ನರನರಗಳನ್ನು ಎಣಿಕೆ ಮಾಡಿ
ನೂರು ಪರದೆಯಾಚೆ
ನೆತ್ತರ ಶಾಯಿ ಚೆಲ್ಲಿ
ಮೂರು ಪದದಲ್ಲಿ
ಮಾರುದ್ದುದ ಕವಿತೆ ಬರೆದ
ಭೂಮಿಯನ್ನೆ ಹೃದಯವಾಗಿಸಿಕೊಂಡ
ಶಾಸ್ತ್ರಗಳನ್ನು ಶಸ್ತ್ರಗಳನ್ನು
ಸಮಾನವಾಗಿ ಕಂಡವನ
ಪುಣ್ಯದ ಕಣ್ಣಿಗೆ ಸೂರ್ಯ-ಚಂದ್ರ ನಕ್ಷತ್ರವೆಲ್ಲವು ಧೂಳಾಗಿ ನಾಶವಾದಂತೆ ಕಾಣುವ
ಖಗೋಳಶಾಸ್ತ್ರಜ್ಞನ ಸಮಾಧಿಯ
ಕೇವಲ ನಾಲ್ಕು ಅಡಿ ಆಳದ ಭೂಮಿಯಲ್ಲಿ
ಹೂತುಹೋದವನ ಹೆಬ್ಬೆರೆಳು
ಆಕಾಶಮುಖಿಯಾಗಿ ನಿಶ್ಚಲವಾದ ಘಳಿಗೆ
ಸಮುದ್ರದಿಂದ ಖಂಡ ಖಂಡಗಳಾಗಿ
ಭಾಗವಾದ ಭೂಮಿಯೆಲ್ಲ
ಮರು ಸೇರ್ಪಡೆಯಾಗಲಿ
ಕರಿಯ ಬಿಳಿಯ ನರುಗೆಂಪು ತೊಗಲ
ಜನರ ಹೆಗಲ ಮೇಲೆ
ತೂಕದ ಯಂತ್ರ ಕೆಲಸ ಮಾಡಲಿ
ನೈಲ್ ನದಿಯ ತುದಿಗೆ ಕಾವೇರಿಯ
ಬೇರು ತಾಕಲಿ
ಭಾರತದ ರಕ್ತ ಎಲ್ಲಿಯೂ ಹನಿಯುವುದು ಬೇಡ
ಸಮಾಧಿಗಳಿಗೆ ಸೌಧಕಟ್ಟಿದ ದೇಶದ
ಅಗಾಧ ದಡ್ಡತನ
ಪಾಮರರ ಶವದ ರಸ ಹೀರಿ
ಬೆಳೆದ ಆಲದ ಮರ ಅಣಕಿಸಲಿ
ಗಾಳಿಯ ನಿರಾಕರಿಸಲ್ಪಟ್ಟ ಸಮುದ್ರ
ಹೆಪ್ಪಾಗಿ ಉಪ್ಪಾಗಿ
ಅಲೆಗಳಾಗದೆ ನರಳುವಾಗ
ಹೆಪ್ಪಿನಡಿಯಲ್ಲಿ ಸತ್ತ ಮೀನುಗಳು
ಬೀಜವಾಗಲಿ, ಬೆಳೆದು ಅರಣ್ಯವಾಗಲಿ
ಮರಣಕ್ಕೆ ಹೊಸ ದಿಕ್ಕು ಬರಲಿ
ಎದೆ ಎದೆಯ ಸೂಕ್ಷ್ಮದರ್ಶಕದ
ಧೂಳು ಸರಿದು
ಖಗೋಳಶಾಸ್ತ್ರಜ್ಞನ ಮಿದುಳ ತುಂಬಾ
ಹೊಸ ಗ್ರಹಗಳು ಮೂಡಲಿ
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಮೂಲದ ಗೋರವಿ ತರುಣ ಕವಿ.
‘ಮಡಿಲ ನೂಲಿನ ಕೌದಿ’ ಇವರ ಚೊಚ್ಚಲ ಕವನ ಸಂಕಲನ
ಸದ್ಯ ಕನ್ನಡ ಚಲನಚಿತ್ರ ರಂಗದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ.
(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ