನೀಡುವ ಮಾಹಿತಿಯ ರಾಶಿಯಲ್ಲಿ ಏನನ್ನು ಮತ್ತು ಎಷ್ಟನ್ನು ಆರಿಸಿಕೊಳ್ಳಬೇಕು ಎಂಬುದನ್ನು ತಿಳಿಸಲು ಮನುಷ್ಯರು ಬೇಕು. ಗೂಗಲ್ ಎಂಬುದು ಕಲಿಕೆಯಲ್ಲಿ ಒಂದು ಸಮರ್ಥ ಉಪಕರಣವಾಗಬಹುದೇ ಹೊರತು ಅದು ಮನುಷ್ಯ ಗುರುವನ್ನು ಸ್ಥಳಾಂತರಿಸಲು ಸಾಧ್ಯ ಇಲ್ಲ ಅನ್ನಿಸಿತು ನನಗೆ.

ಗೂಗಲ್‌ಗೆ ಶಿಷ್ಯನ ಆಥವಾ ವಿದ್ಯಾರ್ಥಿಯ ಭಾವನೆಗಳು, ಮನಸ್ಥಿತಿ ಅರ್ಥವಾಗಲು ಸಾಧ್ಯ ಇಲ್ಲ. ಅದು ಅರ್ಥವಾಗುವುದು ಭಾವನೆಗಳಿರುವ ಮನುಷ್ಯರಿಗೆ ಮಾತ್ರ. ಜೀವನದಲ್ಲಿ ನಮಗೆ ಕೊನೆಗೂ ಸಂತೋಷ ನೆಮ್ಮದಿ ಕೊಡುವುದು ಅರ್ಥಪೂರ್ಣ ಮನುಷ್ಯ ಸಂಬಂಧಗಳೇ. ಈ ಮಾನವ ಸಂಬಂಧಗಳಲ್ಲಿ ಗುರು-ಶಿಷ್ಯ, ಅಧ್ಯಾಪಕ – ವಿದ್ಯಾರ್ಥಿ’ ಈ ಸಂಬಂಧ ಅತ್ಯಂತ ಮುಖ್ಯವಾದುದು. `ಮನೆಯೆ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರುವು’ ಎಂಬ ಮಾತು ತಾಯಿಯನ್ನು ಸಹ ಗುರುವಿನ ಸ್ಥಾನದಲ್ಲಿ ನೋಡುತ್ತದೆ. `ವರ್ಣ ಮಾತ್ರಂ ಕಲಿಸಿದಾತಂ ಗುರು’ ಎನ್ನುತ್ತದೆ ಒಂದು ಕವಿವಾಣಿ.

ಈ ಭಾವನಾತ್ಮಕ ವಿಷಯಗಳನ್ನು ಆಚೆ ಇಟ್ಟು ನೋಡುವುದಾದರೆ ಅಧ್ಯಾಪಕ ವೃತ್ತಿಯಲ್ಲಿ ಇರುವವರು ನಿರಂತರ ಅಧ್ಯಯನ ಮತ್ತು ಸಂಶೋಧನಾಸಕ್ತಿಗಳಿಂದ ತಮ್ಮನ್ನು ತಾವು ತಮ್ಮ ವಿದ್ಯಾರ್ಥಿಗಳಿಗೆ ಪ್ರಸ್ತುತವಾಗಿರಿಸಿಕೊಳ್ಳಬೇಕಾದ ಸನ್ನಿವೇಶ ಇಂದು ನಿರ್ಮಾಣವಾಗಿದೆ. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಜಗತ್ತಿನಾದ್ಯಂತ ಅಧ್ಯಾಪಕರು ದೂರಸಂಪರ್ಕ ಅಂತರ್ಜಾಲ ಪಾಠಗಳನ್ನು ಮಾಡುವ ಅನಿವಾರ್ಯತೆಯನ್ನು ಎದುರಿಸಬೇಕಾಯಿತು. ಜೂ಼ಮ್, ಟೀಚ್‌ಮಿಂಟ್, ವೆಬೆಕ್ಸ್, ಗೂಗಲ್ ಮೀಟ್ ಮುಂತಾದ ಅನ್ವಯ ತಂತ್ರಾಂಶ(ಅಪ್ಲಿಕೇಷನ್ – ಆಪ್) ಗಳನ್ನು ಬಳಸುವುದನ್ನು ಕಲಿಯಬೇಕಾಯಿತು.

ಸಮರ್ಥ ಗುರುಗಳು ಮಾಹಿತಿ ತಂತ್ರಜ್ಞಾನದ ದೈತ್ಯ ಶಕ್ತಿಯನ್ನು ತಮ್ಮ ಸಾಮರ್ಥ್ಯಕ್ಕೆ ಪೂರಕವಾಗಿ ಬಳಸಲು ಕಲಿಯುವ ಅವಕಾಶ ಹೊಂದಿದ್ದಾರೆ. ಬಹುಮಾಧ್ಯಮ ಪಾಠ, ಅಂತರ್ಜಾಲ ಪಾಠ, ಮಾಡಿದ್ದನ್ನೇ ಭೌತಿಕವಾಗಿ ಮತ್ತೆ ಮತ್ತೆ ಮಾಡುವುದರಿಂದ ಮುಕ್ತಿ ಪಡೆಯುವುದು, ಬೇಸರ ಹುಟ್ಟಿಸುವ ಪುನರಾವರ್ತನೆಯ ಕೆಲಸಗಳನ್ನು ತಂತ್ರಜ್ಞಾನದಿಂದ ಮಾಡಿಸಿ ತಾವು ಹೊಸದನ್ನು ಮತ್ತು ಸಾರಸ್ಯಕರವಾದುದನ್ನು ಮಾಡುವುದು ಈ ಮುಂತಾದ ಕೆಲಸಗಳನ್ನು ಅಧ್ಯಾಪಕರು ಮಾಡಬಹುದು.

ಅಧ್ಯಾಪಕರ ದೃಷ್ಟಿಯಿಂದ ನೋಡಿದರೆ ಇಲ್ಲಿ ಇನ್ನೊಂದು ಆಯಾಮ ಇದೆ. ಅಧ್ಯಾಪಕರೇ ಇವತ್ತು ವಿದ್ಯಾರ್ಥಿಗಳಾಗುವ ಸಂದರ್ಭ ಇದೆ. ಅನ್ವಯ ತಂತ್ರಾಂಶವನ್ನು ಬಳಸುವುದು ಹೇಗೆ ಎಂಬುದರಿಂದ ಹಿಡಿದು ತಮ್ಮ ಅಧ್ಯಯನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನೆಲ್ಲ ಹೊಸ ಬದಲಾವಣೆಗಳಾಗಿವೆ ಎಂಬುದನ್ನು ಅರಿಯಲು ಅವರು ನಿರಂತರ ಕಲಿಕೆಗೆ ತೊಡಗಲೇಬೇಕು. ಒಂದು ರೀತಿಯಲ್ಲಿ ಗೂಗಲ್ ಜಮಾನ ಜರಡಿಯ ಕೆಲಸವನ್ನು ಮಾಡುತ್ತದೆ ಅನ್ನಿಸುತ್ತೆ. ಅದು ಕಲಿಕೆಯಲ್ಲಿ ನಿಜವಾದ ಆಸಕ್ತರು ಯಾರು ಮತ್ತು ಯಾರು ಅಲ್ಲ ಎಂಬುದನ್ನು ತೋರಿಸಿಬಿಡುತ್ತದೆ. ಈ ಹೊಸ ಜಾಗತಿಕ ತಾಂತ್ರಿಕ ವಿಶ್ವವು ವಿದ್ಯಾರ್ಥಿಗಳ ಕಲಿಕೆಗೆ ಆಯ್ಕೆಗಳನ್ನು ಹೆಚ್ಚು ಮಾಡುವುದಷ್ಟೇ ಅಲ್ಲ, ಅಧ್ಯಾಪಕರ ವಿನಯವನ್ನು ಹೆಚ್ಚು ಮಾಡುತ್ತದೆ. ಕೆಲವು ವಿಷಯಗಳನ್ನು ಅವರು ತಂತ್ರಜ್ಞಾನದಲ್ಲಿ ಮುಂದಿರುವ ತಮ್ಮ ವಿದ್ಯಾರ್ಥಿಗಳಿಂದ ಕಲಿಯಬೇಕಾಗಬಹುದು. ಇದನ್ನು ಅವರು ಸಂತೋಷದಿಂದ ಕಲಿತರೆ, ಕಲಿಕೆಯು ಒಂದು ಸಹಪಯಣವಾಗುತ್ತದೆ.

ಇಷ್ಟೇ ಅಲ್ಲದೆ ಗೂಗಲ್‌ಗೆ ತಮ್ಮ ಕ್ಷೇತ್ರವನ್ನು ಕುರಿತು ಅಥವಾ ತಾವು ಮಾಡಿದ ಸಂಶೋಧನೆ, ಹೊಸ ಚಿಂತನೆಗಳನ್ನು ಸಹ ಅಧ್ಯಾಪಕರು ಸೇರಿಸಬಹುದು. ಇದು ಅವರು ಒಂದು ರೀತಿಯಲ್ಲಿ ಇಡೀ ಪ್ರಪಂಚಕ್ಕೆ ಕೊಡುವ ಕೊಡುಗೆಯಾಗಿದೆ.

ಜೀವನವೆಂಬ ವಿಶ್ವವಿದ್ಯಾಲಯದಲ್ಲಿ ಕಲಿಕೆ ನಿರಂತರ. ಅಲ್ಲಿ ಪರೀಕ್ಷೆ ಮೊದಲು, ಪಾಠ ನಂತರ. ಮುದ್ರಣ ತಂತ್ರಜ್ಞಾನ ಬಂದಾಗಲೂ ಸಹ ಅಧ್ಯಾಪಕ – ವಿದ್ಯಾರ್ಥಿ ಸಂಬಂಧವು ಒಂದು ಸ್ಥಿತ್ಯಂತರಕ್ಕೆ ಒಳಗಾಗಿತ್ತು. `ಎಲ್ಲವೂ ಪುಸ್ತಕದಲ್ಲಿ ಇರುವಾಗ ನನ್ನ ಪ್ರಸ್ತುತತೆ ಏನು?’ ಎಂಬ ಪ್ರಶ್ನೆ ಆ ಕಾಲದ ಅಧ್ಯಾಪಕರನ್ನೂ ಕಾಡಿರಬಹುದು. ಆದರೆ ಮುದ್ರಿತ ಪುಸ್ತಕಗಳು ಅಧ್ಯಾಪಕರನ್ನು ಸ್ಥಳಾಂತರಿಸಲು ಸಾಧ್ಯ ಆಗಲಿಲ್ಲ. ಪುಸ್ತಕಗಳನ್ನು ತಮ್ಮ ಅಧ್ಯಾಪನಕ್ಕೆ ಪೂರಕವಾಗಿ ಬಳಸಿಕೊಳ್ಳವುದನ್ನು ಅಧ್ಯಾಪಕರು ಕಲಿತರು. ಮಾಹಿತಿ ತಂತ್ರಜ್ಞಾನ ಮತ್ತು ಅಂತರ್ಜಾಲ ಇಂದು ಮತ್ತೊಂದು ಹೊಸ ಸವಾಲನ್ನು ಒಡ್ಡುತ್ತಿವೆ. `ವಿದ್ಯಾರ್ಥಿಗಳ ಕೈಯಲ್ಲೇ ಇರುವ ಸಂಚಾರಿ ದೂರವಾಣಿಯ ಮೂಲಕ ಅವರಿಗೆ ಲಭ್ಯವಾಗುವ ಅಂತರ್ಜಾಲ ಸೌಲಭ್ಯವನ್ನು ಅಧ್ಯಾಪಕರು ಹೇಗೆ ತಮ್ಮ ಅಧ್ಯಾಪನಕ್ಕೆ ಪೂರಕವಾಗಿ ಬಳಸಿಕೊಳ್ಳಬಹುದು?’, ಎಂಬುದನ್ನು ನಾವು ಅಧ್ಯಾಪಕರು ಆಲೋಚನೆ ಮಾಡಬೇಕಾಗುತ್ತದೆ. ಇದು ಮಾಹಿತಿ, ಅಂಕಿಅಂಶಗಳನ್ನು `ಗೂಗಲ್’ನಲ್ಲಿ ನೋಡುವುದಿರಬಹುದು, ಅಥವಾ ಕೆಲವು ಲೇಖನಗಳನ್ನು ಓದುವುದಿರಬಹುದು, ಉಚ್ಚಾರಣೆಯನ್ನು ಅಭ್ಯಾಸ ಮಾಡುವುದಿರಬಹುದು … ಇಂತಹ ಹತ್ತುಹಲವು ಸಾಧ್ಯತೆಗಳಿವೆ ಇಲ್ಲಿ. ಭೂಪ್ರದೇಶ, ಪ್ರವಾಸೀತಾಣ, ಪ್ರಾಣಿ, ಪಕ್ಷಿ ಮುಂತಾದವುಗಳ ಚಿತ್ರಗಳನ್ನು ನೋಡಲು ವಿದ್ಯಾರ್ಥಿಗಳಿಗೆ ಹೇಳಬಹುದು, ಈ ಬಗ್ಗೆ ಅಧ್ಯಾಪಕರು ನಿಯೋಜಿತ ಕಾರ್ಯಗಳನ್ನು ನೀಡಬಹುದು ಮತ್ತು ಕಲಿಕೆಯ ಪ್ರಕ್ರಿಯೆಯನ್ನು ಈ ಮೂಲಕ ರೋಮಾಂಚಕಾರಿಯಾಗಿಸಬಹುದು ಅನ್ನಿಸುತ್ತದೆ.

*****

ಅಂತರ್ಜಾಲ ಜ್ಞಾನತಾಣಗಳು ಎಂದೂ ಮಾಡಲು ಸಾಧ್ಯ ಆಗದ ಕೆಲವು ಮುಖ್ಯ ಕೆಲಸಗಳನ್ನು ಅಧ್ಯಾಪಕರು ಮಾಡುತ್ತಾರೆ. ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯ ಮತ್ತು ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಕಲಿಸುವ ರೀತಿಯನ್ನು ಅವರು ಬದಲಾಯಿಸಿಕೊಳ್ಳಬಲ್ಲರು. ತಾವು ಪಾಠವನ್ನು ವಿವರಿಸುವಾಗ ತಮ್ಮ ದೈನಂದಿನ ಅನುಭವಗಳಿಂದ ವಿಷಯಗಳನ್ನು ತೆಗೆದುಕೊಂಡು ತಾವು ಕಲಿಸುತ್ತಿರುವ ವಿಷಯದೊಂದಿಗೆ ಅವನ್ನು ಜೋಡಿಸಿ, ಹೋಲಿಸಿ ಕಲಿಕೆಯನ್ನು ಸ್ವಾರಸ್ಯಕರ ಮತ್ತು ಅರ್ಥಪೂರ್ಣವಾಗಿಸಬಲ್ಲರು. ತಮ್ಮ ವರ್ತನೆ, ಮಾನವೀಯತೆ, ತಾವು ನೀಡುವ ಬೆಂಬಲದಿಂದಾಗಿ ವಿದ್ಯಾರ್ಥಿಗಳ ಜೀವನಕ್ಕೆ ಮಾದರಿ ಆಗಬಲ್ಲರು. ಏನು ಕಲಿಯಬೇಕು ಎಂಬುದನ್ನು ಮಾತ್ರವಲ್ಲ ಅದನ್ನು ಏಕೆ ಮತ್ತು ಹೇಗೆ ಕಲಿಯಬೇಕು ಎಂಬುದನ್ನು ಕೂಡ ವಿದ್ಯಾರ್ಥಿಗಳಿಗೆ ಕಲಿಸಬಲ್ಲರು. ತಾವು ಕಲಿಸುತ್ತಿರುವ ಇಂಗ್ಲಿಷ್, ವಿಜ್ಞಾನ ಅಥವಾ ಸಮಾಜ ಪಾಠವು ತಾವು ಹೇಳುತ್ತಿರುವ ಭಾಷೆಯಲ್ಲಿ ಮಕ್ಕಳಿಗೆ ಅರ್ಥ ಆಗುತ್ತಿಲ್ಲ ಎಂದು ಅನ್ನಿಸಿದಾಗ ತಕ್ಷಣ ಅದನ್ನು ಮಕ್ಕಳ ಮಾತೃಭಾಷೆಯಲ್ಲಿ ಹೇಳಿ ಮಕ್ಕಳಿಗೆ ಅದನ್ನು ತಲುಪಿಸಬಲ್ಲರು. ಶಿಕ್ಷಕ ಅಂದರೆ ಎರಡನೆಯ ಪೋಷಕ ಎಂಬ ಮಾತಿದೆ. ಪ್ರೀತಿಯಿಂದ ಪೋಷಿಸುತ್ತಾ ಕಲಿಸುವ ಮಾನವೀಯ ಸ್ಪರ್ಶ ನೀಡುವ ಅಧ್ಯಾಪಕರನ್ನು ಅಂತರ್ಜಾಲವು ಸ್ಥಳಾಂತರಿಸಲು ಸಾಧ್ಯ ಇಲ್ಲ.

*****

ಮೇಲಿನ ಎಲ್ಲ ವಿಷಯಗಳ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಕೊಟ್ಟ ಕನ್ನಡ ಪಠ್ಯಭಾಗವನ್ನು ತರಗತಿಯಲ್ಲಿ ಮಾಡಿ ಮುಗಿಸಿಬಿಟ್ಟರೆ ಕನ್ನಡ ಕಲಿಸುವ ನನ್ನ ಕೆಲಸ ಮುಗಿಯುವುದಿಲ್ಲ, ಅಂತರ್ಜಾಲದ ಸೌಲಭ್ಯವನ್ನು ಬಳಸಿಕೊಂಡು ಮಕ್ಕಳಿಗಾಗಿ ಏನಾದರೂ ಹೊಸದನ್ನು ಮಾಡಬೇಕು ಎಂದು ನನಗನ್ನಿಸಿತು. ಅದಕ್ಕಾಗಿ ನಾನು `ಕನ್ನಡ ಸೇತು’ ಎಂಬ ಹೆಸರಿನ ಜಾಲಪುಟ (ಬ್ಲಾಗ್) ಬರವಣಿಗೆಯನ್ನು ಅಕ್ಟೋಬರ್ 2022ರಲ್ಲಿ ಪ್ರಾರಂಭಿಸಿದೆ. `ಮಹಮ್ಮದನು ಬೆಟ್ಟದ ಬಳಿ ಹೋಗಲು ನಿರಾಕರಿಸಿದಾಗ ಬೆಟ್ಟವೇ ಮಹಮ್ಮದನ ಬಳಿ ಹೋಗಬೇಕು’ ಎಂಬ ಮಾತಿದೆ. `ಪುಸ್ತಕ ಓದಲು ಹಿಂಜರಿಯುವ ನಮ್ಮ ಯುವಜನರು ಇಷ್ಟ ಪಡುವ ಸಾಮಾಜಿಕ ಮಾಧ್ಯಮಗಳ ಮೂಲಕವೇ ಅವರನ್ನು ತಲುಪಲು ಪ್ರಯತ್ನಿಸಿದರೆ ಹೇಗೆ?’ ಅನ್ನಿಸಿದಾಗ ಈ ಜಾಲಪುಟ ಹಾಗೂ ಅದಕ್ಕೆ ಸಂಬಂಧಿಸಿದ ದೃಶ್ಯಚಿತ್ರಗಳ ಆಲೋಚನೆ ಬಂದದ್ದು. `ಕನ್ನಡ ಪ್ರಸಂಗ’, `ಕನ್ನಡ ವಿವೇಕ’ ಮತ್ತು `ಕನ್ನಡ ಕನ್ನಡಿ’ ಎಂಬ ಮೂರು ಅಂಕಣಗಳನ್ನು ಬರೆಯುವ ಕಳೆದ ಎರಡು ವರ್ಷಗಳಿಂದ ಪ್ರತಿ ಬುಧವಾರ ಮಾಡುತ್ತಾ ಬಂದಿದ್ದೇನೆ.

*****

ಬಹುಶಃ ಪುರಂದರದಾಸರ ಕೀರ್ತನೆಯನ್ನು ನಾವು ಮನಸ್ಸಿನಲ್ಲಿ ಇಂದು ಹೀಗೆ ಮಾರ್ಪಡಿಸಿಕೊಂಡು ಓದಬೇಕು ಅನ್ನಿಸುತ್ತೆ – “ಗುರು ಹೊಸದನ್ನು ಕಲಿಯುವ ತನಕ ದೊರೆಯದಣ್ಣ ಮುಕುತಿ….. ಶಿಷ್ಯನಿಗೆ ತಾ ಶಿಷ್ಯನಾಗುವ ತನಕ ವ್ಯರ್ಥವಾಯಿತು ಯುಕುತಿ”. ನಮ್ಮ ಬಾಪೂಜಿಯವರಿಂದ `ಗುರುದೇವ’ ಎಂದು ಕರೆಸಿಕೊಂಡ ವಿಶ್ವಕವಿ ರವೀಂದ್ರನಾಥ ಠ್ಯಾಗೋರರು ಅಧ್ಯಾಪಕರ ಬಗ್ಗೆ ಹೇಳಿದ ಒಂದು ಮಾತು ನೆನಪಾಗುತ್ತೆ – ಒಂದು ಪ್ರಜ್ವಲ ದೀಪ ಮಾತ್ರ ಇನ್ನೊಂದು ದೀಪವನ್ನು ಬೆಳಗಿಸಬಲ್ಲುದು. ಅಂದರೆ ಮತ್ತೆ ನಾವು ಕಲಿಕೆಗೇನೆ ಬಂದು ತಲುಪಿದ್ದೇವೆ. ಗುರುವಿಗಾಗಲಿ, ಶಿಷ್ಯನಿಗಾಗಲಿ ಕಲಿಕೆಯಂತಹ ದೀಪ ಇನ್ನೊಂದಿಲ್ಲ. ಅಂದ ಹಾಗೆ ಶಿಕ್ಷಣ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಇರುವವರೂ ಸಹ ಈ ಕ್ಷಣಭಿನ್ನ ಬದುಕನ್ನು ಎದುರಿಸಬೇಕೆಂದರೆ ಕಲಿಯುವುದನ್ನು ನಿಲ್ಲಿಸಲಾಗುವುದಿಲ್ಲ, ಏಕೆಂದರೆ ಬದುಕು ಕಲಿಸುವುದನ್ನು ಎಂದೂ ನಿಲ್ಲಿಸುವುದಿಲ್ಲ ಅಲ್ಲವೇ!

ಕೊನೆಗೂ ನನ್ನಂತಹ ಅಧ್ಯಾಪಕರನ್ನು ಕಾಪಾಡುವುದು ಮಹಾನ್ ವಿಜ್ಞಾನಿ ಐನ್‌ಸ್ಟೈನ್‌ರ ಒಂದು ಉಕ್ತಿ – `ಲವ್ ಈಸ್ ಎ ಬೆಟರ್ ಟೀಚರ್ ದ್ಯಾನ್ ಡ್ಯೂಟಿ’ (ಕರ್ತವ್ಯಪ್ರಜ್ಞೆಗಿಂತ ಪ್ರೀತಿಯು ಉತ್ತಮ ಶಿಕ್ಷಕ). ಅರೆ ಹೌದಲ್ಲವೇ? ಪ್ರೀತಿಯಿಂದ ಪಾಠ ಮಾಡುವುದು ಅಧ್ಯಾಪಕಿಯಾಗಿ ನನ್ನನ್ನು ಕಾಡುವ ಎಲ್ಲ ಸಮಸ್ಯೆಗಳಿಗೂ ಉತ್ತರ ನೀಡಬಲ್ಲುದು.